Wednesday, 22 March 2017

22-03-2017 ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ : ಎಲ್ಲ ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ

ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ : ಎಲ್ಲ ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ


ಚಾಮರಾಜನಗರ, ಮಾ. 22 - ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ನಾಮಪತ್ರಗಳ ಪರಿಶೀಲನೆ ಕಾರ್ಯ ಇಂದು ನಡೆದಿದ್ದು ಎಲ್ಲ 9 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದೆ.
ಗುಂಡ್ಲುಪೇಟೆ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ನಲಿನ್ ಅತುಲ್ ಅವರು ಇಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಸಿದರು.
ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ನಿಯೋಜಿತರಾಗಿರುವ ವೀಕ್ಷಕರಾದ ಇಂದ್ರ ವಿಕ್ರಂಸಿಂಗ್, ಪೊಲೀಸ್ ವೀಕ್ಷಕರಾದ ಜಾಕೋಬ್ ಜಾಬ್, ಸಹಾಯಕ ಚುನಾವಣಾಧಿಕಾರಿ ಕೆ. ಸಿದ್ದು, ಕೆಲ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿ ಪರ ಪ್ರತಿನಿಧಿಗಳ ಸಮ್ಮುಖದಲ್ಲಿ ನಾಮಪತ್ರಗಳ ಪರಿಶೀಲನಾ ಕಾರ್ಯ ಜರುಗಿತು.
ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸಿ.ಎಸ್.ನಿರಂಜನ್ ಕುಮಾರ್, ಭಾರತೀಯ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಎಂ.ಸಿ. ಮೋಹನಕುಮಾರಿ ಅಲಿಯಾಸ್ ಗೀತಾ, ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾಪಕ್ಷದ ಅಭ್ಯರ್ಥಿ ಎಂ. ಹೊನ್ನೂರಯ್ಯ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ[ಎ] ಪಕ್ಷದ ಅಭ್ಯರ್ಥಿ ಎಂ.ಶಿವರಾಜು, ಪಕ್ಷೇತರ ಅಭ್ಯರ್ಥಿಗಳಾದ ಕೆ.ಸೋಮಶೇಖರ, ಬಿ.ಸಿ.ಶೇಖರರಾಜು, ಬಿ.ಮಹದೇವಪ್ರಸಾದ್, ಪಿ.ಎಸ್.ಯಡೂರಪ್ಪ, ಎಂ.ಶಿವರಾಮು ಅವರು ಸಲ್ಲಿಸಿದ್ದ ಎಲ್ಲಾ ನಾಮಪತ್ರಗಳು ಕ್ರಮಬದ್ದವಾಗಿವೆ ಎಂದು ಚುನಾವಣಾಧಿಕಾರಿ ನಲಿನ್ ಅತುಲ್ ಅವರು ತಿಳಿಸಿದ್ದಾರೆ.

ಗುಂಡ್ಲುಪೇಟೆ ಉಪಚುನಾವಣೆ : ಬ್ಯಾಂಕ್ ವ್ಯವಹಾರಗಳ ಮೇಲೆ ನಿಗಾ ಇಡಲು ನೋಡಲ್ ಅಧಿಕಾರಿ ನೇಮಕ
ಚಾಮರಾಜನಗರ, ಮಾ. 22 :- ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಅಕ್ರಮಗಳನ್ನು ತಡೆಯುವ ಸಲುವಾಗಿ ಹಣದ ವಹಿವಾಟಿನ ಮೇಲೆ ನಿಗಾ ವಹಿಸಲು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಸಿದ್ಧರಾಜು ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ. ರಾಮು ಅವರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಎಲ್ಲಾ ಬ್ಯಾಂಕುಗಳಲ್ಲಿ ನಡೆಯುವ 50 ಸಾವಿರಕ್ಕಿಂತ ಹೆಚ್ಚಿನ ವಹಿವಾಟಿನ ಬಗ್ಗೆ ನೋಡಲ್ ಅಧಿಕಾರಿ ನಿಗಾ ವಹಿಸಿ ವರದಿಯನ್ನು ಚುನಾವಣಾ ಅಧಿಕಾರಿಗಳಿಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನೀಡುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ. ರಾಮು ಅವರು ತಿಳಿಸಿದ್ದಾರೆ.


ಮಾ. 24ರಂದು ಮೈಸೂರಿನಲ್ಲಿ ಫಲಸಿರಿ ಕಾರ್ಯಕ್ರಮ
ಚಾಮರಾಜನಗರ, ಮಾ. 22 - ಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯ, ಚಾಮರಾಜನಗರದ ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಮೈಸೂರು ಆಕಾಶವಾಣಿ ಇವರ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 24ರಂದು ಮಧ್ಯಾಹ್ನ 3 ಗಂಟೆಗೆ ಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಫಲ ಸಿರಿ ಬಾನುಲಿ ತೋಟಗಾರಿಕೆ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ತೋಟಗಾರಿಕೆ ಕುರಿತ ತಾಂತ್ರಿಕ ಗೋಷ್ಠಿ ನಡೆಯಲಿದೆ.
ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕರಾದ ಡಾ. ವೈ ಕೆ ಕೋಟಿಕಲ್ ಉದ್ಘಾಟಿಸುವರು.  ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಕೆ.ಎಂ. ಇಂದಿರೇಶ್ ಅಧ್ಯಕ್ಷತೆ ವಹಿಸುವರು. ಲಾಲ್ ಬಾಗ್‍ನ ತೋಟಗಾರಿಕೆ ಅಪರ ನಿರ್ದೇಶಕರಾದ ಡಾ. ಪ್ರಕಾಶ್ ಎಂ. ಸೊಬರದ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.
ಆಕಾಶವಾಣಿ ಸಹಾಯಕ ನಿರ್ದೇಶಕರಾದ ಹೆಚ್. ಶ್ರೀನಿವಾಸ, ನಗರದ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕರಾದ ಡಾ. ದೊರೆಸ್ವಾಮಿ, ತೋಟಗಾರಿಕೆ ಉಪನಿರ್ದೇಶಕರಾದ ಎಚ್.ಎಂ. ನಾಗರಾಜು, ಆಕಾಶವಾಣಿ ಕೃಷಿ ಕಾರ್ಯಕ್ರಮ ನಿರ್ವಾಹಕರಾದ ಎನ್. ಕೇಶವಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕಾರ್ಯಕ್ರಮದ ಅಂಗವಾಗಿ ಫಲಸಿರಿ ಕಾರ್ಯಕ್ರಮದ ಮುಕ್ತ ಪರೀಕ್ಷೆ, ತಾಂತ್ರಿಕ ಅಧಿವೇಶನÀ ಜರುಗಲಿದೆ. ಬದಲಾಗುತ್ತಿರುವ ಹವಾಮಾನದಲ್ಲಿ ಖುಷ್ಕಿ ತೋಟಗಾರಿಕೆಯ ಪ್ರಸ್ತುತತೆ ಎಂಬ ವಿಷಯ ಕುರಿತು ಡಾ. ಎಸ್.ವಿ. ಹಿತ್ತಲಮನಿ ಹಾಗೂ ಪರಿಸರ ಸ್ನೇಹಿ ಕೃಷಿ ಕುರಿತು ಡಾ. ರಾಮಕೃಷ್ಣಪ್ಪ ಮಾತನಾಡುವರು ಎಂದು ಪ್ರಕಟಣೆ ತಿಳಿಸಿದÉ.


ಗುಂಡ್ಲುಪೇಟೆ ಉಪ ಚುನಾವಣೆ:  ಕಲ್ಲು ತೂರಾಟ ಪ್ರಕರಣ – ಕಾಂಗ್ರೇಸ್, ಬಿ.ಜೆ.ಪಿ. ಕಾರ್ಯಕರ್ತರಿಂದ ದೂರು ದಾಖಲು 


ಚಾಮರಾಜನಗರ, ಮಾ. 22:-   ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಬಿ.ಜೆ.ಪಿ. ಹಾಗೂ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಬ್ಬರು ದೂರು ನೀಡಿದ್ದು ಮೊಕದ್ದಮ್ಮೆ ದಾಖಲು ಮಾಡಿಕೊಳ್ಳಲಾಗಿದೆ.
ಗುಂಡ್ಲುಪೇಟೆ ಪಟ್ಟಣದ ಖಾಸಗಿ ವಾಹನ ಚಾಲಕ ಮಧು ಎಂಬುವರು ಭಾರತೀಯ ಜನತಾ ಪಾರ್ಟಿಯ ಉಮೇದುದಾರರಾದ ನಿರಂಜನಕುಮಾರ್ ಅವರು ನಾಮಪತ್ರ ಸಲ್ಲಿಸಲು ತಾಲ್ಲೂಕು ಕಚೇರಿಗೆ ಬಂದಾಗ  ಕಾಂಗ್ರೇಸ್ ಪಕ್ಷದವರು ನನ್ನ ಹಾಗೂ ಪಕ್ಷದ ಕಾರ್ಯಕರ್ತರ ಮೇಲೆ ಕಲ್ಲು ತೂರಿದರು ಎಂದು ದೂರು ನೀಡಿದ್ದು, ಮೊಕದ್ದಮ್ಮೆ ದಾಖಲಿಸಲಾಗಿದೆ.
ಗುಂಡ್ಲುಪೇಟೆ ತಾಲ್ಲೂಕು ಕಸಬಾ ಹೋಬಳಿಯ ನೇನೆಕಟ್ಟೆ ಗ್ರಾಮದ ಪ್ರದೀಪ್ ಕುಮಾರ್ ಎಂಬುವರು ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಉಮೇದುದಾರರಾದ ಎಂ.ಸಿ. ಮೋಹನಕುಮಾರಿ ಅವರು ನಾಮಪತ್ರ ಸಲ್ಲಿಸಲು ತಾಲ್ಲೂಕು ಕಚೇರಿಗೆ ಬಂದಾಗ ಭಾರತೀಯ ಜನತಾ ಪಾರ್ಟಿ ಯವರು ನನ್ನ  ಮತ್ತು ಪಕ್ಷದ ಕಾರ್ಯಕರ್ತರ ಮೇಲೆ ಕಲ್ಲು ತೂರಿದರು ಎಂದು ದೂರು ನೀಡಿದ್ದು, ಮೊಕದ್ದಮ್ಮೆ ದಾಖಲಿಸಲಾಗಿದೆ.
ಅಬಕಾರಿ ಅಧಿಕಾರಿಗಳು ವಿವಿದೆಡೆ ದಾಳಿ ಕಾರ್ಯವನ್ನು ಮುಂದುವರೆಸಿದ್ದು ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ಲಕ್ಷ್ಮಿ ವೆಂಕಟೇಶ್ವರ ವೈನ್ ಶಾಪ್‍ನ ಕೃಷ್ಣಮೂರ್ತಿ ರವರಿಂದ 0.060 ಲೀಟರ್, ಚಾಮರಾಜನಗರ ತಾಲ್ಲೂಕಿನ ಕಿರಗಸೂರು ಗ್ರಾಮದ ಸುಬ್ಬಣ್ಣ  ಅವರಿಂದ 0.630 ಲೀಟರ್, ಕೊಳ್ಳೇಗಾಲ ತಾಲ್ಲೂಕಿನ ಕರಿಯನಪುರ ಗ್ರಾಮದ ಬಿ. ರಾಚಯ್ಯ ರವರಿಂದ 0.900 ಲೀಟರ್,  ಆರ್. ಬಸವರಾಜು ಅವರಿಂದ 0.720 ಲೀಟರ್ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿದ್ದಾರೆ.
ಚಾಮರಾಜನಗರ ಪಟ್ಟಣದ ರಾಮಸಮುದ್ರದ ನಾಗರಾಜು ರವರು ನಿಷೇಧಿಸಿದ ಸ್ಥಳದಲ್ಲಿ ಮದ್ಯ ವ್ಯಾಪಾರ ನಡೆಸುತ್ತಿರುವ ಹಿನ್ನಲೆಯಲ್ಲಿ  ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ನಲಿನ್ ಅತುಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆ.ಒ.ಎಸ್. ಪರೀಕ್ಷೆ: ನಿಷೇದಾಜ್ಞೆ ಜಾರಿ


ಚಾಮರಾಜನಗರ, ಮಾ. 22 -   ಕರ್ನಾಟಕ ಪ್ರೌಢÀಶಿಕ್ಷಣ ಪರೀಕ್ಷಾ ಮಂಡಳಿಯು ಮಾರ್ಚ 30 ರಿಂದ ಏಪ್ರೀಲ್ 10 ವರೆಗೆ ನಗರದಲ್ಲಿ ಕರ್ನಾಟಕ ಮುಕ್ತ ಶಾಲೆ- ಕೆಒಎಸ್ ಪರೀಕ್ಷೆಗಳನ್ನು  ನಡೆಸಲಿರುವ  ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರಗಳ 200 ಮೀಟರ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ವಿಧಿಸಿ ಜಿಲ್ಲಾಧಿಕಾರಿಗಳು ಬಿ. ರಾಮು ರವರು ಆದೇಶ ಹೊರಡಿಸಿದ್ದಾರೆ.

ನಗರದ ಡಯಟ್ ಹಿಂಭಾಗದಲ್ಲಿರುವ ಆದರ್ಶ ವಿದ್ಯಾಲಯ, ಕಸ್ತೂರಿಬಾ ಬಾಲಕೀಯರ ವಸತಿ ವಿದ್ಯಾರ್ಥಿ ನಿಲಯ ಕಟ್ಟಡದಲ್ಲಿ ಪರೀಕ್ಷೆಗಳು ನಡೆಯಲಿವೆ ಪರೀಕ್ಷಾ ಕಾರ್ಯವು ಶಾಂತಿ ಹಾಗೂ ಸುವ್ಯವಸ್ಥೆಯಿಂದ ನಡೆಯಲೆಂಬ ಉದ್ದೇಶದಿಂದ ಪರೀಕ್ಷಾ ಕೇಂದ್ರ 200 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಪರೀಕ್ಷಾ ದಿನಗಳಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯ ವರೆಗೆ ನಿಷೇದಾಜ್ಞೆ ವಿಧಿಸಲಾಗಿದೆ. ಅಲ್ಲದೆ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಮಧ್ಯಾಹ್ನ 1 ರಿಂದ ಸಂಜೆ 5-30 ಗಂಟೆಯವರೆಗೆ ಮುಚ್ಚುವಂತೆ ಆದೇಶಿಸಲಾಗಿದೆ.

ನಿಷೇದಾಜ್ಞೆ ಆದೇಶವು ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಸಿಬ್ಬಂದಿ ಹಾಗೂ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅನ್ವಯವಾಗುವುದಿಲ್ಲ ವೆಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಕೊಳ್ಳೇಗಾಲ - ಹಾಸನೂರು ಘಾಟ್ ರಸ್ತೆ ಕಾಮಗಾರಿ ಹಿನ್ನಲೆ: ಬದಲಿ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಆದೇಶ 


ಚಾಮರಾಜನಗರ, ಮಾ. 22:- ಕೊಳ್ಳೇಗಾಲ-ಹಾಸನೂರು ಘಾಟ್ ರಸ್ತೆಯ ಆಯ್ದ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ಹಿನ್ನಲೆಯಲ್ಲಿ ಮಧುವನಹಳ್ಳಿ ಗ್ರಾಮ ಪರಿಮಿತಿಯಲ್ಲಿ ಮಾರ್ಚ 22 ರಿಂದ ಮೇ 05 ವರೆಗೆ ಭಾರಿ, ಲಘು ವಾಹನಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಬಿ. ರಾಮು ರವರು ಆದೇಶ ಹೊರಿಡಿಸಿದ್ದಾರೆ.

ನಿರ್ಗಮಿಸುವ ವಾಹನಗಳು ಕೊಳ್ಳೇಗಾಲದಿಂದ ಸಿದ್ದಯ್ಯನಪುರ ಅಥವಾ ಲಿಂಗಣಾಪುರ, ಹೊಂಡರಬಾಳು ಮಾರ್ಗ ಮಧುವನಹಳ್ಳಿ ಮುಖ್ಯ ರಸ್ತೆಗೆ ಆಗಮಿಸಿ ನಂತರ ಹನೂರು- ಮಲೆ ಮಹದೇಶ್ವರ ಬೆಟ್ಟ, ಒಡೆಯರಪಾಳ್ಯ, ಬೈಲೂರು ಕಡೆಗೆ ಸಂಚರಿಸಬೇಕಿದೆ.  
ಮಲೆ ಮಹದೇಶ್ವರ ಬೆಟ್ಟ, ಹನೂರು, ತೆಳ್ಳನೂರು, ಕೊತ್ತನೂರು ಹಾಗೂ ಬೈಲೂರು, ಒಡೆಯರಪಾಳ್ಯ, ಲೊಕ್ಕನಹಳ್ಳಿ ಕಡೆಯಿಂದ ಸಂಚರಿಸುವ ವಾಹನಗಳು ದೊಡ್ಡಿಂದುವಾಡಿಯ ಜಿ.ವಿ. ಗೌಡ ವೃತ್ತದಿಂದ ಮತ್ತಿಪುರ ಕ್ರಾಸ್, ಪಾಳ್ಯ- ನರೀಪುರದ ಮುಖಾಂತರ ಕೊಳ್ಳೇಗಾಲದ ಕಡೆಗೆ ಸಂಚರಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.  


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು