Monday, 5 June 2017

ಸುಳ್ಳು ಮಾಹಿತಿ ನೀಡಿ ಜಾತಿ ಪ್ರಮಾಣಪತ್ರ ಪಡೆದ ಉದ್ಯೋಗಿಗೆ ಸಜೆ,ಪರಿಸರ ಮಾಲಿನ್ಯಕ್ಕೆ ಕಡಿವಾಣ ಅಗತ್ಯ : ಜಿಲ್ಲಾಧಿಕಾರಿ ಬಿ. ರಾಮು 05-06-2017 )


ಸುಳ್ಳು ಮಾಹಿತಿ ನೀಡಿ ಜಾತಿ ಪ್ರಮಾಣಪತ್ರ ಪಡೆದ ಉದ್ಯೋಗಿಗೆ ಸಜೆ

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ, ಜೂ. 05 - ಸುಳ್ಳು ಮಾಹಿತಿ ನೀಡಿ ಜಾತಿ ಪ್ರಮಾಣ ಪತ್ರ ಪಡೆದು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಉದ್ಯೋಗ ಪಡೆದಿದ್ದ ವ್ಯಕ್ತಿಯೊಬ್ಬರಿಗೆ ಚಾಮರಾಜನಗರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಒಂದು ವರ್ಷ ಸಜೆ ಹಾಗೂ 2500 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಬೆಂಗಳೂರಿನ ಮಹಾನಗರಪಾಲಿಕೆಯ ಬನ್ನಿಪೇಟೆ ಶಾಖೆಯಲ್ಲಿ ಮೌಲ್ಯಮಾಪಕರಾಗಿದ್ದ ಕೆ. ಚಂದ್ರಶೇಖರ್ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಇವರು ಕೊಳ್ಳೇಗಾಲ ತಹಸೀಲ್ದಾರ್ ಕಚೇರಿಯಿಂದ ಕಳೆದ 1993ರ ಜೂನ್ 28ರಂದು ಪರಿಶಿಷ್ಟ ವರ್ಗದ ಕಣಿಯನ್ ಜಾತಿಗೆ ಸೇರಿರುವುದಾಗಿ ಸುಳ್ಳು ಮಾಹಿತಿ ನೀಡಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದರು. 1998ರ ಏಪ್ರಿಲ್ 15ರಂದು ಬೆಂಗಳೂರು ಮಹಾನಗರ ಪಾಲಿಕೆಗೆ ಜಾತಿ ಪ್ರಮಾಣಪತ್ರ ನೀಡಿ ಇದರ ಆಧಾರದ ಮೇಲೆ ಪ್ರಥಮ ದರ್ಜೆ ಗುಮಾಸ್ತ ಹುದ್ದೆಯಿಂದ ಮೌಲ್ಯಮಾಪಕರ ಹುದ್ದೆಗೆ ಮುಂಬಡ್ತಿ ಪಡೆದಿದ್ದರು.
ಕಣಿಯನ್ ಜಾತಿಗೆ ಸೇರಿಲ್ಲದೇ ಇದ್ದರು ಸಹ ಸರ್ಕಾರಕ್ಕೆ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗೆ ವಂಚಿಸಿ ಮೀಸಲಾತಿ ದುರ್ಬಳಕೆ ಮಾಡಿಕೊಂಡ ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಪ್ರಧಾನ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್. ಮಳವಳ್ಳಿ ಅವರು ಕೆ. ಚಂದ್ರಶೇಖರ್‍ಗೆ ಒಂದು ವರ್ಷ ಸಜೆ ಹಾಗೂ 2500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಟಿ.ಎಚ್. ಲೋಲಾಕ್ಷಿ ವಾದ ಮಂಡಿಸಿದ್ದರು.

ಪರಿಸರ ಮಾಲಿನ್ಯಕ್ಕೆ ಕಡಿವಾಣ ಅಗತ್ಯ : ಜಿಲ್ಲಾಧಿಕಾರಿ ಬಿ. ರಾಮು


ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ


ಚಾಮರಾಜನಗರ, ಜೂ. 05 :- ಜಗತ್ತಿನಲ್ಲಿ ದಿನೇದಿನೇ ಹೆಚ್ಚುತ್ತಿರುವ ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕದಿದ್ದರೆ ಮನುಕುಲ ಅಪಾಯದ ಅಂಚಿಗೆ ಸಿಲುಕಬೇಕಾದ ಪರಿಸ್ಥಿತಿಗೆ ತಲುಪಬಹುದೆಂದು ಜಿಲ್ಲಾಧಿಕಾರಿ ಬಿ.ರಾಮು ಅವರು ಅಭಿಪ್ರಾಯಪಟ್ಟರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ, ರಂಗತರಂಗ ಹಾಗೂ ರಂಗವಾಹಿನಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿದೆ. ಪರಿಸರ ಬಗೆಗಿನ ಕಾಳಜಿ ಹೊಂದದಿದ್ದರೆ ಅನಾಹುತಗಳನ್ನು ಎದುರಿಸುವ ಸಂದರ್ಭ ಬರಬಹುದು. ಹೀಗಾಗಿ ವ್ಯಾಪಕವಾಗಿ ಪರಿಸರ ಸಂರಕ್ಷಿಸಿ ಪೋಷಿಸುವ ಹೊಣೆಗಾರಿಕೆಯನ್ನು ವಹಿಸಬೇಕಿದೆ. ವಿಶೇಷವಾಗಿ ಮುಂದಿನ ಪೀಳಿಗೆಯ ಹಿತದೃಷ್ಠಿಯಿಂದ ಪರಿಸರ ಕಾಪಾಡುವ ಜಾಗೃತಿಯನ್ನು ಉಂಟುಮಾಡಬೇಕಿದೆ ಎಂದರು.
ಈ ಹಿಂದೆ ಪ್ರಕೃತಿ ಮಡಿಲಲ್ಲಿ ಬಾಲ್ಯ ಕಳೆಯುವ ಅವಕಾಶ ಲಭಿಸುತ್ತಿತ್ತು. ಪ್ರಸ್ತುತ ದಿನಗಳಲ್ಲಿ ಇಂತಹ ಸಂದರ್ಭಗಳಿಂದ ಮಕ್ಕಳು ದೂರವಾಗುತ್ತಿದ್ದಾರೆ. ಸಹಜ ಆಟಪಾಠಗಳಲ್ಲಿ ತೊಡಗಿಕೊಂಡು ಅವರದ್ದೇ ಆದ ಅನುಭವ ಹೊಂದುವ ಅವಕಾಶವನ್ನು ಪೋಷಕರು ನೀಡಬೇಕಿದೆ. ಪರಿಸರ ಬಗೆಗಿನ ಅರಿವನ್ನು ಬಾಲ್ಯದಲ್ಲಿಯೇ ಮೂಡಿಸಿದರೆ ಮುಂದಿನ ಭವಿಷ್ಯಕ್ಕೆ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ರಾಮು ಅನಿಸಿಕೆ ವ್ಯಕ್ತಪಡಿಸಿದರು.

ಗಿಡಮರಗಳನ್ನು ಅನವಶ್ಯಕವಾಗಿ ಕಡಿದುಹಾಕುವ ಧೋರಣೆ ತಪ್ಪಬೇಕು. ಅಗತ್ಯಕ್ಕೆ ಅನುಸಾರವಾಗಿ ಒಂದು ಮರ ಕಡಿದುಹಾಕಬೇಕಾದ ಅನಿವಾರ್ಯತೆ ಉಂಟಾದರೆ ಹತ್ತು ಸಸಿಗಳನ್ನು ನೆಟ್ಟು ಪೋಷಿಸುವ ಹೊಣೆಗಾರಿಕೆ ಇರಬೇಕು. ಉತ್ತಮ ಪರಿಸರ ನಿರ್ವಹಣೆಗೆ ನಾವೇನು ಕೊಡುಗೆ ನೀಡಿದ್ದೇವೆ ಎಂಬ ಚಿಂತನೆ ಮಾಡಬೇಕು. ಸಹಜ ಪರಿಸರ ಮೂಲಗಳ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು ಎಂದು ರಾಮು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಅಭಿವೃದ್ಧಿ ಚಿಂತನೆ ಕಲ್ಪನೆಗಳು ಬದಲಾಗುತ್ತಿವೆ. ಪ್ರಗತಿಗಾಗಿ ಪರಿಸರ ಹಾಳುಗೆಡವುದು ಸರಿಯಲ್ಲ. ಪ್ರಕೃತಿದತ್ತವಾದ ಪರಿಸರವನ್ನು ಸಂರಕ್ಷಿಸುವ ಮಹತ್ತರ ಕಾರ್ಯಕ್ಕೆ ಎಲ್ಲರ ಸಹಕಾರ ಸಹಭಾಗಿತ್ವ ಅಗತ್ಯವಾಗಿದೆ ಎಂದರು.
ಪರಿಸರ ಪೂರಕ ಅಭಿವೃದ್ಧಿ ಕಾರ್ಯಗಳನ್ನು ಜಿಲ್ಲಾ ಪಂಚಾಯತ್ ವತಿಯಿಂದಲೂ ಕೈಗೆತ್ತಿಕೊಳ್ಳಲಾಗುತ್ತಿದೆ. ಅರಣ್ಯ ಇಲಾಖೆ ಮೂಲಕ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಒಂದು ಲಕ್ಷ ಸಸಿಗಳನ್ನು ನೆಟ್ಟು ಪೋಷಿಸುವ ಕಾಮಗಾರಿಯನ್ನು ನಡೆಸಲಾಗುತ್ತದೆ ಎಂದು ಹರೀಶ್ ಕುಮಾರ್ ತಿಳಿಸಿದರು.
ಪರಿಸರ ದಿನ ಅಂಗವಾಗಿ ಶಾಲಾಮಕ್ಕಳಿಗೆ ಆಯೋಜಿಸಿದ್ದ ಚಿತ್ರಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್ ಮಾತನಾಡಿ  ಎಷ್ಟೇ ಆರ್ಥಿಕವಾಗಿ ಸದೃಢರಾಗಿದ್ದರೂ ಪ್ರಕೃತಿ ಪರಿಸರ ಸಂಪತ್ತನ್ನು ಖರೀದಿಸಲು ಸಾಧ್ಯವಿಲ್ಲ. ಪರಿಸರ ಕುರಿತು ಮಕ್ಕಳಿಗೆ ತಿಳಿವಳಿಕೆ ನೀಡಿ ಗಿಡಮರಗಳನ್ನು ಬೆಳೆಸಲು ಉತ್ತೇಜಿಸಬೇಕಿದೆ ಎಂದರು.
ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಎಂ.ಪಿ.ರಾಘವೇಂದ್ರ ಅವರು ಉಪನ್ಯಾಸ ನೀಡಿದರು.
ಹಿರಿಯ ಅರಣ್ಯ ಅಧಿಕಾರಿಗಳಾದ ಎಸ್.ಎಸ್. ಲಿಂಗರಾಜು, ನಾಗರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಡಾ. ಆನಂದ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ವಿ.ಎಂ. ರಾಮಚಂದ್ರ, ಜಿಲ್ಲಾ ಪರಿಸರ ಅಧಿಕಾರಿ ಬಿ.ಎಂ. ಪ್ರಕಾಶ್, ಸಿ.ಎಂ. ನರಸಿಂಹಮೂರ್ತಿ, ಕಲೆ ನಟರಾಜು, ಇತರು ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಡೆದ ಪರಿಸರ ಜಾಗೃತಿ ಜಾಥಾಗೆ ಚಾಮರಾಜೇಶ್ವರ ದೇವಾಲಯ ಬಳಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಚಾಲನೆ ನೀಡಿದರು. ಬಳಿಕ ಜಿಲ್ಲಾ ಆಡಳಿತ ಭವನದ ಆವರಣದಲ್ಲಿ ವಿವಿಧ ಬಗೆಯ ಸಸಿ ನೆಡುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಬಿ. ರಾಮು ಅವರು ಸ್ವತ: ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಜಿಲ್ಲಾ ಲಯನ್ಸ್ ಸಂಸ್ಥೆ ಅಧ್ಯಕ್ಷ ಹೊಸೂರು ಜಗದೀಶ್ ಸೇರಿದಂತೆ ಇತರೆ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಜೂ. 6ರಂದು ನಗರದಲ್ಲಿ ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ 

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ


ಚಾಮರಾಜನಗರ, ಜೂ. 05 :- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜೂನ್ 6ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಉದ್ಫಾಟಿಸುವರು. ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಗೌರವಾ
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ ಘನ ಉಪಸ್ಥಿತರಿರುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಎಸ್.ಜಯಣ್ಣ, ಆರ್. ನರೇಂದ್ರ, ಎಂ.ಸಿ. ಮೋಹನ್‍ಕುಮಾರಿ ಉರುಫ್ ಗೀತಾ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಮೈಸೂರು ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಪಿರಿಯಾಪಟ್ಟಣದ ಹಾರನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ನೀಗೂ ರಮೇಶ್ ಅವರು ಮುಖ್ಯ ಭಾಷಣ ಮಾಡುವರು. ತೆರಕಣಾಂಬಿಯ ಸಿದ್ದನಗೌಡ ಬಿ. ಪಾಟೀಲ್ ಅವರಿಂದ ವಚನ ಗಾಯನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮೊರಾರ್ಜಿ ವಸತಿಶಾಲೆ ಪ್ರವೇಶಕ್ಕೆ ಅಲ್ಪಸಂಖ್ಯಾತ ಸಮುದಾಯ ವಿದ್ಯಾರ್ಥಿಗಳಿಗೆ ಅವಕಾಶ

ಚಾಮರಾಜನಗರ, ಜೂ. 05 - ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಗುಂಡ್ಲುಪೇಟೆ ಪಟ್ಟಣದಲ್ಲಿ (ವೀರನಪುರ ಕ್ರಾಸ್) ನಿರ್ವಹಣೆಯಾಗುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 2017-18ನೇ ಸಾಲಿನ 6 ರಿಂದ 9ನೇ ತರಗತಿವರೆಗೆ ಉಚಿತವಾಗಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ.
ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಪಾರ್ಸಿ ಮತ್ತು ಸಿಖ್ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲಿ ಪ್ರವೇಶಕ್ಕೆ ಅವಕಾಶವಿದೆ.
ವಸತಿಶಾಲೆಯಲ್ಲಿ ವಿದ್ಯಾರ್ಥಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿ, ಊಟತಿಂಡಿ, ಸಮವಸ್ತ್ರ, ಪಠ್ಯಪುಸ್ತಕ, ಲೇಖನ ಸಾಮಗ್ರಿ, ವೈದ್ಯಕೀಯ ವೆಚ್ಚ ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.
ಅರ್ಹ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಜೂನ್ 15ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಪ್ರವೇಶ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ (ದೂ.ಸಂಖ್ಯೆ 08226-224380) ಹಾಗೂ ಗುಂಡ್ಲುಪೇಟೆ ಪಟ್ಟಣದ ವೀರನಪುರ ಕ್ರಾಸ್‍ನಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿಶಾಲೆಯ ಪ್ರಾಂಶುಪಾಲರನ್ನು (ಮೊ.9844560011) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಡಿಎಲ್‍ಇಡಿ, ಡಿಪಿಇಡಿ ಪರೀಕ್ಷೆ : ನಿಷೇದಾಜ್ಞೆ

ಚಾಮರಾಜನಗರ, ಜೂ. 05 :- ನಗರದ ನ್ಯಾಯಾಲಯ ರಸ್ತೆಯಲ್ಲಿರುವ ಶ್ರೀ ರಾಮಚಂದ್ರ ಡಿಇಡಿ ಕಾಲೇಜi ಕೇಂದ್ರದಲ್ಲಿ ಜೂನ್ 5 ರಿಂದ 12ರವರೆಗೆ ನಡೆಯಲಿರುವ ಡಿಎಲ್‍ಇಡಿ, ಡಿಪಿಇಡಿ ಪರೀಕ್ಷೆ ಹಿನ್ನೆಲೆಯಲ್ಲಿ ಕೇಂದ್ರದ 200 ಮೀಟರ್ ಸುತ್ತಲ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಬಿ.ರಾಮು ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಸಂದರ್ಭದಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಹಾಗೂ ಶಾಂತಿ ಸುವ್ಯವಸ್ಥೆಯಿಂದ ಪರೀಕ್ಷೆ ನಡೆಯಲು ಅನುವಾಗುವಂತೆ ಪರೀಕ್ಷಾ ದಿನಗಳಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೆ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 9 ರಿಂದ ಸಂಜೆ 5.30 ಗಂಟೆಯವರೆಗೆ ಮುಚ್ಚಲೂ ಸಹ ಆದೇಶಿಸಿದ್ದಾರೆ.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಸಿಬ್ಬಂದಿ ವರ್ಗದವರಿಗೆ ನಿಷೇಧ ಆದೇಶ ಅನ್ವಯವಾಗುವುದಿಲ್ಲವೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜೂ. 7ರಂದು ಆರ್ಚರಿ ಫೆನ್ಸಿಂಗ್ ಕ್ರೀಡಾಶಾಲೆ ಪ್ರವೇಶಕ್ಕೆ ಪರಿಶಿಷ್ಟ ಪಂಗಡದ ಕ್ರೀಡಾಪಟುಗಳ ಆಯ್ಕೆ
ಚಾಮರಾಜನಗರ, ಜೂ. 05 - 2017-18ನೇ ಸಾಲಿಗೆ 8ನೇ ತರಗತಿಗೆ ಸೇರ್ಪಡೆಯಾಗುವ ಪ್ರತಿಭಾವಂತ ಅರ್ಹ ಪರಿಶಿಷ್ಟ ಪಂಗಡದ ಕ್ರೀಡಾಪಟುಗಳನ್ನು ಸಂತೆಮರಹಳ್ಳಿಯ ಆರ್ಚರಿ ಮತ್ತು ಫೆನ್ಸಿಂಗ್ ಕ್ರೀಡಾಶಾಲೆ, ನಿಲಯಕ್ಕೆ ಆಯ್ಕೆ ಮಾಡಿಕೊಳ್ಳಲಾಗುವುದು.
ಆಯ್ಕೆ ಪ್ರಕ್ರಿಯೆಯು ಜೂನ್ 7 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆಯುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರನ್ನು (ದೂ.ಸಂ. 08226-224932, ಮೊಬೈಲ್ 9600168527) ಸಂಪರ್ಕಿಸುವಂತೆ  ಪ್ರಕಟಣೆ ತಿಳಿಸಿದೆ.

ಡಿಎಲ್‍ಇಡಿ, ಡಿಪಿಡಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ಜೂ. 05:- ಪ್ರಸಕ್ತ ಸಾಲಿನ ಡಿಎಲ್‍ಇಡಿ, ಡಿಪಿಇಡಿ ಕೋರ್ಸ್‍ನ ಪ್ರವೇಶಕ್ಕೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಕೆಗೆ ಜೂನ್ 18 ಕಡೆಯ ದಿನವಾಗಿದೆ. ವಿವರಗಳಿಗೆ ವೆಬ್ ಸೈಟ್ ತಿತಿತಿ.sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ನೋಡುವಂತೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐಟಿಐ ಪ್ರವೇಶಕ್ಕೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಚಾಮರಾಜನಗರ, ಜೂ. 05 - ಚಾಮರಾಜನಗರ ಮತ್ತು ಕೊಳ್ಳೇಗಾಲದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಲಭ್ಯವಿರುವ ವಿವಿಧ ವೃತ್ತಿ ತರಬೇತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಚಾಮರಾಜನಗರದ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಲೆಕ್ಟ್ರೀಷಿಯನ್ ಮತ್ತು ಫಿಟ್ಟರ್ ವಿಷಯಗಳಲ್ಲಿ ಸೀಟುಗಳು ಲಭ್ಯವಿದೆ. ಕೊಳ್ಳೇಗಾಲ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಸೀವಿಂಗ್ ಟೆಕ್ನಾಲಜಿ ವಿಷಯಗಳಲ್ಲಿ ಸೀಟುಗಳು ಲಭ್ಯವಿದೆ.
ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್ ವಿಷಯಕ್ಕೆ ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಪ್ರವೇಶ ಪಡೆಯಬಹುದು. ಸೀವಿಂಗ್ ಟೆಕ್ನಾಲಜಿ (ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ) ವಿಷಯಕ್ಕೆ 8ನೇ ತರಗತಿ ಉತ್ತೀರ್ಣ ಹಾಗೂ ಎಸ್ ಎಸ್ ಎಲ್ ಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಗೆ ಜೂನ್ 12 ಕಡೆಯ ದಿನವಾಗಿದೆ. ವಿವರಗಳಿಗೆ ವೆಬ್ ಸೈಟ್ ತಿತಿತಿ.emಠಿಣಡಿg.ಞಚಿಡಿ.ಟಿiಛಿ.iಟಿ ಮತ್ತು ವೆಬ್ ಸೈಟ್  ತಿತಿತಿ.ಜeಣಞಚಿಡಿಟಿಚಿಣಚಿಞಚಿ.oಡಿg.iಟಿ ನೋಡಬಹುದು. ಅಲ್ಲದೆ ಚಾಮರಾಜನಗರ ಮತ್ತು ಕೊಳ್ಳೇಗಾಲದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರನ್ನು (ದೂ.ಸಂ.08224-254936) ಸಂಪರ್ಕಿಸಿ ಮಾಹಿತಿ ಪಡೆಯಬಹುದೆಂದು ಪ್ರಕಟಣೆ ತಿಳಿಸಿದೆ.

ಜೂ. 19ರಂದು ನಗರದಲ್ಲಿ ವಿಶೇಷಚೇತನರ ಕುಂದುಕೊರತೆ ಸಭೆ

ಚಾಮರಾಜನಗರ, ಜೂ. 05:- ತಾಲೂಕಿನ ವಿಶೇಷಚೇತನರ ಕುಂದುಕೊರತೆಗಳನ್ನು ಆಲಿಸುವ ಸಲುವಾಗಿ ಜೂನ್ 19ರಂದು ಮಧ್ಯಾಹ್ನ 3 ಗಂಟೆಗೆ ನಗರದ ತಾಲೂಕು ಕಚೇರಿಯಲ್ಲಿ ಕುಂದುಕೊರತೆ ಸಭೆ ನಡೆಯಲಿದೆ.
ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ನೇರವಾಗಿ ಅರ್ಜಿಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ರಾಜೇಶ್ ಅವರ ಮೊ.ಸಂ. 8105720709 ಅಥವಾ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಸಂಖ್ಯೆ 08226-222603 ಅಥವಾ 223688 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು