ಗಾಂಜಾ ಬೆಳೆದ ವ್ಯಕ್ತಿಗೆ ಸಜೆ
ಚಾಮರಾಜನಗರ, ಆ. 09 :- ಅಕ್ರಮವಾಗಿ ಗಾಂಜಾ ಬೆಳೆದ ವ್ಯಕ್ತಿಯೊಬ್ಬರಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2 ವರ್ಷ ಸಜೆ ಹಾಗೂ 1000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.ಮಲೆಮಹದೇಶ್ವರ ಬೆಟ್ಟ ಠಾಣೆ ವ್ಯಾಪ್ತಿಯ ವಡಕೆಹಳ್ಳ ಗ್ರಾಮದ ಮಾದನ್ ಅಲಿಯಾಸ್ ಕುಂಜ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ತನ್ನ ಜಮೀನಿನಲ್ಲಿ ಹತ್ತಿ ಬೆಳೆ ಜತೆ 42 ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆದಿರುವುದನ್ನು ಪತ್ತೆ ಹಚ್ಚಿ 2014ರ ಜನವರಿ 28ರಂದು ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆದು ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಮಾದನ್ ಅಲಿಯಾಸ್ ಕುಂಜನಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು 2 ವರ್ಷ ಸಜೆ ಹಾಗೂ 1000 ರೂ. ದಂಡ ವಿಧಿಸಿ ಆಗಸ್ಟ್ 2ರಂದು ತೀರ್ಪು ನೀಡಿದ್ದಾರೆ.
ಗಾಂಜಾ ಮಾರಾಟ ಮಾಡಲು ಮುಂದಾದ ವ್ಯಕ್ತಿಗೆ ಸಜೆ
ಚಾಮರಾಜನಗರ, ಆ. 09 :- ಅಕ್ರಮವಾಗಿ ಗಾಂಜಾ ಸೊಪ್ಪನ್ನು ಮಾರಾಟ ಮಾಡಲು ಮುಂದಾದ ಇಬ್ಬರಿಗೆ ಒಂದು ವರ್ಷ ಸಜೆ ಹಾಗೂ 1000 ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಕೃಷ್ಣ ಹಾಗೂ ಸ್ವಾಮಿ ಅಲಿಯಾಸ್ ಪಲ್ಸರ್ ಸ್ವಾಮಿ ಶಿಕ್ಷೆಗೆ ಗುರಿಯಾದವರು. ಇವರಿಬ್ಬರು ಕಳೆದ 2015ರ ಜೂನ್ 16ರಂದು ಸಂಜೆ 6.30ರ ಸಮಯದಲ್ಲಿ ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆ ಹತ್ತಿರ ತಮ್ಮ ಮೋಟಾರು ಬೈಕಿನಲ್ಲಿ ಒಂದು ಕೆಜಿ 300 ಗ್ರಾಂನಷ್ಟು ಹದ ಮಾಡಿದ ಗಾಂಜಾ ಸೊಪ್ಪನ್ನು ಅಕ್ರಮವಾಗಿ ಮಾರಾಟ ಮಾಡುವ ಸಲುವಾಗಿ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ಆರೋಪ ರುಜುವಾತಾದ್ದರಿಂದ ಕೃಷ್ಣ ಹಾಗೂ ಸ್ವಾಮಿ ಅಲಿಯಾಸ್ ಪಲ್ಸರ್ ಸ್ವಾಮಿಗೆ ಒಂದು ವರ್ಷ ಸಜೆ ಹಾಗೂ 1000 ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ಆಗಸ್ಟ್ 7ರಂದು ತೀರ್ಪು ನೀಡಿದ್ದಾರೆ.
ಆ.10ರಂದು ಜಿಲ್ಲೆಯಲ್ಲಿ ಮುಖ್ಯಮಂತ್ರಿಯವರ ಪ್ರವಾಸ
ಚಾಮರಾಜನಗರ, ಆ. 09 - ಮುಖ್ಯಮಂತ್ರಿಯವರಾದ ಸಿದ್ಧರಾಮಯ್ಯ ಅವರು ಆಗಸ್ಟ್ 10ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ಬೆಳಿಗ್ಗೆ 10.30 ಗಂಟೆಗೆ ಹೆಲಿಕ್ಯಾಪ್ಟರ್ ಮೂಲಕ ನಗರದ ಸರ್ಕಾರಿ ಮೆಡಿಕಲ್ ಕಾಲೇಜು (ಉತ್ತುವಳ್ಳಿ) ಸಮೀಪದ ಹೆಲಿಪ್ಯಾಡ್‍ಗೆ ಆಗಮಿಸುವರು. 10.40 ಗಂಟೆಗೆ ಚಾಮರಾಜನಗರ ತಾಲೂಕಿನ ಆಲೂರಿಗೆ ತೆರಳುವರು. 11 ಗಂಟೆಗೆ ಆಲೂರಿನಲ್ಲಿ ಮಾಜಿ ರಾಜ್ಯಪಾಲರಾದ ದಿವಂಗತ ಬಿ. ರಾಚಯ್ಯನವರ ಸ್ಮಾರಕ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವರು. ಮಧ್ಯಾಹ್ನ 12.05 ಗಂಟೆಗೆ ನಗರಕ್ಕೆ ಆಗಮಿಸಿ ತಹಸೀಲ್ದಾರ್ ಕಚೇರಿ ಬಳಿ ಪಟ್ಟಣದ ಬಿ.ರಾಚಯ್ಯ ಜೋಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸುವರು ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 2.30 ಗಂಟೆಗೆ ಮೈಸೂರಿಗೆ ತೆರಳುವರೆಂದು ಪ್ರಕಟಣೆ ತಿಳಿಸಿದೆ.
ಆ. 10ರಂದು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಆ. 09 :- ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಚ್.ಸಿ. ಮಹದೇವಪ್ಪ ಅವರು ಆಗಸ್ಟ್ 10ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ಬೆಳಿಗ್ಗೆ 10.30 ಗಂಟೆಗೆ ನಗರಕ್ಕೆ ಆಗಮಿಸುವರು. ಬೆಳಿಗ್ಗೆ 11 ಗಂಟೆಗೆ ಚಾಮರಾಜನಗರ ತಾಲೂಕಿನ ಆಲೂರಿನಲ್ಲಿ ನಡೆಯಲಿರುವ ಮಾಜಿ ರಾಜ್ಯಪಾಲರಾದ ಬಿ.ರಾಚಯ್ಯನವರ ಸ್ಮಾರಕ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರೊಂದಿಗೆ ಭಾಗವಹಿಸುವರು. ಬಳಿಕ ನಗರದ ತಹಸೀಲ್ದಾರ್ ಕಚೇರಿ ಬಳಿ ನಡೆಯಲಿರುವ ಪಟ್ಟಣದ ಬಿ.ರಾಚಯ್ಯ ಜೋಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಶಿಲಾನ್ಯಾಸ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಂಜೆ 2.30 ಗಂಟೆಗೆ ಮೈಸೂರಿಗೆ ತೆರಳುವರೆಂದು ಸಚಿವರ ಅಪ್ತ ಕಾರ್ಯದರ್ಶಿ ಸಿ.ಎಂ. ರಾಜೇಂದ್ರ ತಿಳಿಸಿದ್ದಾರೆ.
ಆ. 10ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಆ. 09 - ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಯು.ಟಿ. ಖಾದರ್ ಅವರು ಆಗಸ್ಟ್ 10ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ಬೆಳಿಗ್ಗೆ 9 ಗಂಟೆಗೆ ನಗರಕ್ಕೆ ಆಗಮಿಸುವರು. ಬೆಳಿಗ್ಗೆ 11 ಗಂಟೆಗೆ ಚಾಮರಾಜನಗರ ತಾಲೂಕಿನ ಆಲೂರಿನಲ್ಲಿ ನಡೆಯಲಿರುವ ಮಾಜಿ ರಾಜ್ಯಪಾಲರಾದ ಬಿ.ರಾಚಯ್ಯನವರ ಸ್ಮಾರಕ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬಳಿಕ ನಗರದ ತಹಸೀಲ್ದಾರ್ ಕಚೇರಿ ಬಳಿ ನಡೆಯಲಿರುವ ಪಟ್ಟಣದ ಬಿ.ರಾಚಯ್ಯ ಜೋಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಶಿಲಾನ್ಯಾಸ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಂಜೆ 4 ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಎಂ.ಎಸ್. ಮಂಜುನಾಥ್ ತಿಳಿಸಿದ್ದಾರೆ.
ನಗರಸಭಾ ವ್ಯಾಪ್ತಿಯಲ್ಲಿ ಖಾಲಿ ನಿವೇಶನ ಸ್ವಚ್ಚ ಮಾಡಿಕೊಳ್ಳಲು ಸೂಚನೆ
ಚಾಮರಾಜನಗರ, ಆ. 09- ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ಖಾಲಿ ನಿವೇಶನ ಹೊಂದಿರುವ ಮಾಲೀಕರು 7 ದಿನಗಳ ಒಳಗೆ ತಮ್ಮ ನಿವೇಶನವನ್ನು ಸ್ವಚ್ಚ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ನಗರಸಭೆ ವತಿಯಿಂದ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.ನಗರಸಭೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮಾಡದೆ ಇರುವ ಖಾಲಿ ನಿವೇಶನದಲ್ಲಿ ಮುಳ್ಳಿನ ಪೊದೆಗಳು ಬೆಳೆದು ಹಂದಿ, ನಾಯಿ, ಸೊಳ್ಳೆಗಳ ವಾಸದ ತಾಣವಾಗಿ ಮಾರ್ಪಾಡಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಂಭವ ಇರುತ್ತದೆ. ಖಾಲಿ ನಿವೇಶನದ ಅಕ್ಕಪಕ್ಕದ ನಿವಾಸಿಗಳಿಗೂ ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಸಾರ್ವಜನಿಕರ ಆರೋಗ್ಯ ಮತ್ತು ನಗರದ ನೈರ್ಮಲ್ಯ ಹಿತದೃಷ್ಠಿಯಿಂದ ಕರ್ನಾಟಕ ಮುನಿಸಿಪಲ್ ಕಾಯಿದೆ 1964 ನಿಯಮ 24-25ರಂತೆ ಕ್ರಮ ವಹಿಸಲಾಗುತ್ತದೆ. ಖಾಲಿ ನಿವೇಶನ ಮಾಲೀಕರು 7 ದಿನಗಳ ಒಳಗೆ ಅವರ ನಿವೇಶನದ ಜಾಗವನ್ನು ಸ್ವಚ್ಚ ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಗರಸಭೆಯಿಂದಲೇ ಸ್ವಚ್ಚಗೊಳಿಸಿ ಖಾಲಿ ನಿವೇಶನವನ್ನು ನಗರಸಭೆ ಆಸ್ತಿಯೆಂದು ಪರಿಗಣಿಸಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತರಾದ ರಾಜಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ.10ರಂದು ಮಾಜಿ ರಾಜ್ಯಪಾಲರಾದ ಬಿ.ರಾಚಯ್ಯ ಅವರ ಸ್ಮಾರಕ ನಿರ್ಮಾಣ, ಜೋಡಿರಸ್ತೆ ಅಭಿವೃದ್ಧಿ ಕಾರ್ಯಕ್ರಮಕ್ಕೆ ಸಿಎಂ ಶಿಲಾನ್ಯಾಸ
ಚಾಮರಾಜನಗರ, ಆ. 09 :- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಲೋಕೋಪಯೋಗಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 10ರಂದು ಬೆಳಿಗ್ಗೆ 11 ಗಂಟೆಗೆ ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ಚಿರಶಾಂತಿ ಧಾಮದಲ್ಲಿ ಮಾಜಿ ರಾಜ್ಯಪಾಲರಾದ ದಿವಂಗತ ಬಿ. ರಾಚಯ್ಯನವರ 95ನೇ ಜನ್ಮ ವರ್ಷಾಚರಣೆ ಸ್ಮರಣಾರ್ಥ ಸ್ಮಾರಕ ನಿರ್ಮಾಣಕ್ಕೆ ಶಿಲಾನ್ಯಾಸ ಹಾಗೂ ನಗರದ ಬಿ. ರಾಚಯ್ಯ ಜೋಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಶಿಲಾನ್ಯಾಸ ಹಾಗೂ ಸಾರ್ವಜನಿಕ ಸಮಾರಂಭವು ಪಟ್ಟಣದಲ್ಲಿರುವ ತಹಸೀಲ್ದಾರ್ ಕಚೇರಿಯ ಹತ್ತಿರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.ಮುಖ್ಯಮಂತ್ರಿಯವರಾದ ಸಿದ್ಧರಾಮಯ್ಯ ಅವರು ಶಿಲಾನ್ಯಾಸ ನೆರವೇರಿಸುವರು. ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಜ್ಯೋತಿ ಬೆಳಗಿಸುವರು. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ಬಿ.ರಾಚಯ್ಯ ಜೋಡಿ ರಸ್ತೆ ಅಭಿವೃದ್ಧಿ ಕಾಮಗಾರಿ ನೀಲಿ ನಕ್ಷೆ ಅನಾವರಣ ಮಾಡುವರು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಹೆಚ್. ಆಂಜನೇಯ ಅವರು ದಿವಂಗತ ಬಿ. ರಾಚಯ್ಯ ಅವರ ಸ್ಮಾರಕದ ನೀಲಿ ನಕ್ಷೆ ಅನಾವರಣ ಮಾಡುವರು.
ಕಾರ್ಯಕ್ರಮದಲ್ಲಿ ದಿವಂಗತ ಬಿ. ರಾಚಯ್ಯ ಅವರ ಧರ್ಮಪತ್ನಿ ಶ್ರೀಮತಿ ಗೌರಮ್ಮ ಬಿ. ರಾಚಯ್ಯ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಗುತ್ತದೆ.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಸಂಸದರಾದ ಆರ್. ಧ್ರುವನಾರಾಯಣ, ಶಾಸಕರಾದ ಆರ್. ನರೇಂದ್ರ, ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ, ವಿಧಾನ ಪರಿಷತ್ ಶಾಸಕರಾದ ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಹÉಚ್. ಎಸ್. ನಂಜಪ್ಪ ಆಗಮಿಸುವರು.
ನಗರಸಭೆ ಅಧ್ಯಕ್ಷರಾದ ಆರ್.ಎಂ. ರಾಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸದಾಶಿವಮೂರ್ತಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಆಲೂರು ತಾಲೂಕು ಪಂಚಾಯತ್ ಸದಸ್ಯರಾದ ಶೈಲಜ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಮಂಗಲಿ, ಉಪಾಧ್ಯಕ್ಷರಾದ ಪರಿಮಳ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು
No comments:
Post a Comment