ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಮತಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಲು ಅವಕಾಶ
ಚಾಮರಾಜನಗರ, ಅ. 12 :– ಚಾಮರಾಜನಗರ ಜಿಲ್ಲಾ ವ್ಯಾಪ್ತಿಗೆ ಸಂಬಂಧಪಟ್ಟಂತೆ ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಶಿಕ್ಷಕರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅರ್ಜಿದಾರರು ಹೆಸರು ನೊಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.ಹೆಸರು ನೊಂದಣಿಗೆ ನಿಗದಿತ ನಮೂನೆ 19ರಲ್ಲಿ ಅರ್ಜಿಯನ್ನು ಭರ್ತಿ ಮಾಡಿ ನವೆಂಬರ್ 7ರೊಳಗೆ ಅಥವಾ ಅದಕ್ಕೂ ಮೊದಲೇ ಸಹಾಯಕ ಮತದಾರ ನೋಂದಣಿ ಅಧಿಕಾರಿಗಳಾದ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಆಯಾ ತಾಲೂಕು ತಹಸೀಲ್ದಾರ್ ಹಾಗೂ ತಾಲೂಕಿನ ನಿಯೋಜಿತ ಅಧಿಕಾರಿಗಳಾದ ಚುನಾವಣಾ ಶಿರಸ್ತೇದಾರ್, ಉಪತಹಸೀಲ್ದಾರ್ (ಹನೂರು) ಅವರಿಗೂ ಸಲ್ಲಿಸಬಹುದು.
ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು ಪ್ರತಿ ಚುನಾವಣೆಯ ಮೊದಲು ಹೊಸದಾಗಿ ತಯಾರಿಸಬೇಕಾಗಿದ್ದು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿರುವ ಎಲ್ಲಾ ವ್ಯಕ್ತಿಗಳು ನಿಗದಿತ ನಮೂನೆಯಲ್ಲಿ ಹೊಸದಾಗಿ ಅರ್ಜಿಗಳನ್ನು ಸಲ್ಲಿಸಬೇಕು.
ಭಾರತದ ಪ್ರಜೆಯಾಗಿರುವ ಮತ್ತು ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸಾಮಾನ್ಯ ನಿವಾಸಿಯಾಗಿದ್ದು 2017ರ ನವೆಂಬರ್ 1ಕ್ಕೆ ಮೊದಲು 6 ವರ್ಷದ ಅವಧಿಯಲ್ಲಿ ಕನಿಷ್ಟ 3 ವರ್ಷಗಳಷ್ಟು ದರ್ಜೆಯಲ್ಲಿ ಪ್ರೌಢಶಾಲೆಗಿಂತ ಕಡಿಮೆಯಲ್ಲದ ನಿರ್ದಿಷ್ಟಪಡಿಸಿದಂತಹ ರಾಜ್ಯದ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧನಾ ವೃತ್ತಿಯಲ್ಲಿ ನಿರತವಾಗಿರುವ ಪ್ರತಿ ವ್ಯಕ್ತಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಹರಾಗಿರುತ್ತಾರೆ.
ನಮೂನೆ 19ರಲ್ಲಿ ಅರ್ಜಿ ಸಲ್ಲಿಸಿ ಶಿಕ್ಷಕರ ಕ್ಷೇತ್ರದಲ್ಲಿ ಮತದಾರನಾಗಿ ನೊಂದಾಯಿಸಿಕೊಳ್ಳಲು ತನ್ನ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಂದ ಹಿಂದಿನ 6 ವರ್ಷಗಳಲ್ಲಿ ಒಟ್ಟು 3 ವರ್ಷಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಕುರಿತು ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕಿದೆ.
ಅರ್ಜಿ ಸಲ್ಲಿಸುವ ದಿನಾಂಕದಂದು ಯಾವುದೇ ವ್ಯಕ್ತಿ ಬೋಧನಾ ವೃತ್ತಿಯಲ್ಲಿ ನಿರತರಾಗಿರದಿದ್ದಲ್ಲಿ ಪ್ರಮಾಣ ಪತ್ರವನ್ನು ಕೊನೆಯದಾಗಿ ಸೇವೆ ಸಲ್ಲಿಸಿದ ಸಂಸ್ಥೆಯ ಮುಖ್ಯಸ್ಥರಿಂದಲೇ ಸಹಿ ಮಾಡಿಸಿರಬೇಕು. ಖುದ್ದಾಗಿ ಅಥವಾ ಅಂಚೆ ಮುಖಾಂತರ ಒಟ್ಟಾಗಿ ಸಲ್ಲಿಸಿದ ಅರ್ಜಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ಪರಿಗಣಿಸಲಾಗುವುದಿಲ್ಲ. ಆದರೆ ಸಂಸ್ಥೆಯ ಮುಖ್ಯಸ್ಥರು ಅವರ ಸಿಬ್ಬಂದಿಯ ಎಲ್ಲ ಅರ್ಜಿಗಳನ್ನು ಒಟ್ಟಾಗಿ ಕಳುಹಿಸಬಹುದು. ಒಂದೇ ಕುಟುಂಬದ ಇತರೆ ಸದಸ್ಯರ ನಮೂನೆ 19ರ ಅರ್ಜಿಗಳನ್ನು ಕುಟುಂಬದ ಒಬ್ಬ ಸದಸ್ಯರು ಸಲ್ಲಿಸಬಹುದು. ಹಾಗೂ ಪ್ರತೀ ಸದಸ್ಯರಿಗೆ ಸಂಬಂಧಿಸಿದಂತೆ ಮೂಲ ಪ್ರಮಾಣ ಪತ್ರಗಳನ್ನು ಒದಗಿಸಬೇಕು.
ಅರ್ಜಿಯಲ್ಲಿ ತಪ್ಪು ಅಥವಾ ತಪ್ಪೆಂದು ತಿಳಿದಿರುವ ಅಥವಾ ನಂಬುವಂತಹ ಇಲ್ಲವೇ ಸತ್ಯವೆಂದು ನಂಬಲಾಗದಿರುವಂತಹ ಹೇಳಿಕೆಗಳನ್ನು ಅಥವಾ ಘೋಷಣೆಗಳನ್ನು ಮಾಡುವ ವ್ಯಕ್ತಿಯನ್ನು ಪ್ರಜಾ ಪ್ರಾತಿನಿಧ್ಯ ಅಧಿನಿಯಮ 1950ರ 31ನೇ ಪ್ರಕರಣದ ಮೇರೆಗೆ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.
ಪ್ರಮಾಣ ಪತ್ರದ ಮಾದರಿ ಮತ್ತು ನಮೂನೆ 19ರ ಅರ್ಜಿಯನ್ನು ಸಹಾಯಕ ಮತದಾರರ ನೋಂದಣಾಧಿಕಾರಿ ಅಥವಾ ನಿಯೋಜಿತ ಅಧಿಕಾರಿಗಳ ಕಚೇರಿಯಿಂದ ಪಡೆಯಬಹುದು. ಕೈಬರಹ, ಬೆರಳಚ್ಚು ಮಾಡಿದ ಸೈಕ್ಲೋಸ್ಟೈಲ್ (ಕಲ್ಲಚ್ಚು) ಮಾಡಿದ ಅಥವಾ ಖಾಸಗಿಯಾಗಿ ನಮೂನೆಗಳನ್ನು ಕೂಡ ಅಂಗೀಕರಿಸಲಾಗುವುದೆಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
13ರಂದು ಲೋಕಸಭಾ ಸದಸ್ಯರ ಜಿಲ್ಲಾ ಪ್ರವಾಸ : ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
ಚಾಮರಾಜನಗರ, ಅ. 12 :- ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಅಕ್ಟೋಬರ್ 13ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.ಬೆಳಿಗ್ಗೆ 9.30 ಗಂಟೆಗೆ ಚಾಮರಾಜನಗರ ತಾಲೂಕಿನ ಸುವರ್ಣಾವತಿ ಜಲಾಶಯದಲ್ಲಿ ಬಾಗಿನ ಅರ್ಪಿಸುವರು. ಬೆಳಿಗ್ಗೆ 10.30 ಗಂಟೆಗೆ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಾಂಸ್ಕøತಿಕ, ಕ್ರೀಡೆ, ಎನ್ ಎಸ್ ಎಸ್ ಮತ್ತು ಅಭಿವೃಕ್ತಿ ಚಟುವಟಿಕೆಗಳ ಉದ್ಘಾಟನೆ ಹಾಗೂ ರೂಸಾ ಅನುದಾನದಡಿ ಕಾಲೇಜು ಕಟ್ಟಡ ನಿರ್ಮಾಣದ ಭೂಮಿ ಪೂಜೆ ನೆರವೇರಿಸುವರು. 11 ಗಂಟೆಗೆ ಸಂಸದರ ಆದರ್ಶ ಗ್ರಾಮ ಯೋಜನೆಯಡಿ 2ನೇ ಹಂತದಲ್ಲಿ ಆಯ್ಕೆ ಮಾಡಲಾಗಿರುವ ತಾಲೂಕಿನ ಹರದನಹಳ್ಳಿ ಹೋಬಳಿಯ ದೊಡ್ಡಮೋಳೆ ಗ್ರಾಮದಲ್ಲಿ ಕಾರ್ಯಕ್ರಮ ಹಾಗೂ ಕಾಮಗಾರಿ ಕೈಗೊಳ್ಳುವ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಳೊಂದಿಗೆ ಸಮಾಲೋಚನ ಸಭೆ ನಡೆಸುವರು ಎಂದು ಲೋಕಸಭಾ ಸದಸ್ಯರ ಕಾರ್ಯಾಲಯ ಪ್ರಕಟಣೆ ತಿಳಿಸಿದೆ.
ಅ. 13ರಂದು ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಾಂಸ್ಕøತಿಕ ಚಟುವಟಿಕೆ ಉದ್ಘಾಟನೆ, ಕಟ್ಟಡ ನಿರ್ಮಾಣ ಭೂಮಿಪೂಜೆ
ಚಾಮರಾಜನಗರ, ಅ. 12 - ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಾಂಸ್ಕøತಿಕ ಕ್ರೀಡೆ, ಎನ್ ಎಸ್ ಎಸ್ ಮತ್ತು ಅಭಿವೃಕ್ತಿ ಚಟುವಟಿಕೆಗಳ ಉದ್ಘಾಟನೆ ಹಾಗೂ ರೂಸಾ ಅನುದಾನದಡಿ ಕಾಲೇಜು ಕಟ್ಟಡ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮವು ಅಕ್ಟೋಬರ್ 13ರಂದು ಬೆಳಿಗ್ಗೆ 10 ಗಂಟೆಗೆ ಕಾಲೇಜು ಆವರಣದಲ್ಲಿ ನಡೆಯಲಿದೆ.
ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ರಾಜ್ಯ ಹೆದ್ದಾರಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.
ವಿರೋಧ ಪಕ್ಷದ ಮಾಜಿ ನಾಯಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಮೋಟಮ್ಮ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ನಗರಸಭೆ ಅಧ್ಯಕ್ಷರಾದ ಶೋಭಾ, ಸದಸ್ಯರಾದ ರೇಣುಕಾ ಮಲ್ಲಿಕಾರ್ಜುನ, ಕೆಆರ್ ಐ ಡಿಎಲ್ ನ ಕಾರ್ಯಪಾಲಕ ಎಂಜಿನಿಯರ್ ಎಂ.ಆರ್. ಸುಂದರೇಶ್ ಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕೊಳ್ಳೇಗಾಲದ ಆದಿತ್ಯ ಫೌಂಡೇಶನ್ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಆದಿತ್ಯ ಮುಖ್ಯ ಭಾಷಣಕಾರರಾಗಿ ಆಗಮಿಸುವರು. ಕಾಲೇಜು ಪ್ರಾಂಶುಪಾಲರಾದ ಡಾ. ಎಚ್.ಎಸ್. ಪ್ರೇಮಲತಾ ಉಪಸ್ಥಿತರಿರುವರೆಂದು ಪ್ರಕಟಣೆ ತಿಳಿಸಿದೆ.
ನರೇಗಾ ಬಿಎಫ್‍ಟಿ ಹುದ್ದೆಗೆ ಅರ್ಜಿ ಆಹ್ವಾನ
ಚಾಮರಾಜನಗರ, ಅ. 12 :- ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಮರ್ಪಕ ಅನುಷ್ಠಾನ ಮತ್ತು ಕಾಮಗಾರಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ಸಲುವಾಗಿ ಕ್ಷೇತ್ರ ಮಟ್ಟದಲ್ಲಿ ಕೆಲಸ ನಿರ್ವಹಿಸಲು ಬೇರ್ ಪುಟ್ ಟೆಕ್ನೀಷಿಯನ್ (ಬಿಎಫ್‍ಟಿ) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.ಅಭ್ಯರ್ಥಿಗಳು ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರಬೇಕು. ಸಕ್ರಿಯ ಕೆಲಸಗಾರರಾಗಿರಬೇಕು. ಕನಿಷ್ಟ 10ನೇ ತರಗತಿ ತೇರ್ಗಡೆಯಾಗಿರಬೇಕು. ಗರಿಷ್ಟ ವಯೋಮಿತಿ 45 ವರ್ಷಗಳು. ಆಸಕ್ತರು ಅರ್ಜಿಯನ್ನು ನಗರದ ಜಿಲ್ಲಾ ಪಂಚಾಯತ್ ಕಚೇರಿಯ (ಕೊಠಡಿ ಸಂಖ್ಯೆ 9) ಲ್ಲಿ ಪಡೆದು ಅಕ್ಟೋಬರ್ 23ರ ಒಳಗೆ ಭರ್ತಿ ಮಾಡಿ ಸಲ್ಲಿಸಬೇಕು. ವಿವರಗಳಿಗೆ ದೂರವಾಣಿ ಸಂಖ್ಯೆ 08226-224079 ಸಂಪರ್ಕಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಣ ಹೂಡುವ ಕಂಪನಿಗಳ ಬಗ್ಗೆ ಖಾತರಿ ಪಡಿಸಿಕೊಳ್ಳಿ : ಸಹಕಾರ ಇಲಾಖೆ ಮನವಿ
ಚಾಮರಾಜನಗರ, ಅ. 12 - ಅನುಮತಿ ಪಡೆಯದ ಕಂಪನಿಗಳು ಸಾರ್ವಜನಿಕರಿಂದ ಠೇವಣಿ ಸ್ವೀಕರಿಸಿ ವಂಚಿಸುತ್ತಿರುವ ಬಗ್ಗೆ ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರು ಎಚ್ಚರಿಕೆಯಿಂದ ಇರುವಂತೆ ಸಹಕಾರ ಇಲಾಖೆ ತಿಳಿಸಿದೆ.
ಸಾರ್ವಜನಿಕರಿಂದ ಹಣ ಸ್ವೀಕರಿಸುವುದನ್ನು ನಿಯಂತ್ರಿಸುವುದಕ್ಕೆ ಮತ್ತು ಸಾರ್ವಜನಿಕರಿಗೆ ಮೋಸ ಎಸಗುವುದನ್ನು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವಾರು ಶಾಸನಗಳನ್ನು ಜಾರಿಗೆ ತಂದಿದೆ. ಚೀಟಿ ನಿಧಿಗಳ ಅಧಿನಿಯಮ 1952 ಬಹುಮಾನ ಚೀಟಿ ಮತ್ತು ಹಣ ಪರಿಚಲನೆ ಯೋಜನೆ ಅಧಿನಿಯಮ, 1978ರ ಭಾರತ ರಿಸರ್ವ್ ಬ್ಯಾಂಕ್ ಅಧಿನಿಯಮ, 1934ರ ಭಾರತ ಭದ್ರತೆಗಳು ಮತ್ತು ವಿನಿಮಯ ಮಂಡಳಿ ಅಧಿನಿಯಮ, 1992 ಕಂಪನಿಗಳ ಅಧಿನಿಯಮ ಮತ್ತು ರಾಜ್ಯಗಳ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆಗೆ ಸಂಬಂಧಿಸಿದಂತೆ ವಿಶೇಷ ಕಾನೂನುಗಳನ್ನು ಅಂಗೀಕರಿಸಲಾಗಿದೆ.
ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಲು ನಿಯಮಿತ ಸಾರ್ವಜನಿಕ ಕಂಪನಿಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ. ಅನುಮತಿ ಪಡೆಯದ ಕಂಪನಿಗಳು ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುವುದು ಕಾನೂನುಬಾಹಿರವಾಗಿದೆ. ಅನುಮತಿ ನೀಡಲಾದ ಕಂಪನಿಗಳ ಪಟ್ಟಿ ವೆಬ್ ಸೈಟ್ ತಿತಿತಿ.ಡಿbi.oಡಿg.iಟಿ ನಲ್ಲಿ ಲಭ್ಯವಿದ್ದು ನಾಗರಿಕರು ಹಣ ಹೂಡುವ ಮೊದಲು ವೆಬ್ ಸೈಟ್‍ನಲ್ಲಿ ಕಂಪನಿ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬಹುದು. ಯಾವುದೇ ದೂರುಗಳಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಯಲ್ಲಿ ದಾಖಲಿಸುವಂತೆ ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಅ. 13ರಂದು ನಗರದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
ಚಾಮರಾಜನಗರ, ಅ. 12:- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರ ಇತರೆ ಇಲಾಖೆಗಳ ಆಶ್ರಯದೊಂದಿಗೆ ಅಕ್ಟೋಮಬರ್ 13ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ಪ್ರಕೃತಿ ವಿಕೋಪ ತಡೆಗಟ್ಟುವಿಕೆ & ತಗ್ಗಿಸುವಿಕೆ ಕುರಿತ ಪ್ರಬಂಧ ಸ್ಪರ್ಧೆ ವಿಜೇತರ ವಿವರ
ಚಾಮರಾಜನಗರ, ಅ. 12:- ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ಅಕ್ಟೋಬರ್ 11 ರಂದು ನಗರದ ಜೆ.ಎಸ್.ಎಸ್. ಬಾಲಕರ ಪ್ರೌಢಶಾಲೆಯಲ್ಲಿ ನಡೆದ ‘ಜಿಲ್ಲಾಮಟ್ಟದಲ್ಲಿ ಪ್ರಕೃತಿ ವಿಕೋಪ ತಡೆಗಟ್ಟುವಿಕೆ ಮತ್ತು ತಗ್ಗಿಸುವಿಕೆ’ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಜೆ.ಎಸ್.ಎಸ್ ಪ್ರೌಢಶಾಲೆಯ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ 10ನೇ ತರಗತಿ ವಿದ್ಯಾರ್ಥಿನಿ ಆರ್. ಚೈತ್ರ ಪ್ರಥಮ ಸ್ಥಾನ ಪಡೆದಿದ್ದಾರೆ.ಜೆ.ಎಸ್.ಎಸ್ ಪ್ರೌಢಶಾಲೆಯ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ 10ನೇ ತರಗತಿ ವಿದ್ಯಾರ್ಥಿ ಎಂ. ಅರುಣ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಯಳಂದೂರಿನ ಡಿ.ವಿ.ಎಸ್ ವಿದ್ಯಾಸಂಸ್ಥೆಯ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ 10ನೇ ತರಗತಿ ವಿದ್ಯಾರ್ಥಿನಿ ಜಿ. ವರ್ಷಿತ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.
No comments:
Post a Comment