Thursday, 24 August 2017

ಶಾಸಕರಿಂದ ಜಿಲ್ಲಾಸ್ಪತ್ರೆ ಭೇಟಿ : ವಿಶೇಷ ನವಜಾತ ಶಿಶು ಚಿಕಿತ್ಸಾ ಘಟಕ ಪರಿಶೀಲನೆ (24-08-2017)

ಶಾಸಕರಿಂದ ಜಿಲ್ಲಾಸ್ಪತ್ರೆ ಭೇಟಿ : ವಿಶೇಷ ನವಜಾತ ಶಿಶು ಚಿಕಿತ್ಸಾ ಘಟಕ ಪರಿಶೀಲನೆ  


(ವರದಿ:ವಿ.ಎಸ್.ಎಸ್)  
ಚಾಮರಾಜನಗರ, ಆ. 24 - ನಗರದ ಜಿಲ್ಲಾ ಅಸ್ಪತ್ರೆಯಲ್ಲಿರುವ ವಿಶೇಷ ನವಜಾತ ಶಿಶು ಚಿಕಿತ್ಸಾ ಘಟಕಕ್ಕೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಇಂದು ಭೇಟಿ ನೀಡಿ ಘಟಕದ ಕಾರ್ಯವೈಖರಿ ಮತ್ತು ಚಿಕಿತ್ಸೆ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಇತ್ತೀಚೆಗೆ ಕೆಲ ನವಜಾತ ಶಿಶು ಮರಣ ಹೊಂದಿದ ವರದಿಗಳ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಅಸ್ಪತ್ರೆಯಲ್ಲಿರುವ ನವಜಾತ ಶಿಶು ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿ, ಅಲ್ಲಿನ ಚಿಕಿತ್ಸೆ ವಿಧಾನ ಮತ್ತು ಸೂಕ್ತ ವ್ಯವಸ್ಥೆಗಳ ಬಗ್ಗೆ ಸ್ಥಾನಿಕ ವೈದ್ಯಾಧಿಕಾರಿ ಡಾ. ಕೃಷ್ಣಪ್ರಸಾದ್‍ರಿಂದ ಮಾಹಿತಿ ಪಡೆದುಕೊಂಡರು.
ನವಜಾತ ಶಿಶುಗಳನ್ನು ವಿಶೇಷ ಘಟಕದಲ್ಲಿಟ್ಟು ಚಿಕಿತ್ಸೆ ನೀಡುತ್ತಿರುವ ಕೇಂದ್ರವನ್ನು ಪರಿಶೀಲನೆ ಮಾಡಿ ಬಳಿಕ ಮಕ್ಕಳ ವಾರ್ಡುಗಳಿಗೆ ತೆರೆಳಿ ಸೂಕ್ತ ಚಿಕಿತ್ಸೆ ದೊರೆಯುತ್ತಿರುವ ಬಗ್ಗೆ ಪೋಷಕರಿಂದ ಅಭಿಪ್ರಾಯ ಪಡೆದುಕೊಂಡರು.
ನಂತರ ನೂತನ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಕೊಳಚೆ ನೀರು ಸಂಗ್ರಹವಾಗುತ್ತಿರುವುದನ್ನು ತಪ್ಪಿಸಲು ಹಾಗೂ ಪೈಪ್‍ಲೈನ್ ವ್ಯವಸ್ಥೆ ಅಳವಡಿಸುವ ಕಾಮಗಾರಿಯನ್ನು ಶಾಸಕರು ವೀಕ್ಷಿಸಿದರು. ಅಸ್ಪತ್ರೆಯ ವಿವಿಧ ವಾರ್ಡುಗಳ ದುರಸ್ತಿ ಮತ್ತು  ನೂತನ ಪೈಪ್‍ಲೈನ್ ಆಳವಡಿಕೆ ಕಾಮಗಾರಿಗೆ 83 ಲಕ್ಷ ರೂ. ಮಂಜೂರಾಗಿದ್ದು, ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ತಾಕೀತು ಮಾಡಿದರು.
ಬಳಿಕ ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ ಕೋಲಾರ ಜಿಲ್ಲೆ ಅಸ್ಪತ್ರೆಯÀಲ್ಲಿ ಇತ್ತಿಚೆಗೆ ಕೆಲವು ನವಜಾತ ಶಿಶುಗಳು ಸಾವಿಗೀಡಾದ ವರದಿಗಳ ಹಿನ್ನಲೆಯಲ್ಲಿ ಇಲ್ಲಿನ ವಿಶೇಷ ನವಜಾತ ಶಿಶುಗಳ ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಸಂಬಂಧಪಟ್ಟ ವೈದ್ಯಾಧಿಕಾರಿಗಳಿಗೆ ಸೂಕ್ತÀ ಸಲಹೆ ನೀಡಿದ್ದು, ಮಕ್ಕಳ ಚಿಕಿತ್ಸೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು, ವಿಶೇಷ ಘಟಕದ ಚಿಕಿತ್ಸೆ ಘಟಕಕ್ಕೆ ಅತ್ಯವಶÀಕವಾಗಿರುವ ಔಷಧಿ ದಾಸ್ತಾನು ಮಾಡುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಸರ್ಕಾರ ಬಡವರ ಆರೋಗ್ಯ ಸೇವೆಗಾಗಿ ಕೋಟ್ಯಾಂತರ ರೂ. ವೆಚ್ಚ ಮಾಡುತ್ತಿದೆ. ಸರ್ಕಾರಿ ಅಸ್ಪತ್ರೆಯಲ್ಲಿ ಉತ್ತಮ ಆರೋಗ್ಯ ಸೇವೆ ದೊರೆಯುತ್ತಿದೆ. ಅಸ್ಪತ್ರೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಲಕರಣೆಗಳನ್ನು ನೀಡಲಾಗುತ್ತಿದೆ. ಆರೋಗ್ಯ ಸೇವೆಯನ್ನು ನಾಗರಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಆರ್.ಎಂ. ರಾಜಪ್ಪ, ಪೌರಾಯುಕ್ತ ರಾಜಣ್ಣ, ತಹಶೀಲ್ದಾರ್ ಪುರಂದರ್, ತಾ.ಪಂ. ಸದಸ್ಯ ಪುಟ್ಟಸ್ವಾಮಿ, ಡಾ. ಮಾರುತಿ, ಡಾ. ನವೀನ್ ಮೊದಲಾದವರು ಹಾಜರಿದ್ದರು.

ಆ. 26ರಂದು ರೈತರ ಆದಾಯವನ್ನು ದ್ವಿಗುಣಗೊಳಿಸುವ 7 ಅಂಶಗಳ ಕಾರ್ಯಕ್ರಮ 

(ವರದಿ:ವಿ.ಎಸ್.ಎಸ್)  
   
ಚಾಮರಾಜನಗರ, ಆ. 24  - ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನವಭಾರತ ಮಂಥನ ಸಂಕಲ್ಪದಿಂದ ಸಿದ್ಧಿಯಡಿ 2022ರೊಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ 7 ಅಂಶಗಳ ಕುರಿತು ರೈತರಿಗೆ ಆಗಸ್ಟ್ 26ರಂದು ಮಧ್ಯಾಹ್ನ 2 ಗಂಟೆಗೆ ಹರದನಹಳ್ಳಿಯ ಫಾರಂನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನೀರಾವರಿ ಸಂಪನ್ಮೂಲ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಿ ನೀರಾವರಿ ಕ್ಷೇತ್ರವನ್ನು ಹೆಚ್ಚಿಸುವುದು. ಸುಧಾರಿತ ಬೀಜ, ಸಸಿಗಳ ಬಳಕೆ, ಸಾವಯವ ಕೃಷಿ ಅಳವಡಿಕೆ ಹಾಗೂ ಮಣ್ಣು ಆರೋಗ್ಯ ಕಾಪಾಡುವ ಮೂಲಕ ಉತ್ಪಾದಕತೆ ಹೆಚ್ಚಿಸುವುದು. ಕೊಯ್ಲೋತ್ತರ ನಷ್ಟವನ್ನು ಕಡಿಮೆ ಮಾಡಲು ಗೋದಾಮು ಹಾಗೂ ಶೀತಲ ಗೃಹಸೌಲಭ್ಯ ಬಲಪಡಿಸುವುದು. ಆಹಾರ ಸಂಸ್ಕರಣೆ ಮುಖಾಂತರ ಕೃಷಿ ಉತ್ಪಾದನೆಯ ಮೌಲ್ಯವರ್ಧನೆ ಮಾಡುವುದು.
ವಿದ್ಯುನ್ಮಾನ-ರಾಷ್ಟ್ರೀಯ ಕೃಷಿ ಮಾರುಕಟ್ಟೆ ಮೂಲಕ ಕೃಷಿ ಮಾರುಕಟ್ಟೆಯ ನ್ಯೂನತೆಗಳನ್ನು ಸರಿಪಡಿಸುವುದು. ಕೃಷಿ ಕ್ಷೇತ್ರದಲ್ಲಿ ನಷ್ಟವನ್ನು ತಪ್ಪಿಸಲು ಹಾಗೂ ಕೃಷಿ ಬೆಳವಣಿಗೆ ಹೆಚ್ಚಿಸಲು ಸಾಂಸ್ಥಿಕ ಸಾಲ ವ್ಯವಸ್ಥೆಯನ್ನು ಬಲಗೊಳಿಸುವುದು. ಕೃಷಿ ಪೂರಕ ಚಟುವಟಿಕೆಗಳಾದ ಹೈನುಗಾರಿಕೆ, ಕೋಳಿಸಾಕಣೆ, ಜೇನುಕೃಷಿ, ಮೀನುಗಾರಿಕೆ, ಕೃಷಿ ಅರಣ್ಯ ಮತ್ತು ಸಮಗ್ರ ಕೃಷಿ ಪದ್ದತಿಗಳನ್ನು ಬಲಪಡಿಸುವುದೇ ಕಾರ್ಯಕ್ರಮದ ಉದ್ದೇಶವಾಗಿದೆ.
ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೊಳ್ಳಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ : ಸಹ ಶಿಕ್ಷಕರ ಅಮಾನತು        

ಚಾಮರಾಜನಗರ, ಆ. 24 - ಚಾಮರಾಜನಗರ ತಾಲೂಕಿನ ದೊಳ್ಳಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಸ್.ಅರ್. ಚಂದ್ರು ಮತ್ತು ಜಿ. ನಾಗೇಶ್ ಇವರುಗಳನ್ನು ಅನುಚಿತ ವರ್ತನೆ ಹಿನ್ನಲೆಯಲ್ಲಿ ಅಮಾನತುಗೊಳಿಸಲಾಗಿದೆ.
ಅಮಾನತುಗೊಳಿಸಲಾಗಿರುವ ಈ ಇಬ್ಬರು ಶಿಕ್ಷಕರು ಅಗಸ್ಟ್ 19ರಂದು ಶಾಲೆಯ ತರಗತಿಯಲ್ಲಿ ವಿದ್ಯಾರ್ಥಿಗಳ ಮುಂದೆಯೆ ತಮ್ಮ ವೈಯಕ್ತಿಕ ಹಣಕಾಸಿನ ವಿಚಾರಕ್ಕೆ ಪರಸ್ಪರ ನಿಂದಿಸಿಕೊಂಡು ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ಕುರಿತು ‘ಶಾಲೆಯಲ್ಲಿ ಮಕ್ಕಳ ಎದುರೇ ಹೊಡೆದಾಡಿಕೊಂಡ ಪ್ರಕರಣ’ ಎಂಬ ಶೀರ್ಷಿಕೆಯಡಿ ಆಗಸ್ಟ್ 24ರಂದು ಮಾಧ್ಯಮಗಳಲ್ಲಿ ವರದಿ ಬಿತ್ತರವಾದ ಹಿನ್ನಲೆಯಲ್ಲಿ ಸದರಿ ಶಿಕ್ಷಕರುಗಳನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಗಸ್ಟ್ 26 ರಂದು ನೇರ ಫೋನ್ ಇನ್ ಕಾರ್ಯಕ್ರಮ

ಚಾಮರಾಜನಗರ, ಆ. 24 - ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ನೇರ ಫೋನ್ ಇನ್ ಕಾರ್ಯಕ್ರಮವನ್ನು ಆಗಸ್ಟ್ 26 ರಂದು ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್‍ವರಿಷ್ಠಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ನಾಗರಿಕರು ಕುಂದುಕೊರತೆ ಸಮಸ್ಯೆಗಳಿದ್ದಲ್ಲಿ ಅಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ದೂರವಾಣಿ ಸಂಖ್ಯೆ 08226-224888 ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಆಗಸ್ಟ್ 30ರಂದು ಮುಖ್ಯಮಂತ್ರಿಯವರ ಜಿಲ್ಲಾ ಪ್ರವಾಸ       

ಚಾಮರಾಜನಗರ, ಆ. 24 - ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರು ಆಗಸ್ಟ್ 30ರಂದು ಜಿಲ್ಲಾ ಪ್ರವಾಸ ಕ್ಯಗೊಂಡಿದ್ದಾರೆ.
ಅಂದು ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಗೆ ಆಗಮಿಸಿ ಅಲ್ಲಿನ ಪಂಪ್ ಸ್ಟೇಷನ್‍ನಲ್ಲಿ ತಾಲೂಕಿನ 131 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಉದ್ಘಾಟಿಸುವರು. ಬಳಿಕ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಅವರಣದಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು.
ಮಧ್ಯಾಹ್ನ 2 ಗಂಟೆಗೆ  ಮೈಸೂರಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.

ಸೆಪ್ಟೆಂಬರ್ 7ರಂದು ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆ.ಡಿ.ಪಿ ಸಭೆÀ       

ಚಾಮರಾಜನಗರ, ಆ. 24:- ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು. ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 7ರಂದು ಮದ್ಯಾಹ್ನ 2.30 ಗಂಟೆಗೆ ವಿವಿಧ ಇಲಾಖೆಗಳು ಅನುಷ್ಟಾನಗೊಳಿಸಿರುವ 20 ಅಂಶಗಳ ಕಾರ್ಯಕ್ರಮಗಳ ಕುರಿತು ತ್ರೈಮಾಸಿಕ ಕೆ.ಡಿ.ಪಿ ಸಭೆ ಜಿಲ್ಲಾ ಪಂಚಾಯತ್ ನೂತನ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಗಸ್ಟ್ 29ರಂದು ಮಲೆ ಮಹದೇಶ್ವರ ದೇವಸ್ತಾನದ ಹಣ ಪರ್ಕಾವಣೆ       

ಚಾಮರಾಜನಗರ, ಆ. 24 :- ಶ್ರೀ ಮಲೆ ಮಹದೇಶ್ವರ ಬೆಟ್ಟ ಬಸ್‍ನಿಲ್ದಾಣದ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ಆಗಸ್ಟ್ 29ರಂದು ಬೆಳಿಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಿಬ್ಬಂದಿಯ ಸಹಯೋಗದೊಂದಿಗೆ ಸೂಕ್ತ ಪೊಲೀಸ್ ಬಂದೋಬಸ್ತ್‍ನೊಡನೆ ದೇವಸ್ಥಾನದ ಗೋಲಕಗಳನ್ನು ತೆರೆದು ಶೇಖರಣೆಯಾಗಿರುವ ಹಣವನ್ನು ಪರ್ಕಾವಣೆ ಮಾಡಲಾಗುವುದು ಎಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

   
   

 
   

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು