Wednesday, 19 April 2017

19-04-2017 ಮೇವು, ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಸಕಲ ಕ್ರಮ: ಜಿಲ್ಲಾಧಿಕಾರಿ ಬಿ.ರಾಮು, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಜಿಲ್ಲಾ ಪ್ರವಾಸ,ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ ಸಭೆ,

ಮೇವು, ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಸಕಲ ಕ್ರಮ: ಜಿಲ್ಲಾಧಿಕಾರಿ ಬಿ.ರಾಮು


ಚಾಮರಾಜನಗರ, ಏ. 19 :- ಜಿಲ್ಲೆಯಲ್ಲಿ ಬರಪರಿಸ್ಥಿತಿಯು ಗಂಭೀರ ಸ್ವರೂಪವನ್ನು ಪಡೆದಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಅಭಾವ ಉಂಟಾಗದಂತೆ ಜಿಲ್ಲಾಡಳಿತದ ವತಿಯಿಂದ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ರಾಮು ಅವರು ತಿಳಿಸಿದ್ದಾರೆ.
  ಜಿಲ್ಲೆಯಲ್ಲಿ ಈಗಾಗಲೇ 18 ಗೋಶಾಲೆ ಹಾಗೂ 20 ಮೇವು ನಿಧಿಗಳನ್ನು ತೆರೆಯಲಾಗಿದೆ. ಎಲ್ಲಾ ಹೋಬಳಿಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದ್ದು ಸ್ಥಳೀಯ ಸಮಸ್ಯೆಗಳ ಬಗ್ಗೆ ಪರಿಶೀಲಿಸಲು ಆದೇಶಿಸಲಾಗಿದೆ. ವಾರಕ್ಕೊಮ್ಮೆ ಸಭೆ ಕರೆದು ಸಮಸ್ಯೆಗಳ ಪರಿಹಾರಕ್ಕೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಜಾನುವಾರುಗಳಿಗೆ ಮೇವು ಒದಗಿಸಲು ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಯ ರಾಮಾಪುರ, ಬಂಡಳ್ಳಿ, ಕೌದಳ್ಳಿ, ದಂಟಳ್ಳಿ, ಶೆಟ್ಟಹಳ್ಳಿ, ಕುರಟ್ಟಿಹೊಸೂರು, ಭದ್ರಯ್ಯನಹಳ್ಳಿ, ಲೊಕ್ಕನಹಳ್ಳಿ, ಪೊನ್ನಾಚಿ ಇನ್ನಿತರ ಗ್ರಾಮಗಳಲ್ಲಿ ಗೋಶಾಲೆಗಳನ್ನು ತೆರೆದು ಪ್ರತಿ ದಿನ ಮೇವನ್ನು ಸರಬರಾಜು ಮಾಡಲಾಗುತ್ತಿದ್ದು, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ರಾಮಾಪುರ, ಕುರಟ್ಟಿ ಹೊಸೂರು, ದಂಟಳ್ಳಿ, ಅರಬಗೆರೆ-75, ಭದ್ರಯ್ಯನಹಳ್ಳಿ, ಶೆಟ್ಟಳ್ಳಿ, ಪೊನ್ನಾಚಿ, ಕೌದಳ್ಳಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳು ಇರುತ್ತವೆ. ಈ ಭಾಗದ ಗ್ರಾಮಗಳಲ್ಲಿ ನಾಟಿ ತಳಿಯ ಬೀಡಾಡಿ ದನಗಳಿದ್ದು ಇವುಗಳಿಗೆ ಹಗ್ಗ ಮೂಗುದಾರವಿಲ್ಲದೆ ದೊಡ್ಡಿಯಲ್ಲಿ ಕೂಡಿ ಹಾಕಿರುತ್ತಾರೆ. ಇಲ್ಲಿಯ  ಗ್ರಾಮಸ್ಥರು  ಮೇವಿಗಾಗಿ  ಬೀಡಾಡಿ  ದನಗಳನ್ನು  ಪಕ್ಕದ  ಕಾಡಿಗೆ  ಬಿಡುವ  ಪದ್ಧತಿ ರೂಢಿಸಿಕೊಂಡಿರುತ್ತಾರೆ. ಆದರೆ ಈ ವರ್ಷ ಅರಣ್ಯ ಇಲಾಖೆಯವರು ಅರಣ್ಯ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿರುವುದರಿಂದ ದನಗಳಿಗೆ ಕಾಡಿಗೆ ಪ್ರವೇಶವಿಲ್ಲದೆ, ಮೇವು ಸಮಸ್ಯೆ ಉಂಟಾಗಿರುತ್ತದೆ.
ಗ್ರಾಮಗಳಿಗೆ ತಾವು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು ಗೋಶಾಲೆಗಳಲ್ಲಿ ಪ್ರತಿ ರಾಸುವಿಗೆ ಅಂದಾಜು 5 ಕೆ.ಜಿ. ಒಣ ಮೇವಿನಂತೆ ಅವಶ್ಯವಿರುವ ಮೇವನ್ನು ದಿನನಿತ್ಯ ಸರಬರಾಜು ಮಾಡಲಾಗುತ್ತಿದೆ. ಜಾನುವಾರುಗಳಿಗೆ ಕುಡಿಯುವ ನೀರಿಗೆ ಸ್ಥಳೀಯವಾಗಿ ಗ್ರಾಮದಲ್ಲಿರುವ ಕಟ್ಟೆಗೆ ಸರ್ಕಾರದ ಹಾಗೂ ಖಾಸಗಿ ಬೋರ್‍ವೆಲ್‍ಗಳಿಂದ ನೀರನ್ನು ತುಂಬಿಸಿ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ.
 ಪ್ರತಿ ಗೋಶಾಲೆಯಲ್ಲಿ ಜಾನುವಾರುಗಳ ಚಿಕಿತ್ಸೆಗಾಗಿ ಅಗತ್ಯ ಔಷಧಿಗಳು, ಲಸಿಕೆ ನೀಡಲಾಗುತ್ತ್ತಿದೆ. ಆಕಸ್ಮಿಕವಾಗಿ ಜಾನುವಾರುಗಳು ಮರಣ ಹೊಂದಿದಲ್ಲಿ ಕೂಡಲೇ ಪಶುಪಾಲನಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ  ತರಲು  ಗ್ರಾಮದ  ಗ್ರಾಮಸ್ಥರಿಗೆ  ತಿಳಿಸಲಾಗಿದೆ.  ಪಶುವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ನಿರಂತರ ಪರಿಶೀಲನೆಯೊಂದಿಗೆ ಜಾನುವಾರುಗಳ ಪಾಲನೆಗೆ ಹೆಚ್ಚಿನ ಗಮನ ಹರಿಸಲು ಸೂಚನೆ ನೀಡಲಾಗಿದೆ.
ಜಿಲ್ಲೆಯಲ್ಲಿ ಇದುವರೆವಿಗೆ ಚಾಮರಾಜನಗರ ತಾಲ್ಲೂಕಿನಲ್ಲಿ 2 ಗೋಶಾಲೆ 05 ಮೇವು ಬ್ಯಾಂಕ್, ಕೊಳ್ಳೇಗಾಲ ತಾಲ್ಲೂಕಿನಲ್ಲಿ 14 ಗೋಶಾಲೆ ಮತ್ತು 04  ಮೇವು ಬ್ಯಾಂಕ್, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 02 ಗೋಶಾಲೆ ಹಾಗೂ 10 ಮೇವು ಬ್ಯಾಂಕ್‍ಗಳನ್ನು ಹಾಗೂ ಯಳಂದೂರು ತಾಲ್ಲೂಕಿನಲ್ಲಿ 1 ಮೇವು ನಿಧಿಯನ್ನು ಪ್ರಾರಂಭಿಸಲಾಗಿರುತ್ತದೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿಯೇ ತೆರೆಯಲಾಗಿರುವ 14 ಗೋಶಾಲೆಗಳಲ್ಲಿ 21766 ಜಾನುವಾರುಗಳಿಗೆ ಮೇವನ್ನು ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಗೋಶಾಲೆ ಮತ್ತು ಮೇವು ನಿಧಿ ನಿರ್ವಹಣೆಗೆ ಇದುವರೆಗೆ 5.70 ಕೋಟಿ ಅನುದಾನವನ್ನು ವೆಚ್ಚ ಮಾಡಲಾಗಿದೆ. ಇದುವರೆವಿಗೆ 7554 ಟನ್ ಮೇವನ್ನು ಖರೀದಿಸಿದ್ದು, 7128 ಟನ್ ಮೇವು ವೆಚ್ಚವಾಗಿರುತ್ತದೆ. ಜೂನ್ ಮಾಹೆಯವರೆವಿಗೂ ಅವಶ್ಯವಿರುವ 14025 ಮೆಟ್ರಿಕ್ ಟನ್ ಮೇವನ್ನು ಖರೀದಿಸಲು ಕ್ರಿಯಾಯೋಜನೆ ತಯಾರಿಸಿ ಕ್ರಮವಹಿಸಲಾಗುತ್ತಿದೆ. ಹೊರ ಜಿಲ್ಲೆಗಳಾದ ಬಳ್ಳಾರಿ, ಬೆಳಗಾವಿ, ಶಿವಮೊಗ್ಗ ಜಿಲ್ಲೆಯಿಂದ ಮೇವನ್ನು ಖರೀದಿಸುತ್ತಿದ್ದು, ಸ್ಥಳೀಯವಾಗಿಯೂ ರೈತರ ಮನವೊಲಿಸಿ ಮೇವನ್ನು ಖರೀದಿಸಿ ಗೋಶಾಲೆ ಹಾಗೂ ಮೇವುನಿಧಿಗಳನ್ನು ನಿರ್ವಹಿಸಲಾಗುತ್ತಿದೆ. ಜೊತೆಗೆ ಕತ್ತರಿಸಿದ ಮೇವನ್ನು (ಚಾಪಡ್ ಫಾಡರ್) ಮೇವು ನಿಧಿಯಲ್ಲಿ ವಿತರಿಸಲಾಗುತ್ತಿದೆ.
 ಜಿಲ್ಲೆಗೆ 9386 ಮೇವಿನ ಬೀಜದ ಮಿನಿಕಿಟ್‍ಗಳು ಪಶುಪಾಲನಾ ಇಲಾಖೆಯಿಂದ ಸರಬರಾಜಾಗಿದ್ದು, ಅದನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ರೈತರಿಗೆ ವಿತರಣೆ ಮಾಡಲಾಗಿದೆ. ಇದರಿಂದ 1254 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಇದರಿಂದ ಉತ್ಪಾದನೆಯಾಗಲಿರುವ ಅಂದಾಜು 50,000 ಟನ್ ಹಸಿರು ಮೇವು ರೈತರಿಗೆ ದೊರೆಯಲಿದೆ.
ಧ್ಯಾನ್ ಫೌಂಡೇಷನ್ ಗೋಶಾಲೆ ನಿರ್ವಹಿಸಲು ಮುಂದಾಗಿದ್ದು, ಅವರ ಕೋರಿಕೆಯನುಸಾರ ಕೊಳ್ಳೇಗಾಲ ತಾಲ್ಲೂಕಿನ, ಕೊಂಬುಡಿಕ್ಕಿ, ಹಳೆಯೂರು, ವಡಕೆಹಳ್ಳ, ಎಂ.ಎಸ್.ದೊಡ್ಡಿ, ಕಳ್ಳಿದೊಡ್ಡಿ ಗ್ರಾಮಗಳಲ್ಲಿ ಏಪ್ರಿಲ್ 12ರಿಂದಲೇ ಗೋಶಾಲೆ ಪ್ರಾರಂಭಿಸಲು ಅವಕಾಶವನ್ನು ನೀಡಿ, ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಗೋಶಾಲೆ ನಿರ್ವಹಣೆ ವೆಚ್ಚವನ್ನು ಸರ್ಕಾರದ ವತಿಯಿಂದಲೇ ಭರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಜಾನುವಾರುಗಳಿಗೆ ಯಾವುದೇ ಮೇವಿನ ಕೊರತೆ ಉಂಟಾಗದಂತೆ ಜಿಲ್ಲಾಡಳಿತವು ಕ್ರಮವಹಿಸಿದೆ.
      ಕುಡಿಯುವ ನೀರಿಗೆ ಸಂಬಂಧಿಸಿದಂತೆ ಪ್ರಸ್ತುತ 55 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ (ಎಂ.ವಿ.ಎಸ್.) ಮೂಲಕ ಶೀಘ್ರವಾಗಿ ಗುಂಡ್ಲುಪೇಟೆ ತಾಲ್ಲೂಕಿನ 131 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವುದು ಹಾಗೂ ಚಾಮರಾಜನಗರ ತಾಲ್ಲೂಕಿನ 166 ಗ್ರಾಮಗಳಿಗೆ ಸಂಬಂಧಿಸಿದ ಯೋಜನೆಯೂ ಸಹ ಶೀಘ್ರವಾಗಿ ಪೂರ್ಣಗೊಳ್ಳಲಿದ್ದು, ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ.  ಪ್ರಸ್ತುತ ಯೋಜನೆಯು ಮುಕ್ತಾಯ ಹಂತದಲ್ಲಿದ್ದು, ನೀರನ್ನು ಶುದ್ದೀಕರಿಸಿ ನೀಡಲು ಕಾಲಾವಕಾಶ ನಿಗಧಿಪಡಿಸಲಾಗಿರುತ್ತದೆ. ಪ್ರಸ್ತುತ ಹಲವಾರು ಗ್ರಾಮಗಳಿಗೆ ರಾ ವಾಟರ್ ಸರಬರಾಜು ಮಾಡಲು ಕ್ರಮವಹಿಸಲಾಗಿದೆ.
ಜಿಲ್ಲೆಯಲ್ಲಿ ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆಗಳು ಕಂಡುಬಂದ ತಕ್ಷಣ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ತಹಸೀಲ್ದಾರರ  ಅಧ್ಯಕ್ಷತೆಯಲ್ಲಿ ತಾಲ್ಲೂಕು  ಟಾಸ್ಕ್‍ಫೋರ್ಸ್  ಸಮಿತಿಯು  ಪ್ರತಿ  ವಾರ  ಸಭೆ ನಡೆಸಿ, ಕುಡಿಯುವ ನೀರು, ಮೇವು ಹಾಗೂ ಉದ್ಯೋಗ ಇನ್ನಿತರ ಅಗತ್ಯ ವಿಷಯಗಳ ಕುರಿತು ಸಂಬಂಧ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ತುರ್ತು ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗಿದೆ. ಪ್ರತಿ ವಾರ ಜಿಲ್ಲಾ ಮಟ್ಟದಲ್ಲಿ ಸಭೆಯನ್ನು ಕರೆದು ಬರಪರಿಸ್ಥಿತಿ ನಿರ್ವಹಣೆ ಬಗ್ಗೆ ಸುಧೀರ್ಘವಾಗಿ ಸಭೆ ನಡೆಸಿ ಸಮಸ್ಯೆ ಪರಿಹರಿಸಲು ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿ ತುರ್ತು ಕ್ರಮವಹಿಸಲಾಗುತ್ತಿದೆ. ಜಿಲ್ಲಾ ಪಂಚಾಯತ್ ವತಿಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡುವ ಸಂಬಂಧ ಹೆಚ್ಚು ಒತ್ತು ನೀಡಲಾಗುತ್ತಿದೆ. ಜಿಲ್ಲಾ ಪಂಚಾಯತ್ ವತಿಯಿಂದ ತಾಲ್ಲೂಕು ಪಂಚಾಯಿತಿಗಳಲ್ಲಿ ಸಹಾಯವಾಣಿ (ಚಾಮರಾಜನಗರ-08226-225392, ಗುಂಡ್ಲುಪೇಟೆ - 08229-222233, ಕೊಳ್ಳೇಗಾಲ-08224-252011, ಯಳಂದೂರು- 08226-240232) ಗಳನ್ನು ತೆರೆಯಲಾಗಿದ್ದು, ದೂರುಗಳು ಸ್ವೀಕೃತಿಯಾದ 24 ಗಂಟೆಯೊಳಗಾಗಿ ಸಮಸ್ಯೆ ಪರಿಹರಿಸಲು ಅಗತ್ಯವಿರುವ ಎಲ್ಲ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ರಾಮು ಅವರು ತಿಳಿಸಿದ್ದಾರೆ.

___________________________________________________

ಏ. 22, 23ರಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಜಿಲ್ಲಾ ಪ್ರವಾಸ

ಚಾಮರಾಜನಗರ, ಏ. 19 - ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬೂರಾವ್ ಚಿಂಚನಸೂರು ಅವರು ಏಪ್ರಿಲ್ 22 ಹಾಗೂ 23ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಏಪ್ರಿಲ್ 22ರಂದು ಸಂಜೆ 4 ಗಂಟೆಗೆ ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸುವರು. ಬಳಿಕ ಗಡಿ ಗ್ರಾಮಗಳಿಗೆ ಭೇಟಿ ನೀಡುವರು. ತದನಂತರ ಮಲೆಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯ ಹೂಡುವರು.
ಏಪ್ರಿಲ್ 23ರಂದು ಬೆಳಿಗ್ಗೆ 7 ಗಂಟೆಗೆ ಮಹದೇಶ್ವರ ಬೆಟ್ಟದಿಂದ ಹೊರಟು ಕೊಳ್ಳೇಗಾಲ ತಾಲೂಕಿನ ಕೊಂಬುಡಿಕ್ಕಿ ಗ್ರಾಮಕ್ಕೆ ತೆರಳಿ ಅಲ್ಲಿ ಆಯೋಜಿಸಲಾಗುವ ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬಳಿಕ ಗೋಪಿನಾಥಂ, ಇತರೆ ಗಡಿ ಗ್ರಾಮಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸುವರು. ಸಂಜೆ 5 ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಅಧ್ಯಕ್ಷರ ಆಪ್ತ ಕಾರ್ಯದರ್ಶಿಯವರು ತಿಳಿಸಿದ್ದಾರೆ.

ಏ. 25ರಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ ಸಭೆ

ಚಾಮರಾಜನಗರ, ಏ. 19 - ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಪರಿಶೀಲನಾ ಸಭೆಯು ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 25ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದ್ದಾರÉ.

ಏ. 20ರಂದು ಬಸವೇಶ್ವರ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆ

ಚಾಮರಾಜನಗರ, ಏ. 19 - ಜಿಲ್ಲಾಡಳಿತದ ವತಿಯಿಂದ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಆಚರಿಸುವ ಸಂಬಂಧ ಚರ್ಚಿಸಲು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 20ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಈ ಸಭೆಗೆ ಎಲ್ಲ ಸಮುದಾಯ ಸಂಘಟನೆಗಳ ಮುಖಂಡರು, ಪ್ರತಿನಿಧಿಗಳು, ನಾಗರಿಕರು ಭಾಗವಹಿಸಿ ಸಲಹೆ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಬಿ. ರಾಮು ಕೋರಿದ್ದಾರೆ.























No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು