Sunday, 29 October 2017

ನ. 1 ರಿಂದ ಕಾಲುಬಾಯಿ ಜ್ವರ ತಡೆಗೆ ಲಸಿಕೆ ಆಂದೋಲನ : ಪಶುಪಾಲನೆ ಇಲಾಖೆಯಿಂದ ಅಗತ್ಯ ಸಿದ್ಧತೆ ....VSS (29-10-2017)

ನ. 1 ರಿಂದ ಕಾಲುಬಾಯಿ ಜ್ವರ ತಡೆಗೆ ಲಸಿಕೆ ಆಂದೋಲನ : ಪಶುಪಾಲನೆ ಇಲಾಖೆಯಿಂದ ಅಗತ್ಯ ಸಿದ್ಧತೆ  ....VSS

ಚಾಮರಾಜನಗರ, ಅ. 29 :- ಜಾನುವಾರುಗಳಿಗೆ ತಗಲುವ ಕಾಲುಬಾಯಿ ಜ್ವರವನ್ನು ಪರಿಣಾಮಕಾರಿಯಾಗಿ ತಡೆಯುವ ಉದ್ದೇಶದಿಂದ ಜಿಲ್ಲಾದ್ಯಂತ ನವೆಂಬರ್ 1 ರಿಂದ 25ರವರೆಗೆ 13ನೇ ಸುತ್ತಿನ ಲಸಿಕೆ ನೀಡುವ ಕಾರ್ಯ ವ್ಯಾಪಕವಾಗಿ ನಡೆಯಲಿದ್ದು ಇದಕ್ಕಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಜ್ಜುಗೊಂಡಿದೆ.
ಜಿಲ್ಲೆಯಲ್ಲಿ ಜಾನುವಾರು ಗಣತಿ ಪ್ರಕಾರ ಒಟ್ಟು 249698 ಜಾನುವಾರುಗಳನ್ನು ಗುರುತಿಸಲಾಗಿದೆ. ಚಾಮರಾಜನಗರ ತಾಲೂಕಿನಲ್ಲಿ 73472, ಗುಂಡ್ಲುಪೇಟೆ ತಾಲೂಕಿನಲ್ಲಿ 70330, ಕೊಳ್ಳೇಗಾಲ ತಾಲೂಕಿನಲ್ಲಿ 93292 ಮತ್ತು ಯಳಂದೂರು ತಾಲೂಕಿನಲ್ಲಿ 12604 ಜಾನುವಾರುಗಳು ಇವೆ ಎಂದು ಗಣತಿಯಲ್ಲಿ ಗುರುತಿಸಿದ್ದು ಈ ಎಲ್ಲ ಜಾನುವಾರುಗಳಿಗೆ ಲಸಿಕೆ ನೀಡÀಲಾಗುತ್ತದೆ.
ಜಾನುವಾರುಗಳಿಗೆ ಲಸಿಕೆ ನೀಡುವ ಸಲುವಾಗಿ ಜಾನುವಾರು ಸಂಖ್ಯೆಗಳಿಗೆ ಅನುಗುಣವಾಗಿ ಒಟ್ಟು 27 ಲಸಿಕಾ ತಂಡ ರಚಿಸಲಾಗಿದೆ. ಪ್ರತಿ ತಂಡದಲ್ಲಿ  5 ರಿಂದ 6 ಮಂದಿ ಅರೆತಾಂತ್ರಿಕ ಸಿಬ್ಬಂದಿ ಇದ್ದು ಪಶುವೈದ್ಯರೊಬ್ಬರು ತಂಡದ ಮುಖ್ಯಸ್ಥರಾಗಿ ಇರಲಿದ್ದಾರೆ. ಚಾಮರಾಜನಗರ ತಾಲೂಕಿನಲ್ಲಿ 9, ಗುಂಡ್ಲುಪೇಟೆ ತಾಲೂಕಿನಲ್ಲಿ 7, ಕೊಳ್ಳೇಗಾಲ ತಾಲ್ಲೂಕಿಗೆ 8 ಹಾಗೂ ಯಳಂದೂರು ತಾಲ್ಲೂಕಿಗೆ 3 ತಂಡಗಳನ್ನು ನಿಯೋಜಿಸಲಾಗಿದೆ.
ನಿಯೋಜಿತವಾಗಿರುವ ಪ್ರತೀ ತಂಡವು ಒಂದು ದಿನಕ್ಕೆ 750 ರಾಸುಗಳಿಗೆ ಲಸಿಕೆ ಹಾಕಲಿವೆ. ಒಟ್ಟು 27 ತಂಡಗಳಿಗೆ ಪ್ರತಿ ದಿನ 20250 ಜಾನುವಾರುಗಳಿಗೆ ಲಸಿಕೆ ನೀಡಲು ಗುರಿ ನೀಡಲಾಗಿದೆ. ಈ ನಿಗದಿತ ಗುರಿಯೊಂದಿಗೆ ಲಸಿಕೆ ಕಾರ್ಯಕ್ರಮ ನಡೆಸಿ 15 ರಿಂದ 20 ದಿನಗಳೊಳಗೆ ಸಂಪೂರ್ಣ ಪ್ರಗತಿ ಸಾಧಿಸಲು ತೀರ್ಮಾನಿಸಲಾಗಿದೆ.
ಲಸಿಕೆಯನ್ನು ಸ್ಥಳೀಯ ಹಾಗೂ ಮಿಶ್ರತಳಿ ದನಗಳು, ಎಮ್ಮೆಗಳು, ಹಂದಿಗಳಿಗೆ ಕೊಡಲಾಗುತ್ತದೆ. 3 ತಿಂಗಳಿಗಿಂತ ಕಡಿಮೆ ವಯಸ್ಸಿನ ಕರುಗಳು ಹಾಗೂ 6 ತಿಂಗಳು ತುಂಬಿರುವ ಗರ್ಭ ಧರಿಸಿದ ರಾಸುಗಳಿಗೆ ಲಸಿಕೆ ನೀಡುವುದನ್ನು ಮುಂದೂಡಲಾಗುತ್ತದೆ. ಪ್ರತೀ ರಾಸುವಿಗೆ ಪ್ರತ್ಯೇಕ ಡಿಸ್ ಪೋಸಲ್ ಸಿರಿಂಜ್ ಹಾಗೂ ಸೂಜಿಗಳನ್ನು ಉಪಯೋಗಿಸಲಾಗುತ್ತದೆ. ಬೆಳಿಗ್ಗೆ 6 ರಿಂದ 11.30 ಗಂಟೆ ಹಾಗೂ ಸಂಜೆ 5 ರಿಂದ 7 ಗಂಟೆ ಅವಧಿಯೊಳಗೆ ಲಸಿಕೆ ನೀಡಲು ಸೂಚಿಸಲಾಗಿದೆ.
ಪಶುಪಾಲನೆ ಇಲಾಖೆಗೆ ಈಗಾಗಲೇ 2,57,500 ಡೋಸ್ ಲಸಿಕೆ ಸರಬರಾಜಾಗುತ್ತಿದೆ. ಚಾಮರಾಜನಗರ ತಾಲೂಕು ಪಶುವೈದ್ಯ ಆಸ್ಪತ್ರೆಯ ವಾಕ್-ಇನ್-ಕೂಲರ್‍ನಲ್ಲಿ 84400 ಹಾಗೂ ಉಳಿದ 1,73,000 ಡೋಸ್ ಲಸಿಕೆಯನ್ನು ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಯಳಂದೂರಿನ ಪಶುವೈದ್ಯ ಆಸ್ಪತ್ರೆಯ ಬಾಟಲ್ ಕೂಲರ್ಸ್ ಯಂತ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಎಲ್ಲ ಹಂತದಲ್ಲೂ ಲಸಿಕೆಯ ಶೀತಲಿ ಸರಪಳಿ ನಿರ್ವಹಣೆ ಮಾಡಲಾಗಿದೆ. ಪ್ರತಿ ಗ್ರಾಮಕ್ಕೆ ಲಸಿಕೆಯನ್ನು ಕೊಂಡೊಯ್ಯಲು ವ್ಯಾಕ್ಸಿನ್ ಕ್ಯಾರಿಯರ್ ಸೌಲಭ್ಯ ಕಲ್ಪಿಸಲಾಗಿದೆ.
ಲಸಿಕಾ ತಂಡಗಳು ಗ್ರಾಮಗಳಿಗೆ ಸಕಾಲಕ್ಕೆ ತಲುಪಲು ಅವಶ್ಯವಿರುವ ವಾಹನ ವ್ಯವಸ್ಥೆ ಮಾಡಲಾಗಿದೆ. ಚಾಮರಾಜನಗರ ತಾಲೂಕಿಗೆ 9, ಗುಂಡ್ಲುಪೇಟೆ ತಾಲೂಕಿಗೆ 7, ಕೊಳ್ಳೇಗಾಲ ತಾಲ್ಲೂಕಿಗೆ 8 ಹಾಗೂ ಯಳಂದೂರು ತಾಲ್ಲೂಕಿಗೆ 3 ವಾಹನ ಸೇರಿದಂತೆ ಒಟ್ಟು 27 ವಾಹನಗಳನ್ನು ಬಳಕೆ ಮಾಡಿಕೊಳ್ಳÀಲಾಗುತ್ತಿದೆ.
ಕಾರ್ಯಕ್ರಮ ಸಂಬಂಧ ರೈತರು, ಹೈನುಗಾರಿಕೆ ಅವಲಂಬಿತರಿಗೆ ಅರಿವು ಮೂಡಿಸುವ ಉದ್ದೇಶದಿಂದ ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ಪ್ರತಿ ಗ್ರಾಮದಲ್ಲೂ ಭಿತ್ತಿಪತ್ರ ಹಾಗೂ ಕರಪತ್ರಗಳ ಮೂಲಕ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿದೆ. ದೊಡ್ಡ ಗ್ರಾಮಗಳಲ್ಲಿ ಬ್ಯಾನರ್‍ಗಳನ್ನು ಹಾಕಲಾಗುತ್ತಿದೆ. ಗ್ರಾಮ ಪಂಚಾಯತ್ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕವೂ ಸಹ ಪ್ರಚಾರಕ್ಕಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಚಾರಕ್ಕಾಗಿ ಪೋಸ್ಟರ್ಸ್, ಬ್ಯಾನರ್ ಹಾಗೂ  ಕರೆಪತ್ರಗಳನ್ನು ಸಿದ್ದಪಡಿಸಲಾಗಿದೆ.
ಲಸಿಕೆಯನ್ನು ಪ್ರತಿ ದಿನ ಯಾವ ಗ್ರಾಮಕ್ಕೆ ಯಾವ ತಂಡ ಲಸಿಕೆ ನೀಡಲಿದೆ ಎಂಬ ವೇಳಾಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಪ್ರತಿ ಗ್ರಾಮದಲ್ಲಿ ನೀಡಲಾಗುವ ಲಸಿಕೆ ಹಾಗೂ ಇದನ್ನು ನಿರ್ವಹಿಸುವ ಪಶುಪಾಲಕರ ಮಾಹಿತಿಯನ್ನು ಆಯಾ ದಿನವೇ ತಾಲೂಕು ಉಸ್ತುವಾರಿ ಅಧಿಕಾರಿಗೆ ಕಳುಹಿಸಲಾಗುತ್ತದೆ. ಲಸಿಕೆ ವಿವರವನ್ನು ಕಳೆದ ಸುತ್ತಿನಲ್ಲಿ ಪಶುಪಾಲಕರಿಗೆ ನೀಡಿರುವ ಜಾನುವಾರು ಮಾಹಿತಿ ಪಾಸ್ ಪುಸ್ತಕಗಳಲ್ಲಿ ದಾಖಲು ಮಾಡಲಾಗುತ್ತದೆ. ಗ್ರಾಮವಾರು ಲಸಿಕೆ ಮಾಹಿತಿ ವರದಿಯನ್ನು ತಾಲ್ಲೂಕು ಉಸ್ತುವಾರಿ ಅಧಿಕಾರಿಗಳು ಅದೇ ದಿನ ಮಧ್ಯಾಹ್ನ 3 ಗಂಟೆಯೊಳಗೆ ಆನ್ ಲೈನ್ ಮೂಲಕ ರವಾನಿಸಲಿದ್ದಾರೆ.
ಜಿಲ್ಲೆಯ ಎಲ್ಲ ತಾಲೂಕುಗಳ ಲಸಿಕೆ ಮಾಹಿತಿಯನ್ನು ಜಿಲ್ಲಾ ಕೇಂದ್ರಕ್ಕೆ ಪ್ರತಿ ದಿನ 4 ಗಂಟೆಯೊಳಗೆ ರವಾನಿಸಲಾಗುತ್ತದೆ. ಕ್ರೋಡೀಕರಿಸಿದ ಮಾಹಿತಿಯನ್ನು ರಾಜ್ಯಕೇಂದ್ರ ಕಚೇರಿಗೆ ಸಂಜೆ 5 ಗಂಟೆಯೊಳಗೆ ಸಲ್ಲಿಸಲಾಗುತ್ತದೆ. ಯಾವುದೇ ಗ್ರಾಮದ ಲಸಿಕೆ ಪ್ರಗತಿ ನಿರ್ವಹಣೆ ಮಾಹಿತಿಯನ್ನು ನಾಗರಿಕರು ವೀಕ್ಷಿಸಲು ಅವಕಾಶವಿದೆ.
ಲಸಿಕೆ ಮಾಡುವ ಮೊದಲು ಜಾನುವಾರುಗಳಲ್ಲಿ ಜಂತು ನಿವಾರಣೆ ಮಾಡುವುದು ಸೂಕ್ತವೆಂದು ನಿರ್ಧರಿಸಲಾಗಿದೆ. ಇದರಿಂದ ಲಸಿಕೆಯಿಂದ ಉಂಟುಮಾಡುವ ರೋಗನಿರೋಧಕ ಶಕ್ತಿ ಹೆಚ್ಚಾಗಲಿದೆ. ಈ ಉದ್ದೇಶಕ್ಕಾಗಿಯೇ ಸಾಮೂಹಿಕ ಜಂತುನಿವಾರಣಾ ಕಾರ್ಯಕ್ರಮವನ್ನು  ನಡೆಸಲಾಗಿದೆ. ಲಸಿಕೆ ಮಾಡುವ ಮೊದಲು ಫೀಕಲ್  ಮಾದರಿಗಳನ್ನು ಶೇಖರಿಸಿ ಜಂತುನಾಶಕ ಸೇವನೆ ಮಾಡಿಸಿದ ಬಳಿಕ ಅದೇ ರಾಸುಗಳಲ್ಲಿ 28 ದಿನಗಳ ನಂತರ ಪರೀಕ್ಷೆ ನಡೆಸಲಾಗುತ್ತದೆ.
ಲಸಿಕೆ ಉಪಯುಕ್ತತೆಯನ್ನು ಅಳೆಯಲು ಜಿಲ್ಲೆಯ ಆಯ್ದ 10 ಗ್ರಾಮಗಳಲ್ಲಿ 20 ಜಾನುವಾರುಗಳಿಂದ ಲಸಿಕೆ ನೀಡುವ ಮೊದಲು ಸೀರಂ ಶೇಖರಿಸಲಾಗುತ್ತದೆ. ಲಸಿಕೆ ಮಾಡಿದ 28 ದಿನಗಳ ಬಳಿಕ ಅದೇ ರಾಸುಗಳಿಂದ ಸೀರಂ ಶೇಖರಿಸಿ ರೋಗನಿರೋಧಕ ಶಕ್ತಿ ಪರೀಕ್ಷೆ ಮಾಡಲಾಗುತ್ತದೆ.
ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಲ ಹಾಗು ಅರಣ್ಯ ಇಲಾಖೆ ಬೃಹತ್ ಲಸಿಕಾ ಆಂದೋಲನಕ್ಕೆ ಕೈಜೋಡಿಸಿವÉ. ಇಲಾಖೆಯ ಲಸಿಕಾ ತಂಡವು ನಿಗದಿತ ದಿನಾಂಕಗಳಂದು ಭೇಟಿ ಕೊಡುವ ಸಂದರ್ಭದಲ್ಲಿ ಜಾನುವಾರು ಮಾಲೀಕರು, ರೈತರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಕಾಲುಬಾಯಿ ಜ್ವರ ತಡೆಗೆ ವಿಶೇಷ ಲಸಿಕೆ ನೀಡುವ ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳಬೇಕೆಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರಾದ ವೀರಭದ್ರಯ್ಯ ಮನವಿ ಮಾಡಿದ್ದಾರೆ.

ಬೆಳೆ ಸಮೀಕ್ಷೆ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಿ : ಡಿ.ಸಿ.ಸೂಚನೆ

ಚಾಮರಾಜನಗರ, ಅ. 29 :- ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಬೆಳೆ ಸಮೀಕ್ಷೆಕಾರ್ಯವನ್ನು ನವೆಂಬರ್ 6ರೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಬಿ.ರಾಮು ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆದ ಬೆಳೆ ಸಮೀಕ್ಷೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ಬೆಳೆ ಸಮೀಕ್ಷೆ ಕಾರ್ಯವು ಅತ್ಯಂತ ಮಹತ್ತರವಾಗಿದೆ, ಎಲ್ಲ ಭಾಗದಲ್ಲೂ ವ್ಯಾಪಕವಾಗಿ ಬೆಳೆಸಮೀಕ್ಷೆ ನಿಖರವಾಗಿ ನಡೆಯಬೇಕಿದೆ. ಸಮೀಕ್ಷೆ ಕಾರ್ಯಕ್ಕೆ ನಿಯೋಜಿತರಾಗಿರುವ ಕಂದಾಯ, ತೋಟಗಾರಿಕೆ, ಕೃಷಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬೆಳೆಸಮೀಕ್ಷೆ ಕರ್ತವ್ಯಕ್ಕೆ ತೊಡಗಿರುವ ಅಧಿಕಾರಿ ಸಿಬ್ಬಂದಿ ನಿಗದಿತ ಗುರಿ ಇಟ್ಟುಕೊಂಡು ಅದರಂತೆ ಕೆಲಸ ನಿರ್ವಹಿಸಿ ಸೂಚಿಸಲಾಗಿರುವ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡಬೇಕು, ಪ್ರತಿಯೊಬ್ಬರ ಕರ್ತವ್ಯ ನಿರ್ವಹಣೆಯನ್ನು ಗಮನಿಸಲಾಗುತ್ತದೆ. ಉತ್ತಮ ಸಾಧನೆ ಮಾಡಿದವರನ್ನು ಅಭಿನಂದಿಸಲಾಗುತ್ತದೆ ಎಂದರು.
ಉಪವಿಭಾಗಾಧಿಕಾರಿಗಳು ತಹಶೀಲ್ಧಾರರು ಬೆಳೆ ಸಮೀಕ್ಷೆ ಕಾರ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ಅಗತ್ಯ ಸಲಹೆ ಪರಿಹಾರ ನೀಡಲಿದ್ದಾರೆ. ಸಮೀಕ್ಷೆ ಕೆಲಸದ ಉಸ್ತುವಾರಿಯನ್ನು ನಿರ್ವಹಿಸಲಿದ್ದಾರೆ. ತಾಂತ್ರಿಕ ದೋಷ, ತೊಡಕುಗಳು ಕಂಡು ಬಂದಲ್ಲಿ ಜಿಲ್ಲಾ ಮಟ್ಟದ ತಂತ್ರಜ್ಞರು ಮಾರ್ಗದರ್ಶನ ಮಾಡಿ ಪರಿಹರಿಸಲಿದ್ದಾರೆ. ಹೀಗಾಗಿ ಯಾವುದೇ ಗೊಂದಲಕ್ಕೆ ಒಳಗಾಗದೇ ಸಮೀಕ್ಷೆ ಕಾರ್ಯವನ್ನು ಪೂರೈಸಬೇಕು ಎಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು.
ಆಪ್ ಆಧಾರಿತ ಬೆಳೆ ಸಮೀಕ್ಷೆಗೆ ಮೊಬೈಲ್ ಅವಶ್ಯಕತೆ ಇರುವವರಿಗೆ ಶೀಘ್ರವೇ ಪೂರೈಸಲಾಗುವುದು. ಈಗಾಗಲೇ ಮೊಬೈಲ್ ಹೊಂದಿದ್ದು ಕಾರ್ಯ ನಿರ್ವಹಿಸುತ್ತಿರುವವರು  ಹೆಚ್ಚು ಪ್ರದೇಶಗಳಿಗೆ ಭೇಟಿ ನೀಡಿ ತ್ವರಿತವಾಗಿ ಸಮೀಕ್ಷೆ ಕೆಲಸ ಮಾಡಬೇಕು. ಕೃಷಿ, ತೋಟಗಾರಿಕೆ ಹಾಗೂ ಗ್ರಾಮಪಂಚಾಯಿತಿ ಸಿಬ್ಬಂದಿ ಸಹಕಾರ ಪಡೆದು ಯಶಸ್ವಿಯಾಗಿ ನಿಗದಿತ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಮಾತನಾಡಿ ಸಮೀಕ್ಷೆ ವೇಳೆ ಬರಬಹುದಾದ ಎಲ್ಲ ತಾಂತ್ರಿಕ ಅಡಚಣೆಗೂ ಪರಿಹಾರವಿದೆ, ಯಾವುದೇ ಮಾಹಿತಿ ಬೇಕಿದ್ದರೂ ಹಿರಿಯ ಅಧಿಕಾರಿಗಳನ್ನು ಸಂರ್ಪಕಿಸಿ ಪರಿಹಾರ ಮಾಡಿಕೊಳ್ಳಬೇಕು. ದಿನನಿತ್ಯದ ಕಾರ್ಯ ಸಾಧನೆಯನ್ನು ಗಮನಿಸಲಾಗುತ್ತದೆ ಎಂದರು.
ಉಪವಿಭಾಗಾಧಿಕಾರಿ ಫೌಜಿಯ ತರನಂ, ಕೃಷಿ ಉಪನಿರ್ದೇಶಕರಾದ ಯೋಗೇಶ್,ತೋಟಗಾರಿಕೆ ಉಪನಿರ್ದೇಶಕರಾದ ಶಿವಪ್ರಸಾದ್, ತಹಶೀಲ್ಧಾರರು ಇತರರು ಹಾಜರಿದ್ದರು.

ಅ. 30ರಂದು ನಗರದಲ್ಲಿ ವಿಷನ್ 2025 ಡಾಕ್ಯುಮೆಂಟ್ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರ

ಚಾಮರಾಜನಗರ, ಅ. 29 :- ಮುಂದಿನ ಏಳುವರ್ಷಗಳ ಅವಧಿಯಲ್ಲಿ ರಾಜ್ಯದ ಸಮಗ್ರ ಅಭಿವೃದ್ದಿಯನ್ನು ದೃಷ್ಠಿಯಲ್ಲಿರಿಸಿಕೊಂಡು ರಾಜ್ಯ ಸರ್ಕಾರ ವಿಷನ್ 2025 ಡಾಕ್ಯುಮೆಂಟ್ ನೀಲನಕ್ಷೆ ಹಾಗೂ ಅನುಷ್ಟಾನ ಕಾರ್ಯಯೋಜನೆ ಸಿದ್ದಪಡಿಸುವ ಜಿಲ್ಲಾ ಮಟ್ಟದ ಮುಖ್ಯಕಾರ್ಯಾಗಾರ ಅಕ್ಟೋಬರ್ 30ರಂದು ನಗರದಲ್ಲಿ ನಡೆಯಲಿದೆ.
ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಸರ್ಕಾರದ ಪ್ರಧಾನಕಾರ್ಯದರ್ಶಿಯವರು ಮತ್ತು ವಿಷನ್-2025 ಡಾಕ್ಯುಮೆಂಟ್ ಪ್ರಾಜೆಕ್ಟ್‍ನ  ಮುಖ್ಯಕಾರ್ಯನಿರ್ವಾಹಣಾಧಿಕಾರಿ ರೇಣುಕಾಚಿದಂಬರಂ ಅವರ ನೇತೃತ್ವದಲ್ಲಿ ಕಾರ್ಯಗಾರ ನಡೆಯಲಿದೆ, ಅಕ್ಟೋಬರ್ 30ರಂದು  ಬೆಳಿಗ್ಗೆ 10.30ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ನೂತನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಾರ್ಯಗಾರಕ್ಕೆÀ ಚಾಲನೆ ನೆರವೇರಲಿದೆ.
ಚಾಲನೆ ನೀಡಿದ ಬಳಿಕ ಜಿಲ್ಲಾಡಳಿತ ಭವನದ ಐದು ಪ್ರತ್ಯೇಕ ಕೊಠಡಿಗಳಲ್ಲಿ ನಗರ ಮೂಲಸೌರ್ಕಯ/ ಸ್ಮಾರ್ಟ್ ಸಿಟಿ, ಸಾಮಾಜಿಕ ನ್ಯಾಯ, ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಇದರ ಸಂಬಂಧಿ ಹಾಗೂ ಗ್ರಾಮೀಣಾಭಿವೃದ್ದಿ, ಕೈಗಾರಿಕೆ ಅಭಿವೃದ್ದಿ, ಸೇವೆಗಳು,  ಉದೋಗ್ಯ ಮತ್ತು ಕೌಶಲ್ಯ ಅಭಿವೃದ್ದಿ, ಆಡಳಿತ ಕಾನೂನು ಮತ್ತು ನ್ಯಾಯ ವಿಷಯಗಳ ಸಭೆ ಚರ್ಚೆ ನಡೆಯಲಿವೆ.
ವಿಷನ್ ಡಾಕ್ಯುಮೆಂಟ್ ತಯಾರಿ ಹಾಗೂ ಅನುಷ್ಟಾನ ಕಾರ್ಯಯೋಜನೆ ಸಿದ್ದಪಡಿಸುವ ಸಲುವಾಗಿ ಸರ್ಕಾರದ ಪ್ರಮುಖ ಇಲಾಖೆಗಳನ್ನು ಒಳಗೊಂಡ 13ವಲಯಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳು, ಮೂಲಸೌಕರ್ಯಗಳು (ರಸ್ತೆ, ವಿದ್ಯುತ್‍ಚ್ಛಕ್ತಿ, ಕುಡಿಯುವ ನೀರು ಸೌಲಭ್ಯ ಮತ್ತು ನೈರ್ಮಲ್ಯೀಕರಣ), ಉದ್ಯೋಗ ಮತ್ತು ಕೌಶಲ್ಯ , ಕೈಗಾರಿಕಾಭಿವೃದ್ದಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಆರೋಗ್ಯ ಮತ್ತು ಪೋಷಣೆ, ಶಿಕ್ಷಣ, ಗ್ರಾಮೀಣಾಭಿವೃದ್ದಿ, ನಗರಾಭಿವೃದ್ದಿ, ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ, ಸೇವೆಗಳು, ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ/ನ್ಯಾಯಾಧಿಕಾರ. ಈ ಎಲ್ಲ 13ವಲಯಗಳಿಗೆ  ಸಂಬಂಧಿಸಿದಂತೆ ಐದು ಸಮಾನಂತರ ವಿಷಯಗಳನ್ನಾಗಿ ವಿಂಗಡಿಸಿ ಪ್ರತ್ಯೇಕವಾಗಿ ವಿಷಯಾಧಾರಿತ ಉಪವಿಭಾಗಗಳಾಗಿ ಚರ್ಚಿಸಲಾಗುತ್ತದೆ.
ರಾಜ್ಯ ಸರ್ಕಾರ ಮುಂದಿನ ಏಳು ವರ್ಷಗಳಲ್ಲಿ ಜನರ ಅಗತ್ಯದ ಯೋಜನೆಗೆ ಜನಾಭಿಪ್ರಾಯವನ್ನು ಜಿಲ್ಲೆಯಿಂದಲೆ ಸಂಗ್ರಹಿಸುವ ಉದ್ದೇಶದಿಂದಲೇ ಪ್ರತಿ ಜಿಲ್ಲೆಯಲ್ಲೂ ಅಭಿಪ್ರಾಯ ಸಲಹೆಗಳನ್ನು ಪಡೆಯುತ್ತಿದೆ. ವಿಷಯ ತಜÐರು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ವಿವಿಧ ಕ್ಷೇತ್ರಗಳ ಪರಿಣಿತರಿಂದ ಅಭಿಪ್ರಾಯ ಕ್ರೋಢಿಕರಣ ಮಾಡಲಾಗುತ್ತಿದೆ.
ಪ್ರತಿ ವಿಷಯಾಧಾರಿತ ಸಮೂಹದಲ್ಲಿ 20 ಜನರ ಗುಂಪುನ್ನು ಮಾಡಿಕೊಂಡು ಜಿಲ್ಲಾ ಮಟ್ಟದ ಕಾರ್ಯಗಾರದಂದು ಚರ್ಚಿಸಿ ಪ್ರಗತಿಯ ಮುನ್ನೋಟ ಮತ್ತು ಅಪೇಕ್ಷಿತ ಫಲಿತಾಂಶಗಳ ಬಗ್ಗೆ ಪ್ರಸ್ತುತ ಪಡಿಸಲಾಗುತ್ತದೆ. ಪ್ರತಿ ಗುಂಪು ಪ್ರತ್ಯೇಕವಾಗಿ ತನ್ನ ವಲಯಕ್ಕೆ ಸಂಬಂಧಿಸಿದಂತೆ ಅಂತಿಮವಾಗಿ ಕ್ರೋಢಿಕರಿಸಿದ ವಿಷಯಗಳ ಬಗ್ಗೆ ಪ್ರಸ್ತುತ ಪಡಿಸಲಿದೆ.


























No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು