Saturday, 4 February 2017

ಚಾಮರಾಜನಗರ ಜಿಲ್ಲೆ=ಉಷಾ: ಭವಿಷ್ಯದ ಭದ್ರ ಬುನಾದಿಗೆ ದಾರಿದೀಪ;S.VEERABHADRA SWAMY (KIRIK)

ಉಷಾ: ಭವಿಷ್ಯದ ಭದ್ರ ಬುನಾದಿಗೆ ದಾರಿದೀಪ ದೇಶದಲ್ಲೇ ಪ್ರಥಮ ಎನ್ನಬಹುದಾದ “ಉಷಾ” ಆಂದೋಲನ ಕಾರ್ಯಕ್ರಮವನ್ನು ಚಾಮರಾಜನಗರ ಜಿಲ್ಲೆಯಲ್ಲಿ ದಿನಾಂಕ: 25-11-2016ರಿಂದ ಪ್ರಾರಂಭಿಸಲಾಯಿತು. ಇದರ ಪ್ರಭಾವದಿಂದ ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣದ ಪ್ರಗತಿ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ 2016-17ನೇ ಸಾಲಿನಲ್ಲಿ 50 ಸಾವಿರ ಶೌಚಾಲಯ ನಿರ್ಮಾಣದ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಇದರಲ್ಲಿ ನವೆಂಬರ್-24. 2016ವರೆಗೆ ಜಿಲ್ಲೆಯಾದ್ಯಂತ 8788 ಶೌಚಾಲಯಗಳು ಮಾತ್ರ ನಿರ್ಮಾಣಗೊಂಡಿದ್ದವು. ಆದರೆ ನವೆಂಬರ್-24 ರಂದು ಉಷಾ ಆಂದೋಲನವನ್ನು ಪ್ರಾರಂಭಿಸಿ, ಅಭಿಯಾನವನ್ನು ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸಿದ ಬಳಿಕ ಡಿಸೆಂಬರ್-2016 ಹಾಗೂ ಜನವರಿ-2017 ಎರಡು ತಿಂಗಳ ಅವಧಿಯಲ್ಲಿ 9403 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದವರೆವಿಗೂÀ 18191 ಶೌಚಾಲಯಗಳು ಪೂರ್ಣಗೊಂಡಿವೆ. 9053 ಶೌಚಾಲಯಗಳು ಪ್ರಗತಿಯಲ್ಲಿವೆ. ಚಾಮರಾಜನಗರ ಜಿಲ್ಲೆಯ 130 ಗ್ರಾಮ ಪಂಚಾಯಿತಿಗಳಿದ್ದು, ಇದರಲ್ಲಿ 2016-17ನೇ ಸಾಲಿನಲ್ಲಿ ಚಾಮರಾಜನಗರ ತಾಲ್ಲೂಕಿನ ಮಂಗಲ ಗ್ರಾಮ ಪಂಚಾಯಿತಿಯಲ್ಲಿ 318, ಕೊತ್ತಲವಾಡಿ ಗ್ರಾಮ ಪಂಚಾಯಿತಿಯಲ್ಲಿ 291, ಗುಂಡ್ಲುಪೇಟೆ ತಾಲ್ಲೂಕಿನ ಕೊಡಸೋಗೆ ಗ್ರಾಮ ಪಂಚಾಯಿತಿಯಲ್ಲಿ 248, ಕೊಳ್ಳೇಗಾಲ ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮ ಪಂಚಾಯಿತಿಯಲ್ಲಿ 256 ಹಾಗೂ ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮ ಪಂಚಾಯಿತಿಯಲ್ಲಿ 208 ಶೌಚಾಲಯ ನಿರ್ಮಾಣವಾಗಿವೆ. ಚಾಮರಾಜನಗರ ತಾಲ್ಲೂಕಿನ ಉಮ್ಮತ್ತೂರು ಪಂಚಾಯಿತಿಯಲ್ಲಿ 2016-17ನೇ ಸಾಲಿನಲ್ಲಿ 200 ಶೌಚಾಲಯ ನಿರ್ಮಾಣವಾಗಿದ್ದು, ಇನ್ನು 96 ಶೌಚಾಲಯ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಶೌಚಾಲಯಗಳು ಪೂರ್ಣಗೊಂಡರೆ ಪಂಚಾಯಿತಿ ಪೂರ್ಣವಾಗಿ ಬಯಲು ಬಹಿರ್ದೆಸೆ ಮುಕ್ತವಾಗುತ್ತದೆ. “ಉಷಾ” ಆಂದೋಲನದ ಪ್ರಭಾವ ಜಿಲ್ಲೆಯಲ್ಲಿ ಕೇವಲ ಎರಡು ತಿಂಗಳ ಅವಧಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಶೌಚಾಲಯಗಳು ನಿರ್ಮಾಣಗೊಂಡಿವೆ ಎಂದರೆ ಅದು ಉಷಾ ಆಂದೋಲನದ ಪ್ರಭಾವದಿಂದ ಎನ್ನಬಹುದು. ಉಷಾ ಆಂದೋಲನದ ಧ್ಯೇಯೋದ್ದೇಶವೂ ಕೂಡಾ ಇದೇ ಆಗಿದೆ. ಜಿಲ್ಲೆಯ ಜನರಿಗೆ ಮೊದಲಿಗೆ ತಿಳಿವಳಿಕೆ ಮೂಡಿಸುವುದು, ಅವರನ್ನು ಸಂವೇದನಾಶೀಲರನ್ನಾಗಿಸುವುದು, ಅವರಿಗೆ ಸರ್ಕಾರದ ಕಡೆಯಿಂದ ಸಹಾಯವನ್ನು ಮಾಡುವುದು, ತನ್ಮೂಲಕ ಸಾಧನೆಗೆ ಶ್ರೀಕಾರ ಹಾಕುವುದು. ಈ ಕಾರ್ಯತಂತ್ರವನ್ನು ಪ್ರಯೋಗಗೊಳಿಸಿದ ಪರಿಣಾಮವೇ ಇಂದು ಪ್ರಗತಿ ಕಾಣುತ್ತಿದೆ. ಉಷಾ ಆಂದೋಲನ ಜಿಲ್ಲಾ ಪಂಚಾಯಿತಿಯ ಮುಖ್ಯ ಕಚೇರಿಯಲ್ಲಿ ಕಡತಗಳ ಮಧ್ಯದಲ್ಲಿ ಉಳಿದುಕೊಳ್ಳದೆ ಜನರ ಬಳಿಗೆ ಮುಟ್ಟಿತು. ಪ್ರತಿ ಊರಿನ ಚುನಾಯಿತ ಪ್ರತಿನಿಧಿಗಳು, ಮುಖಂಡರು, ಸಂಘ-ಸಂಸ್ಥೆಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಬಿಸಿಯೂಟದ ನೌಕರ ವರ್ಗದವರು, ಸ್ವಚ್ಛ ಭಾರತ ಅಭಿಯಾನದ ತಂಡದವರು ಇವರನ್ನೆಲ್ಲ ಒಟ್ಟುಗೊಡಿಸಿಕೊಂಡು ಮನೆ-ಮನೆಗೆ ಭೇಟಿ ನೀಡಿ ಜನರಿಗೆ ತಿಳಿವಳಿಕೆ ಮೂಡಿಸುವುದು, ಬೀದಿ-ಬೀದಿಗಳಲ್ಲಿ ಸಂಚಾರ ಮಾಡಿ ಜಾಗೃತಿ ಜಾಥಾ ಹೊರಡುವುದು, ಶಾಲೆಯಲ್ಲಿ, ಆಸ್ಪತ್ರೆಗಳಲ್ಲಿ, ಅಂಗನವಾಡಿಗಳಲ್ಲಿ, ಗ್ರಾಮ ಪಂಚಾಯಿತಿ ಕಚೇರಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಎಲ್ಲಿ ಜನರು ಆಗಮಿಸುತ್ತಾರೆ ಅಂತಹ ಕಡೆ “ಉಷಾ” ಅರಿವು ನಡೆಯಿತು. ಜನರಿಗೂ ಮನದಟ್ಟು ಮಾಡುವಲ್ಲಿ ಯಶಸ್ಸಿಯೂ ಆಯಿತು. ಈಗ “ಪ್ರಗತಿ” ಎನ್ನುವುದು ಸಾಧನೆಯ ಹಾದಿಯಲ್ಲಿ ಸಾಗುತ್ತಿದೆ. ಇದೇ ಅಲ್ಲದೆ ಪ್ರತಿಯೊಂದು ಪಂಚಾಯಿತಿಗೂ ಒಬ್ಬರು ಮಾರ್ಗದರ್ಶಿ ಶಿಕ್ಷಕರನ್ನು ನಿಯೋಜನೆ ಮಾಡಲಾಯಿತು. ಇವರು ತಮ್ಮ ವ್ಯಾಪ್ತಿಯ ಶಾಲೆಯ ಮಕ್ಕಳಿಗೆ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಅರಿವು, ವೈಯಕ್ತಿಕ ಸ್ವಚ್ಛತೆ, ವಯೋಸಹಜವಾಗಿ ಆಗುವ ಮಾನಸಿಕ ಮತ್ತು ದೈಹಿಕ ಬದಲಾವಣೆಗಳ ಬಗ್ಗೆ ಪ್ರಮುಖವಾಗಿ ತಿಳಿವಳಿಕೆ ಮೂಡಿಸುವ ಕಾರ್ಯವನ್ನು ಮಾಡಿದರು. ಇದರಿಂದಾಗಿ ಹೆಣ್ಣು ಮಕ್ಕಳು ತಮ್ಮ ಮನೆಯಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಳ್ಳುವಂತೆ ಪೋಷಕರಿಗೆ ಒತ್ತಾಯ ಮಾಡಿದರು. ಪೋಷಕರೂ ಕೂಡ ಸ್ವಚ್ಛತೆ ಕುರಿತು ಅರಿವನ್ನು ಪಡೆದುಕೊಂಡ ಕಾರಣದಿಂದ ಶೌಚಾಲಯ ನಿರ್ಮಾಣ ಮಾಡಲು ಪ್ರಾರಂಭಿಸಿಯೇ ಬಿಟ್ಟರು. ಎರಡು ತಿಂಗಳ ಕಾರ್ಯತಂತ್ರ ಉಷಾ ಆಂದೋಲನವನ್ನು ನವೆಂಬರ್-25ರಿಂದ ಜನವರಿ-24ರವರೆಗೆ ನಡೆಸಬೇಕು ಎನ್ನುವ ಉದ್ದೇಶದ ಹಿಂದೆ ಮಹಿಳೆಯರ ಅಭ್ಯುಧ್ಯಯ ಅಡಗಿದೆ. ನವೆಂಬರ್-25 ರಂದು ವಿಶ್ವಸಂಸ್ಥೆಯು “ಅಂತರರಾಷ್ಟ್ರೀಯ ಮಹಿಳೆಯರ ವಿರುದ್ಧ ಹಿಂಸಾಚಾರ ನಿರ್ಮೂಲನಾ ದಿನ”ವನ್ನಾಗಿ ಆಚರಿಸುತ್ತದೆ. ಜನವರಿ-24 ರಂದು ಭಾರತದಲ್ಲಿ “ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ”ವನ್ನಾಗಿ ಆಚರಿಸಲಾಗುತ್ತದೆ. ಈ ಎರಡು ಮಹತ್ವದ ದಿನಗಳ ಮಧ್ಯದಲ್ಲಿ ಮಹಿಳೆಯರಿಗೆ ಅರಿವನ್ನು ಉಂಟು ಮಾಡಿದರೆ ಪರಿಣಾಮಕಾರಿಯಾಗಿ ಕಾರ್ಯ ಅನುಷ್ಠಾನಗೊಳ್ಳುತ್ತದೆ ಎಂದು ಆಲೋಚಿಸಿ ಚಾಮರಾಜನಗರ ಜಿಲ್ಲಾ ಪಂಚಾಯಿತಿಯು ಉಷಾ ಆಂದೋಲವನ್ನು ಶುರು ಮಾಡಿತು. ಜಿಲ್ಲೆಯಲ್ಲಿ ಪ್ರಚಲಿತ ದಿನಮಾನದಲ್ಲಿ ಕಾಣಬರುತ್ತಿರುವ ಸಾಮಾಜಿಕ ಸಮಸ್ಯೆಗಳು, ಪಿಡುಗುಗಳ ಬಗ್ಗೆ ಜನರನ್ನು ಜಾಗೃತಗೊಳಿಸುವುದು, ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದು, ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ, ಸಾಮಾಜಿಕ ಕಳಕಳಿಯ ಕೌಶಲ್ಯಗಳನ್ನು ರೂಢಿಸುವುದು ಮುಂತಾದ ಕ್ರಿಯಾ ಯೋಜನೆಯನ್ನು ತಯಾರಿಸಿಕೊಂಡು, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಮನ್ವಯದೊಂದಿಗೆ ಬೇರು ಮಟ್ಟದಿಂದ ಅರಿವನ್ನು ಮೂಡಿಸಲು ಯೋಜನೆ ಸಿದ್ಧವಾಯಿತು. ಮೊದಲಿಗೆ ಮಾರ್ಗದರ್ಶಿ ಶಿಕ್ಷಕರಿಗೆ ಕಾರ್ಯಾಗಾರ ನಡೆಸಲಾಯಿತು. ನಂತರ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ವ ಸಹಾಯ ಸಂಘಗಳು, ಜನಪ್ರತಿನಿಧಿಗಳಿಗೆ ಕಾರ್ಯಾಗಾರವನ್ನು ನಡೆಸಿ ಆಂದೋಲನಕ್ಕೆ ಪೂರಕವಾದ ತರಬೇತಿಯನ್ನು ನೀಡಲಾಯಿತು. ತರಬೇತಿಯನ್ನು ಪಡೆದುಕೊಂಡವರು ತಮ್ಮ-ತಮ್ಮ ಗ್ರಾಮಗಳಲ್ಲಿ ಪರಿಣಾಮಕಾರಿಯಾಗಿ ಅರಿವನ್ನು ಮೂಡಿಸಲು ಪ್ರಾರಂಭಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಉಷಾ ಆಂದೋಲನ ಕುರಿತ ಸ್ಪರ್ಧೆಯನ್ನು ನಡೆಸಲಾಯಿತು. ರಂಗೋಲಿಯ ಬಣ್ಣ-ಬಣ್ಣದ ಚಿತ್ತಾರದಲ್ಲಿ, ಕಲೆಯ ಕುಂಚದಲ್ಲಿ ಮಹಿಳೆಯರ ಸಮಸ್ಯೆಗಳು, ಬಾಲ್ಯವಿವಾಹ, ಹೆಣ್ಣು ಭ್ರೂಣ ಹತ್ಯೆಯಂತಹ ಸಾಮಾಜಿಕ ಪಿಡುಗುಗಳನ್ನು ವಿದ್ಯಾರ್ಥಿಗಳು ಅನಾವರಣಗೊಳಿಸಿದರು. ಸ್ವಚ್ಛ ಭಾರತ ಸ್ವಚ್ಛ ಗ್ರಾಮ ಎನ್ನುವ ಪರಿಕಲ್ಪನೆಯನ್ನು “ಮಾದರಿ”ಗಳನ್ನು ತಯಾರಿಸಿ ಪ್ರಾತ್ಯಕ್ಷಿಕೆ ಕೊಡುವ ಮೂಲಕ ಸಾಕಾರಗೊಳಿಸಿದರು. ಭಾಷಣ-ಚರ್ಚೆಯಲ್ಲಿ ಮಾತಿನ ಮಂಥನ ನಡೆಸಿದರು. ಆಂದೋಲನ ವಿಸ್ತರಣೆ ಉಷಾ ಆಂದೋಲನವನ್ನು ನವೆಂಬರ್-25ರಿಂದ ಜನವರಿ-24ರವರೆಗೆ ನಡೆಸಿ ಸಮಾರೋಪ ಗೊಳಿಸಬೇಕು ಎನ್ನುವ ಉದ್ದೇಶ ಹೊಂದಲಾಗಿತ್ತು. ಆದರೆ ಪ್ರಗತಿ ಹಾದಿಯನ್ನು ಗಮನಿಸಿ ಮತ್ತು ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳಿಂದ, ಜನರಿಂದ, ಚುನಾಯಿತ ಪ್ರತಿನಿಧಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ “ಅಂತರರಾಷ್ಟ್ರೀಯ ಮಹಿಳಾ ದಿನ” ವಾದ ಮಾರ್ಚ್-8ರ ವರೆಗೂ ಆಂದೋಲನವನ್ನು ವಿಸ್ತರಣೆ ಮಾಡಲಾಗಿದೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು