Thursday, 17 August 2017

ಘನತ್ಯಾಜ್ಯ ಘಟಕದ ಬಳಿ ಸಸಿ ನೆಡುವ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವರಿಂದ ಚಾಲನೆ (17-08-2018)

ಶಾಸಕ ಹಾಗೂ ಪೌರಯುಕ್ತರಿಗೆ ಕಣ್ಣಿನ ಪೊರೆ ಚಿಕಿತ್ಸೆ ಮಾಡಿಸಲು ರೋಟರಿ ಅಧ್ಯಕ್ಷರಿಗೆ ಮನವಿ

ಚಾಮರಾಜನಗರ ಅ17-ಚಾಮರಾಜನಗರದ ಶಾಸಕ ಹಾಗೂ ಪೌರಯುಕ್ತ ಇವರಿಬ್ಬರಿಗೂ ಕಣ್ಣಿನ ಪೊರೆ ಸಮಸ್ಯೆ ಇರುವುದರಿಂದ ಕಣ್ಣಿನ ಆಪರೇಷನ್ ಮಾಡಿಕೊಡಬೇಕಾಗಿ ರೋಟರಿ ಅಧ್ಯಕ್ಷರಲ್ಲಿ ಕರ್ನಾಟಕ ಹೋರಾಟ ವೇದಿಕೆ ಮತ್ತು ಸುವರ್ಣ ಕನ್ನಡ ರಕ್ಷಣಾ ವೇದಿಕೆಯಿಂದ ಮನವಿಯನ್ನು ಆಧ್ಯಕ್ಷರಾದ  ಸುಭಾಷ್ ಅವರಿಗೆ ರೋಟರಿ ಭವನದಲ್ಲಿ ಸಲ್ಲಿಸಿದರು.
ಚಾಮರಾಜನಗರದ ಪಟ್ಟಣದ ರಸ್ತೆಗಳು ಕೆಸರು ಗದ್ದೆ ಗಳಗಿದೆ  ಪಟ್ಟಣದಲ್ಲಿ ಜನ ಸಾಮಾನ್ಯರು ಮಳೆ ಬಂದರೂ ಸಹ ರಸ್ತೆಗಳಲ್ಲಿ ಶಾಲಾ ಮಕ್ಕಳು  ವಯೋವೃದ್ದರು ಅಂಗವಿಕಲರು ಓಡಾಡಲು ತುಂಬಾ ತೊಂದರೆಯಾಗುತ್ತಿದೆ ಈ ರೀತಿಯ ಹಳ್ಳ ಕೊಳ್ಳಗಳನ್ನು ತಪ್ಪಸಿ ವಾಹನವನ್ನು ಚಲಾಯಿಸಲು  ತುಂಬಾ ತೊಂದರೆಯಾಗುತ್ತದೆ ಜಿಲ್ಲಾ ಕೇಂದ್ರವಾದ  ಚಾಮರಾಜನಗರವು ಗ್ರಾಮೀಣ ಪ್ರದೇಶ ಗಳಿಗಿಂತ ಹಿಂದೆಯಿದೆ ಹಳ್ಳ ಕೊಳ್ಳ ಗಳಿಂದ ತುಂಬಿ ಕೆಸರು ಮಯವಾಗಿರುವ ಪಟ್ಟಣವನ್ನು ಸರಿಪಡಿಸಬೇಕಾಗಿರುವ ನಗರಸಭಾ ಪೌರಯುಕ್ತರು ಮತ್ತು ಶಾಸಕರಿಗೆ ಕಣ್ಣಿನಲ್ಲಿ ಪೊರೆಯಿರುವುದರಿಂದ ಅವರುಗಳಿಗೆ ನಗರದ ಈ ಪರಿಸ್ಥಿತಿ ಕಾಣುತ್ತಿಲ್ಲ  ಅದ್ದರಿಂದ  ರೋಟರಿ ಅಧ್ಯಕ್ಷರು ನಿಮ್ಮ ಸಂಸ್ಥೆಯ ವತಿಯಿಂದ ಈ ಇಬ್ಬರಿಗೆ ಆದಷ್ಟು ಬೇಗನೆ ಕಣ್ಣಿನ ಪೊರೆ ಚಿಕಿತ್ಸೆ ಮಾಡಿಸಿ ಅವರುಗಳಿಗೆ ಚಾಮರಾಜನಗರ ಪಟ್ಟಣಕೆಸರುಮಾಯವಾಗಿರುವುದನ್ನು ನೋಡಿದಮೇಲೆ ಇಲ್ಲಿನ ರಸ್ತೆಗಳನ್ನು ಡಾಂಬರೀಕರಣ ಮಾಡಿಸಲು ಅನುಕೂಲವಾಗುವಂತೆ ನಿಮ್ಮ ಸಂಸ್ಥೆ ಕಣ್ಣಿನ ಚಿಕಿತ್ಸೆ ಮಾಡಿಸಿಕೋಡಬೇಕಾಗಿ ಮನವಿ ಪತ್ರ ಸಲ್ಲಿಸಿದ್ದಾರೆ

*************************************

ಘನತ್ಯಾಜ್ಯ ಘಟಕದ ಬಳಿ ಸಸಿ ನೆಡುವ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವರಿಂದ ಚಾಲನೆ

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ, ಆ. 17 - ನಗರದ ಹೊರವಲಯದ ಕರಿವರದರಾಜನ ಬೆಟ್ಟದ ಬಳಿಯಿರುವ ಘನತ್ಯಾಜ್ಯ ಘಟಕದ ಬಳಿ ಸಸಿ ನೆಡುವ ಕಾರ್ಯಕ್ರಮಕ್ಕೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಇಂದು ಚಾಲನೆ ನೀಡಿದರು.
ಪಟ್ಟಣದ ಘನತ್ಯಾಜ್ಯ ನಿರ್ವಹಣೆ ಘಟಕದ ಬಳಿ ಪರಿಸರವನ್ನು ಸಮತೋಲನವಾಗಿರಿಸುವ ಉದ್ದೇಶದಿಂದ ನಗರಸಭೆ ವತಿಯಿಂದ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡುವ ಕೆಲಸಕ್ಕೆ ಉಸ್ತುವಾರಿ ಸಚಿವರು ಮುಂದಾದರು.
ಸಚಿವರೊಂದಿಗೆ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಬಿ. ರಾಮು ಸೇರಿದಂತೆ ಇತರರು ಸಹ ಸಸಿಗಳನ್ನು ನೆಟ್ಟು ನೀರೆರೆದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಘನತ್ಯಾಜ್ಯ ನಿರ್ವಹಣೆ ಜತೆಯಲ್ಲಿಯೇ ಪರಿಸರವನ್ನು ಉತ್ತಮವಾಗಿ ಕಾಪಾಡಿಕೊಳ್ಳುವ ಉದ್ದೇಶದಿಂದ ಸಸಿ ನೆಡುವ ಚಿಂತನೆ ಉತ್ತಮವಾಗಿದೆ. ಈ ದಿಕ್ಕಿನಲ್ಲಿ ಕಾರ್ಯಕ್ರಮವನ್ನು  ಆಯೋಜಿಸಿ ಗಿಡಮರಗಳ ಪೋಷಣೆಗೆ ಮುಂದಾಗಿರುವುದು ಒಳ್ಳೆಯ ಕೆಲಸವಾಗಿದೆ. ಭವಿಷ್ಯದ ದೃಷ್ಠಿಯಿಂದ ಇದೊಂದು ಅತ್ಯುತ್ತಮ ಕಾರ್ಯವೆಂದು ಹೇಳಿದರು.
ಒಟ್ಟು 7.5 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಘನತ್ಯಾಜ್ಯ ಘಟಕ ನಿರ್ಮಾಣ ಆಗಲಿದೆ. ಒಟ್ಟಾರೆ 25 ಎಕರೆ ಪ್ರದೇಶವನ್ನು ಹೊಂದಿರುವ ಘನತ್ಯಾಜ್ಯ ಘಟಕ ಜತೆಯಲ್ಲಿಯೇ ಯಾವುದೇ ತೊಂದರೆಗೆ ಆಸ್ಪದವಾಗದಂತೆ ಉತ್ತಮ ಪರಿಸರ ಕಲ್ಪಿಸಲು ಈಗಿನಿಂದಲೇ ಕಾರ್ಯಪ್ರವೃತ್ತವಾಗುತ್ತಿದೆ. ಈ ಎಲ್ಲಾ ಕೆಲಸಗಳು ಸಮರ್ಪಕವಾಗಿ ನಡೆಯಲಿದೆ ಎಂಬ ಆಶಯವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ವ್ಯಕ್ತಪಡಿಸಿದರು.
ಇದೇ ವೇಳೆ ಪ್ರತಿನಿತ್ಯ ಸಂಗ್ರಹವಾಗುತ್ತಿರುವ ಘನತ್ಯಾಜ್ಯ ಪ್ರಮಾಣ, ಪ್ರಸ್ತುತ ಇದರ ವಿಲೇವಾರಿ ನಿರ್ವಹಣೆ ಕುರಿತು ಪರಿಸರ ಇಲಾಖೆ ಅಧಿಕಾರಿ ಗಿರಿಜಮ್ಮ ಅವರು ಮಾಹಿತಿ ನೀಡಿದರು.
ನಗರಸಭೆ ಪ್ರಭಾರ ಅಧ್ಯಕ್ಷರಾದ ಆರ್.ಎಂ. ರಾಜಪ್ಪ, ನಗರಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ರೇಣುಕ, ಮಹೇಶ್ ಉಪ್ಪಾರ್, ಚಿನ್ನಸ್ವಾಮಿ, ಗಾಳಿಪುರ ಮಹೇಶ್, ಬಂಗಾರು, ಗೋಪಾಲಕೃಷ್ಣ, ಇಮ್ರಾನ್, ಶೋಭ ಪುಟ್ಟಸ್ವಾಮಿ, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ನಗರಸಭೆ ಆಯುಕ್ತರಾದ ರಾಜಣ್ಣ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸತ್ಯಮೂರ್ತಿ, ಆರೋಗ್ಯ ನಿರೀಕ್ಷಕರಾದ ಮಹದೇವಸ್ವಾಮಿ, ಮತ್ತಿತರರು ಹಾಜರಿದ್ದರು.

ಚಾಮರಾಜನಗರಕ್ಕೆ ಕಪ್ಪು ಚುಕ್ಕೆ ಎಂದ ಸಚಿವ ಖಾದರ್.
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

 ಚಾಮರಾಜನಗರ: ಮಂಗಳೂರಿನಲ್ಲಿ ನಡೆದ ಕೊಲೆಗೆ ಚಾಮರಾಜನಗರ ವ್ಯಕ್ತಿಯೋರ್ವ ಭಾಗಿಯಾಗಿರುವುದು ಜಿಲ್ಲೆಗೆ ಕಪ್ಪು ಚುಕ್ಕೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು. *ನಗರದ ಹೊರವಲಯದಲ್ಲಿರುವ ಕರಿವರದರಾಯ ಬೆಟ್ಟ ಸಮೀಪವಿರುವ ಘನತ್ಯಾಜ್ಯ ಘಟಕ ಸಮೀಪ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾದ್ಯಮದವರೊಂದಿಗೆ ಮಾತನಾಡಿದರು. *ಮಂಗಳೂರಿನ ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ್ ಕೊಲೆಗೆ ಸಂಬಂದಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಬೇಡಿಕೆಯಂತೆ ಆರೋಪಿಗಳನ್ನ ಪೊಲೀಸರು ಬಂದಿಸಿದ್ದಾರೆ. ನಿಜಕ್ಕೂ ಪೋಲಿಸರಿಗೆ ಅಭಿನಂದನೆ ಸಲ್ಲಿಸಬೇಕು ಎಂದರು. *ಚಾಮರಾಜನಗರ ಜನ ಮುಗ್ದರು,ಸಾಧು ಸ್ವಭಾವದ ಜನ ಎಂದು ಉದ್ದಗಲಕ್ಕೂ ಹೇಳುತ್ತಿದ್ದವರು ಪಿ.ಎಪ್.ಐ ವ್ಯಕ್ತಿ ಖಲೀಲ್ ಉಲ್ಲಾ ಎಂಬುವವರು ಭಾಗವಹಿಸಿರುವುದರಿಂದ ಜಿಲ್ಲೆಗೆ ಕಪ್ಪುಚುಕ್ಕೆಯಾಗಿದೆ. *ರಾಜಕೀಯ ಪ್ರೇರಿತವಾಗಿ ಬಂದಿಸಲಾಗಿದೆ ಎಂಬ ಪ್ರತಿಪಕ್ಷಗಳ ಮಾತಿಗೆ ತಿರುಗೇಟು ನೀಡಿದ ಸಚಿವ ಖಾದರ್ ,ಸುದೀರ್ಘ ವಿಚಾರಣೆ ನಡೆಸಿಯೆ ಆರೋಪಿಗಳನ್ನ ಬಂದಿಸಲಾಗಿದೆ.ಅವರಲ್ಲದಿದ್ದರೆ ನೈಜ ಆರೋಪಿಗಳು ಗೊತ್ತಿದ್ದರೆ ತಿಳಿಸಲಿ ಎಂದು ಹೇಳಿದರು. ಸಂಘ ನಿಷೇದ ವಿಚಾರ ಗೃಹ ಮತ್ತು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ ಎಂದರು

ರೈತರ ಸಮಸ್ಯೆ ಪರಿಹಾರಕ್ಕೆ ಕ್ರಮ : ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ, ಆ. 17:- ರೈತರಿಗೆ ಸಂಬಂಧಿಸಿದಂತೆ ಇರುವ ಜಿಲ್ಲಾ ಮಟ್ಟದ ಸಮಸ್ಯೆಗಳನ್ನು ಸ್ಥಳೀಯ ಹಂತದಲ್ಲಿಯೇ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ರಾಜ್ಯ ಮಟ್ಟಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಸರ್ಕಾರದ ಉನ್ನತ ಮಟ್ಟದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಮುಂದಾಗುವುದಾಗಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್  ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಇಂದು ನಡೆದ ರೈತರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಡಂಚಿನ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಹಾವಳಿಯನ್ನು ತಪ್ಪಿಸಿ ರೈತರ ಬೆಳೆಯನ್ನು ರಕ್ಷಿಸಬೇಕು. ಅರಣ್ಯಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಪಂಚಾಯತ್ ರಾಜ್ ಎಂಜಿನಿಯರಿಂಗ್  ಹಾಗೂ ಅರಣ್ಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಅಭಿವೃದ್ಧಿ ಕೆಲಸಗಳಿಗೆ ಹಿಂದೇಟು ಹಾಕದೆ ಕೂಡಲೇ ಕ್ರಮ ವಹಿಸಬೇಕೆಂದು ಸಚಿವರು ಸೂಚನೆ ನೀಡಿದರು.
ಫಸಲ್ ಬಿಮಾ ಯೋಜನೆಯಡಿ ಇನ್ನೂ ಕೆಲವು ರೈತರಿಗೆ ಪರಿಹಾರ ಹಣ ತಲುಪಿಲ್ಲ. ಕೆಲ ಬ್ಯಾಂಕುಗಳು ಈ ವಿಷಯದಲ್ಲಿ ತೀವ್ರ ನಿರ್ಲಕ್ಷ್ಯ ವಹಿಸುತ್ತಿವೆ. ಕಷ್ಟಪಟ್ಟು ಕಟ್ಟಿದ ವಿಮೆ ಹಣಕ್ಕೆ ಸರಿಯಾದ ಸಮಯದಲ್ಲಿ ಪರಿಹಾರ ಸಿಗದಿದ್ದರೆ ಹೇಗೆ ಎಂದು ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಚನ್ನಬಸಪ್ಪ, ಇತರೆ ಮುಖಂಡರು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಉಸ್ತುವಾರಿ ಸಚಿವರು ಬೆಳೆ ವಿಮೆ ಹಣ ತಲುಪಿಸಲು ಇರುವ ತೊಡಕುಗಳನ್ನು ಪರಿಹರಿಸಬೇಕು. ಲೀಡ್ ಬ್ಯಾಂಕ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಶೀಘ್ರವೇ ರೈತರಿಗೆ ಬೆಳೆ ವಿಮೆ ಹಣವನ್ನು ಜಮೆ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ತಿಳಿಸಿದರು.
ಬೆಳೆ ವಿಮೆ ಸಂಬಂಧ ಮಾಹಿತಿ ಪಡೆಯಲು ವಿಮೆ ಏಜೆನ್ಸಿ ಅಧಿಕಾರಿಗಳು ಲಭ್ಯರಾಗುತ್ತಿಲ್ಲ ಎಂಬ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿದ ಸಚಿವರು ರೈತರಿಗೆ ಸ್ಪಂದಿಸಲು ಸಹಾಯವಾಣಿಯಂತಹ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ತಿಳಿಸಿದರು.
ಕುಡಿಯುವ  ನೀರು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಪ್ರಸ್ತುತ ಪ್ರಗತಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇವೆ ಜನರಿಗೆ ಶೀಘ್ರ ಲಭ್ಯವಾಗಬೇಕು ಎಂಬ ಮನವಿಗೆ ಉತ್ತರಿಸಿದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಈಗಾಗಲೇ ಯೋಜನೆಯಡಿ ಕೆಲವು ಗ್ರಾಮಗಳಿಗೆ ಕಚ್ಚಾ ನೀರು ಪೂರೈಕೆ ಮಾಡಲಾಗುತ್ತಿದೆ. ಹಂತಹಂತವಾಗಿ ಉಳಿದ ಗ್ರಾಮಗಳಿಗೂ ವಿಸ್ತರಿಸಲಾಗುತ್ತದೆ. ಪೂರ್ಣ ಪ್ರಮಾಣದಲ್ಲಿ ಯೋಜನೆ ಪ್ರಯೋಜನ ತಲುಪಲಿದೆ ಎಂದರು.
ಖಾಸಗಿ ಲೇವಾದೇವಿ ಬ್ಯಾಂಕುಗಳಿಂದ ಆಗುತ್ತಿರುವ ಕಿರುಕುಳವನ್ನು ತಪ್ಪಿಸಬೇಕೆಂಬ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿದ ಸಚಿವರು ಖಾಸಗಿ ಗಿರವಿ ಅಂಗಡಿಗಳು ಲೇವಾದೇವಿದಾರರು ಕಾನೂನಿನ ಪ್ರಕಾರ ಕಾರ್ಯ ನಿರ್ವಹಿಸುತ್ತಿದ್ದಾರೆಯೇ ಎಂದು ಸಹಕಾರ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು. ಹೆಚ್ಚು ಬಡ್ಡಿ ವಸೂಲು ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.
ರೈತ ಮುಖಂಡರಾದ ಮಹೇಶ್ ಪ್ರಭು ಮಾತನಾಡಿ ಬ್ಯಾಂಕುಗಳಲ್ಲಿ ಆರ್‍ಬಿಐ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿಲ್ಲ. ಸಭೆಗಳಲ್ಲಿ ತೆಗೆದುಕೊಳ್ಳುವ ನಿರ್ಣಯಗಳಿಗೆ ಪರಿಹಾರ ದೊರೆಯಬೇಕು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸಭೆಯಲ್ಲಿ ನಿರ್ಧಾರವಾದ ವಿಷಯಗಳಿಗೆ ಸಂಬಂಧಿಸಿದಂತೆ ಅನುಷ್ಠಾನ ಪ್ರಕ್ರಿಯೆ ಕೈಗೊಳ್ಳಲು ಸೂಚಿಸಬೇಕು ಎಂದರು.
ಮತ್ತೊಬ್ಬ ರೈತ ಮುಖಂಡರಾದ ಗುರುಪ್ರಸಾದ್ ಮಾತನಾಡಿ ಜಿಲ್ಲೆಯಲ್ಲಿ ಈರುಳ್ಳಿ, ಟೊಮೆಟೋ, ಅರಿಶಿನ, ಬಾಳೆಯಂತಹ ಪ್ರಮುಖ ಬೆಳೆಯನ್ನು ಬೆಳೆಯಲಾಗುತ್ತಿದೆ. ಈ ಬೆಳೆಗೆ ತಮಿಳುನಾಡು, ಕೇರಳ ರಾಜ್ಯ ಮಾರುಕಟ್ಟೆಯನ್ನು ಜಿಲ್ಲೆಯ ಬೆಳೆಗಾರರು ಅವಲಂಬಿಸುವಂತಾಗಿದೆ. ನಿಗದಿತ ಸಮಯದಲ್ಲಿ ಉತ್ಪನ್ನಗಳನ್ನು ತಲುಪಿಸಲು ಸಾಧ್ಯವಾಗದ ಪರಿಸ್ಥಿತಿಯೂ ಹಲವಾರು ಬಾರಿ ಎದುರಿಸಬೇಕಿದೆ. ಹೀಗಾಗಿ ಜಿಲ್ಲೆಯಲ್ಲಿ ಸಂಸ್ಕರಣ ಘಟಕಗಳನ್ನು ತೆರೆಯಬೇಕು. ಇದರಿಂದ ರೈತರಿಗೆ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದರು.
ಮತ್ತೋರ್ವ ಮುಖಂಡರಾದ ಕಡಬೂರು ಮಂಜುನಾಥ್ ಮಾತÀನಾಡಿ ಕಗ್ಗಳದಹುಂಡಿಯಲ್ಲಿನ ಚೆಂಡುಮಲ್ಲಿಗೆ ಸಂಸ್ಕರಣ ಘಟಕವನ್ನು ಕೈಗಾರಿಕಾ ವಲಯ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದರು. ಹೊನ್ನೂರು ಮಹದೇವಸ್ವಾಮಿ, ಶೈಲೇಂದ್ರ, ಹೊನ್ನೂರು ಬಸವಣ್ಣ, ಕರಿಯಪ್ಪ, ಇನ್ನಿತರರು ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಜಿಲ್ಲಾ ಪಂಚಾಯತ್‍ನ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್, ಇತರರು ಸಭೆಯಲ್ಲಿ ಹಾಜರಿದ್ದರು.

ಆ. 18ರಂದು ಸಂಸದರ ಅಧ್ಯಕ್ಷತೆಯಲ್ಲಿ ಜಿಲ್ಲಾ ಅಭಿವ್ಥದ್ಧಿ ಸಮನ್ವಯ, ಉಸ್ತುವಾರಿ ಸಮಿತಿ ಸಭೆ 

ಚಾಮರಾಜನಗರ, ಆ. 17 - ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಪರಿಶೀಲನಾ ಸಭೆಯು ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 18ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಮಹಿಳಾ ಅಭಿವೃದ್ಧಿ ಕ್ಷೇತ್ರದ ಪ್ರಶಸ್ತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಆ. 17 :- ಮಹಿಳಾ ಅಭಿವೃದ್ಧಿ, ಸಶಕ್ತತೆ ಹಾಗೂ ಕಲ್ಯಾಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವ್ಯಕ್ತಿ ಹಾಗೂ ಸಂಸ್ಥೆಗೆ ನೀಡುವ ವಿವಿಧ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
2017-18ನೇ ಸಾಲಿನಲ್ಲಿ ನೀಡಲಾಗುವ ಕೇಂದ್ರ ಸರ್ಕಾರದ ನಾರಿ ಶಕ್ತಿ ಪುರಸ್ಕಾರ ಪ್ರಶಸ್ತಿಗೆ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವ್ಯಕ್ತಿ ಹಾಗೂ ಸಂಸ್ಥೆಗಳು ಪ್ರಸ್ತಾವನೆ ಸಲ್ಲಿಸಬಹುದು.
ಜಿಲ್ಲಾ, ಗ್ರಾಮ ಪಂಚಾಯಿತಿ, ಗ್ರಾಮೀಣ ಸಮುದಾಯಗಳು ಮಹಿಳಾ ಕಲ್ಯಾಣ ಕ್ಷೇತ್ರದಲ್ಲಿ ಉತ್ತಮ ಕಾರ್ಯಗಳನ್ನು ನಿರ್ವಹಿಸಿದ್ದು ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಪಂಚಾಯಿತಿಗೆ ರಾಣಿ ರುದ್ರಮ್ಮದೇವಿ ಪ್ರಶಸ್ತಿ ನೀಡಲಾಗುತ್ತದೆ.
ಮಹಿಳಾ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ನಗರ ಸ್ಥಳೀಯ ಸಂಸ್ಥೆ, ಮುನಿಸಿಪಲ್ ಸಂಸ್ಥೆ, ಕಾರ್ಪೊರೇಷನ್‍ಗಳಿಗೆ ಮಾತಾ ಜೀಜಾಬಾಯಿ ಪ್ರಶಸ್ತಿ ನೀಡಲಾಗುತ್ತದೆ. ಮಹಿಳಾ ಸಶಕ್ತತೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸಾರ್ವಜನಿಕ ಕ್ಷೇತ್ರದಂತಹ ಸಂಸ್ಥೆಗಳಿಗೆ ದೇವಿ ಅಹಲ್ಯಬಾಯಿ ಹೋಳ್ಕರ್ ಪ್ರಶಸ್ತಿ ನೀಡಲಾಗುತ್ತದೆ.
ಅರ್ಜಿ ನಮೂನೆಯನ್ನು ನಗರದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 31ರೊಳಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

ಆ. 19ರಂದು ನಗರದಲ್ಲಿ ಜಿಲ್ಲಾಡಳಿತದಿಂದ ನಾಡಪ್ರಭು ಕೆಂಪೇಗೌಡರ ಜಯಂತಿ    

ಚಾಮರಾಜನಗರ, ಆ. 17 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಗಸ್ಟ್ 19ರಂದು ನಾಡಪ್ರಭು ಕೇಂಪೇಗೌಡರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10 ಗಂಟೆಗೆ ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಜಾನಪದ ಕಲಾತಂಡಗಳೊಡನೆ ಸಾಗಲಿರುವ ನಾಡಪ್ರಭು ಕೆಂಪೇಗೌಡರ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಚಾಲನೆ ನೀಡುವರು.
ನಗರದ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಬೆಳಿಗ್ಗೆ 11 ಗಂಟೆಗೆ  ಕೆಂಪೇಗೌಡರ ಜಯಂತಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಉದ್ಘಾಟನೆ ನೆರವೇರಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ ಅವರು ಘನ ಉಪಸ್ಥಿತರಿರುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು.
ಮೈಸೂರಿನ ಆದಿಚುಂಚನಗಿರಿ ಶಾಖಾ ಮಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಸೋಮೇಶ್ವರನಾಥಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸುವರು.
ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಎಂ.ಸಿ. ಮೋಹನ್‍ಕುಮಾರಿ ಉರುಫ್ ಗೀತಾ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಆರ್.ಎಂ. ರಾಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಪಿ. ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಮೈಸೂರು ಮಹಾರಾಜ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಪಿ.ಕೆ. ಕೆಂಪೇಗೌಡ ಅವರು ಕಾರ್ಯಕ್ರಮದ ಮುಖ್ಯ ಭಾಷಣ ಮಾಡುವರು. ಜ್ಯೋತಿಗೌಡಪುರದ ಜೆ.ಬಿ. ಮಹೇಶ ಮತ್ತು ತಂಡದವರಿಂದ ಕನ್ನಡ ಗೀತೆಗಳ ಗಾಯನ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.



ಪಿ .ಎಪ್ .ಐ. ಸಂಘಟನೆ ನಿಷೇದಿಸುವಂತೆ ಪ್ರತಿಭಟನೆ 


ಚಾಮರಾಜನಗರ: ಪಿ ಎಪ್ ಐ ಸಂಘಟನೆ ನಿಷೇದಿಸುವಂತೆ ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಯುವ ಕಾರ್ಯಕರ್ತರು ಜಿಲ್ಲಾಡಳಿತ ಭವನ ಮುಂಭಾಗ ಪ್ರತಿಭಟನೆ ನಡೆಸಿದರು.‌
* ಅರಣ್ಯ ಸಚಿವ ರಮಾನಾಥ್ ರೈ ಇಂತಹ ಸಂಘಟನೆಗಳಿಗೆ ಅವರು ಬೆಂಬಲ ‌ನೀಡುತ್ತಿದ್ದಾರೆ ಎಂದು ರೈ, ಖಾದರ್,ಸಿದ್ದರಾಮಯ್ಯ ಅವರಿಗೆ ದಿಕ್ಕಾರ ಘೋಷಣೆ ಕೂಗಿ ಪ್ರತಿಭಟಿಸಿದರು.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು