Tuesday, 25 April 2017

25-04-2017 ಹೆದ್ದಾರಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ : ಆರ್. ಧ್ರುವನಾರಾಯಣ ಸೂಚನೆ,ಏ. 29ರಂದು ನಗರದಲ್ಲಿ ಬಸವ ಜಯಂತಿ ಕಾರ್ಯಕ್ರಮ

ಹೆದ್ದಾರಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ : ಆರ್. ಧ್ರುವನಾರಾಯಣ ಸೂಚನೆ


ಚಾಮರಾಜನಗರ, ಏ. 25 - ಜಿಲ್ಲೆಯಲ್ಲಿ ವಿವಿಧ ಭಾಗದಲ್ಲಿ ಪ್ರಗತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಾಗೂ ವಿಸ್ತರಣೆ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಯಳಂದೂರು, ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಭಾಗಗಳಲ್ಲಿ ಹೆದ್ದಾರಿ ಕಾಮಗಾರಿ ಪ್ರಾರಂಭವಾಗಿ ಸಾಕಷ್ಟು ಸಮಯವಾಗಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ಪೂರ್ಣವಾಗುತ್ತಿಲ್ಲ. ಮುಂದಿನ ಪರಿಶೀಲನಾ ಸಭೆಯ ವೇಳೆಗೆ ಶೇ. 80ರಷ್ಟು ಕಾಮಗಾರಿ ಪೂರ್ಣಗೊಳಿಸಬೇಕೆಂದು ಧ್ರುವನಾರಾಯಣ ಅಧಿಕಾರಿಗಳಿಗೆ ತಾಕೀತು ಮಾಡಿದರು.
ರಸ್ತೆ ಕಾಮಗಾರಿಯು ಗುಣಮಟ್ಟದಿಂದ ಇರಬೇಕು. ಕಾಮಗಾರಿ ಗುಣಮಟ್ಟದ ಬಗ್ಗೆ ಅಸಮಧಾನ ವ್ಯಕವಾಗಿದೆ. ಇದಕ್ಕೆ ಅವಕಾಶ ಕೊಡದೆ ಉತ್ತಮವಾಗಿ ಕಾಮಗಾರಿ ನಿರ್ವಹಿಸಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.
ಪಟ್ಟಣ ವ್ಯಾಪ್ತಿಯಲ್ಲಿ ಕಾಮಗಾರಿ ವಿಳಂಬವಾಗಿ ನಡೆಯುತ್ತಿರುವುದರಿಂದ ಸಾಕಷ್ಟು ಅನಾನುಕೂಲವಾಗಿದೆ. ಮಳೆ ಸಂದರ್ಭದಲ್ಲಂತೂ ಜನರು ತೀವ್ರ ಪರಿತಪಿಸಬೇಕಿದೆ. ಹೀಗಾಗಿ ಪಟ್ಟಣ ಪ್ರದೇಶಗಳಲ್ಲಿ ಅತ್ಯಂತ ಶೀಘ್ರವಾಗಿ ಕಾಮಗಾರಿ ಮುಗಿಸಬೇಕು. ನಿರ್ಧಿಷ್ಟ ಗಡುವಿನೊಳಗೆ ರಸ್ತೆ ಸಿದ್ಧವಾಗಬೇಕು. ಖುದ್ದು ಎಂಜಿನಿಯರ್‍ಗಳೇ ನಿಂತು ಕೆಲಸ ಪರಿಶೀಲಿಸಬೇಕು ಎಂದರು.
ಅರಣ್ಯ ಇಲಾಖೆಯಿಂದ ಹಲವೆಡೆ ಮರಗಳನ್ನು ತೆರವುಗೊಳಿಸದೇ ಇರುವ ಕಾರಣ ರಸ್ತೆ ಕಾಮಗಾರಿ ಕುಂಠಿತವಾವಾಗಿದೆ ಎಂಬ ದೂರು ಕೇಳಿಬಂದಿದೆ. ಅರಣ್ಯ, ವಿದ್ಯುತ್, ಹೆದ್ದಾರಿ ಕಾಮಗಾರಿ ನಿರ್ವಹಣೆ ಅಧಿಕಾರಿಗಳು ಸಮನ್ವಯ ಸಂಪರ್ಕದಿಂದ ಕೆಲಸ ನಿರ್ವಹಿಸಬೇಕು.  ಜಿಲ್ಲಾಧಿಕಾರಿಗಳ ಮಾರ್ಗದರ್ಶನ ಪಡೆದುಕೊಂಡು ತ್ವರಿತವಾಗಿ ಕೆಲಸ ನಿರ್ವಹಿಸಲು ಮುಂದಾಗಬೇಕು ಎಂದು ಧ್ರುವನಾರಾಯಣ ತಿಳಿಸಿದರು.
ಜಿಲ್ಲಾಧಿಕಾರಿ ಬಿ. ರಾಮು ಅವರು ಮಾತನಾಡಿ ಅರಣ್ಯ ಅಧಿಕಾರಿಗಳು ಮರ ತೆರವುಗೊಳಿಸುವ ವಿಷಯದಲ್ಲಿ ಆದೇಶವನ್ನು ಪಾಲನೆ ಮಾಡಬೇಕು. ದಿನಾಂಕ ನಿಗದಿಮಾಡಿ ತೆರವು ಕಾರ್ಯಾಚರಣೆಗೆ ಕ್ರಮ ತೆಗೆದುಕೊಳ್ಳಬೇಕು. ಅಭಿವೃದ್ಧಿ ಕಾಮಗಾರಿ ವಿಷಯದಲ್ಲಿ ನೀಡುವ ನಿರ್ದೇಶನವನ್ನು ಕ್ಷಿಪ್ರಗತಿಯಲ್ಲಿ ಪಾಲನೆ ಮಾಡಿದರೆ ಶೀಘ್ರವಾಗಿ ಕೆಲಸಗಳು ಪೂರ್ಣವಾಗಲಿವೆ ಎಂದರು.
ಉದ್ಯೋಗ ಖಾತರಿ ಯೋಜನೆಯಡಿ ಕಳೆದ ಸಾಲಿನಲ್ಲಿ ನಡೆದಿರುವ ಸಾಧನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಧ್ರುವನಾರಾಯಣ ಅವರು ಪ್ರಸಕ್ತ ಸಾಲಿನಲ್ಲಿ ಹೆಚ್ಚು ಗುರಿ ನಿಗದಿಮಾಡಿಕೊಂಡು ಸಾಧನೆ ಮಾಡುವಂತೆ ಸೂಚಿಸಿದರು. ಕೆಲ ಭಾಗಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ತೀವ್ರ ಹಿನ್ನಡೆ ಸಾಧಿಸಿದ ಬಗ್ಗೆ ಅಸಮಾಧಾನ ತೋರಿದರು.
ವಿವಿಧ ಇಲಾಖೆಗಳ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲಾಯಿತು.
ಶಾಸಕರಾದ ಎಸ್. ಜಯಣ್ಣ, ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಉಪಾಧ್ಯಕ್ಷರಾದ ಎಸ್. ಬಸವರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಇತರರು ಸಭೆಯಲ್ಲಿ ಹಾಜರಿದ್ದರು.

ಏ. 29ರಂದು ನಗರದಲ್ಲಿ ಬಸವ ಜಯಂತಿ ಕಾರ್ಯಕ್ರಮ


ಚಾಮರಾಜನಗರ, ಏ. 25 :- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಮಹಾನ್ ಮಾನವತಾವಾದಿ ಸಮಾಜ ಸುಧಾರಕರಾದ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಆಚರಣೆ ಸಮಾರಂಭವನ್ನು ಏಪ್ರಿಲ್ 29ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 9.30 ಗಂಟೆಗೆ ಪ್ರವಾಸಿ ಮಂದಿರದ ಆವರಣದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಚಾಲನೆ ನೀಡುವರು.
ಬೆಳಿಗ್ಗೆ 11 ಗಂಟೆಗೆ ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ವೇದಿಕೆ ಸಮಾರಂಭ ನಡೆಯಲಿದ್ದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಕಾರ್ಯಕ್ರಮ ಉದ್ಫಾಟಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ನಗರದ ವಿರಕ್ತ ಮಠದ ಶ್ರೀ ಶ್ರೀ ಚನ್ನಬಸವಸ್ವಾಮಿಗಳು ದಿವ್ಯಸಾನಿಧ್ಯ ವಹಿಸುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸುವರು. ಶಾಸಕರಾದ ಎಸ್.ಜಯಣ್ಣ, ಆರ್. ನರೇಂದ್ರ, ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಮೈಸೂರು ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಆಲಿಖಾನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪÀ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬೆಂಗಳೂರಿನ ಎಂ. ಮಹಮದ್ ಅರ್ಫಾತ್ ಅಲಂ ಅವರು ಮುಖ್ಯ ಭಾಷಣ ಮಾಡುವರು. ನಗರದ ಕದಳಿ ಮಹಿಳಾ ವೇದಿಕೆಯಿಂದ ವಚನÀ ಗಾಯನ ಕಾರ್ಯಕ್ರಮ ಏರ್ಪಾಡು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಉದ್ದಿಮೆ ಪರವಾನಗಿ ನವೀಕರಣಕ್ಕೆ ಸೂಚನೆ

ಚಾಮರಾಜನಗರ, ಏ. 25:- ಚಾಮರಾಜನಗರ ನಗರಸಭಾ ವ್ಯಾಪ್ತಿಯ ಎಲ್ಲಾ ವಿವಿಧ ಮÁದರಿಯ ಉದ್ದಿಮೆದಾರರುಗಳು ನಗರಸಭೆಯಿಂದ ಮುನಿಸಿಪಲ್ ಕಾಯಿದೆ 1964 ಸೆಕ್ಷನ್ 256ರಂತೆ ಉದ್ದಿಮೆ ಪರವಾನಗಿಯನ್ನು ಪಡೆಯುವುದು ಕಡ್ಡಾಯವಾಗಿದೆ.
2016-17ನೇ ಸಾಲಿನಿಂದ ಉದ್ದಿಮೆ ಪರವಾನಗಿ ನೋಂದಣಿಯನ್ನು ಆನ್ ಲೈನ್ ಮುಖಾಂತರ ನೊಂದಾಯಿಸಿ ನೀಡಲಾಗುತ್ತಿದೆ. ಆದ್ದರಿಂದ ಉದ್ದಿಮೆದಾರರು ನಗರಸಭೆ ಕಚೇರಿಗೆ ಅವಶ್ಯಕವಾದ ದಾಖಲಾತಿಗಳನ್ನು ಸಲ್ಲಿಸಿ ತಮ್ಮ ಉದ್ದಿಮೆ ಪರವಾನಗಿಯನ್ನು ನೊಂದಾಯಿಸಿ ನವೀಕರಣ ಮಾಡಿಕೊಳ್ಳುವುದು. ಪರವಾನಗಿ ಪಡೆಯದೇ ಇದ್ದಲ್ಲಿ 2017-18ನೇ ಸಾಲಿಗೆ ದಾಖಲಾತಿಗಳನ್ನು ಸಲ್ಲಿಸಿ ಪರವಾನಗಿಯನ್ನು ಆನ್ ಲೈನ್ ಮೂಲಕ ಪಡೆಯುವುದು ಕಡ್ಡಾಯವಾಗಿದೆ.
ನಗರಸಭೆ ಅಧಿಕಾರಿಗಳು ಉದ್ದಿಮೆ ಸ್ಥಳಕ್ಕೆ ಬಂದು ಪರಿಶೀಲನೆ ಮಾಡುವ ಸಮಯದಲ್ಲಿ ಉದ್ದಿಮೆ ನಡೆಸಲು ಪಡೆದಿರುವ ಪರವಾನಗಿಯನ್ನು ಪ್ರದರ್ಶನ ಮಾಡದೇ ಇರುವುದು ಕಂಡುಬಂದಲ್ಲಿ  ಉದ್ದಿಮೆಯನ್ನು ಬಂದ್ ಮಾಡಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡದಿರಲು ಉದ್ದಿಮೆದಾರರಿಗೆ ನಗರಸಭೆ ಸೂಚನೆ
ಚಾಮರಾಜನಗರ, ಏ. 25- ಚಾಮರಾಜನಗರ ಪಟ್ಟಣ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಸಾಮಗ್ರಿಗಳ ಬಳಕೆ, ಮಾರಾಟ, ದಾಸ್ತಾನು ಮಾಡುವುದನ್ನು ಈಗಾಗಲೇ ನಿಷೇಧ ಮಾಡಲಾಗಿದೆ.
ಚಾಮರಾಜನಗರ ನಗರಸಭೆ ಕೌನ್ಸಿಲ್ ಸಭೆಯಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ದಾಸ್ತಾನು, ಮಾರಾಟ ಬಳಕೆಯನ್ನು ಸಾರ್ವಜನಿಕರ ಆರೋಗ್ಯ ದೃಷ್ಠಿಯಿಂದ ನಿಷೇಧ ಮಾಡಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ. ಈಗಾಗಲೇ ಹಲವು ಬಾರಿ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಬಾರದೆಂದು ತಿಳುವಳಿಕೆ ನೀಡಲಾಗಿದೆ. ಎರಡು ಬಾರಿ ಉದ್ದಿಮೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪ್ಲಾಸ್ಟಿಕ್ ವಶಪಡಿಸಿಕೊಂಡು ಕ್ರಮ ಜರುಗಿಸಲಾಗಿರುತ್ತದೆ.
ಆದರೂ ಸಹ ಕೆಲವು ಉದ್ದಿಮೆದಾರರು ಪ್ಲಾಸ್ಟಿಕ್ ದಾಸ್ತಾನು ಮಾಡಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಆದಕಾರಣ ಪ್ಲಾಸ್ಟಿಕ್ ಸಾಮಗ್ರಿಗಳ ಬಳಕೆ, ಮಾರಾಟ, ದಾಸ್ತಾನು ಮತ್ತು ಎಲ್ಲಾ ವಿಧದ ಪ್ಲಾಸ್ಟಿಕ್ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹವರ ಮೇಲೆ ಕೌನ್ಸಿಲ್ ಸಭೆಯಲ್ಲಿ ನಿರ್ಣಯವಾದ ರೀತಿ ದಂಡ ವಿಧಿಸಿ, ಪ್ಲಾಸ್ಟಿಕ್ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಮೂಲಕ ಪರಿಸರ ಸಂರಕ್ಷಣೆ ಕಾಯ್ದೆ 1686ರ ಅನುಸಾರ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ : ದಾಖಲಾತಿ ನೀಡಲು ನಗರಸಭÉ ಮನವಿ

ಚಾಮರಾಜನಗರ, ಏ. 25 - ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ದೀನ್‍ದಯಾಳ್ ಅಂತ್ಯೋದಯ – ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ (ಡೇ ನಲ್ಮ್) 2016-17ನೇ ಸಾಲಿನ ಅನುದಾನದಲ್ಲಿ ನಗರದ ಬೀದಿಬದಿ ವ್ಯಾಪಾರಸ್ಥರ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದ್ದು ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ.
ಏಪ್ರಿಲ್ 28ರಂದು ಸಮೀಕ್ಷಾ ಕಾರ್ಯ ಮುಕ್ತಾಯಗೊಳ್ಳಲಿರುವುದರಿಂದ ಬೀದಿಬದಿ ವ್ಯಾಪಾರಸ್ಥರು ಈಗಾಗಲೇ ಗುರುತಿನ ಚೀಟಿ ಪಡೆದಿರುವವರು ಹಾಗೂ ಪಡೆಯದಿರುವವರು (ನಗರಸಭಾ ವ್ಯಾಪ್ತಿಯಲ್ಲಿ ವಾಸವಾಗಿರುವ ಫಲಾನುಭವಿಗಳು ಮಾತ್ರ) ಸಮೀಕ್ಷೆ ವ್ಯಾಪ್ತಿಗೆ ಒಳಪಡುವರು.
ಗಣತಿದಾರರು ವ್ಯಾಪಾರಸ್ಥರು ವ್ಯಾಪಾರ ಮಾಡುವ ಸ್ಥಳದಲ್ಲಿಯೇ ಹಾಜರಾಗಿ ಮಾಹಿತಿ ಪಡೆಯುವ ಸಂದರ್ಭದಲ್ಲಿ ಅವಶ್ಯಕ ದಾಖಲಾತಿಗಳಾದ ಆಧಾರ್ ಕಾರ್ಡ್, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಗಳು ಹಾಗೂ ಎರಡು ಫೋಟೋಗಳನ್ನು ನೀಡಿ ಸಮೀಕ್ಷೆಯನ್ನು ಯಶಸ್ವಿಗೊಳಿಸಲು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಬೆಂಗಳೂರಿನಲ್ಲಿ ಏ. 28 ರಿಂದ 30ರವರೆಗೆ ಸಾವಯವ ಸಿರಿಧಾನ್ಯ 

ರಾಷ್ಟ್ರೀಯ ವಾಣಿಜ್ಯ ಮೇಳ
ಚಾಮರಾಜನಗರ, ಏ.25:- ಕೃಷಿ ಇಲಾಖೆಯು ಏಪ್ರಿಲ್ 28 ರಿಂದ 30ರವರೆಗೆ ಬೆಂಗಳೂರಿನ  ಅರಮನೆ ಮೈದಾನದಲ್ಲಿ  ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಾವಯವ ಸಿರಿಧಾನ್ಯಗಳ ರಾಷ್ಟ್ರೀಯ ವಾಣಿಜ್ಯ ಮೇಳವನ್ನು ಆಯೋಜಿಸಿದೆ.
ಮೇಳದಲ್ಲಿ ಸಿರಿಧಾನ್ಯಗಳು ಹಾಗೂ ಸಾವಯವ ಉತ್ಪನ್ನಗಳನ್ನು ಪ್ರದರ್ಶಿಸುವ  200ಕ್ಕೂ ಹೆಚ್ಚು ಹವಾನಿಯಂತ್ರಿತ ಮಳಿಗಳು ಇರುತ್ತವೆ. ಉತ್ಪಾದಕರು ಮಾರುಕಟ್ಟೆದಾರರ ಮುಖಾಮುಖಿ ಭೇಟಿ, ರಾಷ್ಟ್ರೀಯ ಸಮ್ಮೇಳನ, ರೈತರ ಕಾರ್ಯಾಗಾರ, ಸಾವಯವ ಆಹಾರ ಮಳಿಗೆಗಳು, ಗ್ರಾಹಕರ ಸಂಪರ್ಕ ಕಾರ್ಯಕ್ರಮಗಳು ನಡೆಯಲಿವೆ.
ರೈತ ಗುಂಪುಗಳು, ಸಂಸ್ಕರಣೆ ಕಂಪನಿಗಳು, ಮಾರುಕಟ್ಟೆದಾರರು, ವ್ಯಾಪಾರಸ್ಥರು, ರಫ್ತುದಾರರು ಹಾಗೂ ಇತರೆ ಭಾಗೀದಾರರಿಗೆ ಸಾವಯವ ಹಾಗೂ ಸಿರಿಧಾನ್ಯ ಉತ್ಪನ್ನಗಳನ್ನು ಪ್ರದರ್ಶಿಸಲು ಅಥವಾ ಖರೀದಿಸಲು, ಸಮಗ್ರ ಮಾಹಿತಿ ಪಡೆಯಲು ಉತ್ತಮ ಅವಕಾಶವಿದೆ.
ಮಾಹಿತಿಗಾಗಿ 080-22240125, 080-26641152/53 ಗೆ ಕರೆ ಮಾಡಬಹುದು. ದೂರವಾಣಿ ಸಂಖ್ಯೆ 1800-425-3553ಗೆ ಉಚಿತ ಕರೆ ಮಾಡಿ ಅಥವಾ ವೆಬ್ ಸೈಟ್ ತಿತಿತಿ.oಡಿgಚಿಟಿiಛಿs-miಟಟeಣs.iಟಿ ನಿಂದಲೂ ಮಾಹಿತಿ ಪಡೆಯಬಹುದಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಜಿಲ್ಲೆಯ ರೈತಬಾಂಧವರು ಸಹ ಸಿರಿಧಾನ್ಯಗಳ ಮೇಳಕ್ಕೆ ಹಾಜರಾಗಿ ಪ್ರಯೋಜನ ಪಡೆಯುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.


ಕಾಣೆಯಾದ ಹುಡುಗಿ ಪತ್ತೆಗೆ ಮನವಿ

ಚಾಮರಾಜನಗರ, ಏ. 25 :- ಗಣೇಶ ಎಂಬುವರ ಮಗಳು ಜಿ. ಪೂಜಾ ಎಂಬಾಕೆ ಏಪ್ರಿಲ್ 19ರಿಂದ ಕಾಣೆಯಾಗಿರುವ ಬಗ್ಗೆ ನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಣೇಶ್ ಹಾಗೂ ಅವರ ಪತ್ನಿ ನಗರದ ಡಿಸಿ ಕಚೇರಿಗೆ ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ಪೂಜಾ ಮನೆಯಲ್ಲಿಯೇ ಇದ್ದು ಕೆಲಸ ಮುಗಿಸಿ ಮನೆಗೆ ತೆರಳಿದ ಬಹಳ ಹೊತ್ತಿನವರೆಗೂ ಕಾಣೆಯಾದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆ ಹಾಗೂ ನೆಂಟರಿಷ್ಟರ ಮನೆಗಳಲ್ಲಿ ವಿಚಾರಿಸಿ ಪತ್ತೆಯಾಗಿರುವುದಿಲ್ಲ.
17 ವರ್ಷದ ಪೂಜಾ ದುಂಡು ಮುಖ, ಗೋದಿ ಮೈಬಣ್ಣ, 5 ಅಡಿ ಎತ್ತರದವಳಾಗಿದ್ದು ಕನ್ನಡ, ತೆಲಗು, ತಮಿಳು ಭಾಷೆ ಮಾತನಾಡುತ್ತಾಳೆ. ಕೆಂಪು ಮತ್ತು ಕಪ್ಪು ಮಿಶ್ರಿತ ಚೂಡಿದಾರ್ ಧರಿಸಿರುತ್ತಾಳೆ.
ಈಕೆಯ ಸುಳಿವು ಸಿಕ್ಕಲ್ಲಿ ನಗರದ ಪಟ್ಟಣ ಪೊಲೀಸ್ ಠಾಣೆಗೆ ತಿಳಿಸುವಂತೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಳ್ಳೇಗಾಲ : ಪ್ರತಿಷ್ಠಿತ ಶಾಲೆಗಳಲ್ಲಿ 6, 8ನೇ ತರಗತಿಗೆ  ಪ. ವರ್ಗಗಳ ವಿದ್ಯಾರ್ಥಿಗಳ ಸೇರ್ಪಡೆಗೆ ಅರ್ಜಿ ಆಹ್ವಾನ

ಚಾಮರಾಜನಗರ, ಏ. 25- 2017-18ನೇ ಸಾಲಿಗೆ ಪರಿಶಿಷ್ಟ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಜಿಲ್ಲೆಯ ಪ್ರತಿಷ್ಠಿತ ಶಾಲೆಗಳ 6 ಮತ್ತು 8ನೇ ತರಗತಿಗೆ ಸೇರ್ಪಡೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿಯು 5 ಮತ್ತು 7ನೇ ತರಗತಿಯಲ್ಲಿ ಶೇ. 80ರಷ್ಟು ಅಂಕ ಪಡೆದಿರಬೇಕು. ಪೋಷಕರ ವಾರ್ಷಿಕ ವರಮಾನ 2 ಲಕ್ಷ ರೂ. ಮಿತಿಯೊಳಗಿರಬೇಕು. ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳ  ಕಚೇರಿಗೆ (ರೂ.ನಂ. 217) ಮೇ 12ರೊಳಗೆ ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಇತರೆ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ಕಚೇರಿಯನ್ನು ಸಂಪರ್ಕಿಸುವಂತೆ ಕೊಳ್ಳೇಗಾಲ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಏ. 26ರಂದು ಮುಖ್ಯಮಂತ್ರಿಯವರ  ಜಿಲ್ಲಾ ಪ್ರವಾಸ

ಚಾಮರಾಜನಗರ, ಏ. 25 :- ಮುಖ್ಯಮಂತ್ರಿಯವರಾದ ಸಿದ್ಧರಾಮಯ್ಯ ಅವರು ಏಪ್ರಿಲ್ 26ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅಂದು ಬೆಳಿಗ್ಗೆ 11.30 ಗಂಟೆಗೆ ಗುಂಡ್ಲುಪೇಟೆ ಪಟ್ಟಣಕ್ಕೆ ಮುಖ್ಯಮಂತ್ರಿಯವರು ಆಗಮಿಸಿ ಅಲ್ಲಿ ನಡೆಯಲಿರುವ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 2 ಗಂಟೆಗೆ ನಂಜನಗೂಡಿಗೆ ತೆರಳುವರು ಎಂದು ಮುಖ್ಯಮಂತ್ರಿ ಅವರ ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರÉ.
ಏ. 26ರಂದು ನಗರಾಭಿವೃದ್ಧಿ ಹಾಗೂ ಹಜ್ ಸಚಿವರ  ಜಿಲ್ಲಾ ಪ್ರವಾಸ
ಚಾಮರಾಜನಗರ, ಏ. 25 :- ನಗರಾಭಿವೃದ್ಧಿ ಹಾಗೂ ಹಜ್ ಸಚಿವÀರಾದ ಆರ್. ರೋಷನ್ ಬೇಗ್ ಅವರು ಏಪ್ರಿಲ್ 26ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಬೆಳಿಗ್ಗೆ 11.30 ಗಂಟೆಗೆ ಗುಂಡ್ಲುಪೇಟೆ ಪಟ್ಟಣಕ್ಕೆ ಆಗಮಿಸಿ ಮುಖ್ಯಮಂತ್ರಿಯವರೊಂದಿಗೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 2 ಗಂಟೆಗೆ ನಂಜನಗೂಡಿಗೆ ತೆರಳುವರು ಎಂದು ಸಚಿವರ ವಿಶೇಷಾಧಿಕಾರಿ ತಿಳಿಸಿದ್ದಾರÉ.

ಏ. 26ರಂದು ಉಸ್ತುವಾರಿ ಸಚಿವರ  ಜಿಲ್ಲಾ ಪ್ರವಾಸ
ಚಾಮರಾಜನಗರ, ಏ. 25 - ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವÀರಾದ ಯು.ಟಿ. ಖಾದರï ಅವರು ಏಪ್ರಿಲ್ 26ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಬೆಳಿಗ್ಗೆ 10.30 ಗಂಟೆಗೆ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ತೆರಳುವರು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರÉ.

ಏ. 28ರಂದು ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ



ಚಾಮರಾಜನಗರ, ಏ. 25 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಭಾರತರತ್ನ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 126ನೇ ಜನ್ಮದಿನಾಚರಣೆ ಸಮಾರಂಭವನ್ನು ಏಪ್ರಿಲ್ 28ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಗಣ್ಯರಿಂದ ಮಾಲಾರ್ಪಣೆ ಮಾಡುವ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9.30 ಗಂಟೆಗೆ ಪ್ರವಾಸಿ ಮಂದಿರದ ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಚಾಲನೆ ನೀಡುವರು.
ಬೆಳಿಗ್ಗೆ 11 ಗಂಟೆಗೆ ನಗರದ ಪೇಟೆ ಪ್ರೈಮರಿ ಶಾಲಾ ಆವರಣದÀಲ್ಲಿ ವೇದಿಕೆ ಸಮಾರಂಭ ನಡೆಯಲಿದ್ದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಕಾರ್ಯಕ್ರಮ ಉದ್ಫಾಟಿಸುವರು. ಟಿ. ನರಸೀಪುರದ ನಳಂದ ಬುದ್ಧವಿಹಾರದ ಬೌದ್ಧ ಭಿಕ್ಕುಗಳಾದ ಪರಮಪೂಜ್ಯ ಬೋಧಿರತ್ನ ಬಂತೇಜಿ ದಿವ್ಯಸಾನಿಧ್ಯ ವಹಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅಂಬೇಡ್ಕರ್ ಅವರ ಜೀವಮಾನದ ಛಾಯಾಚಿತ್ರ ಪ್ರದರ್ಶನದ ಅನಾವರಣ ಮಾಡುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ ಘನ ಉಪಸ್ಥಿತಿ ವಹಿಸುವರು. ಶಾಸಕರಾದ ಎಸ್.ಜಯಣ್ಣ, ಆರ್. ನರೇಂದ್ರ, ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಮೈಸೂರು ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಆಲಿಖಾನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪÀ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕೆ. ಆರ್. ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಹೆಚ್.ಡಿ. ಉಮಾಶಂಕರ್ ಅವರು ಮುಖ್ಯ ಭಾಷಣ ಮಾಡುವರು.
ಅಂಬೇಡ್ಕರ್ ಜನ್ಮದಿನಾಚರಣೆ ಅಂಗವಾಗಿ ಏಪ್ರಿಲ್ 27ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ಏರ್ಪಡಿಸಲಾಗಿದೆ

ಏ. 26ರಂದು ಪೌರಾಡಳಿತ ಸಚಿವರ ಜಿಲ್ಲಾ ಪ್ರವಾಸÀ

ಚಾಮರಾಜನಗರ, ಏ. 25 :- ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಏಪ್ರಿಲ್ 26 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಬೆಳಿಗ್ಗೆ 11.30 ಗಂಟೆಗೆ ಗುಂಡ್ಲುಪೇಟೆ ಪಟ್ಟಣಕ್ಕೆ ಆಗಮಿಸಿ ಮುಖ್ಯಮಂತ್ರಿಯವರೊಂದಿಗೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿಗೆ ತೆರಳುವರು ಎಂದು ಸಚಿವರ ಆಪ್ತಕಾರ್ಯದರ್ಶಿ ತಿಳಿಸಿದ್ದಾರÉ.

ಏ. 26ರಂದು ಪಶು ಸಂಗೋಪನೆ, ರೇಷ್ಮೆ ಸಚಿವರ ಜಿಲ್ಲಾ ಪ್ರವಾಸ

ಚಾಮರಾಜನಗರ, ಏ. 25 :- ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವರಾದ ಎ.ಮಂಜು ಅವರು ಏಪ್ರಿಲ್ 26 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಬೆಳಿಗ್ಗೆ 10.30 ಗಂಟೆಗೆ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 2.30 ಗಂಟೆಗೆ ಹುತ್ತೂರು ಗೋಶಾಲೆಗೆ ಭೇಟಿ ನೀಡುವರು. ಮಧ್ಯಾಹ್ನ 3.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿ ಪಶುಪಾಲನೆ ಹಾಗೂ ಪಶು ವೈದ್ಯ ಸೇವ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. 4 ಗಂಟೆಗೆ ಮಂಗಲ ಮತ್ತು ಉಮ್ಮತ್ತೂರು ಗೋಶಾಲೆಗೆ ಭೇಟಿ ನೀಡುವರು. ಸಂಜೆ 6 ಗಂಟೆಗೆ ಮೈಸೂರಿಗೆ ತೆರಳುವರೆಂದು ಸಚಿವರ ಆಪ್ತಕಾರ್ಯದರ್ಶಿ ತಿಳಿಸಿದ್ದಾರೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು