Saturday, 26 August 2017

ಯುವ ಜನರಿಗೆ ಸ್ವಚ್ಛತೆ ಕುರಿತು ಪ್ರಬಂಧ, ಕಿರುಚಿತ್ರ ನಿರ್ಮಾಣ ಸ್ಪರ್ಧೆ (26-08-2017)

ಯುವ ಜನರಿಗೆ ಸ್ವಚ್ಛತೆ ಕುರಿತು ಪ್ರಬಂಧ, ಕಿರುಚಿತ್ರ ನಿರ್ಮಾಣ ಸ್ಪರ್ಧೆ 

ಚಾಮರಾಜನಗರ, ಆ. 26 :- ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು  ಸ್ವಚ್ಛ ಸಂಕಲ್ಪದಿಂದ ಸ್ವಚ್ಛ ಸಿದ್ಧಿ  ಎಂಬ ಘೋಷಣೆಯಡಿ ಯುವ ಜನರನ್ನು ಸ್ವಚ್ಛತೆ ಬಗ್ಗೆ ತೊಡಗಿಸಿ ಜಾಗೃತಿ ಗೊಳಿಸುವ ಉದ್ದೇಶದಿಂದ ನೆಹರು ಯುವ ಕೇಂದ್ರದ ಮೂಲಕ ಪ್ರಬಂಧ ಹಾಗೂ ಕಿರುಚಿತ್ರ ಸ್ಪರ್ಧೆಯನ್ನು ಏರ್ಪಡಿಸಿದೆ.
ಸ್ವಚ್ಚತೆಗಾಗಿ ನಾನೇನು ಮಾಡುವೇ? ಎಂಬ ಪ್ರಬಂಧ ಸ್ವರ್ಧೆಯನ್ನು ಸೆಪ್ಟಂಬರ್ 1 ರಂದು ಬೆಳಿಗ್ಗೆ 11.30 ಗಂಟೆಗೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. ಪ್ರಬಂಧವು  250 ಪದಗಳನ್ನು ಮೀರಬಾರದು. ಮೀರಿದಲ್ಲಿ ನಕಾರತ್ಮಕ ಅಂಕಗಳನ್ನು ನೀಡಲಾಗುತ್ತದೆ. ಕನ್ನಡ, ಇಂಗ್ಲೀಷ್‍ಅಥವಾ ಹಿಂದಿ ಭಾಷೆಯಲ್ಲಿ ಪ್ರಬಂಧ ಬರೆಯಬಹುದು.
ನನ್ನದೇಶವನ್ನು ಸ್ವಚ್ಛವಾಗಿಡುವಲ್ಲಿ ನನ್ನಪಾತ್ರ ಎಂಬ 2 ರಿಂದ 3 ನಿಮಿಷಗಳ ಅವಧಿಯ  ಕಿರುಚಿತ್ರವನ್ನು ಚಿತ್ರಿಸಿ ಸೆಪ್ಟಂಬರ್ 4ರೊಳಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ನೆಹರು ಯುವ ಕೇಂದ್ರಕ್ಕೆ ಸಲ್ಲಿಸಬೇಕು. ಕಿರುಚಿತ್ರದ ಉಪಶೀರ್ಷಿಕೆಯು ಇಂಗ್ಲೀಷ್ ಅಥವಾ ಹಿಂದಿ ಭಾಷೆಯಲ್ಲಿ ಇರುವುದು ಉತ್ತಮ. ಕಿರುಚಿತ್ರವನ್ನು ಸ್ಪರ್ಧಿಯೇ ಚಿತ್ರೀಕರಿಸಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಬೇಕು.
 ಸ್ಪರ್ಧೆಯಲ್ಲಿ ಮೂವರನ್ನು ಆಯ್ಕೆಮಾಡಿ ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ. ಭಾಗವಹಿಸಿದ ಇತರೆ ಸ್ಪರ್ಧಿಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ. ಜಿಲ್ಲಾ ಮಟ್ಟದ ವಿಜೇತರನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಕಳುಹಿಸಿಕೊಡಲಾಗುವುದು. ವಿವರಗಳಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ನೆಹರು ಯುವ ಕೇಂದ್ರ ದೂರವಾಣಿ ಸಂಖ್ಯೆ 08226-222120 ಸಂರ್ಪಕಿಸುವಂತೆ ಪ್ರಕಟಣೆ ತಿಳಿಸಿದೆ.

ಕೃಷಿ ಕ್ಷೇತ್ರದ ಸಂಶೋಧನೆಗಳು ಹೆಚ್ಚಾಗಲಿ : ಸಂಸದ ಧ್ರುವನಾರಾಯಣ 

ಚಾಮರಾಜನಗರ, ಆ. 26 - ಕೃಷಿ ಕ್ಷೇತ್ರದಲ್ಲಿ ರೈತರ ಕೃಷಿ ಅದಾಯ ಹೆಚ್ಚಳಕ್ಕೆ ಅನುಕೂಲವಾಗುವ  ಸಂಶೋಧನೆಗಳು ಇನ್ನೂ ಹೆಚ್ಚಾಗಬೇಕಿದೆ ಎಂದು ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅಭಿಪ್ರಾಯಪಟ್ಟರು.
ತಾಲೂಕಿನ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿಂದು ಕೇಂದ್ರ ಸರ್ಕಾರದ ನವಭಾರತ ಮಂಥನ ಸಂಕಲ್ಪದಿಂದ ಸಿದ್ಧಿ ಕಾರ್ಯಕ್ರಮದಡಿ ರೈತರ ಆದಾಯವನ್ನು ದ್ವಿಗುಣಗೊಳಿಸುವ 7 ಅಂಶಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾನಾಡಿದರು.
ಕೃಷಿ ರಂಗದಲ್ಲಿ ರೈತರಿಗೆ ಲಾಭ ತಂದುಕೊಡುವ ಸಂಶೋಧನೆ ಚಟುವಟಿಕೆಗಳು ಮತ್ತಷ್ಟು ಹೆಚ್ಚಬೇಕಿದೆ. ವಿದೇಶಗಳಲ್ಲಿ ಪ್ರತಿ ಹೆಕ್ಟೆರ್‍ಗೆ 7.9 ಟನ್ ಭತ್ತ ಉತ್ಪಾದನೆ ಇದ್ದರೆ, ಭಾರತದಲ್ಲಿ 3.6 ಟನ್ ಮಾತ್ರ ಬೆಳೆಯಲು ಮಾತ್ರ ಸಾಧ್ಯವಾಗುತ್ತಿದೆ. ಸಂಶೋಧನೆಗಳಿಗೆ ಹೆಚ್ಚಿನ ನೆರವು ದೊರೆಯಬೇಕಿದೆ. ಸಂಶೋಧನೆಗಳಿಗೆ ಹೆಚ್ಚು ಒತ್ತು ಕೊಟ್ಟಾಗ ಹೊಸ ತಳಿಗಳ ಪರಿಚಯವಾಗಿ ಇಳುವರಿ ಹೆಚ್ಚಳವಾಗಿ ರೈತರ ಆದಾಯವು ಏರಿಕೆಯಾಗಲಿದೆ ಎಂದರು.
ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಸಮಸ್ಯೆಯು ಸಹ ಕಾಡುತ್ತಿದೆ. ಇದಕ್ಕೆ ಪರ್ಯಾಯವಾಗಿ ಕೃಷಿ ಯಂತ್ರೋಪಕರಣಗಳ ಬಳಕೆ ಮಾಡಿಕೊಳ್ಳುವ ಅನಿವಾರ್ಯತೆ ಉಂಟಾಗಿದೆ. ಇದಕ್ಕೆ ಅನುಗುಣವಾಗಿ ಕೃಷಿ ಯಂತ್ರೋಪಕರಣಗಳು ಸ್ಥಳೀಯವಾಗಿ ಲಭ್ಯವಾದರೆ ಅನುಕೂಲವಾಗಲಿದೆ ಎಂದು ಧ್ರುವನಾರಾಯಣ ತಿಳಿಸಿದರು.
ಕೃಷಿ, ತೋಟಗಾರಿಕೆ ಅವಲಂಬಿತರು ನೀರಿನ ಸದ್ಭಳಕೆ ಮಾಡಿಕೊಳ್ಳಬೇಕು. ಮಿತವ್ಯಯಕಾರಿಯಾಗಿರುವ ಹನಿ ನೀರಾವರಿಯಂತಹ ಸುಧಾರಿತ ಪದ್ಧತಿಗಳ ಅಳವಡಿಕೆಗೆ ಮುಂದಾಗಬೇಕು. ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನವಾಗುತ್ತಿದ್ದು ಅಂತರ್ಜಲ ಹೆಚ್ಚಳವಾಗಲಿದೆ. ಮಣ್ಣು ಆರೋಗ್ಯ ಪರೀಕ್ಷೆ ನಡೆಸಿ ಕಾರ್ಡುಗಳನ್ನು ಸಹ ವಿತರಿಸಲಾಗುತ್ತಿದೆ. ಈ ಎಲ್ಲ ಪ್ರಯೋಜನ ಪಡೆದು ರೈತರು ಹೆಚ್ಚಿನ ಲಾಭ ಹೊಂದಬೇಕೆಂದು ಧ್ರುವನಾರಾಯಣ ಸಲಹೆ ಮಾಡಿದರು.
ರೈತರು ಸಮಗ್ರ ಬೆಳೆ ಪದ್ಧತಿಯತ್ತ ಒಲವು ತೋರಬೇಕು. ತಂತ್ರಜ್ಞಾನ ಬಳಕೆಯನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕು. ರೈತರ ಸಂಕಷ್ಟ ಪರಿಸ್ಥಿತಿ ಅರಿವು ತಮಗಿದೆ. ಕೃಷಿ, ತೋಟಗಾರಿಕೆ ಇಲಾಖೆಗಳು ನೂತನ ಕೃಷಿ ಪದ್ಧತಿ ಬಗ್ಗೆ ರೈತರ ಬಳಿಗೆ ಹೋಗಿ ಮಾರ್ಗದರ್ಶನ ಮಾಡಬೇಕು. ಇಲಾಖೆ ಕಾರ್ಯಕ್ರಮಗಳು, ಯೋಜನೆ ನೆರವು ತಲುಪಿಸುವ ಕೆಲಸ ನಿರ್ವಹಿಸಬೇಕೆಂದು ಧ್ರುವನಾರಾಯಣ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಬೆಳೆ ವಿಮೆ ನೆರವು, ತೋಟಗಾರಿಕೆ ಬೆಳೆಗಳಿಗೂ ವ್ಯಾಪಕವಾಗಿ ವಿಸ್ತರಿಸಬೇಕಿದೆ. ಪ್ರಸ್ತುತ ಸಂದರ್ಭದಲ್ಲಿ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳಗೆ ಪರಿಹಾರ ಹುಡುಕುವ ಕೆಲಸ ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ತಜ್ಞರಿಂದಲೂ ಆಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್. ಶಿವಣ್ಣ ಮಾತನಾಡಿ ಒಟ್ಟಾರೆ ಕೃಷಿ ಪ್ರದೇಶ ದಿನೆದಿನೇ ಕಡಿಮೆಯಾಗುತ್ತಿದೆ. ತರಕಾರಿ, ಹಣ್ಣು, ಬೆಳೆ ಪ್ರಮಾಣವು ಈ ಹಿಂದಿಗಿಂತಲೂ ಹೆಚ್ಚಾಗಿ ಬೆಳೆಯಲಾಗುತ್ತಿದೆ. ತಾಂತ್ರಿಕತೆ ಅಳವಡಿಕೆಯ ಪ್ರಮಾಣ ಹೆಚ್ಚಾದರೆ ರೈತರ ಆದಾಯದಲ್ಲೂ ಏರಿಕೆಯಾಗಲಿದೆ. ಹೀಗಾಗಿ 2022ರೊಳಗೆ ರೈತರ ಅದಾಯವನ್ನು ದ್ವಿಗುಣಗೊಳಿಸುವ ಕಾರ್ಯಕ್ರಮಗಳನ್ನು ಕೃಷಿ ವಿಜ್ಞಾನ ಕೇಂದ್ರಗಳು ಹಮ್ಮಿಕೊಳ್ಳುತ್ತಿವೆ ಎಂದರು.
ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕರಾದ ಡಾ. ದೊರೆಸ್ವಾಮಿ ಮಾತನಾಡಿ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ 7 ಅಂಶಗಳ ಕಾರ್ಯಕ್ರಮವನ್ನು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಮಂತ್ರಾಲಯವು ಸಿದ್ಧಪಡಿಸಿದೆ. ನೀರಾವರಿ ಸಂಪನ್ಮೂಲ ಸೌಕರ್ಯಗಳನ್ನು ಅಭಿವೃದ್ದಿಪಡಿಸುವುದು, ಸುಧಾರಿತ ಬೀಜ ಸಸಿಗಳ ಬಳಕೆ, ಸಾವಯವ ಕೃಷಿ ಅಳವಡಿಕೆ, ಮಣ್ಣು ಆರೋಗ್ಯ ಕಾಪಾಡುವುದರ ಮೂಲಕ ಉತ್ಪಾದನೆ ಹೆಚ್ಚಳ, ಗೋದಾಮು ಶೀತಲಗೃಹ ಸೌಲಭ್ಯ, ಆಹಾರ ಸಂಸ್ಕರಣೆ, ವಿದ್ಯುನ್ಮಾನ ರಾಷ್ಟ್ರೀಯ ಮಾರುಕಟ್ಟೆ ನ್ಯೂನತೆ ಸರಿಪಡಿಸುವುದು, ಸಾಂಸ್ಥಿಕ ಸಾಲ ವ್ಯವಸ್ಥೆ ಬಲಪಡಿಸುವುದು, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಜೇನುಕೃಷಿ, ಮೀನುಗಾರಿಕೆ, ಕೃಷಿ ಅರಣ್ಯ ಹಾಗೂ ಸಮಗ್ರ ಕೃಷಿ ಪದ್ದತಿ ಬಲಪಡಿಸುವುದು., ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ತಾಲೂಕು ಪಂಚಾಯತ್ ಸದಸ್ಯರಾದ ಶಿವಕುಮಾರ್, ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ. ಎಂ.ಎಸ್. ನಟರಾಜು, ಐ.ಸಿ.ಅ.ಆರ್. ಭಾಸ್ಕರ್, ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್, ತೋಟಗಾರಿಕೆ ಉಪನಿರ್ದೇಶರಾದ ಡಾ. ನಾಗರಾಜು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಆಗಸ್ಟ್ 30, 31ರಂದು ಜಿಲ್ಲಾಮಟ್ಟದ ಕ್ರೀಡಾಕೂಟ 

ಚಾಮರಾಜನಗರ, ಆ. 26- ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿನ 14ರಿಂದ 17ರ ವಯೋಮಿತಿಯ ಜಿಲ್ಲಾಮಟ್ಟದ ಪಂದ್ಯಾಟಗಳನ್ನು ಆಗಸ್ಟ್ 30 ಹಾಗೂ 31ರಂದು ತಾಲೂಕಿನ ಸಂತೇಮರಹಳ್ಳಿಯ ಜೆ.ಎಸ್.ಎಸ್. ಕ್ರೀಡಾಂಗಣದಲ್ಲಿ ಅಯೋಜಿಸಿದೆ.
ಆಗಸ್ಟ್ 30ರಂದು ಪ್ರೌಢಶಾಲಾ ವಿಭಾಗ ಹಾಗೂ 31ರಂದು ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಪಂದ್ಯಾಟಗಳು ನಡೆಯಲಿವೆ. ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ತಂಡಗಳು ಬೆಳಿಗ್ಗೆ 8.30 ಗಂಟೆಗೆ ಹಾಜರಾಗಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಲ್ಲಿ ವರದಿ ಮಾಡಿಕೊಳ್ಳುವಂತೆ ಸಾರ್ವಜನಿಕ ಶಿಕ್ಷÀ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು