Saturday, 24 June 2017

ನೇರ ಫೋನ್ ಇನ್ ಕಾರ್ಯಕ್ರಮ : 32 ದೂರುಗಳು ದಾಖಲು (24-06-2017)


ನೇರ ಫೋನ್ ಇನ್ ಕಾರ್ಯಕ್ರಮ : 32 ದೂರುಗಳು ದಾಖಲು


ಎಸ್.ವೀರಭದ್ರಸ್ವಾಮಿ



ಚಾಮರಾಜನಗರ, ಜೂ. 24 - ನಾಗರಿಕರ ಅಹವಾಲುಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಇಂದು ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 32 ದೂರುಗಳು ದಾಖಲಾದವು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ ಅವರ ಸಮ್ಮುಖದಲ್ಲಿ ನಡೆದ ಒಂದು ತಾಸಿನ ಕಾರ್ಯಕ್ರಮದಲ್ಲಿ ನಿರಂತರವಾಗಿ ಸಮಸ್ಯೆಗಳು, ದೂರುಗಳು ಜಿಲ್ಲೆಯ ವಿವಿಧ ಭಾಗಗಳಿಂದ ಕೇಳಿಬಂದವು.
ಚಾಮರಾಜನಗರ ಪಟ್ಟಣ ಸೇರಿದಂತೆ ಜಿಲ್ಲೆಯ ಕೆಲ ಭಾಗಗಳಿಂದ ಸ್ವಚ್ಚತೆ ಕೆಲಸ ಸಮರ್ಪಕವಾಗಿ ನಿರ್ವಹಿಸಬೇಕು, ಸೊಳ್ಳೆಗಳ ಹಾವಳಿ ನಿಯಂತ್ರಿಸಬೇಕೆಂಬ ಮನವಿಗಳು ಸಹ ಕೇಳಿಬಂದವು.
ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು ಎಂದು ಯಳಂದೂರು ಹಾಗೂ ಚಾಮರಾಜನಗರ ನಾಗರಿಕರು ಜಿಲ್ಲಾಧಿಕಾರಿಯವರಿಗೆ ಕೇಳಿಕೊಂಡರು. ನಗರದಲ್ಲಿ ಕೆಲವೆಡೆ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಲಾಗುತ್ತಿದೆ. ಆದರೆ ಕೆಲವು ಪ್ರದೇಶಗಳಲ್ಲಿ ಮಾಡಲಾಗುತ್ತಿಲ್ಲ, ಫಾಗಿಂಗ್ ಸಮಯವನ್ನು ಸಹ ನಿಗದಿ ಮಾಡಬೇಕು ಎಂಬ ಸಲಹೆ ಕೇಳಿಬಂದವು.
ಕುಡಿಯುವ ನೀರು, ಚರಂಡಿ ಸ್ವಚ್ಚತೆ ಮಾಡಬೇಕೆಂದು ಕೆಲವು ಭಾಗದಿಂದ ನಾಗರಿಕರು ಗಮನ ಸೆಳೆದರು.
ಕೌದಳ್ಳಿ ಭಾಗದ ನಾಗರಿಕರೊಬ್ಬರು ಕರೆ ಮಾಡಿ ಪರಿಶಿಷ್ಟ ವರ್ಗಕ್ಕೆ ಸೇರಿದ್ದೇವೆಂದು ಸ್ಥಳೀಯರೊಬ್ಬರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಗಂಗಾಕಲ್ಯಾಣ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ಗಂಭೀರ ದೂರು ಸಲ್ಲಿಸಿದರು.
ಸರ್ಕಾರಿ ಜಮೀನು ಒತ್ತುವರಿ ತೆರವು, ಬಸ್ ಸೌಲಭ್ಯ ಸೇರಿದಂತೆ ಇತರೆ ವಿಷಯಗಳನ್ನು ಪ್ರಸ್ತಾಪಿಸಿದ ನಾಗರಿಕರು ಅಗತ್ಯ ಕ್ರಮ ತೆಗೆದುಕೊಂಡು ಸಮಸ್ಯೆ ಪರಿಹರಿಸುವಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಬಿ. ರಾಮು ಅವರು ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಚತೆ ಕೆಲಸವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕು. ಜನರ ಆರೋಗ್ಯ ಕಾಳಜಿಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಯಾವುದೇ ಅನಾಹುತವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಗಂಭೀರ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಳೆ ನಿರೀಕ್ಷಿತ ಸಮಯದಲ್ಲಿ ಬಾರದೇ ಇದ್ದಲ್ಲಿ ಮತ್ತಷ್ಟು ಆರೋಗ್ಯ ಜಾಗೃತಿ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಬೇಕಾಗುತ್ತದೆ. ಚರಂಡಿ ಸ್ವಚ್ಚತೆ, ಸೊಳ್ಳೆಗಳ ಸಂಪೂರ್ಣ ನಿಯಂತ್ರಣಕ್ಕೆ ವ್ಯಾಪಕವಾಗಿ ಕಾರ್ಯ ನಿರ್ವಹಿಸಬೇಕು. ಸ್ವಚ್ಚತೆ ಕೆಲಸಕ್ಕೆ ಹೆಚ್ಚು ಜನರನ್ನು ನಿಯೋಜಿಸಿ ಯಾವುದೇ ತೊಂದರೆಯಾಗದಂತೆ ನೈರ್ಮಲ್ಯ ಕೆಲಸಗಳನ್ನು ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬಸ್, ಸರ್ಕಾರಿ ಜಮೀನು ಒತ್ತುವರಿ ಸಂಬಂಧ ಕೇಳಿ ಬಂದಿರುವ ದೂರುಗಳಿಗೆ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ ವರದಿ ನೀಡಬೇಕು. ನಾಗರಿಕರ ದೂರುಗಳಿಗೆ ಪರಿಹಾರ ಸಿಗಬೇಕು. ಮುಂದಿನ ಫೋನ್ ಇನ್ ಕಾರ್ಯಕ್ರಮದ ವೇಳೆಗೆ ಈ ಹಿಂದಿನ ಎಲ್ಲಾ ಸಮಸ್ಯೆ ದೂರುಗಳು ಇತ್ಯರ್ಥವಾಗಬೇಕು ಎಂದು ಜಿಲ್ಲಾಧಿಕಾರಿ ರಾಮು ತಾಕೀತು ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ನಗರದಲ್ಲಿ ನಡೆದ ಆರೋಗ್ಯ ಜಾಗೃತಿ ಕಾರ್ಯಕ್ರಮ


ಎಸ್.ವೀರಭದ್ರಸ್ವಾಮಿ

ಚಾಮರಾಜನಗರ, ಜೂ. 24 - ಜಿಲ್ಲೆಯಲ್ಲಿ ಜ್ವರ ಸಂಬಂಧಿ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪಕವಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ಅಂಗವಾಗಿ ನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಶುಕ್ರವಾರ ನಡೆಸಲಾಯಿತು.
ಮೊದಲಿಗೆ ಡೆಂಗ್ಯು ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವ ವಿಷಯದ ಬಗ್ಗೆ ಭಿತ್ತಿಫಲಕಗಳನ್ನು ಹಿಡಿದು ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿದರು.
ತದನಂತರ ಸಿದ್ದಾರ್ಥ ಕಾಲೇಜಿನ ಆವರಣದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಜನರಿಗೆ ಸಾಂಕ್ರಾಮಿಕ ರೋಗಗಳು ಹರಡುವ ವಿಧಾನ ಅದನ್ನು ತಡೆಗಟ್ಟುವ ಕ್ರಮ ಹಾಗೂ ಜನರ ಸಹಕಾರದ ಬಗ್ಗೆ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಸಲಹೆ ಮಾಡಿದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಎಂ. ಅನಿಲ್ ಕುಮಾರ್ ಮಾತನಾಡಿ ಸೊಳ್ಳೆಗಳಿಂದ ರೋಗ ಹರಡುವಿಕೆಗೆ ಕಾರಣವಾಗುತ್ತಿದೆ. ಹೀಗಾಗಿ ನಾಗರಿಕರು ಸೊಳ್ಳೆಗಳ ಉತ್ಪತ್ತಿ ತಾಣಗಳು ಮನೆಯ ಪರಿಸರ ಸುತ್ತಮುತ್ತಲ ಇರದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳಿಂದ ರಕ್ಷಿಸಕೊಳ್ಳÀಲು ಇರುವ ವಿಧಾನಗಳನ್ನು ಅನುಸರಿಸಬೇಕು ಎಂದರು.
ಅನುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಗಳಲ್ಲಿಯೂ ಸಹ ಬಹಳ ದಿನಗಳ ಕಾಲ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸಬೇಕು. ಬಹುಕಾಲ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹೀಗಾಗಿ ಆಗಾಗ್ಗೆ ನೀರು ಖಾಲಿ ಮಾಡಿ ಒಣಗಿದ ಬಳಿಕ ಪುನ: ನೀರು ಸಂಗ್ರಹ ಮಾಡುವುದರಿಂದ ಸೊಳ್ಳೆಗಳ ತಾಣವನ್ನು ನಿರ್ಮೂಲನೆ ಮಾಡಬಹುದು ಎಂದು ಅನಿಲ್ ಕುಮಾರ್ ಸಲಹೆ ಮಾಡಿದರು.
ಜಿಲ್ಲಾ ಕಣ್ಗಾವಲು ಘಟಕದ ಅಧಿಕಾರಿ ಡಾ. ಎಂ. ನಾಗರಾಜು ಮಾತನಾಡಿ ನಾಗರಿಕರು ವೈಯುಕ್ತಿಕ ಸ್ವಚ್ಚತೆಗೂ ಗಮನ ಕೊಡಬೇಕು. ಆರೋಗ್ಯ ಪೂರಕ ಕ್ರಮಗಳಿಗೆ ಆದ್ಯತೆ ನೀಡಬೇಕು. ಜ್ವರ ಬಂದಾಗ ಹತ್ತಿರದ ಆಸ್ಪತ್ರೆಗೆ ಭೇಟಿ ಕೊಟ್ಟು ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿ ನಾಗರಿಕರ ಸೇವೆಗೆ ಸಿದ್ಧರಿದ್ದಾರೆ. ಯಾವುದೇ ತೊಂದರೆ ಇದ್ದರೂ ವೈದ್ಯರನ್ನು ಸಂಪರ್ಕಿಸಿ ಪರಿಹಾರ ಪಡೆದುಕೊಳ್ಳಬೇಕೆಂದರು.
ವೈದ್ಯಾಧಿಕಾರಿ ಡಾ. ಮಮತ, ಕಾಲೇಜು ಪ್ರಾಂಶುಪಾಲರು, ಬೋಧಕರು, ಇತರೆ ಸಿಬ್ಬಂದಿ ಆರೋಗ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು