ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ
ಚಾಮರಾಜನಗರ, ನವೆಂಬರ್ 29 - ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರು ಶುಕ್ರವಾರ (ನ.28) ನಗರದಲ್ಲಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ವಿಚಾರಣೆಗೆ ಬಾಕಿ ಇದ್ದ 65 ದೂರು ಅರ್ಜಿಗಳ ಪೈಕಿ 47 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಿದರು.
ನಗರದ ಜಿಲ್ಲಾ ಕೆ.ಡಿ.ಪಿ. ಸಭಾಂಗಣದಲ್ಲಿ ನವೆಂಬರ್ 28ರಂದು ಬೆಳಿಗ್ಗೆ 9.30 ರಿಂದ ರಾತ್ರಿ 8 ಗಂಟೆಯವರೆಗೆ ವಿಚಾರಣೆಗೆ ಬಾಕಿಯಿದ್ದ 65 ದೂರು ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡು 47 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಗೊಳಿಸಿದರು. 4 ಮಂದಿ ಅರ್ಜಿದಾರರು ಗೈರು ಹಾಜರಾಗಿದ್ದು, 14 ಅರ್ಜಿಗಳನ್ನು ವಿವಿಧ ಕಾರಣಗಳಿಂದಾಗಿ ಮುಂದಿನ ವಿಚಾರಣೆಗೆ ಕಾಯ್ದಿರಿಸಿದಿರು. 5 ಸ್ವಯಂ ಪ್ರೇರಿತ ದೂರುಗಳನ್ನು ದಾಖಲಿಸಲು ಉಪಲೋಕಾಯುಕ್ತರು ನಿರ್ದೇಶಿಸಿದರು.
ಸಾರ್ವಜನಿಕ ದೂರುಗಳ ನಿವಾರಣೆಗೆ ಕಾನೂನಾತ್ಮಕ ಪರಿಹಾರಗಳನ್ನು ಒದಗಿಸುವ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಇತ್ಯರ್ಥಕ್ಕೆ ಕಾಲಮಿತಿಯನ್ನು ನಿಗದಿಪಡಿಸಿದರು.
ಉಪಲೋಕಾಯುಕ್ತರ ವಿಚಾರಣೆ ಹಾಗೂ ಭೇಟಿ ಸಮಯದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಉಪಲೋಕಾಯುಕ್ತರು ನವೆಂಬರ್ 27 ಮತ್ತು 28ರಂದು ಎರಡು ದಿನಗಳ ಕಾಲ ಚಾಮರಾಜನಗರ ಜಿಲ್ಲೆಯ ಸಾರ್ವಜನಿಕ ಕುಂದು ಕೊರತೆಗಳ ನಿವಾರಣೆಯ ಸಲುವಾಗಿ ಭೇಟಿ ನೀಡಿದ್ದರು. ಭೇಟಿ ಕಾಲದಲ್ಲಿ ವಿವಿಧ ಹಾಸ್ಟೆಲ್ ಗಳು, ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿದ್ದಾರೆ ಎಂದು ಚಾಮರಾಜನಗರ ಜಿಲ್ಲಾ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ಜಿ.ಎಸ್. ಗಜೇಂದ್ರ ಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:
Post a Comment