Thursday, 3 August 2017

ತಾಲೂಕುಗಳಿಗೆ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳ ಭೇಟಿ : ನಾಗರಿಕರಿಂದ ದೂರು ಸ್ವೀಕಾರ (03-08-2017)

ತಾಲೂಕುಗಳಿಗೆ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳ ಭೇಟಿ : ನಾಗರಿಕರಿಂದ ದೂರು ಸ್ವೀಕಾರ

ಚಾಮರಾಜನಗರ, ಆ. 03 - ಜಿಲ್ಲೆಯ ನಾಲ್ಕೂ ತಾಲೂಕುಗಳಿಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಆಗಸ್ಟ್ 4 ರಿಂದ 31ರವರೆಗೆ ತಾಲೂಕಿನ ಸರ್ಕಾರಿ ಅತಿಥಿಗೃಹಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ದÀೂರುಗಳನ್ನು ಸ್ವೀಕರಿಸುವರು.
ಆಗಸ್ಟ್ 4ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಗುಂಡ್ಲುಪೇಟೆ ತಾಲೂಕಿನ ಸಾರ್ವಜನಿಕರಿಂದ, ಆಗಸ್ಟ್ 10ರಂದು ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಚಾಮರಾಜನಗರ ತಾಲೂಕಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ  ದೂರುಗಳನ್ನು ಸ್ವೀಕರಿಸುವರು.
ಆಗಸ್ಟ್ 16ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಯಳಂದೂರು, 22ರಂದು ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಕೊಳ್ಳೇಗಾಲ ಹಾಗೂ 30ರಂದು ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಹನೂರಿನಲ್ಲಿ  ದೂರುಗಳನ್ನು ಸ್ವೀಕರಿಸುವರು.   ಸರ್ಕಾರಿ ಕಚೇರಿಗಳಲ್ಲಿ ವಿಳಂಬ, ಲಂಚದ ಹಣಕ್ಕೆ ಒತ್ತಾಯ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

ಮೊಸರು ಮಡಿಕೆ ಒಡೆಯುವ ಉತ್ಸವ

ಚಾಮರಾಜನಗರ, ಆ.03:- ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಆಗಸ್ಟ್ 19 ರಂದು ನಡೆಯಲಿರುವ ಮೊಸರು ಮಡಿಕೆ ಒಡೆಯುವ ಉತ್ಸವದ ಪೂರ್ವದಲ್ಲಿ ಮಡಿಕೆ ತಯಾರಿಕೆಗಾಗಿ (ಮಣ್ಣಿನ ಪೂಜೆ) ಮೃತ್ತಿಕಾ ಪೂಜೆಯನ್ನು ಆಗಸ್ಟ್ 4 ರಂದು ಶುಕ್ರವಾರ ಸಂಜೆ 5 ಗಂಟೆಗೆ ಹೆಗ್ಗೋಠಾರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಳೆದ 7 ವರ್ಷಗಳಿಂದ ಚಾಮರಾಜನಗರದಲ್ಲಿ ನಡೆಯುತ್ತಿರುವ ಮೊಸರು ಮಡಿಕೆ ಒಡೆಯುವ ಉತ್ಸವ ಜನರಲ್ಲಿ ಉತ್ಸಾಹ ಮತ್ತು ಭಕ್ತಿ ಹೆಚ್ಚಿಸುತ್ತಿದೆ. ಮೃತ್ತಿಕಾ ಪೂಜೆ ವಿಶೇಷವಾಗಿದ್ದು, ಹೆಗ್ಗೋಠಾರ ಗ್ರಾಮದ ನಂಜಪ್ಪನವರ ಗುಡಿ ಕೈಗಾರಿಕಾ ಕೇಂದ್ರದಲ್ಲಿ ಮೃತ್ತಿಕಾ ಪೂಜೆಯ ನಂತರ ತಯಾರಿಸಲ್ಪಡುತ್ತದೆ ಎಂದು ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್.ಎನ್.ಋಗ್ವೇದಿ ತಿಳಿಸಿದ್ದಾರೆ. 


ಅಡುಗೆಯವರ ಹಾಗೂ ಅಡುಗೆ ಸಹಾಯಕರ ತಾತ್ಕಾಲಿಕ ಆಯ್ಕೆ ಪಟ್ಟಿ

ಚಾಮರಾಜನಗರ, ಆ. 03 : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಅಡುಗೆಯವರ ಹಾಗೂ ಅಡುಗೆ ಸಹಾಯಕರ ಹುದ್ದೆಗಳ ನೇರ ನೇಮಕಾತಿ ಕುರಿತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜುಲೈ 7ರಂದು ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ರಿಟ್ ಪಿಟಿಷನ್ ಸಂಖ್ಯೆ 31601-31653/2017ರನ್ವಯ ವಿಚಾರಣೆ ಬಾಕಿ ಇರುವುದರಿಂದ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲು ನ್ಯಾಯಾಲಯದಲ್ಲಿ ಪ್ರಕರಣ ವಿಲೇ ಆದ ನಂತರ ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಆ. 03 - ಕೃಷಿ ಇಲಾಖೆಯು 2016-17ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.
ಕೃಷಿ ಕ್ಷೇತ್ರದಲ್ಲಿ ವಿನೂತನ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರುವ, ರೈತ ಸಮುದಾಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವವರು ಅರ್ಜಿ ಸಲ್ಲಿಸಬಹುದು. ಸಂಶೋಧನೆ, ಸಾಧನೆಗಳು ಬೇರೆಯವರ ಸಾಧನೆಗಿಂತ ವಿಭಿನ್ನವಾಗಿರಬೇಕು. ಕೃಷಿ ಕ್ಷೇತ್ರದ ಏಳಿಗೆಗೆ ಕಾರಣವಾಗಿರಬೇಕು.
ಪ್ರಥಮ ಪ್ರಶಸ್ತಿಯು 1 ಲಕ್ಷ ರೂ. ನಗದು, ದ್ವಿತೀಯ ಪ್ರಶಸ್ತಿಯು 75 ಸಾವಿರ ರೂ., ತೃತೀಯ ಪ್ರಶಸ್ತಿಯು 50 ಸಾವಿರ ರೂ. ಒಳಗೊಂಡಿದೆ. ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿಗೆ ತಲಾ 25 ಸಾವಿರ ರೂ ನೀಡಲಾಗುತ್ತದೆ.
ಎಲ್ಲಾ ಕೃಷಿಕರಿಗೂ ಮುಕ್ತ ಅವಕಾಶವಿದೆ. ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಜಲಾನಯನ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತರಾದ ಕುಟುಂಬದವರನ್ನು ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನೂ ಸಹ  ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಅರ್ಜಿದಾರರ ಹೆಸರಿನಲ್ಲಿ ಪಹಣಿ ಪತ್ರ (ಭೂ ದಾಖಲೆ, ಆರ್‍ಟಿಸಿ) ಕಡ್ಡಾಯ. ಈ ಹಿಂದೆ ಕೃಷಿ ಪಂಡಿತ ಪ್ರಶಸ್ತಿ ಅಥವಾ ಸಾಧನೆಗಾಗಿ ಕೇಂದ್ರ, ರಾಜ್ಯ ಸರ್ಕಾರದಿಂದ ಸಮಾನಾಂತರ ಪ್ರಶಸ್ತಿ ಪಡೆದಿರುವವರು ಮತ್ತೆ ಸ್ಪರ್ಧಿಸುವಂತಿಲ್ಲ.
ಅರ್ಜಿ ನಮೂನೆಯನ್ನು ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿ ಆಗಸ್ಟ್ 10ರ ಒಳಗೆ ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳೆ ಸ್ಪರ್ಧೆಗೆ ಅರ್ಜಿ ಆಹ್ವಾನ

ಚಾಮರಾಜನಗರ, ಆ. 03 :- ಕೃಷಿ ಉತ್ಪಾದನೆ ಹೆಚ್ಚಳವಾಗಲು ಕಾರಣವಾಗಿರುವ ರೈತರ ಶ್ರಮ ಸಕ್ರಿಯ ಪಾಲ್ಗೊಳ್ಳುವಿಕೆ ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಬೆಳೆ ಸ್ಪರ್ಧೆಯನ್ನು ರಾಜ್ಯ ಜಿಲ್ಲಾ ಹಾಗೂ ತಾಲೂಕು ಮಟ್ಟಗಳಲ್ಲಿ ಏರ್ಪಡಿಸಿ ಬಹುಮಾನ ನೀಡುವ ಸಲುವಾಗಿ ಕೃಷಿ ಇಲಾಖೆ ಅರ್ಜಿ ಆಹ್ವಾನಿಸಿದೆ.
ತಾಲೂಕು ಮಟ್ಟದ ಸ್ಪರ್ಧೆಗೆ ಪ್ರಥಮ ಬಹುಮಾನವಾಗಿ 15 ಸಾವಿರ ರೂ., ದ್ವಿತೀಯ ಬಹುಮಾನವಾಗಿ 10 ಸಾವಿರ ರೂ, ತೃತೀಯ ಬಹುಮಾನವಾಗಿ 5 ಸಾವಿರ ರೂ. ನೀಡಲಾಗುತ್ತದೆ. ಜಿಲ್ಲಾ ಮಟ್ಟದ ಸ್ಪರ್ಧೆಗೆ ಪ್ರಥಮ ಬಹುಮಾನವಾಗಿ 25 ಸಾವಿರ ರೂ., ದ್ವಿತೀಯ ಬಹುಮಾನವಾಗಿ 15 ಸಾವಿರ ರೂ., ತೃತೀಯ ಬಹುಮಾನವಾಗಿ 10 ಸಾವಿರ ರೂ. ನೀಡಲಾಗುತ್ತದೆ. ರಾಜ್ಯ ಮಟ್ಟದ ಸ್ಪರ್ಧೆಗೆ ಪ್ರಥಮ ಬಹುಮಾನವಾಗಿ 50 ಸಾವಿರ ರೂ., ದ್ವಿತೀಯ ಬಹುಮಾನವಾಗಿ 25 ಸಾವಿರ ರೂ., ತೃತೀಯ ಬಹುಮಾನವಾಗಿ 15 ಸಾವಿರ ರೂ. ನೀಡಲಾಗುತ್ತದೆ.
ಸ್ಪರ್ಧೆಗೆ ಭಾಗವಹಿಸಲು ಸಾಮಾನ್ಯ ವರ್ಗದ ರೈತರು 100 ರೂ., ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ರೈತರಾಗಿದ್ದಲ್ಲಿ 25 ರೂ. ಪ್ರವೇಶ ಶುಲ್ಕ ಸಂದಾಯ ಮಾಡಬೇಕಿದೆ. ಮುಂಗಾರು ಹಂಗಾಮಿಗೆ ಆಗಸ್ಟ್ 31, ಹಿಂಗಾರು ಹಂಗಾಮಿಗೆ ನವೆಂಬರ್ 30 ಸ್ಪರ್ಧೆಗೆ ನೊಂದಾಯಿಸಿಕೊಳ್ಳಲು ಕಡೆಯ ದಿನವಾಗಿದೆ.
ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಜಿಲ್ಲಾ ಮಟ್ಟದ ಸಮಿತಿ ನಿಗದಿಪಡಿಸುವ ಒಂದು ಬೆಳೆಯಲ್ಲಿ ಮಾತ್ರ ಸ್ಫರ್ಧೆ ನಡೆಸಲು ಅವಕಾಶವಿರುತ್ತದೆ. ವಿವರಗಳಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಭೇಟಿ ಮಾಡುವಂತೆ ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಆ. 5ರಂದು ವಿದ್ಯುತ್ ಜನಸಂಪರ್ಕ ಸಭೆ

ಚಾಮರಾಜನಗರ, ಆ. 03 - ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ನಗರ ಉಪವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದುಕೊರತೆಗಳನ್ನು ನಿವಾರಿಸಲು ಆಗಸ್ಟ್ 5ರಂದು ಬೆಳಿಗ್ಗೆ 11 ರಿಂದ 1 ಗಂಟೆವರೆಗೆ ಕೊಡಗು ಮತ್ತು ಚಾಮರಾಜನಗರ ವೃತ್ತದ ಅಧೀಕ್ಷಕÀ ಎಂಜಿನಿಯರ್ ಅವರ ಅಧ್ಯಕ್ಷತೆಯಲ್ಲಿ ನಗರದ ಉಪವಿಭಾಗ ಕಚೇರಿಯಲ್ಲಿ ನಡೆಲಾಗುವುದು.
ನಗರ ವ್ಯಾಪ್ತಿಯ ಸಾರ್ವಜನಿಕರು ವಿದ್ಯುತ್ ಗ್ರಾಹಕರು ವಿದ್ಯುತ್ ಸಂಬಂಧ ಸಮಸ್ಯೆ ಅಥವಾ ದೂರುಗಳಿದ್ದಲ್ಲಿ ಸಭೆಗೆ ಹಾಜರಾಗಿ ಲಿಖಿತ ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಯೋಜನಾ ಸಮಿತಿ ಚುನಾವಣೆ : ವೇಳಾಪಟ್ಟಿ ಪ್ರಕಟ

ಚಾಮರಾಜನಗರ, ಆ. 03 - ಜಿಲ್ಲಾ ಯೋಜನಾ ಸಮಿತಿಗೆ ಚುನಾವಣೆ ನಡೆಸುವ ಸಂಬಂಧ ವೇಳಾಪಟ್ಟಿಯನ್ನು ಜಿಲ್ಲಾ ಯೋಜನಾ ಸಮಿತಿಯ ಚುನಾವಣೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಪ್ರಕಟಿಸಿದ್ದಾರೆ.
ಜಿಲ್ಲಾ ಯೋಜನಾ ಸಮಿತಿಗೆ ಸದಸ್ಯರ ಸ್ಥಾನಗಳನ್ನು ಭರ್ತಿ ಮಾಡಲು ಜಿಲ್ಲಾ, ತಾಲೂಕು ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಕ್ಷೇತ್ರದಿಂದ ಚುನಾಯಿತರಾದ ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆ ಮಾಡಬೇಕಿದೆ. ಗ್ರಾಮೀಣ ಸಂಸ್ಥೆಗಳಿಂದ 33 ಸದಸ್ಯರನ್ನು ನಗರಸಭೆ ಸಂಸ್ಥೆಗಳಿಂದ 7 ಸದಸ್ಯರನ್ನು ಆಯ್ಕೆ ಮಾಡಬೇಕಿದೆ. ಈಗಾಗಲೇ ನಗರ ಸ್ಥಳೀಯ ಸಂಸ್ಥೆಗಳಿಂದ 2015-16ನೇ ಸಾಲಿನಲ್ಲಿ ಇಬ್ಬರು ಸದಸ್ಯರು ಆಯ್ಕೆಯಾಗಿದ್ದಾರೆ. ಉಳಿದ 5 ಸದಸ್ಯರನ್ನು ನಗರ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆ ಮಾಡಬೇಕಿದೆ.
ನಾಮನಿರ್ದೇಶನಗಳನ್ನು ಸಲ್ಲಿಸುವ ಅವಧಿಯು ಆಗಸ್ಟ್ 4ರಂದು ಬೆಳಿಗ್ಗೆ 11 ಗಂಟೆಯಿಂದ ಆಗಸ್ಟ್ 11ರ ಶುಕ್ರವಾರ ಮಧ್ಯಾಹ್ನ 3 ಗಂಟೆವರೆಗೆ (ದಿನಾಂಕ 6.8.2017ರ ಭಾನುವಾರ ಹೊರತುಪಡಿಸಿ) ಇರಲಿದೆ. ಆಗಸ್ಟ್ 14ರಂದು ಬೆಳಿಗ್ಗೆ 11 ಗಂಟೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮನಿರ್ದೇಶನ ಹಿಂತೆಗೆದುಕೊಳ್ಳಲು ಆಗಸ್ಟ್ 17ರ ಮದ್ಯಾಹ್ನ 3 ಗಂಟೆಯವರೆಗೆ ಕಾಲಾವಕಾಶವಿದೆ. ಆಗಸ್ಟ್ 29ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್ 29ರಂದು ಸಂಜೆ 4.15 ಗಂಟೆಗೆ ಮತಗಳ ಎಣಿಕೆ ನಡೆಯಲಿದೆ. ಆಗಸ್ಟ್ 30ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಚುನಾವಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಾ.ನಗರಸಭೆಯ 9 ವಾಡ್ ್ಗಳು ಬಯಲು ಶೌಚಮುಕ್ತ : ಆಕ್ಷೇಪಣೆ ಪ್ರತಿಕ್ರಿಯೆಗೆ ಅವಕಾಶ

ಚಾಮರಾಜನಗರ, ಆ. 03 - ಚಾಮರಾಜನಗರ ನಗರಸಭೆಯ ಒಟ್ಟು 9 ವಾರ್ಡುಗಳನ್ನು ಬಯಲು ಶೌಚಮುಕ್ತ ಎಂದು ಘೋಷಿಸಿ ಅನುಮೋದನೆ ಪಡೆಯಲಾಗಿದ್ದು ಈ ಸಂಬಂಧ ಆಕ್ಷೇಪಣೆ ಹಾಗೂ ಪ್ರತಿಕ್ರಿಯೆ ಇದ್ದಲ್ಲಿ ಆಗಸ್ಟ್ 18ರೊಳಗೆ ಸಲ್ಲಿಸುವಂತೆ ನಗರಸಭೆ ಕೋರಿದೆ.

ಸ್ಪಚ್ಚ ಭಾರತ್ ಯೋಜನೆಯ ಉದ್ದೇಶ ಬಯಲುಶೌಚ ಮುಕ್ತ ನಗರವನ್ನಾಗಿ ಸೃಜಿಸುವುದೇ ಆಗಿದೆ. ಈ ನಿಟ್ಟಿನಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಬಯಲುಶೌಚ ಮುಕ್ತ ವಾರ್ಡುಗಳನ್ನಾಗಿ ಘೋಷಿಸಬೇಕಿದೆ. ಪ್ರತಿ ವಾರ್ಡಿನಲ್ಲಿ ಬಯಲು ಶೌಚಮುಕ್ತ  ವಾರ್ಡ್ ಪ್ರದೇಶ ಎಂದು ಘೋಷಿಸಲು ಆಯಾ ವಾರ್ಡಿನ ಶಾಲೆಗಳಲ್ಲಿ, ಮನೆಗಳಲ್ಲಿ ವಿದ್ಯಾರ್ಥಿಗಳು ಶೌಚಾಲಯ ಉಪಯೋಗಿಸುತ್ತಿರುವ ಬಗ್ಗೆ ಸ್ವಸಹಾಯ ಸಂಘಗಳು ತಮ್ಮ ವಾರ್ಡ್‍ನ  ಎಲ್ಲಾ ನಿವಾಸಿಗಳ ಮನೆಯಲ್ಲಿ ಶೌಚಾಲಯ ವ್ಯವಸ್ಥೆಯಿದ್ದು ಹಾಗೂ ಉಪಯೋಗಿಸುತ್ತಿರುವ ಬಗ್ಗೆ ಉಪಘೋಷಣೆ ಪಡೆದು ಕಳೆದ ಜುಲೈ 10ರಂದು ನಡೆದ ನಗರಸಭೆ ಕೌನ್ಸಿಲ್ ಸಭೆಯಲ್ಲಿ ಮಂಡಿಸಲಾಯಿತು. ನಗರಸಭೆಯ 31 ವಾರ್ಡ್‍ಗಳ ಪೈಕಿ ದೇವಾಂಗ ಬಡಾವಣೆ (ವಾರ್ಡ್ 11), ಕೆಪಿ ಮೊಹಲ್ಲ (ವಾರ್ಡ್ 12), ಅಂಬೇಡ್ಕರ್ ಬಡಾವಣೆ (ವಾರ್ಡ್ 13), ಅಂಬೇಡ್ಕರ್ ಬಡಾವಣೆ (ವಾರ್ಡ್ 14), ಭುಜಂಗೇಶ್ವರ ಬಡಾವಣೆ (ವಾರ್ಡ್ 20), ಬಣಜಿಗರ ಬೀದಿ (ವಾರ್ಡ್ 21), ಭ್ರಮರಾಂಭ ಬಡಾವಣೆ (ವಾರ್ಡ್ 22), ಶಂಕರಪುರ ಬಡಾವಣೆ (ವಾರ್ಡ್ 23), ಹೌಸಿಂಗ್ ಬೋರ್ಡ್ ಕಾಲೋನಿ (ವಾರ್ಡ್ 26)ಗಳನ್ನು ಬಯಲುಶೌಚಮುಕ್ತ ವಾರ್ಡ್‍ಗಳೆಂದು ಘೋಷಿಸಿ ಅನುಮೋದನೆ ಪಡೆಯಲಾಗಿದೆ.
ಬಯಲುಶೌಚಮುಕ್ತ ವಾರ್ಡ್‍ಗಳೆಂದು ಘೋಷಿಸಿರುವ ಬಗ್ಗೆ ಆಕ್ಷೇಪಣೆ ಪ್ರತಿಕ್ರಿಯೆ ಇದ್ದಲ್ಲಿ ನಾಗರಿಕರು ಆಗಸ್ಟ್ 18ರೊಳಗೆ ನಗರಸಭೆ ಪೌರಾಯುಕ್ತರಿಗೆ ಸಲ್ಲಿಸುವಂತೆ ಪೌರಾಯುಕ್ತರಾದ ರಾಜಣ್ಣ ಪ್ರಕಟಣೆಯಲ್ಲಿ ಕೋರಿದ್ದಾರೆ.

ಆ. 4 ರಂದು ಡಿ.ದೇವರಾಜ ಅರಸು ಜನ್ಮದಿನಾಚರಣೆ ಪೂರ್ವಭಾವಿ ಸಭೆ

ಚಾಮರಾಜನಗರ, ಆ. 03: ಜಿಲ್ಲಾಡಳಿತದ ವತಿಯಿಂದ ಡಿ.ದೇವರಾಜ ಅರಸು ಅವರ ಜನ್ಮದಿನಾಚರಣೆ ಹಮ್ಮಿಕೊಳ್ಳುವ ಸಂಬಂಧ ಚರ್ಚಿಸುವ ಸಲುವಾಗಿ ಆಗಸ್ಟ್ 4ರಂದು ಬೆಳಗ್ಗೆ 11 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ  ಪೂರ್ವಭಾವಿ ಸಭೆ ಕರೆಯಲಾಗಿದೆ.
ಸಂಘಸಂಸ್ಥೆಗಳ ಪ್ರತಿನಿಧಿಗಳು, ನಾಗರಿಕರು, ಎಲ್ಲ ವರ್ಗಗಳ ಮುಖಂಡರು ಪ್ರತಿನಿಧಿಗಳು ಸಭೆಗೆ ಅಗಮಿಸಿ ಸಲಹೆ ಅಭಿಪ್ರಾಯ ನೀಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.






No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು