ಉಚಿತ ಸಿ.ಟಿ ಸ್ಕ್ಯಾನ್ ಸೇವೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ
ಚಾಮರಾಜನಗರ, ಫೆ. 28 :- ಬಡವರು ಹಾಗೂ ಅವಶ್ಯವಿರುವ ರೋಗಿಗಳಿಗೆ ಉಚಿತವಾಗಿ ಸಿ.ಟಿ. ಸ್ಕ್ಯಾನ್ ಸೇವೆ ಪಡೆಯುವ ಸೌಲಭ್ಯಕ್ಕೆ ಸಣ್ಣ ಕೈಗಾರಿಕೆ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಅವರು ನಗರದ ಜಿಲ್ಲಾಸ್ಪತ್ರೆಯಲ್ಲಿ ಚಾಲನೆ ನೀಡಿದರು.ಬಳಿಕ ಮಾತನಾಡಿದ ಉಸ್ತುವಾರಿ ಸಚಿವರು ಅರೋಗ್ಯ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವಲ್ಲಿ ಹೊಸ ಅವಿಷ್ಕಾರ ಹಾಗೂ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಪುಣೆಯ ಕೃಷ್ಣಾ ಡಯಾಗ್ನೋಸ್ಟಿಕ್ಸ್ ಸಂಸ್ಥೆಯ ಸಹಯೋಗದೊಂದಿಗೆ ಖಾಸಗಿ ಸರ್ಕಾರಿ ಸಹಭಾಗಿತ್ವದ (ಪಿ.ಪಿ.ಪಿ) ಆಧಾರದಲ್ಲಿ ಉಚಿತ ಸೇವೆ ನೀಡಲಾಗುತ್ತದೆ. ಇದರಿಂದ ಜಿಲ್ಲೆಯ ಜನರಿಗೂ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಚಾಮರಾಜನಗರ ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನು ನಿರ್ಮಿಸಲು ಸರ್ಕಾರದ ಆಯವ್ಯಯದಲ್ಲಿ ಘೋಷಣೆ ಮಾಡಿದೆ. ಇದರಿಂದ ಮತ್ತಷ್ಟು ಅನುಕೂಲವಾಗಲಿದೆ. ನಿರ್ಮಾಣ ಕಾಮಗಾರಿ ಪ್ರಕ್ರಿಯೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಸ್ತುತ ಆಸ್ಪತ್ರೆ ಸ್ಪಚ್ಚತೆಯನ್ನು ಕಾಪಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು. ಆಸ್ಪತ್ರೆಯಲ್ಲಿ ರೊಗಿಗಳಿಗೆ ತೊಂದರೆಯಾಗದಂತೆ ಎಲ್ಲ ಸೌಲಭ್ಯವನ್ನು ಕಲ್ಪಿಸಲು ನಿರ್ದೇಶನ ನೀಡಲಾಗುವುದೆಂದು ಸಚಿವರು ತಿಳಿಸಿದರು.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ನಗರಸಭೆ ಅಧ್ಯಕ್ಷರಾದ ಶೋಭ, ಕನಿಷ್ಟ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಉಮೇಶ್, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಜಿಲ್ಲಾ ಸರ್ಜನ್ ಡಾ. ರಘುರಾಂ, ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಆದರ್ಶ ರಾಜ್ಯ ನಿರ್ಮಾಣಕ್ಕೆ ಶಿವಾಜಿ ಪ್ರಮುಖ ಪಾತ್ರ: ಡಾ. ಗೀತಾ ಮಹದೇವ ಪ್ರಸಾದ್
ಚಾಮರಾಜನಗರ, ಫೆ. 28 - ಧೈರ್ಯ, ಉದಾತ್ತ ಗುಣಗಳನ್ನು ಹೊಂದಿದ್ದ ಛತ್ರಪತಿ ಶಿವಾಜಿ ಆದರ್ಶ ರಾಜ್ಯದ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸಕ್ಕರೆ, ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವ ಪ್ರಸಾದ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ನಗರದ ಜೆ. ಹೆಚ್. ಪಟೇಲ್ ಸಭಾಂಗಣದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಮೇಲೆ ವಿದೇಶಿಯರ ನಿರಂತರ ದಾಳಿಯ ಸಮಯದಲ್ಲಿ ಧೈರ್ಯ ಶೌರ್ಯದಿಂದ ಹಿಮ್ಮೆಟ್ಟಿಸಿ ಆದರ್ಶ ರಾಜ್ಯ ಸ್ಥಾಪನೆ ಮಾಡಿ ಉನ್ನತ ಸ್ಥಾನಕ್ಕೇರಿದರು ಎಂದರು.
ತಾಯಿ ಜೀಜಾಬಾಯಿ ಹಾಗೂ ಗುರು ರಾಮದಾಸ ಸ್ವಾಮಿಯವರಿಂದ ಮಾರ್ಗದರ್ಶನ ಪಡೆದಿದ್ದ ಶಿವಾಜಿ ಎಲ್ಲ ಕಲೆಗಳನ್ನು ಚಿಕ್ಕವಯಸ್ಸಿನಲ್ಲೇ ಕಲಿತಿದ್ದರು. ಆಧ್ಯಾತ್ಮಿಕ ಗುಣವನ್ನು ಸಹ ಮೈಗೂಡಿಸಿಕೊಂಡಿದ್ದರು. ಅಪ್ರತಿಮ ವೀರರಾಗಿ ಎಲ್ಲರ ಸಂರಕ್ಷಣೆಗೆ ಹೋರಾಟ ಮಾಡಿದರು ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಶಿವಾಜಿ ಅಪ್ಪಟ ದೇಶಪ್ರೇಮಿ. ಚಿಕ್ಕ ವಯಸ್ಸಿನಲ್ಲಿಯೇ ಕತ್ತಿವರಸೆ, ಕುದುರೆ ಸವಾರಿಯಂತಹ ಕಲೆಯನ್ನು ಕಲಿತು ಕೊಂಡಿದ್ದರು. ಚತುರರೂ ಆಗಿದ್ದ ಶಿವಾಜಿ ನೈಪುಣ್ಯ ಹಾಗೂ ಧಕ್ಷತೆಯಿಂದ ಸೈನ್ಯ ಸಂಘಟಿಸಿ ಯುದ್ಧ ಮಾಡುತ್ತಿದ್ದರು ಎಂದರು.
ಪ್ರಜಾ ರಕ್ಷಕನಾದ ಶಿವಾಜಿಯ ಆದರ್ಶ, ಚಾರಿತ್ಯ, ಮೌಲ್ಯ ಪಾಲನೆ ಗಮನಾರ್ಹವಾದದ್ದು ಎಂದು ಶಾಸಕರು ಅಭಿಪ್ರಾಯಪಟ್ಟರು.
ಉಪನ್ಯಾಸ ನೀಡಿದ ಅಮಚವಾಡಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಸುರೇಶ್ ಎನ್. ಋಗ್ವೇದಿ ಅವರು ಭಾರತದ ಮೇಲೆ ಪರಕೀಯರ ದಾಳಿಯಿಂದಾಗಿ ಸನಾತನ ಧರ್ಮ, ಸಾಂಸ್ಕøತಿಕ ಪರಂಪರೆ ನಾಶವಾಗುವ ಸಂದರ್ಭದಲ್ಲಿ ಶಿವಾಜಿ ಅವರು ಅದರ ರಕ್ಷಣೆಗಾಗಿ ಹೋರಾಡಿದರು ಎಂದರು.
ತಾಯಿ ಜೀಜಾ ಬಾಯಿ ಹಾಗೂ ಗುರು ರಾಮದಾಸರ ಅವರ ಉಪದೇಶದಿಂದ ಮೇವಾಳಿಗಳನ್ನು ಸಂಘಟಿಸಿ ಗೆರಿಲ್ಲಾ ಯುದ್ದ ತಂತ್ರದ ತರಬೇತಿ ಪಡೆದು ಸಮರ್ಥವಾದ ಮರಾಠ ರಾಜ್ಯ ನಿರ್ಮಾಣ ಮಾಡಿ ಅಖಂಡ ಭಾರತದ ಪರಿಕಲ್ಪನೆ ನೀಡಿದರು ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಆರ್. ಉಮೇಶ್, ನಗರಸಭೆ ಅಧ್ಯಕ್ಷರಾದ ಶೋಭ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಸದಸ್ಯರಾದ ನವೀನ್, ಮರಾಠ ಸಮುದಾಯದ ಮುಖಂಡರಾದ ವೆಂಕಟರಾವ್ ಸಾಠೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಹದೇವಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ನಗರದ ಕಲಾವಿದರಾದ ಸಿ.ಎಂ. ನರಸಿಂಹಮೂರ್ತಿ ಹಾಗೂ ತಂಡದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ದಿನಾಂಕ:28-02-2018ರಂದು ಬೆಳಿಗ್ಗೆ 7.00 ಗಂಟೆಗೆ ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಎಂ.ಜೆ.ರೂಪಾ,ಕೆ.ಎ.ಎಸ್.(ಹಿರಿಯ ಶ್ರೇಣಿ) ರವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀ ಸಾಲೂರು ಬೃಹನ್ಮಠದ ಶ್ರೀ ಪಟ್ಟದ ಗುರುಸ್ವಾಮಿಗಳವರ ಉಪಸ್ಥಿತಿಯಲ್ಲಿ ಹುಂಡಿಗಳನ್ನು ತೆರೆಯಲಾಗಿದ್ದು, ಸದರಿ ಹುಂಡಿಗಳ ಪರ್ಕಾವಣೆಯಲ್ಲಿ ಪ್ರಾಧಿಕಾರದ ಸದಸ್ಯರುಗಳಾದ ಶ್ರೀ ಜವರೇಗೌಡ,ದೇವರಾಜು ಹಾಗು ಮಹದೇವಪ್ಪ ಉಪಸ್ಥಿತರಿದ್ದರು ಹಾಗೂ ಪ್ರಾಧಿಕಾರದ ಉಪ ಕಾರ್ಯದರ್ಶಿಗಳಾದ ಶ್ರೀ ಎಂ.ಬಸವರಾಜು ರವರು, ಸಹಾಯಕ ಅಭಿಯಂತರರಾದ ಶ್ರೀ ಆರ್.ಎಸ್.ಮನುವಾಚಾರ್ಯ, ಲೆಕ್ಕಾಧೀಕ್ಷಕರಾದ ಮಹದೇವಸ್ವಾಮಿ, ಕಛೇರಿಯ ಅಧೀಕ್ಷಕರಾದ ಶ್ರೀಬಿ.ಮಾದರಾಜು, ಆರೋಗ್ಯ ನಿರೀಕ್ಷಕರಾದ ಶ್ರೀಕಾಂತ್ ವಿಭೂತಿ ಹಾಗೂ ದೇವಸ್ಥಾನದ ಎಲ್ಲಾ ನೌಕರರುಗಳು, ಚಾಮರಾಜನಗರ ಜಿಲ್ಲಾಧಿಕಾರಿಯವರ ಕಛೇರಿಯ ಪ್ರಥಮ ದರ್ಜೆ ಸಹಾಯಕರಾದ ಶ್ರೀ ಮೋಹನ್ ಕುಮಾರ್ ಮತ್ತು ಮಹದೇಶ್ವರಬೆಟ್ಟ ಆರಕ್ಷಕ ಸಿಬ್ಬಂದಿ ವರ್ಗ, ಎಸ್.ಬಿ.ಎಂ. ವ್ಯವಸ್ಥಾಪಕರಾದ ಸೆಂದಿಲ್ ನಾಥನ್ & ಸಿಬ್ಬಂದಿ ವರ್ಗದವರು ಹಾಜರಿದ್ದರು.ಇವರೆಲ್ಲರ ಸಹಕಾರದಿಂದ ಹುಂಡಿ ಪರ್ಕಾವಣೆ ಮತ್ತು ಎಣಿಕೆಯ ಕಾರ್ಯ ಸುಗಮವಾಗಿ ಜರುಗಿತು ಸದರಿ ದಿವಸದಂದು ಹುಂಡಿ ಪರ್ಕಾವಣೆಯಿಂದ ಒಟ್ಟು ರೂ.1,65,51,485/- ( ಒಂದು ಕೋಟಿ ಅರವತೈದು ಲಕ್ಷದ ಐವತ್ತೊಂದು ಸಾವಿರದ ನಾಲ್ಕು ನೂರು ಎಂಭತೈದು ರೂಪಾಯಿಗಳು ಮಾತ್ರ ) ಬಂದಿರುತ್ತದೆ. ಇದಲ್ಲದೇ ಚಿನ್ನದ ಪದಾರ್ಥಗಳು 0. 105( ಒಂದು ನೂರು ಐದು ಗ್ರಾಂ) ಮತ್ತು ಬೆಳ್ಳಿ ಪದಾರ್ಥಗಳು 1.510(ಒಂದು ಕೆ.ಜಿ ಐನೂರ ಹತ್ತು ಗ್ರಾಂ) ದೊರೆತಿರುತ್ತದೆ.
ಚಾ.ನಗರ ನಗರಸಭೆ : ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ವಿಕಲಚೇತನರಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಫೆ. 28 - ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ಖಾಲಿ ಇರುವ ನಗರ ಪುನರ್ವಸತಿ ಕಾರ್ಯಕರ್ತೆಯರ ಹುದ್ದೆಗೆ ಗೌರವಧನದಲ್ಲಿ ಕಾರ್ಯ ನಿರ್ವಹಿಸಲು ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ನಗರ ಪುನರ್ವಸತಿ ಕಾರ್ಯಕರ್ತರು ಸ್ಥಳೀಯರಾಗಿದ್ದು ಸಂಬಂಧಿಸಿದ ನಗರಸಭಾ ವ್ಯಾಪ್ತಿಗೆ ಒಳಪಟ್ಟಿದ್ದು ವಾಸಿಸುತ್ತಿರಬೇಕು. 18 ರಿಂದ 45ರ ವಯೋಮಾನದವರಾಗಿದ್ದು ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರಬೇಕು. ಅಂಧರಿಗೆ, ಭಾಗಶಃ ಶ್ರವಣದೋಷವುಳ್ಳವರಿಗೆ (ಮೈಲ್ಡ್ ಮತ್ತು ಮಾಡರೇಟ್), ದೈಹಿಕ ಅಂಗವಿಕಲರಿಗೆ ಅವಕಾಶ ಕಲ್ಪಿಸಲಾಗುವುದು. ಅಂಗವಿಕಲತೆಯು ಶೇ. 40ಕಿಂತ ಹೆಚ್ಚು 75ಕ್ಕಿಂತ ಕಡಿಮೆ ಇರಬೇಕು. ನಗರಸಭಾ ವ್ಯಾಪ್ತಿಯಲ್ಲಿ ಸಂಚರಿಸಿ ಮಾಹಿತಿ, ಸೌಲಭ್ಯ ಕಲ್ಪಿಸಲು ಸಮರ್ಥರಾಗಿರಬೇಕು.
ಅರ್ಜಿಯನ್ನು ನಗರಸಭೆ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಮಾರ್ಚ್ 6ರ ಒಳಗೆ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ನಗರಸಭೆಯ ಅಂಗವಿಕಲ ಶಾಖೆಯ ಅಧಿಕಾರಿಗಳಾದ ವೆಂಕಟನಾಯಕ್ ಅವರನ್ನು ಸಂಪರ್ಕಿಸುವಂತೆ ನಗರಸಭೆ ಪೌರಾಯುಕ್ತರಾದ ಫೌಜಿಯಾ ತರುನ್ನಮ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನಗರದಲ್ಲಿ ಜಿಲ್ಲಾಧಿಕಾರಿಯವರಿಂದ ಪ್ರತಿ ಮಂಗಳವಾರ ಜನಸ್ಪಂದನಕಾರ್ಯಕ್ರಮ
ಚಾಮರಾಜನಗರ, ಫೆ. 28 - ಜಿಲ್ಲಾಡಳಿತವು ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ವಾರದ ಪ್ರತಿ ಮಂಗಳವಾರದಂದು (ಸರ್ಕಾರಿ ರಜೆ ಹೊರತುಪಡಿಸಿ) ಜನಸ್ಪಂದನ ಕಾರ್ಯಕ್ರಮವನ್ನು ನಡೆಸಲಿದೆ.
ಜಿಲ್ಲಾಧಿಕಾರಿಯವರು ಪ್ರತಿ ಮಂಗಳವಾರದಂದು ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ ಅಹವಾಲು ಸ್ವೀಕರಿಸುವರು. ನಾಗರಿಕರು ಆಗಮಿಸಿ ತಮ್ಮ ಮನವಿಯನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಮಾ. 1ರಂದು ಬೇಗೂರಿನಲ್ಲಿ ಐಟಿಐ ಹೆಚ್ಚುವರಿ ಕಟ್ಟಡ ಉದ್ಘಾಟನೆ ಸಮಾರಂಭ
ಚಾಮರಾಜನಗರ, ಫೆ. 28 - ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ನೂತನ ಹೆಚ್ಚುವರಿ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಮಾರ್ಚ್ 1ರಂದು ಬೆಳಿಗ್ಗೆ 10 ಗಂಟೆಗೆ ಬೇಗೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ಏರ್ಪಡಿಸಲಾಗಿದೆ.
ಕಟ್ಟಡದ ಉದ್ಘಾಟನೆಯನ್ನು ಲೋಕಸಭಾ ಸಂಸದರಾದ ಆರ್. ಧುವನಾರಾಯಣ ನೆರವೇರಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಮಾಡುವರು. ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ (ಗೀತಾ) ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ ಉಪಸ್ಥಿತರಿರುವರು.
ಶಾಸಕರಾದ ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಆರ್. ಉಮೇಶ್, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ಗುಂಡ್ಲುಪೇಟೆ ತಾಲೂಕು ಪಂಚಾಯತ್ ಅಧ್ಯಕ್ಷರಾದ ಜಗದೀಶ್ ಮೂರ್ತಿ, ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಮ್ಮ ಶ್ರೀಕಂಠಪ್ಪ, ತಾಲೂಕು ಪಂಚಾಯತ್ ಸದಸ್ಯರಾದ ತಾಯಮ್ಮ ಪುಟ್ಟಶೆಟ್ಟಿ, ಬೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ.ಎಸ್. ಚೇತನ್ ಹಾಗೂ ಉಪಾಧ್ಯಕ್ಷರಾದ ಬಿ.ಪಿ. ಚೈತ್ರ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ದೈಹಿಕ ಶ್ರಮ ಕ್ರೀಡೆಗಳತ್ತಲೂ ಒಲವು ತೋರಿ: ಡಾ. ಗೀತಾಮಹದೇವ ಪ್ರಸಾದ್
ಚಾಮರಾಜನಗರ, ಫೆ. 28 - ದೈಹಿಕ ಶ್ರಮದಿಂದ ಆಡುವ ಆಟ, ಕ್ರೀಡೆಗಳು ಸಹ ಮಾನಸಿಕ ಆರೋಗ್ಯ ಕಾಪಾಡಲು ಸಹಕಾರಿಯಾಗಲಿದೆ. ಹೀಗಾಗಿ ಈ ಬಗ್ಗೆ ಹೆಚ್ಚು ಒಲವು ತೋರಬೇಕು ಎಂದು ಸಕ್ಕರೆ, ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವ ಪ್ರಸಾದ್ ಸಲಹೆ ಮಾಡಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಗಣದಲ್ಲಿಂದು ಯುವಜನ ಸಬಲೀಕರಣ ಇಲಾಖೆವತಿಯಿಂದ 2017-18ನೇ ಸಾಲಿನ ಯುವ ಚೈತನ್ಯ ಕಾರ್ಯಕ್ರಮದಡಿ ಯುವ ಸಂಘಗಳಿಗೆ ಕ್ರೀಡಾ ಕಿಟ್ ವಿತರಿಸಿ ಅವರು ಮಾತನಾಡಿದರು.
ಯುವಕರು ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳತ್ತಲೂ ಗಮನ ಹರಿಸಬೇಕು. ಮನೆಯಲ್ಲಿಯೇ ಕುಳಿತು ಇತರೆ ಚಟುವಟಿಕೆಗಳಲ್ಲಿ ತೊಡುಗುವುದನ್ನು ಹೊರತುಪಡಿಸಿ ಆಟದ ಮೈದಾನದಲ್ಲಿ ಶ್ರಮವಹಿಸಿ ಕ್ರೀಡೆಗಳಲ್ಲಿ ತೊಡಗಿದಾಗ ದೈಹಿಕ ಹಾಗೂ ದೃಢಕಾಯರಾಗಬಹುದು ಮತ್ತು ಮಾನಸಿಕ ಆರೋಗ್ಯಕ್ಕೂ ಸಹಕಾರಿಯಾಗುತ್ತದೆ. ಎಂದು ಉಸ್ತುವಾರಿ ಸಚಿವರು ಅಭಿಪ್ರಾಯ ಪಟ್ಟರು.
ರಾಜ್ಯ ಸರ್ಕಾರ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ, ನೆರವು ನೀಡುತ್ತಿದೆ. ಕಳೆದ ಹಿಂದಿನ ಆಯವ್ಯಯದಲ್ಲಿ ಮುಖ್ಯಮಂತ್ರಿಯವರು ಯುವ ಚೈತನ್ಯ ಕಾರ್ಯಕ್ರಮವನ್ನು ಘೋಷಣೆ ಮಾಡಿದರು. ರಾಜ್ಯದ ಒಟ್ಟು 5 ಸಾವಿರ ಯುವ ಸಂಘಗಳಿಗೆ ಪ್ರತಿ ಕ್ರೀಡಾಕಿಟ್‍ನ ಮೌಲ್ಯ 40 ಸಾವಿರ ರೂ. ಗಳಿದ್ದು, ಅದಕ್ಕೂ ಹೆಚ್ಚಿನ ಕ್ರೀಡಾ ಪರಿಕರಗಳನ್ನು ವಿತರಿಸಲು ಯೋಜನೆ ರೂಪಿಸಿ ಅನುಷ್ಠಾನ ಮಾಡಲಾಗಿದೆ. ಅದರಂತೆ ಜಿಲ್ಲೆಯ 121 ಸಂಘಗಳ ಪೈಕಿ 77 ಯುವ ಸಂಘಗಳಿಗೆ ಕ್ರೀಡಾ ಪರಿಕರಗಳನ್ನು ವಿತರಿಸಲಾಗಿದೆ ಎಂದರು.
ಜಿಲ್ಲೆಯ ಉಳಿದಿರುವ 44 ಯುವ ಸಂಘಗಳಿಗೆ ಕ್ರೀಡಾ ಕಿಟ್‍ಗಳನ್ನು ವಿತರಿಸಲಾಗುತ್ತದೆ. ಇದನ್ನು ಬಳಕೆ ಮಾಡಿಕೊಂಡು ಕ್ರೀಡಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ತೊಡಗಬೇಕೆಂದು ಉಸ್ತುವಾರಿ ಸಚಿವರು ತಿಳಿಸಿದರು.
ಕೀಡಾಕಿಟ್‍ನಲ್ಲಿ ವಾಲಿಬಾಲ್, ಫುಟ್ಬಾಲ್, ಕ್ರಿಕೆಟ್ ಸೆಟ್, ಟೆನ್ನಿಸ್ ಸೆಟ್ ಇನ್ನಿತರ ಕ್ರೀಡೆಗಳಿಗೆ ಅವಶ್ಯವಿರುವ ಪರಿಕರಗಳನ್ನು ಒಳಗೊಂಡಿದೆ. ಆಸಕ್ತಿಗೆ ತಕ್ಕಂತೆ ಕ್ರೀಡಾ ಕಿಟ್‍ಗಳನ್ನು ವಿತರಿಸಲಾಗುತ್ತದೆ. ಕ್ರೀಡೆಗಳ ಪ್ರೋತ್ಸಾಹಕ್ಕೆ ಸರ್ಕಾರ ಅನುಷ್ಠಾನ ಮಾಡುತ್ತಿರುವ ಯುವ ಚೈತನ್ಯ ಯೋಜನೆಯು ಹೆಚ್ಚು ಪ್ರಯೋಜನವಾಗಿದೆ ಎಂದು ಗೀತಾ ಮಹದೇವಪ್ರಸಾದ್ ತಿಳಿಸಿದರು.
ಶಾಸಕರಾದ ಸಿ. ಪುಟ್ಟರಂಗ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಗರ ಸಭೆ ಅಧ್ಯಕ್ಷರಾದ ಶೋಭಾ, ಜಿಲ್ಲಾ ಪಂಚಾಯತ್ ಶಿಕ್ಷಣ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ಕನಿಷ್ಠ ವೇತನಾ ಸಲಹಾ ಮಂಡಳಿ ಅಧ್ಯಕ್ಷರಾದ ಉಮೇಶ್, ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ. ಚಲುವಯ್ಯ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಾ. 2ರಂದು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ನಿಗಮ ಉದ್ಘಾಟನೆ
ಚಾಮರಾಜನಗರ, ಫೆ. 28- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ಮಾರ್ಚ್ 2ರಂದು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ಹಾಗೂ ನಿಜ ಶರÀಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಆರಂಭವಾಗಲಿದೆ.ಮಾರ್ಚ್ 2ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಹಾಗೂ ಮಧ್ಯಾಹ್ನ 1 ಗಂಟೆಗೆ ವಸಂತ ನಗರದ ಅರಮನೆ ಮೈದಾನದಲ್ಲಿರುವ ಟೆನ್ನಿಸ್ ಪೆವಿಲಿಯನ್‍ನಲ್ಲಿ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮವನ್ನು ಲೋಕಾರ್ಪಣೆ ಮಾಡುವ ಸಮಾರಂಭ ನಡೆಯಲಿದೆ.
ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರು ನಿಗಮ ಉದ್ಘಾಟಿಸಲಿದ್ದು, ಸಚಿವರು, ಶಾಸಕರು ಹಾಗೂ ಇತರೆ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರೆಂದು ಪ್ರಕಟಣೆ ತಿಳಿಸಿದೆ.
ಪೌರ ಕಾರ್ಮಿಕರ ಜೊತೆಗೂಡಿ ಕಸ ಗೂಡಿಸುವದರ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟಿಸಿದ ವಾಟಾಳ್
ಚಾಮರಾಜನಗರ – ಫೆ,28- ನಗರ ಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕೂಡಲೇ ವೇತನ ಕೊಡಬೇಕು ಅಲ್ಲದೆ ನಗರದ ಸಮಗ್ರ ಅಭಿವೃದ್ದಿಗೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅದ್ಯಕ್ಷ ವಾಟಾಳ್ ನಾಗರಾಜ್ ಅವರು ಜಿಲ್ಲಾಡಳಿತ ಭವನದ ಆವರಣದಲ್ಲಿ ತಾವೇ ಸ್ವತ; ಪೊರಕೆ ಹಿಡಿದು ಪೌರ ಕಾರ್ಮಿಕರ ಜೊತೆಗೂಡಿ ಕಸ ಗೂಡಿಸುವದರ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು.ನಂತರ ಮಾತನಾಡಿದ ವಾಟಾಳ್ ನಾಗರಾಜ್ ನಗರ ಸಭೆಯ ಪೌರ ಕಾರ್ಮಿಕರಿಗೆ ಸುಮಾರು 5 ತಿಂಗಳುಗಳಿಂದ ವೇತನ ಇಲ್ಲದೆ ಅವರ ಕುಟುಂಬ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಇನ್ನು 15 ದಿನಗಳ ಒಳಗಾಗಿ ಅವರಿಗೆ ವೇತನ ನೀಡದಿದ್ದರೆ ಜಿಲ್ಲಾಧಿಕಾರಿಗಳಿಗೆ 20 ಪೊರಕೆಗಳನ್ನು ಬಹುಮಾನವಾಗಿ ನೀಡಲಾಗುವುದೆಂದು ಎಚ್ಚರಿಸಿದರು.
ಜಿಲ್ಲಾಧಿಕಾರಿಗಳೇ, ಜಿಲ್ಲಾ ಪೊಲೀಸ್ ಅಧಿಕಾರಿಗಳೇ ಅಲ್ಲದೆ ಉನ್ನತ ಮಟ್ಟದ ಅಧಿಕಾರಿಗಳೇ ನಿಮಗೆ 5 ತಿಂಗ ಳುಗಳಿಂದ ವೇತನ ಇಲ್ಲದಿದ್ದರೆ ನಿಮ್ಮ ಪರಿಸ್ಥಿತಿ ಏನಾಗುತ್ತಿತ್ತು ಎಂದು ಪ್ರಶ್ನಿಸಿದ ವಾಟಾಳರು ಪ್ರಶ್ನಿಸಿದರು. ರಾಷ್ಟದಲ್ಲಿ ಹಾಗು ರಾಜ್ಯದಲ್ಲಿರುವ ಪೌರ ಕಾರ್ಮಿಕರು ತುಂಬಾ ಕಷ್ಟದಲ್ಲಿದ್ದಾರೆ. ಸರ್ಕಾರ ಅವರಿಗೆ ವಿಶೇಷ ಯೋಜನೆಯನ್ನು ತಯಾರಿಸಿ ಅವರ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮಹದಾಯಿ ಕಳಸ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಉತ್ತರ ಕರ್ನಾಟಕ ಭಾಗದ ರೈತರು 3 ವರ್ಷಗಳಿಂದ ಸತತವಾಗಿ ನಿತ್ಯ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಪೊಲೀಸ್ ಲಾಠಿ ಏಟು, ದೌರ್ಜನ್ಯ ನಡೆದಿದೆ. ಪ್ರಧಾನಿಗಳೇ ನಿವೇಕೆ ಮಧ್ಯ ಪ್ರವೇಶ ಮಾಡಿ ಸಮಸ್ಯೆಯನ್ನು ಬಗೆಹರಿಸಲಿಲ್ಲ ಎಂದು ವಾಟಾಳ್ ಪ್ರಶ್ನಿಸಿದರು.
ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಗೋವಾ, ಕರ್ನಾಟಕ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆ ಕರೆದು ಮದ್ಯಸ್ಥಿಗೆ ವಹಿಸಿ ಸಮಸ್ಯೆಯನ್ನು ಬಗೆ ಹರಿಸಬೇಕು ಇದು ಪ್ರಧಾನಿಗಳ ಕರ್ತವ್ಯವಾಗಿದೆ. ಅದನ್ನು ಬಿಟ್ಟು ರಾಜ್ಯಕ್ಕೆ ರಾಷ್ಟ್ರೀಯ ಬಿಜೆಪಿ ಅದ್ಯಕ್ಷ ಅಮಿತ್ ಷಾ ಬಂದು ಕರ್ನಾಟಕದಲ್ಲಿ ಬಿಜೆಪಿ ಬಂದರೆ ಯೋಜನೆ ಜಾರಿಗೆ ತರುತ್ತೇವೆ ಎಂದು ಹೇಳುತ್ತಿದ್ದಾರೆ. ಅಲ್ಲದೆ ರಾಷ್ಟ್ರೀಯ ಕಾಂಗ್ರೆಸ್ ಅದ್ಯಕ್ಷ ರಾಹುಲ್‍ಗಾಂದಿ, ಜೆಡಿಎಸ್ ಪಕ್ಷದವರು ಸಹ ಇದೇ ವಿಚಾರ ಮಾಡುತ್ತಿರುತ್ತಿದ್ದಾರೆ ಇವರಿಬ್ಬರದು ಚುನಾವಣಾ ಗಿಮಿಕ್ ಎಂದು ಲೇವಡಿ ಮಾಡಿದರು.
ಅಮಿತ್ ಷಾ ಅವರೆ ಗೋವಾದಲ್ಲಿ ನಿಮ್ಮ ಬಿಜೆಪಿ ಸರ್ಕಾರವಿದೆ. ಮಹಾರಾಷ್ಟ್ರ ಹಾಗು ಕೇಂದ್ರದಲ್ಲೂ ನಿಮ್ಮ ಸರ್ಕಾರವಿದ್ದು ನೀವು ಸುಲಭವಾಗಿ ಬಗೆಹರಿಸಬಹುದು ಅದನ್ನು ಬಿಟ್ಟು ಮಹಾದಾಯಿ ಬಗ್ಗೆ ಇಲ್ಲ ಸಲ್ಲದ ಸಬೂಬು ಹೇಳುತ್ತಿದ್ದೀರಿ ಎಂದರು.
ಈ ಸಂದರ್ಭದಲ್ಲಿ ದಳಪತಿ ವೀರತಪ್ಪ, ಕಾರ್ ನಾಗೇಶ್, ಸುರೇಶ್‍ನಾಗ್, ನಾಗರಾಜಮೂರ್ತಿ, ಕೆಂಪಣ್ಣ, ಮಾದಪ್ಪ, ಶಿವು, ನಿಂಗಶೆಟ್ಟಿ, ನಿಂಗರಾಜು, ಚೆನ್ನಮಲ್ಲಪ್ಪ, ವರದರಾಜು, ನಿಂಗಣ್ಣ, ಮಲ್ಲಿಕಾರ್ಜುನ, ಶಿವಲಿಂಗಮೂರ್ತಿ, ವರದನಾಯಕ, ನಾಗೇಂದ್ರಸ್ವಾಮಿ, ನಸುರುಲ್ಲಾ, ಲೋಕೇಶ್, ಲಿಂಗಣ್ಣನಾಯಕ, ಹೇಮಂತ್, ಇತರರು ಹಾಜರಿದ್ದರು.
No comments:
Post a Comment