ಕಾನೂನುಗಳನ್ನು ತಿಳಿದುಕೊಂಡು ಪಾಲನೆಮಾಡಿದಾಗ ನೆಮ್ಮದಿಯ ಜೀವನ
ಚಾಮರಾಜನಗರ, ಮಾರ್ಚ್04-ಸಮಾಜದಲ್ಲಿ ಪ್ರತಿಯೊಬ್ಬರು ನಿತ್ಯ ಜೀವನಕ್ಕೆ ಅವಶ್ಯಕವಾದ ಕಾನೂನುಗಳನ್ನು ತಿಳಿದುಕೊಂಡು ಅದರ ಪಾಲನೆಮಾಡಿದಾಗ ನೆಮ್ಮದಿಯ ಜೀವನವನ್ನು ನಡೆಸಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಪಿ.ನಂದೀಶ್ ಹೇಳಿದರು.
ಅವರು ತಾಲ್ಲೂಕಿನ ತಾವರೆ ಕಟ್ಟೆಮೋಳೆ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ,ಜಿಲ್ಲಾ ವಕೀಲರ ಸಂಘ, ಮತ್ತು ಸಾಧನ ಸಂಸ್ಥೆ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಬ್ಬರಿಗೂ ಕಾನೂನಿನ ತಿಳುವಳಿಕೆ ಇರಬೇಕು ಇದರ ಸಲುವಾಗಿಯೇ ಕಾನೂನು ಸೇವಾ ಪ್ರಾಧಿಕಾರವಿದ್ದು, ಕಾನೂನು ಅರಿವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದು ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕು ಎಂದು ಗ್ರಾಮದ ಜನತೆಗೆ ತಿಳಿಸಿದರು.
ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಅರುಣ್‍ಕುಮಾರ್ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹ ಹೆಚ್ಚಾಗಿ ಕಂಡು ಬರುತ್ತಿದೆ. ಹೆಣ್ಣಿಗೆ 18, ಗಂಡಿಗೆ 21 ವಯಸ್ಸು ಮೀರದೆ ವಿವಾಹ ಮಾಡಬಾರದು, ಒಂದು ವೇಳೆ ಮಾಡಿದರೆ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಎಂದು ತಿಳಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟಾಗ ನಾವುಗಳು ಸ್ವಲ್ಪಮಟ್ಟಿಗಾದರು ಕಾನೂನು ತಿಳಿದು ಕೊಳ್ಳಬಹುದು. ಹೀಗಾದಲ್ಲಿ ಗಣನೀಯವಾಗಿ ಅಪರಾಧಗಳನ್ನು ತಡೆಗಟ್ಟಬಹುದು. ಆವಾಗ ಸಮಾಜದಲ್ಲಿ ಸಾಮರಸ್ಯ ಕಾಣಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಧನ ಸಂಸ್ಥೆಯ ಟಿ.ಜೆ.ಸುರೇಶ್, ಗ್ರಾಪಂ ಸದಸ್ಯ ಮಹೇಶ್, ಗ್ರಾಮದ ಯಜಮಾನರಾದ ಶಿವನಾಂಕಾರಶೆಟ್ಟಿ, ಬಸವರಾಜು, ಅಂಗವಾಡಿ ಕಾರ್ಯಕರ್ತೆಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಮುಂತಾದವರು ಹಾಜರಿದ್ದರು.
No comments:
Post a Comment