Thursday, 9 February 2017

09-02-2017 ಚಾಮರಾಜನಗರ ಸುದ್ದಿಗಳು (ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ:ಪರಿಶೀಲನೆ)

ಫೆಬ್ರವರಿ 09, 2017 ಫೆಬ್ರವರಿ 10 ರಂದು ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ:ಪರಿಶೀಲನೆ ಚಾಮರಾಜನಗರ, ಫೆ. 09 - ಕೇಂದ್ರ ಅಧಿಕಾರಿಗಳನ್ನೊಳಗೊಂಡ ಬರ ಅಧ್ಯಯನ ಸಮಿತಿಯು ಫೆಬ್ರವರಿ 10 ರಂದು ಜಿಲ್ಲೆಗೆ ಭೇಟಿ ನೀಡಿ, ಹಿಂಗಾರು ಅವಧಿಯ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಲಿದೆ. ಕೇಂದ್ರ ಕೃಷಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಲಜ್‍ಶ್ರೀವಾಸ್ತವ, ನವದೆಹಲಿಯ ನೀತಿ ಆಯೋಗದ ಸಂಶೋಧಾನ ಅಧಿಕಾರಿ ಬಿ.ಅನುರಾಧ, ಬೆಂಗಳೂರಿನ ಕೇಂದ್ರ ಜಲ ಆಯೋಗದ ಅಧೀಕ್ಷಕ ಎಂಜಿನಿಯರ್ ವಿ.ಮೋಹನ್‍ಮುರುಳಿ ಅವರನ್ನು ಒಳಗೊಂಡ ತಂಡ ಭೇಟಿ ನೀಡಿ ಪರಿಸ್ಥಿತಿಯನ್ನು ಅಧ್ಯಯನ ಮಾಡಲಿದೆ. ಹಿಂಗಾರು ಅವಧಿಯಲ್ಲಾಗಿರುವ (ರಬಿ) ಬೆಳೆ ನಷ್ಟ, ಕುಡಿಯುವ ನೀರು, ಮೇವು ಅಭಾವ ಪರಿಸ್ಥಿತಿಯನ್ನು ತಂಡವು ಪರಾಮರ್ಶಿಸಲಿದೆ. ಕೊಳ್ಳೇಗಾಲದ ಮೂಲಕ ಜಿಲ್ಲೆಗೆ ಆಗಮಿಸಲಿರುವ ತಂಡವು ಚಾಮರಾಜನಗರ ತಾಲ್ಲೂಕಿನ ಮಂಗಲ ಗ್ರಾಮದಲ್ಲಿರುವ ಗೋಶಾಲೆಗೆ ಭೇಟಿ ನೀಡಲಿದೆ. ತದನಂತರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಬರಪರಿಸ್ಥಿತಿ ಸಂಬಂಧ ಮಾಹಿತಿ ಪಡೆಯಲಿದೆ ಬಳಿಕ ಉಡಿಗಾಲ, ತೆರಕಣಾಂಬಿ, ಗುಂಡ್ಲುಪೇಟೆ ಮಾರ್ಗವಾಗಿ ತಂಡವು ತೆರಳಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. -------------------------------------------------------------------------- ಕೆ.ಡಿ.ಪಿ.ಸಭೆ ಮುಂದೂಡಿಕೆ ಚಾಮರಾಜನಗರ, ಫೆ. 09 - ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರ ಅಧ್ಯಕ್ಷತೆಯಲ್ಲಿ ಫೆಬ್ರವರಿ 13 ರಂದು ನಗರದಲ್ಲಿ ನಿಗದಿಯಾಗಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ) ಪ್ರಗತಿ ಪರಿಶೀಲನಾ ಸಭೆಯನ್ನು ಮುಂದೂಡಲಾಗಿದೆ. ಕರ್ನಾಟಕ ವಿಧಾನ ಮಂಡಲ ಅಧಿವೇಶನವು ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆಬ್ರವರಿ 13 ರಂದು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಿಗದಿಯಾಗಿದ್ದ ಕೆ.ಡಿ.ಪಿ ಸಭೆ ಮುಂದೂಡಿಕೆಯಾಗಿದೆ. ಅಲ್ಲದೆ ಅಂದು ಸಚಿವರು ಕೈಗೊಳ್ಳಲಿದ್ದ ಸಾರ್ವಜನಿಕರ ಕುಂದು ಕೊರತೆ ಅಹವಾಲು ಕಾರ್ಯಕ್ರಮವನ್ನು ಸಹ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ---------------------------------------------------------------------------------------- ಗ್ರಾ.ಪಂ. ಉಪಚುನಾವಣೆ : ಫೆ. 12ರಂದು ಸಂತೆ, ಜಾತ್ರೆ ನಿಷೇಧ ಚಾಮರಾಜನಗರ, ಫೆ. 09- ವಿವಿಧ ಕಾರಣಗಳಿಂದ ತೆರವಾಗಿರುವ ಕೆಲ ಗ್ರಾಮಪಂಚಾಯಿತಿಯ ಸದಸ್ಯ ಸ್ಥಾನಗಳಿಗೆ ಫೆಬ್ರವರಿ 12ರಂದು ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 5 ರಿಂದ ಸಂಜೆ 6 ಗಂಟೆಯವರೆಗೆ ಸಂಬಂಧಪಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸಂತೆ, ಜಾತ್ರೆ ನಿಷೇಧಿಸಿ ಜಿಲ್ಲಾಧಿಕಾರಿ ಬಿ. ರಾಮು ಆದೇಶ ಹೊರಡಿಸಿದ್ದಾರೆ. ಚಾಮರಾಜನಗರ ತಾಲೂಕಿನ ಹೊಂಗನೂರು, ಕೊಳ್ಳೇಗಾಲ ತಾಲೂಕಿನ ದೊಡ್ಡಾಲತ್ತೂರು, ಮಾರ್ಟಳ್ಳಿ, ಗುಂಡ್ಲುಪೇಟೆ ತಾಲೂಕಿನ ಕೊತನೂರು, ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರದೇಶಗಳಲ್ಲಿ ಫೆಬ್ರವರಿ 12ರಂದು ಸೂಚಿಸಲಾಗಿರುವ ಅವಧಿಯಲ್ಲಿ ಸಂತೆ, ಜಾತ್ರೆಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. **************************************************************************** ಆಧಾರ್, ಬ್ಯಾಂಕ್ ಖಾತೆ ವಿವರ ಕಡ್ಡಾಯ : ಡಿಸಿ ಸೂಚನೆ ಚಾಮರಾಜನಗರ, ಫೆ. 09 :- ಸಾಮಾಜಿಕ ಭದ್ರತಾ ಹಾಗೂ ಪಿಂಚಣಿ ಯೋಜನೆಗಳಡಿ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳು ಆಧಾರ್, ಬ್ಯಾಂಕ್/ ಅಂಚೆ ಖಾತೆ ವಿವರಗಳನ್ನು ಮಾರ್ಚ್ ಅಂತ್ಯದೊಳಗೆ ಸಲ್ಲಿಸಬೇಕು. ಇಲ್ಲವಾದಲ್ಲಿ ಪಿಂಚಣಿ ಸ್ಥಗಿತಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದ್ದಾರೆ. ಆಧಾರ್ ಸಂಖ್ಯೆ ಸಂಗ್ರಹಣೆಗಾಗಿ ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಿಗರು, ಗ್ರಾಮ ಸಹಾಯಕರು ಗ್ರಾಮಗಳಿಗೆ ಭೇಟಿನೀಡಿದ ಸಂದರ್ಭದಲ್ಲಿ ಪಿಂಚಣಿ ಮಂಜೂರಾತಿ ಆದೇಶ ಸಂಖ್ಯೆ, ಪಿಪಿಓಐಡಿ ಜತೆಗೆ ಆಧಾರ್ ಸಂಖ್ಯೆ, ಅಂಚೆ/ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ನೀಡಬೇಕು. ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮಸಹಾಯಕರು, ಗ್ರಾಮಲೆಕ್ಕಿಗರು ಕಂದಾಯ ನಿರೀಕ್ಷಕರ ಮುಖಾಂತರ (ಹೋಬಳಿ ಮಟ್ಟದಲ್ಲಿ ಅಟಲ್ ಜಿ ಜನಸ್ನೇಹಿ ಕೇಂದ್ರಗಳು) ಹಾಗೂ ತಾಲೂಕು ಕೇಂದ್ರ, ನಗರ ಪ್ರದೇಶಗಳಲ್ಲಿ ತಾಲೂಕು ಕಚೇರಿಗಳನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ನೀಡಬೇಕು. ಆಧಾರ್ ಸಂಖ್ಯೆ ಪಡೆಯಲು ಈಗಾಗಲೇ ಅರ್ಜಿ ಸಲ್ಲಿಸಿದವರು ಆಧಾರ್ ಸಂಖ್ಯೆ ಇನ್ನು ದೊರೆತಿಲ್ಲದಿದ್ದರೆ 28 ಅಂಕಿಯ ಇಐಡಿ (ಆಧಾರ್ ಎನ್‍ರೋಲ್‍ಮೆಂಟ್ ಸಂಖ್ಯೆ) ನೀಡಬಹುದು. ಇಐಡಿ ಸಂಖ್ಯೆಗೆ ಯಶಸ್ವಿಯಾಗಿ ಆಧಾರ್ ಸಂಖ್ಯೆ ಲಭ್ಯವಾದಲ್ಲಿ ಇಲಾಖೆ ವತಿಯಿಂದಲೇ ಅದನ್ನು ಸೇರಿಸಲಾಗುವುದು. ಆಧಾರ್ ಸಂಖ್ಯೆಯನ್ನು ಪಡೆದುಕೊಳ್ಳಲು ಹೋಬಳಿ ಮಟ್ಟದಲ್ಲಿ ಇರುವ ಅಟಲ್ ಜೀ ಜನಸ್ನೇಹಿ ಕೇಂದ್ರ, ನಗರ ಪ್ರದೇಶಗಳಲ್ಲಿ ನೋಂದಣಿ ಕೇಂದ್ರಗಳನ್ನು ಸಂಪಕಿಸಬೇಕು. ಕೇಂದ್ರ ಸರ್ಕಾರದ ನೇರ ಹಣ ಸಂದಾಯ ಯೋಜನೆಯಡಿ ಪ್ರತಿ ಫಲಾನುಭವಿ ಸರ್ಕಾರದ ಸವಲತ್ತನ್ನು ಪಡೆಯಲು ಆಧಾರ್ ಸಂಖ್ಯೆ, ಬ್ಯಾಂಕ್ ಅಥವಾ ಅಂಚೆ ಖಾತೆ ಸಂಖ್ಯೆ ಕಡ್ಡಾಯವಾಗಿದೆ. ಆಧಾರ್ ಹೊಂದಾಣಿಕೆಯಾದ ಖಾತೆ ಮೂಲಕ ಪಿಂಚಣಿ ಪಡೆಯುವುದಕ್ಕೆ ಒಪ್ಪಿಗೆ ಪತ್ರದೊಂದಿಗೆ ತಾಲೂಕು ಕಚೇರಿ, ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ನೀಡÀಬೇಕು. ಇ- ಮನಿಯಾರ್ಡರ್ ಮುಖಾಂತರ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಆಧಾರ್ ಜೆರಾಕ್ಸ್ ಪ್ರತಿ, ಇ ಮನಿಯಾರ್ಡರ್ ಸ್ವೀಕೃತಿ, ರಸೀತಿ ಹಾಗೂ ಭಾವಚಿತ್ರವನ್ನು ಅಂಚೆಕಚೇರಿಗೆ ನೀಡಿ ಅಂಚೆ ಖಾತೆ ತೆರೆಯಬೇಕು. ನಗರ ಪ್ರದೇಶದಲ್ಲಿ ವಾಸವಾಗಿದ್ದು ಪಿಂಚಣಿ ಪಡೆಯುತ್ತಿರುವವರು ತಮ್ಮ ವಾಸಸ್ಥಳ ಅಥವಾ ವಿಳಾಸ ಬದಲಾವಣೆಯಾಗಿದ್ದಲ್ಲಿ ಬದಲಾದ ವಿಳಾಸದ ಜತೆಗೆ ಆಧಾರ್ ಜೋಡಣೆ ಬಗ್ಗೆ ಅಗತ್ಯ ಮಾಹಿತಿಯನ್ನು ಅಟಲ್ ಜಿ ಜನಸ್ನೇಹಿ ಕೇಂದ್ರ ಅಥವಾ ತಾಲೂಕು ಕಚೇರಿಯಲ್ಲಿ ನೀಡಬೇಕು. ಇಲ್ಲವಾದಲ್ಲಿ ಪಿಂಚಣಿ ಮಂಜೂರು ವಿಳಾಸದಲ್ಲಿ ಫಲಾನುಭವಿ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಪಿಂಚಣಿ ಸ್ಥಗಿತಗೊಳಿಸಲಾಗುತ್ತದೆ. ಈ ಕುರಿತ ಏನೇ ದೂರುಗಳು ಇದ್ದಲ್ಲಿ ಸಂಬಂಧಪಟ್ಟ ಅಟಲ್ ಜೀ ಜನಸ್ನೇಹಿ ಕೇಂದ್ರ, ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ ಅಥವಾ ಬೆಂಗಳೂರಿನ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ****************************************************************************** ಫೆ. 10ರಂದು ದಲಿತ ವಚನಕಾರರು, ಶಿವಾಜಿ, ಸರ್ವಜ್ಞ ಜಯಂತಿ ಆಚರಣೆ ಪೂರ್ವಭಾವಿ ಸಭೆ ಚಾಮರಾಜನಗರ, ಫೆ. 09- ಜಿಲ್ಲಾಡಳಿತದ ವತಿಯಿಂದ ಛತ್ರಪತಿ ಶಿವಾಜಿ, ಸರ್ವಜ್ಞ ಹಾಗೂ ದಲಿತ ವಚನಕಾರರ ಜಯಂತಿ ಆಚರಿಸುವ ಸಂಬಂಧ ಚರ್ಚಿಸುವ ಸಲುವಾಗಿ ಫೆಬ್ರವರಿ 10ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಈ ಸಭೆಗೆ ಎಲ್ಲಾ ಸಮುದಾಯ, ಸಂಘಟನೆಗಳ ಮುಖಂಡರು, ಪ್ರತಿನಿಧಿಗಳು, ನಾಗರಿಕರು ಸೇರಿದಂತೆ ಸರ್ವರೂ ಆಗಮಿಸಿ ಸಲಹೆ, ಸಹಕಾರ ನೀಡುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ಕೋರಿದ್ದಾರೆ. ವಿವಿಧ ಸಾಲಸೌಲಭ್ಯಕ್ಕೆ ವಿಶ್ವಕರ್ಮ ಸಮುದಾಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಚಾಮರಾಜನಗರ, ಫೆ. 09 :- ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮವು ನೀಡಲಿರುವ ವಿವಿಧ ಸೌಲಭ್ಯಕ್ಕಾಗಿ ವಿಶ್ವಕರ್ಮ ಸಮುದಾಯ ಹಾಗೂ ಅದರ ಉಪಜಾತಿಗೆ ಸೇರಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೃಷಿ ವಲಯ, ಸಣ್ಣ ವ್ಯಾಪಾರ, ಸೇವಾವಲಯ, ಸಾರಿಗೆ ವಲಯ, ಶೈಕ್ಷಣಿಕ ಸಾಲ ಯೋಜನೆ, ಮಹಿಳೆಯರಿಗೆ ನ್ಯೂ ಸ್ವರ್ಣಿಮ ಸಾಲ, ಶಿಲ್ಪ ಸಂಪದ, ಸ್ವಯಂ ಸಕ್ಷಮ ಸಾಲ, ಮೈಕ್ರೋಫೈನಾನ್ಸ್, ಕೃಷಿ ಸಂಪದ, ಮಹಿಳೆಯರಿಗೆ ಮಹಿಳಾ ಸ್ವಸಹಾಯ ಗುಂಪುಗಳಿಗೆ ಮಹಿಳಾ ಸಮೃದ್ಧಿ ಯೋಜನೆಯಡಿ ಸೌಲಭ್ಯ ಲಭಿಸಲಿದೆ. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಾಗಿದ್ದಲ್ಲಿ 98 ಸಾವಿರ, ಪಟ್ಟಣ ಪ್ರದೇಶದವರಾಗಿದ್ದಲ್ಲಿ 1 ಲಕ್ಷದ 20 ಸಾವಿರ ರೂ.ಗಿಂತ ಕಡಿಮೆ ಇರಬೇಕು. 18 ರಿಂದ 55ರ ವಯೋಮಿತಿಯೊಳಗಿರಬೇಕು. ಶೈಕ್ಷಣಿಕ ಸಾಲ ಪಡೆಯಲು 18 ರಿಂದ 32ರ ವಯೋಮಿತಿಯಲ್ಲಿರಬೇಕು. ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಫೆಬ್ರವರಿ 25ರೊಳಗೆ ಸಲ್ಲಿಸಬೇಕು. ವಿವರಗಳಿಗೆ ಸದರಿ ನಿಗಮದ ಕಚೇರಿ ಸಂಪರ್ಕಿಸಿ ಪಡೆಯುವಂತೆ ಪ್ರಕಟಣೆ ತಿಳಿಸಿದೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು