Tuesday, 21 March 2017

ಗುಂಡ್ಲುಪೇಟೆ ಉಪ ಚುನಾವಣೆ: ವಿದ್ಯುನ್ಮಾನ ಮಾಧ್ಯಮ ಜಾಹಿರಾತು ಅನುಮೋದನೆ ಕಡ್ಡಾಯ : ಜಿಲ್ಲಾಧಿಕಾರಿ


ಗುಂಡ್ಲುಪೇಟೆ ಉಪ ಚುನಾವಣೆ:
ವಿದ್ಯುನ್ಮಾನ ಮಾಧ್ಯಮ ಜಾಹಿರಾತು ಅನುಮೋದನೆ ಕಡ್ಡಾಯ : ಜಿಲ್ಲಾಧಿಕಾರಿ

ಚಾಮರಾಜನಗರ, ಮಾ. 20:- ಗುಂಡ್ಲುಪೇಟೆ ಉಪ ಚುನಾವಣೆಗೆ ಸಂಬಂಧಿಸಿದಂತೆ ದೃಶ್ಯ, ಹಾಗೂ ಶ್ರವಣ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಚುನಾವಣಾ ಜಾಹಿರಾತುಗಳನ್ನು ಪ್ರಸಾರ ಮಾಡುವ ಮುನ್ನ ಕಡ್ಡಾಯವಾಗಿ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲ್ವಿಚಾರಣೆ ಸಮಿತಿಯಿಂದ ಅನುಮೋದನೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ. ರಾಮು ಅವರು ತಿಳಿಸಿದ್ದಾರೆ.
ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದ್ದು, ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹಿರಾತುಗಳು, ಸುದ್ಧಿ ರೂಪದ (ಪೇಯ್ಡ್ ನ್ಯೂಸ್) ಜಾಹಿರಾತುಗಳ ಬಗ್ಗೆ ಸಮಿತಿ ನಿಗಾ ವಹಿಸಿ ಚುನಾವಣಾಧಿಕಾರಿಗಳಿಗೆ ಹಾಗೂ ವೆಚ್ಚ ವೀಕ್ಷಕರಿಗೆ ದಿನವಹಿ ವರದಿಯನ್ನು ಸಮಿತಿ ನೀಡಲಿದೆ.
ದೂರದರ್ಶನ, ರೇಡಿಯೋ, ಕೇಬಲ್ ಟೆಲಿವಿಷನ್ ಮುಂತಾದ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹಿರಾತುಗಳನ್ನು ಪ್ರಸಾರ ಮಾಡುವ ಮುನ್ನ ಜಿಲ್ಲಾ ಸಮಿತಿಯಿಂದ ಕಡ್ಡಾಯವಾಗಿ ಅನುಮೋದನೆ ಪಡೆದುಕೊಳ್ಳಬೇಕು. ಸಮಿತಿಯು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವಾರ್ತಾ ಭವನದಲ್ಲಿ ಕಾರ್ಯ ನಿರ್ವಹಿಸಲಿದ್ದು, ನಿಗದಿತ ನಮೂನೆಗಳನ್ನು ಪಡೆದು ಕೊಂಡು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಒಂದು ವೇಳೆ ಅನುಮೋದನೆ ಪಡೆಯದೇ ಜಾಹಿರಾತು ಪ್ರಸಾರಣವಾದಲ್ಲಿ ಮಾಧ್ಯಮ ನಿಗಾ ಸಮಿತಿಯು ಈ ಬಗ್ಗೆ ಗಮನಹರಿಸುವುದು ಹಾಗೂ ಅಗತ್ಯ ಕ್ರಮಕ್ಕಾಗಿ ಚುನಾವಣಾಧಿಕಾರಿಗಳಿಗೆ ಕಳುಹಿಸುವುದು.
ಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹಿರಾತುಗಳಿಗೆ ಅನುಮೋದನೆ ಅಗತ್ಯವಿರುವುದಿಲ್ಲ. ಆದರೆ ಪ್ರಕಟವಾಗುವ ಎಲ್ಲ ಜಾಹಿರಾತುಗಳನ್ನು ಸಮಿತಿಯು ಗಮನಿಸಿ ಅಭ್ಯರ್ಥಿಗಳ ವೆಚ್ಚದ ಲೆಕ್ಕಕ್ಕೆ ತೋರಿಸಲು ವೆಚ್ಚ ವೀಕ್ಷಕರಿಗೆ ಹಾಗೂ ಚುನಾವಣಾ ಅಧಿಕಾರಿಗಳಿಗೆ ನಿಗದಿತ ನಮೂನೆಯಲ್ಲಿ ಮಾಹಿತಿ ನೀಡಲಿದೆ.
ಅಭ್ಯರ್ಥಿಯ ಗಮನಕ್ಕೆ ತಾರದೆ ಬೇರೆಯವರು ಅಭ್ಯರ್ಥಿಯ ಹೆಸರಿನಲ್ಲಿ ಜಾಹಿರಾತು ಮುದ್ರಿಸುವಂತಿಲ್ಲ ಅಥವಾ ಪ್ರಸರಣ ಮಾಡುವಂತಿಲ್ಲ. ಇಂಥಹುವುದು ಕಂಡುಬಂದಲ್ಲಿ ಈ ರೀತಿ ಪ್ರಕಟಿಸಿದವರ ವಿರುದ್ಧವೂ ಕ್ರಮ ವಹಿಸಲಾಗುತ್ತದೆ.
ಪತ್ರಿಕೆಗಳಲ್ಲಿ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿ ರೂಪದ ಜಾಹಿರಾತುಗಳ ಬಗ್ಗೆಯೂ ಸಮಿತಿ ಗಮನಹರಿಸಲಿದೆ. ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಲಾಗುವ ಈ ಪ್ರಕರಣಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಾಹಿರಾತು ದರ ಅನ್ವಯಿಸಿ ಅಭ್ಯರ್ಥಿಗಳ ಲೆಕ್ಕಕ್ಕೆ ಸೇರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಬಿ. ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುಂಡ್ಲುಪೇಟೆ ವಿಧಾನ ಸಭೆ ಉಪಚುನಾವಣೆ
ನೀತಿ ಸಂಹಿತೆ ಉಲ್ಲಂಘನೆ : ಮದ್ಯ ವಶ, ಭಾವಚಿತ್ರ ತೆರವು


ಚಾಮರಾಜನಗರ,ಮಾ. 20:- ಗುಂಡ್ಲುಪೇಟೆ ವಿಧಾನ ಸಭೆ ಉಪ ಚುನಾವಣೆಗೆ ಸಂಬಂಧಿಸಿದಂತೆ,  ಅಬಕಾರಿ ಅಧಿಕಾರಿಗಳು ಇಂದು ಸಹ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದಾರೆ.
ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮದ್ಯ ವಶ ಹಾಗೂ ಗ್ರಾಮದ ಚಾವಡಿ ಒಂದರಲ್ಲಿ ಮಾಜಿ ಸಚಿವರೊಬ್ಬರ ಭಾವಚಿತ್ರವನ್ನು ತೆರವುಗೊಳಿಸಿದ ಪ್ರಕರಣವು ನಡೆದಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ಮಹದೇವ ಎಂಬುವವರಿಂದ 0.720 ಲೀ., ಸ್ವಾಮಿ ಎಂಬುವವರಿಂದ 0.720 ಲೀ., ಯಳಂದೂರು ತಾಲ್ಲೂಕಿನ ಕೊಮಾರನಪುರ ಗ್ರಾಮದಲ್ಲಿ ವಾಸು ಎಂಬುವವರಿಂದ 1.080 ಲೀ. ಮದ್ಯ, ಯಳಂದೂರು ಪಟ್ಟಣದಲ್ಲಿ ರಂಗಸ್ವಾಮಿ ಎಂಬುವವರಿಂದ 0.900 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ದ ಎಫ್.ಐ.ಆರ್ ದಾಖಲಾಗಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಕೋಡಹಳ್ಳಿ ಗ್ರಾಮದ ಚಾವಡಿಯಲ್ಲಿ ಸಚಿವರಾಗಿದ್ದ ದಿವಂಗತ ಹೆಚ್.ಎಸ್.ಮಹದೇವಪ್ರಸಾದ್ ಅವರ ಭಾವಚಿತ್ರವನ್ನು ಹಾಕಲಾಗಿದೆ ಎಂದು ಗ್ರಾಮ ಪಂಚಾಯತ್ ಸದಸ್ಯರಾದ ಬಸವಶೆಟ್ಟಿ ಮತ್ತು ರಂಗಶೆಟ್ಟಿ ಎಂಬುವವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೆಕ್ಟರ್ ಅಧಿಕಾರಿಯವರು ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಸಹಕಾರದೊಂದಿಗೆ ಸಚಿವರ ಭಾವಚಿತ್ರವನ್ನು ತೆರವುಗೊಳಿಸಿದ್ದಾರೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ನಲಿನ್ ಅತುಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುಂಡ್ಲುಪೇಟೆ ವಿಧಾನ ಸಭೆ ಉಪಚುನಾವಣೆ
ಮೂವರು ಅಭ್ಯರ್ಥಿಗಳಿಂದ ಐದು ನಾಮಪತ್ರ ಸಲ್ಲಿಕೆ



ಚಾಮರಾಜನಗರ,ಮಾ. 20 :- ಗುಂಡ್ಲುಪೇಟೆ ವಿಧಾನ ಸಭೆ ಉಪ ಚುನಾವಣೆಗೆ ಸಂಬಂಧಿಸಿದಂತೆ,  ಇಂದು ಮೂವರು ಅಭ್ಯರ್ಥಿಗಳಿಂದ ಒಟ್ಟು 5 ನಾಮಪತ್ರ ಸಲ್ಲಿಕೆಯಾಗಿದೆ.
ಭಾರತೀಯ ಜನತಾ ಪಕ್ಷದಿಂದ ಅಭ್ಯರ್ಥಿಯಾಗಿ ಸಿ.ಎಸ್.ನಿರಂಜನ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಭಾರತೀಯ ಕಾಂಗ್ರೇಸ್ ಪಕ್ಷದಿಂದ ಅಭ್ಯರ್ಥಿಯಾಗಿ ಎಂ.ಸಿ.ಮೋಹನಕುಮಾರಿ ಅಲಿಯಾಸ್ ಗೀತಾ ಅವರು 3 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಎಂ.ಶಿವರಾಮು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಮಾ. 23ರಂದು ನಗರದಲ್ಲಿ ಉದ್ಯೋಗ ಮೇಳ : ನರ್ಸಿಂಗ್ ಹುದ್ದೆಗಳಿಗೆ ನೇರ ಸಂದರ್ಶನ

ಚಾಮರಾಜನಗರ, ಮಾ. 20 - ಬೆಂಗಳೂರಿನ ಖಾಸಗಿ ಆಸ್ಪತ್ರೆ ಅಪೋಲೋ ಹೋಂಕೇರ್ ಅವರಿಂದ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸಲುವಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ  ಮಾರ್ಚ್ 23ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ.
ಎಎನ್‍ಎಂ, ಜಿಎನ್‍ಎಂ ಮತ್ತು ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡಿರುವ 18 ರಿಂದ 35ರ ವಯೋಮಿತಿಯುಳ್ಳ ಅಭ್ಯರ್ಥಿಗಳು ಭಾಗವಹಿಸಬಹುದು. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸ್ವವಿವರದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ವಸತಿ ಸೌಲಭ್ಯ ಸಹ ಒದಗಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ಅಧಿಕಾರಿ ದೂ.ಸಂ. 08226-224430 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




ಅಪರಿಚಿತ ಶವ ಪತ್ತೆ : ಸುಳಿವು ನೀಡಲು ಮನವಿ
ಚಾಮರಾಜನಗರ, ಮಾ. 20:- ಮಲೆಮಹದೇಶ್ವರ ಬೆಟ್ಟದಲ್ಲಿ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದು ಈ ಸಂಬಂಧ ಮಾಹಿತಿ ನೀಡಲು ಮಲೆಮಹದೇಶ್ವರ ಬೆಟ್ಟದ ಪೊಲೀಸ್ ಆರಕ್ಷಕ ನಿರೀಕ್ಷಕರು ಮನವಿ ಮಾಡಿದ್ದಾರೆ.
ಸುಮಾರು 60 ರಿಂದ 65ರ ವಯಸ್ಸಿನ ಅಪರಿಚಿತ ಪುರುಷ ಶವ ಮಲೆಮಹದೇಶ್ವರಸ್ವಾಮಿ ಕ್ಷೇತ್ರದಲ್ಲಿರುವ ಮುಡಿ ಟಿಕೆಟ್ ಕೊಡುವ ಕೊಠಡಿ ಪಕ್ಕದ ಅಂಗಡಿ ಮಳಿಗೆ ಡಾರ್ಮಿಟರಿಯಲ್ಲಿ ಪತ್ತೆಯಾಗಿದೆ. 7 ಸೆಂ.ಮೀ. ಉದ್ದವಿದ್ದು ಕಪ್ಪು ಬಿಳಿ ಮಿಶ್ರಿತ ತಲೆಕೂದಲು, ಗೋದಿ ಮೈಬಣ್ಣ, ಕೋಲು ಮುಖ, ತೆಳ್ಳನೆಯ ಶರೀರವಿದ್ದು ಮೃತನ ಬಲಕೈಯಲ್ಲಿ ಒಂದು ಸಣ್ಣ ಬಿಳಿ ಮಚ್ಚೆ ಇರುತ್ತದೆ. ಬಿಳಿ ಬಣ್ಣದ ಅರ್ಧ ತೋಳಿನ ಶರ್ಟ್ ಧರಿಸಲಾಗಿದೆ. ಸದರಿ ಚಹರೆಯುಳ್ಳವರ ಬಗ್ಗೆ ವಾರಸುದಾರರು, ಸಂಬಂಧಿಕರು ಅಥವಾ ಮಾಹಿತಿ ಹೊಂದಿದ್ದರೆ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ದೂ.ಸಂ. 08226-272141, ಮೊಬೈಲ್ 9480804658 ಅಥವ ಕಂಟ್ರೋಲ್ ರೂಂ 08226-222398ಗೆ ತಿಳಿಸುವಂತೆ ಪೊಲೀಸ್ ಆರಕ್ಷಕ ನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಸಬ್ ಇನ್ಸ್‍ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿ ಅರ್ಜಿ ಶುಲ್ಕ ವಾಪಸ್

ಚಾಮರಾಜನಗರ, ಮಾ. 20:- ಪೊಲೀಸ್ ಇಲಾಖೆಯಲ್ಲಿ 2015ನೇ ಸಾಲಿನಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದ್ದು 2016ರಲ್ಲಿ ನೇಮಕಾತಿ ಅಧಿಸೂಚನೆಯನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಹಿಂತಿರುಗಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 1480 ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಹಿಂತಿರುಗಿಸಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ನಗರದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಸೂಕ್ತ ದಾಖಲಾತಿಗಳ ನಕಲು ಪ್ರತಿಗಳನ್ನು ಹಾಜರುಪಡಿಸಿ ಅರ್ಜಿ ಶುಲ್ಕ ಪಡೆದುಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ತಿಳಿಸಿದ್ದಾರೆ.


No comments:

Post a Comment

ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು