Wednesday, 22 February 2017

22-02-2017 ಚಾಮರಾಜನಗರ ಪ್ರಮುಖ ಸುದ್ದಿಗಳು ( ಗಾಂಜಾ ಬೆಳೆದ ವ್ಯಕ್ತಿಗೆ ಶಿಕ್ಷೆ ,ಕೇಂದ್ರಸ್ಥಾನದಲ್ಲಿ ಉಳಿಯಲು ಅಧಿಕಾರಿಗಳಿಗೆ ಸೂಚನೆ, ನರೇಗ ಅವ್ಯವಹಾರ : ತನಿಖೆಗೆ ಸಿಇಓ ಸೂಚನೆ)

ಗಾಂಜಾ ಬೆಳೆದ ವ್ಯಕ್ತಿಗೆ ಶಿಕ್ಷೆ ಚಾಮರಾಜನಗರ, ಫೆ. 22 - ಮನೆಯ ಹಿಂಭಾಗದ ಖಾಲಿ ಜಾಗದಲ್ಲಿ ಹೂಗಿಡಗಳ ಮಧ್ಯೆ ಅಕ್ರಮವಾಗಿ ಗಾಂಜಾ ಬೆಳೆದ ವ್ಯಕ್ತಿಗೆ 2 ವರ್ಷಗಳ ಸಜೆ ಹಾಗೂ 1 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಹನೂರು ತಾಲೂಕು ಪಿ.ಜಿ. ಪಾಳ್ಯ ಗ್ರಾಮದ ಮೋಹನ ಅಲಿಯಾಸ್ ಮೋಹನ್ ಕುಮಾರ್ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಇವರು ತಮ್ಮ ಮನೆಯ ಹಿಂಭಾಗದ ಖಾಲಿ ಜಾಗದಲ್ಲಿ ಹೂಗಿಡಗಳ ಮಧ್ಯೆ 12 ಕೆಜಿ ತೂಕವುಳ್ಳ 8 ಗಾಂಜಾ ಗಿಡಗಳನ್ನು ಬೆಳೆದಿದ್ದರು. ಸದರಿ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ಅಪರಾಧಿಗೆ 2 ವರ್ಷಗಳ ಸಜೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಟಿ.ಎಚ್. ಲೋಲಾಕ್ಷಿ ವಾದ ಮಂಡಿಸಿದ್ದರು. ------------------------------------------------------------------------------------------------------------ ಕೇಂದ್ರಸ್ಥಾನದಲ್ಲಿ ಉಳಿಯಲು ಅಧಿಕಾರಿಗಳಿಗೆ ಸೂಚನೆ ಚಾಮರಾಜನಗರ, ಫೆ. 22 :- ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ನೌಕರರು, ಸಿಬ್ಬಂದಿ ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿರುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ. ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಅವರವರ ಕೇಂದ್ರಸ್ಥಾನದಲ್ಲಿದ್ದು ಜನರ ಸಮಸ್ಯೆಗಳನ್ನು ಪರಿಹರಿಸಲು ಸೂಚಿಸಿದ್ದಾರೆ. ಅಧಿಕಾರಿಗಳು ಕಚೇರಿ ವಾಹನಗಳಲ್ಲಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ರಾತ್ರಿ 8 ಗಂಟೆಯೊಳಗೆ ಪ್ರವಾಸ ಮುಕ್ತಾಯಗೊಳಿಸಿ ತಮ್ಮ ವಾಹನಗಳನ್ನು ಜಿಲ್ಲಾ ಆಡಳಿತ ಭವನದ ಆವರಣದಲ್ಲಿ ಇರುವಂತೆ ಕ್ರಮ ತೆಗೆದುಕೊಳ್ಳಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಸಹ ಆಯಾ ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ವಾಹನಗಳು ಇರುವಂತೆ ಕ್ರಮ ವಹಿಸಬೇಕೆಂದು ತಿಳಿಸಿದ್ದಾರೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಕೇಂದ್ರಸ್ಥಾನ ಬಿಡಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ, ಅನುಮೋದನೆ ಪಡೆಯಲೇಬೇಕು. ತಪ್ಪಿದಲ್ಲಿ ಕೇಂದ್ರಸ್ಥಾನದಲ್ಲಿರದ ಅಧಿಕಾರಿ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಡಾ. ಕೆ. ಹರೀಶ್ ಕುಮಾರ್ ್ಲ ತಿಳಿಸಿದ್ದಾರÉ. -------------------------------------------------------- ನರೇಗ ಅವ್ಯವಹಾರ : ತನಿಖೆಗೆ ಸಿಇಓ ಸೂಚನೆ ಚಾಮರಾಜನಗರ, ಫೆ. 22- ನರೇಗಾ ಯೋಜನೆಯಡಿ ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ಕೃಷಿ ಹೊಂಡ ಹಾಗೂ ಇನ್ನಿತರ ಕಾಮಗಾರಿಗಳಲ್ಲಿ ಗುಂಡ್ಲುಪೇಟೆ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಸಹಾಯಕ ಕೃಷಿ ಅಧಿಕಾರಿ ಅವ್ಯವಹಾರ ನಡೆಸಿರುವ ಸಂಬಂಧ ನೀಡಿರುವ ದೂರಿನ ಮೇರೆಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಯವರಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಹರೀಶ್ ಕುಮಾರ್ ಅವರು ಸೂಚಿಸಿದ್ದಾರೆ. ಸಹಾಯಕ ಕೃಷಿ ನಿರ್ದೇಶಕರಾದ ಸಿದ್ದೇಗೌಡ ಹಾಗೂ ಸಹಾಯಕ ಕೃಷಿ ಅಧಿಕಾರಿ ಮಹದೇವ ಅವರ ಬಗ್ಗೆ ಕಳೆದ ಫೆಬ್ರವರಿ 18ರಂದು ಗುಂಡ್ಲುಪೇಟೆ ತಾಲೂಕಿನಲ್ಲಿ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಪುರಸ್ಕøತ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರ್ವಜನಿಕರು ಮೌಖಿಕವಾಗಿ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಧ್ರುವನಾರಾಯಣ ಅವರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ 10 ದಿನದಲ್ಲಿ ತನಿಖೆ ಕೈಗೊಂಡು ವಿವರವಾದ ವರದಿಯನ್ನು ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಹರೀಶ್ ಕುಮಾರ್ ಅವರು ಸೂಚನೆ ನೀಡಿದ್ದಾರ. --------------------------------------------- ಜಿ.ಪಂ.ಗೆ ಛತ್ತಿಸ್‍ಘಡ್ ಜನಪ್ರತಿನಿಧಿಗಳ ಭೇಟಿ: ಸಂವಾದ ಚಾಮರಾಜನಗರ ಫೆ-22 ಚಾಮರಾಜನಗರ ಜಿಲ್ಲಾ ಪಂಚಾಯಿತಿಗೆ ಇಂದು ಛತ್ತಿಸ್‍ಘಡ್ ರಾಜ್ಯದ ಸುಕುಮಾ, ಕೊರಬಾ, ರಾಯಘಡ್ ಜಿಲ್ಲೆಯ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯ 30 ಜನ ಪ್ರತಿನಿಧಿಗಳು ಭೇಟಿ ನೀಡಿ, ಇಲ್ಲಿನ ಜನ ಪ್ರತಿನಿಧಿಗಳ ಜತೆ ಸಂವಾದ ನಡೆಸಿದರು. ಚಾಮರಾಜನಗರ ಜಿಲ್ಲೆಯ ಸ್ಥೂಲ ಪರಿಚಯವನ್ನು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎನ್.ಮುನಿರಾಜಪ್ಪ ಅವರು ಪವರ್ ಪಾಯಿಂಟ್ ಮೂಲಕ ನೀಡಿದರು. ಬಳಿಕ ಸಂವಾದ ಪ್ರಾರಂಭಿಸಿದ ಜನ ಪ್ರತಿನಿಧಿಗಳು ಚಾಮರಾಜನಗರ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಕಾರ್ಯವೈಖರಿ, ಶಿಕ್ಷಣ ಇಲಾಖೆಯ ಪ್ರಗತಿ, ಜನಪ್ರತಿನಿಧಿಗಳಿಗೆ ಅನುದಾನದ ಮೂಲ, ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಕೇಳಿ ತಿಳಿದುಕೊಂಡರು. ತಮ್ಮ ರಾಜ್ಯದಲ್ಲಿನ ಸ್ಥಿತಿ-ಗತಿಗಳ ಬಗ್ಗೆ ಪರಾಮರ್ಶೆ ಮಾಡಿದರು. ಚಾಮರಾಜನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ರಾಮಚಂದ್ರ ಅವರು ಮಾತನಾಡಿ, ಸರ್ಕಾರದಿಂದ ಬರುವ ಅನುದಾನವನ್ನು ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಶಾಲೆ ದುರಸ್ತಿ, ಅಂಗನವಾಡಿ ನಿರ್ಮಾಣ ಮುಂತಾದ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆಯನ್ನು ಗ್ರಾಮಮಟ್ಟದಲ್ಲಿ ಗ್ರಾಮಸಭೆಗಳ ಮೂಲಕ, ಜನರ ಮಧ್ಯದಲ್ಲಿಯೇ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಸವರಾಜು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸದಾಶಿವಮೂರ್ತಿ, ಬೊಮ್ಮಯ್ಯ, ಛತ್ತಿಸ್‍ಘಡ್ ರಾಜ್ಯದ ಸುಕುಮಾ ಜಿಲ್ಲಾ ಪಂಚಾಯತಿ ಅಧ್ಯಕ್ಷ ಹರೀಶ್ ಕವಾಶಿ, ರಾಯಘಡ್ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ್ ಟಿ.ಎಸ್.ಅಗರವಾಲ್, ಕೊರಬಾ ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷ ಕಿರಣ್ ಮರಕಮ್, ಚಾಮರಾಜನಗರ ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಎಂ.ಮಾದೇಶು, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ತರಬೇತಿ ಸಂಯೋಜಕ ಟಿ.ಎಂ.ಅಬುಬ್ಕರ್, ಜಿಲ್ಲಾ ಪಂಚಾಯಿತಿ ಸದಸ್ಯರು ಸಂವಾದದಲ್ಲಿ ಹಾಜರಿದ್ದರು. ------------------------------------------------------------------------------------------------------- ಫೆ. 24ರಂದು ಮಾಂಸ ಮಾರಾಟ ನಿಷೇಧ ಚಾಮರಾಜನಗರ, ಫೆ. 22:- ನಗರಸಭಾ ವ್ಯಾಪ್ತಿಯಲ್ಲಿ ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಫೆಬ್ರವರಿ 24ರಂದು ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ. ಅಂದು ಪ್ರಾಣಿವಧೆ, ಮಾಂಸ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂಗಡಿ ಹಾಗೂ ಸಂಬಂಧಪಟ್ಟವರ ಉದ್ದಿಮೆಯನ್ನು ಬಂದ್ ಮಾಡಿ ಪರವಾನಗಿ ರದ್ದುಪಡಿಸುವುದರ ಜತೆಗೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದೆಂದು ನಗರಸಭೆ ಪೌರಾಯುಕ್ತರು ಪ್ರಕಟಣೆ ತಿಳಿಸಿದ್ದಾರೆ. ------------------------------------------------------------------------------- ನ್ಯಾಯಾಂಗ ಇಲಾಖೆ ಹುದ್ದೆ : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಚಾಮರಾಜನಗರ, ಫೆ. 22:- ಚಾಮರಾಜನಗರದ ಜಿಲ್ಲಾ ನ್ಯಾಯಾಂಗ ಘಟಕದ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶ್ರೀಘ್ರಲಿಪಿಗಾರರು, ಬೆರಳಚ್ಚುಗಾರರು, ಬೆರಚ್ಚು-ನಕಲುಗಾರರು, ಆದೇಶ ಜಾರಿಕಾರರು ಮತ್ತು ಸೇವಕರ ಹುದ್ದೆಗಳಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಮಾರ್ಚ್ 17ರವರೆಗೆ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ಈ ಹಿಂದೆ ಫೆಬ್ರವರಿ 13ರಂದು ಕಡೆಯ ದಿನಾಂಕವೆಂದು ನಿಗದಿ ಮಾಡಲಾಗಿತ್ತು. ಆದರೆ ಅರ್ಜಿ ಸಲ್ಲಿಕೆ ಅವಧಿಯನ್ನು ಮತ್ತೆ ಮಾರ್ಚ್ 17ರವರೆಗೆ ವಿಸ್ರರಿಸಲಾಗಿದೆ. ಅರ್ಜಿ ಸಲ್ಲಿಕೆ ವಿವರಗಳಿಗೆ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದÉ. ಮಾ. 2ರಂದು ಮಹದೇಶ್ವರ ಬೆಟ್ಟದಲ್ಲಿ ಗೋಲಕ ಹಣ ಎಣಿಕೆ ಚಾಮರಾಜನಗರ, ಫೆ. 22 :- ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಇಡಲಾಗಿರುವ ಗೋಲಕಗಳ ಹಣ ಎಣಿಕೆ ಕಾರ್ಯವು ಮಾರ್ಚ್ 2ರಂದು ಬೆಳಿಗ್ಗೆ ನಡೆಯಲಿದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಿಬ್ಬಂದಿ ಸಹಕಾರದೊಂದಿಗೆ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ಹಣ ಎಣಿಕೆ ಕಾರ್ಯ ನಡೆಸಲಾಗುತ್ತದೆ ಎಂದು ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------------------------------------------------------------------------------- ಫೆ. 25ರಂದು ನೇರ ಫೋನ್ ಇನ್ ಕಾರ್ಯಕ್ರಮ ಚಾಮರಾಜನಗರ, ಫೆ. 22 :- ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಫೆಬ್ರವರಿ 25ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ನಾಗರಿಕರು ಕುಂದುಕೊರತೆಗಳಿದ್ದಲ್ಲಿ ದೂರವಾಣಿ ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ---------------------------------------------------------------------------------- ಶಿವಾಜಿ ಮಹಾರಾಜರು ದಕ್ಷ ಆಡಳಿತಗಾರರು : ಸಿ. ಪುಟ್ಟರಂಗಶೆಟ್ಟಿ ಚಾಮರಾಜನಗರ, ಫೆ. 22:- ಛತ್ರಪತಿ ಶಿವಾಜಿ ಅವರು ಉತ್ತಮ ಆಳ್ವಿಕೆ ನಡೆಸಿ ದಕ್ಷ ಆಡಳಿತಗಾರರೆಂದೇ ಹೆಸರಾದವರೆಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು. ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿವಾಜಿ ಜಯಂತಿ ಆಚರಣೆ ಕಾಂiÀರ್iಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿವಾಜಿ ಅವರು ಪರಕೀಯರ ಆಕ್ರಮಣದಿಂದ ದೇಶವನ್ನು ರಕ್ಷಿಸಿ ಆಡಳಿತ ವ್ಯವಸ್ಥೆಯನ್ನು ಸುಧಾರಿಸಿದರು. ಅವರ ಆಳ್ವಿಕೆ ಅವಧಿಯಲ್ಲಿ ಮಹಿಳೆಯರಿಗೆ ವಿಶೇಷವಾದ ಗೌರವ ನೀಡಲಾಗುತ್ತಿತ್ತು. ಅಪಾರ ಜನಪರ ಕಾಳಜಿ ಉಳ್ಳವರಾಗಿದ್ದರು ಎಂದು ಪುಟ್ಟರಂಗಶೆಟ್ಟಿ ಅವರು ಸ್ಮರಿಸಿದರು. ಶಿವಾಜಿ ಅವರು ಯುದ್ಧ ಕಲೆಯಲ್ಲಿ ನೈಪುಣ್ಯತೆ ಹೊಂದಿದ್ದರು. ವಿಶೇಷವಾಗಿ ಬೆಟ್ಟ ಗುಡ್ಡಗಾಡು ಪ್ರದೇಶಗಳಲ್ಲಿ ನಿಂತು ಹೋರಾಡುವ ಸಮರ ಕಲೆಯನ್ನು ಬಲ್ಲವರಾಗಿದ್ದರು. ಕತ್ತಿವರಸೆ, ಕುದುರೆ ಸವಾರಿ, ಇತರೆ ಸಾಹಸ ಪ್ರವೃತ್ತಿ ಶಿವಾಜಿ ಅವರಲ್ಲಿತ್ತು ಪುಟ್ಟರಂಗಶೆಟ್ಟಿ ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕ ಅವರು ಶಿವಾಜಿ ಅವರು ಚಿಕ್ಕವಯಸ್ಸಿನಲ್ಲಿಯೇ ಅವರ ತಾಯಿಯಿಂದ ಅನೇಕ ಉತ್ತಮ ಮೌಲ್ಯ ವಿಚಾರಗಳನ್ನು ತಿಳಿದುಕೊಂಡಿದ್ದರು. ದೇಶದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಶಿವಾಜಿ ಅವರ ಸಾಧನೆ ಶೌರ್ಯ ಇನ್ನಿತರ ಆದರ್ಶ ಗುಣಗಳು ಎಲ್ಲರಿಗೂ ಮಾದರಿಯಾಗಿವೆ ಎಂದರು. ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ ಮಾತನಾಡಿ ಇತಿಹಾಸ ಪುರುಷರು ಸಮಾಜ ಸುಧಾರಕರು ಸೇರಿದಂತೆ ಮಹಾನ್ ವ್ಯಕ್ತಿಗಳನ್ನು ಒಂದು ಜನಾಂಗಕ್ಕೆ ಸೀಮಿತಗೊಳಿಸಿ ಅವರ ಜಯಂತಿ ಆಚರಣೆ ಕಾರ್ಯಕ್ರಮ ಮಾಡುವುದು ನೋವಿನ ಸಂಗತಿ. ಎಲ್ಲಾ ಮಹಾನ್ ವ್ಯಕ್ತಿಗಳು ಎಲ್ಲ ವರ್ಗದ ಜನರ ಏಳಿಗೆಗೆ ಶ್ರಮಿಸಿದ್ದಾರೆ. ಹೀಗಾಗಿ ಎಲ್ಲರೂ ಎಲ್ಲಾ ದೇಶನಾಯಕರ ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಬೇಕೆಂದು ಆಶಿಸಿದರು. ಶಿವಾಜಿ ಕುರಿತು ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಪ್ರಾಂಶುಪಾಲರಾದ ಎಂ.ಡಿ. ಪುಷ್ಪಲತಾ ಅವರು ಶಿವಾಜಿ ಅವರು ಆಡಳಿತ ಅವಧಿಯಲ್ಲಿ ಅಷ್ಟಪ್ರಧಾನ ವ್ಯವಸ್ಥೆಯನ್ನು ಜಾರಿಗೆ ತಂದರು. ಅರ್ಹತೆ ಆಧಾರದ ಮೇಲೆ ಮಂತ್ರಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದರು. ನೇಮಕ ಪ್ರಕ್ರಿಯೆಯಲ್ಲಿ ಯಾವುದೇ ಧರ್ಮ, ಬೇಧಭಾವ ಮಾಡುತ್ತಿರಲಿಲ್ಲ. ಅರ್ಹತೆಯೇ ಮುಖ್ಯವೆಂದು ಪರಿಗಣಿಸುತ್ತಿದ್ದರು ಎಂದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಆಲಿಖಾನ್, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಿ. ನಾಗವೇಣಿ, ಮರಾಠ ಸಮಾಜದ ಮುಖಂಡರಾದ ವೆಂಕಟರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಚಾಮರಾಜೇಶ್ವರ ದೇವಾಲಯದ ಬಳಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ನಡೆದ ಶಿವಾಜಿ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚÀಂದ್ರ ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಪಿ. ಸದಾಶಿವಮೂರ್ತಿ, ಇತರರು ಈ ಸಂದರ್ಭದಲ್ಲಿ ಹಾಜರಿದ್ದರು. -------------------------------------------------------------------------------------------

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು