Wednesday, 7 March 2018

ಮಾ. 11ರಂದು ಪಲ್ಸ್ ಪೋಲಿಯೊ : ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಬಿ. ರಾಮು ಸೂಚನೆ (07-03-2018)

LAST TIME PROGRAM FILE SHOT PHOTO... BY S.VEERABHADRA SWAMY

ಮಾ. 11ರಂದು ಪಲ್ಸ್ ಪೋಲಿಯೊ : ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಬಿ. ರಾಮು ಸೂಚನೆ 

ಚಾಮರಾಜನಗರ, ಮಾ. 07 - ಜಿಲ್ಲೆಯಲ್ಲಿ ಎರಡನೇ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಮಾರ್ಚ್ 11ರಂದು ವ್ಯಾಪಕವಾಗಿ ಹಮ್ಮಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ಅವಶ್ಯಕವಿರುವ ಎಲ್ಲಾ ಸಿದ್ದತೆಯನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಇಂದು ನಡೆದ ಪಲ್ಸ್ ಪೋಲಿಯೋ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಆಗ ತಾನೆ ಹುಟ್ಟಿದ ಮಗುವಿನಿಂದ ಹಿಡಿದು 5 ವರ್ಷದವರೆಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ನೀಡಬೇಕಿದೆ. ಮೊದಲ ಸುತ್ತಿನಲ್ಲಿ ನಡೆದ ಕಾರ್ಯಕ್ರಮದ ಮಾದರಿಯಲ್ಲಿಯೇ 2ನೇ ಸುತ್ತಿಗೂ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಪಲ್ಸ್ ಪೋಲಿಯೋ ಹನಿ ನೀಡುವ ಕೇಂದ್ರಗಳನ್ನು ತೆರೆಯಬೇಕು. ಶಾಲೆ ಅಂಗನವಾಡಿಗಳಲ್ಲಿ ಪಲ್ಸ್ ಪೋಲಿಯೋ ಬೂತುಗಳನ್ನು ತೆರೆಯಲು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸಿದ್ಧತೆ  ಅಂತಿಮಗೊಳಿಸಬೇಕು ಎಂದು  ಜಿಲ್ಲಾಧಿಕಾರಿ ತಿಳಿಸಿದರು.
ಪಲ್ಸ್ ಪೋಲಿಯೋ ಹನಿ ಶೇಖರಣೆಗೆ ನಿರಂತರ ವಿದ್ಯುತ್ ಸರಬರಾಜು ಅವಶ್ಯಕವಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 8 ರಿಂದ 14ರವರೆಗೆ ನಿರಂತರವಾಗಿ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 24 ಗಂಟೆಗಳ ಅವಧಿಯು ವಿದ್ಯುತ್ ಸರಬರಾಜು ಮಾಡಬೇಕು. ವಿದ್ಯುತ್ ಅಡಚಣೆಗೆ ಅವಕಾಶವಾಗಬಾರದು. ಈ ನಿಟ್ಟಿನಲ್ಲಿ ಚೆಸ್ಕಾಂ ಅಧಿಕಾರಿಗಳು  ನಿಗಾ ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಾದ್ಯಂತ ವ್ಯಾಪಕವಾಗಿ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಬೇಕಿರುವ ಹಿನ್ನೆಲೆಯಲ್ಲಿ ಅಗತ್ಯವಿರುವ ವಷ್ಟು ವಾಹನಗಳನ್ನು ಯಾವುದೇ ತೊಂದರೆಯಾಗದಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಆರೋಗ್ಯ ಇಲಾಖೆಗೆ ನಿಯೋಜಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಕಾಡಂಚಿನ ಗ್ರಾಮಗಳು ಹಾಗೂ ದುರ್ಗಮ ಅರಣ್ಯ ಪ್ರದೇಶಗಳು ಹೆಚ್ಚು ಇವೆ. ಹೀಗಾಗಿ ಈ ಭಾಗದ ಜನತೆಗೂ ಪಲ್ಸ್ ಪೋಲಿಯೋ ಹನಿ ನೀಡುವ ಕಾರ್ಯಕ್ರಮ ತಲುಪಲು ಎಲ್ಲಾ ಸಿದ್ಧತೆ ಕೈಗೊಳ್ಳಬೇಕು. ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ವಾಪ್ತಿಯಲ್ಲಿ ಪಲ್ಸ್ ಪೋಲಿಯೋ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡÀಬೇಕು ಎಂದರು.
ಸರ್ಕಾರಿ, ಖಾಸಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಇತರೆ ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲೂ ಬೂತ್‍ಗಳನ್ನು ತೆರೆಯಬೇಕು. ಮುಖ್ಯ ಸ್ಥಳಗಳಲ್ಲಿ ಬಸ್‍ಗಳನ್ನು ನಿಲುಗಡೆ ಮಾಡಿ ಪೋಲಿಯೋ ಹನಿ ಹಾಕಿಸಲು ಪೊಲೀಸರು ಸಹಕರಿಸಬೇಕು. ಸಂಚಾರಿ ವಾಹನಗಳ ಮೂಲಕವೂ ಲಸಿಕೆ ನೀಡಲು ಆರೋಗ್ಯ ಇಲಾಖೆ ಈ ಹಿಂದಿನಂತೆಯೇ ಸಿದ್ಧತೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಆಯಾ ಸ್ಥಳೀಯ ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಂಪೂರ್ಣವಾಗಿ ತೊಡಗಿಕೊಳ್ಳಬೇಕು. ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ನಿಯೋಜಿತರಾಗುವ ಸಿಬ್ಬಂದಿ ಅಧಿಕಾರಿಗಳಿಗೆ ಅವಶ್ಯವಿರುವ ಎಲ್ಲ ಬಗೆಯ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದ ಮೊದಲ ದಿನದಂದೇ ಶೇ. 98ಕ್ಕೂ ಹೆಚ್ಚು ಮಕ್ಕಳಿಗೆ ಹನಿ ನೀಡುವ ಗುರಿ ಹಾಕಿಕೊಳ್ಳಬೇಕು. ನಂತರದ 2 ದಿನಗಳಂದು ಮನೆಮನೆಗೆ ಭೇಟಿ ನೀಡಿ ಯಾವ ಮಗುವಿಗೆ ಪೋಲಿಯೋ ಹನಿ ಹಾಕಲಾಗಿಲ್ಲ ಎಂಬ ಬಗ್ಗೆ ಮಾಹಿತಿ ಪಡೆದು ಪೋಲಿಯೋ ಹನಿ ನೀಡಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಇದೇವೇಳೆ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಪಟ್ಟಣ, ಗ್ರಾಮಾಂತರ ಹಾಗೂ ಕಾಡಂಚಿನ ಪ್ರದೇಶಗಳಲ್ಲಿಯೂ ಯಾವ ಮಗುವೂ ಪೋಲಿಯೋ ಹನಿಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ವೈದ್ಯರು ವ್ಯಾಪಕವಾಗಿ ಸಂಚರಿಸಿ ಎಲ್ಲ ಮಕ್ಕಳಿಗೂ ಪೋಲಿಯೋ ಹನಿ ನೀಡುವ ಪ್ರಕ್ರಿಯೆ ಯಶಸ್ವಿಯಾಗಿ ನಡೆಯುವಂತೆ ಗಮನ ಕೊಡಬೇಕೆಂದು ತಿಳಿಸಿದರು.
ಪಲ್ಸ್ ಪೋಲಿಯೋ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಸ್ವಯಂ ಸೇವಾ ಸಂಸ್ಥೆಗಳು, ನರ್ಸಿಂಗ್ ಶಾಲೆಗಳ ವಿದ್ಯಾರ್ಥಿ ಸಿಬ್ಬಂದಿ ಸಹಕಾರ ಪಡೆಯಬೇಕು. ಸ್ಥಳೀಯ ಸಂಸ್ಥೆಗಳು ಸೇರಿದಂತೆ ಎಲ್ಲರ ನೆರವಿನಿಂದ ನಿಗದಿತ ಗುರಿಯಂತೆ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಫಲಪ್ರದಗೊಳಿಸಲು ಸಜ್ಜಾಗಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಕುಮಾರ್ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್.ಪ್ರಸಾದ್, ಜಿಲ್ಲಾ ಲಸಿಕಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಹದೇವಪ್ಪ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.

ತಾಲೂಕಿನ ಶಾಲೆಗಳಿಗೆ ಆಹಾರಧಾನ್ಯ ವಿತರಣೆ

ಚಾಮರಾಜನಗರ, ಮಾ. 07  ಜಿಲ್ಲಾ ಪಂಚಾಯತ್ ಅಕ್ಷರ ದಾಸೋಹ ಕಾರ್ಯಕ್ರಮದ ಕ್ಸಸ್ಟರ್‍ವಾರು ಆಹಾರ ಧಾನ್ಯಗÀಳನ್ನು ಚಾಮರಾಜನಗರ ತಾಲೂಕಿನ ಶಾಲೆಗಳಿಗೆ ಸರಬರಾಜು ಮಾಡಲಾಗುತ್ತಿದೆ.
ಶಾಲೆಯ ಮುಖ್ಯ ಶಿಕ್ಷಕರು, ಮುಖ್ಯ ಅಡುಗೆಯವರು, ಎಸ್‍ಡಿಎಂಸಿಯವರು ಖುದ್ದು ಹಾಜರಿದ್ದು ಅಳತೆ ಮತ್ತು ನಿರ್ಧಿಷ್ಟಗೆÀೂಳಿಸಿದ ಆಹಾರಧಾನ್ಯಗಳನ್ನು ಪರಿಶೀಲಿಸಿ ಗುಣಮಟ್ಟ ಪರೀಕ್ಷಿಸಿಕೊಂಡು ಆಯಾ ದಿನದಂದು ದಾಸ್ತಾನು ಪಡೆದುಕೊಳ್ಳುವಂತೆ ತಿಳಿಸಿದೆ.
ಮಾರ್ಚ್ 8ರಂದು ಬದನಗುಪ್ಪೆ, ಉರ್ದು ಶಾಲೆಗಳು, 9ರಂದು ಹರವೆ, ಚಂದಕವಾಡಿ, 10ರಂದು ಟೌನ್ ಹಾಗೂ ಅನುದಾನಿತ ಶಾಲೆಗಳು, 11ರಂದು ಅರಕಲವಾಡಿ ಹಾಗೂ ಮಂಗಲ, 13ರಂದು ಸಂತೇಮರಹಳ್ಳಿ, ಉಮ್ಮತ್ತೂರು, 14ರಂದು ಉಡಿಗಾಲ, ಹರದನಹಳ್ಳಿ ಹಾಗೂ 15ರಂದು ಕೋಳಿಪಾಳ್ಯ, ಕೊತ್ತಲವಾಡಿ ಶಾಲೆಗಳಿಗೆ ಆಹಾರಧಾನ್ಯ ವಿತರಿಸಲಾಗುವುದು ಎಂದು ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಎಂ. ಉದಯಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ. 15ರಂದು ನಗರದಲ್ಲಿ ಜಿಲ್ಲಾಮಟ್ಟದ ಸಾಂಸ್ಕøತಿಕ ಕಾರ್ಯಕ್ರಮ

ಚಾಮರಾಜನಗರ, ಮಾ. 07 - ನೆಹರು ಯುವ ಕೇಂದ್ರವು ಸುಗಂಧ, ಶ್ರೀಗಂಧ, ಚಂದನ, ನಂದನ ಹಾಗೂ ಧ್ವನಿ ಮಹಿಳಾ ಅಭಿವೃದ್ಧಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಸಾಂಸ್ಕøತಿಕ ಕಾರ್ಯಕ್ರಮವನ್ನು ಮಾರ್ಚ್ 15ರಂದು ಬೆಳಿಗ್ಗೆ 10 ಗಂಟೆಗೆ ನಗರದ ಡಿ. ದೇವರಾಜ ಅರಸು ಭವನದಲ್ಲಿ ಏರ್ಪಡಿಸಿದೆ.
ಭಾವಗೀತೆ, ಜಾನಪದ ಗೀತೆ, ರಂಗೋಲಿ ಸ್ಪರ್ಧೆ, ಭಕ್ತಿಗೀತೆ, ಅವರೆಕಾಯಿ ಹಾಗೂ ತೊಗರಿಕಾಯಿ ಬಿಡಿಸುವ ಸ್ಪರ್ಧೆ, ಸಂಗೀತ ಕುರ್ಚಿ, ಹೂವು ಕಟ್ಟುವ ಸ್ಪರ್ಧೆ ಹಾಗೂ ಪೌಷ್ಟಿಕ ಆಹಾರ ತಯಾರಿ ಸ್ಪರ್ಧೆಗಳು ವೈಯುಕ್ತಿಕ ಸ್ಪರ್ಧೆಗಳಾಗಿವೆ.
ಗುಂಪು ಸ್ಪರ್ಧೆಗಳಾಗಿ ಸೋಬಾನೆ ಪದ, ದೇವರನಾಮ ಸ್ಪರ್ಧೆ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಗಳು ಇದ್ದು ಯುವಕ ಮತ್ತು ಯುವತಿ, ಮಹಿಳಾ ಮಂಡಳಿಯವರಿಗೆ ಪ್ರತ್ಯೇಕವಾಗಿರುತ್ತದೆ. ಸ್ಪರ್ಧಾಳುಗಳು ಬೆಳಿಗ್ಗೆ 9.30 ಗಂಟೆಯೊಳಗಾಗಿ ಸ್ಥಳದಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು. ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಸುಂದರಮ್ಮ (9739724566), ನಾಗಮ್ಮ (8747876089), ಸೌಭಾಗ್ಯ (9900803548), ಗೀತಾ (9731750857), ಉಮಾಮಹೇಶ್ವರಿ (9739251509), ಸೌಭಾಗ್ಯ (9845537209), ಪ್ರಭಾವತಿ (8095140475), ಗೋವಿಂದರಾಜ್ (7353633360), ಬಿ.ಎಂ. ಮಂಜಪ್ಪ (9590632002), ಎಂ. ರಾಜೇಶ್ (8660640330) ಹಾಗೂ ಕಚೇರಿ ದೂರವಾಣಿ ಸಂಖ್ಯೆ 08226-222120 ಸಂಪರ್ಕಿಸುವಂತೆ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಎಸ್. ಸಿದ್ದರಾಮಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ. 8ರಂದು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ

ಚಾಮರಾಜನಗರ, ಮಾ. 07 - ಜಿಲ್ಲಾ ಕಾನೂಣು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘವು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿ ಮಾರ್ಚ್ 8ರಂದು ಬೆಳಿಗ್ಗೆ 10.15ಕ್ಕೆ ಹಮ್ಮಿಕೊಂಡಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ. ಬಸವರಾಜು ಅವರು ನೆರವೇರಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಲ್.ಜೆ. ಭವಾನಿ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಡಿ.ಕೆ. ಮಧುಸೂದನ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿ. ದೀಪಾ, ಸಾರ್ವಜನಿಕ ಅಭೀಯೋಜಕರಾದ ಲೋಲಾಕ್ಷಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸಂದೇಶ್ ವಿ. ಭಂಡಾರಿ, ಜಿಲ್ಲಾ ಸರ್ಕಾರಿ ವಕೀಲರಾದ ಎಚ್.ಎನ್. ಲೋಕೇಶ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಅರುಣ್ ಕುಮಾರ್ ಭಾಗವಹಿಸುವರು.
ವಕೀಲರಾದ ವಿದ್ಯಾಲತಾ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

ಮೀನು ಮಾರಾಟಗಾರರಿಗೆ ಸಹಾಯಧನ ವಿತರಣೆ

ಚಾಮರಾಜನಗರ, ಮಾ. 07 - ಮೀನು ಮಾರಾಟಗಾರರಿಗೆ ಮೀನು ಮಾರಾಟ ಮಾಡಲು ಬಳಸುವ ಘಟಕ ವೆಚ್ಚಕ್ಕಾಗಿ ನೀಡಲಾಗುವ ಸಹಾಯಧನದ ಚೆಕ್ಕುಗಳನ್ನು ಇಂದು ಫಲಾನುಭವಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಸದಸ್ಯರಾದ ಕೆ.ಪಿ. ಸದಾಶಿವಮೂರ್ತಿ, ಆರ್. ಬಾಲರಾಜು ಇಂದು ವಿತರಿಸಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮೀನು ಮಾರಾಟ ಮಾಡುವ ಫಲಾನುಭವಿಗಳಿಗೆ ತಲಾ 10 ಸಾವಿರ ರೂ. ಸಹಾಯಧನದ ಚೆಕ್ಕುಗಳನ್ನು ಗಣ್ಯರು ವಿತರಿಸಿದರು.
ಇದೇವೇಳೆ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಮೀನು ಮಾರಾಟ ಮಾಡಿ ಸ್ವಂತ ಉದ್ಯೋಗ ಕೈಗೊಳ್ಳಲು ನೀಡಲಾಗುತ್ತಿರುವ ಸಹಾಯಧನ ಮಾರಾಟಗಾರಿಗೆ ಅನುಕೂಲವಾಗಲಿದೆ. ಯೋಜನೆಯಡಿ ನೀಡಲಾಗುವ ನೆರವನ್ನು ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಪಿ. ಸದಾಶಿವಮೂರ್ತಿ ಹಾಗೂ ಆರ್. ಬಾಲರಾಜು ಅವರು ಮಾತನಾಡಿ ಸರ್ಕಾರ ಮೀನುಗಾರಿಕೆ ಉತ್ತೇಜನಕ್ಕಾಗಿ ನೀಡುತ್ತಿರುವ ಸೌಲಭ್ಯಗಳನ್ನು ಫಲಾನುಭವಿಗಳು ಸದುಪಯೋಗ ಮಾಡಿಕೊಳ್ಳಬೇಕು. ಮೀನು ಉದ್ಯಮಕ್ಕೆ ಕೊಡಲಾಗುವ ಅವಕಾಶಗಳನ್ನು ಎಲ್ಲ ಭಾಗದವರು ಪಡೆದುಕೊಳ್ಳಲು ಮುಂದೆ ಬರಬೇಕೆಂದು ಸಲಹೆ ಮಾಡಿದರು.
ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಜಿ.ಎಸ್. ಮಂಜುನಾಥ್ ಮಾತನಾಡಿ 2017-18ನೇ ಸಾಲಿನಲ್ಲಿ ಮೀನು ಮಾರಾಟಗಾರರಿಗಾಗಿ ಒಟ್ಟು 40 ಸಾವಿರ ಘಟಕ ವೆಚ್ಚಕ್ಕೆ ಶೇ. 25ರಷ್ಟು ಅಂದರೆ 10 ಸಾವಿರ ರೂ.ಗಳನ್ನು ಸಹಾಯಧನವಾಗಿ ನೀಡಿ ಉತ್ತೇಜಿಸಲಾಗಿದೆ. ಮೀನುಗಾರಿಕೆ ಇಲಾಖೆಯಿಂದ ಮೀನು ಹಿಡಿಯುವವರು ಹಾಗೂ ಮಾರಾಟಗಾರರಿಗೆ ವಿವಿಧ ಯೋಜನೆಗಳ ಮೂಲಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.
ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಜೆ.ಎಂ. ಪ್ರಶಾಂತ್, ಮೀನುಗಾರಿಕೆ ಕ್ಷೇತ್ರ ಪಾಲಕರಾದ ಶ್ರೀನಿವಾಸ್, ಇತರರು ಹಾಜರಿದ್ದರು.

ಮಾ. 8ರಂದು ನಗರದಲ್ಲಿ ಗಾಂಧಿ ಕುರಿತು ಧ್ವನಿ ಬೆಳಕು ಕಾರ್ಯಕ್ರಮ

ಚಾಮರಾಜನಗರ, ಮಾ. 07- ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಾತ್ಮ ಗಾಂಧೀಜಿ ಅವರ ಜೀವನ ಮತ್ತು ಸಾಧನೆಗಳ ಕುರಿತು ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಮಾರ್ಚ್ 8ರಂದು ಸಂಜೆ 6 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಹಾತ್ಮ ಗಾಂಧೀಜಿ ಅವರು ಬ್ರಿಟಿಷÀರ ವಿರುದ್ಧ ಶಾಂತಿ ಹಾಗೂ ಅಹಿಂಸಾ ಮಾರ್ಗದಲ್ಲಿ ಹೋರಾಟ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಈ ಹಾದಿಯಲ್ಲಿ ಬರುವ ಪ್ರಮುಖ ಘಟನಾವಳಿಗಳು, ಜಲಿಯನ್ ವಾಲಾಬಾಗ್ ದುರಂತ, ದಂಡಿ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ ಮುಂತಾದ ಸಂದರ್ಭಗಳಲ್ಲಿ ಗಾಂಧೀಜಿ ಅವರ ಪ್ರಮುಖ ಹೋರಾಟದ ವಿಷಯಗಳನ್ನು ಒಳಗೊಂಡಂತೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ ಹಾಗೂ ಕಿಯೋನಿಕ್ಸ್ ಸಹಯೋಗದಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದ್ದು, ಹಿರಿಯ ಸಾಹಿತಿಗಳು, ಬರಹಗಾರರು, ಗಾಂಧಿ ವಿಚಾರವಾದಿಗಳು ರೂಪಿಸಿರುವ  ಪರಿಕಲ್ಪನೆಯಲ್ಲಿ ಧ್ವನಿ ಬೆಳಕು ಕಾರ್ಯಕ್ರಮ ಮೂಡಿಬರಲಿದೆ.
ಪ್ರವೇಶ ಉಚಿತವಾಗಿದ್ದು, ಜಿಲ್ಲೆಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧ್ವನಿ ಬೆಳಕು ಕಾರ್ಯಕ್ರಮ ವೀಕ್ಷಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.












No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು