ಬಿಆರ್‍ಟಿಯಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ನೂರಾರು ಎಕರೆ ಅರಣ್ಯ ಭಸ್ಮ : ಬೆಂಕಿಯನ್ನು ಹರಸಾಹಸ ಮಾಡಿ ತಹಬದಿಗೆ ತಂದ ಅರಣ್ಯ ಇಲಾಖಾಧಿಕಾರಿಗಳು
ಯಳಂದೂರು ಏ 01 : ತಾಲ್ಲೂಕಿನ ಬಿಆರ್‍ಟಿ ವನ್ಯಧಾಮದ ಕೆ. ಗುಡಿ ಬಳಿ ಇರುವ ಜ್ಯೋತಿ ಬೆಟ್ಟ, ಗಂಗಾದರೇಶ್ವರ ಗುಡ್ಡ, ಮಲ್ಕಿ ಬೆಟ್ಟದ ಬಳಿ ಅಪರಿಚಿತ ಕಿಡಿಗೇಡಿಗಳು ಹಚ್ಚಿದ ಬೆಂಕಿ ನೂರಾರು ಎಕರೆ ಸಮೃದ್ಧ ಕಾಡನ್ನು ನಾಶಮಾಡಿದೆ. ಕೊನೆಗೂ ಎಚ್ಚೆತ್ತ ಅರಣ್ಯ ಇಲಾಖಾಧಿಕಾರಿಗಳು ಸ್ಥಳೀಯ ಜನರ ಸಹಕಾರ ಪಡೆದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಶುಕ್ರವಾರ ಸಾಯಂಕಾಲ ಕಿಡಿಗೇಡಿಗಳಿಂದ ಬೆಂಕಿಗೆ ಆಹುತಿಯಾದ ಕಾಡು, ಗಾಳಿಯ ವೇಗ ಹೆಚ್ಚಿದ್ದರಿಂದ ಬೆಂಕಿಯ ಕೆನ್ನಾಲಿಗೆ ಬೆಟ್ಟದ ಒಂದು ಬದಿಯಿಂದ ರಸ್ತೆಯನ್ನು ದಾಟಿಕೊಂಡು ಮತ್ತೊಂದು ಬದಿಗೆ ಬಂದಿದೆ. ಬಿಳಿಗಿರಿರಂನಬೆಟ್ಟದಿಂದ ಚಾಮರಾಜನಗರಕ್ಕೆ ತೆರಳುವ ರಸ್ತೆಯ ಬಳಿಯ ಮಲ್ಕಿ ಬೆಟ್ಟದಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಸಿಬ್ಬಂಧಿ ಸ್ಥಳೀಯ ಸೋಲಿಗರ ನೆರವನ್ನು ಪಡೆದುಕೊಂಡು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾಡುಸೊಪ್ಪಿನ ಬಳ್ಳಿಗಳನ್ನು ಬಳಸಿಕೊಳ್ಳುವ ಮೂಲಕ ಬೆಂಕಿಯನ್ನು ತಹಬಂದಿಗೆ ತರುವ ಸಾಹಸವನ್ನು ಯಶಸ್ವಿಯಾಗಿದ್ದಾರೆ. ಬಿಆರ್‍ಟಿ ಅರಣ್ಯಧಾಮವು ಹುಲಿ ರಕ್ಷಿತ ಪ್ರದೇಶವಾಗಿ ಘೋಷಣೆಯಾದ ಮೇಲೆ ಬೆಟ್ಟದಲ್ಲಿ ಅರಣ್ಯ ಸಿಬ್ಬಂಧಿಯ ಸರ್ಪಗಾವಲಿದೆ. ಆದರೂ ಕೂಡ ಇಂತಹ ಅವಘಡಗಳು ನಡೆಯುತ್ತಿರುವುದು ವಿಷಾಧನೀಯ ಎಂಬುದು ಸ್ಥಳೀಯ ಸೋಲಿಗ ಜನಾಂಗದ ಮುಖಂಡರ ಅಭಿಪ್ರಾಯ.
ಸ್ಥಳಕ್ಕೆ ಯಳಂದೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜು, ವಲಯ ಅರಣ್ಯಾಧಿಕಾರಿ ಮಹದೇವು ಭೇಟಿ ನೀಡಿ ಅಲ್ಲೇ ಇದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ಸಕ್ರೀಯರಾಗಿ ಯಶಸ್ವಿಯಾಗಿದ್ದಾರೆ. ಹಾಗೂ ಶನಿವಾರವು ಕೂಡ ಸ್ಥಳದಲ್ಲಿ ನೂರಾರು ಸಿಬ್ಬಂದಿಗಳೊಂದಿಗೆ ಮೊಕ್ಕಂ ಹೂಡಿದ್ದಾರೆ. ಜೊತೆಗೆ ಕಾಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.
ಪೋಟೋ ಶಿರ್ಷಿಕೆ ಎ :- ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಕೆ. ಗುಡಿ ಬಳಿ ಇರುವ ಮಲ್ಕಿಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿಗೆ ಚಾಮರಾಜನಗರ ರಸ್ತೆಯಲ್ಲಿನ ಕಾಡು ಹೊತ್ತಿ ಉರಿಯುತ್ತಿರುವುದು
ಪೋಟೋ ಶಿರ್ಷಿಕೆ ಬಿ :- ಯಳಂದೂರು ತಾಲ್ಲೂಕಿನ ಬಿಆರ್‍ಟಿ ವನ್ಯಧಾಮದಲ್ಲಿ ಕಾಣಿಸಿಕೊಂಡ ಬೆಂಕಿಗೆ ಮಲ್ಕಿ ಬೆಟ್ಟದ ಬಳಿ ಕಂಡುಬಂದ ದಟ್ಟಹೊಗೆ
ಪೋಟೋ ಶಿರ್ಷಿಕೆ ಸಿ :- ಯಳಂದೂರು ತಾಲ್ಲೂಕಿನ ಬಿಆರ್‍ಟಿ ವನ್ಯಧಾಮದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು.
No comments:
Post a Comment