ಕುಷ್ಟರೋಗ ಪತ್ತೆಹಚ್ಚುವ ಅಭಿಯಾನಕ್ಕೆ ಸಿದ್ಧತೆ ಕೈಗೊಳ್ಳಿ : ಡಿಸಿ ರಾಮು ಸೂಚನೆ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನಾ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಷ್ಟರೋಗ ಪತ್ತೆ ಹಚ್ಚುವಿಕೆಗಾಗಿ ಜಿಲ್ಲಾದ್ಯಂತ ವ್ಯಾಪಕವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ದಿಸೆಯಲ್ಲಿ ಎಲ್ಲ ಅಧಿಕಾರಿಗಳು ವಿಶೇಷವಾಗಿ ಶ್ರಮಿಸಬೇಕು. ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತಾಲೂಕು ಮಟ್ಟದ ಸಮನ್ವಯ ಸಭೆ ನಡೆಸಬೇಕು. ಅಕ್ಟೋಬರ್ 23 ರಿಂದ ಆರಂಭಿಸಬೇಕಿರುವ ಆಂದೋಲನಕ್ಕೆ ಸನ್ನದ್ಧರಾಗಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಶಾಲೆಗಳಲ್ಲಿ ಪ್ರಾರ್ಥನಾ ಸಮಯದಲ್ಲಿ ಕುಷ್ಟರೋಗದ ಲಕ್ಷಣಗಳು ಹಾಗೂ ಇದಕ್ಕೆ ಲಭಿಸಲಿರುವ ಚಿಕಿತ್ಸೆ ಪರಿಹಾರ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡಬೇಕು. ವಿದ್ಯಾರ್ಥಿಗಳಿಗೂ ತಪಾಸಣೆ ಮಾಡಬೇಕಿದೆ. ಹಾಸ್ಟೆಲ್ ವಸತಿ ಶಾಲೆಗಳಲ್ಲಿ ಸಹ ವ್ಯಾಪಕವಾಗಿ ಆರೋಗ್ಯ ತಪಾಸಣೆ ಮಾಡಬೇಕೆಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು.
ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕಾದರೆ ಹೆಚ್ಚು ಪ್ರಚಾರ ಕಾರ್ಯಕ್ರಮಗಳಿಗೂ ಗಮನ ನೀಡಬೇಕು. ಕರಪತ್ರ, ಭಿತ್ತಿಪತ್ರಗಳನ್ನು ಮುದ್ರಿಸಿ ಜನರಿಗೆ ಚರ್ಮ ಆರೋಗ್ಯದ ಜಾಗೃತಿ ಮೂಡಿಸಬೇಕು. ಅತಿ ಸರಳವಾಗಿ ಮಾಹಿತಿ ಜನರನ್ನು ತಲುಪಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಚರ್ಮರೋಗ ತಪಾಸಣಾ ಆಂದೋಲನಕ್ಕೆ ಜಿಲ್ಲೆಯಲ್ಲಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರನ್ನು ತೊಡಗಿಸಿಕೊಳ್ಳಬೇಕು. ಎಲ್ಲ ಅಧಿಕಾರಿಗಳು ಅಭಿಯಾನಕ್ಕೆ ಕೈಜೋಡಿಸಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ರಾಜು ಮಾತನಾಡಿ ಕುಷ್ಟರೋಗ ಪತ್ತೆ ಹಚ್ಚುವ ಅಭಿಯಾನಕ್ಕೆ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಗುಣಮುಖರಾದ ಕುಷ್ಟರೋಗಿಗಳಿಗೆ ಇಲಾಖೆಯಲ್ಲಿ ಸಿಗುವ ವಸತಿ ಸೇರಿದಂತೆ ವಿವಿಧ ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಅನಿಲ್ ಕುಮಾರ್, ಜಿಲ್ಲೆಯ ತಾಲೂಕುಗಳ ತಹಸೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ವಿಷನ್ 2025 : ಡಾಕ್ಯುಮೆಂಟ್ ತಯಾರಿ
ಅ. 10ರಂದು ನಗರಾಭಿವೃದ್ಧಿ ಸ್ಥಳೀಯ ಸಂಸ್ಥೆ ಮೂಲಸೌಕರ್ಯ ಅಭಿವೃದ್ಧಿ ಸಂಬಂಧ ಸಭೆ : ಆಹ್ವಾನ
ಚಾಮರಾಜನಗರ, ಅ. 09- ಮುಂದಿನ 7 ವರ್ಷಗಳಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮತ್ತು ನಗರಾಭಿವೃದ್ಧಿ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಸಮಗ್ರವಾಗಿ ಅಭಿವೃದ್ಧಿ ಸಂಬಂಧ ವಿಷನ್ 2025ರ ಡಾಕ್ಯುಮೆಂಟರಿ ತಯಾರಿ ಕುರಿತು ಅಕ್ಟೋಬರ್ 10ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯಲಿದೆ.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರತಿಕ್ರಿಯೆ ಮತ್ತು ಅಭಿಪ್ರಾಯ ಪಡೆಯುವ ಸಲುವಾಗಿ ಎಲ್ಲ ಜನಪ್ರತಿನಿಧಿಗಳು, ಪರಿಣಿತರು, ಸ್ವಯಂ ಸೇವಾ ಸಂಸ್ಥೆಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಹಿರಿಯ ನಾಗರಿಕರು ಸೇರಿದಂತೆ ಆಸಕ್ತರೆಲ್ಲರೂ ಹಾಜರಾಗಿ ಸಲಹೆ, ಸೂಚನೆ ನೀಡುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
No comments:
Post a Comment