Thursday, 2 February 2017

02-02-2017 ಚಾಮರಾಜನಗರ ಸುದ್ದಿಗಳು (ಫೆ. 3ರಂದು ಹರದನಹಳ್ಳಿಯಲ್ಲಿ ಮೇವು ನಿಧಿ ಕೇಂದ್ರ ಉದ್ಘಾಟನೆ : ರಿಯಾಯಿತಿ ದರದಲ್ಲಿ ಒಣ ಮೇವು ಮಾರಾಟ ,ಸಿನಿಮೋತ್ಸವ ಸಪ್ತಾಹ : ಉಚಿತ ಪ್ರವೇಶ )


ಫೆ. 3ರಂದು ಹರದನಹಳ್ಳಿಯಲ್ಲಿ ಮೇವು ನಿಧಿ ಕೇಂದ್ರ ಉದ್ಘಾಟನೆ : ರಿಯಾಯಿತಿ ದರದಲ್ಲಿ ಒಣ ಮೇವು ಮಾರಾಟ ಚಾಮರಾಜನಗರ, ಫೆ. 2 - ಬರಪರಿಸ್ಥಿತಿ ತಲೆದೋರಿರುವ ಹಿನ್ನಲೆಯಲ್ಲಿ ತಾಲ್ಲೂಕು ಆಡಳಿತವು ಮೇವು ನಿಧಿ ಕೇಂದ್ರವನ್ನು ತೆರೆಯುವ ಪ್ರಕ್ರಿಯೆ ಈ ಹಿಂದೆಯೇ ಆರಂಭಿಸಿದ್ದು ಇದೀಗ ಫೆಬ್ರವರಿ 3ರಂದು ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಮೇವು ನಿಧಿ ಕೇಂದ್ರವನ್ನು ಪ್ರಾರಂಭಿಸಲಿದೆ. ಫೆಬ್ರವರಿ 3ರಂದು ಬೆಳಿಗ್ಗೆ 10 ಗಂಟೆಗೆ ಮೇವು ನಿಧಿ ಕೇಂದ್ರವನ್ನು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಇತರೆ ಜನಪ್ರತಿನಿಧಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮೇವು ನಿಧಿ ಕೇಂದ್ರದಲ್ಲಿ ಒಣ ಜೋಳದ ದಂಟನ್ನು ದಾಸ್ತಾನು ಮಾಡಲಾಗಿದೆ. ಸರ್ಕಾರಿ ದರದಂತೆ ಪ್ರತಿ ಟನ್ ಮೇವಿಗೆ 6000 ರೂ. ನಿಗದಿ ಮಾಡಲಾಗಿದ್ದು, ಇದರ ಶೇಕಡ 50 ರಷ್ಟು ರಿಯಾಯಿತಿ ದರದಲ್ಲಿ ಅಂದರೆ 3000 ರೂ. ಪಾವತಿಸಿ ಮೇವು ಖರೀದಿಸಬಹುದಾಗಿದೆ. ಮೇವು ಕೊರತೆಯಿರುವ ಜಾನುವಾರು ಮಾಲೀಕರು ಸ್ಥಳೀಯ ಪಶು ವೈದ್ಯಾಧಿಕಾರಿಗಳಿಂದ ದೃಡೀಕರಣ ಪತ್ರ ಪಡೆದು ರಿಯಾಯಿತಿ ದರದಲ್ಲಿ ಮೇವು ಖರೀದಿಸಬಹುದು. ಮೇವು ಕೋರಿ ಅರ್ಜಿ ಸಲ್ಲಿಸಿರುವವರ ಪೈಕಿ ಜೇಷ್ಠತೆ ಆಧಾರದ ಮೇಲೆ ದೂರವಾಣಿ ಮೂಲಕ ರೈತರನ್ನು ಸಂಪರ್ಕಿಸಿ ರಿಯಾಯಿತಿ ದರದಲ್ಲಿ ಮೇವು ಪಡೆದುಕೊಳ್ಳುವಂತೆ ತಿಳಿಸಲಾಗುತ್ತದೆ ಎಂದು ತಹಶೀಲ್ದಾರ್ ಕೆ. ಪುರಂದರ ಹಾಗೂ ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಜಿ. ನಟರಾಜು ತಿಳಿಸಿದ್ದಾರೆ. ಫೆ 3ರಿಂದ ನಗರದಲ್ಲಿ ಸಿನಿಮೋತ್ಸವ ಸಪ್ತಾಹ : ಉಚಿತ ಪ್ರವೇಶ ಚಾಮರಾಜನಗರ, ಫೆ. 02 - ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ಚಲನಚಿತ್ರಗಳು ಜನಸಾಮಾನ್ಯರಿಗೆ ತಲುಪಲಿ ಎಂಬ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿನಿಮೋತ್ಸವ ಸಪ್ತಾಹ ಕಾರ್ಯಕ್ರಮವನ್ನು ಫೆಬ್ರವರಿ 3 ರಿಂದ 9ರವರೆಗೆ ನಗರದ ಸಿಂಹ ಮೂವಿ ಪ್ಯಾರಡೈಸ್ ಚಿತ್ರಮಂದಿರದಲ್ಲಿ ಬೆಳಗಿನ ಪ್ರದರ್ಶನದಲ್ಲಿ ಆಯೋಜಿಸಿದೆ. ಫೆಬ್ರವರಿ 3 ರಿಂದ 9ರವರೆಗೆ ಸಿಂಹ ಮೂವಿ ಪ್ಯಾರಡೈಸ್ ಚಿತ್ರಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ 2015ನೇ ಕ್ಯಾಲೆಂಡರ್ ವರ್ಷದ ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಚಲನಚಿತ್ರಗಳಲ್ಲಿ ರಾಜ್ಯ ಪ್ರಶಸ್ತಿಗೆ ಭಾಜನವಾಗಿರುವ ಕನ್ನಡದ ಐದು ಸಿನಿಮಾಗಳನ್ನು ಪ್ರದರ್ಶಿಸಲಾಗುವುದು. ಫೆಬ್ರವರಿ 3ರಂದು ಮೈತ್ರಿ, ಫೆಬ್ರವರಿ 4ರಂದು ಶಿವಯೋಗಿ ಶ್ರೀಪುಟ್ಟಯ್ಯಜ್ಜ, ಫೆಬ್ರವರಿ 5ರಂದು ತಿಥಿ, ಫೆಬ್ರವರಿ 6ರಂದು ಕೃಷ್ಣಲೀಲಾ, ಫೆಬ್ರವರಿ 7ರಂದು ರಂಗಿತರಂಗ, ಫೆಬ್ರವರಿ 8ರಂದು ತಿಥಿ ಹಾಗೂ ಫೆಬ್ರವರಿ 9 ರಂದು ಮೈತ್ರಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಈ ಸದಾವಕಾಶವನ್ನು ಬಳಸಿಕೊಳ್ಳಬಹುದು. ಮೈತ್ರಿ: ಗಿರಿರಾಜ್ ನಿರ್ದೇಶನದಲ್ಲಿ ಪುನೀತ್ ರಾಜ್‍ಕುಮಾರ್, ಮೋಹನಲಾಲ್ ತಾರಾಗಣದ ಮೈತ್ರಿ ಚಿತ್ರ ಪ್ರತಿಭೆಗೆ ಬಡತನವಿಲ್ಲ. ಪ್ರೋತ್ಸಾಹ ಸಿಕ್ಕರೆ ಸಾಧನೆ ಸಾದ್ಯ ಎನ್ನುವ ಕಥಾಹಂದರ ಹೊಂದಿದೆ. ಶಿವಯೋಗಿ ಶ್ರೀಪುಟ್ಟಯ್ಯಜ್ಜ: ದಿವಂಗತ ಶ್ಯಾಂ ನವಲೆ ನಿರ್ದೇಶನದ ವಿಜಯ ರಾಘವೇಂದ್ರ ನಟಿಸಿರುವ ಈ ಚಿತ್ರವು ಸಂಗೀತ ಕಲಾ ಪರಾಂಗತ ಎನ್ನಿಸಿದ ಗದಗಿನ ಶ್ರೀ ವೀರೇಶ್ವರ ಪುಣ್ಯ ಆಶ್ರಮದ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಜೀವನಾಧಾರಿತ ಸಿನಿಮಾ. ತಿಥಿ: ಹೊಸ ನಿರ್ದೇಶಕ ಹೊಸ ಕಲಾವಿದರ ನೂತನ ಕಥೆಯೊಂದಿಗೆ ಹೊಸ ಛಾಪು ಮೂಡಿಸಿದ ತಿಥಿ ಸಿನಿಮಾ ಹಳ್ಳಿಯೊಂದರ ನೆಲೆಗಟ್ಟಿನ ನೈಜ ಸಿನಿಮಾವಾಗಿದ್ದು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಕೃಷ್ಣಲೀಲಾ: ಶಶಾಂಕ್ ನಿರ್ದೇಶನದಲ್ಲಿ ಅಜಯ್ ರಾವ್ ನಿರ್ಮಿಸಿ ನಟಿಸಿರುವ ಕೃಷ್ಣಲೀಲಾ ಇಂದಿನ ಅಗತ್ಯಗಳಲ್ಲಿ ಒಂದಾಗಿರುವ ಮೊಬೈಲ್ ಅವಾಂತರದ ಮೂಲಕ ಜೀವನ ಬದಲಾಗುವ ರೀತಿಯನ್ನು ಹೇಳಿರುವ ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದೆ. ರಂಗಿತರಂಗ: ಕನ್ನಡ ಚಿತ್ರರಂಗದಲ್ಲಿ ಇಂದಿನ ಅದ್ದೂರಿ ಚಿತ್ರಗಳ ಪೈಪೋಟಿ ನಡುವೆ ವರ್ಷ ಪೂರೈಸಿದ ಚಿತ್ರ ರೋಚಕಥೆ ಕುತುಹಲ ಕಂಡುಕೊಂಡು ಪತ್ತೇದಾರಿ ಕಥೆಯ ಜನಮನ್ನಣೆ ಗಳಿಸಿರುವ ಸಿನಿಮಾ ಇದಾಗಿದೆ. ಸಾರ್ವಜನಿಕರು ಈ ಸದಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆ ಕೋರಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜೀವನ ಸಾಧನೆ ಬಿಂಬಿಸುವ ವಿನೂತನ ಕಾರ್ಯಕ್ರಮ ಫೆ. 4ರಂದು ನಗರದಲ್ಲಿ ಭಾರತ ಭಾಗ್ಯ ವಿಧಾತ : ಧ್ವನಿ - ಬೆಳಕು; ದೃಶ್ಯ ವೈಭವಗಳ ರೂಪಕ ಚಾಮರಾಜನಗರ, ಫೆ. 02:- ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆಯ ವರ್ಷವನ್ನಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್‍ನ ಸಂಯುಕ್ತ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಸಾಧನೆಗಳನ್ನು ಬಿಂಬಿಸುವ ವಿನೂತನ ಧ್ವನಿ-ಬೆಳಕು ಕಾರ್ಯಕ್ರಮವನ್ನು ಭಾರತ ಭಾಗ್ಯ ವಿಧಾತ ಎಂಬ ಹೆಸರಿನಲ್ಲಿ ನಗರದ ಶ್ರೀ ಚಾಮರಾಜೇಶ್ವರ ದೇವಾಲಯ ಮುಂಭಾಗದಲ್ಲಿ ಫೆಬ್ರವರಿ 4ರಂದು ಸಂಜೆ 6 ಗಂಟೆಗೆ ಹಮ್ಮಿಕೊಂಡಿದೆ. “ಭಾರತ ಭಾಗ್ಯ ವಿಧಾತ” – ಇದು ಭಾರತದ ತಳ ಸಮುದಾಯಗಳ ಆತ್ಮಸ್ಥೈರ್ಯವನ್ನು ನೂರ್ಮುಡಿಗೊಳಿಸಿದ ಮಹಾ ಚೇತನದ ಜೀವನ ಚರಿತೆ. ನೊಂದವರ ನೋವಿಗೆ ದನಿಯಾಗಿ ನಿಂತ ಧೀಮಂತ ನಾಯಕನ ಆತ್ಮಕತೆ. ತನ್ನ ಪ್ರತಿಭೆ, ಪರಿಶ್ರಮಗಳಿಂದ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವಿ ಪುರಸ್ಕಾರ ಗಳಿಸಿದ ಆರ್ಥಿಕ ತಜ್ಞನ ಯಶೋಗಾಥೆ. ಭಾರತ ಸಂವಿಧಾನದ ಶಿಲ್ಪಿಯೆಂದೇ ಖ್ಯಾತರಾದ ಮಹಾ ಮಾನವತಾವಾದಿಯಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವಗಾಥೆ. ನಮ್ಮ ಭಾರತ ದೇಶ ಹಲವಾರು ಮಹನೀಯರುಗಳ ಕರ್ಮ ಭೂಮಿ. ಸತ್ಯ, ಶಾಂತಿ, ಅಹಿಂಸೆಯೆಂಬ ಮಹಾ ಮೌಲ್ಯಗಳ ಮೂಲಕ ನಮ್ಮ ನಾಡಿಗೆ ಸ್ವಾತಂತ್ರ್ಯ ದೊರಕಿಸಿ, ಭಾರತದ ರಾಷ್ಟ್ರಪಿತನೆಂಬ ಮಹಾಗೌರವಕ್ಕೆ ಪಾತ್ರರಾದವರು ಮಹಾತ್ಮ ಗಾಂಧೀಜಿ. ಹಾಗೆಯೇ ನಮ್ಮ ಭಾರತದ ತಳ ಸಮುದಾಯಗಳ ಆತ್ಮಸ್ಥೈರ್ಯಕ್ಕೆ ಅಡಿಗಲ್ಲಾಗಿ ನಿಂತು ಶತಮಾನಗಳ ಶೋಷಣೆಗೆ ಸಂವಿಧಾನ ರಚನೆಯ ಮೂಲಕ ವಿದಾಯ ಹೇಳಿದವರು ಮಹಾ ಮಾನವತಾವಾದಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್. ಡಾ. ಬಿ.ಆರ್. ಅಂಬೇಡ್ಕರ್ ಭಾರತದ ತಳ ಸಮುದಾಯದ ಸ್ಫೂರ್ತಿಯ ಸೆಲೆ, ನೊಂದವರ ಎದೆಯಾಳದ ಆತ್ಮಸ್ಥೈರ್ಯದ ಹಾಡು, ದಮನಿತ ಸಮುದಾಯದ ಚೈತನ್ಯ ಶಕ್ತಿ, ಭಾರತ ಸಂವಿಧಾನದ ಮಹಾಶಿಲ್ಪಿ. ಹಲವಾರು ರಾಷ್ಟ್ರಗಳ ಸಂವಿಧಾನಗಳನ್ನು ತಳಸ್ಪರ್ಶಿಯಾಗಿ ಅಧ್ಯಯನ ಮಾಡಿ ಭಾರತದಲ್ಲಿ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಪವಿತ್ರ ಸಂವಿಧಾನವನ್ನು ರಚಿಸಿಕೊಟ್ಟ ಮಹಾನ್ ಸಾಂವಿಧಾನಿಕ ತಜ್ಞರು. ಮಹಾರಾಷ್ಟ್ರದ ಮೆಹರ್ ಎಂಬ ತಳಸಮುದಾಯದಲ್ಲಿ ಜನಿಸಿದ ಅಂಬೇಡ್ಕರ್ ಅಪಮಾನಗಳ ನಡುವೆಯೇ ಬಾಳಿ ಬದುಕಿ ಭಾರತದ ಮಹಾನ್ ಚೇತನವಾಗಿ ಬೆಳಗಿದ ಕಥೆ ಬೆರಗುಗೊಳಿಸುವಂತಹುದು. ಶಾಲಾ ಬಾಲಕನಾಗಿದ್ದಾಗ ತನ್ನದೇ ನಾಡಿನಲ್ಲಿ ಮೇಲ್ವರ್ಗದವರಿಂದ ಅವಮಾನಿತರಾಗಿ ಗಾಡಿಯಿಂದ ಕೆಳಗೆ ದೂಡಿಸಿಕೊಂಡು ಅಪಮಾನ ಅನುಭವಿಸಿದ ಘಟನೆ ಹಾಗೂ ಗಾಂಧೀಜಿಯವರು ದಕ್ಷಿಣ ಆಫ್ರಿಕದ ಡರ್ಬಾನ್‍ನಲ್ಲಿ ಬಿಳಿ ವರ್ಣೀಯರಿಂದ ರೈಲಿನಲ್ಲಿ ಕೆಳಗೆ ದೂಡಿಸಿಕೊಂಡ ಘಟನೆಗಳೆರಡೂ ಈ ಇಬ್ಬರೂ ಮಹಾನ್ ಚೇತನಗಳ ಬದುಕಿನಲ್ಲಿ ಮಹತ್ತರ ಘಟನೆಗಳಾಗಿವೆ. ಈ ಎರಡೂ ಘಟನೆಗಳ ನಂತರವೇ ಈ ಇಬ್ಬರೂ ತಾವು ಅನುಭವಿಸಿದ ಅಪಮಾನ, ನೋವುಗಳನ್ನು ತಮ್ಮ ಸಮುದಾಯದವರು ಅನುಭವಿಸಬಾರದೆಂದು ದೃಢ ಸಂಕಲ್ಪ ತಳೆದು ತಮ್ಮ ಬದುಕನ್ನೇ ಈ ಅಸಮಾನತೆಯ ನಿವಾರಣೆಗಾಗಿ ಮುಡುಪಾಗಿಟ್ಟಿದ್ದು ಈಗ ಇತಿಹಾಸ. ಏಪ್ರಿಲ್ 14, 1891 ಭಾರತೀಯ ತಳ ಸಮುದಾಯಗಳ ಚರಿತ್ರೆಯಲ್ಲಿ ಐತಿಹಾಸಿಕ ದಿನ. ಸಮಾನತೆಯ ಸಮಾಜಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‍ರವರು ಜನಿಸಿದ ಸ್ಮರಣೀಯ ದಿನ. ಪ್ರತಿ ವರ್ಷ ಈ ದಿನವನ್ನು ಅಂಬೇಡ್ಕರ್ ಜಯಂತಿ ಹೆಸರಿನಲ್ಲಿ ರಾಷ್ಟ್ರಾದ್ಯಂತ ಸಡಗರ, ಸಂಭ್ರಮಗಳಿಂದ ಆಚರಿಸಲಾಗುತ್ತದೆ. ಅಂತೆಯೇ 2016ರ ಏಪ್ರಿಲ್ 14 ರಿಂದ ಆರಂಭಿಸಿ 1 ವರ್ಷ ಕಾಲ ಅಂಬೇಡ್ಕರ್‍ರವರ 125ನೇ ಜನ್ಮ ದಿನಾಚರಣೆಯ ವರ್ಷವನ್ನಾಗಿ ರಾಜ್ಯದಲ್ಲಿ ಆಚರಿಸಲಾಗುತ್ತಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ಸಂದರ್ಭದಲ್ಲಿ ಅಂಬೇಡ್ಕರ್‍ರವರ ಜೀವನ ಸಾಧನೆಗಳನ್ನು ಬಿಂಬಿಸುವ ವಿನೂತನ “ಧ್ವನಿ-ಬೆಳಕು” ಕಾರ್ಯಕ್ರಮವನ್ನು “ಭಾರತ ಭಾಗ್ಯ ವಿಧಾತ” ಎನ್ನುವ ಹೆಸರಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏರ್ಪಡಿಸುತ್ತಿದೆ. ಈ ದಿಸೆಯಲ್ಲಿ ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಾಲಯ ಮುಂಭಾಗದಲ್ಲಿ ಫೆಬ್ರವರಿ 4ರಂದು ಸಂಜೆ 6 ಗಂಟೆಗೆ ಭಾರತ ಭಾಗ್ಯವಿಧಾತ ಧ್ವನಿಬೆಳಕು ದೃಶ್ಯ ವೈಭವಗಳ ರೂಪಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಪರಿಕಲ್ಪನೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್. ಆರ್. ವಿಶುಕುಮಾರ್ ಅವರದ್ದಾಗಿದೆ. ಬಿ.ಎಂ. ಗಿರಿರಾಜ್ ನಿರ್ದೇಶನ ಮತ್ತು ಸಾಹಿತ್ಯ ನೀಡಿದ್ದಾರೆ. ಡಾ. ಕೆ.ವೈ. ನಾರಾಯಣಸ್ವಾಮಿ ಹಾಗೂ ಬಿ.ಎಂ. ಗಿರಿರಾಜ್ ಗೀತ ರಚನೆ ಮಾಡಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಶಶಿಧರ ಅಡಪ ರಂಗವಿನ್ಯಾಸ ಮಾಡಿದ್ದು, ಪದ್ಮಿನಿ ಅಚ್ಚಿ ನೃತ್ಯ ಸಂಯೋಜಿಸಿದ್ದಾರೆ. ನಂದಕಿಶೋರ್ ಬೆಳಕು, ಪ್ರಮೋದ್ ಶಿಗ್ಗಾವ್ ವಸ್ತ್ರಾಲಂಕಾರ, ರಾಮಕೃಷ್ಣ ಬೆಳ್ತೂರು ಪ್ರಸಾಧನ ಹಾಗೂ ಎಂ.ಪಿ.ಎಂ ವೀರೇಶ್ ಸಹ ನಿರ್ದೇಶನ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಜಿಲ್ಲೆಯ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಅವಿಸ್ಮರಣೀಯವಾಗಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ. ಫೆ. 6, 7ರಂದು ದಡಾರ, ರುಬೆಲ್ಲಾ ಲಸಿಕಾ ಅಭಿಯಾನ ಚಾಮರಾಜನಗರ, ಫೆ. 02 - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಫೆಬ್ರವರಿ 6 ಹಾಗೂ 7ರಂದು ಹಮ್ಮಿಕೊಳ್ಳಲಾಗಿದೆ. ಫೆಬ್ರವರಿ 6ರಂದು ಬೆಳಿಗ್ಗೆ 9.30 ಗಂಟೆಗೆ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನ ಜಾಥಾವು ನಗರದ ಜಿಲ್ಲಾ ಆಸ್ಪತ್ರೆ ಆವರಣದಿಂದ ಹೊರಡಲಿದೆ. ಬಳಿಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಿದೆ. ಫೆಬ್ರವರಿ 7ರಂದು ಬೆಳಿಗ್ಗೆ 10 ಗಂಟೆಗೆ ನಗರದ ಶಂಕರಪುರ ಬಡಾವಣೆಯಲ್ಲಿರುವ ಸೇವಾ ಭಾರತಿ ಪ್ರೌಢಶಾಲೆಯಲ್ಲಿ ಸಮಾರಂಭ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ. ಫೆ. 13ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಚಾಮರಾಜನಗರ, ಫೆ. 02 - ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ಫೆಬ್ರವರಿ 13ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮ ಸೇರಿ) ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ತಿಳಿಸಿದ್ದಾರೆ. ಫೆ. 10ರಂದು ನಗರದಲ್ಲಿ ವಿಕಲಚೇತನ ಶಾಲಾಮಕ್ಕಳ ಜಿಲ್ಲಾಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ ಚಾಮರಾಜನಗರ, ಫೆ. 02:- 2016-17ನೇ ಸಾಲಿನ 14 ರಿಂದ 17 ವರ್ಷ ವಯೋಮಿತಿಯ ವಿಕಲಚೇತನ ಶಾಲಾ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟವನ್ನು ಫೆಬ್ರವರಿ 10ರಂದು ನಗರದ ಜೆ ಎಸ್ ಎಸ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಶಾಲೆಯಿಂದ ಶಾಲಾ ದಾಖಲಾತಿ ದೃಢೀಕರಣ ಪತ್ರ ಹಾಗೂ ವೈದ್ಯಕೀಯ ದೃಢೀಕರಣ ಪತ್ರವನ್ನು ತಪ್ಪದೇ ತರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. < ಗ್ರಾ.ಪಂ. ಉಪಚುನಾವಣೆ : ಮದ್ಯ ಮಾರಾಟ ನಿಷೇಧ ಚಾಮರಾಜನಗರ, ಫೆ. 02 - ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಆಯಾ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಅವಧಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶ ಹೊರಡಿಸಿದ್ದಾರೆ. ಚಾಮರಾಜನಗರ ತಾಲೂಕಿನ ಹೊಂಗನೂರು, ಕೊಳ್ಳೇಗಾಲ ತಾಲೂಕಿನ ದೊಡ್ಡಾಲತ್ತೂರು, ಮಾರ್ಟಳ್ಳಿ, ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ, ಗುಂಡ್ಲುಪೇಟೆ ತಾಲೂಕಿನ ಕೂತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಅವಧಿಯಲ್ಲಿ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು ಮುಚ್ಚುವಂತೆಯೂ ಹಾಗೂ ಮದ್ಯ ಮಾರಾಟ, ಶೇಖರಣೆ, ಹಂಚಿಕೆ ಮಾಡದಂತೆ ಆದೇಶಿಸಲಾಗಿದೆ. ನೀತಿ ಸಂಹಿತೆ ಅವಧಿಯು ಜನವರಿ 30 ರಿಂದ ಫೆಬ್ರವರಿ 15ರವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಆದೇಶವು ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ಅವರು ತಿಳಿಸಿದ್ದಾರೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು