ಮತಗಟ್ಟೆ ಬಳಿ ಶಾಮಿಯಾನ, ಪ್ರಚಾರ ನಿಷೇಧ :
ಚಾಮರಾಜನಗರ ಏಪ್ರಿಲ್ 8, - ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ ಮತದಾನವು ಏಪ್ರಿಲ್ 9 ರಂದು ನಡೆಯಲಿದ್ದು ಮತಗಟ್ಟೆಯ 100 ಮೀ ವ್ಯಾಪ್ತಿಯಲ್ಲಿ ಹಾಗೂ ಅದರ ಅಚೆಗೆ ರಾಜಕೀಯ ಪಕ್ಷಗಳು ಶಾಮಿಯಾನ ಹಾಕಿ ಯಾವುದೇ ಮತಯಾಚನೆ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದ್ದಾರೆ.
ಬಿ.ಎಲ್.ಓ.ಗಳು ವೋಟರ್ ಸ್ಲಿಪ್ ವಿತರಿಸಲಿದ್ದಾರೆ. ಹಿಗಾಗಿ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪ್ರತಿನಿಧಿಗಳು ಶಾಮಿಯಾನ ಹಾಕುವಂತಿಲ್ಲ. ಸೂಚಿಸಲಾಗಿರುವ ಮತಗಟ್ಟೆ ಪ್ರದೇಶ ವ್ಯಾಪ್ತಿಯಲ್ಲಿ ಮತಯಾಚನೆ ಪ್ರಚಾರ ಮಾಡುವಂತಿಲ್ಲ. ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಯಲು ಸಹಕರಿಸಬೇಕು. ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ರಾಮು ಅವರು ತಿಳಿಸಿದ್ದಾರೆ.
ಪರಿಹಾರ ನೀಡಿದ ಪ್ರಕರಣ : ದೂರು ದಾಖಲು
ಚಾಮರಾಜನಗರ ಏಪ್ರಿಲ್ 8, :- ಬಿ.ಜೆ.ಪಿ.ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರು ನೀತಿ ಸಂಹಿತೆ ಅವಧಿಯಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ವಡ್ಡನಹೊಸಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡಿರುವ ಸಂಬಂಧ ದೂರು ದಾಖಲಿಸಲಾಗಿದೆ.
ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ ಪ್ರಚಾರಕ್ಕೆ ಏಪ್ರಿಲ್ 7 ರಂದು ಮುಖ್ಯಮಂತ್ರಿಯವರು ಬಂದ ಸಮಯದಲ್ಲಿ ಅನುಮತಿ ಪಡೆಯದೆ ಇದ್ದ ಟಾಟಾ ಏಸರ್ ವಾಹನಯೊಂದನ್ನು ವಶಪಡಿಸಿಕೊಳ್ಳಲಾಗಿದೆ.
ಅನುಮತಿ ಪಡೆಯದೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಕಾರೊಂದನ್ನು ಪರಿಶೀಲಿಸಿದ ವೇಳೆ ಕಾಂಗ್ರೆಸ್ ಚಿಹ್ನೆ ಇರುವ 3 ಟವಲ್, 4 ಟೋಪಿಗಳು ಕಾರಿನಲ್ಲಿ ಕಂಡುಬಂದಿದ್ದು ಏಪ್ರಿಲ್ 7 ರಂದು ಪ್ರಕರಣ ದಾಖಲಿಸಲಾಗಿದೆ.
ಅನುಮತಿ ಪಡೆಯದೆ ಮತ್ತೊಂದು ಕಾರನ್ನು ಪರಿಶೀಲಿಸಿದ ವೇಳೆ ಬಿ.ಜೆ.ಪಿ. ಪಕ್ಷಕ್ಕೆ ಸೇರಿದ ಕರ ಪತ್ರಗಳು ಇರುವುದು ಕಂಡುಬಂದಿದ್ದು ಪ್ರಕರಣ ದಾಖಲಿಸಲಾಗಿದೆ.
ಸ್ವತಂತ್ರ ಅಭ್ಯರ್ಥಿ ಹೊನ್ನೂರಯ್ಯ ಅವರ ಚುನಾವಣಾಧಿಕಾರಿಗಳಿಂದ ವಾಹನಕ್ಕೆ ಅನುಮತಿ ಪಡೆದು ಕಾಂಗ್ರೆಸ್ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಮಾಡಲು ವಾಹನವನ್ನು ಬಳಸಿದ್ದ ಬಗ್ಗೆ ದೂರು ದಾಖಲಿಸಲಾಗಿದೆ.
ಕೆಲಸೂರು ಗ್ರಾಮದಲ್ಲಿ ಪಂಪಾಪತಿ ಎಂಬುವರು ಮತದಾರರಿಗೆ ಹಣ ಹಂಚುತ್ತಿರುವ ಬಗ್ಗೆ ತಿಳಿದು ಅವರಿಂದ 418650 ರೂ.ಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿದೆ.
ಏಪ್ರಿಲ್ 7 ರಂದು ಪಟ್ಟಣದ ಖಾಸಗಿ ಹೋಟೆಲ್‍ಯೊಂದರಲ್ಲಿ ಅನುಮತಿ ಪಡೆಯದೆ ಮುಖಂಡರೊಬ್ಬರ ಸಂದರ್ಶನ ನಡೆಸಿದ್ದ ಹಿನ್ನೆಲೆಯಲ್ಲಿ ಖಾಸಗಿ ವಾಹಿನಿಯೊಂದರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಏಪ್ರಿಲ್ 7 ರಂದು ಶಿಂಡನಪುರ ಗೇಟ್ ಬಳಿ ಚುನಾವಣಾ ಪ್ರಚಾರ ಅವಧಿ ಮುಗಿದ ಬಳಿಕವು ಮಾಜಿ ಮಂತ್ರಿ ರೇಣುಕಾಚಾರ್ಯ ಅವರು ಬಿ.ಜೆ.ಪಿ. ಕಾರ್ಯಕರ್ತರೊಡನೆ ಸಮಾಲೋಚಿಸುತ್ತಿದ್ದ ಹಿನ್ನೆಲೆಯಲ್ಲಿ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಏಪ್ರಿಲ್ 7 ರಂದು ಗೇಟ್ ವೇ ಆಫ್ ಕರ್ನಾಟಕ ಹೋಟೆಲ್ ಬಳಿ ಮನೋಜ್ ಕುಮಾರ್ ಎಂ.ಕಾರ್ಜಗಿ ಅವರಿಗೆ ಸೇರಿದ ಕಾರ್‍ನಿಂದ 1764000 ಜಪ್ತಿ ಮಾಡಿಕೊಂಡು ಮನೋಜ್ ಕುಮಾರ್ ಅವರನ್ನು ದಸ್ತಗಿರಿ ಮಾಡಲಾಗಿದ್ದು ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿ ನಳಿನ್ ಅತುಲ್ ಅವರು ತಿಳಿಸಿದ್ದಾರೆ.
No comments:
Post a Comment