ಚಾಮರಾಜನಗರ, ಮಾ. 18 - ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಗೆ ಸಂಬಂಧಪಟ್ಟಂತೆ ನಿಯೋಜನೆಗೊಂಡಿರುವ ಅಧಿಕಾರಿಗಳು ನೀತಿಸಂಹಿತೆ ಕಟ್ಟನಿಟ್ಟಾಗಿ ಪಾಲನೆ ಮಾಡುವ ನಿಟ್ಟಿನಲ್ಲಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವಂತೆ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ನಳಿನ್ ಅತುಲ್ ಸೂಚನೆ ನೀಡಿದರು.
ಗುಂಡ್ಲುಪೇಟೆಯ ತಾಲೂಕು ಕಚೇರಿಯಲ್ಲಿ ಇಂದು ಚುನಾವಣೆ ಕರ್ತವ್ಯಕ್ಕೆ ನಿಯೋಜಿತರಾಗಿರುವ ಸೆಕ್ಟರ್ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್, ವೀಡಿಯೋ ಕಣ್ಗಾವಲು ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಸಮಾಲೋಚನೆ ಸಭೆ ನಡೆಸಿದರು.
ಈಗಾಗಲೇ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು ಎಲ್ಲೆಡೆ ನಿಗಾ ವಹಿಸಬೇಕು. ವಾಹನ ತಪಾಸಣೆ ಸೇರಿದಂತೆ ಎಲ್ಲ ಪ್ರದೇಶಗಳಲ್ಲಿ ವ್ಯಾಪಕವಾಗಿ ಪರಿಶೀಲಿಸಿ ಚುನಾವಣಾ ಅಕ್ರಮಕ್ಕೆ ಅವಕಾಶವಾಗದಂತೆ ಎಚ್ಚರಿಕೆ ವಹಿಸಬೇಕು. ನಿಯೋಜಿತವಾಗಿರುವ ಅಧಿಕಾರಿಗಳು ಅವರಿಗೆ ವಹಿಸಿರುವ ಕರ್ತವ್ಯವನ್ನು ಗಂಭೀರವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಚುನಾವಣಾ ಸಂಬಂಧ ಸಭೆ ಸಮಾರಂಭಗಳಿಗೆ ಅನುಮತಿ ಪಡೆಯಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು. ನೀತಿಸಂಹಿತೆ ಉಲ್ಲಂಘನೆ ಅಂಶಗಳು ಇವೆಯೇ ಎಂಬ ಬಗ್ಗೆ ಕೂಲಂಕುಷವಾಗಿ ವೀಕ್ಷಿಸಬೇಕು. ಉಲ್ಲಂಘನೆಯಾಗಿದೆ ಎಂಬ ಬಗ್ಗೆ ಕಂಡುಬಂದಲ್ಲಿ ವರದಿ ಸಲ್ಲಿಸಿ ಪ್ರಕರಣ ದಾಖಲು ಮಾಡಬೇಕು ಎಂದರು.
ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳು ವ್ಯಾಪಕವಾಗಿ ಪರಿಶೀಲಿಸಬೇಕು. ಆಮಿಷ ಒಡ್ಡುವ ಪ್ರಕರಣಗಳು ನಡೆಯುತ್ತಿವೆಯೇ ಎಂಬ ಬಗ್ಗೆ ಖುದ್ದು ವೀಕ್ಷಿಸಬೇಕು. ಅಸಹಜ, ಚುನಾವಣಾ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಬಂದಲ್ಲಿ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಚುನಾವಣೆ ಹಿನ್ನೆಲೆಯಲ್ಲಿ ತೆರೆಯಲಾಗಿರುವ ಚೆಕ್ ಪೋಸ್ಟ್‍ಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ಕಾರ್ಯ ನಡೆಯಬೇಕು. ಎಲ್ಲಾ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಯಾವುದೇ ದೂರು ಲೋಪಕ್ಕೆ ಆಸ್ಪದವಾಗದಂತೆ ಕೆಲಸ ಮಾಡಬೇಕು ಎಂದು ಚುನಾವಣಾ ಅಧಿಕಾರಿ ನಳಿನ್ ಅತುಲ್ ನಿರ್ದೇಶನ ನೀಡಿದರು.
ಸಹಾಯಕ ಚುನಾವಣಾಧಿಕಾರಿ ಸಿದ್ದು, ವಿವಿಧ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಗುಂಡ್ಲುಪೇಟೆ ಉಪಚುನಾವಣೆ : ಐದನೇ ದಿನವೂ ನಾಮಪತ್ರ ಸಲ್ಲಿಕೆ ಇಲ್ಲ
ಚಾಮರಾಜನಗರ, ಮಾ. 18:- ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು ಐದನೇ ದಿನವಾದ ಇಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಮಾ. 19ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಮಾ. 18 :- ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮವು ದೊಡ್ಡರಾಯಪೇಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಮಾರ್ಚ್ 19ರಂದು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 7.30 ರಿಂದ ಸಂಜೆ 4 ಗಂಟೆಯವರೆಗೆ ದೊಡ್ಡರಾಯಪೇಟೆ ವ್ಯಾಪ್ತಿಯ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ವಿದ್ಯುತ್ ಸರಬರಾಜು ನಿಗಮದೊಂದಿಗೆ ಸಹಕರಿಸುವಂತೆÉ ಚೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರ : ಸ್ಪಷ್ಟನೆ
ಚಾಮರಾಜನಗರ, ಮಾ. 18 :- ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಖಾಸಗಿ ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳ ನಗರದ ಒಂದು ಪರೀಕ್ಷಾ ಕೇಂದ್ರವಾದ ಸೇವಾ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕೋರ್ಟ್ ರಸ್ತೆ, ಚಾಮರಾಜನಗರ ಟೌನ್ ಎಂದು ನಮೂದಾಗಿರುವುದನ್ನು ಸೇವಾ ಭಾರತಿ, ಆಂಗ್ಲ ಮಾಧ್ಯಮ ಪ್ರೌಢಶಾಲೆ, ಚೆನ್ನಿಪುರದಮೋಳೆ ರಸ್ತೆ, ಚಾಮರಾಜನಗರ ಟೌನ್ ಎಂದು ತಿಳಿದುಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಬೇಸಿಗೆ ಹಿನ್ನೆಲೆ : ಶುಚಿತ್ವ ಕಾಪಾಡಲು ಹೋಟೆಲ್, ಅಂಗಡಿ ಉದ್ದಿಮೆಗಳಿಗೆ ಸೂಚನೆ
ಚಾಮರಾಜನಗರ, ಮಾ. 18- ಬೇಸಿಗೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ನಗರಸಭಾ ವ್ಯಾಪ್ತಿಯ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್, ಫಾಸ್ಟ್ ಫುಡ್, ಬೇಕರಿ, ಮಾಂಸ, ಹಣ್ಣು, ಸಿಹಿತಿಂಡಿ, ಇನ್ನಿತರ ವಸ್ತುಗಳನ್ನು ಮಾರಾಟ ಮಾಡುವವರು ನೈರ್ಮಲ್ಯ ಕಾಪಾಡುವಂತೆ ನಗರಸಭೆ ಸೂಚಿಸಿದೆ.
ಪಟ್ಟಣದಲ್ಲಿ ತಾಪಮಾನ ಅಧಿಕವಾಗಿದ್ದು ಶುಚಿತ್ವಕ್ಕೆ ಮಹತ್ವ ನೀಡಬೇಕು. ಹೋಟೆಲ್, ಇನ್ನಿತರ ಅಂಗಡಿ ಉದ್ದಿಮೆ, ಬೀದಿಬದಿಯಲ್ಲಿ ವ್ಯಾಪಾರ ಮಾರಾಟ ಮಾಡುವವರು ಕ್ರಿಮಿಕೀಟಗಳು ಕೂರದ ಹಾಗೆ ಜಾಗರೂಕತೆ ವಹಿಸಬೇಕು. ಗ್ರಾಹಕರಿಗೆ ಬಿಸಿನೀರು ಪೂರೈಸಬೇಕು. ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಎಂದು ಸೂಚಿಸಲಾಗಿದೆ.
ಪಟ್ಟಣದಲ್ಲಿ ಪ್ಲಾಸ್ಟಿಕ್ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ. ಸಾಕುಪ್ರಾಣಿಗಳನ್ನು ಮಾಲೀಕರು ಸಾರ್ವಜನಿಕ ರಸ್ತೆಗೆ ಬಿಡದೆ ತಮ್ಮ ಮನೆಯ ಆವರಣದಲ್ಲಿ ಪೋಷಣೆ ಮಾಡಬೇಕು. ಸಾರ್ವಜನಿಕ ರಸ್ತೆಗೆ ಸಾಕುಪ್ರಾಣಿಗಳನ್ನು ಬಿಟ್ಟು ತೊಂದರೆ ನೀಡಿದಲ್ಲಿ ಪ್ರಾಣಿಗಳನ್ನು ಸೆರೆ ಹಿಡಿದು ಪಿಂಜರಾಪೋಲ್‍ಗೆ ಸಾಗಿಸಲಾಗುವುದು ಎಂದು ತಿಳಿಸಲಾಗಿದೆ.
ಒಟ್ಟಾರೆ ನಗರದ ನೈರ್ಮಲ್ಯ ಕಾಪಾಡಲು ಜನತೆ ಸಹಕರಿಸಬೇಕು ಎಂದು ನಗರಸಭೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ರಾಸುಗಳಿಗೆ ಸೋಂಕು ಹಿನ್ನಲೆ: ಮಂಗಲ ಗೋಶಾಲೆ ತಾತ್ಕಲಿಕ ಸ್ಥಗಿತ
ಚಾಮರಾಜನಗರ, ಮಾ. 18 - ರಾಸುಗಳಲ್ಲಿ ಸೋಂಕು ರೋಗದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ತೆರೆಯಲಾಗಿದ್ದ ಗೋಶಾಲೆಯನ್ನು ಮಾರ್ಚ್ 18 ರಿಂದ ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿದೆ ಎಂದು ತಹಶೀಲ್ದಾರ್ ಕೆ. ಪುರಂದರ ತಿಳಿಸಿದ್ದಾರೆ.
ಮಂಗಲ ಗೋಶಾಲೆಯಲ್ಲಿ ಮೊದಲಿಗೆ 3 ರಾಸುಗಳಿಗೆ ಸೊಂಕು ಕಾಣಿಸಿಕೊಂಡಿದ್ದು ಇದುವರೆಗೆ ಒಟ್ಟು 20 ರಾಸುಗಳಿಗೆ ರೋಗಲಕ್ಷಣ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ತಾವು ಮತ್ತು ಪಶುಪಾಲನಾ ಇಲಾಖೆಯ ಉಪನಿರ್ದೇಶಕರ ನೇತೃತ್ವದ ತಜ್ಞ ಪಶುವೈದ್ಯರ ತಂಡ ಪರಿಶೀಲನೆ ನಡೆಸಿದ್ದು ರೋಗಪೀಡಿತ ರಾಸುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
ಮುಂಜಾಗ್ರತ ಕ್ರಮವಾಗಿ ರೋಗ ಹರಡುವುದನ್ನು ತಪ್ಪಿಸಲು ಮಾಚ್ 18 ರಿಂದ ಮಂಗಲ ಗೋಶಾಲೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರೋಗ ಹತೋಟಿಗೆ ಬಂದ ನಂತರ ಗೋಶಾಲೆಯನ್ನು ಪುನಾರಾರಂಭಿಸಲಾಗುವುದು. ಜಾನುವಾರು ಪೋಷಣೆ ಮಾಡುತ್ತಿರುವ ಜನತೆ ಸಹಕರಿಸಬೇಕೆಂದು ತಹಶೀಲ್ದಾರ್ ಕೆ. ಪುರಂದರ ಅವರು ಕೋರಿದ್ದಾರೆ.
No comments:
Post a Comment