ಸಿ.ಆರ್.ಬಾಲರಪಟ್ಟಣ ಹಳೆಯ ವಿದ್ಯಾರ್ಥಿಗಳ ಒಕ್ಕೂಟ ಅಸ್ತಿತ್ವಕ್ಕೆ
ಚಾಮರಾಜನಗರ :- ನಗರದ ಕ್ರಿಸ್ತರಾಜ ಬಾಲರಪಟ್ಟಣ ಶಾಲೆಯ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ತಾತ್ಕಲಿಕವಾಗಿ ಅಸ್ತಿತ್ವಕ್ಕೆ ತರಲಾಯಿತು. ಅಧ್ಯಕ್ಷರಾಗಿ ಮಲ್ಲೇಶ್.ಪಿ ಉಪಾಧ್ಯಕ್ಷರಾಗಿ ಶಶಿಕಲಾ ಖಜಾಂಚಿಯಾಗಿ ಪ್ರಸನ್ನ ಕಾರ್ಯದರ್ಶಿಯಾಗಿ ಮಣಿಕಂಠ ಸಹಕಾರ್ಯದರ್ಶಿಯಾಗಿ ಅಶ್ವಿನಿ.ಎನ್ ಎಸ್.ವೀರಭದ್ರಸ್ವಾಮಿ ಸದಸ್ಯರುಗಳಾಗಿ ಭಾವನ, ಶೃತಿ, ಮೈಕಲ್ , ಅನಿಲ್‍ರಾಜ್.ಎಸ್, ಸಚಿನ್, ಕಾವ್ಯ ಅವರನ್ನು ಆಯ್ಕೆ ಮಾಡಲಾಯಿತು.
ಸಂಘದಲ್ಲಿ ಪ್ರಮುಖವಾಗಿ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಪರ್ಧೆ ಮತ್ತು ಅತೀ ಬಡವಿದ್ಯಾರ್ಥಿಗಳಿಗೆ ಶಾಲೆ ದಾಖಲು ಮಾಡುವುದು ಇನ್ನಿತರ ಯೋಜನೆ ಸೇರಿದಂತೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು.
ಮಹಿಳಾ ಸಬಲೀಕರಣ ಕಾರ್ಯಗಳಿಗೆ ಒತ್ತು ನೀಡಿ: ಜಿ.ಪಂ. ಅಧ್ಯಕ್ಷರ ಸಲಹೆ
ಚಾಮರಾಜನಗರ, ಜೂ. 07:- ಮಹಿಳೆಯರಿಗೆ ಇರುವ ಹಕ್ಕುಗಳು ಮತ್ತು ರಕ್ಷಣೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಮುಂದಾಗಬೇಕಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಸಲಹೆ ಮಾಡಿದರು.ಜಿಲ್ಲಾ ಪಂಚಾಯತ್ ವತಿಯಿಂದ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಮಹಿಳಾ ಸಬಲೀಕರಣ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಜಾಗೃತಿ ಮೂಡಿಸಿ ಅವರಿಗೆ ಇರುವ ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ. ಮಹಿಳೆಯರು ಎಲ್ಲಾ ರಂಗದಲ್ಲೂ ಮುಂದೆ ಬರಬೇಕಿದೆ. ಸರ್ವಾಂಗೀಣ ಅಭಿವೃದ್ಧಿಗೆ ಇರುವ ಅವಕಾಶಗಳನ್ನು ಒದಗಿಸಬೇಕಿದೆ. ಎಲ್ಲಾ ಕಾರ್ಯಕ್ರಮಗಳ ಮೂಲಕ ಮಹಿಳೆಯರು ಸಧೃಡರಾಗಲು ಕ್ರಮ ತೆಗೆದುಕೊಳ್ಳಬೇಕಿದೆ ಎಂದರು.
ಮಹಿಳೆಯರ ಸಬಲೀಕರಣ ಆಗಬೇಕಿದ್ದು ಈ ಸಂಬಂಧ ಹಮ್ಮಿಕೊಳ್ಳಬೇಕಿರುವ ರೂಪುರೇಷೆಗಳ ಬಗ್ಗೆ ವ್ಯಾಪಕವಾಗಿ ಚುನಾಯಿತ ಜನಪ್ರತಿನಿಧಿಗಳನ್ನು ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರಗಳು ಅವಶ್ಯಕವಾಗಿವೆ. ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕಿದೆ ಎಂದು ಎಂ. ರಾಮಚಂದ್ರ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮಾತನಾಡಿ ಲಿಂಗತ್ವ ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯ ಪರಿಕಲ್ಪನೆಯನ್ನು ಎಲ್ಲರಲ್ಲೂ ಮೂಡಿಸಬೇಕು. ಸರ್ವರೂ ಎಲ್ಲಾ ಅವಕಾಶಗಳನ್ನು ಪಡೆದುಕೊಳ್ಳಬೇಕು ಎಂಬ ಆಶಯ ಈಡೇರಬೇಕು ಎಂದರು.
ಮಹಿಳೆಯರು ಸಬಲರಾಗಲು ಇರುವ ಮಾರ್ಗಗಳ ಬಗ್ಗೆ ತರಬೇತಿ ಕಾರ್ಯಾಗಾರದಲ್ಲಿ ಹೆಚ್ಚು ಪ್ರಯೋಜನ ವಾಗುವಂತೆ ತಿಳಿಸಿಕೊಡಬೇಕು. ಮಹಿಳಾ ಜನಪ್ರತಿನಿಧಿಗಳು ಸಹ ಮಹಿಳೆಯರ ಸಬಲೀಕರಣಕ್ಕೆ ಅಗತ್ಯ ಮಾರ್ಗದರ್ಶನ ಮಾಡಬೇಕಾದ ಅಗತ್ಯವಿದೆ ಎಂದು ಹರೀಶ್ ಕುಮಾರ್ ಆಶಿಸಿದರು.
ಕಾರ್ಯಕ್ರಮ ವಿಶ್ಲೇಷಕರಾದ ಅರುಣಿಮಾ ಸೇನ್ ಮಾತನಾಡಿ ಎಲ್ಲಾ ಪಂಚಾಯತಿಗಳಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ (ಜಿಪಿಡಿಪಿ) ಪ್ರಕ್ರಿಯೆ ಜಾರಿಯಲ್ಲಿದ್ದು ಈ ಯೋಜನೆಯಡಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದರು.
ಯು. ಎನ್. ವುಮೆನ್ ಯೋಜನೆ ರಾಜ್ಯ ಯೋಜನಾಧಿಕಾರಿ ಸಯ್ಯದ್ ನೂರ್ ಫಾತಿಮಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಉಪ ನಿರ್ದೇಶಕರಾದ ಸರ್ವೇಶ್, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಬೋಧಕರಾದ ಸಯ್ಯದ್ ಅಂಜಿದಾ ಫರ್ವೀನ್ ಅವರು ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮುನಿರಾಜಪ್ಪ, ಮುಖ್ಯ ಯೋಜನಾಧಿಕಾರಿ ಎಂ. ಮಾದೇಶು, ಮುಖ್ಯ ಲೆಕ್ಕಾಧಿಕಾರಿ ಬಸವರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜೂನ್ 11 ರಂದು ಮಹದೇಶ್ವರ ಬೆಟ್ಟದಲ್ಲಿ ಸಾಮೂಹಿಕ ವಿವಾಹ
ಚಾಮರಾಜನಗರ, ಜೂ. 07:- ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃಧ್ಧಿ ಪ್ರಾಧಿಕಾರದ ವತಿಯಿಂದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ಜೂನ್ 11 ರಂದು ಬೆಳಿಗ್ಗೆ 9.30 ಗಂಟೆಗೆ ಮಹದೇಶ್ವರ ಬೆಟ್ಟದ ಮಲೈ ಮಹದೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ಆವರಣದಲ್ಲಿ ನಡೆಯಲಿದೆ.ಸಾಲೂರು ಬೃಹನ್ಮಠಾಧ್ಯಕ್ಷರಾದ ಪಟ್ಟದ ಗುರುಸ್ವಾಮಿ ಅವರು ದಿವ್ಯಸಾನಿಧ್ಯ ವಹಿಸಲಿದ್ದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಕಾರ್ಯಕ್ರಮ ಉದ್ಫಾಟಿಸುವರು. ಮುಜರಾಯಿ ಹಾಗೂ ಜವಳಿ ಸಚಿವರಾದ ರುದ್ರಪ್ಪ ಮಾನಪ್ಪ ಲಮಾಣಿ ವಧುವರರಿಗೆ ಮಾಂಗಲ್ಯ ವಿತರಿಸುವರು. ಶಾಸಕರಾದ ಆರ್. ನರೇಂದ್ರ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ನೆನಪಿನ ಕಾಣಿಕೆ ವಿತರಿಸುವರು.
ವಿಧಾನ ಪರಿಷತ್ ಉಪ ಸಭಾಪತಿಯವರಾದ ಮರಿತಿಬ್ಬೇಗೌಡ ಘನ ಉಪಸ್ಥಿತರಿರುವರು. ಶಾಸಕರು ಹಾಗೂ ಕರ್ನಾಟಕ ರಸ್ತೆ ಅಭಿವೃಧ್ಧಿ ನಿಗಮದ ಅಧ್ಯಕ್ಷರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಎಸ್.ಜಯಣ್ಣ, ಎಂ.ಸಿ. ಮೋಹನ್‍ಕುಮಾರಿ ಉರುಫ್ ಗೀತಾ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಮೈಸೂರು ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಜು, ಉಪಾಧ್ಯಕ್ಷರಾದ ಲತಾ ರಾಜಣ್ಣ, ಜಿಲ್ಲಾ ಪಂಚಾಯತ್ ಸದಸ್ಯರಾದ ಇರ್ಷಾದ್ ಭಾನು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ: ವಿವರ ಸಲ್ಲಿಸಲು ಸೂಚನೆ.
ಚಾಮರಾಜನಗರ, ಜೂ. 07- ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು 2017-18ನೇ ಸಾಲಿನಲ್ಲಿ ಆನ್‍ಲೈನ್ ಮೂಲಕ ಜಮೆ ಮಾಡಲಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಇತರೆ ಪ್ರಮಾಣ ಪತ್ರಗಳನ್ನು ಶಾಲೆಗೆ ಪ್ರವೇಶ ಪಡೆಯುವ ಸಮಯದಲ್ಲಿ ಸಲ್ಲಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಿಳಿಸಿದೆ.ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿ ಮತ್ತು ಇತರೆ ಹಿಂದುಳಿದ ವರ್ಗಗಳ 1ರಿಂದ 10ನೇ ತರಗತಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಪೋಷಕರು ವಿದ್ಯಾರ್ಥಿ ಹೆಸರಿನಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇರುವ ಬ್ಯಾಂಕು ಅಥವಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆ ತೆರೆದು ಐ.ಎಫ್.ಎಸ್.ಸಿ ಕೋಡ್ ಖಾತೆ ಸಂಖ್ಯೆ ಇರುವ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ, ಆಧಾರ್, ಜಾತಿ, ಆದಾಯ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಗಳನ್ನು ಶಾಲೆ ಮುಖ್ಯೋಪಾಧ್ಯಾಯರಿಗೆ ನೀಡಬೇಕು. ಶಾಲಾ ಮುಖ್ಯೋಪಾಧ್ಯಾಯರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುವ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಜೂನ್ 30ರೊಳಗೆ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವ್ಯಾಸಂಗ ವೇತನ: ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 07:- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವ್ಯಾಸಂಗ ವೇತನ ನೀಡಲಿದ್ದು, ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ, ಪಿಹೆಚ್‍ಡಿ, ಸಂಶೋಧನೆ ಮಾಡುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿ ವಿದ್ಯಾರ್ಥಿಗಳಿಗೆ ಡಿ.ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಗೆ ಜುಲೈ 3 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖಾ ವೆಬ್‍ಸೈಟ್. ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ನ್ನು ನೋಡಬಹುದು. ದೂರವಾಣಿ ಸಂ: 080-65970004 ಸಂಪರ್ಕಿಸಿ ಸಹ ವಿವರ ಪಡೆಯಬಹುದೆಂದು ಪ್ರಕಟಣೆ ತಿಳಿಸಿದೆ.
ಜೂನ್ 9ರಿಂದ ಉತ್ತರ ಭಾರತದ ಪರ್ಟಿಲೈಸರ್ ಕಂಪನಿಗಳಿಗೆ ಸಂಸದರ ಭೇಟಿ
ಚಾಮರಾಜನಗರ, ಜೂ. 07:- ಲೋಕಸಭಾ ಸದಸ್ಯರು ಹಾಗೂ ಕೇಂದ್ರ ಸರ್ಕಾರದ ಕೆಮಿಕಲ್ಸ್ ಮತ್ತು ಪರ್ಟಿಲೈಸರ್ ಸ್ಥಾಯಿ ಸಮಿತಿಯ ಸದಸ್ಯರು ಆಗಿರುವ ಆರ್.ದ್ರುವನಾರಾಯಣ ಅವರು ಜೂನ್ 9ರಿಂದ 15ರವರೆಗೆ ಉತ್ತರ ಭಾರತದ ವಿವಿಧೆಡೆ ಪ್ರವಾಸ ಕೈಗೊಂಡಿದ್ದು, ಪರ್ಟಿಲೈಸರ್ ಕಂಪನಿಗಳಿಗೆ ಭೇಟಿ ನೀಡುವರು.ಕುಲು, ಮನಾಲಿ, ಮಂಡಿ, ಶಿಮ್ಲಾ ಮತ್ತು ಬಡ್ಡಿ ಪ್ರದೇಶಗಳಲ್ಲಿರುವÀ ಪರ್ಟಿಲೈಸರ್ ಕಂಪನಿಗಳಿಗೆ ಭೇಟಿ ನೀಡಿ ಅಧಿಕಾರಿ ಮತ್ತು ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ ರಸಗೊಬ್ಬರ ಬಳಕೆ ನಿಯಮ ಕುರಿತು ಸಮಾಲೋಚಿಸುವರು. ಸಹಾಯಧನ ವಿತರಿಸುವ ಹಾಗೂ ಸಂಶೋಧನೆ ಕೈಗೊಂಡಿರುವ ಬಗ್ಗೆ ಪರಿಶೀಲಿಸುವರು ಎಂದು ಸಂಸದರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment