ಜಿಲ್ಲಾಡಳಿತವತಿಯಿಂದ ಗಾಂಧಿ ಜಯಂತಿ ಅರ್ಥಪೂರ್ಣ ಆಚರಣೆ
ಚಾಮರಾಜನಗರ, ಅ. 02- ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಶ್ರಯದಲ್ಲಿಂದು ರಾಷ್ಟ್ರಪಿತ, ಮಹಾತ್ಮ ಗಾಂಧಿ ಅವರ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಗರದಲ್ಲಿಂದು ಆಚರಿಸಲಾಯಿತು.ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಗಾಂಧಿಜೀಯವರ ಬಗ್ಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ವಿಶೇಷ ಗಮನ ಸೆಳೆಯಿತು. ಗಾಯಕರಾದ ಅರುಣ್‍ಕುಮಾರ್ ಹಾಗೂ ಬಿ. ಬಸವರಾಜು ತಂಡದಿಂದ ಗಾಂಧಿಜೀಯವರಿಗೆ ಪ್ರಿಯವಾಗಿದ್ದ ಗೀತೆಗಳ ಗಾಯನ ಮತ್ತು ಭಜನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಗಾಂಧಿಜೀ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆವತಿಯಿಂದ ಹೊರತಂದಿರುವ ಮಹಾತ್ಮ ಗಾಂಧಿಜೀಯವರ ವಿಶೇಷ ಮಾಹಿತಿಯನ್ನೊಳಗೊಂಡಿದ್ದ ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕ ವಿಶೇಷಾಂಕಗಳನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ ಬಿಡುಗಡೆ ಮಾಡಿದರು.
ವೇದಿಕೆಯಲ್ಲಿ ಧರ್ಮ ಗುರುಗಳಾದ ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ, ಮಹಮದ್ ಜಿಯಾ ಉಲ್ಲಾ ಮತ್ತು ರೆವರಂಡ್ ಪುಟ್ಟರಾಜು ಅವರುಗಳಿಂದ ಸರ್ವಧರ್ಮ ಪ್ರಾರ್ಥನೆ ನಡೆಯಿತು.
ನಂತರ ಗಾಂಧಿ ವೇಷಧಾರಿಗಳಾಗಿದ್ದ ಚಿಕ್ಕ ಮಕ್ಕಳು ವೇದಿಕೆ ಮೇಲೆ ನಿಂತು ಗಾಂಧಿಜೀಯವರ ಸಂದೇಶಗಳನ್ನು ಹೇಳಿದ್ದು ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು. ಕರತಾಡನದ ಮಕ್ಕಳ ಪ್ರದರ್ಶನಕ್ಕೆ ಸಭಿಕರು ಹುರಿದುಂಬಿಸಿದರು. ಸೇವಾಭಾರತಿ ಶಾಲಾಮಕ್ಕಳಿಂದ ಗಾಂಧಿಜೀಯವರ ಕಿರುನಾಟಕ ಪ್ರದರ್ಶನ ನಡೆಯಿತು.
ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ.ಸದಾಶಿಮೂರ್ತಿ, ನಗರಸಭೆ ಅಧ್ಯಕ್ಷರಾದ ಶೋಭಾಪುಟ್ಟಸ್ವಾಮಿ, ಸದಸ್ಯರಾದ ಮಹೇಶ್ ಉಪ್ಪಾರ್, ಜಿಲ್ಲಾಧಿಕಾರಿ ಬಿ.ರಾಮು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಎ. ರಮೇಶ್ ಇತರರು ಕಾರ್ಯಕ್ರವiದಲ್ಲಿ ಉಪಸ್ಥಿತರಿದ್ದರು.
ಚಾಮರಾಜನಗರ, ಅ. 02- ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯ ಕಾಳಜಿಯಿಂದ ರಾಜ್ಯಸರ್ಕಾರ ಆರಂಭಿಸಿರುವ ಮಧ್ಯಾಹ್ನದ ಪೌಷ್ಠಿಕ ಬಿಸಿಊಟ ನೀಡುವ ಮಹತ್ವಾಕಾಂಕ್ಷಿ ಮಾತೃಪೂರ್ಣ ಯೋಜನೆಗೆ ಜಿಲ್ಲೆಯಲ್ಲಿ ಎಲ್ಲ ಹಂತದಲ್ಲಿಯು ಸಹಕಾರ ನೀಡುವ ಮೂಲಕ ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ತಿಳಿಸಿದರು.ಗುಂಡ್ಲುಪೇಟೆ ಪಟ್ಟಣದ ಶಿಕ್ಷಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಜನೆಯ ಉದ್ಘಾಟನೆ ಹಾಗೂ ತಾಲೂಕು ಆಡಳಿತವತಿಯಿಂದ ಏರ್ಪಾಡಾಗಿದ್ದ ಗಾಂಧಿ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹೆರಿಗೆ ಸಮಯದಲ್ಲಿ ಗರ್ಭಿಣಿ ಹಾಗೂ ಶಿಶುಮರಣ ಪ್ರಮಾಣವನ್ನು ತಡೆಗಟ್ಟಲು ಮತ್ತು ಗರ್ಭಿಣಿ, ಬಾಣಂತಿಯರಲ್ಲಿ ಅಪೌಷ್ಠಿಕತೆ, ರಕ್ತಹೀನತೆ ಹೋಗಲಾಡಿಸಿ ಉತ್ತಮ ಆರೋಗ್ಯ ವೃದ್ಧಿಗಾಗಿ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಹುಮುಖ್ಯ ಮಾತೃಪೂರ್ಣ ಯೋಜನೆಯನ್ನು ಅನುಷ್ಠಾನ ಮಾಡುತ್ತಿದೆ ಎಂದರು.
ಅಪೌಷ್ಠಿಕತೆ, ರಕ್ತಹೀನತೆ ಕಾರಣದಿಂದ ಸಂಭವಿಸುವ ತಾಯಿ, ಶಿಶುವಿನ ಮರಣ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದಲೇ ರಾಜ್ಯಸರ್ಕಾರ ಅಂಗನವಾಡಿಗಳ ಮೂಲಕ ಮಧ್ಯಾಹ್ನದ ವೇಳೆ ಗರ್ಭಿಣಿ ಹಾಗೂ ಬಾಣಂತಿಯರಿಗೆ ಅನ್ನಪೂರ್ಣ ಯೋಜನೆ ಮೂಲಕ ಬಿಸಿಊಟ ನೀಡುವ ಕಾರ್ಯಕ್ರಮವನ್ನು ಇಂದಿನಿಂದಲೇ ಆರಂಭಿಸಿದೆ. ಇದರ ಜತೆಯಲ್ಲಿಯೆ ಕಬ್ಬಿಣಾಂಶದ ಮಾತ್ರೆಗಳನ್ನು ಸಹ ನೀಡಲಾಗುತ್ತದೆ ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಯೋಜನೆ ಅನುಷ್ಟಾನದ ಜವಾಬ್ದಾರಿಯು ಇದೆ. ಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವು ಇದೆ. ಆರಂಭದಲ್ಲಿ ಈ ಹಿಂದೆಯೂ ಜನಪರ ಯೋಜನೆಗಳಿಗೆ ಅಡ್ಡಿ, ತೊಡಕುಗಳು ಎದುರಾಗಿ ಬಳಿಕ ಎಲ್ಲವೂ ಪರಿಹಾರವಾಗಿ ಯೋಜನೆಗಳು ಸುಸೂತ್ರವಾಗಿ ಯಶಸ್ವಿಯಾಗಿವೆ. ಹೀಗಾಗಿ ಯಾವುದೇ ಅಡಚಣೆಗಳಿಗೆ ಎದೆಗುಂದದೆ ಅನುಕೂಲವಾಗಿರುವ ಯೋಜನೆಯನ್ನು ಪ್ರೀತಿ, ವಿಶ್ವಾಸದ ಮೂಲಕ ತಲುಪಿಸಲು ಮುಂದಾಗಬೇಕು. ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳನ್ನು ಸರ್ಕಾರ ಹಂತಹಂತವಾಗಿ ಪರಿಹರಿಸಲಿದೆ ಎಂದರು.
ಹುಟ್ಟುವ ಮಗು, ತಾಯಿ ಆರೋಗ್ಯ ದೃಷ್ಟಿಯಿಂದ ಅನುಷ್ಠಾನ ಮಾಡಲಾಗುತ್ತಿರುವ ಮಾತೃಪೂರ್ಣ ಯೋಜನೆ ಸರಿಯಾಗಿ ಗ್ರಾಮಮಟ್ಟದಲ್ಲಿ ತಲುಪುತ್ತಿದೆಯೆ ಎಂಬ ಬಗ್ಗೆ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಜನಪ್ರತಿನಿಧಿಗಳು ಸಹ ಪರಿಶೀಲಿಸಬೇಕಿದೆ. ಯೋಜನೆ ಫಲಾನುಭವಿಗಳಿಗೆ ತಲುಪಿಸಲು ತೊಡಕುಗಳು, ಲೋಪಗಳು ಕಂಡುಬಂದರೆ ಕೂಡಲೇ ಗಮನಕ್ಕೆ ತರಬೇಕು. ಯೋಜನೆ ಫಲಪ್ರದವಾಗಲು ಎಲ್ಲರ ಹೊಣೆಗಾರಿಕೆಯು ಇದೆ ಎಂದು ಉಸ್ತುವಾರಿ ಸಚಿವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಸಚಿವರಾದ ಡಾ. ಎಂ.ಸಿ.ಮೋಹನಕುಮಾರಿ ಉರುಫ್ ಗೀತಾಮಹದೇವಪ್ರಸಾದ್ ಅವರು ಜಿಲ್ಲೆಯಲ್ಲಿ 1421 ಅಂಗನವಾಡಿಗಳ ಮೂಲಕ 16800 ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಾತೃಪೂರ್ಣ ಯೋಜನೆಯಡಿ ಮಧ್ಯಾಹ್ನದ ಪೌಷ್ಠಿಕ ಬಿಸಿಊಟ ನೀಡಲಾಗುತ್ತಿದೆ. ಅನ್ನ, ಸಾಂಬಾರ್, ಪಲ್ಯ, ಬೇಯಿಸಿದ ಮೊಟ್ಟೆ, ಹಾಲು, ಬೆಲ್ಲ ಮತ್ತು ಕಡಲೇ ಬೀಜದಿಂದ ಮಾಡಿದ ಚಿಕ್ಕಿ ತಿನಿಸನ್ನು ನೀಡಲಾಗುತ್ತದೆ. ಮೊಟ್ಟೆ ತಿನ್ನದವರಿಗೆ ಮೊಳಕೆ ಬರಿಸಿದ ಕಾಳು ನೀಡಲಾಗುತ್ತಿದೆ. ಇದರಿಂದ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಅಂಶಗಳನ್ನು ಒದಗಿಸಲಾಗುತ್ತದೆ ಎಂದರು.
ರಾಜ್ಯಸರ್ಕಾರ ಶುದ್ಧ ಕುಡಿಯುವ ನೀರು, ನೈರ್ಮಲ್ಯ ವ್ಯವಸ್ಥೆ, ನಮ್ಮ ಗ್ರಾಮ ನಮ್ಮ ರಸ್ತೆ ಹೀಗೆ ಹಲವಾರು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಿಗೆ ಒತ್ತು ನೀಡಿದೆ. ಹಲವಾರು ಜನಪರ ಯೋಜನೆಗಳನ್ನು ಅನುಷ್ಟಾನ ಮಾಡುವ ಮೂಲಕ ನೆರವಾಗುತ್ತಿದೆ. ಏಕಕಾಲದಲ್ಲಿ ಮತೃಪೂರ್ಣ ಯೋಜನೆಗೆ ಚಾಲನೆ ನೀಡಿದ್ದು, ಇದರೊಂದಿಗೆ ಮಹಿಳೆಯರ ಅರೋಗ್ಯ ತಪಾಸಣೆಗೂ ಕಾರ್ಯಕ್ರಮ ರೂಪಿಸಿದೆ ಎಂದರು.
ಜಿಲ್ಲಾಧಿಕಾರಿ ಬಿ. ರಾಮು ಪ್ರಾಸ್ತಾವಿಕ ಮಾತನಾಡಿ ತಾಯಿ ಮತ್ತು ಮಗುವಿನ ಆರೋಗ್ಯ ವೃದ್ಧಿಗಾಗಿ ರೂಪಿಸಲಾಗಿರುವ ಮಾತೃಪೂರ್ಣ ಯೋಜನೆ ಅತ್ಯುತ್ತಮವಾಗಿದೆ. ಅಪೌಷ್ಠಿಕತೆ ಹಾಗೂ ಅನಾರೋಗ್ಯ ಮುಕ್ತವನ್ನಾಗಿಸುವ ಆಶಯದೊಂದಿಗೆ ಯೋಜನೆಯನ್ನು ವ್ಯಾಪಕವಾಗಿ ಇಂದಿನಿಂದಲೇ ಅಂಗನವಾಡಿಗಳ ಮೂಲಕ ಅನುಷ್ಟಾನ ಮಾಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಾಡಾಗಿದ್ದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ನಮನ ಸಲ್ಲಿಸಿದರು.
ಪುರಸಭೆ ಅಧ್ಯಕ್ಷರಾದ ಪಿ. ಗಿರೀಶ್, ಕಾಡಾ ಅಧ್ಯಕ್ಷರಾದ ಎಚ್.ಎಸ್.ನಂಜಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ಎನ್. ನಟೇಶ್, ಉಪಾಧ್ಯಕ್ಷರಾದ ರೂಪ, ಜಿಲ್ಲಾ ಪಂಚಯತ್ ಸದಸ್ಯರಾದ ಕೆ.ಎಸ್. ಮಹೇಶ್, ಹೆಚ್ಚುವರಿ ಜಿಲ್ಲಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ಎ.ಜೆ. ರೂಪ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರಾಜ್ಯಸರ್ಕಾರದಿಂದ ಜನಪರ ಯೋಜನೆಗಳ ಅನುಷ್ಠಾನ : ಯು.ಟಿ. ಖಾದರ್
ಚಾಮರಾಜನಗರ, ಅ. 02 - ರಾಜ್ಯಸರ್ಕಾರ ಕಳೆದ ನಾಲ್ಕುವರೆ ವರ್ಷಗಳಲ್ಲಿ ಎಲ್ಲ ವರ್ಗದ ಜನರು ನೆಮ್ಮದಿ ಹಾಗೂ ಆತ್ಮವಿಶ್ವಾಸದಿಂದ ಬದುಕು ನಡೆಸಲು ಪೂರಕವಾಗಿರುವ ಯೋಜನೆಗಳನ್ನು ಅನುಷ್ಟಾನ ಮಾಡಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ತಿಳಿಸಿದರು.
ಗುಂಡ್ಲುಪೇಟೆ ಪಟ್ಟಣದಲ್ಲಿಂದು ಮಾತೃಪೂರ್ಣ ಯೋಜನೆಯ ಉದ್ಘಾಟನೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಸ್ತುವಾರಿ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ರೈತರ ಸಹಕಾರಿ ಬ್ಯಾಂಕುಗಳ ಸಾಲ ಮನ್ನಾ ಮಾಡಿದೆ. ಹಸಿವು ಮುಕ್ತ ರಾಜ್ಯವನ್ನಾಗಿಸುವ ಉದ್ದೇಶದಿಂದ ಉಚಿತವಾಗಿ ಅಕ್ಕಿ ವಿತರಿಸುತ್ತಿದೆ. ಇದೀಗ ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯ ಹಿತವನ್ನು ಗಮನದಲ್ಲಿಟ್ಟುಕೊಂಡು ಮಾತೃಪೂರ್ಣ ಯೋಜನೆಯನ್ನು ರಾಜ್ಯದೆಲ್ಲೆಡೆ ಏಕಕಾಲದಲ್ಲಿ ಆರಂಭಿಸಿದೆ ಎಂದರು.
ಅರ್ಹರಿಗೆ ತ್ವರಿತವಾಗಿ ಪಡಿತರ ಚೀಟಿ ನೀಡುವ ವಿಶಿಷ್ಟ ಕಾರ್ಯಕ್ರಮ ಪ್ರಗತಿಯಲ್ಲಿದೆ. ಆನ್‍ಲೈನ್ ಮೂಲಕ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಮನೆಯ ಬಾಗಿಲಿಗೆ ಅಂಚೆ ಮೂಲಕ ಪಡಿತರ ಚೀಟಿ ತಲುಪಿಸುವ ಕಾರ್ಯ ನಡೆದಿದೆ. ಚಾಮರಾಜನಗರ ಜಿಲ್ಲೆಯಲ್ಲಿಯೂ 29583 ಅರ್ಜಿಗಳು ಬಂದಿದ್ದು, ಈ ಪೈಕಿ 10 ಸಾವಿರ ಅರ್ಜಿದಾರರಿಗೆ ಪಡಿತರ ಚೀಟಿ ತಲುಪಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದರು.
ಪಡಿತರ ತಲುಪಿಸುವಲ್ಲಿ ಪಾರದರ್ಶಕತೆ ಹಾಗೂ ನಷ್ಟ ತಪ್ಪಿಸುವ ಸಲುವಾಗಿ ಆಹಾರ ಇಲಾಖೆ ಸಾಕಷ್ಟು ಸುಧಾರಣೆ ತಂದಿದೆ. ಪಾಯಿಂಟ್ ಆಫ್ ಸೇಲ್ ಯಂತ್ರ ಅಳವಡಿಸಿ ಪಡಿತರ ವಿತರಣೆಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಪಡಿತರ ವಿತರಣೆ ಜೊತೆಗೆ ಆಧಾರ್ ಕಾರ್ಡ್, ವಿದ್ಯುತ್, ನೀರಿನ ಬಿಲ್‍ಪಾವತಿ, ಆನ್‍ಲೈನ್ ಅರ್ಜಿ ಸಲ್ಲಿಕೆ ಸೇರಿದಂತೆ ವಿವಿಧ ಸೇವೆ ನೀಡುವ ಸೇವಾಸಿಂಧು ಕೇಂದ್ರಗಳಾಗಿ ನ್ಯಾಯಬೆಲೆ ಅಂಗಡಿಗಳನ್ನು ಪರಿವರ್ತಿಸಲು ಚಿಂತನೆ ನಡೆಸಿದ್ದೇವೆ ಎಂದರು.
ಚಾಮರಾಜನಗರ ಜಿಲ್ಲೆಯು ಸಮಗ್ರವಾಗಿ ಅಭಿವೃದ್ಧಿ ಹೊಂದುವ ಎಲ್ಲಾ ಅವಕಾಶಗಳನ್ನು ಪಡೆಯಲಿದೆ. ಈಗಾಗಲೇ ರಸ್ತೆ, ಹೆದ್ದಾರಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆಲವೆಡೆ ರಸ್ತೆ ಕಾಮಗಾರಿಗೆ ಉಂಟಾಗಿದ್ದ ತೊಡಕುಗಳು ಇನ್ನು 10 ದಿನಗಳಲ್ಲಿ ಪರಿಹಾರವಾಗಲಿದೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳೊಳಗೆ ಎಲ್ಲ ರಸ್ತೆ ಕಾಮಗಾರಿ ಪೂರ್ಣವಾಗಲಿವೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಮಹದೇಶ್ವರ ಬೆಟ್ಟದಲ್ಲಿ 100 ಅಡಿ ಎತ್ತರದ ಮಹದೇಶ್ವರ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಶೀಘ್ರವೇ ಚಾಲನೆ ನೀಡಲಾಗುತ್ತದೆ. ಉಳಿದ ಭಕ್ತಾಧಿಗಳ ಸೌಕರ್ಯ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗಿದೆ. ಈಗಾಗಲೇ ಗುಂಡ್ಲುಪೇಟೆ ತಾಲೂಕಿಗೆ ನದಿಮೂಲದಿಂದ ಶಾಶ್ವತ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಯೋಜನೆ ಮುಖ್ಯಮಂತ್ರಿಯವರಿಂದ ಲೋಕಾರ್ಪಣೆಯಾಗಿದೆ. ಚಾಮರಾಜನಗರ ತಾಲೂಕಿನ ಗ್ರಾಮಗಳಿಗೂ ನದಿಮೂಲದಿಂದ ನೀರು ಸರಬರಾಜು ಮಾಡುವ ಬಹುಗ್ರಾಮ ಕುಡಿಯುವ ನೀರು ಯೋಜನೆ ಅದಷ್ಟು ಬೇಗನೆ ನಾಗರಿಕರ ಸೇವೆಗೆ ಸಮರ್ಪಣೆಯಾಗಲಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರಾದ ಡಾ ಎಂ.ಸಿ.ಮೋಹನಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್, ಪುರಸಭೆ ಅಧ್ಯಕ್ಷರಾದ ಪಿ. ಗಿರೀಶ್, ಕಾಡಾ ಅಧ್ಯಕ್ಷರಾದ ಎಚ್. ಎಸ್.ನಂಜಪ್ಪ, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಮುನಿರಾಜು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಅಕ್ಟೋಬರ್ 3ರಂದು ವಿಷನ್ ಡಾಕ್ಯುಮೆಂಟ್ ಕುರಿತ ನೀಲನಕ್ಷೆ ತಯಾರಿ ಪೂರ್ವಭಾವಿ ಸಭೆ: ಆಹ್ವಾನ
ಚಾಮರಾಜನಗರ, ಅ. 02 - ಮುಂದಿನ ಏಳು ವರ್ಷಗಳಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ದೃಷ್ಠಿಯಲ್ಲಿರಿಸಿಕೊಂಡು ರಾಜ್ಯ ಸರ್ಕಾರವು ವಿಷನ್-2025 ಡಾಕ್ಯುಮೆಂಟ್ ನೀಲನಕ್ಷೆ ತಯಾರಿಸುವ ಸಂಬಂಧ ಸಾಮಾಜಿಕ ನ್ಯಾಯ, ಆರೋಗ್ಯ ಮತ್ತು ಶಿಕ್ಷಣ ಕುರಿತು ಅಭಿಪ್ರಾಯ ಮಂಡಿಸಲು ಅಕ್ಟೋಬರ್ 3ರಂದು ಮಧ್ಯಾಹ್ನ 2.30 ಗಂಟೆಗೆ ನಗರದ ಕೆ.ಡಿ.ಪಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ.
ಶಿಕ್ಷಣ ತಜ್ಞರು, ಧಾರ್ಮಿಕ ನಾಯಕರು, ಬುದ್ದಿಜೀವಿಗಳು, ಪ್ರಜ್ಞಾವಂತ ನಾಗರಿಕರು, ವಿವಿಧ ಸಂಘಸಂಸ್ಥೆಯ ಮುಖಂಡರು, ಪದಾಧಿಕಾರಿಗಳು ಸಭೆಗೆ ಹಾಜರಾಗಿ ಸೂಕ್ತ ಅಭಿಪ್ರಾಯ, ಸಲಹೆಗಳನ್ನು ನೀಡುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಕೆ. ಸತೀಶ್ ತಿಳಿಸಿದ್ದಾರೆ.
No comments:
Post a Comment