Monday, 17 April 2017

15-04-2017 ಮೇವು, ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

ಮೇವು, ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ


ಚಾಮರಾಜನಗರ, ಏ. 15:- ಜಿಲ್ಲೆಯಲ್ಲಿ ಬರಗಾಲ ಇರುವ ಹಿನ್ನೆಲೆಯಲ್ಲಿ ಮಳೆಯ ಪ್ರಮಾಣ ಸುಧಾರಿಸುವವರೆಗೂ ಕುಡಿಯುವ ನೀರು ಮೇವಿಗೆ ಯಾವುದೇ ಅಭಾವವಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಬರ ಪರಿಸ್ಥಿತಿ ಸಂಬಂಧ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ತೆರೆಯಲಾಗಿರುವ ಗೋಶಾಲೆಗಳು ಮೇವು ಬ್ಯಾಂಕ್ ವಿವರ ಪಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಗೋಶಾಲೆಗಳು ಎಲ್ಲಿ ಅಗತ್ಯವಿದೆ? ಮೇವು ಬ್ಯಾಂಕ್ ಎಲ್ಲಿ ಬೇಕಿದೆ ಎಂಬ ಬಗ್ಗೆ ವಿವರವಾದ ಮಾಹಿತಿಯನ್ನು ಸಂಗ್ರಹಿಸಿ ವರದಿ ತಯಾರಿಸುವಂತೆ ನಿರ್ದೇಶನ ನೀಡಿದರು.
ಜಾನುವಾರುಗಳಿಗೆ ಯಾವುದೇ ಕಾರಣಕ್ಕೂ ಮೇವು ಕೊರತೆ ಕಾಡÀಬಾರದು. ಮೇವು ದಾಸ್ತಾನು ಮಾಡಿಕೊಂಡು ಎಲ್ಲ ಭಾಗಗಳಲ್ಲೂ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಬೇಕು. ಜಾನುವಾರುಗಳ ಸಂಖ್ಯೆಗೆ ತಕ್ಕಂತೆ ಮೇವು ಲಭ್ಯವಾಗುವ ನಿಟ್ಟಿನಲ್ಲಿ ಅವಶ್ಯಕ ಕ್ರಮಗಳಿಗೆ ಮುಂದಾಗಬೇಕಿದೆ ಎಂದರು.
ಬರಗಾಲ ಸಂದರ್ಭವನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಯಾವುದೇ ಒಂದು ಇಲಾಖೆಗೆ ಮಾತ್ರ ಜವಾಬ್ದಾರಿ ಇದೆ ಎಂಬ ಮನೋಭಾವ ಬಿಡಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ವ್ಯಾಪಕವಾಗಿ ಗ್ರಾಮೀಣ ಭಾಗಗಳಿಗೆ ಭೇಟಿ ಕೊಟ್ಟು ಬರಪರಿಹಾರ ಪೂರಕ ಕಾರ್ಯಗಳಿಗೆ ತೊಡಗಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಕುರಿತು ಮಾಹಿತಿ ಪಡೆದುಕೊಂಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು ಜನರಿಗೆ ತೊಂದರೆಯಾಗದಂತೆ ನೀರು ಪೂರೈಸುವ ಕೆಲಸ ಆಗಬೇಕು. ಯಾವುದೇ ಮೂಲದಿಂದಾಗಲೀ ತ್ವರಿತವಾಗಿ ನೀರು ಸರಬರಾಜು ಮಾಡಬೇಕು. ದೂರುಗಳಿಗೆ ಅವಕಾಶವಾಗದಂತೆ ನೀರು ಒದಗಿಸುವ ಕಾರ್ಯವು ಬರಗಾಲ ಸಂದರ್ಭದಲ್ಲಿ ನಿರ್ವಹಿಸಬೇಕು ಎಂದರು.
ಬೆಳೆ ವಿಮೆ, ಬೆಳೆಹಾನಿ ಪರಿಹಾರ ನೀಡುತ್ತಿರುವ ಬಗ್ಗೆ ವಿವರ ಒದಗಿಸಿದ ಜಿಲ್ಲಾಧಿಕಾರಿ ಬಿ. ರಾಮು ಅವರು ಮಾತನಾಡಿ ರೈತರ ಖಾತೆಗೆ ಜಮೆ ಆಗುತ್ತಿರುವ ಬೆಳೆ ವಿಮೆ, ಬೆಳೆಹಾನಿ ಪರಿಹಾರ ಹಣವನ್ನು ಸಾಲದ ಮೊತ್ತಕ್ಕೆ ಕಟಾಯಿಸದಂತೆ ಈಗಾಗಲೇ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಅಲ್ಲದೆ ವಸತಿ ಯೋಜನೆ ಪ್ರಗತಿ ಬಗ್ಗೆಯೂ ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ನಳಿನ್ ಅತುಲ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಏ. 17ರಂದು ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಕುರಿತು ಪೂರ್ವಭಾವಿ ಸಭೆ

ಚಾಮರಾಜನಗರ, ಏ. 15 - ಜಿಲ್ಲಾಡಳಿತದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 126ನೇ ಜನ್ಮ ದಿನಾಚರಣೆ ಸಮಾರಂಭ ಹಮ್ಮಿಕೊಳ್ಳುವ ಸಂಬಂಧ ಚರ್ಚಿಸಲು ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 17ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಈ ಸಭೆಗೆ ಎಲ್ಲ ಸಂಘಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು, ನಾಗರಿಕರು ಭಾಗವಹಿಸಿ ಸೂಕ್ತ ಸಲಹೆ ಅಭಿಪ್ರಾಯ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ.ಎಚ್. ಸತೀಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಅಗ್ನಿಶಾಮಕ ಇಲಾಖೆಯಿಂದ ಜಾಗೃತಿ ಸಪ್ತಾಹ

ಚಾಮರಾಜನಗರ, ಏ. 15 :- ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ವತಿಯಿಂದ ಇದೇ ಏಪ್ರಿಲ್ 14 ರಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ ಆರಂಭವಾಗಿದ್ದು ಏಪ್ರಿಲ್ 20ರವರೆಗೂ ಮುಂದುವರೆಯಲಿದೆ.
ಅಗ್ನಿ ದುರಂತಗಳು ಸಂಭವಿಸಿದಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮ ಹಾಗೂ ವಹಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಒಂದು ವಾರಗಳ ಕಾಲ ನಡೆಯಲಿರುವ ಜಾಗೃತಿ ಕಾರ್ಯಕ್ರಮಕ್ಕೆ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ಅವರು ಶುಕ್ರವಾರ ನಗರದ ಜಿಲ್ಲಾಡಳಿತ ಭವನದ ಬಳಿ ಚಾಲನೆ ನೀಡಿದರು.
ಜಿಲ್ಲಾ ತಾಲೂಕಿನ ಪ್ರಮುಖ ಸ್ಥಳಗಳಲ್ಲಿ, ಶಾಲಾಕಾಲೇಜುಗಳು, ಬಸ್ ನಿಲ್ದಾಣ ಇನ್ನಿತರ ಕಡೆ ಅಗ್ನಿ ದುರಂತಗಳ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ. ಈ ಬಾರಿಯ ಸಪ್ತಾಹದಲ್ಲಿ ಅಗ್ನಿಶಾಮಕ – ಜೀವ ಮತ್ತು ಆಸ್ತಿಪಾಸ್ತಿಯನ್ನು ರಕ್ಷಿಸುವ ನಿಮ್ಮ ಜತೆಗಾರ ಎಂಬ ಧ್ಯೇಯ ವಾಕ್ಯದೊಡನೆ ಸುರಕ್ಷತಾ ಕ್ರಮಗಳ ಬಗ್ಗೆ ನಾಗರಿಕರಿಗೆ ತಿಳಿಸಲಾಗುತ್ತಿದೆ.
ಸುರಕ್ಷತಾ ದೃಷ್ಠಿಯಿಂದ ಐಎಸ್‍ಐ ಗುರುತಿನ ವಿದ್ಯುತ್ ಉಪಕರಣ ಬಳಕೆ, ಗ್ಯಾಸ್ ಒಲೆ, ರಬ್ಬರ್ ಟ್ಯೂಬ್ ಬಳಸಲು ಮನವಿ ಮಾಡಲಾಗಿದೆ. ಮಕ್ಕಳು ಪಟಾಕಿ ಹಚ್ಚುವಾಗ ಹಿರಿಯರು ಜತೆಗಿರಬೇಕು, ಬೆಂಕಿ ಉಂಟುಮಾಡುವ ವಸ್ತುಗಳು ಮಕ್ಕಳ ಕೈಗೆ ಎಟುಕದಂತೆ ಎಚ್ಚರವಹಿಸಬೇಕು. ವಿದ್ಯುತ್ ಉಪಕರಣಗಳಲ್ಲಿ ಬೆಂಕಿ ಕಂಡುಬಂದಾಗ ನೀರು ಹಾಕಬಾರದು, ಮೊದಲು ಮೈನ್ ಸ್ವಿಚ್ ಆಫ್ ಮಾಡಬೇಕು. ಅಗ್ನಿ ದುರಂತ ಸಂಭವಿಸಿದ ಕೂಡಲೇ ದೂರವಾಣಿ ಸಂಖ್ಯೆ 101, 108 ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಕರೆ ಮಾಡಬೇಕೆಂಬ ಮನವಿಯನ್ನು ಅಗ್ನಿಶಾಮಕ ಇಲಾಖೆ ಮಾಡಿಕೊಂಡಿದೆ.

ಏ. 17ರಂದು ನಗರದಲ್ಲಿ ವಿಕಲಚೇತನರಿಗೆ ಸಾಧನಸಲಕರಣೆ ವಿತರಣಾ ಕಾರ್ಯಕ್ರಮ

ಚಾಮರಾಜನಗರ, ಏ. 15- ಚಾಮರಾಜನಗರ ತಾಲೂಕು ಪಂಚಾಯತ್ ವತಿಯಿಂದ ವಿಕಲಚೇತನರಿಗೆ ಸಾಧನಸಲಕರಣೆ ವಿತರಣೆ ಕಾರ್ಯಕ್ರಮವನ್ನು ಏಪ್ರಿಲ್ 17ರಂದು ಮಧ್ಯಾಹ್ನ 3 ಗಂಟೆಗೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ.ಚಂದ್ರು ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು