ನೂತನ ಜಿಲ್ಲಾಧಿಕಾರಿಯಾಗಿ ಬಿ.ಬಿ. ಕಾವೇರಿಯವರಿಂದ ಅಧಿಕಾರ ಸ್ವೀಕಾರ
ಚಾಮರಾಜನಗರ, ಮಾ. 12:- ನೂತನ ಜಿಲ್ಲಾಧಿಕಾರಿಯಾಗಿ ಬಿ.ಬಿ. ಕಾವೇರಿ ಅವರು ಇಂದು ನಿರ್ಗಮಿತ ಜಿಲ್ಲಾಧಿಕಾರಿ ಬಿ. ರಾಮು ಅವರಿಂದ ಅಧಿಕಾರ ಸ್ವೀಕರಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೂತನ ಜಿಲ್ಲಾಧಿಕಾರಿ ಕಾವೇರಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ಜಿಲ್ಲಾಧಿಕಾರಿ ಬಿ. ರಾಮು ಅವರು ನೂತನ ಜಿಲ್ಲಾಧಿಕಾರಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಇದೇವೇಳೆ ಮಾತನಾಡಿದ ಜಿಲ್ಲಾಧಿಕಾರಿ ಕಾವೇರಿ ಅವರು ಕೋಲಾರದಿಂದ ತಾವು ಇಲ್ಲಿಗೆ ವರ್ಗಾವಣೆಯಾಗಿ ಬಂದಿದ್ದೇನೆ. ಮುಂದೆ ಎದುರಾಗುವ ಚುನಾವಣೆ ಕಾರ್ಯಗಳಿಗೆ ಸಿದ್ಧತೆ ನಡೆಸಬೇಕಿದೆ. ಜತೆಗೆ ಅಭಿವೃದ್ಧಿ ಕೆಲಸಗಳಿಗೂ ಗಮನ ನೀಡಬೇಕಿದೆ. ಒಳ್ಳೆಯ ಕೆಲಸಗಳಿಗೆ ಎಲ್ಲರ ನೆರವು ಬೇಕಿದೆ ಎಂದರು.
ಚಾಮರಾಜನಗರ ಜಿಲ್ಲೆಯು ಅರಣ್ಯ ಪ್ರದೇಶದಿಂದ ಹೆಚ್ಚು ಕೂಡಿದೆ. ಬುಡಕಟ್ಟು ವರ್ಗಗಳ ಜನರೂ ಸಹ ಸಾಕಷ್ಟು ಮಂದಿ ಇದ್ದಾರೆ. ಅಭಿವೃದ್ಧಿ ಎಂದರೆ ಕೇವಲ ಪಟ್ಟಣದ ಪ್ರಗತಿ ಮಾತ್ರ ಆಗುವುದಿಲ್ಲ. ಎಲ್ಲಾ ಭಾಗಗಳೂ ಸಹ ಅಭಿವೃದ್ಧಿಯಾದರೆ ಸಮಗ್ರ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ನೂತನ ಜಿಲ್ಲಾಧಿಕಾರಿ ಕಾವೇರಿ ಹೇಳಿದರು.
ಇದೇ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಇತರೆ ಅಧಿಕಾರಿಗಳು ಹಾಜರಿದ್ದರು.
ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಇಂದಿರಾ ಕ್ಯಾಂಟೀನ್ ಉದ್ಘಾಟನೆ
ಚಾಮರಾಜನಗರ, ಮಾ. 12- ಕಡಿಮೆ ವೆಚ್ಚದಲ್ಲಿ ಜನರಿಗೆ ತಿಂಡಿ, ಊಟ ಪೂರೈಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಇಂದಿರಾ ಕ್ಯಾಂಟೀನ್ ಜಿಲ್ಲಾ ಕೇಂದ್ರದಲ್ಲಿ ಇಂದು ಆರಂಭವಾಗಿದೆ.
ನಗರದ ಬಿ. ರಾಚಯ್ಯ ಜೋಡಿರಸ್ತೆಯ ಜಿಲ್ಲಾಡಳಿತ ಭವನದ ಮುಖ್ಯ ದ್ವಾರದ ಪಕ್ಕದಲ್ಲಿ ನಿರ್ಮಾಣ ಮಾಡಲಾಗಿರುವ ನೂತನ ಇಂದಿರಾ ಕ್ಯಾಂಟೀನನ್ನು ಸಕ್ಕರೆ, ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉದ್ಘಾಟಿಸಿದರು.
ಇಂದಿರಾ ಕ್ಯಾಂಟೀನ್‍ಗೆ ಚಾಲನೆ ನೀಡಿದ ಬಳಿಕ ಉಸ್ತುವಾರಿ ಸಚಿವರಾದ ಗೀತ ಮಹದೇವಪ್ರಸಾದ್ ಅವರು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ನಗರಸಭೆ ಅಧ್ಯಕ್ಷರಾದ ಶೋಭ, ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ ಇತರೆ ಗಣ್ಯರು ಅಧಿಕಾರಿಗಳೆÉೂಂದಿಗೆ ಇಂದಿರಾ ಕ್ಯಾಂಟೀನ್‍ನಲ್ಲಿ ಉಪ್ಪಿಟ್ಟು, ಕೇಸರಿಬಾತ್ ಸವಿದರು.
ಬಳಿಕ ಮಾತನಾಡಿದ ಉಸ್ತುವಾರಿ ಸಚಿವರಾದ ಗೀತ ಮಹದೇವಪ್ರಸಾದ್ ಅವರು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್‍ಗೆ ಇಂದು ಚಾಲನೆ ಸಿಕ್ಕಿದೆ. ಜಿಲ್ಲೆಯ ಮೊಟ್ಟಮೊದಲ ಇಂದಿರಾ ಕ್ಯಾಂಟೀನ್ ನಗರದಲ್ಲಿ ಆರಂಭವಾಗಿದೆ. ಇದನ್ನು ಉದ್ಘಾಟಿಸಿರುವುದು ಸಂತಸ ತಂದಿದೆ ಎಂದರು.
ಇಂದಿರಾ ಕ್ಯಾಂಟೀನ್‍ನಲ್ಲಿ 5 ರೂ.ಗೆ ಬೆಳಿಗ್ಗಿನ ಉಪಾಹಾರ, 10 ರೂ.ಗೆ ಮಧ್ಯಾಹ್ನ ಹಾಗೂ ರಾತ್ರಿಯ ಊಟ ನೀಡಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 500 ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ತಲಾ 500 ಊಟ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಅತಿ ಕಡಿಮೆ ದರದಲ್ಲಿ ಶುಚಿರುಚಿಯಾದ ಊಟ ಉಪಾಹಾರ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು.
ಇಂದಿರಾ ಕ್ಯಾಂಟೀನ್‍ಗೆ 88 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಎಲ್ಲ ವ್ಯವಸ್ಥೆಗಳನ್ನು ಸಹ ಸಮರ್ಪಕವಾಗಿ ನಿರ್ವಹಿಸಲಾಗುತ್ತದೆ. ಈ ಪ್ರಮುಖ ಯೋಜನೆ ಜಿಲ್ಲೆಯಲ್ಲೂ ಸಂಪiÁರ್ಣವಾಗಿ ಯಶಸ್ವಿಯಾಗಲಿದೆ ಎಂದು ಉಸ್ತುವಾರಿ ಸಚಿವರು ಆಶಿಸಿದರು.
ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ಹಾಗೂ ಚಾಮರಾಜನಗರಸಭೆ ಪ್ರಭಾರ ಆಯುಕ್ತರೂ ಆದ ಫೌಜಿಯಾ ತರನಂ, ನಗರಾಭಿವೃದ್ಧಿ ಕೋಶದ ನಿರ್ದೇಶಕರಾದ ಸುರೇಶ್, ಇತರರು ಈ ಸಂದರ್ಭದಲ್ಲಿ ಹಾಜರಿದ್ದರು
ನಿರ್ಗಮಿತ ಜಿಲ್ಲಾಧಿಕಾರಿ ಬಿ. ರಾಮು ಅವರಿಗೆ ಆತ್ಮೀಯ ಬೀಳ್ಕೊಡುಗೆ
ಚಾಮರಾಜನಗರ, ಮಾ. 12 - ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಪಶುಸಂಗೋಪನೆ ಇಲಾಖೆಯ ಆಯುಕ್ತರಾಗಿ ವರ್ಗಾವಣೆಗೊಂಡಿರುವ ಬಿ. ರಾಮು ಅವರಿಗೆ ಇಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ಬಿ.ರಾಮು ಹಾಗೂ ಅವರ ಪತ್ನಿ ಸುಮಾ ಬಿ. ರಾಮು ಅವರನ್ನು ಶಾಲು ಹೊದಿಸಿ ಫಲತಾಂಬೂಲ, ಕಿರುಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಇದೇ ವೇಳೆ ಮಾತನಾಡಿದ ಮಾತನಾಡಿದ ಜಿಲ್ಲಾಧಿಕಾರಿ ಬಿ. ರಾಮು ಅವರು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುವ ಮೊದಲೇ ಈ ಹಿಂದೆ ತಾವು ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದೆ. ಹೀಗಾಗಿ ಜಿಲ್ಲೆಯ ಅಗತ್ಯತೆ ಬಗ್ಗೆ ಚೆನ್ನಾಗಿ ಅರಿವಿತ್ತು. ಇದರಿಂದಲೇ ಜಿಲ್ಲಾಧಿಕಾರಿಯಾಗಿ ಬಂದ ಕೂಡಲೇ ಕಾರ್ಯಪ್ರವೃತ್ತನಾದೆ. ಸ್ಥಳೀಯ ಸಂಸ್ಥೆಗಳು, ಗ್ರಾಮದ ಸಮಸ್ಯೆಗಳ ಪರಿಸ್ಥಿತಿ ಬಗ್ಗೆ ಬಹುಬೇಗ ತಿಳಿದುಕೊಂಡು ಅದರ ಪರಿಹಾರಕ್ಕೆ ಮುಂದಾದೆ. ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಿರುವ ಅನುದಾನ ಸದ್ಬಳಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಯಿತು ಎಂದರು.
ಜಿಲ್ಲೆಯ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ. ಹೆದ್ದಾರಿ, ನಗರದ ರಸ್ತೆಗಳು, ವಿವಿಧ ಯೋಜನೆಯಡಿ ಅಭಿವೃದ್ಧಿಗೊಳ್ಳುತ್ತಿದೆ. ಹಲವು ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದ್ದು ಕಾಮಗಾರಿಗಳು ನಡೆಯುತ್ತಿವೆ. ಅಭಿವೃದ್ಧಿ ಕೆಲಸದಲ್ಲಿ ಅಧಿಕಾರಿಗಳು ಸೇರಿದಂತೆ ಎಲ್ಲರೂ ಸಹಕರಿಸಿದ್ದಾರೆ. ಯಾವುದೇ ಹೆಗ್ಗಳಿಕೆ ಕೆಲಸ ನನ್ನಿಂದ ಮಾತ್ರ ಆಗಿಲ್ಲ. ಅಧಿಕಾರಿಗಳು ಹೆಗಲುಕೊಟ್ಟು ಇಡೀ ತಂಡವಾಗಿ ಕಾರ್ಯನಿರ್ವಹಿಸಿದ ಪರಿಣಾಮ ತಮ್ಮ ಅವಧಿಯಲ್ಲಿ ಉತ್ತಮ ಕೆಲಸ ಮಾಡಲು ಸಾಧ್ಯವಾಯಿತು. ಚಾಮರಾಜನಗರ ಜಿಲ್ಲೆ ನನ್ನ ಸ್ವಂತ ಜಿಲ್ಲೆ ಎಂದೇ ಭಾವಿಸಿದ್ದೇನೆ. ಇಲ್ಲಿನ ಜನ ಅಧಿಕಾರಿಗಳು ತೋರಿದ ಪ್ರೀತಿ ಅಭಿಮಾನ ಸಹಕಾರ ನನ್ನನ್ನು ಬಹುಕಾಲ ಸ್ಮರಿಸುವಂತಾಗಿದೆ ಎಂದು ಜಿಲ್ಲಾಧಿಕಾರಿಯವರು ಅನಿಸಿಕೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ರಾಮು ಅವರು ಜನರು, ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಮಚಿತ್ತ ಹಾಗೂ ಪ್ರೀತಿಯಿಂದ ವರ್ತಿಸುತ್ತಿದ್ದರು. ಅಪಾರ ಸಹನೆ ಉಳ್ಳವರಾಗಿದ್ದು ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ಧರಾಗಿರುತ್ತಿದ್ದರು ಎಂದರು.
ಜಿಲ್ಲಾಧಿಕಾರಿ ರಾಮು ಅವರಿಗೆ ಶೋಷಿತ ವರ್ಗಗಳ ಬಗ್ಗೆ ಕಾಳಜಿ ಇತ್ತು. ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಿಗೂ ಅಗತ್ಯ ಸಹಕಾರ ನೀಡಿದ್ದಾರೆ. ಅವರ ಅನುಭವದಿಂದ ನಮಗೆ ಸಾಕಷ್ಟು ಮಾರ್ಗದರ್ಶನ ಸಿಕ್ಕಿದೆ ಎಂದು ಹರೀಶ್ ಕುಮಾರ್ ಅಭಿಪ್ರಾಯಪಟ್ಟರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇದ್ರ ಕುಮಾರ್ ಮೀನಾ ಮಾತನಾಡಿ ಜಿಲ್ಲಾಧಿಕಾರಿಯಾಗಿದ್ದ ರಾಮು ಅವರು ದಕ್ಷತೆ, ಉತ್ಸಾಹ ಹಾಗೂ ಪ್ರೀತಿಯಿಂದ ಜಿಲ್ಲೆಯ ಕೆಲಸವನ್ನು ನಿರ್ವಹಿಸಿದ್ದಾರೆ. ಯಾವುದೇ ಕೆಲಸ ಯಶಸ್ವಿಯಾಗಬೇಕಾದರೆ ಸಮನ್ವಯ ಅಗತ್ಯ. ಇದನ್ನು ಚೆನ್ನಾಗಿ ಅರಿತ್ತಿದ್ದ ಜಿಲ್ಲಾಧಿಕಾರಿ ರಾಮು ಅವರು ಯಾವುದೇ ತೊಡಕುಬಾರದಂತೆ ಕೆಲಸ ನಿರ್ವಹಿಸುವ ಜಾಣ್ಮೆ ಹೊಂದಿದ್ದರು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ ಗಾಯತ್ರಿ ಮಾತನಾಡಿ ಜಿಲ್ಲಾಧಿಕಾರಿ ರಾಮು ಅವರು ಬರಗಾಲ ಪರಿಸ್ಥಿತಿ ಸಂದರ್ಭದಲ್ಲಿ ವಿಶೇಷ ಗಮನ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದರು. ಅಧಿಕಾರಿಗಳೊಂದಿಗೆ ಸತತವಾಗಿ ಸಭೆ ನಡೆಸಿ ಬರ ಪರಿಹಾರ ಕಾಮಗಾರಿಗಳು ಸರಿಯಾಗಿ ಅನುಷ್ಠಾನವಾಗುವಂತೆ ನೋಡಿಕೊಂಡರು. ಎಲ್ಲವನ್ನೂ ಸಹನೆ ತಾಳ್ಮೆಯಿಂದ ನಿರ್ವಹಿಸಿದರು. ಅವರ ಮಾರ್ಗದರ್ಶನ ನಮಗೆ ಮುಂದೆಯೂ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಪರ ಸಂಘಟನೆ ಮುಖಂಡರಾದ ಶಾ.ಮುರಳಿ, ಚಾ.ರಂ. ಶ್ರೀನಿವಾಸ ಗೌಡ, ಚಾ.ಗು. ನಾಗರಾಜು, ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ವಿವಿಧ ಸಂಘಟನೆಗಳ ಮುಖಂಡರಾದ ರಾಜಶೇಖರ್, ರತ್ನಮ್ಮ, ಕೃಷ್ಣ, ನಗರ ಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ರೇಣುಕಾ, ಜಿಲ್ಲಾ ಮಟ್ಟದ ಅಧಿಕಾರಿಗಳಾದ ಫೌಜಿಯಾ ತರನಮ್, ಆರ್. ರಾಚಪ್ಪ, ನಾಗೇಶ್, ಲಿಂಗರಾಜು, ಕೆ. ಪುರಂದರ, ಸತ್ಯಮೂರ್ತಿ, ಡಾ. ಕೆ.ಹೆಚ್. ಪ್ರಸಾದ್, ಕೃಷ್ಣಪ್ಪ, ಸುರೇಶ್, ರವಿ ಕುಮಾರ್ ಇತರರು ಜಿಲ್ಲಾಧಿಕಾರಿ ರಾಮು ಅವರ ಸೇವೆ ಕರ್ತವ್ಯ ಕುರಿತು ಮೆಚ್ಚುಗೆ ನುಡಿಗಳನ್ನಾಡಿದರು.
ಜಂಟಿ ಕೃಷಿ ನಿದೇಶಕರಾದ ತಿರುಮಲೇಶ್ ಸೊಗಸಾಗಿ ಕಾರ್ಯಕ್ರಮ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ.ಹೆಚ್. ಸತೀಶ್ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್. ಮುನಿರಾಜಪ್ಪ ವಂದಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಜೆ. ಯೋಗೇಶ್ ಅಧಿಕಾರ ಸ್ವೀಕಾರ
ಚಾಮರಾಜನಗರ, ಮಾ. 12 :- ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್ ಅವರು ಇಂದು ಜಿಲ್ಲಾ ಪಂಚಾಯತ್ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ ಎಂ. ರಾಮಚಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್ ಅವರು ಜಿಲ್ಲಾ ಪಂಚಾಯತ್ ಪ್ರಭಾರ ಅಧ್ಯಕ್ಷರಾಗಿ ಇಂದು ಅಧಿಕಾರ ವಹಿಸಿಕೊಂಡರು.
ನಗರದ ಜಿಲ್ಲಾ ಪಂಚಾಯತ್‍ನ ಅಧ್ಯಕ್ಷರ ಕೊಠಡಿಯಲ್ಲಿ ಎಂ. ರಾಮಚಂದ್ರ ಅವರು ಯೋಗೇಶ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜೆ. ಯೋಗೇಶ್ ಅವರು ಮಾರ್ಚ್ ಅಂತ್ಯದೊಳಗೆ ಪ್ರಸಕ್ತ ಸಾಲಿನ ಕಾರ್ಯಕ್ರಮಗಳು ಪೂರ್ಣಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಯೋಜನೆ ಕಾರ್ಯಕ್ರಮಗಳ ಅನುಷ್ಠಾನ ಆದ್ಯತೆಯಾಗಿದೆ. ಪರಿಶಿಷ್ಠ ಜಾತಿ, ಪರಿಶಿಷ್ಠವರ್ಗಗಳ ಕಲ್ಯಾಣ ಕಾರ್ಯಕ್ರಮದಡಿ ನಿಗದಿಯಾಗಿರುವ ಅನುದಾನ ಪೂರ್ಣ ಪ್ರಮಾಣದಲ್ಲಿ ಸದ್ವಿನಿಯೋಗವಾಗಬೇಕಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿ ಉದ್ದೇಶಿತ ಕಾರ್ಯಕ್ರಮಗಳನ್ನು ಮಾರ್ಚ್ ಒಳಗೆ ಪ್ರಗತಿ ಸಾಧಿಸಲು ಮುಂದಾಗುವಂತೆ ತಿಳಿಸಲಾಗುವುದು ಎಂದರು.
ಅಧಿಕಾರ ಸ್ವೀಕಾರ ಮಾಡಿದ ನಂತರ ನೂತನ ಪ್ರಭಾರ ಜಿ.ಪಂ. ಅಧ್ಯಕ್ಷರಾದ ಯೋಗೇಶ್ ಅವರನ್ನು ಎಂ. ರಾಮಚಂದ್ರ, ಜಿಲ್ಲಾ ಪಂಚಾಯತ್‍ನ ಸದಸ್ಯರು ಹೂ ಗುಚ್ಚ ನೀಡಿ ಅಭಿನಂದಿಸಿದರು.
ಮಾ. 16ಕ್ಕೆ ತಾ.ಪಂ. ಕೆಡಿಪಿ ಸಭೆ ಮುಂದೂಡಿಕೆ
ಚಾಮರಾಜನಗರ, ಮಾ. 12- ಚಾಮರಾಜನಗರ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಎಚ್.ವಿ. ಚಂದ್ರು ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 13ರಂದು ನಿಗದಿಯಾಗಿದ್ದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯು ಮಾರ್ಚ್ 16ಕ್ಕೆ ಮುಂದೂಡಲಾಗಿದೆ.ಮಾರ್ಚ್ 16ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಾಸಿಕ ಕೆಡಿಪಿ ಸಭೆ ನಡೆಯಲಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment