Saturday, 4 March 2017

04-03-2017 ಚಾಮರಾಜನಗರ ಮಾ. 8ರಂದು ಜನಮನ : ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಬಿ. ರಾಮು ಸೂಚನೆ )

ಮಾ. 8ರಂದು ಜನಮನ : ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಬಿ. ರಾಮು ಸೂಚನೆ ಚಾಮರಾಜನಗರ, ಮಾ. 04 :- ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳ ಪ್ರಯೋಜನ ಪಡೆದಿರುವ ಫಲಾನುಭವಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ನಡೆಸಲಿರುವ ಜನಮನ-ಸಂವಾದ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ನಡೆಸುವಂತೆ ಜಿಲ್ಲಾಧಿಕಾರಿ ಬಿ. ರಾಮು ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜನಮನ ಕಾರ್ಯಕ್ರಮ ಆಯೋಜನೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳ ಲಾಭ ದೊರೆಯಬೇಕೆಂಬುದು ಸರ್ಕಾರದ ಸದುದ್ದೇಶವಾಗಿದೆ. ಎಲ್ಲ ವರ್ಗಗಳ ಏಳಿಗೆಗಾಗಿ ಸರ್ಕಾರ ರೂಪುಗೊಳಿಸಿ ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮಗಳು ನಿರೀಕ್ಷಿತ ಮಟ್ಟದಲ್ಲಿ ತಲುಪುತ್ತಿದೆಯೇ? ಕಾರ್ಯಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹೇಗೆ ಮಾಡಬಹುದು? ಮೂಲ ಉದ್ದೇಶ ಈಡೇರಿದೆಯೇ? ಎಂಬ ಬಗ್ಗೆ ಫಲಾನುಭವಿಗಳಿಂದಲೇ ನೇರವಾಗಿ ಕೇಳಿ ತಿಳಿದುಕೊಳ್ಳುವ ಪ್ರಯತ್ನವನ್ನು ಜನಮನ ಕಾರ್ಯಕ್ರಮದ ಮೂಲಕ ಮಾಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮಾರ್ಚ್ 8ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಜನಮನ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳಲ್ಲಿ ಪ್ರಯೋಜನ ಪಡೆದಿರುವ ಜಿಲ್ಲೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಹೀಗಾಗಿ ಅಂದಿನ ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಕರೆತಂದು ಜನಮನವನ್ನು ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು. ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿ ಭಾಗ್ಯ, ವಿದ್ಯಾಸಿರಿ, ಮೈತ್ರಿ, ಮನಸ್ವಿನಿ ವಿವಿಧ ನಿಗಮಗಳಿಂದ ಪಡೆದ ಸಾಲ ಮನ್ನಾದಂಥಹ ಪ್ರಮುಖ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಂವಾದ ನಡೆಸಲಾಗುತ್ತದೆ. ಅತ್ಯಂತ ಪರಿಣಾಮಕಾರಿಯಾಗಿ ಜನಮನ ಕಾರ್ಯಕ್ರಮ ಮೂಡಿಬರಬೇಕು. ಈ ದಿಸೆಯಲ್ಲಿ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು. ಎಲ್ಲಾ ಭಾಗದ ಫಲಾನುಭವಿಗಳಿಗೆ ಕಾರ್ಯಕ್ರಮದ ಮಾಹಿತಿ ನೀಡಬೇಕು. ನಿಗದಿತ ವೇಳೆಗೆ ಫಲಾನುಭವಿಗಳನ್ನು ಕರೆತರುವ ಹೊಣೆಗಾರಿಕೆ ಆಯಾ ಯೋಜನೆಗೆ ಸಂಬಂಧಿಸಿದಂತೆ ಅನುಷ್ಠಾನ ಮಾಡುತ್ತಿರುವ ಜಿಲ್ಲಾ ಅಧಿಕಾರಿಗಳ ಮೇಲಿದೆ. ಯಾವುದೇ ಲೋಪಕ್ಕೆ ಅವಕಾಶವಾಗದ ಹಾಗೆ ಅರ್ಥಪೂರ್ಣವಾಗಿ ಜನಮನ ಸಂವಾದ ನಡೆಯಲು ಬೇಕಿರುವ ಎಲ್ಲ ರೂಪುರೇಷೆಗಳಿಗೆ ಕಾರ್ಯೋನ್ಮುಖರಾಗುವಂತೆ ಜಿಲ್ಲಾಧಿಕಾರಿ ಬಿ. ರಾಮು ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎ. ರಮೇಶ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕರಾದ ಆರ್. ರಾಚಪ್ಪ, ಚಾಮುಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿಜಯ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಬಾಲಸುಂದರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಸರಸ್ವತಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಮಾ. 8ರಂದು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಚಾಮರಾಜನಗರ, ಮಾ. 04 :- ಕರ್ನಾಟಕ ರಾಜ್ಯ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 8ರಂದು ಬೆಳಿಗ್ಗೆ 11.30 ಗಂಟೆಗೆ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ. ಮಾ. 6ರಂದು ಡಾ. ಬಿ.ಆರ್. ಅಂಬೇಡ್ಕರ್ ಭವನದ ಮುಂದುವರೆದ ಕಾಮಗಾರಿಗೆ ಚಾಲನೆ ಚಾಮರಾಜನಗರ, ಮಾ. 04 - ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾಮಟ್ಟದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಮುಂದುವರೆದ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮವು ಮಾರ್ಚ್ 6ರಂದು ಬೆಳಿಗ್ಗೆ 10 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಭವನದ ಆವರಣದಲ್ಲಿ ನಡೆಯಲಿದೆ. ಒಟ್ಟು 189.48 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಿರುವ ಕಾಮಗಾರಿ ಗುದ್ದಲಿ ಪೂಜೆಯನ್ನು ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ನೆರವೇರಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಉಪಾದ್ಯಕ್ಷರಾದ ಎಸ್. ಬಸವರಾಜು, ನಗರಸಭೆ ಅಧ್ಯಕ್ಷರಾದ ರೇಣುಕ, ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲುಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಇನ್ನಿತರ ಎಲ್ಲ ಚುನಾಯಿತ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರೆಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಎಚ್. ಸತೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರತಿ 2ನೇ ಶನಿವಾರ ಮೆಗಾ ಲೋಕ್ ಅದಾಲತ್ : ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಕ್ಕೆ ಅವಕಾಶ ಚಾಮರಾಜನಗರ, ಮಾ. 04:- ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಮಾರ್ಚ್ ತಿಂಗಳಿನಿಂದ ಡಿಸೆಂಬರ್ ತಿಂಗಳಿನವರೆಗೆ ಪ್ರತೀ 2ನೇ ಶನಿವಾರ ಬಾಕಿ ಇರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಲು ಅವಕಾಶ ಕಲ್ಪಿಸುವ ಸಲುವಾಗಿ ಮೆಗಾ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಇತ್ಯರ್ಥವಾಗುವಂತಹ ಪ್ರಕರಣಗಳನ್ನು ಜನತಾ ನ್ಯಾಯಾಲಯದ ಮುಖಾಂತರ ಇತ್ಯರ್ಥಗೊಳಿಸಲು ಉದ್ದೇಶಿಸಲಾಗಿದೆ. ವ್ಯಾಜ್ಯವನ್ನು ಜನತಾ ನ್ಯಾಯಾಲಯದ ಮೂಲಕ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಬಹುದು. ಜನತಾ ನ್ಯಾಯಾಲಯಗಳಲ್ಲಿ ಉಭಯ ಪಕ್ಷಗಾರರು ರಾಜೀ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಲಾಗುವುದು. ಸೌಹಾರ್ಧಯುತವಾಗಿ ಪ್ರಕರಣವು ಇತ್ಯರ್ಥಗೊಳ್ಳುವುದರಿಂದ ಬಾಂಧವ್ಯ ಹಾಗೂ ಉಳಿದ ವಿವಾದ ಇತ್ಯರ್ಥವಾಗಲಿದೆ. ವ್ಯಾಜ್ಯಪೂರ್ವ ಪ್ರಕರಣಗಳನ್ನು ಸಹ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ರಾಜೀ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಮರುಪಾವತಿಸಲಾಗುತ್ತದೆ. ಕಡಿಮೆ ಖರ್ಚು ಶೀಘ್ರ ವಿಲೇವಾರಿಗಾಗಿ ಲೋಕ ಅದಾಲತ್ ವಿಶೇಷ ಅವಕಾಶವಾಗಿದ್ದು ನಾಗರಿಕರು ಇದರ ಪ್ರಯೋಜನ ಪಡೆಯಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್. ಮಳವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮÁ. 8ರಂದು ವಿದ್ಯುತ್ ವ್ಯತ್ಯಯ ಚಾಮರಾಜನಗರ, ಮಾ. 04 :- ತಾಲೂಕಿನ ಚಂದಕವಾಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಮಾರ್ಚ್ 8ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಹಿರಿಕೆರೆ, ಕಾಳಿಕಾಂಬ, ಚಂದಕವಾಡಿ, ರೇಚಂಬಳ್ಳಿ, ಮಲ್ಲೇದೇವನಹಳ್ಳಿ, ನವೋದಯ, ಹೊಂಡರಬಾಳು, ಜ್ಯೋತಿಗೌಡನಪುರ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸುವಂತೆ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ. ಕಾಣೆಯಾದ ವಿದ್ಯಾರ್ಥಿನಿ ಪತ್ತೆಗೆ ಮನವಿ ಚಾಮರಾಜನಗರ, ಮಾ. 04 (:- ಕಾಲೇಜು ವಿದ್ಯಾರ್ಥಿನಿಯೊಬ್ಬರು ಕಾಣೆಯಾಗಿರುವ ಬಗ್ಗೆ ನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವೀಣಾ ಎಂಬಾಕೆ ಕಾಲೇಜಿನ ಪ್ರಿನ್ಸಿಪಾಲರಿಗೆ ನನ್ನ ತಂದೆಗೆ ಹುಷಾರಿಲ್ಲ ಎಂದು ತಿಳಿಸಿ ಊರಿಗೆ ಹೋಗುವುದಾಗಿ ಫೆಬ್ರವರಿ 17ರಂದು ಹೇಳಿ ಹೋಗಿದ್ದು. ಇದುವರೆಗೂ ಊರು ಹಾಗೂ ಕಾಲೇಜಿಗೂ ಬಂದಿರುವುದಿಲ್ಲ ಎಂದು ಈಕೆಯ ತಾಯಿ ಕುಮಾರಿ ಅವರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 23 ವರ್ಷದ ವೀಣಾ ದುಂಡುಮುಖ, ಗೋಧಿ ಮೈಬಣ್ಣ ಹೊಂದಿದ್ದು 5 1/2 ಅಡಿ ಎತ್ತರವಿದ್ದಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಈಕೆಯ ಸುಳಿವು ದೊರೆತಲ್ಲಿ ನಗರದ ಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ. ರಾಷ್ಟ್ರೀಯ ಯುವಪಡೆಗೆ ಸ್ವಯಂ ಸೇವಕರ ನೇಮಕ : ಅರ್ಜಿ ಆಹ್ವಾನ ಚಾಮರಾಜನಗರ, ಮಾ. 04 :- ನೆಹರು ಯುವ ಕೇಂದ್ರವು ರಾಷ್ಟ್ರೀಯ ಯುವಪಡೆಗಾಗಿ ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳುವ ಸಲುವಾಗಿ ಅರ್ಜಿ ಆಹ್ವಾನಿಸಿದೆ. ಅಬ್ಯರ್ಥಿಗಳು ಕನಿಷ್ಟ ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿರಬೇಕು. (ಹೆಚ್ಚಿನ ವಿದ್ಯಾರ್ಹತೆ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ) 18 ರಿಂದ 29ರ ವಯೋಮಿತಿಯೊಳಗಿರಬೇಕು. ಜಿಲ್ಲೆಯ ನಿವಾಸಿಗಳಾಗಿರಬೇಕು. ಆಯ್ಕೆಯಾದವರಿಗೆ ತರಬೇತಿ ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 5 ಸಾವಿರ ರೂ.ಗಳನ್ನು ಸಂಭಾವನೆ ಹಾಗೂ ಪ್ರವಾಸಭತ್ಯೆಗಾಗಿ ನೀಡಲಾಗುತ್ತದೆ. ಆಸಕ್ತರು ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ನೆಹರು ಯುವಕೇಂದ್ರ ಕಚೇರಿ (ಕೊ. ಸಂಖ್ಯೆ 223) ಯಲ್ಲಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮಾರ್ಚ್ 18ರೊಳಗೆ ಸಲ್ಲಿಸಬೇಕು. ಸಂಪೂರ್ಣ ವಿವರವನ್ನು (ದೂ.ಸಂಖ್ಯೆ 08226-222120) ಕಚೇರಿಯಿಂದ ಪಡೆಯುವಂತೆ ನೆಹರು ಯುವಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಸ್. ಸಿದ್ದರಾಮಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು