ಆತ್ಮಹತ್ಯೆ ಪ್ರಕರಣ : ಪತಿಗೆ ಸಜೆ
ಚಾಮರಾಜನಗರ, ಅ. 25 :- ಪತಿಯ ಹಿಂಸೆ ತಾಳಲಾರದೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಗೆ 2 ವರ್ಷ 11 ತಿಂಗಳು ಸಜೆ ಹಾಗೂ 1500 ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.ಗುಂಡ್ಲುಪೇಟೆ ತಾಲೂಕು ತೆರಕಣಾಂಬಿ ಗ್ರಾಮದ ಕುಂಬಾರ ಬೀದಿಯ ಸುರೇಶ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ತನ್ನ ಹೆಂಡತಿ ಸಾವಿತ್ರಿಗೆ ಮಕ್ಕಳಾಗದ ಕಾರಣ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ. ಇದನ್ನು ತಾಳಲಾರದೆ ಈತನ ಪತ್ನಿ ತಂದೆ ಮನೆಗೆ ಹೋಗಿದ್ದರು. ಈ ಬಗ್ಗೆ ಗ್ರಾಮದಲ್ಲಿ ನ್ಯಾಯಪಂಚಾಯಿತಿಯು ನಡೆದಿದ್ದು ಇನ್ನುಮುಂದೆ ಯಾವುದೇ ಹಿಂಸೆ ಮಾಡುವುದಿಲ್ಲ ಎಂದು ಪತ್ನಿಯನ್ನು ಸುರೇಶ ಮನೆಗೆ ಕರೆದುಕೊಂಡು ಹೋಗಿದ್ದನು. ಆದರೆ ಮತ್ತೆ ಹಿಂಸೆ ಕೊಡುವುದು ಮುಂದುವರೆದಿದ್ದರಿಂದ ಕಳೆದ 2014ರ ಜನವರಿ 23ರಂದು ಪತಿ ಸುರೇಶನ ಹಿಂಸೆ ತಾಳಲಾರದೆ ಮನನೊಂದು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಪತಿ ಸುರೇಶನೇ ಕಾರಣ ಎಂದು ರುಜುವಾತಾದ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ಸುರೇಶನಿಗೆ 2 ವರ್ಷ 11 ತಿಂಗಳು ಸಜೆ ಹಾಗೂ 1500 ರೂ. ದಂಡ ವಿಧಿಸಿ ಅಕ್ಟೋಬರ್ 24ರಂದು ತೀರ್ಪು ನೀಡಿದ್ದಾರೆ.
ಸರ್ಕಾರಿ ನೌಕರರು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.
ಚಾಮರಾಜನಗರ ಅ,25- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ರಾಜ್ಯ ಸರ್ಕಾರಿ ನೌಕರರಿಗೆ ಅನುಷ್ಟಾನಗೊಳಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳಲ್ಲಿ ಸರಿಸಮಾನತೆಯನ್ನು ಮೂಡಿಸುವ ಏಕೈಕ ಬೇಡಿಕೆಯನ್ನು ವರ್ಷದ ನವಂಬರ್ ಅಂತ್ಯದ ಒಳಗೆ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಸರ್ಕಾರಿ ನೌಕರರು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.
ಚಾಮರಾಜನಗರ ಜಿಲ್ಲಾ ಸರ್ಕಾರಿ ನೌಕರರು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ನಡೆದ ಪ್ರತಿಭನೆಯಲ್ಲಿ ಮಾತನಾಡುತ್ತಿದ್ದರು. ಸರ್ಕಾರಕ್ಕೆ ಮನವಿ ಮಂಡಿಸಿದ್ದ ಸಂದರ್ಭದಲ್ಲಿ ತಾವು ಶಾಸಕಾಂಗ ಹಾಗೂ ಕಾರ್ಯಾಂಗಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಪ್ರತಿಪಾದಿಸಿ, ಒಂದೇ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳಲ್ಲಿ ಸಮಾನತೆಯನ್ನು ಮೂಡಿಸುವುದು ಹಾಗೂ ‘ ಸಮಾನ ಕೆಲಸಕ್ಕೆ ಸಮಾನ ವೇತನ’ ತತ್ವವನ್ನು ಪ್ರತಿಪಾದಿಸಿ ಕಾರ್ಯಾಂಗದ ಆಧಾರ ಸ್ಥಂಭಗಳಾದ ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗೆ ಸ್ಪಂದಿಸಿ, ರಾಜ್ಯ ಸರ್ಕಾರಿ ನೌಕರಿಗೆ ವೇತನ ಆಯೋಗವನ್ನು ರಚಿಸಿ ನಾಲ್ಕು ತಿಂಗಳ ಅವಧಿಯೊಳಗೆ ಆಯೋಗವು ತನ್ನ ಅಂತಿಮ ವರದಿಯನ್ನು ಸಲ್ಲಿಸಬೇಕೆಂದು ಮುಖ್ಯ ಮಂತ್ರಿಗಳು ತಿಳಿಸಿದ್ದರು ಅದರೆ ವೇತನ ಆಯೋಗವು ಕಾಲಾವಧಿಯನ್ನು ವಿಸ್ತರಿಸಿಕೊಂಡಿರುವ ಹಿನ್ನೆಲೆ ಹಾಗೂ ರಾಜ್ಯದಲ್ಲಿ ಈ ಹಿಂದೆ ರಚಿತವಾದ ವೇತನ ಆಯೋಗ/ ಸಮಿತಿಗಳು ಅನುಸರಿಸಿರುವ ಸಂಪ್ರದಾಯದಂತೆ ಇಂದು ರಾಜ್ಯ ಸರ್ಕಾರಿ ನೌಕರರಿಗೆ ಮಧ್ಯಂತರ ಪರಿಹಾರ ಮಂಜೂರು ಮಾಡುವ ಸಕಾಲ ಹಾಗೂ ಅನಿವಾರ್ಯತೆ ಉದ್ವವಿಸಿದ್ದು, ಅದರಿಂದ ದಿನಾಂಕ:1-4-2017ರಿಂದ ಶೇ.30ರಷ್ಟು ಮಧ್ಯಂತರ ಪರಿಹಾರ ಅಕ್ಟೋಬರ್ ಅಂತ್ಯದೊಳಗೆ ಮಂಜೂರು ಮಾಡಬೇಕೆಂದು ಸಂಘವು ಒತ್ತಾಯುಸುತ್ತಿದೆ ಎಂದು ರಾಚಪ್ಪ ತಿಳಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ ಮಾತನಾಡಿ ಪ್ರಸ್ತುತ ಕೇಂದ್ರ ಸರ್ಕಾರವು ಕನಿಷ್ಠ ವೇತನವನ್ನು ರೂ. 18,000-00ಗಳಿಗೆ ಹಾಗೂ ಗರಿಷ್ಠ ವೇತನವನ್ನು ರೂ. 2,50,000-00ಗಳಿಗೆ ನಿಗದಿಪಡಿಸಿದೆ.
ಎಲ್ಲಾ ವೇತನ ಶ್ರೇಣಿಗಳಿಗೂ ಒಂದಿಲ್ಲೊಂದು ರೀತಿಯ ವಿಶೇಷ ಭತ್ಯೆಗಳನ್ನು ನೀಡಿದ್ದು, ಅನೇಕ ರಾಜ್ಯಗಳು ತನ್ನ ನೌಕರರ ಹಿತಾಶಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಹೊಂದಿರುವ ಸಕಾರಾತ್ಮಕ ಧೋರಣೆಗೆ ನಿದರ್ಶನವಾಗಿರುತ್ತದೆ. ಮಹಾರಾಷ್ಟ್ರ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳು ಕೇಂದ್ರದ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರತ್ಯೇಕವಾದ ಆಯೋಗ ರಚಿಸಿವೆ.
ಅಗತ್ಯ ಸಾಮಗ್ರಿಗಳ ಬೆಲೆಗಳು ಗಗನಕ್ಕೇರುತ್ತಿರುವ ಈ ಕಾಲದಲ್ಲಿ ನಿಷ್ಠೆಯಿಂದ ಸರ್ಕಾರಿ ಕಾರ್ಯಗಳನ್ನು ತೃಪ್ತಿಕರವಾಗಿ ನಿರ್ವಹಿಸುತ್ತಿರುವ ಸರ್ಕಾರಿ ನೌಕರನ ಮತ್ತು ಅವನ ಕುಟುಂಬದ ಅವಲಂಬಿತರ ಯೋಗಕ್ಷೇಮ ಕಾಪಾಡುವುದು ಸರ್ಕಾರದ ಆದ್ಯ ಕರ್ತವ್ಯ. ‘ಸಂತೃಪ್ತ ಸರ್ಕಾರಿ ನೌಕರ ಸರ್ಕಾರಕ್ಕೆ ಆಸ್ತಿ ಇದ್ದಂತೆ’ ಆದ್ದರಿಂದ ಹೆಚ್ಚು ಹೆಚ್ಚು ಸೇವೆಯನ್ನು ಪಡೆಯಲು ಸಾಧ್ಯವೆಂಬುದು ಸರ್ವವಿಧಿತ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ತಮ್ಮ ಕಾರ್ಯನಿರ್ವಹಣೆಯಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಹೊಂದಿದ್ದು, ಸರ್ಕಾರದ ಎಲ್ಲಾ ಪ್ರಗತಿಪರ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಉತ್ತಮ ಸಹಕಾರ ನೀಡುತ್ತಿರುವರೆಂದು ತಾವು ಹಲವು ಸಂದರ್ಭಗಳಲ್ಲಿ ಸ್ಪಷ್ಟಪಡಿಸಿರುವುದು ಇಲ್ಲಿ ಗಮನಾರ್ಹ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಇಡೀ ರಾಷ್ಟ್ರದಲ್ಲಿ ಅತ್ಯಂತ ಕಡಿಮೆ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಾಗಿರುತ್ತಾರೆ. ರಾಜ್ಯ ಸರ್ಕಾರವು ತನ್ನ ನೌಕರರಿಗೆ ದಿನಾಂಕ 1-4-2012ರಿಂದ ವೇತನ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಿ ಹೊಸ ವೇತನ ಶ್ರೇಣಿ ಹಾಗೂ ಕೆಲವು ಭತ್ಯೆಗಳಲ್ಲಿ ಹೆಚ್ಚಳವನ್ನು ನೀಡಿದೆ. ಆದರೆ, ಆ ವೇಳೆಗೆ ಕೇಂದ್ರ ಸರ್ಕಾರಿ ನೌಕರರ ವೇತನ
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರು ಹಲವು ವರ್ಷಗಳಿಂದ ಅನುಭವಿಸಿರುವ ಆರ್ಥಿಕ ನಷ್ಟವನ್ನು ಸರಿದೂಗಿಸಲು ದಿನಾಂಕ 1-4-2017ರಿಂದ ಪೂರ್ವಾನ್ವಯವಾಗಿ ಮೂಲವೇತನದ ಶೇ. 30ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಕೋರುತ್ತೇವೆ. ಎಂದರು.
.
ಶಿಕ್ಷಣದಿಂದಲೇ ಸರ್ವಾಂಗೀಣ ಅಭಿವೃದ್ಧಿ : ಧ್ರುವನಾರಾಯಣ
ಚಾಮರಾಜನಗರ, ಅ. 25 :- ಶಿಕ್ಷಣದಿಂದಲೇ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಲಿದೆ. ಹೀಗಾಗಿ ಸÀಮಾಜದ ಎಲ್ಲ ವರ್ಗದವರು ಸಮಾನವಾಗಿ ಶಿಕ್ಷಣ ಪಡೆಯಲು ಉತ್ತೇಜಿಸಬೇಕಾದ ಅಗತ್ಯವಿದೆ ಎಂದು ಲೋಕಸಬಾ ಸದಸ್ಯರಾದ ಆರ್. ಧ್ರುವನಾರಾಯಣ ಅಭಿಪ್ರಾಯಪಟ್ಟರು.ನಗರದ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನೂತನವಾಗಿ ನಿರ್ಮಾಣ ಮಾಡಲಾಗಿರುವ ಹೆಚ್ಚುವರಿ ತರಗತಿ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಶಿಕ್ಷಣವೇ ಎಲ್ಲ ಅಭಿವೃದ್ಧಿಗೆ ಮುಖ್ಯವಾಗಿದೆ. ಇದರಿಂದಲೇ ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ಬಂದಿದೆ. ಎಲ್ಲ ವರ್ಗದವರು ಶಿಕ್ಷಣ ಪಡೆಯಬೇಕು. ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು ಎಂದು ಧ್ರವನಾರಾಯಣ ತಿಳಿಸಿದರು.
ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಶೇ. 24ರಷ್ಟಿದೆ. ಗುಣಮಟ್ಟದ ಶಿಕ್ಷಣಕ್ಕೆ ಎಲ್ಲರೂ ಮುಂದಾಗಬೇಕಿದೆ. ಜಿಲ್ಲೆಯಲ್ಲೂ ಎಸ್ ಎಸ್ ಎಲ್ ಸಿ, ಪಿಯುಸಿಯಂತಹ ಪ್ರಮುಖ ಘಟ್ಟಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಪರಿಶ್ರಮದಿಂದ ಮಾರ್ಗದರ್ಶನ ಬೋಧನೆ ಮಾಡಿ ಫಲಿತಾಂಶದಲ್ಲಿ ಮತ್ತಷ್ಟು ಸುಧಾರಣೆ ತರಬೇಕೆಂದು ಧ್ರುವನಾರಾಯಣ ಸಲಹೆ ಮಾಡಿದರು.
ಪ್ರಸ್ತುತ ಪದವಿಪೂರ್ವ ಕಾಲೇಜಿಗೆ 54 ಲಕ್ಷ ರೂ. ವೆಚ್ಚದಲ್ಲಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಇನ್ನೂ ಹಲವು ಸೌಲಭ್ಯಗಳು ಬೇಕೆಂಬ ಬೇಡಿಕೆಗೆ ಚಿಂತನೆ ನಡೆಸಲಾಗುವುದು. ಕಾಲೇಜು ಮಂಜೂರಾತಿ ಸಮಯದಲ್ಲಿಯೇ ಕೊಠಡಿಗಳಲ್ಲದೆ ಇನ್ನಿತರ ಪೀಠೋಪಕರಣಗಳೂ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಧ್ರುವನಾರಾಯಣ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಕಾಲೇಜು ಕಟ್ಟಡ ದುರಸ್ತಿ ಸೇರಿದಂತೆ ಅವಶ್ಯ ಸೌಲಭ್ಯಗಳಿಗೆ ಅನುದಾನ ನೀಡಲಾಗಿದೆ. ನಗರಕ್ಕೆ ಐಟಿಐ ಕಾಲೇಜು ಮಂಜೂರಾಗಿದೆ. ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಗೆ ಬೇಕಿರುವ ಎಲ್ಲಾ ಸೌಕರ್ಯಗಳಿಗೆ ಶ್ರಮ ವಹಿಸಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ವ್ಯಾಸಂಗ ಅವಧಿಯಲ್ಲಿ ಶ್ರದ್ಧೆ, ಏಕಾಗ್ರತೆಯಿಂದ ಅಧ್ಯಯನ ಪೂರೈಸಿ ಉತ್ತಮ ಭವಿಷ್ಯ ಕಂಡುಕೊಳ್ಳಬೇಕು. ಗುರುಹಿರಿಯರಿಗೆ ಗೌರವ ತೋರಿ ಜ್ಞಾನಾರ್ಜನೆ ಮಾಡಬೇಕು ಎಂದು ಪುಟ್ಟರಂಗಶೆಟ್ಟಿಯವರು ಕಿವಿಮಾತು ಹೇಳಿದರು.
ನಗರಸಭೆ ಅಧ್ಯಕ್ಷರಾದ ಶೋಭಾ ಪುಟ್ಟಸ್ವಾಮಿ, ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ಸದಸ್ಯರಾದ ರೇಣುಕಾ ಮಲ್ಲಿಕಾರ್ಜುನ್, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಅ. 25 – ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಹಾಗೂ ಪಾರ್ಸಿ ವಿದ್ಯಾರ್ಥಿಗಳಿಗೆ 2017-18ನೇ ಸಾಲಿನ ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಅಕ್ಟೋಬರ್ 31ರೊಳಗೆ ಸಲ್ಲಿಸಬೇಕÀು.
ಹೆಚ್ಚಿನ ಮಾಹಿತಿಗಳಿಗೆ ಕಚೇರಿ ದೂರವಾಣಿ ಸಂಖ್ಯೆ 08226-224370 ಸಂಪರ್ಕಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಕೈಗಾರಿಕಾ ಸ್ಪಂದನ : ಉದ್ಯಮಿಗಳಿಂದ ಮನವಿ ಆಹ್ವಾನ
ಚಾಮರಾಜನಗರ, ಅ. 25 - ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಕೈಗಾರಿಕೋದ್ಯಮಿಗಳು ಉದ್ದಿಮೆಗಳನ್ನು ಅನುಷ್ಠಾನಗೊಳಿಸುವ ಸಮಯದಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಕೈಗಾರಿಕಾ ಸ್ಪಂದನ ಎಂಬ ಸಮಿತಿಯನ್ನು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ.
ಕೈಗಾರಿಕೋದ್ಯಮಿಗಳು ಉದ್ದಿಮೆಗಳನ್ನು ಅನುಷ್ಠಾನಗೊಳಿಸುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ನವೆಂಬರ್ 5ರೊಳಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರಿಗೆ ಸಲ್ಲಿಸಬೇಕು.
ನಂತರ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳನ್ನು ಒಳಗೊಂಡಂತೆ ಸಭೆ ಏರ್ಪಡಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕ್ರಮ ವಹಿಸಲಾಗುವುದು. ಹೆಚ್ಚಿನ ವಿವರಗಳಿಗೆ ಜಿಲ್ಲಾ ಕೈಗಾರಿಕಾ ಕೇಂದ್ರವನ್ನು ಸಂಪರ್ಕಿಸುವಂತೆ ಜಂಟಿನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಅ. 26ರಂದು ನಗರದಲ್ಲಿ ವಿಚಾರ ಸಂಕಿರಣ
ಚಾಮರಾಜನಗರ, ಅ. 25 :- ಕಾಲೇಜು ಶಿಕ್ಷಣ ಇಲಾಖೆಯ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಅಕ್ಟೋಬರ್ 26ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಚಾರ ಸಂಕಿರಣ ಮತ್ತು ಪ್ರಥಮ ಎಂಎ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಿದೆ.ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್.ಎಸ್. ಪ್ರೇಮಲತಾ ಕಾರ್ಯಕ್ರಮ ಉದ್ಘಾಟಿಸುವರು. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಚಂದ್ರಮ್ಮ ಅಧ್ಯಕ್ಷತೆ ವಹಿಸುವರು.
ಭಾರತದ ಸಾಮಾಜಿಕ ಪ್ರಜಾಪ್ರಭುತ್ವದ ಸಂಸ್ಥಾಪಕರು ಕುರಿತು ವಿಚಾರ ಸಂಕಿರಣ ನಡೆಯಲಿದೆ.
ಗುಂಡ್ಲುಪೇಟೆ ಜೆಎಸ್‍ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಹದೇವಸ್ವಾಮಿ ಅವರು ಸಾಮಾಜಿಕ ಪ್ರಜಾಪ್ರಭುತ್ವದ ಸಂಸ್ಥಾಪಕರಾಗಿ ಮಹಾತ್ಮ ಗಾಂಧೀಜಿ ಕುರಿತು ವಿಚಾರ ಮಂಡಿಸುವರು.
ಮೈಸೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಕನ್ನಡ ಉಪನ್ಯಾಸಕರಾದ ಡಾ. ಕುಪ್ಪಳ್ಳಿ ಎಂ. ಭೈರಪ್ಪ ಅವರು ಸಾಮಾಜಿಕ ಪ್ರಜಾಪ್ರಭುತ್ವದ ಸಂಸ್ಥಾಪಕರಾಗಿ ಬಸವಣ್ಣ ಹಾಗೂ ಕೇಂದ್ರದ ಸಂಶೋಧಕರಾದ ಎನ್.ವಿ. ಪ್ರದೀಪ್ ಅವರು ಸಾಮಾಜಿಕ ಪ್ರಜಾಪ್ರಭುತ್ವದ ಸಂಸ್ಥಾಪಕರಾಗಿ ಜ್ಯೋತಿಭಾ ಫುಲೆ ವಿಷಯ ಕುರಿತು ವಿಚಾರ ಮಂಡಿಸುವರು.
ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ. ಪಿ. ದೇವರಾಜು ಅವರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಅಂಗಾಂಶ ಕೃಷಿ ಬೆಳೆಗೆ ಸಹಾಯಧನ
ಚಾಮರಾಜನಗರ, ಅ. 25 - ತೋಟಗಾರಿಕೆ ಇಲಾಖೆಯು 2017-18ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹೊಸದಾಗಿ ಅಂಗಾಂಶ ಕೃಷಿ ಬಾಳೆ ತಾಕು ಅಭಿವೃದ್ಧಿಪಡಿಸಲು ಸಹಾಯಧನ ನೀಡಲಿದೆ.ಯೋಜನೆಯಡಿ ಹೊಸದಾಗಿ ಅಂಗಾಂಶ ಕೃಷಿಬಾಳೆ ನಾಟಿ ಮಾಡುವ ರೈತರಿಗೆ ಪ್ರತಿ ಎಕರೆಗೆ 12240 ರೂ.ಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಆಯಾ ತಾಲೂಕಿನ ತೋಟಗಾರಿಕಾ ಕಚೇರಿಯಲ್ಲಿ ಮಾಹಿತಿ ಪಡೆದು ಯೋಜನೆಯ ಸದುಪಯೋಗ ಪಡೆದುಕೊಳ್ಳಲು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಘು ವಾಹನ ಚಾಲನಾ ತರಬೇತಿಗೆ ಪ.ಜಾ. ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಅ. 25 - ಸಮಾಜ ಕಲ್ಯಾಣ ಇಲಾಖೆಯು 2017-18ನೇ ಸಾಲಿಗೆ ಪರಿಶಿಷ್ಟ ಜಾತಿ ನಿರುದ್ಯೋಗಿ ಯುವಕ ಯುವತಿಯರಿಗೆ ಲಘು ವಾಹನ ಚಾಲನಾ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಕನಿಷ್ಟ ವಿದ್ಯಾರ್ಹತೆ 10ನೇ ತರಗತಿ ಪಾಸಾಗಿರಬೇಕು. 18 ರಿಂದ 35ರ ವಯೋಮಿತಿಯ ನಿರುದ್ಯೋಗಿಗಳು ಅರ್ಹರು. ಯಾವುದೇ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಅಥವಾ ತರಬೇತಿ ಪಡೆಯುತ್ತಿರಬಾರದು. ಕುಟುಂಬದ ಆದಾಯ 2 ಲಕ್ಷ ರೂ. ಮೀರಿರಬಾರದು.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕರ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಜಾತಿ ಪ್ರಮಾಣ ಪತ್ರ ಹಾಗೂ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಜಿಲ್ಲಾ ವೈದ್ಯಾಧಿಕಾರಿಗಳಿಂದ ದೃಢೀಕರಿಸಿದ ದೈಹಿಕ ಅರ್ಹತೆ ಪ್ರಮಾಣ ಪತ್ರ ಪಡೆದು ಎಲ್ಲ ದಾಖಲಾತಿಗಳ ಜೆರಾಕ್ಸ್ ಪ್ರತಿಯನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಅರ್ಜಿಯೊಂದಿಗೆ ಲಗತ್ತಿಸಿ ನವೆಂಬರ್ 2ರ ಒಳಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
ನ. 19ರಂದು ನಗರದಲ್ಲಿ ಜಿಲ್ಲಾಮಟ್ಟದ ಯುವಜನೋತ್ಸವ : ವಿವಿಧ ಸ್ಪರ್ಧೆಗಳಿಗೆ ಅವಕಾಶ
ಚಾಮರಾಜನಗರ, ಅ. 25 :– ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ನವೆಂಬರ್ 19ರಂದು ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.ನೊಂದಾಯಿತ ಯುವಕ ಯುವತಿ ಸಂಘದ ಸ್ಪರ್ಧಾಳುಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಯುವಕ ಯುವತಿಯರು ಯುವಜನೋತ್ಸವಕ್ಕೆ ಭಾಗವಹಿಸಬಹುದಾಗಿದೆ.
ಜಾನಪದ ನೃತ್ಯ (20 ಮಂದಿಗೆ ಸೀಮಿತ), ಜಾನಪದ ಗೀತೆ (10 ಮಂದಿಗೆ ಸೀಮಿತ), ಏಕಾಂಕ ನಾಟಕ (ಹಿಂದಿ ಅಥವಾ ಇಂಗ್ಲೀಷ್) (12 ಮಂದಿಗೆ ಸೀಮಿತ), ಆಶು ಭಾಷಣ (ಹಿಂದಿ ಅಥವಾ ಇಂಗ್ಲೀಷ್), ಗಿಟಾರ್, ಹಾರ್ಮೋನಿಯಂ, ಶಾಸ್ತ್ರೀಯ ವಾದ್ಯಗಳು - ಸಿತಾರ್, ತಬಲ, ಕೊಳಲು, ವೀಣೆ, ಮೃದಂಗ (5 ಮಂದಿಗೆ), ಶಾಸ್ತ್ರೀಯ ಗಾಯನ - ಹಿಂದೂಸ್ತಾನಿ ಹಾಗೂ ಕರ್ನಾಟಕ, ಶಾಸ್ತ್ರೀಯ ನೃತ್ಯ – ಮಣಿಪುರಿ, ಒರಿಸ್ಸಾ, ಭರತ ನಾಟ್ಯಂ, ಕಥಕ್, ಕುಚಿಪುಡಿ (5 ಮಂದಿಗೆ ಸೀಮಿತ) ಸ್ಪರ್ಧೆಗಳು ಇರಲಿವೆ.
ವಯೋಮಿತಿ 15 ರಿಂದ 29 ವರ್ಷದೊಳಗೆ ಇರಬೇಕು. ವಯಸ್ಸಿನ ದೃಢೀಕರಣಕ್ಕೆ ಆಧಾರ್ ಕಾರ್ಡ್, ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಇತರೆ ದಾಖಲಾತಿಗಳನ್ನು ಕಡ್ಡಾಯವಾಗಿ ತರಬೇಕು.
ಆಸಕ್ತರು ಪೂರ್ಣ ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಪಟ್ಟಿಯನ್ನು ಕಚೇರಿಗೆ ಕಳುಹಿಸಬೇಕು. ಭಾಗವಹಿಸುವ ಸ್ಪರ್ಧಾಳುಗÀಳಿಗೆ ಪ್ರಯಾಣ ಭತ್ಯೆ ನೀಡಲಾಗುವುದು.
ಜಿಲ್ಲಾ ಮಟ್ಟದ ವಿಜೇತರು ಉಡುಪಿ ಜಿಲ್ಲೆಯಲ್ಲಿ ನಡೆಯುವ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 9482718278 ಯನ್ನು ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರÀು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಮತಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಲು ಅವಕಾಶ
ಚಾಮರಾಜನಗರ, ಅ. 25 :– ಚಾಮರಾಜನಗರ ಜಿಲ್ಲಾ ವ್ಯಾಪ್ತಿಗೆ ಸಂಬಂಧಪಟ್ಟಂತೆ ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಶಿಕ್ಷಕರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅರ್ಜಿದಾರರು ಹೆಸರು ನೊಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.ಹೆಸರು ನೊಂದಣಿಗೆ ನಿಗದಿತ ನಮೂನೆ 19ರಲ್ಲಿ ಅರ್ಜಿಯನ್ನು ಭರ್ತಿ ಮಾಡಿ ನವೆಂಬರ್ 7ರೊಳಗೆ ಅಥವಾ ಅದಕ್ಕೂ ಮೊದಲೇ ಸಹಾಯಕ ಮತದಾರ ನೋಂದಣಿ ಅಧಿಕಾರಿಗಳಾದ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಆಯಾ ತಾಲೂಕು ತಹಸೀಲ್ದಾರ್ ಹಾಗೂ ತಾಲೂಕಿನ ನಿಯೋಜಿತ ಅಧಿಕಾರಿಗಳಾದ ಚುನಾವಣಾ ಶಿರಸ್ತೇದಾರ್, ಉಪತಹಸೀಲ್ದಾರ್ (ಹನೂರು) ಅವರಿಗೂ ಸಲ್ಲಿಸಬಹುದು.
ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು ಪ್ರತಿ ಚುನಾವಣೆಯ ಮೊದಲು ಹೊಸದಾಗಿ ತಯಾರಿಸಬೇಕಾಗಿದ್ದು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿರುವ ಎಲ್ಲಾ ವ್ಯಕ್ತಿಗಳು ನಿಗದಿತ ನಮೂನೆಯಲ್ಲಿ ಹೊಸದಾಗಿ ಅರ್ಜಿಗಳನ್ನು ಸಲ್ಲಿಸಬೇಕು.
ಭಾರತದ ಪ್ರಜೆಯಾಗಿರುವ ಮತ್ತು ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸಾಮಾನ್ಯ ನಿವಾಸಿಯಾಗಿದ್ದು 2017ರ ನವೆಂಬರ್ 1ಕ್ಕೆ ಮೊದಲು 6 ವರ್ಷದ ಅವಧಿಯಲ್ಲಿ ಕನಿಷ್ಟ 3 ವರ್ಷಗಳಷ್ಟು ದರ್ಜೆಯಲ್ಲಿ ಪ್ರೌಢಶಾಲೆಗಿಂತ ಕಡಿಮೆಯಲ್ಲದ ನಿರ್ದಿಷ್ಟಪಡಿಸಿದಂತಹ ರಾಜ್ಯದ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧನಾ ವೃತ್ತಿಯಲ್ಲಿ ನಿರತವಾಗಿರುವ ಪ್ರತಿ ವ್ಯಕ್ತಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಹರಾಗಿರುತ್ತಾರೆ.
ನಮೂನೆ 19ರಲ್ಲಿ ಅರ್ಜಿ ಸಲ್ಲಿಸಿ ಶಿಕ್ಷಕರ ಕ್ಷೇತ್ರದಲ್ಲಿ ಮತದಾರನಾಗಿ ನೊಂದಾಯಿಸಿಕೊಳ್ಳಲು ತನ್ನ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಂದ ಹಿಂದಿನ 6 ವರ್ಷಗಳಲ್ಲಿ ಒಟ್ಟು 3 ವರ್ಷಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಕುರಿತು ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕಿದೆ.
ಅರ್ಜಿ ಸಲ್ಲಿಸುವ ದಿನಾಂಕದಂದು ಯಾವುದೇ ವ್ಯಕ್ತಿ ಬೋಧನಾ ವೃತ್ತಿಯಲ್ಲಿ ನಿರತರಾಗಿರದಿದ್ದಲ್ಲಿ ಪ್ರಮಾಣ ಪತ್ರವನ್ನು ಕೊನೆಯದಾಗಿ ಸೇವೆ ಸಲ್ಲಿಸಿದ ಸಂಸ್ಥೆಯ ಮುಖ್ಯಸ್ಥರಿಂದಲೇ ಸಹಿ ಮಾಡಿಸಿರಬೇಕು. ಖುದ್ದಾಗಿ ಅಥವಾ ಅಂಚೆ ಮುಖಾಂತರ ಒಟ್ಟಾಗಿ ಸಲ್ಲಿಸಿದ ಅರ್ಜಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ಪರಿಗಣಿಸಲಾಗುವುದಿಲ್ಲ. ಆದರೆ ಸಂಸ್ಥೆಯ ಮುಖ್ಯಸ್ಥರು ಅವರ ಸಿಬ್ಬಂದಿಯ ಎಲ್ಲ ಅರ್ಜಿಗಳನ್ನು ಒಟ್ಟಾಗಿ ಕಳುಹಿಸಬಹುದು. ಒಂದೇ ಕುಟುಂಬದ ಇತರೆ ಸದಸ್ಯರ ನಮೂನೆ 19ರ ಅರ್ಜಿಗಳನ್ನು ಕುಟುಂಬದ ಒಬ್ಬ ಸದಸ್ಯರು ಸಲ್ಲಿಸಬಹುದು. ಹಾಗೂ ಪ್ರತೀ ಸದಸ್ಯರಿಗೆ ಸಂಬಂಧಿಸಿದಂತೆ ಮೂಲ ಪ್ರಮಾಣ ಪತ್ರಗಳನ್ನು ಒದಗಿಸಬೇಕು.
ಅರ್ಜಿಯಲ್ಲಿ ತಪ್ಪು ಅಥವಾ ತಪ್ಪೆಂದು ತಿಳಿದಿರುವ ಅಥವಾ ನಂಬುವಂತಹ ಇಲ್ಲವೇ ಸತ್ಯವೆಂದು ನಂಬಲಾಗದಿರುವಂತಹ ಹೇಳಿಕೆಗಳನ್ನು ಅಥವಾ ಘೋಷಣೆಗಳನ್ನು ಮಾಡುವ ವ್ಯಕ್ತಿಯನ್ನು ಪ್ರಜಾ ಪ್ರಾತಿನಿಧ್ಯ ಅಧಿನಿಯಮ 1950ರ 31ನೇ ಪ್ರಕರಣದ ಮೇರೆಗೆ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.
ಪ್ರಮಾಣ ಪತ್ರದ ಮಾದರಿ ಮತ್ತು ನಮೂನೆ 19ರ ಅರ್ಜಿಯನ್ನು ಸಹಾಯಕ ಮತದಾರರ ನೋಂದಣಾಧಿಕಾರಿ ಅಥವಾ ನಿಯೋಜಿತ ಅಧಿಕಾರಿಗಳ ಕಚೇರಿಯಿಂದ ಪಡೆಯಬಹುದು. ಕೈಬರಹ, ಬೆರಳಚ್ಚು ಮಾಡಿದ ಸೈಕ್ಲೋಸ್ಟೈಲ್ (ಕಲ್ಲಚ್ಚು) ಮಾಡಿದ ಅಥವಾ ಖಾಸಗಿಯಾಗಿ ನಮೂನೆಗಳನ್ನು ಕೂಡ ಅಂಗೀಕರಿಸಲಾಗುವುದೆಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment