Friday, 6 October 2017

ಕೈಗಾರಿಕೆ ಅಭಿವೃದ್ಧಿ, ಉದ್ಯೋಗ ಕೌಶಲ್ಯ ಕುರಿತು ಪೂರ್ವಭಾವಿ ಸಭೆ : ವ್ಯಕ್ತವಾದ ಅನಿಸಿಕೆ ಸಲಹೆ (06-10-20107)

   

 ಕೈಗಾರಿಕೆ ಅಭಿವೃದ್ಧಿ, ಉದ್ಯೋಗ ಕೌಶಲ್ಯ  ಕುರಿತು  ಪೂರ್ವಭಾವಿ ಸಭೆ : ವ್ಯಕ್ತವಾದ ಅನಿಸಿಕೆ ಸಲಹೆ


ಚಾಮರಾಜನಗರ, ಅ. 06 - ರಾಜ್ಯದ ಸಮಗ್ರ ಅಭಿವೃದ್ಧಿ ಉದ್ದೇಶದಿಂದ ವಿಷನ್ 2025 ಡಾಕ್ಯುಮೆಂಟ್ ನೀಲ ನಕ್ಷೆ ತಯಾರಿಕೆ ಕುರಿತು  ಕೈಗಾರಿಕಾಭಿವೃದ್ಧಿ, ಸೇವೆ, ಉದ್ಯೋಗ ಮತ್ತು ಕೌಶಲ್ಯ ತರಬೇತಿ ಹಾಗೂ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಹಾಗೂ ಬಯೋಟೆಕ್ನಾಲಜಿ ವಿಷಯದ ಬಗ್ಗೆ ಅಭಿಪ್ರಾಯ ಮಂಡಿಸಲು ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಸಾಕಷ್ಟು ಮಂದಿ ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಪ್ರಸ್ತಾಪಿಸಿದರು.
ನಗರದ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಎನ್. ಮುರುಳೇಶ್ ಅವರ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕೈಗಾರಿಕೋದ್ಯಮಿಗಳು ತಾಂತ್ರಿಕ ವಿಷಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ವರ್ತಕರು ಪಾಲ್ಗೊಂಡು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಭೆಯ ಆರಂಭದಲ್ಲಿ ಮಾತನಾಡಿದ ಮುರುಳೇಶ್ ಅವರು ಮುಂದಿನ 7 ವರ್ಷಗಳಲ್ಲಿ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಕೈಗಾರಿಕೆ, ಸೇವಾವಲಯ, ಉದ್ಯೋಗ ಕೌಶಲ್ಯ ಮತ್ತು ತರಬೇತಿ, ಮಾಹಿತಿ ಸಂಪರ್ಕ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕುರಿತು ಅಭಿಪ್ರಾಯ ಆಲಿಸುವ ಉದ್ದೇಶದಿಂದ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ. ಸಂಬಂಧಪಟ್ಟ ಕ್ಷೇತ್ರಗಳ ಜನರು, ವಿದ್ಯಾರ್ಥಿಗಳು ಸೇರಿದಂತೆ ಯಾರೇ ಅಭಿಪ್ರಾಯ ಅನಿಸಿಕೆ ಸಲಹೆ ನೀಡುವುದನ್ನು ಸ್ವೀಕರಿಸಲಾಗುತ್ತದೆ ಎಂದರು.
ಕೈಗಾರಿಕೆ ಬೆಳವಣಿಗೆಯಿಂದ ಜಿಲ್ಲೆ, ರಾಜ್ಯ ಅಭಿವೃದ್ಧಿ ಹೊಂದಲಿದೆ. ಗ್ರಾಮೀಣ ಭಾಗದಿಂದ ದೊಡ್ಡ ನಗರ ಪಟ್ಟಣಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಲು ತಾಲೂಕು ಹೋಬಳಿ ಜಿಲ್ಲಾ ಕೇಂದ್ರದಲ್ಲಿ ಸ್ಥಾಪನೆ ಮಾಡಬೇಕಿರುವ ಉದ್ಯಮ, ಕೈಗಾರಿಕೆ ಘಟಕಗಳಿಗೆ ಅಗತ್ಯವಿರುವ ನೆರವು ಬಳಸಿಕೊಳ್ಳಬೇಕಿದೆ. ಒಟ್ಟಾರೆ ಕೈಗಾರಿಕೆ ಅಭಿವೃದ್ಧಿಗೆ ಪೂರಕವಾಗಿರುವ ಯೋಜನೆಗೆ ಏನೆಲ್ಲಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂಬ ಬಗ್ಗೆ ನೀಡಬಹುದಾದ ಸಲಹೆಗಳು ಅಭಿಪ್ರಾಯಗಳನ್ನು ಕ್ರೋಢೀಕರಿಸಲಾಗುತ್ತದೆ ಎಂದು ಮುರುಳೇಶ್ ತಿಳಿಸಿದರು.
ಬಳಿಕ ಸಭೆಯಲ್ಲಿ ಹಾಜರಿದ್ದ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಮಾತನಾಡಿ ಜಿಲ್ಲಾ ಕೇಂದ್ರದಲ್ಲಿ ಕೈಗಾರಿಕಾ ಪ್ರದೇಶವು ವಿಸ್ತಾರವಾಗಿ ನಿರ್ಮಾಣವಾಗುತ್ತಿದೆ. ಇಲ್ಲಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಉದ್ಯಮಿಗಳು ಕೈಗಾರಿಕೆ ಘಟಕ ಸ್ಥಾಪಿಸಲು ಉತ್ತೇಜಿಸಬೇಕು. ಇದರಿಂದ ಉದ್ಯೋಗ ಅವಕಾಶಗಳು ಸೃಷ್ಠಿಯಾಗಲಿದ್ದು ಜಿಲ್ಲೆಯ ಬೆಳವಣಿಗೆಗೂ ಕೊಡುಗೆ ನೀಡಿದಂತಾಗುತ್ತದೆ ಎಂದರು.
ಕೆಲ ವಿದ್ಯಾರ್ಥಿಗಳು ಸಹ ಮಾತನಾಡಿ ಚಾಮರಾಜನಗರ ಜಿಲ್ಲೆಯಲ್ಲಿ ಸಾಫ್ಟ್ ವೇರ್ ತಂತ್ರಜ್ಞಾನ ಉದ್ಯಮಗಳು ಸಹ ಆರಂಭವಾಗಬೇಕು. ಇದಕ್ಕೆ ಪೂರಕವಾಗಿ ನೀಡಬೇಕಿರುವ ಅಗತ್ಯತೆಗಳ ಬಗ್ಗೆ ಗುರುತಿಸುವಂತಾಗಬೇಕು ಎಂದರು.
ಇತರೆ ಪ್ರತಿನಿಧಿಗಳು ಮಾತನಾಡಿ ಜಿಲ್ಲೆಯಲ್ಲಿ ಈ ಹಿಂದೆ ಸಾವಿರಾರು ಕುಟುಂಬಗಳು ಕೈಮಗ್ಗ ನೇಯ್ಗೆಯನ್ನು ನಿರ್ವಹಿಸುತ್ತಿದ್ದರು. ಇಂದಿಗೂ ಸಹ ರೇಷ್ಮೆ ಸೇರಿದಂತೆ ಇನ್ನಿತರ ನೇಯ್ಗೆ ಚಟುವಟಿಕೆ ನಿರ್ವಹಿಸುವ ಕುಟುಂಬಗಳು ಇವೆ. ಇವರನ್ನೂ ಸಹ ಗಮನದಲ್ಲಿಟ್ಟುಕೊಂಡು ರೇಷ್ಮೆ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಯಮಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ವಿವಿಧ ಕ್ಷೇತ್ರಗಳ ಪ್ರತಿನಿಧಿಗಳಾದ ಕೃಷ್ಣಮೂರ್ತಿ, ಮಹೇಶ್, ಎಲ್. ಸುರೇಶ್, ಶಶಿಕುಮಾರ್, ನಾಗೇಂದ್ರ ಸೇರಿದಂತೆ ಇತರರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಜಿಲ್ಲಾ ಉದ್ಯೋಗಾಧಿಕಾರಿ ಸಿ.ಎಂ. ಉಮಾ, ಸಿಡಾಕ್ ಕೇಂದ್ರದ ಉಪನಿರ್ದೇಶಕರಾದ ಮಧು, ಜವಳಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆಗಳ ಪ್ರಮುಖ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಅ. 10ರಂದು ತಾ.ಪಂ. ಸಾಮಾನ್ಯ ಸಭೆ

ಚಾಮರಾಜನಗರ, ಅ. 06:- ಚಾಮರಾಜನಗರ  ತಾಲೂಕು ಪಂಚಾಯಿತಿಯ ಸಾಮಾನ್ಯ ಸಭೆಯು  ಅಧ್ಯಕ್ಷರಾದ ಎಚ್.ವಿ. ಚಂದ್ರು ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 10ರಂದು ಬೆಳಿಗ್ಗೆ 11 ಗಂಟೆÉಗೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.


ನವೋದಯ ವಿದ್ಯಾಲಯ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

ಚಾಮರಾಜನಗರ, ಅ. 06 - ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ 2018-19ನೇ ಸಾಲಿನ 6ನೇ ತರಗತಿ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪ್ರವೇಶ ಪರೀಕ್ಷೆ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಿದ್ದು 2018ರ ಫೆಬ್ರವರಿ 10ರಂದು ಪ್ರವೇಶ ಪರೀಕ್ಷೆ ನಿಗದಿಯಾಗಿದೆ.
ಇದೇ ಮೊದಲ ಬಾರಿಗೆ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಸುಲಭ ಮತ್ತು ಸರಳ ರೀತಿಯಲ್ಲಿ ಗ್ರಾಮಗಳಲ್ಲಿರುವ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಭರ್ತಿ ಮಾಡಿಕೊಡಲಾಗುತ್ತದೆ.
2017-18ನೇ ಸಾಲಿನಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ದಿನಾಂಕ 1.5.2005 ಮತ್ತು 30.4.2009ರ ನಡುವೆ ಜನಿಸಿದವರಾಗಿರಬೇಕು. ಓದುತ್ತಿರುವ ಶಾಲೆಯ ಮುಖ್ಯೋಪಾಧ್ಯಾಯರಿಂದ ವಿದ್ಯಾರ್ಥಿಯ ವಿವರವನ್ನೊಳಗೊಂಡ ಪ್ರಮಾಣ ಪತ್ರ ಪಡೆದು ಯಾವುದೇ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (ಕಾಮನ್ ಸರ್ವೀಸ್ ಸೆಂಟರ್) ಅರ್ಜಿ ಸಲ್ಲಿಸಬೇಕು. ಪ್ರಮಾಣ ಪತ್ರವನ್ನು ಅಪ್ ಲೋಡ್ ಮಾಡಬೇಕು. ಅರ್ಜಿ ಸಲ್ಲಿಕೆಗೆ ನವೆಂಬರ್ 25 ಕಡೆಯ ದಿನವಾಗಿದೆ. ವಿವರಗಳಿಗೆ ಮೊಬೈಲ್ ಸಂಖ್ಯೆ 9448552463 ಹಾಗೂ 9611004274 ಸಂಪರ್ಕಿಸುವಂತೆ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ. 7ರಂದು ಜಿ.ಪಂ. ಸಾಮಾನ್ಯ ಸಭೆ

ಚಾಮರಾಜನಗರ, ಅ. 06 - ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯು ಅಧ್ಯಕ್ಷರಾದ ಎಂ. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 7ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
****************














No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು