Wednesday, 30 August 2017

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಹೆಚ್ಚು ಅನುದಾನ : ಸಿ.ಎಂ. (30-08-2017)

      ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಹೆಚ್ಚು ಅನುದಾನ : ಸಿ.ಎಂ. 


ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ, ಆ. 30 - ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ದೇಶದಲ್ಲೇ ಅತಿ ಹೆಚ್ಚು ಅನುದಾನ ವೆಚ್ಚ ಮಾಡುವ ಮೂಲಕ ಅನುಕೂಲ ಕಲ್ಪಿಸುತ್ತಿದೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ತಿಳಿಸಿದರು.

ಗುಂಡ್ಲುಪೇಟೆ ತಾಲೂಕಿನ ತರಕಣಾಂಬಿಯಲ್ಲಿಂದು ಗುಂಡ್ಲುಪೇಟೆ ತಾಲೂಕಿನ 131 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಯೋಜನೆ ಸೇವೆ ಲೋಕಾರ್ಪಣೆ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಇಡೀ ದೇಶದಲ್ಲೇ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನತೆಯ ಕಾರ್ಯಕ್ರಮಗಳಿಗೆ ರಾಜ್ಯಸರ್ಕಾರ ಹೆಚ್ಚಿನ ನೆರವು ನೀಡುತ್ತಾ ಬಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ 89 ಸಾವಿರ ಕೋಟಿ ರೂ. ಗಳನ್ನು ಪರಿಶಿಷ್ಟರ ಕಲ್ಯಾಣಕ್ಕೆ ವೆಚ್ಚ ಮಾಡಿದೆ. ಪ್ರಸಕ್ತ ಸಾಲಿನಲ್ಲಿ 27 ಸಾವಿರಕ್ಕೂ ಹೆಚ್ಚು ಕೋಟಿ ರೂ. ಗಳನ್ನು ಪರಿಶಿಷ್ಟ ಜಾತಿ ಮತ್ತು ವರ್ಗದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ವಿನಿಯೋಗಿಸುತ್ತಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ, ವರ್ಗದ ಜನರು ಗುತ್ತಿಗೆ ಪಡೆಯಲು ಅನುಕೂಲವಾಗುವಂತೆ ಶೇ. 24.1 ರಷ್ಟು ಮೀಸಲಾತಿ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಒಟ್ಟಾರೆ ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ ಅನುಕೂಲವಾಗುವ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ರಾಜ್ಯಸರ್ಕಾರ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರವಲ್ಲ. ತುಮಕೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೈಗೆತ್ತಿಕೊಳ್ಳುತ್ತಿದೆ. ಕಳೆದ 7 ವರ್ಷಗಳಿಂದ ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದೆ. ಕಳೆದ 3 ವರ್ಷಗಳಲ್ಲಿ ಭೀಕರ ಅಭಾವ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ. ಹೀಗಾಗಿ ಅಂತರ್ಜಲ ಹೆಚ್ಚಳಕ್ಕೆ ಪೂರಕವಾದ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದೇವೆ ಎಂದರು.
ಚಾಮರಾಜನಗರ ಜಿಲ್ಲೆಯಲ್ಲೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಚಾಮರಾಜನಗರ ತಾಲೂಕಿನಲ್ಲಿ 166 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಪೂರೈಸುವ ಸೇವೆಗೆ ಅಕ್ಟೋಬರ್ ತಿಂಗಳಲ್ಲಿ ಚಾಲನೆ ನೀಡಲಾಗುತ್ತದೆ ಎಂದ ಮುಖ್ಯಮಂತ್ರಿಯವರು ತಿಳಿಸಿದರು.
ರಾಜ್ಯಸರ್ಕಾರ 5 ರೂ. ದರದಲ್ಲಿ ತಿಂಡಿ, 10 ರೂ. ದರದಲ್ಲಿ ಊಟ ಒದಗಿಸುವ ಇಂದಿರಾ ಕ್ಯಾಂಟೀನ್‍ಗಳನ್ನು ಬೆಂಗಳೂರು ನಗರದಲ್ಲಿ ಆರಂಭಿಸಿದೆ. ಮುಂದೆ ಎಲ್ಲ ಜಿಲ್ಲಾಕೇಂದ್ರಗಳಲ್ಲಿಯೂ ಇಂದಿರಾ ಕ್ಯಾಂಟೀನ್‍ಗಳನ್ನು ಆರಂಭಿಸುವ ಉದ್ದೇಶವಿದೆ. ಬಡವರು ಹಸಿವಿನಿಂದ ಬಳಲಬಾರದು. ಪ್ರತಿಯೊಬ್ಬರಿಗೂ 2 ಹೊತ್ತಿನ ಊಟ ಸಿಗಲೇಬೇಕು ಎಂಬುದು ರಾಜ್ಯಸಕಾರದ ಮುಖ್ಯ ಆಶಯವಾಗಿದೆ. ಈ ನಿಟ್ಟಿನಲ್ಲಿ ಅರ್ಹರಿಗೆ ಪಡಿತರ ವ್ಯವಸ್ಥೆಯಡಿ ಉಚಿತ ಅಕ್ಕಿ ನೀಡುವ ಕಾರ್ಯಕ್ರಮ ಮುಂದುವರೆದಿದೆ ಎಂದರು.

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರಾದ ಯು.ಟಿ. ಖಾದರ್ ಮಾತನಾಡಿ ಜಿಲ್ಲೆಯ ಅಭಿವೃದ್ಧಿಗೆ ಮುಖ್ಯಮಂತ್ರಿಯವರು ವಿಶೇಷವಾಗಿ ಶ್ರಮಿಸುತ್ತಿದ್ದಾರೆ. ಉಸ್ತುವಾರಿ ಸಚಿವರಾಗಿದ್ದ ಮಹದೇವಪ್ರಸಾದ್ ಅವರು ಆರಂಭಗೊಳಿಸಿದ್ದ ಜನಪರ ಕಾರ್ಯಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ನೆರವು ನೀಡುತ್ತಿದ್ದಾರೆ. ಶಾಸಕರು, ಸಂಸದರು ಸೇರಿದಂತೆ ಎಲ್ಲರ ಸಹಕಾರದಿಂದ ಅಭಿವೃದ್ಧಿ ಕೆಲಸಗಳು ಸಾಗುತ್ತಿವೆ ಎಂದರು.
ಜಲಸಂಪನ್ಮೂಲ ಸಚಿವರಾದ ಎಂ.ಬಿ. ಪಾಟೀಲ್ ಅವರು ಮಾತನಾಡಿ ಜಿಲ್ಲೆಯ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲೂಕಿನ 11 ಕೆರೆಗಳಿಗೆ ನೀರು ತುಂಬಿಸುವ 53 ಕೋಟಿ ರೂ. ವೆಚ್ಚದ ಹುತ್ತೂರು ಯೋಜನೆ, ಗುಂಡ್ಲುಪೇಟೆ ತಾಲೂಕಿನ 4 ಕೆರೆಗಳಿಗೆ ನೀರು ತುಂಬಿಸುವ ರಾಘವಪುರ ಏತ ಯೋಜನೆಯು ಸಹ ಉಸ್ತುವಾರಿ ಸಚಿವರಾಗಿದ್ದ ಮಹದೇವಪ್ರಸಾದ್ ಅವರ ಕಳಕಳಿಯಾಗಿತ್ತು. ಈ ಯೋಜನೆಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಗುಂಡ್ಲುಪೇಟೆ ಭಾಗದಲ್ಲಿ ಇನ್ನೂ ಕೆಲವು ಕೆರೆಗಳನ್ನು ತುಂಬಿಸಬೇಕೆಂಬ ಬೇಡಿಕೆ ಬಂದಿದೆ, ನೀರಿನ ಲಭ್ಯತೆ ನೋಡಿಕೊಂಡು ಯೋಜನೆ ಅನುಷ್ಠಾನಕ್ಕೆ ಮುಂದಾಗುವುದಾಗಿ ತಿಳಿಸಿದರು.
ಇಂಧನ ಸಚಿವರಾದ ಡಿ.ಕೆ. ಶಿವಕುಮಾರ್ ಮಾತನಾಡಿ ರಾಜ್ಯಸರ್ಕಾರ ಜನರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸುತ್ತಿದೆ. ಈ ಹಿಂದೆ ಪ್ರಮಾಣ ಪತ್ರಗಳನ್ನು ಪಡೆಯಲು ಪಟ್ಟಣ ಪ್ರದೇಶಗಳಿಗೆ ಗ್ರಾಮೀಣ ಭಾಗದ ಜನರು ಅಲೆದಾಡಬೇಕಿತ್ತು. ಇದನ್ನು ತಪ್ಪಿಸುವ ಸಲುವಾಗಿ ಗ್ರಾಮಪಂಚಾಯಿತಿಗಳಲ್ಲಿ ಬಾಪೂಜೀ ಸೇವಾಕೇಂದ್ರಗಳನ್ನು ತೆರೆದು ಅನುಕೂಲ ಕಲ್ಪಿಸಿದೆ. ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಪಶುಭಾಗ್ಯ ಸೇರಿದಂತೆ ಇನ್ನೂ ಹಲವಾರು ಕಾರ್ಯಕ್ರಮಗಳ ಮೂಲಕ ಜನರಿಗೆ ಸೌಲಭ್ಯ ನೀಡುತ್ತಿದೆ ಎಂದರು.
ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಮಾತನಾಡಿ ಮುಖ್ಯಮಂತ್ರಿಯವರು ಚಾಮರಾಜನಗರ ಜಿಲ್ಲೆಯ ಅಭಿವೃದ್ದಿಗೆ 3 ಸಾವಿರ ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದಾರೆ. 71 ಕೆರೆಗಳನ್ನು ನೀರು ತುಂಬಿಸಲು ಬೇಕಿರುವ ಹಣಕಾಸು ನೆರವು ನೀಡುತ್ತಿದ್ದಾರೆ, ಹನೂರು ಭಾಗದಲ್ಲಿ ಶಾಶ್ವತ ಕುಡಿಯುವ ನೀರು ಯೋಜನೆ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನವಾದರೆ ಎಲ್ಲ ಭಾಗಗಳಿಗೂ ಸಂಪೂರ್ಣವಾಗಿ ನೀರು ಒದಗಿಸಿದಂತಾಗುತ್ತದೆ ಎಂದರು.
ಶಾಸಕರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಅವರು ಮಾತನಾಡಿ ಉಸ್ತುವಾರಿ ಸಚಿವರಾಗಿದ್ದ ತಮ್ಮ ಪತಿ ಮಹದೇವಪ್ರಸಾದ್ ಅವರು ತಾಲೂಕಿನ ಗ್ರಾಮಗಳಿಗೆ ಶಾಶ್ವತ ನೀರು ಪೂರೈಸಬೇಕೆಂಬ ಮಹದಾಸೆಯಿಂದ ಆರಂಭಗೊಳಿಸಿದ್ದ ಯೋಜನೆಯು ಮುಖ್ಯಮಂತ್ರಿಯವರು, ಸಚಿವರು, ಲೋಕಸಭಾ ಸದಸ್ಯರು ಸೇರಿದಂತೆ ಎಲ್ಲರ ಸಹಕಾರದಿಂದ ಸಾಕಾರಗೊಂಡಿದೆ. ಅದಕ್ಕಾಗಿ ತುಂಬು ಕೃತಜ್ಞತೆ ಸಲ್ಲಿಸುವುದಾಗಿ ನುಡಿದರು.
ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸಾಧನೆ ಮಾಡಿರುವ ಬಿ.ಎಸ್.ಎಫ್ ಸೇವೆಯಲ್ಲಿರುವ ಜಿಲ್ಲೆಯ ಶಿವಶಂಕರಪ್ಪ ಅವರನ್ನು ಮುಖ್ಯಮಂತ್ರಿಯವರು ಸನ್ಮಾನಿಸಿದರು.
ಲೋಕೋಪಯೋಗಿ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎಸ್. ಜಯಣ್ಣ, ಆರ್. ನರೇಂದ್ರ, ಆರ್. ಧರ್ಮಸೇನ, ಕಳಲೆ ಕೇಶವಮೂರ್ತಿ, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ವಿಶ್ವಕರ್ಮ ನಿಗಮದ ಅಧ್ಯಕ್ಷರಾದ ನಂದಕುಮಾರ್, ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಎಚ್.ಎನ್. ನಟೇಶ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಎ.ಪಿ.ಎಂ.ಸಿ ಅಧ್ಯಕ್ಷರಾದ ಬಿ.ಕೆ. ಶಿವಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಟಿ.ಎಚ್. ಉಮೇಶ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
     

ಸೆ. 1ರಂದು ಚಾ.ನಗರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನಾ ಸಮಾರಂಭ

ಚಾಮರಾಜನಗರ, ಆ. 30 :- ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಸೆಪ್ಟೆಂಬರ್ 1ರಂದು ಬೆಳಿಗ್ಗೆ 10.30 ಗಂಟೆಗೆ ಚಾಮರಾಜನಗರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದೆ.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಕ್ರೀಡಾಕೂಟ ಉದ್ಘಾಟಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಎಂ. ರಾಮಚಂದ್ರ ಅಧ್ಯಕ್ಷತೆ ವಹಿಸುವರು.
ನಗರಸಭೆ ಅಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಎಸ್. ಬಸವರಾಜು, ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ. ನವೀನ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್. ಬಾಲರಾಜು, ಸಿ.ಎಸ್. ಬಾಲರಾಜು, ಶಶಿಕಲಾ, ಎಂ. ಚಂದ್ರಕಲಾ ಚಂದ್ರಶೇಖರ, ಶೀಲಾ, ನಗರಸಭೆ ಸದಸ್ಯರಾದ ಎಂ. ರಾಜಶೇಖರ ಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಸೆ.. 1ರಂದು ಹರದನಹಳ್ಳಿಯಲ್ಲಿ ವಿದ್ಯುತ್ ಜನಸಂಪರ್ಕ ಸಭೆ

ಚಾಮರಾಜನಗರ, ಆ. 30:- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಹರದನಹಳ್ಳಿ ಉಪವಿಭಾಗದ ಸೆಸ್ಕ್ ಕಚೇರಿಯಲ್ಲಿ ಸೆಪ್ಟೆಂಬರ್ 1ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಜನಸಂಪರ್ಕ ಸಭೆಯನ್ನು ನಡೆಸಲಿದೆ.
ಸಾರ್ವಜನಿಕರು ಸಭೆಗೆ ಹಾಜರಾಗಿ ವಿದ್ಯುತ್ ಸಮಸ್ಯೆಗಳಿದ್ದಲ್ಲಿ ಸಭೆಗೆ ತಿಳಿಸಬೇಕೆಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಕಾಣೆಯಾದ ವ್ಯಕ್ತಿಯ ಪತ್ತೆಗೆ ಸಹಕರಿಸಿ

ಚಾಮರಾಜನಗರ, ಆ. 30 -  ತಾಲೂಕಿನ ಬಿಸಲವಾಡಿ ಗ್ರಾಮದ ಮಹದೇವಗೌಡ ಅವರು ಫೆಬ್ರವರಿ 20ರಂದು ತಮ್ಮ ಮಗ ಕೆಂಪೇಗೌಡ ಅಲಿಯಾಸ್ ಬಾಬು ಎಂಬಾತ ಮೈಸೂರಿಗೆ ಹೆÉೂೀಗಿಬರುವುದಾಗಿ ತಿಳಿಸಿ ಹೋದವನು   ಹಿಂದಿರುಗಿರುವುದಿಲ್ಲ. ನಾವು ಎಲ್ಲ ಕಡೆ ವಿಚಾರಿಸಿದರೂ ಪತ್ತೆಯಾಗಿಲ್ಲ ಎಂಬ ಕಾರಣ ನೀಡಿ ಆಗಸ್ಟ್ 11ರಂದು ದೂರು ಸಲ್ಲಿಸಿದ್ದಾರೆ.
ಕೆಂಪೇಗೌಡ ಅವರು 27 ವರ್ಷದವರಾಗಿದ್ದು 5.6 ಅಡಿ ಎತ್ತರವಿರುತ್ತಾರೆ. ಗುಂಡು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಚೆಕ್ಸ್ ಕಾಪಿ ಕಲರ್ ಶರ್ಟ್ ಧರಿಸಿರುತ್ತಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (08226-222243), ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ (08226-222092) ಅಥವಾ ಜಿಲ್ಲಾ ನಿಸ್ತಂತು ಕೊಠಡಿ (08226-222383)ಗೆ ತಿಳಿಸುವಂತೆ ನಗರದ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಎಂ.ಕೆ. ಲೋಹಿತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಸೆ. 1ರಂದು ಉದ್ಯಮಶೀಲತಾ ತಿಳುವಳಿಕಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ

ಚಾಮರಾಜನಗರ, ಆ. 30:- ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮಶೀಲತಾ ಅಭಿವೃದ್ಧಿ ಯೋಜನೆ, ವಿದ್ಯುತ್ ಮತ್ತು ತಂತ್ರಜ್ಞಾನ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ಒಂದು ದಿನದ ಉದ್ಯಮಶೀಲತಾ ತಿಳಿವಳಿಕಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾರ್ಯಕ್ರಮವು ಸೆಪ್ಟೆಂಬರ್ 1ರಂದು ಬೆಳಿಗ್ಗೆ 10 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ನಡೆಯಲಿದ್ದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರಾದ ಎಂ.ಎನ್. ಮುರುಗೇಶ್ ಉದ್ಘಾಟಿಸುವರು.  ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಶಿವಬಸವಯ್ಯ ಅಧ್ಯಕ್ಷತೆ ವಹಿಸುವರು.
ಎಸ್‍ಬಿಐ ಹಾಗೂ ಲೀಡ್‍ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಸುನಂದ, ನಬಾರ್ಡ್ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಜಗದೀಶ್ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಉಪನಿರ್ದೇಶಕರಾದ ರಾಜೇಂದ್ರ ಪ್ರಸಾದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಆ. 31ರಂದು ಮಾವಿನ ತೋಟಗಳ ಪುನಶ್ಚೇತನ, ನಿರ್ವಹಣೆ ಕುರಿತು ಕಾರ್ಯಾಗಾರ

ಚಾಮರಾಜನಗರ, ಆ. 30:- ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ,  ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಗುಂಡ್ಲುಪೇಟೆ ತಾಲೂಕು ಬೇಗೂರು ಗ್ರಾಮದ ಸರ್ಕಾರಿ ಐಟಿಐ ಕಾಲೇಜು ಎದುರು ಇರುವ  ರಾಜು ಅವರ ಮಾವಿನ ತೋಟದಲ್ಲಿ ಆಗಸ್ಟ್ 31ರಂದು ಬೆಳಿಗ್ಗೆ 10 ಗಂಟೆಗೆ ಮಾವಿನ ತೋಟಗಳ ಪುನಶ್ಚೇತನ, ನಿರ್ವಹಣೆ ಹಾಗೂ ಸವರುವಿಕೆ ಕುರಿತು ಕಾರ್ಯಾಗಾರ ಏರ್ಪಡಿಸಲಾಗಿದೆ.
ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಕಾರ್ಯಾಗಾರ ಉದ್ಘಾಟಿಸುವರು. ಶಾಸಕರಾದ ಡಾ.ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಉಪಸ್ಥಿತರಿರುವರು. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷರಾದ ಎಲ್. ಗೋಪಾಲಕೃಷ್ಣ ಕಿರುಹೊತ್ತಿಗೆ ಬಿಡುಗಡೆ ಮಾಡುವರು.
ಮೈಸೂರು ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಉಪಾಧ್ಯಕ್ಷರಾದ ಪಿ. ರಾಜಕುಮಾರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಬಸವರಾಜು, ಗುಂಡ್ಲುಪೇಟೆ ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ಎನ್. ನಟೇಶ್, ಉಪಾಧ್ಯಕ್ಷರಾದ ರೂಪ, ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಎಸ್ ಮಹೇಶ್, ಪಿ. ಚನ್ನಪ್ಪ, ಅಶ್ವಿನಿ, ರತ್ನಮ್ಮ, ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷರಾದ ಬಿ.ಕೆ. ಶ್ರೀಕಂಠಪ್ಪ, ತಾಲೂಕು ಅಧ್ಯಕ್ಷರಾದ ಹೆಚ್.ಎಸ್. ನಂಜುಂಡಸ್ವಾಮಿ, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ಶಿವಪ್ಪ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಕೆ.ಸಿ. ಮಧು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿ.ಎಸ್. ಚೇತನ್, ಉಪಾಧ್ಯಕ್ಷರಾದ ಚೈತ್ರ, ತಾಲೂಕು ಪಂಚಾಯತ್ ಸದಸ್ಯರಾದ ತಾಯಮ್ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ನಿರ್ದೇಶಕರಾದ ಬಿ.ಕೆ. ರವಿಕುಮಾರ್, ಜಿ.ಎಸ್. ಗೌಡರ್, ಹೆಚ್.ಸಿ. ಮೊರಬ್ ಹಾಗೂ ಮೊಹಮ್ಮದ್ ಇಸ್ಮಾಯಿಲ್ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.
ತಾಂತ್ರಿಕ ಅಧಿವೇಶನದಲ್ಲಿ ಮಾವಿನಲ್ಲಿ ಸವರುವಿಕೆ ಕುರಿತು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕದಿರೇಗೌಡ ಹಾಗೂ ಮಾವು ಪುನಶ್ಚೇತನ ಹಾಗೂ ನಿರ್ವಹಣೆ ಕುರಿತು ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞರಾದ ಮೋಹನ್ ಕುಮಾರ್ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.











No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು