Monday, 17 April 2017

17-04-2017ಏ. 28ರಂದು ಅದ್ದೂರಿಯಾಗಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮ : ಪೂರ್ವಭಾವಿ ಸಭೆಯಲ್ಲಿ ನಿರ್ಧಾರ

ಏ. 28ರಂದು ಅದ್ದೂರಿಯಾಗಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮ : ಪೂರ್ವಭಾವಿ ಸಭೆಯಲ್ಲಿ ನಿರ್ಧಾರ




ಚಾಮರಾಜನಗರ, ಏ. 17 :- ಜಿಲ್ಲಾಡಳಿತದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 126ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಏಪ್ರಿಲ್ 28ರಂದು ನಗರದಲ್ಲಿ ಅದ್ದೂರಿಯಾಗಿ ಹಮ್ಮಿಕೊಳ್ಳಲು ಹಾಗೂ ಅಂಬೇಡ್ಕರ್ ಅವರ ವಿಚಾರಧಾರೆಗಳ ಕುರಿತ ವಿಚಾರ ಸಂಕಿರಣವನ್ನು ಏಪ್ರಿಲ್ 27ರಂದು ಅರ್ಥಪೂರ್ಣವಾಗಿ ಏರ್ಪಡಿಸಲು ಇಂದು ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಆರಂಭದಲ್ಲೇ ಮಾತನಾಡಿದ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಉಪಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆಚರಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಅಸಮಾಧಾನ ವ್ಯಕ್ತವಾಗಿದ್ದು ಎಲ್ಲರ ಅಭಿಪ್ರಾಯದಂತೆ ಮತ್ತೊಮ್ಮೆ ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಅಗತ್ಯವಿರುವ ಸಲಹೆಯನ್ನು ನೀಡುವಂತೆ ಸಂಘಸಂಸ್ಥೆ ಮುಖಂಡರಿಗೆ ಮನವಿ ಮಾಡಿದರು.
ಮುಖಂಡರು ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಚುನಾವಣೆ ಸಹಜವಾಗಿ ಎದುರಾಗಲಿದೆ. ಆದರೆ ಅಂಬೇಡ್ಕರ್ ಅವರ ವಿಚಾರಧಾರೆ ಆದರ್ಶ ಹೋರಾಟದ ಮೌಲ್ಯಗಳನ್ನು ಜನರಿಗೆ ತಲುಪಿಸಬೇಕೆನ್ನುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಅಂಬೇಡ್ಕರ್ ಜಯಂತಿಯನ್ನು ಎಂದಿನಂತೆ ಆಚರಿಸಬೇಕು ಎಂಬುದು ನಮ್ಮ ನಿಲುವು ಆಗಿದೆ. ಈ ವಿಷಯದಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ ಎಂದರು. 
ಕಾರ್ಯಕ್ರಮ ಹಮ್ಮಿಕೊಳ್ಳುವ ವಿಚಾರದಲ್ಲಿ ಯಾವುದೇ ಮುಜುಗರಕ್ಕೆ ಒಳಗಾಗುವ ಪ್ರಸಂಗ ತರಬಾರದು. ಎಲ್ಲರ ವಿಶ್ವಾಸ ಪಡೆದು ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಬೇಕು. ಈ ನಿಟ್ಟಿನಲ್ಲಿ ಮುಂದೆ ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಬೇಕಿದೆ ಎಂದರು.
ಎಂದಿನಂತೆ ಅಂಬೇಡ್ಕರ್ ಅವರ ವಿಚಾರಗಳನ್ನು ಪ್ರಸ್ತುತಪಡಿಸುವ ವಿಚಾರಸಂಕಿರಣವನ್ನು ಸಹ ಜಯಂತಿ ಕಾರ್ಯಕ್ರಮದ ಹಿಂದಿನ ದಿವಸವೇ ಏರ್ಪಡಿಸಬೇಕು. ವಿಚಾರವಾದಿಗಳನ್ನು ಆಹ್ವಾನಿಸಿ ಆಯೋಜಿಸುವ ವಿಚಾರಸಂಕಿರಣಕ್ಕೂ ಹೆಚ್ಚಿನ ಜನರು ಈ ಹಿಂದಿನಿಂದಲೂ ಬರುತ್ತಿದ್ದಾರೆ. ಈ ಬಾರಿಯೂ ವಿಚಾರಸಂಕಿರಣವನ್ನು ಏರ್ಪಡಿಸಲೇ ಬೇಕೆಂದರು.ಎಲ್ಲ ಸಮುದಾಯಗಳ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಮಾದರಿ ಕಾರ್ಯಕ್ರಮವಾಗಿ ರೂಪುಗೊಳಿಸಬೇಕಿದೆ ಎಂದು ಸಲಹೆ ಮಾಡಿದರು.
ಎಲ್ಲರ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಮಾತನಾಡಿದ ಧ್ರುವನಾರಾಯಣ ಅವರು ಇದೇ ಏಪ್ರಿಲ್ 28ರಂದು ನಗರದ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಎಲ್ಲ ತಾಲೂಕುಗಳ ಜನತೆಯೂ ಪಾಲ್ಗೊಳ್ಳಲು ಅವಕಾಶವಾಗುವಂತೆ ಜಿಲ್ಲಾ ಮಟ್ಟದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಸಮಾರಂಭ ಹಮ್ಮಿಕೊಳ್ಳಲಾಗುವುದು. ಸಮಾರಂಭಕ್ಕೆ ಮೊದಲು ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆ ಸಹ ಏರ್ಪಾಡು ಮಾಡಲಾಗುವುದು. ಎಪ್ರಿಲ್ 27ರಂದು ವಿಚಾರಸಂಕಿರಣ ಕಾರ್ಯಕ್ರಮ ಸಹ ಆಯೋಜಿಸಲಾಗುವುದು ಎಂದರು.
ಶಿಷ್ಠಾಚಾರ ಅನುಸಾರ ಸಮಾರಂಭ ಆಯೋಜಿತವಾಗಲಿದೆ. ಕಾರ್ಯಕ್ರಮ ಸುಲಲಿತವಾಗಿ ನಡೆಯಲು ಅಧಿಕಾರಿಗಳು, ಸಂಘಸಂಸ್ಥೆಯ ಮುಖಂಡರನ್ನು ಒಳಗೊಂಡ ಸಮಿತಿಯನ್ನು ಈ ಬಾರಿಯೂ ಮುಂದುವರೆಸಬೇಕು. ಅಗತ್ಯಕ್ಕೆ ತಕ್ಕಂತೆ ಮತ್ತಷ್ಟು ಮುಖಂಡರು ಸಂಘಸಂಸ್ಥೆಗಳ ಪ್ರತಿನಿಧಿಗಳನ್ನು ಸೇರ್ಪಡೆ ಮಾಡಿಕೊಳ್ಳಬಹುದು ಎಂದು ಧ್ರುವನಾರಾಯಣ ತಿಳಿಸಿದರು.
ಮೆರವಣಿಗೆಗೆ ಹೆಚ್ಚಿನ ಕಲಾತಂಡಗಳನ್ನು ನಿಯೋಜಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದ ಲೋಕಸಭಾ ಸದಸ್ಯರು ಬೇರೆ ಬಗೆಯ ಕಲಾತಂಡಗಳ ಮಾಹಿತಿ ಇದ್ದಲ್ಲಿ ಸಂಘಸಂಸ್ಥೆಗಳ ಪ್ರತಿನಿಧಿಗಳು ಗಮನಕ್ಕೆ ತರಬಹುದೆಂದು ತಿಳಿಸಿದರು. 
ಮೆರವಣಿಗೆ ಸಾಗುವ ಪ್ರಮುಖ ಬೀದಿ ರಸ್ತೆಗಳನ್ನು ದುರಸ್ತಿಪಡಿಸಬೇಕು. ಮೆರವಣಿಗೆಯು ಸುಗಮವಾಗಿ ಸಾಗಲು ಯಾವುದೇ ಅಡಚಣೆಯಾಗದಂತೆ ಸಿದ್ಧಪಡಿಸುವ ಹೊಣೆಗಾರಿಕೆ ನಗರಸಭೆ ಅಧಿಕಾರಿಗಳ ಮೇಲಿದೆ. ವಿಚಾರ ಸಂಕಿರಣ ಆಯೋಜನೆಯನ್ನು ಜಂಟಿ ಕೃಷಿ ನಿರ್ದೇಶಕರ ಅಧ್ಯಕ್ಷತೆ ಸಮಿತಿ ನಿರ್ವಹಿಸಬೇಕು ಎಂದರು.
ಜಿಲ್ಲೆಯ ಎಲ್ಲ ತಾಲೂಕುಗಳ ನಾಗರಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುವಾಗುವಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಹೆಚ್ಚು ಪ್ರಮಾಣದಲ್ಲಿ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ವಿತರಿಸಬೇಕು. ತಾಲೂಕು ಸಂಘಸಂಸ್ಥೆಗಳ ಪ್ರತಿನಿಧಿಗಳು ಇನ್ನಿತರರನ್ನು ತೊಡಗಿಸಿಕೊಂಡು ಸಮಾರಂಭ ಅತ್ಯಂತ ಯಶಸ್ವಿಯಾಗಿ ನಡೆಸಲು ಪೂರ್ಣ ಪ್ರಮಾಣದಲ್ಲಿ ಕಾರ್ಯೋನ್ಮುಖರಾಗಬೇಕು. ಜಯಂತಿ ಆಚರಣೆಗೆ ಸಂಘಸಂಸ್ಥೆಗಳು ಸಂಪೂರ್ಣ ಸಹಕಾರ ನೀಡಬೇಕೆಂದು ಧ್ರುವನಾರಾಯಣ ತಿಳಿಸಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎಸ್. ಜಯಣ್ಣ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್. ಜೈನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ  ಕೆ.ಎಚ್. ಸತೀಶ್, ಮಾಜಿ ನಗರಸಭಾ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರೂ ಆದ ನಂಜುಂಡಸ್ವಾಮಿ,  ಮುಖಂಡರಾದ ಬ್ಯಾಡಮೂಡ್ಲು ಬಸವಣ್ಣ, ಕಂದಹಳ್ಳಿ ನಾರಾಯಣ, ಸೋಮಶೇಖರ ಬಿಸಲ್ವಾಡಿ, ಆಲೂರು ನಾಗೇಂದ್ರ, ಮಾಜಿ ನಗರಸಭಾ ಸದಸ್ಯರಾದ ನಾಗರಾಜು, ಇನ್ನಿತರರು ಸಭೆಯಲ್ಲಿ  ಹಾಜರಿದ್ದರು.

****************************************************************************

ಏಪ್ರಿಲ್ 18 ರಂದು ಪಶು ಸಂಗೋಪನೆ ಸಚಿವರ ಜಿಲ್ಲಾ ಪ್ರವಾಸ

ಚಾಮರಾಜನಗರ, ಏ. 17 :- ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವರಾದ ಎ.ಮಂಜು ಅವರು ಏಪ್ರಿಲ್ 18 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಬೆಳಿಗ್ಗೆ 8.30 ಕ್ಕೆ ಕೊಳ್ಳೇಗಾಲಕ್ಕೆ ಆಗಮಿಸುವವರು. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ರಾಮಾಪುರ, ಭದ್ರಯ್ಯನಹಳ್ಳಿ, ಶೆಟ್ಟಿಹಳ್ಳಿ, ಕೌದಳ್ಳಿ, ದತ್ತಹಳ್ಳಿ, ಕುರಟ್ಟಿ ಹೊಸೂರು, ಎಂ.ಎಸ್.ದೊಡ್ಡಿಯಲ್ಲಿರುವ ಗೋಶಾಲೆಗಳಿಗೆ ಭೇಟಿ ನೀಡುವರು. ಬಳಿಕ ಮಂಗಲ ಮತ್ತು ಉಮ್ಮತ್ತೂರು ಗೋಶಾಲೆಗಳಿಗೆ ಭೇಟಿ ನೀಡುವರು. ಮಧ್ಯಾಹ್ನ 3 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಸಂಜೆ 6 ಗಂಟೆಗೆ ಬೆಂಗಳೂರಿಗೆ ತೆರಳವರೆಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ವಿಶೇಷ ಚೇತನರಿಗೆ ಆತ್ಮಸ್ಥೈರ್ಯ ತುಂಬಿ: ಆರ್.ಧ್ರುವನಾರಾಯಣ

ಚಾಮರಾಜನಗರ, ಏ. 17 ವಿಶೇಷ ಚೇತನರಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಅವರು ಜೀವನದಲ್ಲಿ ಮೇಲೆ ಬರಲು ಉತ್ತೇಜಿಸಬೇಕಿದೆ ಎಂದು ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಇಂದು ವಿಕಲ ಚೇತನರಿಗೆ ಸಾಧನಾ ಸಲಕರಣೆ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷ ಚೇತನರಿಗೆ ಧೈರ್ಯ ತುಂಬುವ ಕೆಲಸವಾಗಬೇಕು. ವಿಕಲ ಚೇತನರು ಸಹ ಎಲ್ಲಾರಂತೆ ಬದುಕಲು ಪ್ರೋತ್ಸಾಹ, ಅವಕಾಶ ನೀಡಬೇಕು. ವಿಶೇಷ ಚೇತನರಿಗೆ ವಿಶೇಷ ಆದ್ಯತೆ ಕೊಡಬೇಕು. ಶೇ.3 ರಷ್ಟು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕಿದೆ. ವಿಕಲ ಚೇತನರು ಕೆಲಸ ಮಾಡಬಹುದಾದ ಕ್ಷೇತ್ರಗಳನ್ನು ಗುರುತಿಸಿ ಉದ್ಯೋಗ ಅವಕಾಶ ಒದಗಿಸುವಂತೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಯವರಿಗೂ ಈ ಬಗ್ಗೆ ತಿಳಿಸಲಾಗಿದೆ ಎಂದರು.
ವಿಕಲ ಚೇತನರಿಗೆ ಅವಶ್ಯವಿರುವ ಸÀಲಕರಣೆಗಳನ್ನು ನೀಡುವುದು ಸಹ ತುಂಬಾ ಪ್ರಮುಖ ಕೆಲಸವಾಗಿದೆ. ಈ ನಿಟ್ಟಿನಲ್ಲಿ ತಾವು ಸಹ ಸಂಸದ ಅನುದಾನದಿಂದ ತ್ರಿಚಕ್ರ ವಾಹನಗಳನ್ನು ಖರೀದಿಸಿ ನೀಡುತ್ತಿದ್ದೇನೆ. ವಿಶೇಷ ಚೇತನರಿಗೆ ಸವಲತ್ತುಗಳನ್ನು ಒದಗಿಸುವುದು ನಮ್ಮೆಲ್ಲಾರ ಹೊಣೆಗಾರಿಕೆ ಆಗಿದೆ ಎಂದು ಧ್ರುವನಾರಾಯಣ ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ ಮಾತನಾಡಿ ವಿಶೇಷ ಚೇತನರಿಗೆ ಮೀಸಲಿಟ್ಟಿರುವ ಶೇ.3 ರಷ್ಟು ಅನುದಾನವನ್ನು ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳ ಮೂಲಕ ಸಮರ್ಪಕವಾಗಿ ತಲುಪಿಸುವ ಕೆಲಸವಾಗಬೇಕಿದೆ. ಈ ಮುಖಾಂತರ ವಿಶೇಷ ಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮವಹಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ವಿಶೇಷ ಚೇತನರಲ್ಲಿ ಪ್ರತಿಭೆ ಇದೆ. ಇದರ ಅನಾವರಣಕ್ಕೆ ಪ್ರೋತ್ಸಾಹಿಸಬೇಕಿದೆ. ವಿಶೇಷ ಚೇತನರಿಗಾಗಿಯೇ 29 ಸೌಲಭ್ಯಗಳನ್ನು ನೀಡಲಾಗುತ್ತಿದೆ. ಜನಪ್ರತಿನಿಧಿಗಳು ಅವರ ಅನುದಾನದಲ್ಲಿ ವಿಶೇಷ ಚೇತನರಿಗೆ ಅಗತ್ಯಕ್ಕೆ ಅನುಗುಣವಾಗಿ ಸೌಲಭ್ಯಗಳನ್ನು ತಲುಪಿಸಲು ಆದ್ಯ ಗಮನ ನೀಡಬೇಕಿದೆ ಎಂದರು.
ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ.ಚಂದ್ರು ಮಾತನಾಡಿ ವಿಕಲ ಚೇತನರಿಗೆ ಸ್ಮಾರ್ಟ್ ಕೇನ್, ಟಾಕಿಂಗ್ ವಾಚ್ ಇನ್ನಿತರ ಸಲಕರಣೆಗಳನ್ನು ನೀಡಲಾಗುತ್ತಿದೆ. ಅಲ್ಲದೇ ಪ್ಯಾರಾ ಓಲಂಪಿಕ್‍ಗೆ ರಾಜ್ಯವನ್ನು ಪ್ರತಿನಿಧಿಸುತ್ತಿರುವ ತಾಲ್ಲೂಕಿನ ಮೇಲಾಜಿಪುರದ ಪ್ರಭುಸ್ವಾಮಿ ಅವರಿಗೆ ಹಣಕಾಸು ನೆರವು ನೀಡಿ ಕ್ರ್ರೀಡಾಕೂಟಕ್ಕೆ ಕಳುಹಿಸಲಾಗುತ್ತಿದೆ. ಎಲ್ಲಾ ಸದಸ್ಯರ ಸಹಕಾರವು ಸೇರಿದೆ ಎಂದರು.
ಇದೇ ವೇಳೆ ಪ್ಯಾರಾ ಓಲಂಪಿಕ್‍ಗೆ ತೆರಳುತ್ತಿರುವ ಪ್ರಭುಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ವಿಕಲ ಚೇತನರಿಗೆ ಸಾಧನಾ-ಸಲಕರಣೆಗಳನ್ನು ವಿತರಿಸಲಾಯಿತು.
ತಾಲ್ಲೂಕು ಪಂಚಾಯತ್ ಉಪ ಅಧ್ಯಕ್ಷರಾದ ಪಿ.ಎನ್.ದಯಾನಿಧಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾಗಸುಂದ್ರಮ್ಮ, ಸದಸ್ಯರಾದ ಸುಧಾ, ಯಶೋಧ, ಶೈಲಾಜಾ, ಆಶಾ, ಪುಷ್ಪಾಲತಾ, ಪುಟ್ಟಸ್ವಾಮಿ, ಮಹದೇವಸ್ವಾಮಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮ್‍ಕುಮಾರ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು