ನವಜಾತ ಗಂಡು ಶಿಶುವಿನ ವಾರಸುದಾರರ ಪತ್ತೆಗೆ ಮನವಿ
VSS -------------9480030980
ಚಾಮರಾಜನಗರ, ಅ. 17 - ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ವಾಹನದ ನಿಲುಗಡೆಯ ಸ್ಥಳದಲ್ಲಿ ಸೆಪ್ಟೆಂಬರ್ 14ರಂದು ರಾತ್ರಿ 11.45ರ ಸಮಯದಲ್ಲಿ ನವಜಾತ ಗಂಡು ಶಿಶುವನ್ನು ಬಿಸಾಡಿ ಹೋಗಿರುತ್ತಾರೆ. ಮಗುವಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಿ ಲಾಲನೆ, ಪೋಷಣೆ ಹಾಗೂ ರಕ್ಷಣೆಗಾಗಿ ದತ್ತು ಕೇಂದ್ರಕ್ಕೆ ದಾಖಲಿಸಲಾಗಿದೆ.
ಒಂದು ತಿಂಗಳ ಮಗುವಾಗಿದ್ದು, ಕೆಂಪು ಮೈ ಬಣ್ಣ, ದುಂಡು ಮುಖ ಹೊಂದಿದ್ದು 2.9 ಕೆಜಿ ತೂಕವಿದೆ. ಸಂಸ್ಥೆಯವರು ಮಗುವಿಗೆ ಅಭಿನವ್ ಎಂದು ಹೆಸರಿಸಿದ್ದಾರೆ. ಮಗುವಿನ ವಾರಸುದಾರರು ಇದ್ದಲ್ಲಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು (ದೂ.ಸಂ. 08226-222354), ಮಕ್ಕಳ ಕಲ್ಯಾಣ ಸಮಿತಿ, ಬಾಲಕಿಯರ ಸರ್ಕಾರಿ ಬಾಲಮಂದಿರ, ಹೌಸಿಂಗ್ ಬೋರ್ಡ್ ಕಾಲೋನಿ, ಚಾಮರಾಜನಗರ (ದೂರವಾಣಿ ಸಂಖ್ಯೆ 08226-225711) ಅಥವಾ ಪಟ್ಟಣ ಪೊಲೀಸ್ ಠಾಣೆ (ದೂ.ಸಂಖ್ಯೆ 08226-222047) ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಉಸ್ತುವಾರಿ ಸಚಿವರು
ಚಾಮರಾಜನಗರ, ಅ. 17 :- ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ (ಗೀತಾಮಹದೇವಪ್ರಸಾದ್) ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ನಗರದಲ್ಲಿ ಜಿಲ್ಲಾಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಪ್ರಮುಖ ಇಲಾಖೆಗಳಾದ ಕೃಷಿ, ತೋಟಗಾರಿಕೆ, ಆರೋಗ್ಯ, ಶಿಕ್ಷಣ, ಆಹಾರ, ಸಮಾಜ ಕಲ್ಯಾಣ, ಕೈಗಾರಿಕೆ, ಅರಣ್ಯ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ಕುಡಿಯುವ ನೀರು ಸೇರಿದಂತೆ ಪ್ರತಿ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮ ಹಾಗೂ ಯೋಜನೆಗಳ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಅಭಿವೃದ್ಧಿ ಹಾಗೂ ಪ್ರಗತಿಯಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಅಧಿಕಾರಿ ಕೆಲಸ-ಕಾರ್ಯವೈಖರಿ ಬಹಳ ಪ್ರಾಮುಖ್ಯತೆ ಪಡೆದಿದೆ. ಆಯಾ ಇಲಾಖೆಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಯಾವುದೇ ವಿಳಂಬ ಮಾಡದೇ ಸಮರ್ಪಕವಾಗಿ ಅರ್ಹರಿಗೆ ಸೌಲಭ್ಯಗಳನ್ನು ತಲುಪಿಸಬೇಕು ಎಂದರು.
ಜಿಲ್ಲೆಯ ಪ್ರಗತಿಗೆ ಪೂರಕವಾಗಿರುವ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ಅದರ ಸುಲಲಿತ ನಿರ್ವಹಣೆಗೆ ಜಿಲ್ಲಾ ಹಾಗೂ ತಾಲೂಕುಮಟ್ಟದ ಎಲ್ಲಾ ಅಧಿಕಾರಿಗಳು ಕ್ರೀಯಾಶೀಲರಾಗಿ ಶ್ರಮಿಸಬೇಕು. ಸರ್ಕಾರದ ಯೋಜನೆಗಳನ್ನು ಕಾಲಕಾಲಕ್ಕೆ ಜನರಿಗೆ ತಲುಪಿಸಿ ಜಿಲ್ಲೆ ಪ್ರಗತಿಪಥದತ್ತ ಸಾಗುವಂತೆ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಬೇಕು ಎಂದು ಸಚಿವರು ತಿಳಿಸಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಯೆ ನಮ್ಮ ಗುರಿಯಾಗಿರಬೇಕು. ಯಾವುದೇ ಕಾರ್ಯಕ್ರಮಗಳ ನಿಗಧಿತ ಗುರಿ ತಲುಪಲು ಸಂಬಂಧಪಟ್ಟ ಇಲಾಖೆಗಳು ಅಗತ್ಯವಾಗಿರುವ ಅನುದಾನದ ಪ್ರಸ್ತಾವನೆ ಸಲ್ಲಿಸಿದರೆ ಅದನ್ನು ಮುಖ್ಯಮಂತ್ರಿಯವರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಲೋಕಸಭಾ ಸದಸ್ಯರಾದ ಆರ್. ಧ್ರುವಾರಾಯಣ ಅವರು ಮಾತನಾಡಿ ಸರ್ಕಾರವು ಪ್ರತಿವರ್ಷ ಕಾರ್ಯಕ್ರಮಗಳ ಅನುಷ್ಟಾನಕ್ಕಾಗಿ ತಯಾರಿಸುವ ಕ್ರೀಯಾಯೋಜನೆಯ ಅನುಸಾರ ಇಲಾಖೆಗಳಿಗೆ ಅಗತ್ಯಕ್ಕನುಗುಣವಾಗಿ ಅನುದಾನ ಬಿಡುಗಡೆ ಮಾಡುತ್ತಿದೆ. ವಿವಿಧ ಪ್ರಮುಖ ಅಭಿವೃದ್ಧಿ ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ ಕೃಷಿ ಸೇರಿದಂತೆ ವಿವಿಧ ವಲಯಗಳಿಗೆ ಸಾಕಷ್ಟು ಅನುದಾನ ನೀಡಿದೆ. ಅದರ ಸದ್ವಿನಿಯೋಗವಾಗಬೇಕು ಎಂದರು.
ಕೊಳ್ಳೇಗಾಲ ಶಾಸಕರಾದ ಎಸ್. ಜಯಣ್ಣ, ಹನೂರು ಶಾಸಕರಾದ ಆರ್. ನರೇಂದÀ್ರ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ನಗರಸಭೆ ಅಧ್ಯಕ್ಷರಾದ ಶೋಭಾಪುಟ್ಟಸ್ವಾಮಿ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‍ಕುಮಾರ್ ಹಾಗೂ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಅ. 22ರಂದು ವಾಹನಗಳ ಬಹಿರಂಗ ಹರಾಜು
ಚಾಮರಾಜನಗರ, ಅ. 17 - ನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಬೇರೆ ಬೇರೆ ದಿನಗಳಲ್ಲಿ ಹಾಗೂ ಸ್ಥಳಗಳಲ್ಲಿ ವಾರಸುದಾರರಿಲ್ಲದೆ ನಿಂತಿದ್ದ ದ್ವಿಚಕ್ರ ವಾಹನಗಳನ್ನು ಹಗಲು ಮತ್ತು ರಾತ್ರಿ ಗಸ್ತಿನ ಸಿಬ್ಬಂದಿಗಳು ತಂದು ನಿಲ್ಲಿಸಿರುತ್ತಾರೆ.ವಾಹನಗಳ ಆರ್ ಸಿ ಮಾಲೀಕರು ಈವರೆಗೂ ವಾಹನಗಳನ್ನು ಗುರುತಿಸಿ ತೆಗೆದುಕೊಂಡು ಹೋಗಿರುವುದಿಲ್ಲ ಮತ್ತು ಆರ್.ಸಿ. ಮಾಲೀಕರು ಪತ್ತೆಯಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ನಿಯಮದಂತೆ ದ್ವಿಚಕ್ರ ವಾಹನಗಳನ್ನು ಬಹಿರಂಗ ಹರಾಜು ಮಾಡಿ ಹಣವನ್ನು ನ್ಯಾಯಾಲಯಕ್ಕೆ ಪಾವತಿಸಬೇಕಾಗಿದೆ.
ಅದರನ್ವಯ ದ್ವಿಚಕ್ರ ವಾಹನಗಳನ್ನು ಅಕ್ಟೋಬರ್ 22ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಸಂಚಾರಿ ಪೊಲೀಸ್ ಠಾಣೆ ಆವರಣದಲ್ಲಿ ಸಾರ್ವಜನಿಕವಾಗಿ ಬಹಿರಂಗ ಹರಾಜು ಮಾಡಲಾಗುವುದು. ಆಸಕ್ತರು ಹರಾಜಿನಲ್ಲಿ ಭಾಗವಹಿಸುವಂತೆ ಪಟ್ಟಣ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮಹದೇವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ. 30ರಂದು ವೀರನಪುರದಲ್ಲಿ ಅಂಚೆ ಸಂತೆ
ಚಾಮರಾಜನಗರ, ಅ. 17 – ಅಂಚೆ ಇಲಾಖೆಯು ಗುಂಡ್ಲುಪೇಟೆ ತಾಲೂಕಿನ ವೀರನಪುರ ಗ್ರಾಮದಲ್ಲಿ ಅಕ್ಟೋಬರ್ 30ರಂದು ಅಂಚೆ ಸಂತೆ ಹಮ್ಮಿಕೊಂಡಿದೆ.ಅಂಚೆ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಆವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಸುರಕ್ಷಾ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ ಜೀವ ವಿಮೆ, ಇತರೆ ಅಂಚೆ ಜೀವವಿಮೆ ಇನ್ನಿತರ ಅಂಚೆ ಯೋಜನೆಗಳನ್ನು ಸ್ವೀಕರಿಸಲಾಗುತ್ತದೆ.
ವೀರನಪುರ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಅಂಚೆಸಂತೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಅಂಚೆ ಅಧೀಕ್ಷಕರಾರಾದ ಜಿ.ಸಿ. ಶ್ರೀನಿವಾಸ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ನಿರುದ್ಯೋಗಿಗಳಿಂದ ವಿವಿಧ ತರಬೇತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಅ. 17 - ನಗರ ತಾಲೂಕಿನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ 2017-18ನೇ ಸಾಲಿಗೆ ಪರಿಶಿಷ್ಟ ವರ್ಗ ಜನಾಂಗದ ನಿರುದ್ಯೋಗಿ ಯುವಕ ಯುವತಿಯರಿಗೆ ಭಾರಿ ವಾಹನ, ಲಘುವಾಹನ, ಕಂಪ್ಯೂಟರ್, ಟೈಲರಿಂಗ್ (ಯುವತಿಯರಿಗೆ), ಗೃಹ ಉಪಯೋಗ ವಿದ್ಯುತ್ ಉಪಕರಣ ಹಾಗೂ ಮೊಬೈಲ್ ದುರಸ್ತಿ ತರಬೇತಿ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಿದೆ.
ಕನಿಷ್ಟ ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರಬೇಕು. ವಾಹನ ತರಬೇತಿಗೆ 21 ರಿಂದ 35 ವರ್ಷ, ಇತರೆ ತರಬೇತಿಗೆ 18 ರಿಂದ 35ರ ವಯೋಮಿತಿಯೊಳಗಿರಬೇಕು. ಕುಟುಂಬದ ವಾರ್ಷಿಕ ವರಮಾನ 2 ಲಕ್ಷ ರೂ. ಮೀರಿರಬಾರದು. ಯಾವುದೇ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ, ತರಬೇತಿ ಪಡೆಯುತ್ತಿರಬಾರದು. ಲಘು ವಾಹನ ಪರವಾನಗಿ (ಎಲ್‍ಎಂವಿ) ಪಡೆದು ಒಂದು ವರ್ಷವಾಗಿರಬೇಕು. ವಾಹನ ತರಬೇತಿಗೆ ಕನಿಷ್ಟ 160 ಸೆಂ.ಮೀ. ಎತ್ತರ, 50 ಕೆಜಿ ತೂಕ ಇರಬೇಕು.
ಒಬ್ಬ ಅಭ್ಯರ್ಥಿಯು ಒಂದು ತರಬೇತಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ ಅರ್ಜಿಯನ್ನು ನಗರದ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಅಕ್ಟೋಬರ್ 31ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿ ಹಾಗೂ ನಿಬಂಧನೆಗಳಿಗಾಗಿ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ (08226-223823) ಅವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಜಾತ್ರಾ ಪ್ರಯುಕ್ತ ವಿಶೇಷ ಬಸ್ ವ್ಯವಸ್ಥೆ
ಚಾಮರಾಜನಗರ, ಅ. 17 - ನಗರ ವಿಭಾಗದ ಕೆಎಸ್‍ಆರ್‍ಟಿಸಿ ನಿಗಮದ ವತಿಯಿಂದ ದೀಪಾವಳಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಮಲೆಮಹದೇಶ್ವರ ಬೆಟ್ಟಕ್ಕೆ ಚಾಮರಾಜನಗರ, ಗುಂಡ್ಲುಪೇಟೆ, ತೆರಕಣಾಂಬಿ, ನಂಜನಗೂಡು, ಹುಲ್ಲಹಳ್ಳಿ, ಸರಗೂರು, ಹೆಚ್ ಡಿ ಕೋಟೆ, ಮೈಸೂರು, ಕೊಳ್ಳೇಗಾಲ, ಮಳವಳ್ಳಿ, ಕನಕಪುರ ಹಾಗೂ ಬೆಂಗಳೂರಿನಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಅಶೋಕ್ ಕುಮಾರ್ ತಿಳಿಸಿದ್ದಾರೆ.
No comments:
Post a Comment