ಬಿಳಿಗಿರಿರಂಗನಬೆಟ್ಟ ಬಾರದ ಮಳೆ: ಪ್ರಾಣಿಗಳ ಪರದಾಟ
ಯಳಂದೂರು ಮಾ 28 : ತಾಲ್ಲೂಕಿನ ಪ್ರಸಿದ್ಧ ಹುಲಿರಕ್ಷಿತ ಅರಣ್ಯ ಪ್ರದೇಶವಾಗಿರುವ ಬಿಳಿಗಿರಿರಂಗನಬೆಟ್ಟದಲ್ಲಿ ಈ ವರ್ಷ ಇನ್ನೂ ವರುಣನ ಸಿಂಚನವಾಗದ ಕಾರಣ ಕೆರೆಕಟ್ಟೆಗಳು ಒಣಗಿದ್ದು ಕಾಡು ಪ್ರಾಣಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಜಿಲ್ಲೆಯ ಯಳಂದೂರು, ಚಾಮರಾಜನಗರ, ಹನೂರು, ಕೊಳ್ಳೇಗಾಲ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಬಿಆರ್‍ಟಿ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳಿಗೆ ನೀರುಣಿಸುವ ಪ್ರಮುಖವಾದ ಕೃಷ್ಣಯ್ಯನಕಟ್ಟೆ, ಬೆಲ್ಲವತ್ತ ಹಾಗೂ ಗುಂಡಾಲ್ ಜಲಾಶಯ ಸೇರಿದಂತೆ 63 ಸಣ್ಣ ಕೆರೆಕಟ್ಟೆಗಳು ಇವೆ. ಆದರೆ ಈ ಬಾರಿ ಪೂರ್ವ ಮುಂಗಾರು ಮಳೆ ಬೆಟ್ಟಕ್ಕೆ ಬಿದ್ದೇ ಇಲ್ಲ. ಕಳೆದ ಬಾರಿಯೂ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದರಿಂದ ನೀರಿನ ಪ್ರಮಾಣ ಕಡಿಮೆಯಾಗಿದೆ. ಈಗ ಕೇವಲ 13 ಕೆರೆಗಳಲ್ಲಿ ಮಾತ್ರ ಅಲ್ಪಸ್ವಲ್ಪ ನೀರಿದೆ. ಅದೂ ಕೂಡ ಕೆಸರುಮಯವಾಗಿದೆ. ವಾರದ ಹಿಂದೆ ಕೃಷ್ಣಯ್ಯನ ಕಟ್ಟೆಯಲ್ಲಿ ನೀರು ಕುಡಿಯಲು ಬಂದು ಹೆಣ್ಣಾನೆಯೊಂದು ಕೆಸರಿನಲ್ಲಿ ಸಿಲುಕಿ ಒದ್ದಾಡಿ ಕಾಡು ಸೇರಿರುವ ಘಟನೆಯೂ ನಡೆದಿದೆ.
ಇತ್ತ ಸುತ್ತಮುತ್ತಲ ಜಮೀನುಗಳಿಗೆ ಪ್ರಾಣಿಗಳು ಮೇವು ಹಾಗೂ ನೀರನ್ನರಸಿ ಬರುತ್ತಿರುವ ಘಟನೆಗಳೂ ಅಧಿಕವಾಗುತ್ತಿದೆ. ಇದರಿಂದ ಗಂಗವಾಡಿ, ಯರಗಂಬಳ್ಳಿ, ಗುಂಬಳ್ಳಿ, ವಡಗೆರೆ ಸೇರಿದಂತೆ ಅನೇಕ ಗ್ರಾಮದ ರೈತರು ಸಂಕಟಪಡುವ ಸ್ಥಿತಿ ಇದೆ. ಕೃಷ್ಣಯ್ಯನ ಕಟ್ಟೆ ಬಳಿ ಇರುವ ಕರಿಕಲ್ಲಿನ ಕ್ವಾರಿಯ ಬಳಿ ಚಿರತೆಯೊಂದು ತನ್ನ 2 ಮರಿಗಳೊಂದಿಗೆ ಕಳೆದ 20 ದಿನಗಳಿಂದ ಅಡ್ಡಾಡುತ್ತಿದೆ. ಅಕ್ಕಪಕ್ಕದ ನಾಯಿ, ಕುರಿಗಳ ಮೇಲೂ ಧಾಳಿ ಮಾಡಿದೆ ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಇನ್ನೂ ಕ್ರಮ ಕೈಗೊಂಡಿಲ್ಲ ಎಂಬುದು ಇಲ್ಲಿನ ಪುಟ್ಟಯ್ಯ, ಕೃಷ್ಣಪ್ಪ ಸೇರಿದಂತೆ ಹಲವರ ದೂರು.
ಬೆಟ್ಟದ ಕೆಲ ಕಟ್ಟೆಗಳಿಗೆ ಈಚೆಗೆ ಕೆಲವು ಯುವ ತಂಡದ ಸದಸ್ಯರು ಟ್ಯಾಂಕರ್ ಮೂಲಕ ನೀರನ್ನು ತಂದು ಹಾಕಿದ್ದರೂ ಅದೂ ಕೂಡ ಬತ್ತಿಹೋಗಿದೆ. ಇರುವ ಅಲ್ಪಸ್ವಲ್ಪ ನೀರನ್ನು ಅರಸಿ ಬರುವ ಕಾಡುಪ್ರಾಣಿಗಳು ನೀರು ಸಿಗದಿದ್ದಾಗ ಜಮೀನುಗಳಿಗೆ ಬರುತ್ತಿವೆ. ಈ ವರ್ಷ ಬೆಟ್ಟಕ್ಕೆ ಮಳೆರಾಯನ ಆಗಮನ ಇನ್ನೂ ಆಗಿಲ್ಲ. ಈ ನಿರೀಕ್ಷೆಯಲ್ಲೇ ಅರಣ್ಯ ಇಲಾಖೆ ಇದೆ. ವರುಣ ಇನ್ನಾದರೂ ಕೃಪೆ ತೋರುವನೇ ಕಾದು ನೋಡಬೇಕಿದೆ.
No comments:
Post a Comment