ಈ ತಿಂಗಳ ಅಂತ್ಯದೊಳಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಲೋಕಾರ್ಪಣೆ : ಎಂ.ಸಿ. ಮೋಹನಕುಮಾರಿ
ಚಾಮರಾಜನಗರ, ಆ. 01 - ಗುಂಡ್ಲುಪೇಟೆ ತಾಲೂಕಿನ 131 ಹಳ್ಳಿಗಳಿಗೆ ಕಬಿನಿ ನದಿಯಿಂದ ಶಾಶ್ವತವಾಗಿ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಈ ತಿಂಗಳ ಅಂತ್ಯದೊಳಗೆ ಲೋಕಾರ್ಪಣೆಗೊಳಿಸುವ ಉದ್ದೇಶವಿದೆ ಎಂದು ಶಾಸಕರಾದ ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಅವರು ತಿಳಿಸಿದರು.
ನಂಜನಗೂಡು ತಾಲೂಕಿನ ಹುಲ್ಲಳ್ಳಿ ಬಳಿ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಶುದ್ಧೀಕರಣ ಘಟಕ, ಜಾಕ್ ವೆಲ್ ಸ್ಥಳ ಮತ್ತು ಗುಂಡ್ಲುಪೇಟೆ ತಾಲೂಕಿನ ಕುರುಬರ ಹುಂಡಿಯಲ್ಲಿ ಜಲಸಂಗ್ರಹಾಗಾರಗಳಿಗೆ ಇಂದು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.ಗುಂಡ್ಲುಪೇಟೆ ತಾಲೂಕಿನ ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರು ಪೂರೈಸುವ 205 ಕೋಟಿ ರೂ ವೆಚ್ಚದ ಯೋಜನೆ ಕೆಲಸವು ಶೇ. 98ರಷ್ಟು ಪೂರ್ಣಗೊಂಡಿದೆ. ಉಳಿದ ಕೆಲಸಗಳು ತ್ವರಿತವಾಗಿ ನಡೆಯುತ್ತಿದೆ. ಒಟ್ಟು 403 ಕಿ.ಮೀ.ನಷ್ಟು ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಕಚ್ಚಾನೀರನ್ನು ಗ್ರಾಮಗಳಿಗೆ ಪೂರೈಸಲಾಗುತ್ತಿದೆ. ಇನ್ನು 15 ರಿಂದ 20 ದಿನಗಳಲ್ಲಿ ಶುದ್ಧ ಕುಡಿಯುವ ನೀರನ್ನು ಎಲ್ಲ ಗ್ರಾಮಗಳಿಗೆ ಪೂರೈಸಲಾಗುತ್ತದೆ ಎಂದರು.
ಉಸ್ತುವಾರಿ ಸಚಿವರಾಗಿದ್ದ ಎಚ್.ಎಚ್. ಮಹದೇವಪ್ರಸಾದ್ ಅವರ ಕನಸಿನ ಯೋಜನೆ ಬಹುಗ್ರಾಮ ಕುಡಿಯುವ ನೀರು ಯೋಜನೆಯು ಕಾಲಮಿತಿಯೊಳಗೆ ಪೂರ್ಣವಾಗಲು ತಡವಾಯಿತು. ಮರಳಿನ ಅಭಾವ, ನೋಟು ಅಮಾನ್ಯ ಕಾರಣ ಸೇರಿದಂತೆ ಕೆಲವು ತಾಂತ್ರಿಕ ತೊಂದರೆಗಳಿಂದ ಯೋಜನೆ ವಿಳಂಬವಾಯಿತು. ಆದರೂ ಗುಣಮಟ್ಟದ ಕೆಲಸ ನಡೆದಿದ್ದು ಯೋಜನೆ ಸಾಕಾರವಾಗುವ ಹಂತಕ್ಕೆ ಬಂದಿರುವುದು ಸಂತಸ ತಂದಿದೆ. ಆಗಸ್ಟ್ ಕೊನೆಯ ವಾರದಲ್ಲಿ ಮುಖ್ಯಮಂತ್ರಿಯವರಿಂದ ಕುಡಿಯುವ ನೀರಿನ ಯೋಜನೆಯನ್ನು ಜನತೆಯ ಸೇವೆಗೆ ಸಮರ್ಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಿದ್ದೇವೆ ಎಂದು ಶಾಸಕರು ತಿಳಿಸಿದರು.
ಕುಡಿಯುವ ನೀರು ಯೋಜನೆ ಕಾಮಗಾರಿ ನಿರ್ವಹಣೆಯಲ್ಲಿ ಸಾಕಷ್ಟು ಮಂದಿ ಪರಿಶ್ರಮವಿದೆ. ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಕ್ಕಾಗಿ ಹೆಚ್ಚಿನ ಸಂಖ್ಯೆ ಕಾರ್ಮಿಕರು ಅಧಿಕಾರಿಗಳು ದುಡಿದಿದ್ದಾರೆ. ಯೋಜನೆಯಡಿ ನೀರು ಪೂರೈಸುವ ವ್ಯವಸ್ಥೆಯು ಅತ್ಯಾಧುನಿಕವಾಗಿದ್ದು ಇನ್ನುಮುಂದೆ ಕೇವಲ ಎಂಟು ಮಂದಿ ಮಾತ್ರ ಕಾರ್ಯನಿರ್ವಹಿಸಲಿದ್ದಾರೆ. ಉಳಿದೆಲ್ಲವು ಸ್ವಯಂಚಾಲಿತವಾಗಿ ನಿರ್ವಹಣೆಯಾಗಲಿರುವುದು ವಿಶೇಷವಾಗಿದೆ ಎಂದರು.
ಪ್ರತಿನಿತ್ಯ ಶುದ್ದೀಕರಣ ಘಟಕದಲ್ಲಿರುವ ಪ್ರಯೋಗಾಲಯದಲ್ಲಿ ನೀರಿನ ಮಾದರಿಯನ್ನು ಎರಡು ಬಾರಿ ಪರೀಕ್ಷೆ ಮಾಡಲಾಗುತ್ತದೆ. ಶುದ್ಧ ನೀರನ್ನು ಖಾತರಿಪಡಿಸಿಕೊಂಡೇ ಜನರಿಗೆ ಪೂರೈಸಲಾಗುತ್ತದೆ. ನೀರು ಪೂರೈಸಲು ಬಳಸುವ ಬಹುಮುಖ್ಯ ಯಂತ್ರಗಳು, ವಿದ್ಯುತ್ ವ್ಯವಸ್ಥೆಯನ್ನು ಎರಡು ಬಗೆಯಲ್ಲಿ ಸಿದ್ಧಮಾಡಿಕೊಳ್ಳಲಾಗಿದೆ. ಒಂದು ತಾಂತ್ರಿಕವಾಗಿ ತೊಂದರೆ ಕಂಡುಬಂದರೆ ಮತ್ತೊಂದು ವ್ಯವಸ್ಥೆ, ಯಂತ್ರಗಳ ಮೂಲಕ ನೀರು ಸರಬರಾಜು ಮಾಡುವ ಕೆಲಸ ಮುಂದುವರೆಯಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆ ಬರುವುದಿಲ್ಲ ಎಂದು ಶಾಸಕರು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ದೇವರಾಜು ಮಾತನಾಡಿ ಗುಂಡ್ಲುಪೇಟೆ ತಾಲೂಕಿನ ಒಟ್ಟು 156 ಜನವಸತಿ ಪ್ರದೇಶಗಳಿಗೆ ಯೋಜನೆಯಡಿ ಕುಡಿಯುವ ನೀರು ಪೂರೈಕೆಯಾಗಲಿದೆ. ವಿದ್ಯುತ್ ಪೂರೈಕೆಗಾಗಿ ಎಕ್ಸ್ ಪ್ರೆಸ್ ಲೈನ್ ಮೂಲಕವೇ ಸಂಪರ್ಕ ಪಡೆಯಲಾಗಿದೆ. ಹೀಗಾಗಿ ವಿದ್ಯುತ್ ಅಡಚಣೆಗೆ ಅವಕಾಶವಾಗುವುದಿಲ್ಲ. ಈಗಾಗಲೇ ಅಳವಡಿಸಿರುವ ಪೈಪ್ ಲೈನ್ ಅನ್ನು ಕಚ್ಚಾನೀರು ಪೂರೈಸುವ ಮೂಲಕ ಪರೀಕ್ಷಿಸಲಾಗಿದೆ. ತೊಂದರೆ ಕಂಡುಬಂದಿರುವ ಕಡೆ ಸರಿಪಡಿಸುವ ಕೆಲಸವೂ ನಡೆಯುತ್ತಿದೆ ಎಂದರು.
ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ಎನ್. ನಟೇಶ್, ಮುಖಂಡರಾದ ಬಿ.ಎಂ. ಮುನಿರಾಜು, ಡಿ. ಮಾದಪ್ಪ, ಕೊಡಸೋಗೆ ಶಿವಬಸಪ್ಪ, ಮಹದೇವಪ್ಪ, ಮಂಚಳ್ಳಿ ಲೋಕೇಶ್, ನೀಲಕಂಠಪ್ಪ, ಬಿ.ಎಸ್. ಸಿದ್ದಪ್ಪ, ನಂಜನಾಯ್ಕ, ಉಮೇಶ್, ಶಿವಸ್ವಾಮಿ, ಇತರ ಮುಖಂಡರು, ಅಧಿಕಾರಿಗಳು ಹಾಜರಿದ್ದರು.
ಗುಂಡ್ಲುಪೇಟೆ : ಆ. 11 ರಂದು ಪ.ಜಾ. ಪ.ವರ್ಗಗಳ ಹಿತರಕ್ಷಣಾ ಸಮಿತಿ ಸಭೆ
ಚಾಮರಾಜನಗರ, ಆ. 01 - ಗುಂಡ್ಲುಪೇಟೆ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯು ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 11ರಂದು ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆ ತಾಲೂಕು ಕಚೇರಿ ಸಭಾ ಭವನದಲ್ಲಿ ನಡೆಯಲಿದೆ.ಪರಿಶಿಷ್ಟ ಜಾತಿ, ವರ್ಗದವರು ತಮ್ಮ ಸಮಸ್ಯೆ, ಕುಂದುಕೊರತೆಗಳ ಬಗ್ಗೆ ಆಗಸ್ಟ್ 5ರೊಳಗೆ ಸ್ಪಷ್ಟ ಲಿಖಿತವಾಗಿ ಸಮಿತಿಯ ಸದಸ್ಯರಾದ ಸುಭಾಷ್ ಮಾಡ್ರಹಳ್ಳಿ (ಮೊಬೈಲ್ 9743699073), ಮಹದೇವಚಾರಿ ಮೂಖಹಳ್ಳಿ (ಮೊ.8762342103), ಶ್ರೀಧರ್ ಕಾರೇಮಾಳ (ಮೊ. 8762342103) ಅವರುಗಳಿಗೆ ಅಥವಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಗುಂಡ್ಲುಪೇಟೆ ಇವರಿಗೆ ಸಲ್ಲಿಸಲು ಕೋರಿದೆ ಎಂದು ಪ್ರಕಟಣೆ ತಿಳಿಸಿದೆ.
ಆಧಾರ್ ಯೋಜನೆಯಡಿ ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಆ. 01 - ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ವಿಕಲಚೇತನರಿಗಾಗಿ ಸ್ವಯಂ ಉದ್ಯೋಗಕ್ಕೆ ಆಧಾರ್ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.18 ರಿಂದ 45ರ ವರ್ಷದೊಳಗಿನ ನಿರುದ್ಯೋಗಿ ವಿಕಲಚೇತನರು ಅರ್ಹರು. ಕರ್ನಾಟಕ ರಾಜ್ಯದಲ್ಲಿ 10 ವರ್ಷ ವಾಸವಾಗಿರಬೇಕು. ಸರ್ಕಾರಕ್ಕೆ ಸುಸ್ತಿದಾರರಾಗಿರಬಾರದು. ಸ್ವಯಂ ಉದ್ಯೋಗ ಕೈಗೊಳ್ಳಲು ಸ್ಥಳಾವಕಾಶ ಹೊಂದಿರಬೇಕು.
ಅರ್ಜಿಯೊಂದಿಗೆ ವಿಕಲತೆ ದೃಢೀಕರಿಸುವ ಗುರುತಿಸುವ ಗುರುತಿನ ಚೀಟಿ, ವಯಸ್ಸಿನ ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಪ್ರತಿ, ಬ್ಯಾಂಕ್ ಖಾತೆ ವಿವರ ಪ್ರತಿ, ವಿಕಲತೆ ದೃಢೀಕರಿಸುವ ಇತ್ತೀಚಿನ ಎರಡು ಭಾವಚಿತ್ರ, ಈ ಹಿಂದೆ ಯೋಜನೆಯಡಿ ಸೌಲಭ್ಯ ಪಡೆದಿಲ್ಲವೆಂಬ ಬಗ್ಗೆ ತಾಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂಆರ್‍ಡಬ್ಲ್ಯು) ಅವರಿಂದ ದೃಢೀಕರಣ ಪತ್ರ, ವ್ಯಾಪಾರ ಮಾಡಲು ಉದ್ದೇಶಿಸಿದ ಯೋಜನಾ ವರದಿಗಳೊಂದಿಗೆ ಸೆಪ್ಟೆಂಬರ್ 15ರೊಳಗೆ ಸಂಬಂಧಪಟ್ಟ ತಾಲೂಕಿನ ವಿವಿದೋದ್ದೇಶÀ ಪುನರ್ವಸತಿ ಕಾರ್ಯಕರ್ತರು, ತಾಲೂಕು ಪಂಚಾಯಿತಿ ಇವರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಕರಿಕರ ಕಲ್ಯಾಣಾಧಿಕಾರಿಗಳ ಕಚೇರಿ (ದೂ.ಸಂ.08226-223688, 224688) ಸಂಪರ್ಕಿಸುವಂತೆ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ. 8ರಂದು ಗುಂಡ್ಲುಪೇಟೆಯಲ್ಲಿ ನಿವೇಶನ ಹಂಚಿಕೆ ಮೇಳ
ಚಾಮರಾಜನಗರ, ಆ. 01 :- ಕರ್ನಾಟಕ ಗೃಹಮಂಡಳಿಯು ಗುಂಡ್ಲುಪೇಟೆ ಪಟ್ಟಣದ ಪಂಜನಹಳ್ಳಿ ಬಡಾವಣೆಯಲ್ಲಿ ಖಾಲಿ ಉಳಿದಿರುವ ನಿವೇಶನಗಳನ್ನು ಸ್ಥಳದಲ್ಲಿಯೇ ಹಂಚಿಕೆ ಮಾಡುವ ಸಲುವಾಗಿ ಆಗಸ್ಟ್ 8ರಂದು ಬೆಳಿಗ್ಗೆ 11 ಗಂಟೆಯಿಂದ ಹಂಚಿಕೆ ಮೇಳ ನಡೆಸಲಿದೆ.ಕರ್ನಾಟಕ ಗೃಹಮಂಡಳಿಯು ಪಂಜನಹಳ್ಳಿ ಬಡಾವಣೆಯಲ್ಲಿ ವಿವಿಧ ವರ್ಗದ ನಿವೇಶನಗಳನ್ನು ಎಲ್ಲಾ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಿ ಈಗಾಗಲೇ ಹಂಚಿಕೆ ಮಾಡಿದೆ. ಕೆಲ ಖಾಲಿ ಉಳಿದಿರುವ ನಿವೇಶನಗಳನ್ನು ಆಗಸ್ಟ್ 8ರಂದು ಹಂಚಿಕೆ ಮೇಳದಲ್ಲಿ ಹಂಚಲಿದೆ. ಆಸಕ್ತರು ನಿಗಧಿತ ಹಣ ಪಾವತಿಸಿ ಸ್ಥಳದಲ್ಲಿಯೇ ನಿವೇಶನ ಹಂಚಿಕೆ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕರ್ನಾಟಕ ಗೃಹಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ದೂ.ಸಂ. 0821-2343094 ಹಾಗೂ ಚಾಮರಾಜನಗರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮೊಬೈಲ್ ಸಂಖ್ಯೆ 9448470311 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸರ್ವೇಶ್ ಅವರಿಗೆ ಆತ್ಮೀಯ ಬೀಳ್ಕೊಡುಗೆ
ಚಾಮರಾಜನಗರ, ಆ. 01 :- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಕಾರ್ಯನಿರ್ವಹಿಸಿ ವಯೋನಿವೃತ್ತರಾದ ಸರ್ವೇಶ್ ಅವರನ್ನು ಸೋಮವಾರ ಜಿಲ್ಲಾಡಳಿತದ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.ಕಳೆದ ಹಲವು ತಿಂಗಳುಗಳಿಂದ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ವೇಶ್ ಅವರಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಶಾಲು ಹೊದಿಸಿ ಫಲಪುಷ್ಪ ನೀಡುವ ಮೂಲಕ ಗೌರವಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ಅವರು ಸರ್ಕಾರಿ ವೃತ್ತಿ ಜೀವನದಲ್ಲಿ ನಿವೃತ್ತಿ ಎಂಬುದು ಎಲ್ಲರಿಗೂ ಒಂದಲ್ಲ ಒಂದು ದಿನ ಬರಲಿದೆ. ಕರ್ತವ್ಯದಲ್ಲಿ ಇರುವಷ್ಟು ಸಮಯವು ಸೇವೆಯನ್ನು ಸಮರ್ಪಕವಾಗಿ ಸಲ್ಲಿಸಬೇಕಿದೆ. ತಾಳ್ಮೆ, ಸಹನೆ ಮನೋಭಾವನೆಯನ್ನು ಮೈಗೂಡಿಸಿಕೊಂಡು ಸಮಚಿತ್ತದಿಂದ ಕರ್ತವ್ಯ ಅವಧಿಯನ್ನು ಪೂರೈಸಬೇಕಿರುವುದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಸರ್ವೇಶ್ ಅವರು ಈ ಹಿಂದೆ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬಹುಕಾಲ ಕಾರ್ಯನಿರ್ವಹಿಸಿದ್ದಾರೆ. ನಾನೂ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಮೈಸೂರು ಆಡಳಿತ ತರಬೇತಿ ಸಂಸ್ಥೆಯಲ್ಲಿ ಸರ್ವೇಶ್ ಅವರ ವಿದ್ಯಾರ್ಥಿಗಳಾಗಿ ತರಬೇತಿ ಪಡೆದಿದ್ದೇವೆ. ಹೀಗಾಗಿ ಸರ್ವೇಶ್ ಅವರು ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಅಪಾರ ಅಧಿಕಾರಿ ಶಿಷ್ಯವೃಂದವನ್ನು ಹೊಂದಿದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಹರೀಶ್ ಕುಮಾರ್ ತಿಳಿಸಿದರು.
ಸರ್ವೇಶ್ ಅವರು ಸೇವಾ ಅವಧಿಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಹಸನ್ಮುಖಿಯಾಗಿಯೇ ಎಲ್ಲ ಕೆಲಸವನ್ನು ನಿಭಾಯಿಸಿಕೊಂಡು ಸೇವಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಇನ್ನೂ ಉತ್ಸಾಹದ ಚಿಲುಮೆಯಾಗಿರುವ ಸರ್ವೇಶ್ ಅವರು ನಿವೃತ್ತಿ ನಂತರವೂ ಸಂಪನ್ಮೂಲ ವ್ಯಕ್ತಿಯಾಗಿ ಮತ್ತಷ್ಟು ಮಂದಿಗೆ ತರಬೇತಿ ಉಪನ್ಯಾಸ ನೀಡಲಿ. ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಜಿಲ್ಲಾಧಿಕಾರಿ ಹರೀಶ್ ಕುಮಾರ್ ಹಾರೈಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಮಾತನಾಡಿ ತಾವೂ ಸಹ ಮೈಸೂರು ಆಡಳಿತ ತರಬೇತಿ ಸಂಸ್ಥೆಯಲ್ಲಿ ಸರ್ವೇಶ್ ಅವರ ವಿದ್ಯಾರ್ಥಿಯಾಗಿದ್ದನ್ನು ಸ್ಮರಿಸುತ್ತೇನೆ. ಸದಾ ಕಾಲ ಲವಲವಿಕೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ವೇಶ್ ಅವರ ವೃತ್ತಿಜೀವನ ಎಲ್ಲರಿಗೂ ಮಾದರಿಯಾಗಿದೆ ಎಂದು ಅಭಿಮಾನದಿಂದ ನುಡಿದರು.
ಗೌರವ ಸ್ವೀಕರಿಸಿ ಮಾತನಾಡಿದ ಸರ್ವೇಶ್ ಅವರು ತಮ್ಮ ಸೇವಾ ಅವಧಿ ಉದ್ದಕ್ಕೂ ನನಗೆ ಅತ್ಯುತ್ತಮ ಸಹಕಾರ ಲಭಿಸಿದೆ. ತಮ್ಮ ವೃತ್ತಿ ಜೀವನದ ಕೊನೆಯ ಅವಧಿಯನ್ನು ಚಾಮರಾಜನಗರ ಜಿಲ್ಲೆಯಲ್ಲಿ ಸಲ್ಲಿಸಿದ ಬಗ್ಗೆ ಅತೀವ ಹೆಮ್ಮೆಯಿದೆ. ಈ ಸಂದರ್ಭದಲ್ಲಿ ಎಲ್ಲ ಹಿರಿಯ ಕಿರಿಯ ಅಧಿಕಾರಿಗಳ ಬೆಂಬಲ ಪ್ರೋತ್ಸಾಹವನ್ನು ಎಂದಿಗೂ ಮರೆಯುವಂತಿಲ್ಲ ಎಂದರು.
ಆಹಾರ ಇಲಾಖೆ ಉಪನಿರ್ದೇಶಕರಾದ ಆರ್. ರಾಚಪ್ಪ, ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್, ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕರಾದ ಸೋಮಸುಂದರ್, ಸಹಕಾರ ಇಲಾಖೆಯ ಜಿಲ್ಲಾ ಅಧಿಕಾರಿ ಶಶಿಧರ್, ಕೊಳ್ಳೇಗಾಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಸರ್ವೇಶ್ ಅವರ ಸೇವೆ, ಸ್ನೇಹ ಮನೋಭಾವನೆ ಕುರಿತು ಗುಣಗಾನ ಮಾಡಿದರು.
No comments:
Post a Comment