ವಿಧಾನಸಭಾ ಚುನಾವಣೆ- 2018
ಚುನಾವಣಾ ದೂರು ಮನವಿ ಸಲ್ಲಿಕೆಗೆ ಕಂಟ್ರೋಲ್ ರೂಂ
ಚಾಮರಾಜನಗರ, ಮಾ. 28 - ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ 24*7 ಅವಧಿಯಲ್ಲಿ ದೂರು, ಮನವಿ ಸ್ವೀಕರಿಸುವ ಸಲುವಾಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೊಠಡಿ ಸಂಖ್ಯೆ 104ರಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ.
ಸಾರ್ವಜನಿಕರು ಶುಲ್ಕರಹಿತವಾಗಿ ಈ ಕೆಳಕಂಡ ಉಚಿತ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ದೂರು ಮನವಿಗಳನ್ನು ನೀಡಬಹುದು.1800-4250133 ಹಾಗೂ 08226-226007, ವಾಟ್ಸಾಪ್ ಸಂಖ್ಯೆ 9483237191 ಸಂಪರ್ಕಿಸಿಯೂ ದೂರು, ಮನವಿಗಳನ್ನು ನೀಡಬಹುದಾಗಿದೆ. ಈ ಎಲ್ಲಾ ಸಂಖ್ಯೆಗಳಿಗೆ ಶುಲ್ಕರಹಿತವಾಗಿ ಕರೆ ಮಾಡಬಹುದಾಗಿದೆ.
ಕಂಟ್ರೋಲ್ ರೂಂ ನಲ್ಲಿ ಕರ್ತವ್ಯ ನಿರ್ವಹಿಸುವವರ ಅಧಿಕಾರಿ ಸಿಬ್ಬಂದಿ ವಿವರ ಇಂತಿದೆ.
ಡಾ. ಧನಂಜಯ, ಶಿರಸ್ತೇದಾರ್, ಜಿಲ್ಲಾಧಿಕಾರಿಗಳ ಕಚೇರಿ, ಚಾಮರಾಜನಗರ (ಮೊ. 9591694704) ಇವರನ್ನು ಮೇಲ್ವಿಚಾರಣಾ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಿ. ಜಯಶಂಕರ್, ಅಕ್ಷರಸ್ಥ ಸಹಾಯಕರು, ಸಣ್ಣ ನೀರಾವರಿ ಉಪವಿಭಾಗ, ಚಾಮರಾಜನಗರ (ಮೊ. 9902892810), ದಿಲೀಪ್‍ಕುಮಾರ್, ದ್ವಿದಸ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಚಾಮರಾಜನಗರ (ಮೊ. 9743636776) ಇವರನ್ನು ನೇಮಕ ಮಾಡಲಾಗಿದೆ.
ಸಂಜೆ 4 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಮಲ್ಲು, ದ್ವಿದಸ, ಅಲ್ಪಸಂಖ್ಯಾತರ ಇಲಾಖೆ, ಚಾಮರಾಜನಗರ (ಮೊ. 7022054512), ನಿಖಿಲ್, ದ್ವಿದಸ, ಜಿಲ್ಲಾ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಚಾಮರಾಜನಗರ (ಮೊ. 8971877891) ಇವರು ನೇಮಕಗೊಂಡಿದ್ದಾರೆ.
ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 8 ಗಂಟೆಯವರೆಗೆ ಎಂ. ಆನಂದರಾಜು, ದ್ವಿದಸ, ಸರ್ಕಾರಿ ಪದವಿಪೂರ್ವ ಕಾಲೆÉೀಜು, ಚಾಮರಾಜನಗರ (ಮೊ. 7259329485), ಆಯೂಬ್ ಪಾಷ, ದ್ವಿದಸ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಚಾಮರಾಜನಗರ (ಮೊ. 9742450134), ಶಿವಬಸಪ್ಪ, ದ್ವಿದಸ, ಅಬಕಾರಿ ನಿರೀಕ್ಷಕರ ಕಚೇರಿ, ಕೊಳ್ಳೇಗಾಲ (ಮೊ. 9972726782) ಹಾಗೂ ಮಹದೇವಸ್ವಾಮಿ, ದ್ವಿದಸ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಾಮರಾಜನಗರ (ಮೊ. 9845217607) ಇವರುಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏ. 11ರಿಂದ ಸಾಹಸ ಚಾರಣ : ಅರ್ಜಿ ಆಹ್ವಾನ
ಚಾಮರಾಜನಗರ, ಮಾ. 28 - ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ರಾಕ್ ಕ್ಲೈಮಿಂಗ್, ರಿವರ್‍ಕ್ರಾಸ್ ಸಾಹಸ ಚಾರಣ ಕ್ರೀಡೆಯನ್ನು ಏಪ್ರಿಲ್ 11 ರಿಂದ 13ರವರೆಗೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕುಂತಿ ಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ.ಜಿಲ್ಲೆಯ ನೊಂದಾಯಿತ ಸಂಘಗಳ ಯುವಕ ಯುವತಿಯರು, ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು, 15 ರಿಂದ 35ರ ವಯೋಮಿತಿಯ ಜಿಲ್ಲೆಯ ಯುವಜನರು ಭಾಗವಹಿಸಲು ಅವಕಾಶವಿದೆ. ಭಾಗವಹಿಸುವ ಅಭ್ಯರ್ಥಿಗಳು ನಗರದ ಜಿಲ್ಲಾಡಳಿತ ಭವನದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅರ್ಜಿ ಪಡೆದು ಭರ್ತಿ ಮಾಡಿ ಏಪ್ರಿಲ್ 7ರ ಒಳಗೆ ಸಲ್ಲಿಸಬೇಕು. ಭಾಗವಹಿಸುವ ಅಭ್ಯರ್ಥಿಗಳಿಗೆ ದಿನಭತ್ಯೆ ಹಾಗೂ ಪ್ರಯಾಣ ಭತ್ಯೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ದೂರವಾಣಿ 08226-224932, ಮೊಬೈಲ್ 9482718278 ಸಂಪರ್ಕಿಸುವಂತೆ ಇಲಾಖೆ ಸಹಾಯಕ ನಿರ್ದೇಶಕರಾದ ಎಂ. ಚಲುವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ದೇವರ ದಾಸಿಮಯ್ಯನ ವಚನ ಇಂದಿಗೂ ಪ್ರಸ್ತುತ : ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ
ಚಾಮರಾಜನಗರ, ಮಾ. 28 (ಕರ್ನಾಟಕ ವಾರ್ತೆ):- ಜಾತೀಯತೆ ಮತ್ತು ಲಿಂಗ ಅಸಮಾನತೆ ತೊಲಗಿಸುವಂತೆ ಕರೆ ನೀಡಿದ್ದ ದೇವರ ದಾಸಿಮಯ್ಯನ ಶ್ರೇಷ್ಠ ನುಡಿಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಅಭಿಪ್ರಾಯ ಪಟ್ಟರು.ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತ ಇಲಾಖೆ ವತಿಯಿಂದ ಆಯೋಜಿಸಿದ್ದ ದಲಿತ ವಚನಕಾರ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಲಿಂಗ ಸಮಾನತೆ ಬಗ್ಗೆ ಮಾತನಾಡುವ ನಾವು ನಮ್ಮ ಮನೆಯಲ್ಲಿರುವ ಮಹಿಳೆಯರಿಗೆ ಸಮಾನ ಅವಕಾಶ ನೀಡುತ್ತಿದ್ದೇವೆಯೆ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕು. ಮಹಿಳೆಯರನ್ನು ಸಮಾನವಾಗಿ ಕಾಣುವ ಮನೋಭಾವ ಬೆಳೆಸಿಕೊಂಡರೆ ಮಹಿಳೆಯರ ಬದುಕು ಸುಂದರವಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅಭಿಪ್ರಾಯಪಟ್ಟರು.
ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಂಡು ಜಾತಿ ಮುಕ್ತ ಸಮಾಜ ನಿರ್ಮಾಣ ಮಾಡಲು ಪಣ ತೊಡಬೇಕು. ಶ್ರದ್ದೆ ಶ್ರಮದಿಂದ ಮಾತ್ರ ಯಶಸ್ಸು ದೊರೆಯುತ್ತದೆ ಹೀಗಾಗಿ ಪ್ರತಿಯೊಬ್ಬರು ಶ್ರಮವಹಿಸಿ ದುಡಿಯಬೇಕು. ಈ ನಿಟ್ಟಿನಲ್ಲಿ ಶರಣರು ಹೇಳಿರುವ ಕಾಯಕವೇ ಕೈಲಾಸ ಎಂಬುದು ಬಹಳ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಜೆ.ಎಸ್.ಎಸ್ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪುಷ್ಪಲತಾ ಅವರು ಮಾತನಾಡಿ ದಾಸಿಮಯ್ಯನವರು ತಾವು ಬದುಕಿದ್ದ ಆದರ್ಶ ಜೀವನ ವಿಧಾನವನ್ನು ವಚನಗಳ ಮೂಲಕ ಕಟ್ಟಿಕೊಟ್ಟರು. ಇವರು ಮೌಖಿಕವಾಗಿ ಹೇಳಿರುವ 142 ವಚನಗಳು ಮಾತ್ರ ನಮಗೆ ದೊರೆತಿದೆ ಎಂದು ತಿಳಿಸಿದರು.
ಧಾರ್ಮಿಕ, ಸಾಮಾಜಿಕ ಬದಲಾವಣೆಯಲ್ಲಿ ಇವರ ಪಾತ್ರ ಮಹತ್ತರವಾದದ್ದು, ಇವರ ಅಗಮ್ಯ ಶ್ರೇಷ್ಠ ಗಟ್ಟಿತನದ ವಚನಗಳಿಂದ ಬಸವಣ್ಣನವರು ಪ್ರೇರಿತರಾಗಿದ್ದರು ಎಂಬುದನ್ನು ಇತಿಹಾಸ ಹೇಳುತ್ತದೆ ಎಂದರು. ಲಿಂಗ ಅಸಮಾನತೆ ಬಗ್ಗೆ ತಮ್ಮ ವಚನಗಳ ಮೂಲಕ ಮೊದಲ ಬಾರಿಗೆ ಧ್ವನಿ ಎತ್ತಿದವರು ದಾಸಿಮಯ್ಯನವರು ಎಂದರೆ ತಪ್ಪಾಗಲಾರದು ಎಂದರು.
ಮಾನವ ತನ್ನಲ್ಲಿರುವ ದುರಾಸೆಯನ್ನು ಕಡಿತಗೊಳಿಸಿಕೊಂಡು ಮೌಲ್ಯಯುತವಾದುದ್ದನ್ನು ಹೆಚ್ಚಾಗಿ ಅನುಸರಿಸಬೇಕು. ಮಾನವ ಸಂಗ್ರಹ ಜೀವಿಯಾಗಬಾರದು. ತನಗೆ ಅಗತ್ಯವಾದಷ್ಟನ್ನು ಇಟ್ಟುಕೊಂಡು ಉಳಿದವನ್ನು ಅಗತ್ಯವಿರುವವರಿಗೆ ದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ದಾನ ಮಾಡುವ ಮೂಲಕ ನಾವು ಹೆಚ್ಚು ಶ್ರೇಷ್ಠರಾಗುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಮಾತನಾಡುತ್ತ ಸಮಾಜ ಕಟ್ಟುವ ಕೆಲಸ ಮಾಡಿರುವ ಮಹಾನ್ ಆದರ್ಶ ಪುರುಷರು ಹೇಳಿರುವ ನುಡಿಗಳು ಎಲ್ಲಾ ಕಾಲಕ್ಕೂ ಸಲ್ಲುವಂತಹದ್ದು. ಅ ಕಾರಣದಿಂದ ಶ್ರೇಷ್ಠ ನೈಜತೆಯುಳ್ಳ ಮೌಲ್ಯಗಳನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮುನಿರಾಜಪ್ಪ, ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಯಕ್ರಮಕ್ಕೂ ಮೊದಲು ಶ್ರೀಮತಿ ವಿದುಷಿ ಇಂದ್ರಾಣಿ ಅನಂತರಾಮ್ ಅವರಿಂದ ವಚನ ಗಾಯನ ಕಾರ್ಯಕ್ರಮ ನಡೆಯಿತು.
ಮಹಿಳೆಯರು ಸಬಲರಾಗಲು ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು : ಸಿ.ಇ.ಒ
ಚಾಮರಾಜನಗರ, ಮಾ. 28- ಮಹಿಳೆಯರು ತಮಗೆ ಸಿಗುವ ಅವಕಾಶಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಸಬಲರಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅಭಿಪ್ರಾಯಪಟ್ಟರು.ಜಿಲ್ಲಾಡಳಿತ ಮತ್ತು ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆವತಿಯಿಂದ ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕುಟುಂಬದ ಮುನ್ನಡೆಯಲ್ಲಿ ಮಹಿಳೆ ಪಾತ್ರ ಪ್ರಮುಖವಾಗಿದೆ. ತನ್ನ ಮುಂದಿರುವ ಸವಾಲುಗಳನ್ನು ಜಾಣ್ಮೆಯಿಂದ ಎದುರಿಸಿ ಮತ್ತಷ್ಟು ಜವಾಬ್ದಾರಿಯುತವಾಗಿ ಕೆಲಸ ಮಾಡುವುದರ ಜೊತೆಗೆ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿಯಾದರೆ ಸಬಲೀಕರಣರಾಗಬಹುದು ಎಂದರು.
ಮುಂಬರುವ ಚುನಾವಣೆಯಲ್ಲಿ ಪ್ರಜ್ಞಾವಂತರಾಗಿ, ನೈತಿಕವಾಗಿ ಮತ ಚಲಾಯಿಸಬೇಕು. ಸಂವಿಧಾನ ಬದ್ಧವಾಗಿರುವ ನಿಮ್ಮ ಹಕ್ಕು ಮತ್ತು ಸೌಲಭ್ಯಗಳ ಕುರಿತು ಅಗತ್ಯ ಅರಿವು ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮತದಾನ ಕುರಿತ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಜೆ.ಎಸ್.ಎಸ್ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಮಹೇಶ್ವರಿ ಮಾತನಾಡುತ್ತ ಪುರಾತನ ಕಾಲದಿಂದ ಇಂದಿನವರೆಗೂ ಮಹಿಳೆಯರನ್ನು ಧಾರ್ಮಿಕವಾಗಿ, ಸಮಾಜಿಕವಾಗಿ ಮತ್ತು ಸಾಂಸ್ಕøತಿಕ ಕಟ್ಟು ಪಾಡುಗಳಿಂದ ಮಹಿಳೆಯನ್ನು ಒಂದು ಚೌಕಟ್ಟಿನಲ್ಲಿರಿಸುತ್ತಿರುವುದು ನೋವಿನ ಸಂಗತಿಯಾಗಿದೆ. ಆದ್ದರಿಂದ ಮಹಿಳೆಯರು ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಪುರುಷರಿಗೆ ಸರಿಸಮಾನವಾಗಿ ಕಾರ್ಯನಿರ್ವಹಿಸುತ್ತ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾಗುವ ಕಡೆ ಹೆಚ್ಚು ಗಮನಹರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಒಕ್ಕೂಟ ಹಾಗೂ ಸ್ತ್ರೀಶಕ್ತಿ ಸಂಘದವತಿಯಿಂದ ಅಂಗನವಾಡಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ 5 ಮಹಿಳೆಯರಿಗೆ ಮತ್ತು ಉತ್ತಮ ಸೇವೆ ಸಲ್ಲಿಸಿದ್ದ 5 ಸ್ತ್ರೀಶಕ್ತಿ ಸಂಘಗಳಿಗೆ ಹಾಗೂ ಪ್ರಾಥಮಿಕ ಮತ್ತು ಪ್ರೌಡಶಾಲಾ ಹಂತದಲ್ಲಿ ಉತ್ತಮ ಅಂಕ ಪಡೆದ 10 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾದ ಬಿ.ಸೋಮಶೇಖರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಟಿ.ಎಂ. ಜಯಶೀಲಾ, ಜಿಲ್ಲಾ ಮಹಿಳಾ ನೀರಿಕ್ಷಕಿ ಜಗದಾಂಬ, ಜಿಲ್ಲಾ ವಿಕಲಚೇತನರ ಇಲಾಖೆ ಅಧಿಕಾರಿ ಮೂಲಿಮನಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿಧಾನಸಭಾ ಚುನಾವಣೆ- 2018
ಬಂದೂಕುದಾರರಿಗೆ ಸೂಚನೆ
ಚಾಮರಾಜನಗರ, ಮಾ. 27 - ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರಯುಕ್ತ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಪರವಾನಗಿ ಹೊಂದಿರುವ ಬಂದೂಕು(ಆಯುಧ)ಗಳನ್ನು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸಂಬಂಧಿಸಿದ ಪೊಲೀಸ್ ಠಾಣೆಯ ಸುಪರ್ದಿಗೆ ಡಿಪಾಸಿಟ್ ಮಾಡಲು ಆದೇಶ ಹೊರಡಿಸಲಾಗಿದೆ.
ಈ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೂ ಜಾರಿಯಲ್ಲಿರುತ್ತದೆ. ಆದೇಶ ಉಲ್ಲಂಘಿಸಿದಲ್ಲಿ ಪ್ರಜಾಪ್ರತಿನಿಧಿ ಕಾಯಿದೆ 1951ರ ಪ್ರಕಾರ ಹಾಗೂ ಆಮ್ರ್ಸ್ ಆಕ್ಟ್ 1959ರ ರೀತ್ಯ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿಯವರು ಆದೇಶದಲ್ಲಿ ತಿಳಿಸಿದ್ದಾರೆ.ಮಾ. 28ರಂದು ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ
ಚಾಮರಾಜನಗರ, ಮಾ. 27- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ದೇವರ ದಾಸಿಮಯ್ಯ ಜಯಂತಿಯನ್ನು ಮಾರ್ಚ್ 28ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
No comments:
Post a Comment