Friday, 31 March 2017

31-03-2017 ಏ. 1ರಂದು ಪಲ್ಸ್ ಪೋಲಿಯೋ ಜಾಥಾ ಏ. 2ರಂದು ಪಲ್ಸ್ ಪೋಲಿಯೊ : ಒಟ್ಟು 80629 ಮಕ್ಕಳಿಗೆ ಲಸಿಕೆ ನೀಡುವ ಗುರಿ ,

             


  ಏ. 1ರಂದು ಪಲ್ಸ್ ಪೋಲಿಯೋ ಜಾಥಾ

ಚಾಮರಾಜನಗರ, ಮಾ. 30 :- ಪಲ್ಸ್ ಪೋಲಿಯೋ ಹನಿ ನೀಡುವ ಕಾರ್ಯಕ್ರಮದ ಮಹತ್ವವನ್ನು ತಿಳಿಸಿಕೊಡುವ ಸಲುವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಏಪ್ರಿಲ್ 1ರಂದು ಜಾಗೃತಿ ಜಾಥಾ ಹಮ್ಮಿಕೊಂಡಿದೆ.
ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಏಪ್ರಿಲ್ 1ರಂದು ಬೆಳಿಗ್ಗೆ 10 ಗಂಟೆಗೆ ಜಾಥಾಗೆ ಚಾಲನೆ ನೀಡಲಾಗುತ್ತದೆ. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿ ಜಿಲ್ಲಾಡಳಿತ ಭವನದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಸಾದ್  ತಿಳಿಸಿದ್ದಾರೆ.

ಏ. 2ರಂದು ಪಲ್ಸ್ ಪೋಲಿಯೊ : ಒಟ್ಟು 80629 ಮಕ್ಕಳಿಗೆ ಲಸಿಕೆ ನೀಡುವ ಗುರಿ 

                      ವರದಿ: ರಾಮಸಮುದ್ರ  ಎಸ್.ವೀರಭದ್ರಸ್ವಾಮಿ


ಚಾಮರಾಜನಗರ, ಮಾ. ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆಗೆ ಕಾರಣವಾಗುವ ಪೋಲಿಯೊ ರೋಗ ಮುಕ್ತಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಪಲ್ಸ್ ಪೋಲಿಯೊ ಅಭಿಯಾನಕ್ಕೆ ಜಿಲ್ಲೆಯಲ್ಲಿ ವ್ಯಾಪಕ ಸಿದ್ದತೆ ಕೈಗೊಳ್ಳಲಾಗಿದೆ.
ಆಗ ತಾನೇ ಹುಟ್ಟಿದ ಮಗುವಿನಿಂದ 5 ವರ್ಷದ ವರೆಗಿನ ಮಕ್ಕಳಿಗೆ ಪೋಲಿಯೊ ಹನಿ ನೀಡಲಾಗುತ್ತದೆ. 
ಜಿಲ್ಲೆಯಲ್ಲಿ ಏಪ್ರಿಲ್ 2ರಂದು ಮೊದಲ ಸುತ್ತಿನ  ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಲಿದ್ದು ಏಪ್ರಿಲ್ 30ರಂದು 2ನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯಲ್ಲಿ ಅಂದಾಜು ಒಟ್ಟು 80629 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
ಚಾಮರಾಜನಗರ ತಾಲ್ಲೂಕಿನಲ್ಲಿ 26648, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 17629, ಕೊಳ್ಳೇಗಾಲ ತಾಲ್ಲೂಕಿನಲ್ಲಿ 30293 ಹಾಗೂ ಯಳಂದೂರು ತಾಲ್ಲೂಕಿನಲ್ಲಿ 6059 ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 621 ಬೂತ್‍ಗಳನ್ನು ಲಸಿಕೆ ನೀಡಲು ತೆರೆಯಲಾಗುತ್ತಿದೆ. ನಗರ ಪ್ರದೇಶಗಳಲ್ಲಿ 92 ಗ್ರಾಮೀಣ ಪ್ರದೇಶಗಳಲ್ಲಿ 529 ಬೂತ್‍ಗಳು ಕಾರ್ಯನಿರ್ವಹಿಸಲಿವೆ. ಈ ಪೈಕಿ ಚಾಮರಾಜನಗರ ತಾಲ್ಲೂಕಿನಲ್ಲಿ 193, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 158, ಕೊಳ್ಳೇಗಾಲ ತಾಲ್ಲೂಕಿನಲ್ಲಿ 223 ಹಾಗೂ ಯಳಂದೂರು ತಾಲ್ಲೂಕಿನಲ್ಲಿ 47 ಲಸಿಕಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಪಲ್ಸ್ ಪೋಲಿಯೋ ಬೂತ್‍ಗಳಲ್ಲಿ ಮಕ್ಕಳಿಗೆ ಲಸಿಕೆಯನ್ನು ಹಾಕಲಾಗುತ್ತದೆ.
ಲಸಿಕಾ ಕಾರ್ಯಕ್ರಮದ ಮೇಲುಸ್ತುವಾರಿಗೆ 130 ಮೇಲ್ವಿಚಾರಕರು ಹಾಗೂ 2484 ಲಸಿಕಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. 18 ಟ್ರಾನ್ಸಿಟ್ 10 ಮೊಬೈಲ್ ತಂಡಗಳು ಕಾರ್ಯ ನಿರ್ವಹಿಸಲಿವೆ.
ಏಪ್ರಿಲ್ 2ರಂದು ಹಾಗೂ 30ರಂದು ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ತೆರೆಯಲಾಗುವ ಲಸಿಕಾ ಕೇಂದ್ರಗಳಲ್ಲಿ ಪೋಲಿಯೊ ಹನಿ ನೀಡಲಾಗುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ 2ನೇ ಹಾಗೂ 3ನೇ ದಿನ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡಲಾಗುತ್ತದೆ. ಪಟ್ಟಣ ಪ್ರದೇಶದಲ್ಲಿ 4 ದಿನವೂ ಸಹ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡಲಾಗುತ್ತದೆ.
ಪಟ್ಟಣ ಪ್ರದೇಶದಲ್ಲಿ ಒಟ್ಟು 35942 ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 196413 ಮನೆಗಳು ಸೇರಿದಂತೆ ಒಟ್ಟು 232355 ಮನೆಗಳಿಗೆ ಭೇಟಿ ನೀಡಿ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ.
ಜಿಲ್ಲಾ ವ್ಯಾಪ್ತಿಯ ನರ್ಸಿಂಗ್ ಶಾಲೆಗಳು, ಸ್ವಯಂ ಸೇವಾ ಸಂಸ್ಥೆಗಳು ಅಭಿಯಾನಕ್ಕೆ ಸಹಕಾರ ನೀಡಿವೆ.
ಅಂಗವೈಕಲ್ಯತೆ ತಪ್ಪಿಸುವ ಸಲುವಾಗಿ ಪಲ್ಸ್ ಪೋಲಿಯೊ ಆಂದೋಲನವನ್ನು 1995ರಿಂದಲೂ ರಾಷ್ಟ್ರೀಯ ಕಾರ್ಯಕ್ರಮವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಜಿಲ್ಲೆಯಲ್ಲೂ ಪಲ್ಸ್ ಪೋಲಿಯೋ ಲಸಿಕೆ ಆಂದೋಲನವನ್ನು ಯಶಸ್ವಿಗೊಳಿಸಲು ಜಿಲ್ಲಾ ಜನತೆಯ ಸಹಕಾರ ಅವಶ್ಯವಾಗಿದೆ. ಪೋಷಕರು ಈ ಹಿಂದೆ ಎಷ್ಟೇ ಬಾರಿ ಪಲ್ಸ್ ಪೋಲಿಯೋ ಲಸಿಕೆ ಕೊಡಿಸಿದ್ದರೂ ಸಹ ಏಪ್ರಿಲ್ 2 ಮತ್ತು 30ರಂದು ತಪ್ಪದೇ ಆಗ ತಾನೇ ಹುಟ್ಟಿದ ಮಗುವಿನಿಂದ 5 ವರ್ಷದವರೆಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕಿಸಬೇಕು. ಈ ಮಹತ್ವದ ಕಾರ್ಯಕ್ರಮಕ್ಕೆ ಎಲ್ಲ ಪೋಷಕರು, ಸಮುದಾಯ ಮುಖಂಡರು, ಸ್ವಯಂ ಸೇವಾ ಸಂಸ್ಥೆಯ ಪದಾಧಿಕಾರಿಗಳು ಸೇರಿದÀಂತೆ ಸರ್ವರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಮನವಿ ಮಾಡಿದ್ದಾರೆ.


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು