ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ಪರಿಶೀಲನೆ
ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ಪರಿಶೀಲನೆ
ಚಾಮರಾಜನಗರ, ಆ. 15 - ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಗತಿಯಲ್ಲಿರುವ ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿಯನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಇಂದು ಪರಿಶೀಲಿಸಿದರು.ಸ್ವಾತಂತ್ರೋತ್ಸವ ಕಾರ್ಯಕ್ರಮದ ಬಳಿಕ ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿಯನ್ನು ಸಕಾಲದಲ್ಲಿ ಪೂರ್ಣಗೊಳಿಸಬೇಕು. ಸದ್ಯದಲ್ಲಿಯೇ ಮುಖ್ಯಮಂತ್ರಿಯವರ ವಿಶೇಷ ಅನುದಾನದಡಿ ಕೈಗೆತ್ತಿಕೊಳ್ಳಲಿರುವ ಕ್ರೀಡಾಂಗಣದ ಇತರೆ ಕಾಮಗಾರಿ ಹಿನ್ನಲೆಯಲ್ಲಿ ಸಿಂಥೆಟಿಕ್ ಟ್ರ್ಯಾಕ್ ಮಾರ್ಕಿಂಗ್ ಕೆಲಸವನ್ನು ಸ್ವಲ್ಪ ನಿಧಾನವಾಗಿ ನಿರ್ವಹಿಸುವಂತೆ ಸೂಚಿಸಿದರು.
ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ಪ್ರದೇಶದಲ್ಲಿ ವಿವಿಧ ಆಟೋಟಗಳಿಗೂ ನಿಗದಿಯಾಗಿರುವ ಸ್ಥಳದಲ್ಲಿ ಪ್ರತ್ಯೇಕ ಕಾಮಗಾರಿಯನ್ನು ಶೀಘ್ರವೇ ಮುಗಿಸಬೇಕು. ಒಟ್ಟಾರೆ ಕಾಮಗಾರಿಯಲ್ಲಿ ನಿಗದಿ ಪಡಿಸಲಾಗಿರುವ ಎಲ್ಲ ಕೆಲಸಗಳಿಗೆ ಅಗತ್ಯವಿರುವ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಮುಖ್ಯಮಂತ್ರಿಯವರ ವಿಶೇಷ ಅನುದಾನದಡಿ 7 ಕೋಟಿ ರೂ. ಗಳನ್ನು ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದ ಒಟ್ಟಾರೆ ಅಭಿವೃದ್ಧಿಗೆ ನಿಗದಿ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ. ಅನುದಾನದಲ್ಲಿ ಕ್ರೀಡಾಂಗಣ ಸುತ್ತಲೂ ಪರಿಪೂರ್ಣವಾದ ಒಳಚರಂಡಿಯಾಗಬೇಕು. ಮಳೆಯ ನೀರು ಕ್ರೀಡಾಂಗಣದ ಒಳಗೆ ಸೇರದಂತೆ ಹೊರಭಾಗದಲ್ಲಿಯೇ ಹರಿಯಲು ಅನುವಾಗುವಂತೆ ಪೂರ್ವಸಿದ್ದತೆಯೊಂದಿಗೆ ಕೆಲಸ ಕೈಗೊಳ್ಳಬೇಕೆಂದು ಉಸ್ತುವಾರಿ ಸಚಿವರಾದ ಖಾದರ್ ಹಾಗೂ ಸಂಸದರಾದ ಧ್ರುವನಾರಾಯಣ ಸೂಚಿಸಿದರು.
ಕ್ರೀಡಾಂಗಣದಲ್ಲಿ ಕಲ್ವರ್ಟ್, ಸ್ವಾಗತ ಕಮಾನು, ಈಜುಕೊಳ, ಪ್ರೇಕ್ಷಕರ ಗ್ಯಾಲರಿ ಉತ್ತಮವಾಗಿ ನಿರ್ಮಾಣ ಮಾಡಬೇಕು. ರಾಷ್ಟ್ರೀಯ ಕಾರ್ಯಕ್ರಮಗಳ ಆಚರಣೆ, ಕ್ರೀಡಾಕೂಟ, ಇತರೆ ಪ್ರಮುಖ ಸಮಾರಂಭಗಳನ್ನು ನಡೆಸಲು ಅನುವಾಗುವಂತೆ ಶಾಶ್ವತ ವ್ಯವಸ್ಥೆಯು ಆಗಬೇಕು. ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ರಸ್ತೆ ಕಾಮಗಾರಿಯೂ ನಡೆಯಬೇಕು. ಈ ಎಲ್ಲಾ ಕಾಮಗಾರಿಗಳು ಗುಣಮಟ್ಟದಿಂದ ನಡೆಯುವಂತಾಗಲು ಅಧಿಕಾರಿಗಳು ನಿಗಾ ವಹಿಸಬೇಕೆಂದು ತಿಳಿಸಿದರು.
ನಂತರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಕಾಮಗಾರಿ ನಿರ್ವಹಣೆ ಸಂಬಂಧ ವಿವರವಾಗಿ ಚರ್ಚಿಸಿ ಅಗತ್ಯ ಸೂಚನೆಗಳನ್ನು ನೀಡಲಾಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಸಭೆ ಅಧ್ಯಕ್ಷರಾದ ಆರ್.ಎಂ. ರಾಜಪ್ಪ, ಜಿಲ್ಲಾಧಿಕಾರಿ ಬಿ. ರಾಮು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೆಶಕರಾದ ಎಂ. ಚಲುವಯ್ಯ, ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ನಿರ್ವಹಣೆ ಹೊಣೆ ಹೊತ್ತಿರುವ ಎಚ್.ಎಸ್.ಸಿ.ಎಲ್. ಸಂಸ್ಥೆಯ ಅಧಿಕಾರಿಗಳು ಹಾಜರಿದ್ದರು.
No comments:
Post a Comment