ಬೆಳೆಹಾನಿ ಸಮೀಕ್ಷೆ ತ್ವರಿತ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಸೂಚನೆ
ಚಾಮರಾಜನಗರ, ಆ. 02 ಜಿಲ್ಲೆಯಲ್ಲಿ ಮಳೆ ಅಭಾವದಿಂದ ಹಾನಿಯಾಗಿರುವ ಬೆಳೆ ಸಮೀಕ್ಷೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಕೆ.ಹರೀಶ್‍ಕುಮಾರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವದಲ್ಲಿರುವ ಕೆ.ಡಿ.ಪಿ. ಸಭಾಂಗಣದಲ್ಲಿ ಇಂದು ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿ, ಸಿಬ್ಬಂದಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಆರಂಭದಲ್ಲಿ ಮಳೆ ಪ್ರಮಾಣ ಉತ್ತಮವಾಗಿತ್ತು. ಅದರೆ ಜೂನ್ ಮತ್ತು ಜುಲೈ ತಿಂಗಳಲ್ಲಿ ಮಳೆ ಪರಿಸ್ಥಿತಿ ನಿರಾಶದಾಯಕವಾಗಿದೆ. ಇದರಿಂದ ಅಭಾವ ಪರಿಸ್ಥಿತಿ ಛಾಯೆ ಕಾಣತೊಡಗಿದೆ. ಈ ಹಿನ್ನಲೆಯಲ್ಲಿ ಈ ಹಿಂದೆಯೆ ಬೆಳೆಹಾನಿ ಬಗ್ಗೆ ಗಮನಹರಿಸುವಂತೆ ಸೂಚಿಸಲಾಗಿತ್ತು. ಪರಿಸ್ಥಿತಿ ಮತ್ತಷ್ಟು ಪೂರಕವಾಗದೆ ಇರುವ ಕಾರಣ ಬೆಳೆ ನಷ್ಟವನ್ನು ತುರ್ತಾಗಿ ಪೂರ್ಣ ಗೊಳಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಬೆಳೆಹಾನಿ ವೀಕ್ಷಣೆಗೆ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿ, ಸಿಬ್ಬಂದಿ ಒಟ್ಟಾಗಿ ಜಮೀನುಗಳಿಗೆ ತೆರಳಿ ಸಮೀಕ್ಷೆ ಕಾರ್ಯ ನಡೆಸಬೇಕು. ಮಳೆ ಕೊರತೆಯಿಂದ ಉಂಟಾಗಿರುವ ಬೆಳೆ ನಷ್ಟ ಬಗ್ಗೆ ವಾಸ್ತವಿಕ ಮತ್ತು ವಿಶ್ವಾಸರ್ಹ ವರದಿ ನೀಡಬೇಕು. ಜಿಲ್ಲೆಯ ಎಲ್ಲ ಭಾಗಗಳಿಗೆ ವ್ಯಾಪಕವಾಗಿ ಭೇಟಿ ನೀಡಿ ಸಮೀಕ್ಷೆ ಮಾಡಬೇಕು ಎಂದರು.
ಬೆಳೆ ಸಮೀಕ್ಷೆ ಕೈಗೊಳ್ಳುವ ಸಂದರ್ಭದಲ್ಲಿ ಕೃಷಿ ಇಲಾಖೆಯ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು. ಅಭಾವ ಘೋಷಣೆಗೆ ಸಂಬಂಧಿಸಿದಂತೆ ಮಾನದಂಡಗಳು ಇತ್ತೀಚೆಗೆ ಬದಲಾವಣೆಯಾಗಿದೆ. ಹೀಗಾಗಿ ಬೆಳೆಹಾನಿ ಸಮೀಕ್ಷೆ ಕಾರ್ಯವನ್ನು ಅತ್ಯಂತ ಮುತುವರ್ಜಿಯಿಂದ ಅಧಿಕಾರಿಗಳು ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬೆಳೆ ವಿಮೆ ಪರಿಹಾರ ಸಂಬಂಧ ಬೆಳೆ ಕಟಾವು ಪ್ರಯೋಗ ಕಾರ್ಯವು ಸಹ ವೇಗಗತಿಯಲ್ಲಿ ನಡೆಯಬೇಕು. ಕಾಲಮಿತಿಯೊಳಗೆ ಕೆಲಸ ಪೂರ್ಣವಾಗಬೇಕು. ಇದರಿಂದ ಬೆಳೆಗಾರರಿಗೆ ಸಕಾಲಕ್ಕೆ ಪರಿಹಾರ ಲಭಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಹರೀಶ್‍ಕುಮಾರ್ ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್ ಮಾತನಾಡಿ ಬೆಳೆಹಾನಿ ಸಮೀಕ್ಷೆಯು ಅತ್ಯಂತ ನಿಖರವಾಗಿ ಕೈಗೊಳ್ಳಬೇಕಿದೆ. ಇಲಾಖೆ ಸೂಚನೆ, ಮಾರ್ಗಸೂಚಿ ಅನುಸಾರವಾಗಿಯೆ ಪ್ರತಿಯೊಂದು ಪ್ರಕ್ರಿಯೆ ನಡೆಯಬೇಕಿದೆ. ಅತ್ಯಂತ ಆದ್ಯತೆ ಮೇರೆಗೆ ಬೆಳೆಹಾನಿ ಕೆಲಸವನ್ನು ಸಮನ್ವಯದಿಂದ ನಡೆಸಿ ನಷ್ಟವನ್ನು ಗುರುತಿಸಬೇಕಿದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಇತರೆ ಇಲಾಖೆ ಅಧಿಕಾರಿಗಳಿಗೆ ಅಗತ್ಯವಿರುವ ಸಹಕಾರ ಮಾರ್ಗದರ್ಶನ ಮಾಡಲಿದ್ದಾರೆ ಎಂದರು.
ಉಪವಿಭಾಗಧಿಕಾರಿ ಎ.ಜೆ. ರೂಪ, ಜಿಲ್ಲೆಯ ತಹಸೀಲ್ದಾರರು ಸಭೆಯಲ್ಲಿ ಹಾಜರಿದ್ದರು.
ಆಗಸ್ಟ್ 4 ರಂದು ಡಿ.ದೇವರಾಜ ಅರಸು ಜನ್ಮದಿನಾಚರಣೆ ಪೂರ್ವಭಾವಿ ಸಭೆ
ಚಾಮರಾಜನಗರ, ಆ. 02 : ಜಿಲ್ಲಾಡಳಿತದ ವತಿಯಿಂದ ಡಿ.ದೇವರಾಜ ಅರಸು ಅವರ ಜನ್ಮದಿನಾಚರಣೆ ಹಮ್ಮಿಕೊಳ್ಳುವ ಸಂಬಂಧ ಚರ್ಚಿಸುವ ಸಲುವಾಗಿ ಆಗಸ್ಟ್ 4ರಂದು ಬೆಳಗ್ಗೆ 11 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.ಸಂಘಸಂಸ್ಥೆಗಳ ಪ್ರತಿನಿಧಿಗಳು, ನಾಗರಿಕರು, ಎಲ್ಲ ವರ್ಗಗಳ ಮುಖಂಡರು ಪ್ರತಿನಿಧಿಗಳು ಸಭೆಗೆ ಅಗಮಿಸಿ ಸಲಹೆ ಅಭಿಪ್ರಾಯ ನೀಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
No comments:
Post a Comment