Tuesday, 13 March 2018

ವಿಶೇಷ ಚೇತನರು, ಲಿಂಗತ್ವ ಅಲ್ಪ ಸಂಖ್ಯಾತರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಜಾಗೃತಿ ಕಾರ್ಯಕ್ರಮ:- ಡಾ.ಕೆ.ಹರೀಶ್ ಕುಮಾರ್ (10-03-2018)



ವಿಶೇಷ ಚೇತನರು, ಲಿಂಗತ್ವ ಅಲ್ಪ ಸಂಖ್ಯಾತರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಜಾಗೃತಿ ಕಾರ್ಯಕ್ರಮ:- ಡಾ.ಕೆ.ಹರೀಶ್ ಕುಮಾರ್ 

ಚಾಮರಾಜನಗರ, ಮಾ. 10- ಅರ್ಹ ಮತದಾರರೆಲ್ಲರೂ ಪೂರ್ಣ ಪ್ರಮಾಣದಲ್ಲಿ ಮತದಾನದ ಹಕ್ಕನ್ನು ಚಲಾಯಿಸಿದಾಗ ಉತ್ತಮ ಪ್ರಜಾ ಪ್ರಭುತ್ವ ವ್ಯವಸ್ಥೆಯು ಯಶಸ್ವಿಯಾಗಲಿದೆ. ಹೀಗಾಗಿ ಜಿಲ್ಲೆಯಲ್ಲಿ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಡಾ. ಕೆ.ಹರೀಶ್ ಕುಮಾರ್ ತಿಳಿಸಿದರು.
ನಗರದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ  ಮತದಾರರ ಜಾಗೃತಿ ಅಭಿಯಾನ ಅಂಗವಾಗಿ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ವಿಕಲ ಚೇತನರಿಗೆ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ  ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತದಾನ ಪ್ರಕ್ರಿಯೆಯಲ್ಲಿ ಯಾರೊಬ್ಬರೂ ಹೊರಗೆ ಉಳಿಯಬಾರದು. ಮತದಾನದಂತಹ ಅಮೂಲ್ಯ ಹಕ್ಕಿನಿಂದ ವಂಚಿತರಾಗಬಾರದು. 18 ವರ್ಷ ಮೇಲ್ಪಟ್ಟ ಎಲ್ಲಾ ಲಿಂಗತ್ವ ಅಲ್ಪ ಸಂಖ್ಯಾತರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿ ಮತ ಚಲಯಿಸಬೇಕು. ಮತದಾರರ ಪಟ್ಟಿಯಲ್ಲಿ  ಲಿಂಗತ್ವ ಅಲ್ಪ ಸಂಖ್ಯಾತರು ಹೆಸರು ಸೇರ್ಪಡೆಗೆ ಇತರರು ಸಹಕರಿಸಬೇಕು ಎಂದು ಹರೀಶ್ ಕುಮಾರ್ ತಿಳಿಸಿದರು.
ಮತದಾರರ ಪಟ್ಟಿ ಸೇರಿದಂತೆ ಯಾವುದೇ ಗೊಂದಲವಿದ್ದರೂ ಪರಿಹರಿಸಲಾಗುತ್ತದೆ. ಮತದಾರರ ಜಾಗೃತಿ ಅಭಿಯಾನವು ಮತದಾರರ ನೊಂದಾಣಿಗೆ ಅಗತ್ಯ ಸಹಕಾರ ಮಾಹಿತಿ ನೀಡಲಿದೆ. ಲಿಂಗತ್ವ ಅಲ್ಪ ಸಂಖ್ಯಾತರು ಯಾವುದೇ ಮುಜುಗರಕ್ಕೆ ಒಳಗಾಗದೆ ಮತದಾನದಂತಹ ಅಮೂಲ್ಯ ಸಂದರ್ಭದಲ್ಲಿ ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಹರೀಶ್ ಕುಮಾರ್ ತಿಳಿಸಿದರು.
ವಿಶೇಷ ಚೇತನರು ಸಹ ಪ್ರಮುಖವಾಗಿ  ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಾಗಬೇಕು. ಈ ಬಾರಿಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆ ಆಯೋಗವು ಎಲ್ಲರನ್ನು ಒಳಗೊಳ್ಳುವ, ಸುಗಮ ಮತ್ತು ನೈತಿಕ ಚುನಾವಣೆ ನಡೆಸುವ ಮಹತ್ತರ ಆಶಯ ಹೊಂದಿದೆ. ಇದಕ್ಕೆ ಪೂರಕವಾಗಿ ಎಲ್ಲರು  ಪಾಲ್ಗೊಂಡು ಜನತಂತ್ರ ವ್ಯವಸ್ಥೆಯನ್ನು ಬಲಪಡಿಸಬೇಕಿದೆ ಎಂದರು.
ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಪ್ರತಿ ಮತದಾನ ಕೇಂದ್ರ ವ್ಯಾಪ್ತಿಯಲ್ಲಿ ಎಲ್ಲಾ ಅರ್ಹ ವಿಕಲಚೇತನರ ಮತದಾರರ ಭಾಗಸಂಖ್ಯೆ, ಗುರುತಿನ ಚೀಟಿ, ವೈಕಲ್ಯತೆ ಕುರಿತ ಮಾಹಿತಿ ಸಂಗ್ರಹಿಸಿ ವಿಶೇಷ ತಂತ್ರಾಂಶದಲ್ಲಿ ಅಳವಡಿಸಬೇಕು. ಮತದಾನದ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪ್ರೇರೆಪಿಸಬೇಕು ಎಂದು  ಹರೀಶ್ ಕುಮಾರ್‍ರವರು ತಿಳಿಸಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರತಿನಿಧಿಗಳು ಹಾಜರಿದ್ದರು.

ಮಾ. 11ರಂದು ಯಳಂದೂರಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ಉದ್ಘಾಟನೆ, 

ಸಾಮೂಹಿಕ ವಿವಾಹ ಕಾರ್ಯಕ್ರಮ
ಚಾಮರಾಜನಗರ, ಮಾ. 10 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮÁಜ ಕಲ್ಯಾಣ ಇಲಾಖೆಯ ವತಿಯಿಂದ ಮಾರ್ಚ್ 11ರಂದು ಬೆಳಿಗ್ಗೆ 10 ಗಂಟೆಗೆ ಯಳಂದೂರು ಪಟ್ಟಣದಲ್ಲಿ ನಿರ್ಮಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.
ನಿವೃತ್ತ ಪಾಳಿಭಾಷೆ ಪಂಡಿತರಾದ ಚಾಂದಿಯಾ ಜೈತಿಲಕ ಧಮ್ಮಚಾರಿಗಳು ಸಾಮೂಹಿಕ ವಿವಾಹ ನಡೆಸಿಕೊಡುವರು. ಟಿ. ನರಸೀಪುರದ ನಳಂದ ಬುದ್ಧ ವಿಹಾರದ ಪರಮಪೂಜ್ಯ ಬೋಧಿರತ್ನ ಬಂತೇಜಿ ದಿವ್ಯ ಸಾನಿಧ್ಯ ವಹಿಸುವರು.
ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಹೆಚ್. ಆಂಜನೇಯ ಘನ ಉಪಸ್ಥಿತರಿರುವರು. ಸಂಸದರಾದ ಆರ್. ಧ್ರುವನಾರಾಯಣ ಕಟ್ಟಡ ಉದ್ಘಾಟಿಸುವರು. ಶಾಸಕರಾದ ಎಸ್. ಜಯಣ್ಣ ಅಧ್ಯಕ್ಷತೆ ವಹಿಸುವರು.
ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಶಾಸಕರಾದ ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಆರ್. ಉಮೇಶ್, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ಯಳಂದೂರು ತಾಲೂಕು ಪಂಚಾಯಿತಿ ಅಧ್ಯಕ್ಷರಾದ ನಂಜುಂಡಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ನಿಂಗರಾಜು, ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಪದ್ಮಾವತಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ವೈ.ಎಸ್. ಭೀಮಪ್ಪ, ಪಟ್ಟಣ ಪಂಚಾಯಿತಿ ಸದಸ್ಯರಾದ ಜೆ. ಶ್ರೀನಿವಾಸ್, ಸ್ಥಳ ದಾನಿಗಳಾದ ಡಿ. ರೇವಣ್ಣ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದÉ.

ಮಾ. 11,12ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ 

ಚಾಮರಾಜನಗರ, ಮಾ. 11 - ಸಣ್ಣ ಕೈಗಾರಿಕೆ ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ ಮೋಹನ ಕುಮಾರಿ (ಗೀತ ಮಹದೇವ ಪ್ರಸಾದ್) ಅವರು ಮಾರ್ಚ್ 11 ಹಾಗೂ 12ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಮಾರ್ಚ್ 11ರಂದು ಬೆಳಿಗ್ಗೆ 10ಗಂಟೆಗೆ ಹರವೆಗೆ ಆಗಮಿಸಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮದ್ಯಾಹ್ನ 12ಗಂಟೆಗೆ ಯಳಂದೂರು ಪಟ್ಟಣಕ್ಕೆ ಆಗಮಿಸಿ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಮಾರ್ಚ್ 12ರಂದು ಬೆಳಿಗ್ಗೆ 10ಗಂಟೆಗೆ ಗುಂಡ್ಲುಪೇಟೆ ತಾಲ್ಲೂಕಿನ ಗುರುವಿನಪುರದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭವನ ಉದ್ಘಾಟನೆ, 11ಗಂಟೆಗೆ ತೆರಕಣಾಂಬಿಯಲ್ಲಿ  ಪ್ರಥಮ ದರ್ಜೆ ಕಾಲೇಜು ಕಟ್ಟಡದ ಗುದ್ದಲಿಪೂಜೆ, 11.30ಗಂಟೆಗೆ ವಾಲ್ಮೀಕಿ ಸಮುದಾಯ ಭವನದ ಉದ್ಘಾಟನೆ, ಮದ್ಯಾಹ್ನ 2.30ಗಂಟೆಗೆ ಗುಂಡ್ಲುಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಸಚಿವರ ವಿಶೇಷಾಧಿಕಾರಿ ತಿಳಿಸಿದ್ದಾರೆ.

ಮಾ. 12ರಂದು ನಗರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ
ಚಾಮರಾಜನಗರ, ಮಾ. 11 - ಚಾಮರಾಜನಗರದ ಬಿ.ರಾಚಯ್ಯ ಜೋಡಿರಸ್ತೆಯ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ನಿರ್ಮಾಣ ಮಾಡಲಾಗಿರುವ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟನೆಯು ಮಾರ್ಚ್ 12 ರಂದು ಬೆಳಿಗ್ಗೆ 9.30ಗಂಟೆಗೆ ನೆರವೇರಲಿದೆ.
ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಇತರೆ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ಗಣ್ಯರು ಭಾಗವಹಿಸುವರೆಂದು ಪ್ರಕಟಣೆ ತಿಳಿಸಿದೆ.


ಮಾರ್ಚ್. 11ರಂದು ಪಲ್ಸ್ ಪೋಲಿಯೊ : ಒಟ್ಟು 75652 ಮಕ್ಕಳಿಗೆ ಹನಿ ನೀಡುವ ಗುರಿ 

ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆಗೆ ಕಾರಣವಾಗುವ ಪೋಲಿಯೊ ರೋಗ ಹೋಗಲಾಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಪಲ್ಸ್ ಪೋಲಿಯೊ ಅಭಿಯಾನಕ್ಕೆ ಜಿಲ್ಲೆ ಸಜ್ಜುಗೊಂಡಿದೆ.
ಆಗ ತಾನೇ ಹುಟ್ಟಿದ ಮಗುವಿನಿಂದ 5 ವರ್ಷದ ವರೆಗಿನ ಮಕ್ಕಳಿಗೆ ಪೋಲಿಯೊ ಹನಿ ನೀಡಲಾಗುತ್ತದೆ.
ಜಿಲ್ಲೆಯಲ್ಲಿ ಮಾರ್ಚ್ 11ರಂದು ಎರಡನೇ ಸುತ್ತಿನ  ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಲಿದ್ದು,ಜಿಲ್ಲೆಯಲ್ಲಿ ಅಂದಾಜು ಒಟ್ಟು 75652 ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ನೀಡುವ ಗುರಿ ಹೊಂದಲಾಗಿದೆ.
ಚಾಮರಾಜನಗರ ತಾಲ್ಲೂಕಿನಲ್ಲಿ 24724, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 15470, ಕೊಳ್ಳೇಗಾಲ ತಾಲ್ಲೂಕಿನಲ್ಲಿ 29478 ಹಾಗೂ ಯಳಂದೂರು ತಾಲ್ಲೂಕಿನಲ್ಲಿ 5980 ಮಕ್ಕಳಿಗೆ ಪೋಲಯೋ ಹನಿ ಹಾಕಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 622 ಬೂತ್‍ಗಳನ್ನು ಪೋಲಯೋ ಹನಿ ನೀಡಲು ತೆರೆಯಲಾಗಿದೆ. ನಗರ ಪ್ರದೇಶಗಳಲ್ಲಿ 92 ಗ್ರಾಮೀಣ ಪ್ರದೇಶಗಳಲ್ಲಿ 530 ಬೂತ್‍ಗಳು ಕಾರ್ಯನಿರ್ವಹಿಸಲಿವೆ. ಈ ಪೈಕಿ ಚಾಮರಾಜನಗರ ತಾಲ್ಲೂಕಿನಲ್ಲಿ 194, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 158, ಕೊಳ್ಳೇಗಾಲ ತಾಲ್ಲೂಕಿನಲ್ಲಿ 223 ಹಾಗೂ ಯಳಂದೂರು ತಾಲ್ಲೂಕಿನಲ್ಲಿ 47 ಕೇಂದ್ರಗಳನ್ನು ತೆರೆಯಲಾಗಿದೆ. ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಪಲ್ಸ್ ಪೋಲಿಯೋ ಬೂತ್‍ಗಳಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕಲಾಗುತ್ತದೆ.
ಲಸಿಕಾ ಕಾರ್ಯಕ್ರಮದ ಮೇಲುಸ್ತುವಾರಿಗೆ 130 ಮೇಲ್ವಿಚಾರಕರು ಹಾಗೂ 2488 ಲಸಿಕಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. 20 ಟ್ರಾನ್ಸಿಟ್ 10 ಮೊಬೈಲ್ ತಂಡಗಳು ಕಾರ್ಯ ನಿರ್ವಹಿಸಲಿವೆ.
ಮಾರ್ಚ್ 11ರಂದು ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ತೆರೆಯಲಾಗುವ ಕೇಂದ್ರಗಳಲ್ಲಿ ಪೋಲಿಯೊ ಹನಿ ನೀಡಲಾಗುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ 2ನೇ ಹಾಗೂ 3ನೇ ದಿನ ಮನೆ ಮನೆಗೆ ಭೇಟಿ ನೀಡಿ ಪೋಲಯೋ ಹನಿ ನೀಡಲಾಗುತ್ತದೆ. ಪಟ್ಟಣ ಪ್ರದೇಶದಲ್ಲಿ 2ನೇ,3ನೇ ಹಾಗೂ 4ನೆ ದಿನವೂ ಸಹ ಮನೆ ಮನೆಗೆ ಭೇಟಿ ನೀಡಿ ಪೋಲಯೋ ಹನಿ ನೀಡಲಾಗುತ್ತದೆ.
ಪಟ್ಟಣ ಪ್ರದೇಶದಲ್ಲಿ ಒಟ್ಟು 36021 ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 199691 ಮನೆಗಳು ಸೇರಿದಂತೆ ಒಟ್ಟು 235712 ಮನೆಗಳಿಗೆ ಭೇಟಿ ನೀಡಿ ಪೋಲಯೋ ಹನಿ ನೀಡುವ ಗುರಿಯನ್ನು ಹೊಂದಲಾಗಿದೆ.
ಜಿಲ್ಲಾ ವ್ಯಾಪ್ತಿಯ ನರ್ಸಿಂಗ್ ಶಾಲೆಗಳು, ಸ್ವಯಂ ಸೇವಾ ಸಂಸ್ಥೆಗಳು ಅಭಿಯಾನಕ್ಕೆ ಸಹಕಾರ ನೀಡಿವೆ.
ಅಂಗವೈಕಲ್ಯತೆ ತಪ್ಪಿಸುವ ಸಲುವಾಗಿ ಪಲ್ಸ್ ಪೋಲಿಯೊ ಆಂದೋಲನವನ್ನು 1995ರಿಂದಲೂ ರಾಷ್ಟ್ರೀಯ ಕಾರ್ಯಕ್ರಮವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಜಿಲ್ಲೆಯಲ್ಲೂ ಪಲ್ಸ್ ಪೋಲಿಯೋ ಆಂದೋಲನವನ್ನು ಯಶಸ್ವಿಗೊಳಿಸಲು ಜಿಲ್ಲಾ ಜನತೆಯ ಸಹಕಾರ ಅವಶ್ಯವಾಗಿದೆ.
 ಪೋಷಕರು ಈ ಹಿಂದೆ ಎಷ್ಟೇ ಬಾರಿ ಪಲ್ಸ್ ಪೋಲಿಯೋ ಹನಿ ಕೊಡಿಸಿದ್ದರೂ ಸಹ ಮಾರ್ಚ್ 11ರಂದು ತಪ್ಪದೇ ಆಗ ತಾನೇ ಹುಟ್ಟಿದ ಮಗುವಿನಿಂದ 5 ವರ್ಷದವರೆಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕಿಸಬೇಕು. ಈ ಮಹತ್ತರ ಕಾರ್ಯಕ್ರಮಕ್ಕೆ ಎಲ್ಲ ಪೋಷಕರು, ಸಮುದಾಯ ಮುಖಂಡರು, ಸ್ವಯಂ ಸೇವಾ ಸಂಸ್ಥೆಯ ಪದಾಧಿಕಾರಿಗಳು ಸರ್ವರೂ ಕೈಜೋಡಿಸಿ ಯಶಸ್ವಿಗೊಳಿಸಬೇಕೆಂದು ಎಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಮನವಿ ಮಾಡಿದ್ದಾರೆ.

ವಿದ್ಯಾರ್ಥಿಗಳಿಗ ತಿಳಿವಳಿಕೆ ಶಿಬಿರ : ಭಾರತೀಯ ವಿದೇಶಾಂಗ ಸೇವೆ ಅಧಿಕಾರಿಯವರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಮಾರ್ಗದರ್ಶನ 

ಚಾಮರಾಜನಗರ, ಮಾರ್ಚ್ 10 :- ಸ್ಪರ್ಧಾತ್ಮಕ ಪರೀಕ್ಷೆಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಸಜ್ಜುಗೊಳ್ಳುವ ಸಲುವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಮಾರ್ಗದರ್ಶನ ಹಾಗೂ ತಿಳಿವಳಿಕೆ ಶಿಬಿರದಲ್ಲಿ ಇಂದು ಜಿಲ್ಲೆಯವರೇ ಆದ ಭಾರತೀಯ ವಿದೇಶಾಂಗ ಸೇವೆಯ ಹಿರಿಯ ಅಧಿಕಾರಿಯವರಿಂದ ಮಾರ್ಗದರ್ಶನ ಹಾಗೂ ಉಪನ್ಯಾಸ ಕೇಳುವ ಸುವರ್ಣವಕಾಶ ಒದಗಿ ಬಂತು.
ಕೇಂದ್ರ ಲೋಕಸೇವಾ ಆಯೋಗ ನಡೆಸುವ ಐಎಎಸ್, ಐಪಿಎಸ್ ಅಲ್ಲದೇ ಬ್ಯಾಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳು, ರಾಜ್ಯ ಲೋಕಸೇವಾ ಆಯೋಗದ ಕೆಎಎಸ್ ಸೇರಿದಂತೆ ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳು, ವಿದ್ಯಾರ್ಥಿ ಜೀವನದಿಂದಲೇ ಹೇಗೆ ಅಧ್ಯಯನಶೀಲರಾಗಬೇಕು ಎಂಬ ಬಗ್ಗೆ ಉಪಯುಕ್ತ ಕಾರ್ಯಗಾರವು ಕಳೆದ ಮೂರು ದಿನಗಳಿಂದ ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ನಡೆಯುತ್ತಿದೆ.
ಶಿಬಿರದ ಅಂತಿಮ ದಿನವಾದ ಇಂದು ನವದೆಹಲಿಯಲ್ಲಿರುವ ವಿದೇಶಾಂಗ ಸಚಿವಾಲಯದ ಅಮೆರಿಕಾ ಡಿವಿಜನ್ (ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ)ದ ನಿರ್ದೇಶಕರಾಗಿರುವ ಪಿ.ಎಸ್. ಗಂಗಾಧರ್ ಅವರಿಂದ ವಿದ್ಯಾರ್ಥಿಗಳಿಗೆ ಯುಪಿಎಸ್‍ಸಿ ಪರೀಕ್ಷೆಗಳಿಗೆ ಸಿದ್ದರಾಗುವ ಬಗ್ಗೆ ಸುದೀರ್ಘ ಉಪನ್ಯಾಸ ಹಾಗೂ ಪರೀಕ್ಷಾ ಟಿಪ್ಸ್ ಕೇಳುವ ಅವಕಾಶ ಲಭಿಸಿತು.
ಕೊಳ್ಳೇಗಾಲದವರಾದ ಪಿ.ಎಸ್. ಗಂಗಾಧರ್ ಅವರು ಭಾರತೀಯ ವಿದೇಶಾಂಗ (ಐಎಫ್‍ಎಸ್) ಅಧಿಕಾರಿಯಾಗಿದ್ದಾರೆ. ಹಲವಾರು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಅಪಾರ ಅನುಭವವುಳ್ಳ ಗಂಗಾಧರ್ ಅವರು ವಿದ್ಯಾರ್ಥಿಗಳಿಗೆ ಪರೀಕ್ಷೆ ಸಂಬಂಧ ನೀಡಿದ ಸಲಹೆ ಮಾರ್ಗದರ್ಶನ ಭವಿಷ್ಯದ ಜಿಲ್ಲೆಯ ಪರೀಕ್ಷಾರ್ಥಿಗಳಿಗೆ ಅತ್ಯವಶ್ಯಕವಾಗಿತ್ತು.
ಶಿಬಿರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಗಂಗಾಧರ್ ಅವರು ಐಎಎಸ್, ಐಪಿಎಸ್ ಮಾತ್ರ ಉನ್ನತ ಹುದ್ದೆಗಳು ಎಂಬ ಭಾವನೆ ಸಾಮಾನ್ಯವಾಗಿ ಎಲ್ಲರಲೂ ಇದೆ. ಆದರೆ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಭಾರತೀಯ ವಿದೇಶಾಂಗ ಸೇವೆ (ಐಎಫ್‍ಎಸ್) ಯಂತಹ ಹುದ್ದೆಗಳು ಸಹ ಪ್ರಮುಖವಾಗಿದೆ. ಐಎಫ್‍ಎಸ್ ನಂತಹ ಹುದ್ದೆಗಳಲ್ಲಿಯೂ ಸಹ ಹಲವಾರು ಮಹತ್ತರ ಘಟ್ಟಗಳಲ್ಲಿ ಪ್ರಮುಖ ಕಾರ್ಯನಿರ್ವಹಣೆ ಹಾಗೂ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶಗಳು ದೊರೆಯಲಿವೆ ಎಂದರು.
ವಿದ್ಯಾರ್ಥಿಗಳು ಪರಿಶ್ರಮದಿಂದ ವಿದ್ಯಾರ್ಥಿ ಜೀವನದಿಂದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳ್ಳುವ ಸಂಕಲ್ಪ ಮಾಡಬೇಕು. ಇಂದಿನ ಸ್ಪರ್ಧಾತ್ಮಕ ಕಾಲಕ್ಕೆ ಹೊಂದಿಕೊಳ್ಳಬೇಕು. ಐಎಎಸ್, ಐಪಿಎಸ್, ಐಎಫ್‍ಎಸ್ ನಂತಹ ಪರೀಕ್ಷೆಗಳನ್ನು ಎದುರಿಸಿ ಯಶಸ್ವಿಯಾಗುತ್ತೇವೆ ಎಂಬ ಆತ್ಮವಿಶ್ವಾಸ ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪದವಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿಯೇ ಉದ್ಯೋಗ ಪಡೆಯಬೇಕಾಗುತ್ತದೆ. ಉನ್ನತ ಹುದ್ದೆಗಳಿಗೆ ಏರಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಅವಕಾಶ ಲಭಿಸುತ್ತದೆ. ಹೀಗಾಗಿ ವಿದ್ಯಾರ್ಥಿಗಳು ದಿನನಿತ್ಯದ ಪಠ್ಯಚಟುವಟಿಕೆಗಳ ಜತೆಜತೆಯಲ್ಲಿ ಜ್ಞಾನರ್ಜನೆ ಹಾಗೂ ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಹ ಗಮನಲ್ಲಿಟ್ಟು ವ್ಯಾಸಂಗ ಮಾಡಿದರೆ ಯಶಸ್ವಿಯಾಗಬಹುದೆಂದು ಗಂಗಾಧರ್ ಅವರು ಕಿವಿಮಾತು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ರಾಜೇಂದ್ರಪ್ರಸಾದ್ ಇತರರು ಉಪಸ್ಥಿತರಿದ್ದರು.




No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು