ಜಿಲ್ಲಾಡಳಿತದಿಂದ ನಗರದಲ್ಲಿ ಅರ್ಥಪೂರ್ಣವಾಗಿ ನಡೆದ ಶ್ರೀಕೃಷ್ಣ ಜಯಂತಿ
ಚಾಮರಾಜನಗರ, ಆ. 14 :- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ನಗರದಲ್ಲಿಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಧರ್ಮ, ನ್ಯಾಯ ಎತ್ತಿಹಿಡಿದ ಮಹಾಪುರುಷ ಶ್ರೀಕೃಷ್ಣ. ಮಹಾಭಾರತದಲ್ಲಿ ಕೃಷ್ಣನ ಪಾತ್ರ ತುಂಬಾ ಮಹತ್ವಾದ್ದಾಗಿತ್ತು. ಶ್ರೀಕೃಷ್ಣನ ಜಯಂತಿಯನ್ನು ಇಂದು ಎಲ್ಲೆಡೆ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಗುತ್ತಿದೆ ಎಂದರು.
ದಿನನಿತ್ಯ ಒಳ್ಳೆಯ ಕೆಲಸಗಳನ್ನು ಮಾಡಿದರೆ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಹೆಸರು ಉಳಿಯಲಿದೆ. ಕೆಡಕು ಬಯಸಿ ಮಾಡಿದ ಒಂದು ಕೆಲಸ ಶಾಶ್ವತವಾಗಿ ಮಾಡಿದ ಒಳ್ಳೆಯ ಕೆಲಸದ ಸ್ಮರಣೆಯನ್ನು ಸಹ ದೂರ ಮಾಡುತ್ತದೆ. ಹೀಗಾಗಿ ಒಳಿತನ್ನೆ ಬಯಸುವ ಕಾಯಕ ಮಾಡುವ ಮೂಲಕ ಎಲ್ಲರ ಮನ ಗೆಲ್ಲಬೇಕು ಎಂದು ರಾಮಚಂದ್ರ ಸಲಹೆ ಮಾಡಿದರು.
ಯಾವುದೇ ಮಹಾನ್ ಪುರುಷರ ಜಯಂತಿ ಆಚರಣೆ ಕಾರ್ಯಕ್ರಮವನ್ನು ನಿರ್ದಿಷ್ಟ ಜಾತಿಗೆ ಸೀಮಿತಗೊಳಿಸುವುದು ಸಲ್ಲದು. ಎಲ್ಲ ಮಹಾನ್ ಆದರ್ಶ ವ್ಯಕ್ತಿಗಳು ಸರ್ವರ ಒಳಿತನ್ನೇ ಪ್ರತಿಪಾದಿಸಿದ್ದಾರೆ. ಈ ಹಿನ್ನಲೆಯಲ್ಲಿ ಎಲ್ಲ ಜಯಂತಿ ಕಾರ್ಯಕ್ರಮವನ್ನು ಎಲ್ಲಾ ವರ್ಗದ ಜನರನ್ನೂ ಆಹ್ವಾನಿಸಿ ಆಯೋಜಿಸಬೇಕು ಎಂದು ರಾಮಚಂದ್ರ ತಿಳಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಎಚ್. ವಿ. ಚಂದ್ರು ಮಾತನಾಡಿ ಸಂಸ್ಕ್ರತಿ, ಪರಂಪರೆಯನ್ನು ಗೌರವಿಸಬೇಕೆ ವಿನಹ ಮರೆಯಬಾರದು. ಶ್ರೀಕೃಷ್ಣನದ್ದು ಪರಿಪೂರ್ಣ ವ್ಯಕ್ತಿತ್ವವಾಗಿದ್ದು, ಎಂತಹ ಜಟಿಲ ಸಮಸ್ಯೆಯನ್ನು ಹಸನ್ಮುಖಿಯಾಗಿಯೆ ಪರಿಹರಿಸುವ ವಿಶೇಷ ಶಕ್ತಿ ಇತ್ತು. ಜ್ಞಾನ, ಬಲದ ಸಮ್ಮೀಳತವೇ ಯಶಸ್ಸಿನ ಸೂತ್ರವೆಂದು ತೋರಿಸಿ ಉಪದೇಶ ಮಾಡಿದರು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅವರು ಶ್ರೀಕೃಷ್ಣನ ಬಾಲ್ಯ, ರಾಜತಾಂತ್ರಿಕತೆ, ಧರ್ಮದ ಪರಿಪಾಲನೆ ವಿಷಯವು ಇಂದಿಗೂ ಮಾದರಿಯಾಗಿದೆ. ಆಡಳಿತ ನಿರ್ವಹಣೆಗೆ, ಕಲಹ ಪರಿಹಾರಕ್ಕೆ ಸಲಹಾತ್ಮಕವಾಗಿದೆ. ಶ್ರೀಕೃಷ್ಣನ ಜಯಂತಿ ಸಂದರ್ಭದಲ್ಲಿ ಉದಾತ್ತ ಚಿಂತನೆ ಬೆಳೆಸಿಕೊಂಡು ಅರ್ಥಪೂರ್ಣ ಬದುಕು ಸಾಗಿಸಬೇಕಿದೆ ಎಂದರು.
ಇತಿಹಾಸ ಉಪನ್ಯಾಸಕರಾದ ಸುರೇಶ್ ಎನ್. ಋಗ್ವೇದಿ ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಇಶ್ರತ್‍ಬಾನು ಮಾತನಾಡಿದರು. ಮತ್ತೊರ್ವ ಜಿ.ಪಂ. ಸದಸ್ಯರಾದ ಜಯಂತಿಯವರು ಕೃಷ್ಣನ ಕುರಿತು ಗೀತ-ಗಾಯನದ ಮೂಲಕ ಸಭಿಕರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ವೇಷಧಾರಿ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನಗರದ ಅಕ್ಷತಾ ಎಸ್. ಜೈನ್ ಮತ್ತು ತಂಡದಿಂದ ಶ್ರೀಕೃಷ್ಣ ನೃತ್ಯರೂಪಕ ಕಾರ್ಯಕ್ರಮವು ಸಹ ನಡೆಯಿತು.
ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್, ಸದಸ್ಯರಾದ ಯೋಗೆಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಿ. ನಾಗವೇಣಿ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆಗಸ್ಟ್ 15ರಂದು ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರ ಪ್ರವಾಸ
ಚಾಮರಾಜನಗರ, ಆ, 14. :- ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಯು.ಟಿ. ಖಾದರ್ ಅವರು ಆಗಸ್ಟ್ 15ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ಬೆಳಿಗ್ಗೆ 8 ಗಂಟೆಗೆ ನಗರಕ್ಕೆ ಆಗಮಿಸುವರು. ಬೆಳಿಗ್ಗೆ 9 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ದ್ವಜಾರೋಹಣ ನೆರವೇರಿಸುವರು. ಮಧ್ಯಾಹ್ನ 12.30 ಗಂಟೆಗೆ ಮಂಗಳೂರಿಗೆ ತೆರಳುವರೆಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.
ಆ. 15ರಂದು ಜಿಲ್ಲಾಡಳಿತದಿಂದ ಸ್ವಾತಂತ್ರ್ಯ ದಿನಾಚರಣೆ
ಚಾಮರಾಜನಗರ, ಆ. 14– ಜಿಲ್ಲಾಡಳಿತದ ವತಿಯಿಂದ ಆಗಸ್ಟ್ 15ರಂದು ಬೆಳಿಗ್ಗೆ 9 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಧ್ವಜಾರೋಹಣ ನೆರವೇರಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಎಂ.ಸಿ. ಮೋಹನ್‍ಕುಮಾರಿ ಉರುಫ್ ಗೀತಾ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಆರ್.ಎಂ. ರಾಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಪಿ. ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಂಜೆ 5.30 ಗಂಟೆಗೆ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ. ಸಂಜೆ 5.30 ರಿಂದ 6.30ರವರೆಗೆ ಚಾಮರಾಜನಗರದ ಬಿ. ಬಸವರಾಜು ಮತ್ತು ತಂಡದವರಿಂದ ದೇಶಭಕ್ತಿ ಗೀತೆ ಗಾಯನ, ಸಂಜೆ 6.30 ರಿಂದ 7.30ರವರೆಗೆ ಶಾಲಾಮಕ್ಕಳಿಂದ ಕಾರ್ಯಕ್ರಮ ನಡೆಯಲಿದೆ. 7.30 ರಿಂದ 8ರವರೆಗೆÉ ಮೈಸೂರಿನ ಕೃಷ್ಣ ನೃತ್ಯ ಶಾಲೆಯ ವಿದೂಷಿ ಡಿಂಪಲ್ ಮತ್ತು ತಂಡದಿಂದ ಹಾಗೂ 8 ರಿಂದ 8.30ರವರೆಗೆ ಕೊಳ್ಳೇಗಾಲದ ರಂಗ ಲಕ್ಷಣಂ ಫೌಂಡೇಷನ್‍ನ ವಿದುಷಿ ಚಿತ್ರಬಿಳಿಗಿರಿ ಮತ್ತು ತಂಡದಿಂದ ನೃತ್ಯ ರೂಪಕ ಕಾರ್ಯಕ್ರಮ ನಡೆಯಲಿದೆ
No comments:
Post a Comment