ಚಾ.ನಗರ ನಗರಸಭಾ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು
ಎಸ್.ವಿ.ಎಸ್.
ಚಾಮರಾಜನಗರ,ಜೂ.22-ನಗರಸಭಾ ಮಾಜಿ ಅಧ್ಯಕ್ಷೆ ರೇಣುಕಾ ಅವರು ನಗರಸಭಾ ಆಯುಕ್ತ ರಾಜಣ್ಣ ಅವರ ವಿರುದ್ಧ ಭ್ರಷ್ಟಾಚಾರ ಹಾಗೂ ಕರ್ತವ್ಯ ಲೋಪದಡಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.ಏಪ್ರಿಲ್ 3 ರಿಂದ 26 ರವರೆಗೆ ನಗರಸಭಾ ಅಧ್ಯಕ್ಷರು ಇಲ್ಲದಿರುವ ಸಮಯದಲ್ಲಿ 1.25 ಕೋಟಿ ಮೊತ್ತದ ಬಿಲ್ ಗಳನ್ನು ಸ್ವ ನಿರ್ಧಾರದ ಮೇಲೆ ಪಾವತಿ ಮಾಡಿಕೊಂಡಿದ್ದಾರೆ. ಸಂಬಂಧಪಟ್ಟ ಕಡತಗಳಿಗೆ ಆಡಳಿತಾಧಿಕಾರಿಯಾದ ಜಿಲ್ಲಾಧಿಕಾರಿ ಅವರ ಸಹಿ ಇಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಯುಕ್ತರು ರಾಜಣ್ಣ, ನನಗೆ ಅದರ ಬಗ್ಗೆ ಗೊತ್ತಿಲ್ಲ ತನಿಖೆ ಎದುರಿಸಲು ಸಿದ್ಧ ಎಂದಿದ್ದಾರೆ.
*************************************************************
ಕ್ರೈಂ ಡಿಟೇಲ್ಸ್
ಎಸ್.ವಿ.ಎಸ್.
ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್: ಓರ್ವನ ಬಂಧನರಾಜ್ಯ, (ಚಾಮರಾಜನಗರ) ಜೂ.22: ಫೇಸ್ ಬುಕ್ ನಲ್ಲಿ ವ್ಯಕ್ತಿಯೋರ್ವ ಹಾಕಿದ್ದ ಅವಹೇಳನಕಾರಿ ಪೋಸ್ಟ್ ನಿಂದಾಗಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ನಾಗೇಶ್ ಎಂಬಾತನೇ ಆರೋಪಿ. ಫೇಸ್ ಬುಕ್ ನಲ್ಲಿ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ ಹಿನ್ನೆಲೆ ವ್ಯಕ್ತಿ ಜೈಲು ಪಾಲಾಗಿದ್ದಾನೆ.
ಚಾಮರಾಜನಗರ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್ ಪೆಕ್ಟರ್ ಮಹದೇವಯ್ಯ ಅವರು ಎಸ್ಪಿ ಅವರ ಆದೇಶದ ಮೇರೆಗೆ ಬಂಧಿಸಿದ್ದಾರೆ.
ದರೋಡೆ ಪ್ರಕರಣ: ಓರ್ವನ ಬಂಧನ
ಎಸ್.ವಿ.ಎಸ್.
ಎಸ್.ವಿ.ಎಸ್.
ರಾಜ್ಯ, (ಚಾಮರಾಜನಗರ) ಜೂ.22: ಯುವತಿಯೋರ್ವಳನ್ನು ಅಡ್ಡಗಟ್ಟಿ ಮೊಬೈಲ್ ಕಸಿದು ಪರಾರಿಯಾಗಿದ್ದವನನ್ನು ಸಂತೆಮರಳ್ಳಿ ಪೊಲೀಸರು ಬಂಧಿಸಿದ್ದಾರೆ.ಮೇಗಲಹುಂಡಿಯಿಂದ ಸಪ್ಪಯ್ಯನಪುರ ಗ್ರಾಮಕ್ಕೆ ಹೋಗುವ ಮಾರ್ಗಮಧ್ಯೆ ಯುವತಿಯನ್ನು ಅಡ್ಡ ಹಾಕಿ ಮೊಬೈಲ್ ಕಸಿದು ಪರಾರಿಯಾಗಿದ್ದನು. ಈ ಪ್ರಕರಣ ಕಳೆದ ತಿಂಗಳ 30 ರಂದು ನಡೆದಿದ್ದು, ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಇನ್ಸ್ ಪೆಕ್ಟರ್ ರಾಜೇಂದ್ರ ಅವರು ಆರೋಪಿಗಾಗಿ ವ್ಯಾಪಕ ಜಾಲ ಬೀಸಿದ್ದರು. ಇದೀಗ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಸಬ್ ಇನ್ಸ್ ಪೆಕ್ಟರ್ ಬಸವರಾಜು, ಪೊಲೀಸ್ ಪೇದೆ ಬಾಬು ಸೇರಿದಂತೆ ತಂಡವು ಶ್ರಮವಹಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾಗಿದ್ದ ವಾಹನವೂ ಸಹ ಕಳ್ಳತನದ್ದಾಗಿದ್ದು, ಈಗ ಎರಡು ಬೈಕ್ ಮತ್ತು ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ.
******************************************************************************
ಜೂ. 24ರಂದು ನೇರ ಫೋನ್ ಇನ್ ಕಾರ್ಯಕ್ರಮ
ಚಾಮರಾಜನಗರ, ಜೂ. 22 - ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ನೇರ ಫೋನ್ ಇನ್ ಕಾರ್ಯಕ್ರಮವನ್ನು ಜೂನ್ 24ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ನಾಗರಿಕರು ತಮ್ಮ ಕುಂದುಕೊರತೆಗಳಿದ್ದಲ್ಲಿ ದೂ.ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸೆ. 25ರೊಳಗೆ ವಾರ್ಷಿಕ ಮಹಾಸಭೆ ನಡೆಸಲು ಸಹಕಾರ ಸಂಘಗಳಿಗೆ ಸೂಚನೆ
ಚಾಮರಾಜನಗರ, ಜೂ. 22 – ನಗರ ಉಪವಿಭಾಗದಲ್ಲಿರುವ ಎಲ್ಲ ಸಹಕಾರ ಸಂಘಗಳು ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959 ನಿಯಮಗಳು 1960ರ ನಿಯಮ 14 (ಎಜೆ) ಪ್ರಕಾರ 2016-17ನೇ ಸಾಲಿನ ವಾರ್ಷಿಕ ಮಹಾ ಸಭೆಯನ್ನು ಸೆಪ್ಟೆಂಬರ್ 25ರೊಳಗೆ ನಡೆಸಿ ವಾರ್ಷಿಕ ಮಹಾಸಭೆಯಲ್ಲಿ ಲೆಕ್ಕ ಪರಿಶೀಲನಾ ವರದಿಯನ್ನು ಮಂಡಿಸುವಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದ್ದಾರೆ.ಇಲ್ಲವಾದಲ್ಲಿ ಸಹಕಾರ ಸಂಘಗಳ ಕಾಯಿದೆ ಹಾಗೂ ನಿಯಮಗಳ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಂ.ವಿ. ಸುಬ್ರಹ್ಮಣ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ. 23ರಂದು ಜಿಲ್ಲೆಗೆ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಕಾಮಗಾರಿ ಪರಿಶೀಲನಾ ಸಮಿತಿ ಅಧ್ಯಕ್ಷರು, ಸದಸ್ಯರ ಭೇಟಿ
ಚಾಮರಾಜನಗರ, ಜೂ. 22 :- ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗಳ ಕಾಮಗಾರಿಗಳ ಭೌತಿಕ ಪರಿಶೀಲನಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಎಸ್.ಜಿ. ನಂಜಯ್ಯಮಠ ಹಾಗೂ ಸಮಿತಿಯ ಸದಸ್ಯರು ಜೂನ್ 23ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ಬೆಳಿಗ್ಗೆ 10.30 ಗಂಟೆಗೆ ನಗರಕ್ಕೆ ಆಗಮಿಸಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸಂಬಂಧಪಟ್ಟ ಕಾರ್ಯಕ್ರಮಗಳ ಪರಿಶೀಲನೆ ನಡೆಸುವರು ಹಾಗೂ ಕ್ಷೇತ್ರಗಳಿಗೆ ಭೇಟಿ ನೀಡುವರು. ಬಳಿಕ ಬಿಳಿಗಿರಿ ರಂಗನ ಬೆಟ್ಟದ ಗ್ರಾಮ ಪಂಚಾಯತ್‍ಗೆ ಭೇಟಿ ನೀಡುವರೆಂದು ಜಿಲ್ಲಾ ಪಂಚಾಯತ್ ಪ್ರಕಟಣೆ ತಿಳಿಸಿದೆ.
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ನಿಸರ್ಗ ಪಪದವಿಪೂರ್ವ ಕಾಲೇಜು ಜಿಲ್ಲೆಗೆ ಮೊದಲ ಸ್ಥಾನ
ಚಾಮರಾಜನಗರ, ಜೂ. 22):- ಕಳೆದ ಮಾರ್ಚ್ 2017ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕೊಳ್ಳೇಗಾಲದ ನಿಸರ್ಗ ಪದವಿಪೂರ್ವ ಕಾಲೇಜು ಶೇ. 89ರಷ್ಟು ಫಲಿತಾಂಶವನ್ನು ಪಡೆದು ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.ಕೊಳ್ಳೇಗಾಲದ ಲಯನ್ಸ್ ಪದವಿಪೂರ್ವ ಕಾಲೇಜು ನೀಡಿದ ಮಾಹಿತಿ ಅನ್ವಯ ಸದರಿ ಲಯನ್ಸ್ ಪದವಿಪೂರ್ವ ಕಾಲೇಜು ಶೇ.89.25ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಪ್ರಥಮಸ್ಥಾನ ಪಡೆದಿದೆ ಎಂದು ಪ್ರಕಟಿಸಲಾಗಿತ್ತು. ಆದರೆ ಸದರಿ ಕಾಲೇಜಿಗೆ ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ಫಲಿತಾಂಶದ ಬಗ್ಗೆ ಪರಿಶೀಲಿಸಿದಾಗ ಇಲಾಖೆಗೆ ತಪ್ಪು ಮಾಹಿತಿ ನೀಡಿರುವುದು ಕಂಡುಬಂತು. ಲಯನ್ಸ್ ಪದವಿಪೂರ್ವ ಕಾಲೇಜು ಶೇ. 86.99ರಷ್ಟು ಫಲಿತಾಂಶ ಪಡೆದಿದ್ದು ಜಿಲ್ಲೆಯಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ. ದ್ವಿತೀಯ ಸ್ಥಾನ ಪಡೆದಿದೆ ಎಂದು ಪ್ರಕಟಿಸಲಾಗಿದ್ದ ಕೊಳ್ಳೇಗಾಲದ ನಿಸರ್ಗ ಪದವಿಪೂರ್ವ ಕಾಲೇಜು ಶೇ.89ರಷ್ಟು ಫಲಿತಾಂಶ ಪಡೆದು ಜಿಲ್ಲೆಯಲ್ಲಿ ಪ್ರಥಮಸ್ಥಾನ ಪಡೆದುಕೊಂಡಿದೆ.
ಪ್ರಥಮಸ್ಥಾನ ಪಡೆದ ಕಾಲೇಜಿನ ವಿದ್ಯಾರ್ಥಿ ಬೋಧಕ ಬೋಧಕೇತರ ಹಾಗೂ ಆಡಳಿತ ಮಂಡಳಿಯನ್ನು ಅಭಿನಂದಿಸುವುದಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರೆಜಿನಾ ಪಿ ಮಲಾಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿಯು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 22 :- ಜಿಲ್ಲೆಯಲ್ಲಿ ಖಾಲಿ ಇರುವ ಉಪನ್ಯಾಸಕ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕನ್ನಡ, ಭೂಗೋಳ ಶಾಸ್ತ್ರ, ಸಮಾಜಶಾಸ್ತ್ರ, ವಾಣಿಜ್ಯಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಷಯಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯನ್ನು ಶೇ.55ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಜತೆಗೆ ಬಿಎಡ್ ಪದವಿಯನ್ನು (ವಾಣಿಜ್ಯಶಾಸ್ತ್ರ ವಿಷಯ ಹೊರತುಪಡಿಸಿ) ಪಡೆದಿರುವ ಅಭ್ಯರ್ಥಿಗಳು ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಜೂನ್ 30ರೊಳಗೆ ಸಲ್ಲಿಸಬೇಕು ಎಂದು ಇಲಾಖೆಯ ಉಪನಿರ್ದೇಶಕರಾದ ರೆಜಿನಾ ಪಿ ಮಲಾಕಿ ತಿಳಿಸಿದ್ದಾರೆ.
ವಿದ್ಯಾರ್ಥಿವೇತನ, ಪ್ರೋತ್ಸಾಹಧನ, ಶುಲ್ಕ ಮರುಪಾವತಿ ಸೌಲಭ್ಯಕ್ಕೆ ವಿಕಲಚೇತನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 22 - 2017-18ನೇ ಸಾಲಿಗೆ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪ್ರೋತ್ಸಾಹಧನ ಹಾಗೂ ಶುಲ್ಕ ಮರುಪಾವತಿ ಸೌಲಭ್ಯ ಲಭಿಸಲಿದ್ದು ಅರ್ಜಿ ಆಹ್ವಾನಿಸಲಾಗಿದೆ.1ನೇ ತರಗತಿಯಿಂದ ವಿಶ್ವವಿದ್ಯಾನಿಲಯದವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಎಸ್ ಎಸ್ ಎಲ್ ಸಿ ಹಾಗೂ ನಂತರದ ಪಬ್ಲಿಕ್ ಪರೀಕ್ಷೆಗಳಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಕೊಡಲಾಗುತ್ತದೆ. ಅಲ್ಲದೆ ಎಸ್ ಎಸ್ ಎಲ್ ಸಿ ನಂತರದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಶುಲ್ಕ ಮರುಪಾವತಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿಗಳನ್ನು ಆಯಾ ಗ್ರಾಮ ಪಂಚಾಯಿತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಅಥವಾ ತಾಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರ ಬಳಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ್ 25ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕಚೇರಿ (ದೂ.ಸಂ. 08226-223688/224688)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಜೂ. 24ರಂದು ಗುಂಡ್ಲುಪೇಟೆ, ಬೇಗೂರಿನಲ್ಲಿ ವಿದ್ಯುತ್ ಕುಂದುಕೊರತೆ ಸಭೆ
ಚಾಮರಾಜನಗರ, ಜೂ. 22- ವಿದ್ಯುತ್ ಗ್ರಾಹಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಗುಂಡ್ಲುಪೇಟೆ ಉಪವಿಭಾಗ ಕಚೇರಿಯಲ್ಲಿ ಜೂನ್ 24ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಬೇಗೂರು ಉಪವಿಭಾಗ ಕಚೇರಿ ಆವರಣದಲ್ಲಿ ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಯವರೆಗೆ ಅಧೀಕ್ಷಕ ಎಂಜಿನಿಯರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.ಗುಂಡ್ಲುಪೇಟೆ ಮತ್ತು ಬೇಗೂರು ವ್ಯಾಪ್ತಿಯ ವಿದ್ಯುತ್ ಗ್ರಾಹಕರು, ನಾಗರಿಕರು ವಿದ್ಯುತ್ ಸಂಬಂಧ ಯಾವುದೇ ಸಮಸ್ಯೆ ದೂರುಗಳಿದ್ದಲ್ಲಿ ಸಭೆಗೆ ಹಾಜರಾಗಿ ಗಮನಕ್ಕೆ ತರುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದರ್ಶ ವಿದ್ಯಾಲಯದಲ್ಲಿ 7 ರಿಂದ 10ನೇ ತರಗತಿ ಪ್ರವೇಶಕ್ಕೆ ಕೆಲ ಸೀಟುಗಳು ಲಭ್ಯ : ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 22 - ನಗರದ ಆದರ್ಶ ವಿದ್ಯಾಲಯದಲ್ಲಿ 7 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡಲು ಕೆಲ ಸೀಟುಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.7ನೇ ತರಗತಿಗೆ 18, 8ನೇ ತರಗತಿಗೆ 15, 9ನೇ ತರಗತಿಗೆ 12 ಹಾಗೂ 10ನೇ ತರಗತಿಗೆ 10 ಸೀಟುಗಳು ಲಭ್ಯವಿದೆ. ಈ ಹಿಂದೆ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವೇಳೆ ಆದರ್ಶ ವಿದ್ಯಾಲಯ ಪ್ರವೇಶಕ್ಕೆ ಪರೀಕ್ಷೆ ಬರೆದಿದ್ದು ಪ್ರವೇಶಪತ್ರ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಗೆ ಜೂನ್ 24 ಕಡೆಯ ದಿನವಾಗಿದೆ. ಇದೇವೇಳೆ 17-18ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕೆ ಕೆಲವು ವಿದ್ಯಾರ್ಥಿಗಳು ದಾಖಲಾಗದೆ ಇರುವುದರಿಂದ ವರ್ಗವಾರು ಖಾಲಿ ಇರುವ 37 ವಿದ್ಯಾರ್ಥಿಗಳ 2ನೇ ಪಟ್ಟಿ ಪ್ರಕಟಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
No comments:
Post a Comment