Monday, 27 February 2017

26-02-2017 ಚಾಮರಾಜನಗರ ಪ್ರಮುಖ ಸುದ್ದಿಗಳು ( ಹೆಚ್ಚುವರಿ ಶುಲ್ಕ ಪಡೆಯುವ ಶಾಲೆಗಳ ವಿರುದ್ಧ ಗಂಭೀರ ಕ್ರಮ : ಜಿಲ್ಲಾಧಿಕಾರಿ ಬಿ.ರಾಮು ಎಚ್ಚರಿಕೆ,ಅಪ್ತಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಕಠಿಣ ಸಜೆ)

//////////////////////////////////////////////////////////////////////////////////////////////////////////// ಹೆಚ್ಚುವರಿ ಶುಲ್ಕ ಪಡೆಯುವ ಶಾಲೆಗಳ ವಿರುದ್ಧ ಗಂಭೀರ ಕ್ರಮ : ಜಿಲ್ಲಾಧಿಕಾರಿ ಬಿ.ರಾಮು ಎಚ್ಚರಿಕೆ ಚಾಮರಾಜನಗರ, ಫೆ. 27 - ಜಿಲ್ಲೆಯ ಯಾವುದೇ ಖಾಸಗಿ ಅನುದಾನರಹಿತ ಅನುದಾನಿತ ಶಾಲೆಗಳು ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚುವರಿಯಾಗಿ ಪೋಷಕರಿಂದ ಶುಲ್ಕ ಪಡೆದಲ್ಲಿ ಅಂತಹ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಬಿ. ರಾಮು ಎಚ್ಚರಿಕೆ ನೀಡಿದರು. ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸೇವಾ ಮನೋಭಾವನೆಯಿಂದ ಶಾಲೆಗಳನ್ನು ತೆರೆಯಲಾಗಿದೆ. ಆ ಉದ್ದೇಶವನ್ನೇ ಗಮನದಲ್ಲಿಟ್ಟುಕೊಂಡು ಶಾಲೆಗಳನ್ನು ನಡೆಸಬೇಕು. ಸರ್ಕಾರ ನಿಗದಿಮಾಡಿರುವ ಶುಲ್ಕಕ್ಮಿಂತ ಒಂದು ಪೈಸೆ ಸಹ ಹೆಚ್ಚುವರಿಯಾಗಿ ಪಡೆಯುವಂತಿಲ್ಲ. ಹೆಚ್ಚುವರಿ ಶುಲ್ಕ ಪಡೆದಿರುವ ದಾಖಲೆಗಳೊಂದಿಗೆ ದೂರು ಬಂದಲ್ಲಿ ಅಂತಹ ಶಾಲೆಗಳ ವಿರುದ್ಧ ಗಂಭೀರವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ರಾಮು ಅವರು ಕಟ್ಟುನಿಟ್ಟಾಗಿ ತಿಳಿಸಿದರು. ಶಾಲೆಗಳು ಬೇರೆ ಯಾವುದೇ ಕಾರಣ ಇಟ್ಟುಕೊಂಡು ಪೋಷಕರಿಂದ ಹಣ ವಸೂಲಿ ಮಾಡುವಂತಿಲ್ಲ. ಅಭಿವೃದ್ಧಿ, ಕಟ್ಟಡ ಶುಲ್ಕ ಇನ್ನಿತರ ಎಂದು ಕಾರಣ ಹೇಳಿ ಡೊನೇಷನ್, ವಂತಿಕೆ ಪಡೆಯುವಂತಿಲ್ಲ. ಹೀಗೆ ಮಾಡಿದರೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ. ಹೀಗಾಗಿ ಶಾಲಾ ಮಂಡಳಿ ಪೋಷಕರಿಂದ ಯಾವುದೇ ಕಾರಣ ನೀಡಿ ನಿಯಮ ಉಲ್ಲಂಘಿಸಿ ಶುಲ್ಕ ಪಡೆಯುವುದು ಕಂಡುಬಂದರೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಶಾಲಾ ಮಂಡಳಿಗಳು ಪ್ರವೇಶ ಸಂಬಂಧ ಅನುಸರಿಸಬೇಕಿರುವ ನಿಯಮ ಮಾರ್ಗಸೂಚಿಗಳನ್ನು ತಿಳಿಸಲಾಗಿದೆ. ಈ ಪ್ರಕಾರವೇ ಪ್ರವೇಶ ಪ್ರಕ್ರಿಯೆ ನಡೆಸಿ ನಿಯಮಬದ್ಧವಾಗಿ ನಿಗದಿ ಮಾಡಲಾಗಿರುವ ಶುಲ್ಕವನ್ನು ಪಡೆಯಲು ಮಾತ್ರ ಅವಕಾಶವಿದೆ. ಏನಾದರೂ ಲೋಪ ಎಸಗಿದರೆ ಆಯಾ ಶಾಲೆಯ ಮುಖ್ಯ ಶಿಕ್ಷಕರು, ಶಾಲಾ ಮಂಡಳಿಯ ಮುಖ್ಯಸ್ಥರು ಹೊಣೆಗಾರರಾಗುತ್ತಾರೆ. ಇವರ ವಿರುದ್ದ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ಶಿಸ್ತು ಕ್ರಮ ಜರುಗಿಸಲಿದೆ ಎಂದರು. ಕಳೆದ ಬಾರಿ ನಡೆದ ಸಭೆಯಲ್ಲಿ ಜಿಲ್ಲೆಯ ಕೆಲ ಶಾಲೆಗಳು ಹೆಚ್ಚುವರಿಯಾಗಿ ಶುಲ್ಕ ಪಡೆದಿರುವ ಬಗ್ಗೆ ಮುಖಂಡರು ಪ್ರಸ್ತಾಪ ಮಾಡಿದ್ದರು. ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಶಿಕ್ಷಣ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿತ್ತು. ಹೆಚ್ಚುವರಿ ಶುಲ್ಕ ಪಡೆದಿರುವ ಶಾಲೆಗಳು ಈ ಶೈಕ್ಷಣಿಕ ಸಾಲಿನ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶುಲ್ಕವನ್ನು ಹಿಂದಿರುಗಿಸಿ ಪ್ರಸಕ್ತ ಸಾಲಿನ ನಿಗದಿತ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಸೂಚಿಸಲಾಗುವುದೆಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮಾತನಾಡಿ ಕಾನೂನಾತ್ಮಕವಾಗಿ ಪೋಷಕರು ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಎಲ್ಲಾ ರೀತಿಯ ಅವಕಾಶಗಳಿವೆ. ಆದರೆ ನಿಗದಿಮಾಡಿದ್ದಕ್ಕಿಂತ ಹೆಚ್ಚುವರಿ ಶುಲ್ಕ ಪಡೆಯಲು ಶಿಕ್ಷಣ ಸಂಸ್ಥೆಗಳಿಗೆ ಅವಕಾಶವಿಲ್ಲ. ಕಳೆದ ಬಾರಿ ಸಭೆಯಲ್ಲಿ ಪ್ರಸ್ತಾಪಿಸಿರುವಂತೆ ಹೆಚ್ಚುವರಿ ಶುಲ್ಕ ಪಡೆದಿರುವ ಶಾಲೆಗಳ ಲೆಕ್ಕಪತ್ರಗಳನ್ನು ಆಡಿಟ್ ಮಾಡಿಸಲಾಗುತ್ತದೆ. ಪ್ರವೇಶ ಪ್ರಕ್ರಿಯೆ ವಂತಿಕೆ ಡೊನೇಷನ್ ಪಡೆಯುವ ಸಂಬಂಧ ದೂರುಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಬಹುದು ಎಂದರು. ಮುಖಂಡರಾದ ಅರಕಲವಾಡಿ ನಾಗೇಂದ್ರ, ಸಿ.ಎಂ. ಕೃಷ್ಣಮೂರ್ತಿ, ನಿಜಧ್ವನಿ ಗೋವಿಂದರಾಜು, ಕೆ.ಎಂ. ನಾಗರಾಜು, ಸಿ.ಕೆ. ಮಂಜುನಾಥ್ ಸೇರಿದಂತೆ ಇನ್ನಿತರ ಮುಖಂಡರು ಕಳೆದ ಸಲ ನಡೆದ ಸಭೆಯಲ್ಲಿನ ನಡಾವಳಿ ಅನುಪಾಲನಾ ವರದಿ ಮಂಡನೆಯಾಗಬೇಕು. ಹಿಂದಿನ ಸಭೆಯಲ್ಲಿ ಮುಂದಿಟ್ಟ ಸಮಸ್ಯೆಗಳಿಗೆ ಯಾವ ಪರಿಹಾರ ದೊರೆತಿದೇ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸಬೇಕೆಂದು ಒತ್ತಾಯಿಸಿದರು. ಅಂಬರೀಶ್, ರಾಜಶೇಖರ್, ಆಲೂರು ನಾಗೇಂದ್ರ, ಯಳಂದೂರಿನ ಶಿವಣ್ಣ, ಇತರೆ ಮುಖಂಡರು ಮಾತನಾಡಿ ಪೋಷಕರು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಮತ್ತು ಶಾಲೆಗಳು ನಿಯಮಬಾಹಿರವಾಗಿ ವಸೂಲಿ ಮಾಡುತ್ತಿರುವ ಶುಲ್ಕ, ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ ನೀಡುತ್ತಿರುವ ಕನಿಷ್ಟ ವೇತನ, ಶಿಕ್ಷಣದ ಗುಣಮಟ್ಟ ಇನ್ನಿತರ ವಿಷಯಗಳನ್ನು ಸಭೆಯ ಗಮನಕ್ಕೆ ತಂದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರಜಿನಾ ಮೆಲಾಕಿ, ಬ್ಲಾಕ್ ಮಟ್ಟದ ಶಿಕ್ಷಣ ಅಧಿಕಾರಿಗಳು, ಖಾಸಗಿ ಶಾಲೆಗಳ ಪ್ರತಿನಿಧಿಗಳು, ಸಂಘಸಂಸ್ಥೆಗಳ ಮುಖಂಡರು ಸಭೆಯಲ್ಲಿ ಹಾಜರಿದ್ದರು. /////////////////////////////////////////////////////////////////// ಅಪ್ತಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಕಠಿಣ ಸಜೆ ಚಾಮರಾಜನಗರ, ಫೆ. 27- ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಅಪರಾಧಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 7 ವರ್ಷಗಳ ಕಠಿಣ ಸಜೆ ಹಾಗೂ 3 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಕೊಳ್ಳೇಗಾಲ ತಾಲೂಕು ರಾಮಾಪುರದ ಪೆದ್ದನಪಾಳ್ಯ ಗ್ರಾಮದ ಪೆರಿಯಸ್ವಾಮಿ ಅಲಿಯಾಸ್ ಸೇಟು ಎಂಬಾತ 2015ರ ಮೇ 30ರಂದು ಅಪ್ತಾಪ್ತ ಬಾಲಕಿಯನ್ನು ತನ್ನ ಮೋಟಾರು ಬೈಕಿನಲ್ಲಿ ಅಪಹರಿಸಿ ತಮಿಳುನಾಡು ರಾಜ್ಯದ ವೆಳ್ಳಂಪಟ್ಟಿ ಗ್ರಾಮದಲ್ಲಿ ಅಕ್ರಮ ಬಂಧನದಲ್ಲಿ ಇಟ್ಟು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಈ ಬಗ್ಗೆ ಪ್ರಕರಣ ವಿಚಾರಣೆ ನಡೆದು ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಭಾರತೀಯ ದಂಡ ಸಂಹಿತೆ ಕಲಂ 366, 343, 376 ಹಾಗೂ ಪೋಕ್ಸೋ ಕಾಯಿದೆಯಡಿ 7 ವರ್ಷಗಳ ಕಠಿಣ ಸಜೆ ಹಾಗೂ 3 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ತೀರ್ಪು ನೀಡಿದ್ದಾರೆ. ನೊಂದ ಬಾಲಕಿಗೆ ಸೂಕ್ತ ಪರಿಹಾರಕ್ಕಾಗಿ ಜಿಲ್ಲಾ ಕಾನೂನು ಸಮಿತಿಗೆ ಪರಿಹಾರ ನೀಡಲು ಜಿಲ್ಲಾ ನ್ಯಾಯಾಧೀಶರು ಶಿಫಾರಸು ಮಾಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ (ಪೋಕ್ಸೋ) ಎಸ್. ನಾಗರಾಜು ಅವರು ವಾದ ಮಂಡಿಸಿದ್ದರು. //////////////////////////////////////////////////////////////////////////////////////////////// ಪಡಿತರ ಚೀಟಿಗಳಿಗೆ ಆಧಾರ್ ಲಿಂಕ್ ಮಾಡಿಸಿ: ಡಿಸಿ ಚಾಮರಾಜನಗರ, ಫೆ. 26 :- ಜಿಲ್ಲೆಯಲ್ಲಿ ಯುಐಡಿ ಆಧಾರ್ ಸಂಖ್ಯೆಯನ್ನು ಪಡಿತರಚೀಟಿಗಳಿಗೆ ಲಿಂಕ್ ಮಾಡಿಲ್ಲದ ಪಡಿತರ ಚೀಟಿದಾರರು ಮತ್ತು ಲಿಂಕ್ ಮಾಡಲು ಕೈಬಿಟ್ಟ ಹೋಗಿರುವ ಪಡಿತರ ಚೀಟಿಗಳ ಕುಟುಂಬದ ಸದಸ್ಯರ ಹೆಸರುಗಳನ್ನು ಕೂಡಲೇ ಪಡಿತರ ಚೀಟಿಗಳಿಗೆ ನೋಂದಣಿ ಮಾಡಿಸುವಂತೆ ಜಿಲ್ಲಾಧಿಕಾರಿ ಬಿ.ರಾಮುರವರು ತಿಳಿಸಿದ್ದಾರೆ. ಯುಐಡಿ ಆಧಾರ್ ಸಂಖ್ಯೆಯನ್ನು ಜೋಡಿಣೆ ಮಾಡಿಲ್ಲದ ಪಡಿತರಚೀಟಿಗಳಿಗೆ ಪಡಿತರ ಪದಾರ್ಥಗಳು ಸ್ಥಗಿತಗೊಳ್ಳುವ ಸಂಭವವಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ಆಹಾರ ನಿರೀಕ್ಷಕರ ಲಾಗಿನ್ ಮೂಲಕ ಪಡಿತರ ಚೀಟಿಗಳಿಗೆ ಯುಐಡಿ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು(ಲಿಂಕ್) ಅವಕಾಶ ಕಲ್ಪಿಸಲಾಗಿದೆ. ಯುಐಡಿ ಆಧಾರ್ ಸಂಖ್ಯೆ ಜೋಡಣೆ ಆಗಿಲ್ಲದ ಪಡಿತರ ಚೀಟಿಗಳಿಗೆ ಲಿಂಕ್ ಮಾಡಲು ಕೈಬಿಟ್ಟುಹೋಗಿರುವ ಪಡಿತರಚೀಟಿಗಳಲ್ಲಿನ ಕುಟುಂಬದ ಸದಸ್ಯರುಗಳಿಗೆ ಫೆಬ್ರವರಿ ಮಾಹೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಅರ್ಹ ಪಡಿತರ ಚೀಟಿದಾರರ ಪಟ್ಟಿಗೆ ಅನುಗುಣವಾಗಿ ಆಹಾರ ಪದಾರ್ಥಗಳನ್ನು ಬಿಡುಗಡೆ ಮಾಡಲಾಗಿದೆ. ಅರ್ಹ ಪಡಿತರ ಚೀಟಿದಾರರು ಪೂರ್ಣ ಪ್ರಮಾಣದ ಪಡಿತರವನ್ನು ನ್ಯಾಯಬೆಲೆ ಅಂಗಡಿಗಳಿಂದ ಪಡೆಯಬೇಕು. ಹೆಚ್ಚಿನ ಮಾಹಿತಿಗೆ ಆಯಾಯ ತಾಲ್ಲೂಕು ಕಚೇರಿ ಅಥವಾ ನಗರದ ಜಿಲ್ಲಾಡಳಿತ ಭವನದಲ್ಲಿರುವ ಆಹಾರ ಇಲಾಖೆಯ ಉಪನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಬಿ.ರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ////////////////////////////////////////////////////////////////////////////// ವಿಳಾಸ, ವಾಸಸ್ಥಳ ಬದಲು ಮಾಹಿತಿ ನೀಡಲು ಸೂಚನೆ : ಚಾಮರಾಜನಗರ, ಫೆ. 26- ಜಿಲ್ಲೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ವಾಸಸ್ಥಳ ಅಥವಾ ವಿಳಾಸ ಬದಲಾವಣೆಯಾಗಿದ್ದಲ್ಲಿ ಆಯಾಯ ವ್ಯಾಪ್ತಿಯ ಕಂದಾಯ ಅಧಿಕಾರಿಗಳಿಗೆ ವಿಳಾಸದ ಮಾಹಿತಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ನೇರ ಹಣದ ಸಂದಾಯದ ಯೋಜನೆಯಡಿ ಫಲಾನುಭವಿಗಳು ಸರ್ಕಾರದ ಸವಲತ್ತುಗಳನ್ನು ಪಡೆಯಲು ಆಧಾರ್ ಸಂಖ್ಯೆ ಬ್ಯಾಂಕ್ ಇಲ್ಲವೆ ಅಂಚೆ ಖಾತೆ ಸಂಖ್ಯೆ ಮತ್ತು ಆಧಾರ್ ಜೋಡಣೆಗೆ ಒಪ್ಪಿಗೆ ನೀಡುವುದು ಕಡ್ಡಾಯವಾಗಿದೆ. ಈ ಹಿನ್ನಲೆಯಲ್ಲಿ ವಾಸಸ್ಥಳ ಬದಲಾವಣೆಯಾಗಿದ್ದಲ್ಲಿ ಅದರ ವಿವರ, ಆಧಾರ್, ಬ್ಯಾಂಕ್, ಅಂಚೆ ಖಾತೆ ವಿವರ ಮೊಬೈಲ್ ಸಂಖ್ಯೆಯನ್ನು ಆಧಾರ್ ಜೋಡಣೆಯ ಒಪ್ಪಿಗೆ ಪತ್ರದೊಂದಿಗೆ ಆಯಾಯ ವ್ಯಾಪ್ತಿಯ ಕಂದಾಯ ಅಧಿಕಾರಿಗಳಿಗೆ ಫೆಬ್ರವರಿ 28ರೊಳಗೆ ಖುದ್ದಾಗಿ ಸಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಿಂಚಣಿ ಸ್ಥಗಿತಗೊಳಿಸಲಾಗುವುದೆಂದು ಜಿಲ್ಲಾಧಿಕಾರಿ ಬಿ.ರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. //////////////////////////////////////////////////////////////////////////////////// ವಸ್ತು ಪ್ರದರ್ಶನ, ಮಾರಾಟ ಮೇಳ: ಮಹಿಳಾ ಉದ್ದಿಮೆದಾರರು ಸ್ವಸಹಾಯ ಗುಂಪಿನ ಸದಸ್ಯರಿಗೆ ಉಚಿತ ಮಳಿಗೆ ಚಾಮರಾಜನಗರ, ಫೆ. 26- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಮಹಿಳಾ ಉದ್ದಿಮೆದಾರರು ಹಾಗೂ ಸ್ವಸಹಾಯ ಗುಂಪಿನ ಸದಸ್ಯರು ಉತ್ಪಾದಿಸುವ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಸಲುವಾಗಿ ್ಥ ಆಯಾಯ ತಾಲ್ಲೂಕು ಮಟ್ಟದಲ್ಲಿ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಿದೆ. ಚಾಮರಾಜನಗರ ತಾಲ್ಲೂಕಿನ ವಸ್ತುಪ್ರದರ್ಶನ ಮಾರಾಟ ಮೇಳವು ಚಾಮರಾಜನಗರದ ವಾಸವಿ ಮಹಲ್‍ನಲ್ಲಿ ಮಾರ್ಚಿ 10ರಿಂದ 12ರವರೆಗೆ ನಡೆಯಲಿದೆ. ಕೊಳ್ಳೇಗಾಲ ತಾಲ್ಲೂಕಿನ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳವು ಕೊಳ್ಳೇಗಾಲ ಪಟ್ಟಣದ ಡಾ.ರಾಜುಕುಮಾರ್ ರಸ್ತೆಯಲ್ಲಿ ಕಲಾಮಂಟಪದಲ್ಲಿ ಮಾರ್ಚಿ 13ರಿಂದ 15ರವರೆಗೆ ನಡೆಯಲಿದೆ. ವಸ್ತುಪ್ರದರ್ಶನದಲ್ಲಿ ಭಾಗವಹಿಸಲು ಇಚ್ಛಿಸುವ ಮಹಿಳಾ ಉದ್ದಿಮೆದಾರರು, ಸ್ವಸಹಾಯ ಗುಂಪಿನ ಸದಸ್ಯರು ಹಾಗೂ ಸಂಘ ಸಂಸ್ಥೆಗಳಿಗೆ ಉಚಿತವಾಗಿ ಮಳಿಗೆಗಳನ್ನು ನೀಡಲಾಗುತ್ತದೆ. ಆಸಕ್ತರು ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಮಾರ್ಚಿ 3ರೊಳಗೆ ನೋಂದಾಯಿಸಿ ಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 08226-222445, ಮೊ. 7338697341 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ. ////////////////////////////////////////////////////////////////////////////////////////////////////// ಫೆ. 28ರಂದುಸಂತೆಮರಹಳ್ಳಿಯಲ್ಲಿ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಜನಸಂಪರ್ಕ ಸಭೆ ಚಾಮರಾಜನಗರ, ಫೆ. 27 - ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದÀ ಯು.ಟಿ. ಖಾದರ್ ಹಾಗೂ ಜಿಲ್ಲಾಧಿಕಾರಿ ಬಿ. ರಾಮು ಅವರ ಸಮ್ಮುಖದಲ್ಲಿ ಹೋಬಳಿ ಮಟ್ಟದ ಜನಸಂಪರ್ಕ ಸಭೆಯು ಫೆಬ್ರವರಿ 28ರಂದು ಬೆಳಿಗ್ಗೆ 10.30 ಗಂಟೆಗೆ ಸಂತೆಮರಹಳ್ಳಿಯ ಗ್ರಾಮ ಪಂಚಾಯಿತಿ ಕಾರ್ಯಾಲಯದ ಬಳಿ ನಡೆಯಲಿದೆ. ನಾಗರಿಕರು ಕುಂದುಕೊರತೆ ಅಹವಾಲು ಸಮಸ್ಯೆಗಳನ್ನು ಸಭೆಯಲ್ಲಿ ಗಮನಕ್ಕೆ ತಂದು ಪರಿಹರಿಸಿಕೊಳ್ಳಬಹುದು. ಸಾರ್ವಜನಿಕರು ಜನಸಂಪರ್ಕ ಸಭೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ಕೋರಿಲಾಗಿದೆ. ////////////////////////////////////////////////////////////// ಫೆ. 28ರಂದು ಸಂತೆಮರಹಳ್ಳಿಯಲ್ಲಿ ಜನಸಂಪರ್ಕ ಸಭೆ ಚಾಮರಾಜನಗರ, ಫೆ. 27 - ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಹೋಬಳಿ ಮಟ್ಟದ ಜನಸಂಪರ್ಕ ಸಭೆಯು ಫೆಬ್ರವರಿ 28ರಂದು ಬೆಳಿಗ್ಗೆ 10.30 ಗಂಟೆಗೆ ಸಂತೆಮರಹಳ್ಳಿಯ ಗ್ರಾಮ ಪಂಚಾಯಿತಿ ಕಾರ್ಯಾಲಯದ ಬಳಿ ನಡೆಯಲಿದೆ. ನಾಗರಿಕರು ಕುಂದುಕೊರತೆ ಅಹವಾಲು ಸಮಸ್ಯೆಗಳನ್ನು ಸಭೆಯಲ್ಲಿ ಗಮನಕ್ಕೆ ತಂದು ಪರಿಹರಿಸಿಕೊಳ್ಳಬಹುದು. ಸಾರ್ವಜನಿಕರು ಜನಸಂಪರ್ಕ ಸಭೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ತಹಸೀಲ್ದಾರ್ ಪುರಂಧರ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ. /////////////////////////////////////////////////////////////////// ಮಾರ್ಚ್1ರಂದು ನಗರದಲ್ಲಿ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಚಾಮರಾಜನಗರ, ಫೆ. 27 :- ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಹಯೋಗದೊಂದಿಗೆ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 1ರಂದು ಬೆಳಿಗ್ಗೆ 11ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆಯಲಿದೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ. ಎಂ. ರಾಮಚಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಧ ಸುಹೇಲ್ ಅಲಿಖಾನ್, ನಗರ ಸಭೆಯ ಅಧ್ಯಕ್ಷರಾದ ಎಸ್.ಎನ್. ರೇಣುಕ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಬ¸ವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರಾದÀ ಪಿ.ಎನ್ ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರಾದ ಜಿ.ಜೆ ಕಾವೇರಿಯಪ್ಪ, ಮೈಸೂರಿನ ಹಿರಿಯ ಪರಿಸರ ಅಧಿಕಾರಿ ಕೆ.ಎಂ. ಲಿಂಗರಾಜು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ.. ////////////////////////////////////////////////////////////////////

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು