Wednesday, 15 February 2017

14-02-2017 ಮತ್ತು 15-02-2017 ಚಾಮರಾಜನಗರ, ಸುದ್ದಿಗಳು

ವಿದ್ಯಾರ್ಥಿಗಳಿಗೆ ಕನ್ನಡ ಪ್ರತಿಭಾನ್ವೇಷಣ ಪರೀಕ್ಷೆ ಚಾಮರಾಜನಗರ, ಫೆ. 14 (ಕರ್ನಾಟಕ ವಾರ್ತೆ):- ಮೊದಲ ಬಾರಿಗೆ ಮಕ್ಕಳಲ್ಲಿ ಕನ್ನಡ ಭಾಷೆಯ ಜಾಗೃತಿಗಾಗಿ ಸಾಹಿತಿ ನಾ. ಡಿಸೋಜ ಹಾಗೂ ಕಾದಂಬರಿಕಾರ ಕುಂ. ವೀರಭದ್ರಪ್ಪ ನೇತೃತ್ವದಲ್ಲಿ ರಾಜ್ಯಾದ್ಯಂತ ಕನ್ನಡದ ಮೊದಲ ದೊರೆ ಮಯೂರ ವರ್ಮನ ಸ್ಮರಣೆಯಲ್ಲಿ ಮಯೂರ ಕನ್ನಡ ಪ್ರತಿಭಾನ್ವೇಷಣೆ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ. ಪರೀಕ್ಷೆಯು ಶಾಲಾ, ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ನಡೆಯಲಿದ್ದು ಈ ಪರೀಕ್ಷೆಯಲ್ಲಿ ಭಾಗವಹಿಸುವ ಪ್ರತಿ ವಿದ್ಯಾರ್ಥಿಗೆ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ವತಿಯಿಂದ ರೂ. ಒಂದು ಲಕ್ಷ ಮೌಲ್ಯದ ದುರ್ಘಟನಾ ವಿಮೆ ಸೌಲಭ್ಯವಿರುತ್ತದೆ. ಕರ್ನಾಟಕ ಸರ್ಕಾರದ ಒಂದು ಉದ್ಯಮವಾದ ಕಿಯೋನಿಕ್ಸ್ ವತಿಯಿಂದ ರೂ. 500ಗಳ ಕೂಪನನ್ನು ಉಡುಗೊರೆಯಾಗಿ ನೀಡಲಿದೆ. ಪ್ರತೀ ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರಮಾಣ ಪತ್ರದೊಂದಿಗೆ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ನೀಡಲಾಗುತ್ತದೆ. ರಾಜ್ಯ ಮಟ್ಟದಲ್ಲಿ ವಿಜೇತರಾಗುವ ಮಕ್ಕಳಿಗೆ ಮಯೂರ ಅಕ್ಷರ ವೀರ ಪ್ರಶಸ್ತಿ ಹಾಗೂ ರೂ. 1 ಲಕ್ಷ, 50 ಸಾವಿರ, 25 ಸಾವಿರ, ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಗೆ ಪುರಸ್ಕಾರವಾಗಿ ನೀಡಲಾಗುವುದು. ಈ ಪರೀಕ್ಷೆಯು 5 ರಿಂದ 7ನೇ ತರಗತಿ ಹಾಗೂ 5 ರಿಂದ 10ನೇ ತರಗತಿಯ ಎರಡು ವಿಭಾಗಗಳಲ್ಲಿ ನಡೆಯಲಿದೆ. ಪುರಸ್ಕಾರಗಳನ್ನು ಸಹ ಪ್ರತ್ಯೇಕವಾಗಿ ನೀಡಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 25. ಕನ್ನಡ ಸಂಶೋಧನೆ ಮತ್ತು ಪ್ರತಿಷ್ಠಾನ (ನೋಂ) ಹಾಗೂ ಈ-ನೆಟ್ ಇನ್ಫಾರ್ಮೆಟಿಕ್ ಸಂಸ್ಥೆ, ಶಿರಾಳಕÉೂಪ್ಪ ಇವರ ನೆರವಿನಡಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಿತಿತಿ.eಟಿeಣಞಚಿಟಿಟಿಚಿಜಚಿ.ಛಿom, ಸಹಾಯವಾಣಿ 9026131818 ಸಂಪರ್ಕಿಸಬಹುದು ಹಾಗೂ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರ, ಕೆನರಾ ಬ್ಯಾಂಕ್ ಮೇಲ್ಮಹಡಿ, ಡಬಲ್ ರೋಡ್, ಚಾಮರಾಜನಗರ (ಮೊಬೈಲ್ 9886775550)ಇಲ್ಲಿ ಮಾಹಿತಿಯನ್ನು ಸಹ ಪಡೆಯಬಹುದೆಂದು ಪ್ರಕಟಣೆ ತಿಳಿಸಿದೆ. ---------------------------- ವಿದ್ಯಾರ್ಥಿಗಳಿಗೆ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಚಾಮರಾಜನಗರ, ಫೆ. 14 (ಕರ್ನಾಟಕ ವಾರ್ತೆ):- ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯು ಎರಡು ಹಂತಗಳಲ್ಲಿ ಜರುಗಲಿದ್ದು ಮೊದಲನೇ ಹಂತದ ಜಿಲ್ಲಾಮಟ್ಟದ ಲಿಖಿತ ರಸಪ್ರಶ್ನೆ ಸ್ಪರ್ಧೆ ಫೆಬ್ರವರಿ 18ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಯಾ ಜಿಲ್ಲೆಯ ಕೇಂದ್ರ ಕಚೇರಿಯಲ್ಲಿ ಜರುಗಲಿದೆ. ಜಿಲ್ಲಾಮಟ್ಟದ ಪರೀಕ್ಷಾ ಕೇಂದ್ರವನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಂಯೋಜಕರು ಮತ್ತು ಉಪನಿರ್ದೇಶಕರು ಆಯ್ಕೆ ಮಾಡಲಿದ್ದಾರೆ. ಪ್ರತಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳ ಒಂದು ಗುಂಪು ಮಾತ್ರ ಪರೀಕ್ಷೆಗೆ ಹಾಜರಾಗಲು ಅವಕಾಶವಿರುವುದು. ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸ್ಪರ್ಧಿಸುವರು. ರಾಜ್ಯಮಟ್ಟದ ಸ್ಪರ್ಧೆಯು ಮಾರ್ಚ್ 4ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ನಗರದ ಜಿಲ್ಲಾಡಳಿತದಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯನ್ನು ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಚೇರಿ, ರಾಜ್ಯ ಸಂಯೋಜಕರಾದ ಆರ್.ಎಸ್. ಪಾಟೀಲ್ (ಮೊ.9448867705) ಹಾಗೂ ಸಹ ಸಂಚಾಲಕರಾದ ಬಿ. ದೊಡ್ಡಬಸಪ್ಪ (ಮೊ. 9880656200) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. ------------------------------------------------- ಫೆ. 16, 17ರಂದು ಪ.ಜಾ. ಪ.ಪಂ ಪತ್ರಕರ್ತರಿಗೆ ಕಾರ್ಯಾಗಾರ ಚಾಮರಾಜನಗರ, ಫೆ. 14 (ಕರ್ನಾಟಕ ವಾರ್ತೆ):- ಕರ್ನಾಟಕ ಮಾಧ್ಯಮ ಅಕಾಡೆಮಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪತ್ರಕರ್ತರಿಗೆ ಫೆಬ್ರವರಿ 16 ಹಾಗೂ 17ರಂದು 2 ದಿನಗಳ ಕಾರ್ಯಾಗಾರವನ್ನು ನಗರದ ನಿಜಗುಣ ರೆಸಾರ್ಟ್‍ನಲ್ಲಿ ಆಯೋಜಿಸಿದೆ. ಫೆಬ್ರವರಿ 16ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಬಿ. ರಾಮು ಕಾರ್ಯಾಗಾರ ಉದ್ಘಾಟಿಸುವರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಎಂ. ಸಿದ್ಧರಾಜು ಅಧ್ಯಕ್ಷತೆ ವಹಿಸುವರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್‍ಮಟ್ಟು ಪ್ರಧಾನ ಭಾಷಣ ಮಾಡುವರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾದ ಮುತ್ತು ನಾಯ್ಕರ್ ಪ್ರಾಸ್ತಾವಿಕ ನುಡಿಗಳನ್ನಾಡುವರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾದ ಕೆ. ಶಿವಕುಮಾರ್, ರುದ್ರಣ್ಣ ಹರ್ತಿಕೋಟೆ, ಟಿ.ಎಸ್. ರಂಗಣ್ಣ, ಬಿ. ವೆಂಕಟಸಿಂಗ್ ಹಾಗೂ ಕರ್ನಾಟಕ ರಾಜ್ಯ ಎಸ್‍ಸಿ ಎಸ್‍ಟಿ ಪತ್ರಿಕೆಗಳ ಸಂಪಾದಕರದ ಸಂಘದ ಅಧ್ಯಕ್ಷರಾದ ಚಲುವರಾಜು ಉಪಸ್ಥಿತರಿರುವರು. ವಿಚಾರಗೋಷ್ಠಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪತ್ರಕರ್ತರ ಪ್ರಸ್ತುತ ಸಮಸ್ಯೆಗಳು ಹಾಗೂ ಪರಿಹಾರ ಕುರಿತು ಚಿಂತಕರು ಹಾಗೂ ಹಿರಿಯ ಪತ್ರಕರ್ತರಾದ ಮೋಹನ್ ನಾಗಮ್ಮನವರ್, ಗಿರಿಜನ ಅಭಿವೃದ್ಧಿ ಮತ್ತು ಮಾಧ್ಯಮ ಕುರಿತು ದೀನಬಂಧು ಗೌರವ ಕಾರ್ಯದರ್ಶಿ ಜಿ.ಎಸ್. ಜಯದೇವ ವಿಷಯ ಮಂಡಿಸುವರು. ಫೆಬ್ರವರಿ 17ರಂದು ಬೆಳಿಗ್ಗೆ 10 ಗಂಟೆಗೆ ವಿಧಾನ ಪರಿಷತ್ ಸದಸ್ಯರು ಹಾಗೂ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ವರದಿ ನೀಡುವ ತಜ್ಞರ ಸಮಿತಿ ಅಧ್ಯಕ್ಷರೂ ಆದ ವಿ.ಎಸ್. ಉಗ್ರಪ್ಪ ಪ್ರಧಾನ ಭಾಷಣ ಮಾಡುವರು. ಗೋಷ್ಠಿಯಲ್ಲಿ ಹಂಪಿ ವಿಶ್ವವಿದ್ಯಾನಿಲಯದ ಭಾಷ್ಯಂತರ ವಿಭಾಗದ ಪ್ರಾಧ್ಯಾಪಕರಾದ ಡಾ. ಪಿ. ಮಹದೇವಯ್ಯ ಮಾಧ್ಯಮಗಳಲ್ಲಿ ಭಾಷೆ ಬಳಕೆ ಹಾಗೂ ಸರ್ಕಾರದ ಸವಲತ್ತುಗಳು ಹಾಗೂ ಸದ್ಭಳಕೆ ಕುರಿತು ಚಿಂತಕರಾದ ಕ್ಷೀರಸಾಗರ ವಿಷಯ ಮಂಡಿಸುವರು. ಮಧ್ಯಾಹ್ನ 3 ಗಂಟೆಗೆ ಕಾರ್ಯಾಗಾರದ ಸಮಾರೋಪ ಸಮಾರಂಭ ನಡೆಯಲಿದ್ದು ಸಂಸದ ಧ್ರುವನಾರಾಯಣ ಅಧ್ಯಕ್ಷತೆ ವಹಿಸುವರು. ಶಾಸಕ ಸಿ. ಪುಟ್ಟರಂಗಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಎಂ. ಸಿದ್ಧರಾಜು ಉಪಸ್ಥಿತರಿರುವರು. ರಾಯಚೂರು ಈಶಾನ್ಯ ಟೈಮ್ಸ್ ಸಂಪಾದಕರಾದ ಎನ್. ನಾಗರಾಜ ಸಮಾರೋಪ ಭಾಷಣ ಮಾಡುವರು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ. ----------------------------------------------------- ಪ.ಜಾ. ಪ.ಪಂ ಪತ್ರಕರ್ತರಿಗೆ ಕಾರ್ಯಾಗಾರ : ನೋಂದಣಿಗೆ ಮನವಿ ಚಾಮರಾಜನಗರ, ಫೆ. 15 (ಕರ್ನಾಟಕ ವಾರ್ತೆ):- ಕರ್ನಾಟಕ ಮಾಧ್ಯಮ ಅಕಾಡೆಮಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪತ್ರಕರ್ತರಿಗೆ ಫೆಬ್ರವರಿ 16 ಹಾಗೂ 17ರಂದು 2 ದಿನಗಳ ಕಾರ್ಯಾಗಾರವನ್ನು ನಗರದ ನಿಜಗುಣ ರೆಸಾರ್ಟ್‍ನಲ್ಲಿ ಆಯೋಜಿಸಿದೆ. ಫೆಬ್ರವರಿ 16ರಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಾಗಾರ ಆರಂಭವಾಗಲಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಪತ್ರಿಕಾ ಸಂಪಾದಕರು ಹಾಗೂ ಪತ್ರಕರ್ತರಿಗೆ ಏರ್ಪಡಿಸಿರುವ ಎರಡು ದಿನದ ಕಾರ್ಯಾಗಾರಕ್ಕೆ ಆಗಮಿಸುವವರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಮಾನ್ಯತೆ ಕಾರ್ಡ್ ಹೊಂದಿರದ ಪತ್ರಕರ್ತರಿಗೆ ಪ್ರಯಾಣ ವೆಚ್ಚ ಭರಿಸಲಾಗುತ್ತದೆ. ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಚಿಸುವವರು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿಯೇ ನೊಂದಾಯಿಸಿಕೊಳ್ಳಬಹುದೆಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿಗಳಾದ ಎಸ್. ಶಂಕರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------------------------------------------------- ತಂಬಾಕು ಸೇವೆನೆ ನಿಷೇಧ ಫಲಕ ಕಡ್ಡಾಯವಾಗಿ ಅಳವಡಿಸಿ : ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಭಾರತಿ ಸೂಚನೆ ಚಾಮರಾಜನಗರ ಫೆ.14 (ಕರ್ನಾಟಕ ವಾರ್ತೆ) : ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವೆನೆ ನಿಷೇಧ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಲು ನಗರಸಭೆ, ಪುರಸಭೆ ಇನ್ನಿತರ ಸ್ಥಳೀಯ ಸಂಸ್ಥೆಗಳು ಅಗತ್ಯ ಕ್ರಮ ವಹಿಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಭಾರತಿ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಷೇಧ ಕೋಶದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಂಬಾಕು ಸೇವೆನೆಯಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳನ್ನು ತಿಳಿಸುವ ಅಂಶಗಳನ್ನು ಒಳಗೊಂಡಂತೆ ಚಲನಚಿತ್ರ ಮಂದಿರ, ಹೋಟೆಲ್, ಬಾರ್ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವೆನೆ ನಿಷೇಧಿಸಿರುವ ಬಗ್ಗೆ ಪ್ರಧಾನವಾಗಿ ಫಲಕಗಳನ್ನು ಹಾಕಬೇಕು. ಆನೇಕ ಕಡೆ ತಂಬಾಕು ನಿಷೇಧ ಕುರಿತ ಫಲಕಗಳು ಅಳವಡಿಸದೇ ಇರುವ ಬಗ್ಗೆ ಗಮನಕ್ಕೆ ಬಂದಿದೆ ಎಂದು ಭಾರತಿ ತಿಳಿಸಿದರು. ತಂಬಾಕು ಉತ್ಪನ್ನ ಮಾರಾಟ ಮಾಡುವ ಮಾಲೀಕರಿಗೆ ಕೋಟ್ಪಾ ಕಾಯ್ದೆ 2003ರ ಅನುಸಾರವಾಗಿ ಟ್ರೇಡ್ ಲೈಸೆನ್ಸ್ ರದ್ದುಪಡಿಸುವ ಹಾಗೂ ಸಂಬಂಧಪಟ್ಟ ಇಲಾಖೆಗಳಿಂದ ವ್ಯಾಪಾರ ಮಾಡಲು ಪರವಾನಗಿ ನೀಡುವ ನಿಬಂಧನೆಗಳಲ್ಲಿ ಕಾಯ್ದೆ ಅಂಶಗಳನ್ನು ಸ್ಪಷ್ಟವಾಗಿ ತಿಳಿಸಬೇಕು. ಜಾರಿಯಲ್ಲಿರುವ ಕಾಯ್ದೆಯು ಪರಿಣಾಮಕಾರಿಯಾಗಿ ಜಾರಿ ಮಾಡಲು ಅವಶ್ಯಕ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗಳನ್ನು ಕಾಲಕಾಲಕ್ಕೆ ಆಯೋಜಿಸಿ ವರದಿ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗುವಂತೆ ಅವರು ತಿಳಿಸಿದರು. ನಗರಸಭೆ, ಪುರಸಭೆ ಇನ್ನಿತರ ಸ್ಥಳೀಯ ಸಂಸ್ಥೆಗಳು ಪೊಲೀಸ್ ಇಲಾಖೆ ಸಹಕಾರದೊಂದಿಗೆ ಕಾಯ್ದೆ ಅನುಸಾರ ಹೇಗೆ ಪಾಲನೆಯಾಗುತ್ತಿದೆ ಎಂಬ ಬಗ್ಗೆ ಪರಿಶೀಲಿಸಿ ದಾಳಿ ಕಾರ್ಯವನ್ನು ನಡೆಸಬೇಕು. ಕೋಟ್ಪಾ ಕಾಯ್ದೆ ಬಗ್ಗೆ ವಿವಿಧ ಇಲಾಖೆಗಳು ನಡೆಸುವ ಸಭೆಯಲ್ಲಿಯೂ ಚರ್ಚಿಸಬೇಕು. ಪ್ರತಿ ತಿಂಗಳಲ್ಲಿ ಒಂದು ದಿನ ತಂಬಾಕು ವಿರೋಧಿ ದಿನವನ್ನು ಶಾಲಾ-ಕಾಲೇಜುಗಳಲ್ಲಿ ಆಯೋಜಿಸಲು ಕ್ರಮವಹಿಸಬೇಕೆಂದು ಭಾರತಿ ಅವರು ತಿಳಿಸಿದರು. ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕರಾದ ಡಾ.ಹನುಮಂತರಾಯಪ್ಪ ಮಾತನಾಡಿ ಶಿಕ್ಷಣ ಸಂಸ್ಥೆಗಳು ಸಹ ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಕೈಜೋಡಿಸಬೇಕಿದೆ. ಶೈಕ್ಷಣಿಕ ಸಂಸ್ಥೆಯ ನೂರು ಅಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಲಾಬಿ ಚಳವಳಿ ಮತ್ತು ಕೆಂಪು ಬಣ್ಣದ ಗೆರೆಯನ್ನು ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ತಂಬಾಕು ಸೇವೆನೆ ನಿಷೇಧದ ಬಗ್ಗೆ ಅರಿವು ಮೂಡಿಸಬಹುದು, ಅಲ್ಲದೇ ಈ ಪ್ರದೇಶಗಳ ವ್ಯಾಪ್ತಿಯಲ್ಲಿ ತಂಬಾಕು ಮುಕ್ತ ವಾತಾವರಣವನ್ನು ನಿರ್ಮಾಣ ಮಾಡಬಹುದು ಎಂದು ಸಲಹೆ ಮಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಕೆ.ಹೆಚ್.ಪ್ರಸಾದ್, ಡಿವೈಎಸ್ಪಿ ಎಸ್.ಇ.ಗಂಗಾಧರಸ್ವಾಮಿ, ತಹಶೀಲ್ದಾರ್ ಚಂದ್ರಮೌಳಿ, ಜಿಲ್ಲಾ ತಂಬಾಕು ನೋಡಲ್ ಅಧಿಕಾರಿ ಡಾ|| ನಾಗರಾಜು, ನಗರಸಭೆ, ಪುರಸಭೆ ಇತರೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. *************************

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು