ಮತ ಎಣಿಕೆ ಪ್ರಕ್ರಿಯೆ ಸಮರ್ಪಕ ನಿರ್ವಹಣೆಗೆ ಜಿಲ್ಲಾಧಿಕಾರಿ ಬಿ. ರಾಮು ಸೂಚನೆ
ಚಾಮರಾಜನಗರ, ಏ. 11 :- ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ಸಮರ್ಪಕವಾಗಿ ನಿರ್ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ. ರಾಮು ಅವರು ಸೂಚನೆ ನೀಡಿದರು. ಮತ ಎಣಿಕೆ ಕೇಂದ್ರವಾದ ಗುಂಡ್ಲುಪೇಟೆ ಪಟ್ಟಣದ ಸೆಂಟ್‍ಜಾನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಇಂದು ಮತ ಎಣಿಕೆ ಅಧಿಕಾರಿ ಹಾಗೂ ಸಿಬ್ಬಂದಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.ಮತ ಎಣಿಕೆ ಕಾರ್ಯವನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಬೇಕು. ನಿಗದಿಗೊಳಿಸಿರುವ ಟೇಬಲ್‍ಗಳಿಗೆ ತೆರಳಿ ಕಾರ್ಯಸೂಚಿ ಅನುಸಾರ ಕೆಲಸ ಆರಂಭಿಸಬೇಕು. ಎಣಿಕೆ ಮೇಲ್ವಿಚಾರಕರು, ಸಹಾಯಕರು ಯಾವುದೇ ಕಾರಣಕ್ಕೆ ಅವರಿಗೆ ನಿಗದಿ ಮಾಡಲಾದ ಮೇಜನ್ನು ಬಿಟ್ಟು ಹೋಗಕೂಡದು ಎಂದರು.ಮತಯಂತ್ರದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು ಚುನಾವಣಾ ಆಯೋಗ ಪೂರೈಸಿದ ಬ್ಯಾಟರಿಗಳನ್ನು ಮಾತ್ರ ಉಪಯೋಗಿಸಬೇಕು. ಯಂತ್ರಗಳ ಬಾಗಿಲುಗಳು ಸಮಪಾತಳಿ ಸ್ಥಳದಲ್ಲಿರುವಂತೆ ನೋಡಿಕೊಳ್ಳುಬೇಕು. ಸುರಕ್ಷಿತವಾಗಿ ಕಾರ್ಯವಿಧಾನ ನಡೆಯಲು ಗಮನಿಸಬೇಕು ಎಂದರು.ಮತ ಎಣಿಕೆ ಅಧಿಕಾರಿ ಸಿಬ್ಬಂದಿ ನಿಗದಿತ ವೇಳೆಗೆ ಮುಂಚೆಯೆ ಹಾಜರಿದ್ದು, ಮತ ಎಣಿಕೆ ಪ್ರಕ್ರಿಯೆ ಮುನ್ನ ಕೈಗೊಳ್ಳಬೇಕಾಗಿರುವ ಸಿದ್ಧತೆಗಳನ್ನು ಮಾಡಬೇಕು. ಮತ ಎಣಿಕೆ ಅವಧಿ ಆರಂಭವಾಗುತ್ತಿದ್ದಂತೆಯೇ ವಿಳಂಬಕ್ಕೆ ಅವಕಾಶವಾಗದಂತೆ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕತೆಯಿಂದ ಮತ ಎಣಿಕೆ ಕಾರ್ಯವು ನಡೆಯಬೇಕು. ಯಾವುದೇ ಗೊಂದಲ, ಲೋಪಕ್ಕೆ ಅವಕಾಶವಾಗದ ಹಾಗೆ ಕರ್ತವ್ಯ ನಿರ್ವಹಿಸಬೇಕು. ತರಬೇತಿ ಸಮಯದಲ್ಲಿ ಯಾವುದೇ ಅನುಮಾನಗಳಿದ್ದರೆ ಪರಿಹರಿಸಿಕೊಳ್ಳಬೇಕು. ಯಶಸ್ವಿಯಾಗಿ ಚುನಾವಣಾ ಫಲಿತಾಂಶ ಹೊರಬೀಳಲು ಮತ ಎಣಿಕೆ ಅಧಿಕಾರಿ, ಸಿಬ್ಬಂದಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಬಿ. ರಾಮು ಅವರು ತಿಳಿಸಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕೆ ಹರೀಶ್‍ಕುಮಾರ್ ಮಾತನಾಡಿ ಮತ ಎಣಿಕೆ ಕಾರ್ಯ ಆರಂಭಿಸುವ ಮೊದಲು ಅಭ್ಯರ್ಥಿಗಳ ಪರ ಏಜೆಂಟರು ಹಾಜರಿದ್ದಾರೆಯೆ ಎಂದು ಗಮನಿಸಬೇಕು. ಏಜೆಂಟರ ಸಮ್ಮುಖದಲ್ಲಿಯೇ ಕೆಲಸ ನಿರ್ವಹಿಸಬೇಕು ಎಂದರು.ಕ್ಷೇತ್ರ ಚುನಾವಣಾಧಿಕಾರಿ ನಳಿನ್ ಅತುಲ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ನೋಡಲ್ ಅಧಿಕಾರಿ ತಿರುಮಲೇಶ್, ಸಹಾಯಕ ಚುನಾವಣಾಧಿಕಾರಿ ಕೆ. ಸಿದ್ದು, ಇತರರು ಉಪಸ್ಥಿತರಿದ್ದರು. ಇಲಾಖಾ ಪರೀಕ್ಷೆ : ನಿಷೇದಾಜ್ಞೆ ಜಾರಿಚಾಮರಾಜನಗರ, ಏ. 11 - ನಗರದ ಜೆ ಎಸ್ ಎಸ್ ಬಾಲಕರ ಪ್ರೌಢಶಾಲೆಯಲ್ಲಿ ಏಪ್ರಿಲ್ 15 ರಿಂದ 17ರವರೆಗೆ ನಡೆಯಲಿರುವ ಇಲಾಖಾ ಪರೀಕ್ಷೆಗಳ ಪ್ರಥಮ ಅಧಿವೇಶನದ ಪ್ರಯುಕ್ತ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇದಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಬಿ. ರಾಮು ಆದೇಶ ಹೊರಡಿಸಿದ್ದಾರೆ. ಪರೀಕ್ಷಾ ಕಾರ್ಯವು ನ್ಯಾಯೋಚಿತವಾಗಿ, ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಹಾಗೂ ಶಾಂತಿ ಸುವ್ಯವಸ್ಥೆಯಿಂದ ಪರೀಕ್ಷೆ ನಡೆಯಲು ಅನುವಾಗುವಂತೆ ಪರೀಕ್ಷಾ ದಿನಗಳಂದು ಬೆಳಿಗ್ಗೆ 6 ರಿಂದ ಸಂಜೆ 5 ಗಂಟೆಯವರೆಗೆ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೆ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಮುಚ್ಚಲೂ ಸಹ ಆದೇಶಿಸಿದ್ದಾರೆ.ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಸಿಬ್ಬಂದಿ ವರ್ಗದವರಿಗೆ ನಿಷೇಧ ಆದೇಶ ಅನ್ವಯವಾಗುವುದಿಲ್ಲವೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಬಿ. ರಾಮು ಅವರು ತಿಳಿಸಿದ್ದಾರೆ.
ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್ ನಿಷೇಧ
ಚಾಮರಾಜನಗರ, ಏ. 11 - ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆಯು ಸೆಂಟ್‍ಜಾನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಲಿದ್ದು, ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್, ಇತರೆ ಅಪಾಯಕಾರಿ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ. ರಾಮು ಅವರು ಸೂಚನೆ ನೀಡಿದ್ದಾರೆ. ಮೊಬೈಲ್, ಬೆಂಕಿಪೊಟ್ಟಣ, ಲೈಟರ್ ಸೇರಿದಂತೆ ಯಾವುದೇ ಬಗೆಯ ಅಪಾಯಕಾರಿ ವಸ್ತು, ಆಯುಧಗಳನ್ನು ಮತ ಎಣಿಕೆ ಕೇಂದ್ರಕ್ಕೆ ತರುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ. ರಾಮು ಅವರು ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ.ರಾಜೀವ್ ಗಾಂಧಿ ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಏ. 11:- ಮಕ್ಕಳ ಅಭಿವೃದ್ಧಿ, ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ನೀಡುವ 2017ನೇ ವರ್ಷದ ರಾಜೀವ್ ಗಾಂಧಿ ಮಾನವ ಸೇವಾ ಪ್ರಶಸ್ತಿಗೆ ಅರ್ಹ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಬಹುಮಾನ, ಬೆಳ್ಳಿ ಫಲಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಮಕ್ಕಳ ಅಭಿವೃದ್ಧಿ, ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ 10 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿರುವ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದು. ಸಂಘ ಸಂಸ್ಥೆಗಳಲ್ಲಿ ವೇತನ ಪಡೆಯುವ ವ್ಯಕ್ತಿಗಳು ಪ್ರಶಸ್ತಿಗೆ ಅರ್ಹರಿರುವುದಿಲ್ಲ. ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ವ್ಯಕ್ತಿಗಳು ಮಾಡಿರುವ ಕೆಲಸದ ಗುಣಮಟ್ಟದ ಮೇಲೆ ಆಯ್ಕೆ ಅವಲಂಬಿತವಾಗಿರುತ್ತದೆ.ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟಿರುವ ಸಮಿತಿಯು ಪ್ರಶಸ್ತಿಗೆ ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಆಯ್ಕೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ.ಆಸಕ್ತರು ನಿಗದಿಪಡಿಸಿದ ಅರ್ಜಿ ನಮೂನೆಯನ್ನು ನಗರದ ಜಿಲ್ಲಾಡಳಿತ ಭವನದ ಮೊದಲ ಮಹಡಿಯಲ್ಲಿರುವ (ಕೊಠಡಿ ಸಂಖ್ಯೆ 129) ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಪಡೆದು ಆಂಗ್ಲ ಭಾಷೆಯಲ್ಲಿ ಭರ್ತಿ ಮಾಡಿ ಮೇ 15ರೊಳಗೆ ಸಲ್ಲಿಸಬೇಕು. ನಂತರ ಬರುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ.ಹೆಚ್ಚಿನ ವಿವರಗಳಿಗೆ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಪಡೆಯುವಂತೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವ್ಯಕ್ತಿ, ಸಂಸ್ಥೆಗಳಿಂದ ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನಚಾಮರಾಜನಗರ, ಏ. 11- ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಹಲವು ವರ್ಷ ಉತ್ತಮ ಸೇವೆ ಸಲ್ಲಿಸಿ ನಿರತರಾಗಿರುವ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ನೀಡುವ 2017ನೇ ವರ್ಷದ ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ರಾಷ್ಟ್ರ ಪ್ರಶಸ್ತಿಯನ್ನು 5 ಸಂಸ್ಥೆಗಳಿಗೆ ತಲಾ ರೂ. 3 ಲಕ್ಷ ನಗದು ಹಾಗೂ ಮೂವರು ವ್ಯಕ್ತಿಗಳಿಗೆ ತಲಾ ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಹಲವು ವರ್ಷ ಉತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಂಘ ಸಂಸ್ಥೆಗಳಲ್ಲಿ ವೇತನ ಪಡೆಯುವ ವ್ಯಕ್ತಿಗಳು ಪ್ರಶಸ್ತಿಗೆ ಅರ್ಹರಿರುವುದಿಲ್ಲ. ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ವ್ಯಕ್ತಿಗಳು ಮಾಡಿರುವ ಕೆಲಸದ ಗುಣಮಟ್ಟದ ಮೇಲೆ ಆಯ್ಕೆ ಅವಲಂಬಿತವಾಗಿರುತ್ತದೆ. ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟಿರುವ ಸಮಿತಿಯು ಪ್ರಶಸ್ತಿಗೆ ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಆಯ್ಕೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ.ಆಸಕ್ತ ವ್ಯಕ್ತಿ ಹಾಗೂ ಸಂಸ್ಥೆಗಳು ನಿಗದಿಪಡಿಸಿದ ಅರ್ಜಿ ನಮೂನೆಯನ್ನು ನಗರದ ಜಿಲ್ಲಾಡಳಿತ ಭವನದ ಮೊದಲ ಮಹಡಿಯಲ್ಲಿರುವ (ಕೊಠಡಿ ಸಂಖ್ಯೆ 129) ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಪಡೆದು ಆಂಗ್ಲ ಭಾಷೆಯಲ್ಲಿ ಭರ್ತಿ ಮಾಡಿ ಮೇ 15ರೊಳಗೆ ಸಲ್ಲಿಸಬೇಕು. ನಂತರ ಬರುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ.ಹೆಚ್ಚಿನ ವಿವರಗಳಿಗೆ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಪಡೆಯುವಂತೆ ಉಪನಿರ್ದೇಶಕರು ತಿಳಿಸಿದ್ದಾರೆ.
ಏ. 14ರಂದು ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ
ಚಾಮರಾಜನಗರ, ಏ. 11 :- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಭಾರತರತ್ನ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 126ನೇ ಜನ್ಮದಿನಾಚರಣೆ ಸಮಾರಂಭವನ್ನು ಏಪ್ರಿಲ್ 14ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ವೇದಿಕೆ ಸಮಾರಂಭ ನಡೆಯಲಿದ್ದು ಜಿಲ್ಲಾಧಿಕಾರಿ ಬಿ. ರಾಮು ಸಮಾರಂಭ ಉದ್ಫಾಟಿಸುವರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮೈಸೂರು ವಿವಿ ಪ್ರಸಾರಾಂಗದ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ನಿರ್ದೇಶಕರಾದ ಪ್ರೊ. ಲಕ್ಷ್ಮೀನಾರಾಯಣ ಅರೋರಾ ಮುಖ್ಯ ಭಾಷಣ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.ಪೊಲೀಸ್ ಇಲಾಖಾ ವತಿಯಿಂದ ಸಾರ್ವಜನಿಕ ಪ್ರಕಟಣೆಗಾಗಿ
224-ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯ ಸಂಬಂಧ ಮತದಾನ ಪೂರ್ವ ಪ್ರಕ್ರಿಯೆಗಳು ಹಾಗೂ ಮತದಾನವು ಶಾಂತರೀತಿಯಿಂದ ನಡೆದು ಮುಕ್ತಾಯವಾಗಿರುತ್ತದೆ. ಉಪ ಚುನಾವಣೆಯ ಎಲ್ಲಾ ಪ್ರಕ್ರಿಯೆಗಳು ಶಾಂತಿಯುತವಾಗಿ ನಡೆಯಲು ಸಹಕರಿಸಿದ ವಿವಿದ ರಾಜಕೀಯ ಪಕ್ಷದ ಮುಖಂಡರುಗಳು, ಕಾರ್ಯಕರ್ತರುಗಳು, ಸಾರ್ವಜನಿಕರು, ಚುನಾವಣಾ ಕಾರ್ಯದಲ್ಲಿ ಭಾಗವಹಿಸಿದ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು, ಮಾದ್ಯಮ ಪ್ರತಿನಿಧಿಗಳಿಗೂ ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದಿಸಲಾಗಿದೆ. ಉಪ ಚುನಾವಣೆಯ ಮತ ಎಣಿಕೆ ಕಾರ್ಯವು ದಿನಾಂಕ: 13-04-2017ರಂದು ಗುಂಡ್ಲುಪೇಟೆ ಪಟ್ಟಣದ ಸೆಂಟ್ ಜಾನ್ ಇಂಗ್ಷೀಷ್ ಶಾಲೆಯಲ್ಲಿ ಜರುಗಲಿದ್ದು, ಚುನಾವಣೆಯ ಫಲಿತಾಂಶ ಆ ದಿನವೇ ಹೊರ ಬೀಳಲಿದೆ. ಈ ಸಂಬಂಧ ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ಅವಶ್ಯ ಮುಂಜಾಗ್ರತಾ ಕ್ರಮಗಳನ್ನು ಹಾಗೂ ಪೊಲೀಸ್ ಬಂದೋಬಸ್ತ್ ಅನ್ನು ಏರ್ಪಡಿಸಲಾಗಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಈ ಸಂಬಂಧ ನೀಡುವ ಎಲ್ಲಾ ಆದೇಶಗಳಿಗೂ, ಮನವಿಗಳಿಗೂ ಸಾರ್ವಜನಿಕರು, ವಿವಿಧ ಪಕ್ಷಗಳ ಕಾರ್ಯಕರ್ತರು ಸಹಕರಿಸಬೇಕಾಗಿ ಕೋರಲಾಗಿದೆ. ಅಲ್ಲದೇ ಸಮಾಜಘಾತುಕ ಶಕ್ತಿಗಳು ಈ ಸಂದರ್ಭವನ್ನು ಬಳಸಿಕೊಂಡು ಸಮಾಜದ ಶಾಂತಿ ಕದಡುವ ಸಾಧ್ಯತೆಗಳಿರುವುದರಿಂದ ಸಾರ್ವಜನಿಕರುಗಳು ಶಾಂತಿ ಕದಡುವ ಸಮಾಜ ಘಾತುಕ ಶಕ್ತಿಗಳ ಮಾಹಿತಿ ಇದ್ದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗಾಗಲೀ, ಪೊಲೀಸ್ ಕಂಟ್ರೋಲ್ ರೂಂ ಗಾಗಲೀ (08226-222383)ಮಾಹಿತಿ ನೀಡಲು ಕೋರಲಾಗಿದೆ. ಚಾಮರಾಜನಗರ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಗೂ ಸಾರ್ವಜನಿಕ ಶಾಂತಿಯನ್ನು ಕಾಪಾಡಲು ಜಿಲ್ಲೆಯ ಎಲ್ಲಾ ಸಾರ್ವಜನಿಕರು, ವಿವಿಧ ಪಕ್ಷದ ಮುಖಂಡರುಗಳು, ಕಾರ್ಯಕರ್ತರುಗಳು, ಎಲ್ಲಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಮಾದ್ಯಮ ಪ್ರತಿನಿಧಿಗಳು ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ.
ಕುಲ್‍ದೀಪ್ ಕುಮಾರ್ ಆರ್ ಜೈನ್, ಐ.ಪಿ.ಎಸ್
ಜಿಲ್ಲಾ ಪೊಲೀಸ್ ಅಧೀಕ್ಷಕರು,
ಚಾಮರಾಜನಗರ ಜಿಲ್ಲೆ.
__________________________________________________________________________
No comments:
Post a Comment