ಇನ್ನೂ 53 ಕೋಟಿ ರೂ ವೆಚ್ಚದಲ್ಲಿ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ : ಉಸ್ತುವಾರಿ ಸಚಿವ ಯು.ಟಿ.ಖಾದರ್
ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಉಸ್ತುವಾರಿ ಸಚಿವರು ಕ್ಷೇತ್ರದಲ್ಲಿ ಈಗಾಗಲೇ 48 ಕೋಟಿ ರೂ.ವೆಚ್ಚದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಈ ಪೈಕಿ ಕೆಲವು ಪೂರ್ಣಗೊಂಡು ಭಕ್ತಾಧಿಗಳ ಸೇವೆಗೆ ಸಮರ್ಪಿಸಲಾಗಿದೆ. ಇನ್ನೂ ಕೆಲವು ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ ಎಂದರು.
ದೀಪದ ಗಿರಿ ಒಡ್ಡುವಿನ 42 ಎಕರೆ ವಿಸ್ತಾರ ಪ್ರದೇಶದಲ್ಲಿ ಮಹದೇಶ್ವರ ಸ್ವಾಮಿಯ 101 ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು 21ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಇದಕ್ಕಾಗಿ ಅಗತ್ಯವಿರುವ ಸ್ಥಳ ಲಭ್ಯವಿದೆ ಪೀಠದ ಒಳಗೆ ಹಾಗೂ ಸುತ್ತಲೂ ವಿದ್ಯುದೀಕರಣದ ಜೊತೆ ಸೌಂದರ್ಯ ವೃದ್ಧಿಸಲು ಉದ್ಯಾನವನವನ್ನೂ ಸಹ ನಿರ್ಮಾಣ ಮಾಡಲಾಗುತ್ತದೆ ಎಂದರು.
ಭಕ್ತಾಧಿಗಳ ವಾಸ್ತವ್ಯಕ್ಕಾಗಿ 512 ಕೊಠಡಿಗಳ ಅತಿಥಿಗೃಹದ ನಿರ್ಮಾಣ ಕಾಮಗಾರಿಯನ್ನು 2390.00 ಲಕ್ಷ ರೂಗಳ ವೆಚ್ಚದಲ್ಲಿ ಕೈಗೊಳ್ಳಲಾಗಿದೆ, 30ಜನರು ತಂಗ ಬಹುದಾದ ಡಾರ್ಮಿಟರಿ ನಿರ್ಮಾಣ ಕೆಲಸವು 486.00 ಲಕ್ಷ ರೂ ವೆಚ್ಚದಲ್ಲಿ ಪ್ರಗತಿಯಲ್ಲಿದೆ. ರಂಗ ಮಂದಿರ ಮುಂಭಾಗ ಜಿ.ಎ ಶೀಟ್ ಅಳವಡಿಕೆ ಕಾಮಗಾರಿಯನ್ನು 476.00 ಲಕ್ಷದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ರಂಗ ಮಂದಿರ ಮಧ್ಯದಲ್ಲಿ ಯಾವುದೇ ಕಂಬವು ಅಡ್ಡ ಬರದೇ ಇರುವ ರೀತಿಯಲ್ಲಿ ನಿರ್ಮಿಸಲಾಗುತ್ತದೆ ಇದೂ ಸಹ ಹೆಚ್ಚು ಸಂಖ್ಯೆಯಲ್ಲಿ ಭಕ್ತಾಧಿಗಳು ಬಂದ ಸಂದರ್ಭದಲ್ಲಿ ಅನುಕೂಲವಾಗುತ್ತದೆ ಎಂದರು.
ಅಂತರಗಂಗೆ ಸಮೀಪ ಶುದ್ಧ ನೀರಿನ ಕಲ್ಯಾಣಿಯನ್ನು 427.60 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು ಕಾಮಗಾರಿ ಬರದಿಂದ ಸಾಗಿದೆ. ವಾಣಿಜ್ಯ ಸಂಕೀರ್ಣದ ಬಳಿ 215.00 ಲಕ್ಷ ರೂ ವೆಚ್ಚದಲ್ಲಿ ಹೈಟೆಕ್ ಉಪಹಾರ ಗೃಹ ನಿರ್ಮಾಣ ಮಾಡಲಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಅಲ್ಲದೆ 45 ಲಕ್ಷ ರೂ ವೆಚ್ಚದಲ್ಲು ಸುಸಜ್ಜಿತ ಮಾಹಿತಿ ಕೇಂದ್ರವನ್ನು ಸಹ ನಿರ್ಮಾಣ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಕ್ಷೇತ್ರದಲ್ಲಿ ಒಳಚರಂಡಿ ಯೋಜನೆಯನ್ನು 27.10 ಕೋಟಿ ರೂ ವೆಚ್ಚದಲ್ಲಿ ಕೈಗೊಳ್ಳಲು ತೀರ್ಮಾನಿಸಿದ್ದು ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಒತ್ತು ನೀಡಲಾಗಿದೆ ಕೆಲ ದಿನಗಳ ಹಿಂದೆ ನೀರಿಗೆ ತೀವ್ರ ತೊಂದರೆಯಾಗಿತ್ತು ಇದನ್ನು ಮನಗಂಡು ಕೊಳವೆ ಬಾವಿ ಕೊರೆಸಿ ನೀರಿನ ಸೌಕರ್ಯ ಕಲ್ಪಿಸಲಾಯಿತು. ಶಾಶ್ವತ ಕುಡಿಯುವ ನೀರಿನ ಸೌಲಭ್ಯಕ್ಕೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಶಾಸಕರಾದ ಆರ್.ನರೇಂದ್ರ ಮಾತನಾಡಿ ಕೊಳ್ಳೇಗಾಲದಿಂದ ಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯು ನಡೆಯಲಿದೆ ಹನೂರಿನಿಂದ ಬೆಟ್ಟಕ್ಕೆ ಸಾಗುವ ರಸ್ತೆಯು ಹೆದ್ದಾರಿಯಾಗಿ ಉನ್ನತೀಕರಣ ಗೊಳ್ಳುತ್ತಿದ್ದು, ಭಕ್ತಾಧಿಗಳಿಗೆ ಕ್ಷೇತ್ರಕ್ಕೆ ಹೋಗಿಬರಲು ಅನುಕೂಲವಾಗಲಿದೆ ಎಂದರು.
ಸಾಲೂರು ಬೃಹನ್ಮಠಾಧ್ಯಕ್ಷರಾದ ಪಟ್ಟದ ಗುರುಸ್ವಾಮಿ, ಜಿಲ್ಲಾ ಪಂಚಾಯತ್ ಉಪಧ್ಯಕ್ಷರಾದ ಬಸವರಾಜು, ಪ್ರಾಧಿಕಾರದ ಕಾರ್ಯದರ್ಶಿ ಕೆ.ಎಂ.ಗಾಯತ್ರಿ ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಮಾದಪ್ಪನ ಸನ್ನಿಧಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ 43 ಜೋಡಿಗಳು.
ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ :ಜೂನ್.11 : ಕೊಳ್ಳೇಗಾಲ ತಾಲ್ಲೂಕಿನ ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು ನಡೆದ ಸಾಮೂಹಿಕ ವಿವಾಹದಲ್ಲಿ 43 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಹದೇಶ್ವರ ಸ್ವಾಮಿ ದೇವಾಲಯದ ಬಳಿ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಜಿಲ್ಲೆಯೂ ಸೇರಿದಂತೆ ವಿವಿಧ ಬಾಗಗಳಿಗೆ ಸೇರಿದ 43 ವಧುವರರು ವಿವಾಹವಾದರು.
ದೇವಾಲಯ ವತಿಯಿಂದಲೇ ವಧುವಿಗೆ ಸೀರೆ, ರವಿಕೆ, ಮಾಂಗಲ್ಯ ವರನಿಗೆ ಪಂಚೆ, ಶರ್ಟ್, ಶಲ್ಯ ನೀಡಲಾಗಿತ್ತು. ವಿವಾಹ ಕಾರ್ಯಕ್ರಮದ ಆರಂಭದಲ್ಲಿಯೇ ಆಹಾರ ನಾಗರಿಕ ಸರಬರಾಜು ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್, ಶಾಸಕರಾದ ಆರ್.ನರೇಂದ್ರ ಸಾಲೂರು ಬೃಹನ್ಮಠಾಧ್ಯಕ್ಷರಾದ ಪಟ್ಟದ ಗುರುಸ್ವಾಮಿ ಸಮ್ಮುಖದಲ್ಲಿ ಮಾಂಗಲ್ಯ ವಿತರಣೆ ಮಾಡಲಾಯಿತು. ಬಳಿಕ ಸರಿಯಾದ ಮಹೂರ್ತದಲ್ಲಿ ಸಾಮೂಹಿಕ ವಿವಾಹ ಸಾಂಗವಾಗಿ ನೆರವೇರಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ಪವಿತ್ರ ಕ್ಷೇತ್ರದಲ್ಲಿ ಸರಳ ಸಾಮೂಹಿಕ ವಿವಾಹದಲ್ಲಿ ನವ ಜೋಡಿಗಳು ಹೊಸ ಜೀವನಕ್ಕೆ ಕಾಲಿರಿಸುತ್ತಿರುವುದು ಸಂತೋಷದ ಸಂಗತಿಯೆಂದೇ ಭಾವಿಸಬೇಕು. ಜೀವನದಲ್ಲಿ ಬರುವ ಎಲ್ಲಾ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸಿ ಸಹಬಾಳ್ವೆ ನಡೆಸಬೇಕೆಂದು ಹಾರೈಸಿದರು.
ಜೀವನದಲ್ಲಿ ನೆಮ್ಮದಿಯ ಬದುಕು ಕಾಣಬೇಕು. ಹಣವಿದ್ದರೆ ಮಾತ್ರ ಸಂತೋಷದಿಂದ ಇರಬಹುದೆಂಬ ಕಲ್ಪನೆ ಇಟ್ಟಕೊಳ್ಳಬಾರದು. ಸ್ವಾಭಿಮಾನ ಆತ್ಮ ಸ್ಥೈರ್ಯದಿಂದ ಬದುಕು ಎದುರಿಸಬೇಕು ಆಗ ಮಾತ್ರ ಜೀವನದ ಸಾರ್ಥಕತೆ ಕಂಡುಕೊಳ್ಳಬಹುದು. ನೂತನ ಜೋಡಿಗಳು ಈ ವಿಚಾರಧಾರೆಯನ್ನು ಅರ್ಥೈಸಿಕೊಂಡು ಮುಂದಿನ ಭವಿಷ್ಯವನ್ನು ಸುಗಮಗೊಳಿಸಿಕೊಳ್ಳಬೇಕೆಂದು ಯು.ಟಿ.ಖಾದರ್ ರವರು ಸಲಹೆ ಮಾಡಿದರು.
ಶ್ರೀ ಕ್ಷೇತ್ರಕ್ಕೆ ಹೆಚ್ಚು ಭಕ್ತಾಧಿಗಳು, ಬೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಅಗತ್ಯಕ್ಕೆ ತ್ಕಕಂತೆ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ ಸ್ವಚ್ಛತೆ ಹಾಗೂ ಇತರ ವಿಷಯಗಳಿಗೆ ಆದ್ಯತೆ ನೀಡಿ ರಾಜ್ಯದಲ್ಲಿಯೇ ಪಾವಿತ್ರೆ ಕೇಂದ್ರವನ್ನಾಗಿ ಮಹದೇಶ್ವರ ಬೆಟ್ಟವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಖಾದರ್ ರವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಆರ್,ನರೇಂದ್ರ ರವರು ಮಹದೇಶ್ವರ ಸನ್ನಿಧಿಯಲ್ಲಿ ಕಳೆದ 30 ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ. ಬಡವರು ಆರ್ಥಿಕವಾಗಿ ದುರ್ಬಲರಾದವರು, ಮಕ್ಕಳ ವಿವಾಹಕ್ಕಾಗಿ ಸಾಲ ಮಾಡಿ ಸಂಕಷ್ಟ ಪಡುವುದನ್ನು ನೋಡಿದ್ದೇವೆ. ಆಡಂಬರಕ್ಕೆ ಮೊರೆ ಹೋಗುವುದಕ್ಕಿಂತ ಸರಳ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡುವುದರಿಂದ ಜನರ ತೊಂದರೆ ನೀಗಲಿದೆ ಎಂಬ ಸದುದ್ದೇಶದಿಂದ ಸಾಮೂಹಿಕ ವಿವಾಹವನ್ನು ಪ್ರತಿ ವರ್ಷ ಏರ್ಪಡಿಸಲಾಗುತ್ತಿದೆ ಎಂದರು.
ವೈವಾಹಿಕ ಜೀವನಕ್ಕೆ ಕಾಲಿರಿಸುತ್ತಿರುವ ಶುಭ ಸಂದರ್ಭದಲ್ಲಿ ಯುವಕರು ದುಶ್ಚಟಗಳಿಂದ ದೂರವಿರುವ ಸಂಕಲ್ಪ ಮಾಡಬೇಕು, ಅದೇ ರೀತಿ ಮದುವೆಯಾಗಿ ಪತಿಯ ಮನೆ ಸೇರುವ ಹೆಣ್ಣು ಮಕ್ಕಳೂ ಸಹ ಹಿರಿಯರಿಗೆ ಗೌರವ, ಮನ್ನಣೆ ನೀಡಿ ಎಲ್ಲರಿಗೂ ಮಾದರಿಯಾಗಬೇಕೆಂದು ನರೇಂದ್ರ ಸಲಹೆ ಮಾಡಿದರು.
ಸಾಲೂರು ಬೃಹನ್ಮಠಾಧ್ಯಕ್ಷರಾದ ಪಟ್ಟದ ಗುರುಸ್ವಾಮಿ ಅವರು ಆಶೀರ್ವಚನ ನೀಡಿದರು. ಮಲೆ ಮಹದೇಶ್ವರಸ್ವಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕೆ.ಎಂ.ಗಾಯತ್ರಿ ಪ್ರಾಸ್ತಾವಿಕ ನುಡಿಗಳನ್ನ ಆಡುವ ಜೊತೆಯಲ್ಲಿಯೇ ಗಣ್ಯರನ್ನು ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್.ಬಸವರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ರಾಜು, ಉಪಾಧ್ಯಕ್ಷರಾದ ಲತಾ ರಾಜಣ್ಣ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಹಲಗತಮ್ಮಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರುಕ್ಮಿಣಿ, ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿ ಖಾನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಹರೀಶ್ ಕುಮಾರ್, ತಹಸಿಲ್ದಾರ್ ಕಾಮಾಕ್ಷಮ್ಮ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎ.ದರ್ಶನ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನ್ಯಾಯ ಬೆಲೆ ಅಂಗಡಿ ಪರವಾನಗಿ : ಎಸ್.ಎಸ್.ಎಲ್.ಸಿ ಕಡ್ಡಾಯ ಆದೇಶ ಹಿಂದಕ್ಕೆ
ಚಾಮರಾಜನಗರ :ಜೂನ್.11 : ನ್ಯಾಯ ಬೆಲೆ ಅಂಗಡಿ ಪರವಾನಗಿ ಹೊಂದಲು ಎಸ್.ಎಸ್.ಎಲ್.ಸಿ ಕಡ್ಡಾಯವಾಗಿ ತೇರ್ಗಡೆಯಾಗಿರಬೇಕೆಂಬ ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆದಿದೆ ಎಂದು ಆಹಾರ ನಾಗರಿಕ ಸರಬರಾಜು ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ತಿಳಿಸಿದರು.ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಚಿವರು ನ್ಯಾಯ ಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಸೇರಿದಂತೆ ಇತರೆ ನಿರ್ವಹಣೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನ್ಯಾಯಬೆಲೆ ಅಂಗಡಿ ಪರವಾನಗಿ ಹೊಂದುವವರು ಕಡ್ಡಾಯವಾಗಿ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿರಲೇ ಬೇಕೆಂಬ ಆದೇಶವನ್ನು ಹೊರಡಿಸಲಾಗಿತ್ತು. ಆದರೆ ಈ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದರು.
65ವರ್ಷ ಮೇಲ್ಪಟ್ಟವರಿಗೆ ನ್ಯಾಯ ಬೆಲೆ ಅಂಗಡಿ, ಸೀಮೆಎಣ್ಣೆ ವಿತರಣೆ ಪರವಾನಗಿಯನ್ನು ಹಿಂಪಡೆಯಬೇಕೆಂದು ಹೊರಡಿಸಲಾಗಿದ್ದ ಆದೇಶವನ್ನೂ ಸಹ ಹಿಂದಕ್ಕೆ ಪಡೆಯಲಾಗಿದೆ ಎಂದು ಸಚಿವರು ತಿಳಿಸಿದರು
No comments:
Post a Comment