Monday, 13 February 2017

ಹನೂರಿನಲ್ಲಿ 15ಕ್ಕೆ ಬೃಹತ್ ಜನಾಂದೋಲನ,ನಮ್ಮ ಬೆಟ್ಟ ನಮಗೆ ಬಿಡಿ:

ಗೋ ಪರಿವಾರ- ಮಲೆಮಹದೇಶ್ವರ ಬೆಟ್ಟ ವತಿಯಿಂದ ದಿನಾಂಕ 13-02-2017ರಂದು ಚಾಮರಾಜನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಹೇಳಿಕೆ ನಮ್ಮ ಬೆಟ್ಟ ನಮಗೆ ಬಿಡಿ: ಹನೂರಿನಲ್ಲಿ 15ಕ್ಕೆ ಬೃಹತ್ ಜನಾಂದೋಲನ ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟ ಪ್ರದೇಶವನ್ನು ರಾಷ್ಟ್ರೀಯ ವನ್ಯಧಾಮವಾಗಿ ಘೋಷಿಸಿದ ಬಳಿಕ, ಬೆಟ್ಟದಲ್ಲಿ ಹಸುಗಳನ್ನು ಮೇಯಿಸಲು ಅರಣ್ಯ ಇಲಾಖೆ ಅವಕಾಶ ನೀಡದಿರುವುದರಿಂದ ಬೆಟ್ಟದ ತಪ್ಪಲಿನ 160ಕ್ಕೂ ಹೆಚ್ಚು ಹಳ್ಳಿಗಳ ಲಕ್ಷಾಂತರ ಹಸುಗಳ ಜೀವಕ್ಕೆ ಅಪಾಯ ಎದುರಾಗಿದೆ. ಆದ್ದರಿಂದ ಬೆಟ್ಟದಲ್ಲಿ ಹಸುಗಳನ್ನು ಮೇಯಿಸಲು ಅವಕಾಶ ನೀಡಬೇಕು ಎಂಬ ಹಕ್ಕೊತ್ತಾಯ ಮಂಡಿಸುವ ಸಲುವಾಗಿ ಹನೂರಿನ ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ಈ ತಿಂಗಳ 15ರಂದು ಬೆಳಿಗ್ಗೆ 10ಕ್ಕೆ ಬೃಹತ್ ಜನಾಂದೋಲನ ಆಯೋಜಿಸಲಾಗಿದೆ. ತಲೆತಲಾಂತರದಿಂದ ಬೆಟ್ಟದಲ್ಲಿ ದೊಡ್ಡಿಗಳನ್ನು ನಿರ್ಮಿಸಿಕೊಂಡು ಜಾನುವಾರುಗಳನ್ನು ಮೇಯಿಸುತ್ತಾ ಬಂದ 15 ಸಾವಿರಕ್ಕೂ ಹೆಚ್ಚು ಗೋಪಾಲಕರು ಈ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳುವರು. ಬೇಸಿಗೆ ಆರಂಭದಲ್ಲೇ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತೀವ್ರವಾಗುತ್ತಿದ್ದು, ಮೇವು ಹಾಗೂ ನೀರಿನ ಕೊರತೆ ವ್ಯಾಪಕವಾಗುತ್ತಿದೆ. ಜಿಲ್ಲೆಯ ಮಂಗಲ, ಗುಂಡ್ಲುಪೇಟೆ ಹಾಗೂ ರಾಮಾಪುರದಲ್ಲಿ ಸರ್ಕಾರ ಗೋಶಾಲೆಗಳನ್ನು ತೆರೆದಿದ್ದರೂ, ಜಾನುವಾರುಗಳು ಹಸಿವಿನಿಂದ ಸಾಯುತ್ತಿರುವ ಬಗ್ಗೆ ವರದಿಗಳು ಬರುತ್ತಲೇ ಇವೆ. ನಮ್ಮ ಕಾರ್ಯಕರ್ತರು ಕಳೆದ ಹತ್ತು ದಿನಗಳಿಂದ ಹಳ್ಳಿಹಳ್ಳಿಗಳಿಗೆ ಭೇಟಿ ನೀಡಿದಾಗ ಈ ಕರಾಳ ಚಿತ್ರಣ ಅನಾವರಣಗೊಂಡಿದೆ. ಕಳೆದ 10 ದಿನಗಳಲ್ಲೇ ಹಸಿವಿನಿಂದಾಗಿ 15ಕ್ಕೂ ಹೆಚ್ಚು ಜಾನುವಾರುಗಳು ಬೆಟ್ಟದ ತಪ್ಪಲ ಗ್ರಾಮಗಳಲ್ಲೇ ಸತ್ತಿದ್ದು, ಬೇಸಿಗೆ ಹೆಚ್ಚಿದಂತೆಲ್ಲ ಅಪಾಯ ಮತ್ತಷ್ಟು ಹೆಚ್ಚುವ ಭೀತಿ ಇದೆ. ಆದ್ದರಿಂದ ಬೆಟ್ಟದಲ್ಲಿ ದೊಡ್ಡಿಗಳನ್ನು ನಿರ್ಮಿಸಿಕೊಳ್ಳಲು ನಿರ್ಮಿಸಲು ಅವಕಾಶ ಮಾಡಿಕೊಟ್ಟರೆ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ ಎನ್ನುವುದು ಗೋಪಾಲಕರ ಒಕ್ಕೊರಲ ಅಭಿಪ್ರಾಯ. ಆದ್ದರಿಂದ ಹಿಂದೆ ಇದ್ದ ರೀತಿಯಲ್ಲೇ ಬೆಟ್ಟದಲ್ಲಿ ಹಸುಗಳನ್ನು ಮೇಯಲು ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುವುದು ಈ ಸಮಾವೇಶದ ಉದ್ದೇಶ. ಗೋವುಗಳನ್ನು ಮೇಯಿಸಲು ಬೆಟ್ಟಕ್ಕೆ ಒಯ್ಯುವ ಗೋಪಾಲಕರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಬಗ್ಗೆಯೂ ರೈತರು ದೂರಿದ್ದಾರೆ. ಆದ್ದರಿಂದ ತಕ್ಷಣ ಅರಣ್ಯ ಇಲಾಖೆ, ಗೋಪಾಲಕರ ಸಂಕಷ್ಟಕ್ಕೆ ಸ್ಪಂದಿಸಿ ಗೋವುಗಳನ್ನು ಬೆಟ್ಟದಲ್ಲಿ ಮೇಯಿಸಲು ಅವಕಾಶ ಮಾಡಿಕೊಡಬೇಕು. ಗೋಪಾಲಕರು ಹೇಳುವಂತೆ, ಬೆಟ್ಟದ ಬದಿಯಲ್ಲಿ ಮೇವು ಸಾಕಷ್ಟು ಪ್ರಮಾಣದಲ್ಲಿ ಇಲ್ಲ. ಆದರೆ ಬೆಟ್ಟದಲ್ಲಿ 15-20 ಕಿಲೋಮೀಟರ್ ಒಳಕ್ಕೆ ಹೋದರೆ, ಸಾಕಷ್ಟು ನೀರು ಮತ್ತು ಮೇವು ಇದೆ. ಆದರೆ ದೊಡ್ಡಿಗಳನ್ನು ಅರಣ್ಯದಲ್ಲಿ ನಿರ್ಮಿಸಿಕೊಂಡರೆ, ಗೋಪಾಲಕರು ಅರಣ್ಯಕ್ಕೆ ಬೆಂಕಿ ಇಡುತ್ತಾರೆ; ಗಂಧದ ಮರಗಳನ್ನು ಕಡಿಯುತ್ತಾರೆ ಎಂಬಿತ್ಯಾದಿ ಸುಳ್ಳು ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಿಸುತ್ತಿದ್ದಾರೆ. ಗೋಪಾಲಕರ ಮೇಲೆ ದೌರ್ಜನ್ಯ ಎಸಗುವ ಪ್ರಕರಣಗಳೂ ಬೆಳಕಿಗೆ ಬಂದಿವೆ. ಆದ್ದರಿಂದ ತಕ್ಷಣ ಇಂಥ ದೌರ್ಜನ್ಯ ನಿಲ್ಲಿಸಬೇಕು ಎಂದು ಆಗ್ರಹಿಸುತ್ತೇವೆ. ಬೆಟ್ಟಕ್ಕೆ ಜಾನುವಾರು ಒಯ್ದರೆ ಕಾಡುಪ್ರಾಣಿಗಳಿಗೆ ಸಾಂಕ್ರಾಮಿಕ ರೋಗ ಬರುತ್ತವೆ ಎಂಬ ವಿತಂಡವಾದವನ್ನೂ ಅರಣ್ಯ ಇಲಾಖೆ ಮುಂದಿಡುತ್ತಿದೆ. ಶತಮಾನಗಳಿಂದ ಕಾಡುಗಳಲ್ಲಿ ಜಾನುವಾರುಗಳನ್ನು ಮೇಯಿಸುತ್ತಾ ಬಂದಿದ್ದು, ಆಗ ಕಾಡುಪ್ರಾಣಿಗಳಿಗೆ ಹಾನಿಯಾಗುತ್ತಿರಲಿಲ್ಲವೇ? ಹಿಂದೆ ಬೇಲಿ ಅಥವಾ ಕಾವಲು ಇಲ್ಲದ ಸಂದರ್ಭದಲ್ಲೂ ಈ ಭಾಗದ ಜನರೇ ಬೆಟ್ಟ ಹಾಗೂ ಕಾಡನ್ನು ಜೋಪಾನವಾಗಿ ಕಾಪಾಡುತ್ತಾ ಬಂದಿದ್ದಾರೆ. ಈಗ ಏಕಾಏಕಿ ರೈತರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ಎಷ್ಟು ಸರಿ? ಸರ್ಕಾರದ ಈ ಮೊಂಡು ನೀತಿಯಿಂದಾಗಿ ಶತಮಾನ ಕಾಲದಿಂದ ಈ ಭಾಗದಲ್ಲಿ ಕಾಪಾಡಿಕೊಂಡು ಬಂದ ಅಪರೂಪದ ಬರಗೂರು ತಳಿ, ಆಲಂಬಾಡಿ ಮತ್ತಿತರ ದೇಶಿ ತಳಿಗಳು ವಿನಾಶದ ಅಂಚಿಗೆ ಬಂದಿವೆ. ಕೊಳ್ಳೆಗಾಲ ತಾಲೂಕಿನಲ್ಲೇ 57187 ದೇಸಿ ಗೋವುಗಳು ಹಾಗೂ 38 ಸಾವಿರ ಮಿಶ್ರ ತಳಿ ಹಸುಗಳಿಗೆ ನೀರು- ಮೇವಿನ ಕೊರತೆ ಇದ್ದು, ಹಸಿವಿನಿಂದ ಜಾನುವಾರುಗಳು ಸಾಯುವ ಸ್ಥಿತಿ ಎದುರಾಗಿದೆ. ಸಮಸ್ಯೆ ಇಷ್ಟೊಂದು ಭೀರಕವಾಗಿದ್ದರೂ, ಸರ್ಕಾರ ಈ ಬಗ್ಗೆ ಕಣ್ಣು ತೆರೆದಿಲ್ಲ. ಆಡಳಿತ ವರ್ಗದ ಕಣ್ಣು ತೆರೆಸಿ, ಸಮಸ್ಯೆಯನ್ನು ಅವರಿಗೆ ಮನವರಿಕೆ ಮಾಡಿಕೊಡುವುದು ಈ ಜನಾಂದೋಲನದ ಮುಖ್ಯ ಉದ್ದೇಶ. ಇದು ರಾಜಕೀಯ ರಹಿತ ಸಮಾವೇಶವಾಗಿದ್ದು, ಸಮಾಜದ ವಿವಿಧ ಸಂಘಟನೆಗಳು, ರೈತ ಸಂಘಟನೆಗಳು, ಪಕ್ಷಗಳು ಬೆಂಬಲ ಘೋಷಿಸಿವೆ. ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಸಮಾವೇಶ ಆಯೋಜಿಸಲಾಗಿದ್ದು, ಜಿಲ್ಲೆಯ 22 ಸ್ವಾಮೀಜಿಯವರು ನೇತೃತ್ವ ವಹಿಸುವರು. ಸಮಾವೇಶಕ್ಕೆ ಮುನ್ನ ಹನೂರು ಎಪಿಎಂಸಿ ಆವರಣದಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ. ರೈತರು ತಮ್ಮ ಹಕ್ಕೊತ್ತಾಯವನ್ನು ಮಂಡಿಸಲು 15 ಸಾವಿರಕ್ಕೂ ಅಧಿಕ ಮಂದಿ ಸಹಿ ಮಾಡಿದ ಮನವಿ ಪತ್ರವನ್ನು ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ಪ್ರತಿ ಹಳ್ಳಿಯಿಂದ ಸಹಿ ಮಾಡಿದ ಮನವಿಪತ್ರವನ್ನು ಎತ್ತಿನಗಾಡಿಯಲ್ಲಿ ಮೆರವಣಿಗೆಯಲ್ಲಿ ಸಮಾವೇಶ ಸ್ಥಳಕ್ಕೆ ತರಲಾಗುವುದು. ಹಿನ್ನೆಲೆ ಜಗದ್ಗುರುಶಂಕರಾಚಾರ್ಯ ಮಹಾಸಂಸ್ಥಾನಮ್-ಶ್ರೀ ಸಂಸ್ಥಾನಗೋಕರ್ಣಶ್ರೀರಾಮಚಂದ್ರಾಪುರಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಸಂನ್ಯಾಸ ಸ್ವೀಕಾರದ ದಿನದಂದೇ ಮಾಡಿದ ಘೋಷಣೆಗಳಲ್ಲಿ ದೇಸೀ ಗೋಸಂತತಿಯ ರಕ್ಷಣೆಯೂ ಒಂದಾಗಿದೆ. ಗೋರಕ್ಷಣೆಯ ಮೊದಲ ಹೆಜ್ಜೆಯಾಗಿ 1998ರ ಏಪ್ರಿಲ್28ರಂದು `ಕಾಮದುಘಾ' ಎಂಬ ಗೋ ರಕ್ಷಣೆಯ ಮಹಾಸಂಕಲ್ಪವನ್ನು ಸ್ವೀಕರಿಸಿದ ಸ್ವಾಮೀಜಿ ಯೋಜನೆಗೆ ಭದ್ರ ಬುನಾದಿ ಹಾಕಿದರು. ಭಾರತದ ಪುಣ್ಯಧರಿತ್ರಿಯಲ್ಲಿ 100ಕ್ಕೂ ಅಧಿಕ ಗೋ ಸಂತತಿ ಇದ್ದು, ನಾಶವಾಗುತ್ತಾ ಬಂದು ಸದ್ಯ 30-35 ರಷ್ಟು ತಳಿಗಳು ಮಾತ್ರ ಉಳಿದುಕೊಂಡಿದೆ. ಸಂತನಂತೆ ಬದುಕಿದ ಮಹಾ ನಂದಿಯ ಹೆಸರನ್ನು ಅಜರಾಮರಗೊಳಿಸುವ ನಿಟ್ಟಿನಲ್ಲಿ ಶ್ರೀ ರಾಮಚಂದ್ರಾಪುರದ ಗೋಶಾಲೆಗೆ ಮಹಾನಂದಿ ಗೋಲೋಕ ಎಂದು ಪುನರ್ನಾಮಕರಣ ಮಾಡಲಾಗಿದೆ. ಮಹಾನಂದಿ ಬಾಳಿ ಬೆಳಗಿದ ಗೋಲೋಕ ಗೋಸಂರಕ್ಷಣೆಯ ದಿವ್ಯತಾಣವಾಗುವ ಜತೆಗೆ ಭಾರತೀಯವಾದ 30 ತಳಿಗಳ 300ಕ್ಕೂ ಅಧಿಕ ಗೋವುಗಳನ್ನು ಸಂರಕ್ಷಿಸಿ, ಸಂವರ್ಧಿಸಲಾಗುತ್ತಿದೆ. ಗೋಮಯ ಗೋಮೂತ್ರಗಳಿಂದ ಹಲವಾರು ದಿವ್ಯೌಷಧಿಗಳನ್ನು ಸಿದ್ಧಪಡಿಸಲಾಗುತ್ತಿದೆ. ದೇಸಿ ಗೋತಳಿಯನ್ನು ಸಂರಕ್ಷಿಸಿ, ಸಂವರ್ಧನೆ ಮಾಡುವ ನಿಟ್ಟಿನಲ್ಲಿ ಮಠ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಸದ್ಯ ಸಪ್ತ ರಾಜ್ಯಗಳಲ್ಲಿ ಮಂಗಲ ಪಾಂಡೆಯ ಪ್ರೇರಣೆಯಲ್ಲಿ ಆಂದೋಲವನ್ನು ಕೈಗೊಂಡು ಗೋಹತ್ಯೆಯನ್ನು ನಿಷೇಧಿಸಬೇಕೆಂದು ಸಹಸ್ರ ಸಂತರ ಸಮ್ಮುಖದಲ್ಲಿ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು. ಈ ರಥ ಯಾತ್ರೆ ಚಾಮರಾಜನಗರ ಭಾಗದಲ್ಲಿ ಸಂಚರಿಸುವ ಸಮಯ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಅರಣ್ಯ ಇಲಾಖೆ ಗುಡ್ಡ ಬೇಲಿ ನಿರ್ಮಿಸಿ ಗೋವುಗಳಿಗೆ ಮೇವಿಲ್ಲದೆ ಸಂಕಷ್ಟ ಅನುಭವಿಸುತ್ತದೆ ಎಂಬ ವಿಚಾರ ರೈತರಿಂದ ಕೇಳಿ ಬಂದಿತ್ತು. ಈ ನಿಟ್ಟಿನಲ್ಲಿ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳು ಅಸಂಘಟಿತ ಸಮುದಾಯವನ್ನು 'ನಮ್ಮ ಬೆಟ್ಟ ನಮಗೆ ಬಿಡಿ' ಆಂದೋಲನದ ಮೂಲಕ ಜತೆಯಾಗಿಸುವ ಕಾರ್ಯಕ್ರಮವನ್ನು ಫೆ.15ಕ್ಕೆ ಹನೂರು ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ಹಾಕಿಕೊಂಡಿದ್ದಾರೆ. ಗೋಪಾಲಕರಿಗೆ ಬೆಟ್ಟದಲ್ಲಿ ದೊಡ್ಡಿ ನಿರ್ಮಿಸಿ ನಾಟಿ ತಳಿಗಳನ್ನು ಮೇಯಿಸುವ ಮೂಲಕ ತಳಿ ಉಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಹಕರಿಸಬೇಕು ಎಂಬ ಆಗ್ರಹ ಈ ಆಂದೋಲನದ ಮೂಲಕ ಸರ್ಕಾರಕ್ಕೆ ತಲುಪಿಸುವ ಪ್ರಯತ್ನ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ರಾಜ್ಯ ಗೋಪರಿವಾರ ಮುಖ್ಯಸ್ಥ ಮಹೇಶ್ ಚಟ್ನಳ್ಳಿ, ಚಾಮರಾಜನಗರ ಜಿಲ್ಲಾ ಗೋಪರಿವಾರ ಸಂಪರ್ಕಾಧಿಕಾರಿ ಜಿ. ಟಿ. ದಿವಾಕರ್, ಚಾಮರಾಜನಗರ ಜಿಲ್ಲಾ ಗೋಪರಿವಾರ ಅಧ್ಯಕ್ಷ ಜಿ ಎಂ ಹೆಗಡೆ, ಚಾಮರಾಜನಗರ ಜಿಲ್ಲಾ ರೈತಸಂಘದ ಸಂಚಾಲಕ ಹೊನ್ನೂರು ಪ್ರಕಾಶ್ ಹಾಜರಿದ್ದರು. ಡಾ. ವೈ. ವಿ. ಕೃಷ್ಣಮೂರ್ತಿ `ಕಾಮದುಘಾ' ಯೋಜನೆ ಕಾರ್ಯದರ್ಶಿ ಶ್ರೀರಾಮಚಂದ್ರಾಪುರಮಠ || ವಂದೇಗೋಮಾತರಮ್|| ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ - ಶ್ರೀಸಂಸ್ಥಾನಗೋಕರ್ಣ ಶ್ರೀರಾಮಚಂದ್ರಾಪುರಮಠ ಮಲೆಮಹದೇಶ್ವರ ಗೋಪರಿವಾರ ಎ 801, ಮಾರುತಿ ಟೆಂಟ್ ಎದುರಿನ ರಸ್ತೆ, ಹನೂರು, ಕೊಳ್ಳೆಗಾಲ ದೂರವಾಣಿ : 94861602150

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು