Saturday, 4 March 2017

03-03-2017 ಬರ ಪರಿಹಾರ ಕಾಮಗಾರಿ ಸಮರ್ಪಕ ನಿರ್ವಹಣೆಗೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ

ಬರ ಪರಿಹಾರ ಕಾಮಗಾರಿ ಸಮರ್ಪಕ ನಿರ್ವಹಣೆಗೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಚಾಮರಾಜನಗರ ಮಾ 3 - ಬರಗಾಲ ಪರಿಸ್ಥಿತಿ ಎದುರಿಸುತ್ತಿರುವ ಜಿಲ್ಲೆಯಲ್ಲಿ ಕುಡಿಯುವ ನೀರು, ಮೇವು ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸುವ ಹೊಣೆಗಾರಿಕೆ ಇದೆ. ಹೀಗಾಗಿ ಬರಪರಿಹಾರ ಕಾಮಗಾರಿಯನ್ನು ಯಾವುದೇ ಲೋಪವಿಲ್ಲದಂತೆ ನಿರ್ವಹಿಸಬೇಕೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಬರಪರಿಹಾರ, ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಭಾವ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕಿದೆ. ಅವಶ್ಯವಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ನೀರು ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಆದ್ಯತೆ ಮೇರೆಗೆ ನೀರು ಒದಗಿಸುವ ಕೆಲಸವನ್ನು ತೆಗೆದುಕೊಳ್ಳಬೇಕು. ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವವರಿಗೆ ಹಣ ಪಾವತಿಸಲು ವಿಳಂಬ ಮಾಡಬಾರದು. ತಹಸೀಲ್ದಾರ್, ಇತರೆ ಸಂಬಂಧಪಟ್ಟ ಅಧಿಕಾರಿಗಳು ಸಕಾಲದಲ್ಲಿ ಬಿಲ್ ಪಾವತಿಸಲು ಕ್ರಮ ತೆಗೆದುಕೊಳ್ಳಬೇಕು ಎಂದರು. ಇದೇವೇಳೆ ಮಾತನಾಡಿದ ಶಾಸಕರಾದ ನರೇಂದ್ರ ಅವರು ಮಹದೇಶ್ವರ ಬೆಟ್ಟದ ನಾಗಮಲೆ, ಮೆಂದಾರೆ ಭಾಗದಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆ ಕಾಣಿಸಿಕೊಂಡು ಜನರು ಪರಿತಪಿಸುತ್ತಿದ್ದಾರೆ. ತುರ್ತಾಗಿ ಕಾಮಗಾರಿ ಕೈಗೊಂಡು ಜನರ ಬವಣೆ ಪರಿಹರಿಸಬೇಕಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವರು ಕೂಡಲೇ ಮಹದೇಶ್ವರ ಬೆಟ್ಟದ ಭಾಗದಲ್ಲಿ ಅತ್ಯಂತ ಶೀಘ್ರವಾಗಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ನಿರ್ದೇಶನ ನೀಡಿದರು. ಗ್ರಾಮಗಳಿಗೆ ಸಾಗುವ ಮಾರ್ಗವನ್ನು ಸಿದ್ಧಪಡಿಸುವಂತೆ ಪಂಚಾಯತ್‍ರಾಜ್ ಎಂಜಿನಿಯರಿಂಗ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಮೇವು ಪರಿಸ್ಥಿತಿಯನ್ನು ಪರಾಮರ್ಶಿಸಿದ ಸಚಿವರು ಪ್ರಸ್ತುತ ಇರುವ ಗೋಶಾಲೆ, ಮೇವುನಿಧಿ ಬ್ಯಾಂಕುಗಳಲ್ಲಿ ಜಾನುವಾರುಗಳಿಗೆ ಸಕಾಲಕ್ಕೆ ಮೇವು ಪೂರೈಸಬೇಕು. ಮೇವು ಒದಗಿಸುವ ಸಂಬಂಧ ದೂರುಗಳು ಬಾರದಂತೆ ಸಮರ್ಪಕ ನಿರ್ವಹಣೆಗೆ ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು. ವಿವಿಧೆಡೆ ಗೋಶಾಲೆ ತೆರೆಯಲು ಉದ್ದೇಶಿಸಿರುವ ಸ್ಥಳಗಳಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಮೇವು ದಾಸ್ತಾನು ಮಾಡಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ಯಾವುದೇ ಸಬೂಬು ಹೇಳದೆ ಸಮನ್ವಯದಿಂದ ಅತೀ ಶೀಘ್ರವಾಗಿ ಗೋಶಾಲೆ ಆರಂಭಿಸಲು ಅಗತ್ಯವಿರುವ ಎಲ್ಲ ಸಿದ್ಧತೆಯನ್ನು ಪೂರ್ಣಗೊಳಿಸಬೇಕು ಎಂದು ಉಸ್ತುವಾರಿ ಸಚಿವರು ತಾಕೀತು ಮಾಡಿದರು. ಇದೇವೇಳೆ ನಗರೋತ್ಥಾನ ಯೋಜನೆಯಡಿ ನಿಗದಿಪಡಿಸಿರುವ ಅನುದಾನದಡಿ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾಮಗಾರಿ ಹಾಗೂ ನಗರ, ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ ಕುರಿತು ಅಧಿಕಾರಿಗಳೊಂದಿಗೆ ಸಚಿವರು ಚರ್ಚಿಸಿದರು. ಶಾಸಕರಾದ ಎಸ್.ಜಯಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ಹರೀಶ್ ಕುಮಾರ್, ಜಿಲ್ಲಾಮಟ್ಟದ ಅಧಿಕಾರಿಗಳು, ಇತರೆ ಜನಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು